ಜಯನಗರ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳೊಂದಿಗೆ ಒಂದು ಸಂವಾದ : 15-10-2017 ರಂದು

ಜಯನಗರ ವಿಧಾನಸಭಾ ಕ್ಷೇತ್ರದ ಮಾನ್ಯ ಮತದಾರ ಬಂಧುಗಳೇ,

ಅದು 2008 ರ ವಿಧಾನಸಭಾ ಚುನಾವಣೆಯ ಸಮಯ. ನಾನಾಗ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ, ಮತ್ತು ಜೊತೆಗೆ ಕನ್ನಡದಲ್ಲಿ ರಾಜ್ಯದ ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಲೇಖನ-ಅಂಕಣಗಳನ್ನು ಬರೆಯುತ್ತಿದೆ. ಅಂದಿನ ರಾಜಕೀಯ ಸಂದರ್ಭ ನಿಮಗೆ ಗೊತ್ತಿರಬಹುದು. ಗಣಿ ಮತ್ತು ಭೂ ಮಾಫಿಯ ಅಷ್ಟೊತ್ತಿಗೆ ರಾಜ್ಯದಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿತ್ತು. ಪಕ್ಷಾತೀತವಾಗಿ ಭ್ರಷ್ಟಾಚಾರ ಮೇರೆಮೀರಿತ್ತು. ನಭೂತೋ-ನಭವಿಷ್ಯತಿ ರೀತಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಅವುಗಳನ್ನು ನಿರ್ಧರಿಸುವುದು ಹಣ ಮತ್ತು ಜಾತಿ ಮಾತ್ರ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು.

ಆ ಸಂದರ್ಭದಲ್ಲಿ, ಇವೆಲ್ಲವನ್ನೂ ಪ್ರತಿಭಟಿಸಲೆಂದು ಅಮೆರಿಕದಿಂದ ಒಂದು ತಿಂಗಳ ರಜೆಯ ಮೇಲೆ ಬಂದ ನಾನು ಇಲ್ಲಿ “ಮೌಲ್ಯಾಗ್ರಹ – ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ” ಎಂಬ ಹೆಸರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ 3-ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತೆ. ನಂತರ ಆ ನೀತಿಗೆಟ್ಟ ರಾಜಕೀಯವನ್ನು ವಿರೋಧಿಸಿ, ಸಾಂಕೇತಿಕವಾಗಿಯಾದರೂ ಸರಿ ಪ್ರತಿಭಟನೆಯನ್ನು ದಾಖಲಿಸಬೇಕು ಎಂದು ಬೆಂಗಳೂರಿನಲ್ಲಿ ಪ್ರಜ್ಞಾವಂತ ಮತದಾರರಿರುವ ಕ್ಷೇತ್ರ ಎಂದು ಹೆಸರಾಗಿದ್ದ “ಜಯನಗರ ವಿಧಾನಸಭಾ ಕ್ಷೇತ್ರ”ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ’ಒಂದು ವೋಟು ಒಂದು ನೋಟು’ ಆದರ್ಶವನ್ನಿಟ್ಟುಕೊಂಡು ಜನರಿಂದಲೇ ಸುಮಾರು 4 ಲಕ್ಷ ರೂಪಾಯಿಯಷ್ಟು ದೇಣಿಗೆ ಸಂಗ್ರಹಿಸಿ, ಚುನಾವಣಾ ಆಯೋಗಕ್ಕೆ ಪ್ರಾಮಾಣಿಕ ಲೆಕ್ಕ ಕೊಟ್ಟು, ಆಗ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನಿಮಗೆಲ್ಲಾ ತಿಳಿದಿರುವುದೇ. ಅಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಕೊಟ್ಟ ಲೆಕ್ಕದಲ್ಲಿ ಸುಮಾರು 4 ಲಕ್ಷ ರೂಪಾಯಿ ಖರ್ಚಿನ ಲೆಕ್ಕ ತೋರಿಸಿದ್ದ ನನ್ನದೇ ಅತಿ ಹೆಚ್ಚು ಖರ್ಚು! ಕೋಟ್ಯಾಂತರ ಖರ್ಚು ಮಾಡಿದ್ದವರು ತೋರಿಸಿದ್ದು ಮಾತ್ರ 2-3 ಲಕ್ಷಗಳ ಲೆಕ್ಕ.

ಆ ಪ್ರತಿರೋಧದ ನಂತರ ಅಮೆರಿಕಕ್ಕೆ ವಾಪಸಾಗಿ, ಮುಂಚಿತವಾಗಿ ನಿರ್ಧರಿಸಿದಂತೆ 2010 ರಲ್ಲಿ ಕುಟುಂಬಸಮೇತವಾಗಿ ಭಾರತಕ್ಕೆ ಮರಳಿಬಂದೆ. ಅಂದಿನಿಂದಲೂ ಇಲ್ಲಿಯ ಅನ್ಯಾಯ-ಅಕ್ರಮ-ಭ್ರಷ್ಟಾಚಾರದ ವಿರುದ್ಧ ನಾನು ನಡೆಸುತ್ತಿರುವ ಸಾಮಾಜಿಕ-ರಾಜಕೀಯ ಹೋರಾಟ ನಿಮಗೆಲ್ಲಾ ತಿಳಿದಿರುವುದೇ. 2013 ರ ಚುನಾವಣೆಯಲ್ಲಿ ಪಕ್ಕದ BTM ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 2014 ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು ಸಹ ತಮಗೆ ತಿಳಿದಿರಬಹುದು. ಈ ನಡುವೆ, KPSC ಸಂಸ್ಥೆಯಲ್ಲಿಯ ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟ, ಮಂಡೂರಿನ ಕಸದ ಸಮಸ್ಯೆಯ ಬಗ್ಗೆ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ 39 ದಿನಗಳ ಕಾಲ ನಡೆದ ಭೂಕಬಳಿಕೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಉಪವಾಸ ಸತ್ಯಾಗ್ರಹ ಮಾಡಿದ್ದು, ಐಎ‌ಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವಿನ ಸಂದರ್ಭದಲ್ಲಿ ತನಿಖೆಗೆ ಆಗ್ರಹಿಸಿ ಮಾಡಿದ ಧರಣಿ, ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಬಯಲಿಗೆ ಬಂದ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಮಾಡಿದ ಧರಣಿ-ಪ್ರತಿಭಟನೆ, ರೈತರ ಆತ್ಮಹತ್ಯೆಯ ವಿಚಾರವಾಗಿ ಮದ್ದೂರಿನಿಂದ ಮಂಡ್ಯಕ್ಕೆ ಮಾಡಿದ ಪಾದಯಾತ್ರೆ, ಈಗಿನ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಿ ದುರ್ಬಲ ACB ಸ್ಥಾಪಿಸಿದ್ದನ್ನು ವಿರೋಧಿಸಿ 8 ದಿನಗಳ ಕಾಲ ಉಪವಾಸ ಸತ್ಯಾಗ್ರಹ, ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ತೋಂಟದಾರ್ಯ ಸ್ವಾಮೀಜಿಗಳ ಮತ್ತು ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ ನಡೆದ 3 ದಿನಗಳ ಆಹೋರಾತ್ರಿ ಉಪವಾಸ ಸತ್ಯಾಗ್ರಹ, ರಾಜ್ಯದಲ್ಲಿ ಮದ್ಯನಿಷೇಧ ಮಾಡಬೇಕೆಂದು ಆಗ್ರಹಿಸಿ ಮದ್ದೂರಿನಿಂದ ಆದಿಚುಂಚನಗಿರಿ ಬೆಟ್ಟದವರೆಗೆ ಮಾಡಿದ 5 ದಿನಗಳ ಪಾದಯಾತ್ರೆ; ಇವು ಇತ್ತೀಚಿನ ವರ್ಷಗಳಲ್ಲಿ ನಾನು ಮಾದಿದ ಮತ್ತು ಪಾಲ್ಗೊಂಡಿದ್ದ ಪ್ರಮುಖ ಹೋರಾಟಗಳು.

ಆಮ್ ಆದ್ಮಿ ಪಕ್ಷದೊಳಗಿನ ಕೆಲವು ಆಂತರಿಕ ಕಾರಣಗಳಿಂದಾಗಿ ಆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬಂದು ಈಗ ಒಂದು ವರ್ಷವಾಯಿತು. ಆದರೆ ಸಾಮಾಜಿಕ-ರಾಜಕೀಯ ಹೋರಾಟಗಳನ್ನು ಮುಂದುವರೆಸಲು ವರ್ಷದ ಹಿಂದೆ “ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ”ಯನ್ನು ಸ್ಥಾಪಿಸಿ, ಈಗ ಅದರ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ವೇದಿಕೆಯ ಮೂಲಕ ರಾಜ್ಯಾದ್ಯಂತ ನೂರಾರು ಸರ್ಕಾರಿ ಕಚೇರಿಗಳಲ್ಲಿ ಲಂಚಮುಕ್ತ ಅಭಿಯಾನಗಳನ್ನು ನಡೆಸಿ ಅವ್ಯವಸ್ಥೆಗಳನ್ನು ಸರಿಪಡಿಸಿದ್ದೇವೆ. ಹಲವು ಲಂಚದ ಪ್ರಕರಣಗಳಲ್ಲಿ ದೂರು ನೀಡಿ, ಭ್ರಷ್ಟರ ಅಮಾನತಿಗೆ ಮತ್ತು ಬಂಧನಕ್ಕೆ ಕಾರಣರಾಗಿದ್ದೇವೆ. ಇತ್ತೀಚೆಗೆ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಭಿಯಾನ ನಡೆಸಿ, ಲಂಚ ತೆಗೆದುಕೊಳ್ಳುತ್ತಿದ್ದವರಿಂದ ಹಣ ವಾಪಸು ಮಾಡಿಸಿ, ಈಗ ಅಲ್ಲಿ ಲಂಚವಿಲ್ಲದೇ ಚಿಕಿತ್ಸೆ ದೊರೆಯುವ ಹಾಗೆ ಮಾಡಿದ್ದೇವೆ. ಉದ್ಘಾಟನೆಯಾಗಿ 2 ವರ್ಷವಾದರೂ ಇನ್ನೂ ತೆರೆಯದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ವಿಚಾರವಾಗಿ ಲೋಕಾಯುಕ್ತದಲ್ಲಿ ಮೊಕದ್ದಮೆ ದಾಖಲಿಸಿದ್ದೇವೆ. RTI ಮತ್ತು ಸಕಾಲ ಕಾಯ್ದೆಗಳ ಬಗ್ಗೆ ಹತ್ತಾರು ತರಬೇತಿ ಶಿಬಿರಗಳನ್ನು ನಡೆಸಿದ್ದೇವೆ.

ನಮ್ಮ ಮುಂದೆ ಈಗ ಮತ್ತೊಂದು ವಿಧಾನಸಭಾ ಚುನಾವಣೆ ಬರುತ್ತಿದೆ.

ಈಗ ನಾನು ಯಾವುದೇ ರಾಜಕೀಯ ಪಕ್ಷದಲ್ಲಿಲ್ಲದೇ ಇದ್ದರೂ ಇಷ್ಟೂ ದಿನ ಪ್ರತಿಪಾದಿಸಿದ ಸಿದ್ಧಾಂತಗಳನ್ನಿಟ್ಟುಕೊಂಡೇ ಚುನಾವಣಾ ರಾಜಕಾರಣದಲ್ಲಿ ಮುಂದುವರೆಯಬೇಕು ಎನ್ನುವುದು ನನ್ನ ಆಶಯ. ಈ ನಿಟ್ಟಿನಲ್ಲಿ ಹಣ-ಜಾತಿ-ಕೋಮು ಇತ್ಯಾದಿಗಳನ್ನು ತಿರಸ್ಕರಿಸಿ, ವಿಷಯಾಧಾರಿತವಾಗಿ ಮತ ಹಾಕುವ ಜಯನಗರ ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರ ಜೊತೆ ಮುಂದೆ ಬರಲಿರುವ ಚುನಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಸಭೆ ಕರೆಯಲಾಗಿದೆ.

ದಿನಾಂಕ: 15-10-2017, ಭಾನುವಾರ
ಸಮಯ: ಬೆಳಗ್ಗೆ 11:00 ಕ್ಕೆ.
ಸ್ಥಳ: 31/2, ಎರಡನೇ ಮಹಡಿ, 8 ‘E’ ಮುಖ್ಯರಸ್ತೆ, ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು.

(ಹೆಚ್ಚಿನ ವಿವರಗಳಿಗೆ: 9741980801 ಸಂಪರ್ಕಿಸಬಹುದು.)

ತಾವುಗಳು ದಯವಿಟ್ಟು ಬಿಡುವು ಮಾಡಿಕೊಂಡು ಬಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಈ ಮೂಲಕ ಸವಿನಯವಾಗಿ ಕೋರುತ್ತೇನೆ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

Both comments and pings are currently closed.

Comments are closed.

Powered by WordPress