ಜಯನಗರ ಮತದಾರರ ಮನೆಮನೆಗೆ – ಅಭಿಪ್ರಾಯ ಸಂಗ್ರಹಕ್ಕಾಗಿ

ಬಂಧುಗಳೇ,

ಜಯನಗರ ವಾಸಿಯಾಗಿರುವ ನಮ್ಮೆಲ್ಲರ ಹೆಮ್ಮೆ ಮತ್ತು ಸ್ಫೂರ್ತಿ ಶ್ರೀ.ಹೆಚ್.ಎಸ್.ದೊರೆಸ್ವಾಮಿಯವರನ್ನು ಕಳೆದ ವಾರ ಭೇಟಿ ಮಾಡಿ, ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಚಿಸುತ್ತಿರುವುದರ ಬಗ್ಗೆ ಮತ್ತು ಹಲವು ಸಮಾನಮನಸ್ಕ ಸಂಗಾತಿಗಳು ಈ ಬಗ್ಗೆ ಗುಣಾತ್ಮಕವಾಗಿ ಬೆಂಬಲಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದೆ. ಎಂದಿನಂತೆ ಆಶಾವಾದದಿಂದಲೇ ಮಾತನಾಡಿದ ದೊರೆಸ್ವಾಮಿಯವರು ಈಗಿನಿಂದಲೇ ಮನೆಮನೆಗೆ ತೆರಳಿ ಜನರ ಜೊತೆ ಮಾತನಾಡಲು ಮತ್ತು ರಸ್ತೆಮೂಲೆ-ಸಭೆ ಅಥವ ಜನ ಸೇರುವ ಕಡೆ ಜನರನ್ನು ಉದ್ದೇಶಿಸಿ ಮಾತನಾಡುತ್ತ ಹೋಗಿ ಎಂದು ಸೂಚಿಸಿದರು. ಅವರ ಶ್ರೀಮತಿಯವರಿಗೂ ತಿಳಿಸಲು ಹೇಳಿದರು. ಶ್ರೀಮತಿ ದೊರೆಸ್ವಾಮಿಯವರೂ ನನ್ನ ಆಶೀರ್ವಾದ ಇದೆ ಎಂದು ಆಶೀರ್ವದಿಸಿದರು.

ದೊರೆಸ್ವಾಮಿಯವರ ಸೂಚನೆಯ ಹಿನ್ನೆಲೆಯಲ್ಲಿ ನಾವು (ಅಂದರೆ ನಮ್ಮ ತಂಡ) ಈ ವಾರದಿಂದಲೇ ಮನೆಮನೆಗೆ ತೆರಳಿ, ಇಲ್ಲಿ ಲಗತ್ತಿಸಿರುವ ಕರಪತ್ರವನ್ನು ಹಂಚಿ, ಕ್ಷೇತ್ರದ ಮತದಾರದ ಆಭಿಪ್ರಾಯ ಕೇಳಲು ತೀರ್ಮಾನಿಸಿದ್ದೇವೆ. ಇದೇ ಶನಿವಾರ (11-11-2017) ಮತ್ತು ಭಾನುವಾರ (12-11-2017) ಒಂದು ತಂಡವಾಗಿ ಕನಿಷ್ಠ ಎರಡು ವಾರ್ಡ್‌ಗಳನ್ನಾದರೂ ಸುತ್ತಿ ಹತ್ತಾರು ಸಾವಿರ ಕರಪತ್ರ ಹಂಚಿ ಅಭಿಪ್ರಾಯ ಸಂಗ್ರಹಿಸಲಿದ್ದೇವೆ. ತಾವೂ ಸಹ ಶನಿವಾರ ಮತ್ತು ಭಾನುವಾರ ಬಂದು ನಮ್ಮ ಜೊತೆಗೂಡಬೇಕೆಂದು ವಿನಂತಿಸುತ್ತೇನೆ. ವೈಯಕ್ತಿಕವಾಗಿ ಇದು ನನಗೆ ಅತಿ ಮಹತ್ವದ ಘಟ್ಟ ಆಗಿರುವುದು ಹೌದಾದರೂ, ಇದು ಕೇವಲ ನನ್ನೊಬ್ಬನ ಹೋರಾಟ ಅಲ್ಲ ಎನ್ನುವುದೂ ಸಂಪೂರ್ಣವಾಗಿ ನನ್ನ ಗಮನದಲ್ಲಿದೆ. ಹಾಗಾಗಿ ನಮ್ಮೆಲ್ಲರ ಈ ಚುನಾವಣಾ ಹೋರಾಟದಲ್ಲಿ ತಾವೂ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕೆಂದು ಕೋರುತ್ತೇನೆ.

ತಮ್ಮ ಎಲ್ಲಾ ರೀತಿಯ ಬೆಂಬಲ ಮತ್ತು ಸಹಭಾಗಿತ್ವದ ನಿರೀಕ್ಷೆಯಲ್ಲಿ…

ರವಿ ಕೃಷ್ಣಾರೆಡ್ಡಿ
09-11-2017. ಜಯನಗರ, ಬೆಂಗಳೂರು.

***

Both comments and pings are currently closed.

Comments are closed.

Powered by WordPress