ಫಲಿತಾಂಶ, ನಮನಗಳು, ಮುಂದೆ…

ಇದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶದ ವಿವರಗಳು. blr-rural-resultsನೈತಿಕವಾಗಿ ಗೆದ್ದಿದ್ದೇವೆ ಎಂಬ ಭಾವನೆ ಮೊದಲಿನಿಂದ ಇದ್ದರೂ, ನಾವು ಇಲ್ಲಿ ಓಟಿನಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗೆಂದೂ ಇರಲಿಲ್ಲ. ಆದರೆ ಮತಗಳಿಕೆಯ ಪ್ರಮಾಣ ಇಷ್ಟು ಕಮ್ಮಿ ಇರುತ್ತದೆ ಎನ್ನುವ ಭಾವನೆಯೂ ಇರಲಿಲ್ಲ. ನಾವು ಯಾರನ್ನು ಪ್ರಜ್ಞಾವಂತರು ಎಂದು ಭಾವಿಸಿದ್ದೆವೊ ಅವರಲ್ಲಿಯು ಸಹ ಬಹುತೇಕರು ಇಲ್ಲಿ ಆಮ್ ಆದ್ಮಿ ಪಾರ್ಟಿಯನ್ನಾಗಲಿ, ನನ್ನನ್ನಾಗಲಿ ಬೆಂಬಲಿಸಿಲ್ಲ. ಆದರೆ ಇಂತಹ ಒಂದು ಚಾರಿತ್ರಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಇಷ್ಟೊಂದು ಜನ ಓಟು ಕೊಟ್ಟಿರುವುದೂ ಸಹ ಆಶ್ಚರ್ಯವೇ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.

ಈ ಚುನಾವಣೆಯ ಹೋರಾಟ ಕಳೆದ ತಿಂಗಳ ಹದಿನೇಳಕ್ಕೇ ಮುಗಿಯಿತು. ಆದರೆ ಚುನಾವಣೆಗಳ ನಡುವೆ ನಡೆಯುವ ಹೋರಾಟ ಮತ್ತು ಕೆಲಸ ಮುಂದುವರೆಯುತ್ತಿದೆ. ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷ ಯಶಸ್ಸು ಗಳಿಸಲು ಇರುವ ಯಾವೊಂದು ಸ್ಥಳೀಯ ಸಂದರ್ಭಗಳೂ ಇಲ್ಲಿ ಬದಲಾಗಿಲ್ಲ. ಇಲ್ಲಿ ನರೇಂದ್ರ ಮೋದಿ ಬಂದು ಮೇಯರ್ ಆಗುವುದಿಲ್ಲ; ಇಲ್ಲಿಯ ಬಿಜೆಪಿ-ಕಾಂಗ್ರೆಸ್ ಕಾರ್ಪೊರೇಟರ್‌ಗಳ-ಶಾಸಕರ ಕಾರ್ಯವೈಖರಿ ಮತ್ತು ಭ್ರಷ್ಟಾಚಾರ ಬದಲಾಗುವುದಿಲ್ಲ. ರಾಜ್ಯದ ಆಡಳಿತ ತೀರಾ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಹಾಗೆಯೇ, ಬೇರೇ ಯಾರೂ ಎತ್ತದ ವಿಷಯಗಳನ್ನು ಆಮ್ ಆದ್ಮಿ ಪಕ್ಷ ಮಾತ್ರ ಎತ್ತಲು ಸಾಧ್ಯವಿದೆ ಹಾಗೂ ಆ ನೈತಿಕತೆ ಅವರಲ್ಲಿ ಮಾತ್ರ ಉಳಿದಿದೆ. ನಿರಂತರ ಶ್ರಮ ಮತ್ತು ಜನಸಂಪರ್ಕ, ಜನಪರ ವಿಚಾರ ಮತ್ತು ಹೋರಾಟ, ಹಾಗೂ ಸ್ಥಳೀಯ ನಾಯಕತ್ವ ಬೆಳವಣಿಗೆಯಿಂದ ಆಮ್ ಆದ್ಮಿ ಪಕ್ಷಕ್ಕೆ ಬೆಂಗಳೂರು ನಗರದಲ್ಲಿ ಒಳ್ಳೆಯ ಅವಕಾಶವಿದೆ ಮತ್ತು ಅದು ತೀರಾ ಅಗತ್ಯವಾಗಿದೆ. ಹಾಗೆಯೇ ವಿರೋಧ ಮತ್ತು ಸವಾಲುಗಳೂ ಹೆಚ್ಚಿರಲಿವೆ. ಮುಂದಿನ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಎಂದಿನಂತೆ ಉತ್ತಮ ಗುಣಗಳಿಗಿಂತ ದುಡ್ಡು ಮತ್ತು ಪ್ರಭಾವವನ್ನು ನೋಡಿ ಅಭ್ಯರ್ಥಿಗಳನ್ನು ನಿಲ್ಲಿಸಿದರೂ, ಬಿಜೆಪಿ ದುಡ್ಡಿನ ಜೊತೆಗೆ ಇದ್ದುದರಲ್ಲಿ ಉತ್ತಮ ಎನ್ನಬಹುದಾದಂತಹ ಅಭ್ಯರ್ಥಿಗಳನ್ನು ನಿಲ್ಲಿಸುವ ಎಲ್ಲಾ ಸಾಧ್ಯತೆಗಳೂ ಇವೆ, ಸೋಲಿನ ಪಾಠವನ್ನು ಬಿಜೆಪಿ ಎಲ್ಲರಿಗಿಂತ ಬೇಗ ಕಲಿಯುತ್ತದೆ ಎನ್ನುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಚುನಾವಣಾ ಯಶಸ್ಸಿಗಾಗಿ ನಾವು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತಯಾರು ಮಾಡಬೇಕಿದೆ ಮತ್ತು ಅದು ವಿಷಯಾಧಾರಿತವಾಗಿ ಮತ್ತು ಜನಪರ ಚಳವಳಿಗಳ ಮೂಲಕ, ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ಮಾಡಬಹುದಾಗಿದೆ.

ಈಗಲೂ ಸಹ ದೇಶದಲ್ಲಿ ನೈತಿಕ ರಾಜಕಾರಣಕ್ಕಾಗಿ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿರುವ, ಬದ್ಧತೆ ಇರುವ, ಪ್ರಸ್ತುತ ಆಗಿರುವ, ಮತ್ತು ಅವಕಾಶವಿರುವ ಪಕ್ಷ ಎಂದರೆ ಅದು ಆಮ್ ಆದ್ಮಿ ಪಕ್ಷವೇ. ಹಾಗಾಗಿ ನಮ್ಮ ಕಾರ್ಯಕರ್ತರು, ವಿಶೇಷವಾಗಿ ಬೆಂಗಳೂರಿನ ಕಾರ್ಯಕರ್ತರು, ಧೃತಿಗೆಡುವ ಅಗತ್ಯ ಇಲ್ಲ. ನಮ್ಮ ಕೆಲಸ ಮುಂದುವರೆಸುತ್ತಿರೋಣ. ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ನಾವು ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಯಾಕಾಗಿ ಅಗತ್ಯ ಎನ್ನುವುದನ್ನು ರುಜುವಾತು ಪಡಿಸುವ ಘಟನೆಗಳು ಜರುಗಲಿವೆ ಮತ್ತು ಅದಕ್ಕಾಗಿ ನಮ್ಮ ಪರಿಶ್ರಮ ಇರಬೇಕಿದೆ. ದೇಶದ ಇತರೆ ಪಕ್ಷಗಳ ಕಾರ್ಯವೈಖರಿಗಳು ನಮ್ಮಿಂದಾಗಿ ಗುಣಾತ್ಮಕವಾಗಿ ಬದಲಾಗುತ್ತಿವೆ. ಅದರ ವೇಗವನ್ನು ಹೆಚ್ಚಿಸಬೇಕಿದ್ದರೆ ನಾವು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕಿದೆ. ಮಾಡೋಣ. ಆ ಮೂಲಕ ಪಕ್ಷವೂ ಬೆಳೆಯುತ್ತದೆ.

ಮತ್ತೊಮ್ಮೆ, ಬೆಂಬಲಿಸಿದ, ದುಡಿದ, ಸಹಕರಿಸಿದ, ಮತ ನೀಡಿದ, ಮತ ನೀಡಬೇಕೆಂದು ಬಯಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು, ಈ ಬೆಂಬಲ ಮತ್ತು ಸಹಕಾರ ಹೀಗೆಯೇ ಮುಂದುವರೆಯಲಿ ಎಂದು ಕೋರುತ್ತೇನೆ, ಮತ್ತು ನಿಮ್ಮ ವಿಶ್ವಾಸ ಉಳಿಸಿಕೊಳ್ಳುವ ಹಾದಿಯಲ್ಲಿಯೇ ಮುಂದುವರೆಯುತ್ತೇನೆ.

ನಮಸ್ಕಾರ,
ರವಿ…

Both comments and pings are currently closed.

Comments are closed.

Powered by WordPress