ಇದೊಂದು ವಿಚಿತ್ರ ಪ್ರಪಂಚ

ಮೊದಲಿಗೆ, ಇದೊಂದು ತಲೆಬುಡ ಅರ್ಥವಾಗದ, ವಿಚಿತ್ರವಾದ, ತಿಕ್ಕಲು ಪ್ರಪಂಚ ಎನ್ನುವುದನ್ನು ಸುಮ್ಮನೆ ಒಪ್ಪಿಕೊಂಡು ಅಲ್ಲಿಂದ ಆರಂಭಿಸುವುದೆ ಒಳ್ಳೆಯದು. ಈ ಪ್ರಪಂಚ ನಿಜವಾಗಲೂ ಅರ್ಥವೇ ಆಗುವುದಿಲ್ಲ.

ನಾವು ನಮ್ಮ ಈ ಭೂಮಿಯನ್ನೆ, ನಮ್ಮನ್ನೆ ಹಾಳು ಮಾಡಿ ಕೊಳ್ಳುತ್ತಿದ್ದೇವೆ. ನಮ್ಮ ಎಲ್ಲಾ ನೈಸರ್ಗಿಕ ವ್ಯವಸ್ಥೆಗಳು ಹದಗೆಡುತ್ತಿವೆ. ಈ ಭೂಮಿ ನಮ್ಮನ್ನು ಸಾಕಲಾಗದಷ್ಟು ವೇಗವಾಗಿ ಜನಸಂಖ್ಯೆ ಬೆಳೆಯುತ್ತಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಮರುಪೂರಣ ಮಾಡಿಕೊಂಡು, ದೀರ್ಘಕಾಲದ ಗಟ್ಟಿ ಭವಿಷ್ಯವನ್ನು ನಿರ್ಮಿಸಿಕೊಳ್ಳುವುದರ ಬದಲಿಗೆ, ನಮ್ಮ ನೈಸರ್ಗಿಕ ಸಂಪನ್ಮೂಲಗಳು ಎಂದೆಂದಿಗೂ ನಶಿಸುವುದಿಲ್ಲ ಎನ್ನುವ ರೀತಿ ಆಡುತ್ತಿದ್ದೇವೆ.

ಪರಮಾಣು ನಿಶ್ಯಸ್ತ್ರೀಕರಣದ ವಿಚಾರವಾಗಿ ಕೆಲವೊಂದು ಅಭಿವೃದ್ಧಿ ಆಗಿದೆ. ಆದರೆ ಜಗತ್ತಿನ ಪ್ರತಿಯೊಂದು ಗಂಡು, ಹೆಣ್ಣು, ಮತ್ತು ಮಗುವನ್ನು ಮೂರು ಇಲ್ಲವೆ ನಾಲ್ಕು ಬಾರಿ ಕೊಲ್ಲಬಹುದಾದಷ್ಟು ಹತ್ತಾರು ಸಾವಿರ ಅಣುಬಾಂಬಿನ ಮಿಸ್ಸೈಲ್‌ಗಳು ಈಗಲೂ ಇವೆ. ಭೂಮಿಗೆ ಸೂರ್ಯನ ಬೆಳಕು ಇಣುಕದಷ್ಟು ದಟ್ಟನೆಯ ಕಾರ್ಮೋಡಗಳನ್ನು ಸೃಷ್ಟಿಸಿ, ಇಲ್ಲಿನ ಪ್ರತಿಯೊಂದು ಜೀವಿಯ ಸರ್ವನಾಶ ಆಗುವಂತೆ ಮಾಡಲು ಇಂತಹ ಕೇವಲ ನೂರಿನ್ನೂರು ಅಣುಬಾಂಬ್‌ಗಳಷ್ಟೆ ಸಾಕು.

ಈ ಭೂಗ್ರಹದ ಮೇಲಿನ ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಾದಷ್ಟು ಆಹಾರ ನೀಡಲು ಎಷ್ಟು ಬೇಕೊ ಅದಕ್ಕಿಂತ ಹೆಚ್ಚಿನದನ್ನು ಇಂದು ಜಗತ್ತಿನಾದ್ಯಂತ ಉತ್ಪಾದಿಸಲಾಗುತ್ತಿದೆ. ಆದರೂ, ಹಸಿವಿನಿಂದ ಪ್ರತಿವರ್ಷವೂ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಹಾಗೆಯೆ, ಪೌಷ್ಟಿಕಾಂಶದ ಕೊರತೆಯಿಂದ ನೂರು ಕೋಟಿಗೂ ಹೆಚ್ಚು ಜನ ಬಳಲುತ್ತಿದ್ದಾರೆ.

ಲಕ್ಷಾಂತರ ಜನ ಚಿಕಿತ್ಸೆ ನೀಡಿ ವಾಸಿ ಮಾಡಬಹುದಾದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಮನುಷ್ಯನ ದೇಹದೊಳಗೆ ಸೇರಿಕೊಂಡು ಅವನ ಶಕ್ತಿ ಹೀರುವ ಹೊಟ್ಟೆಹುಳು, ಕರುಳುಜಂತು ಮುಂತಾದ ಕ್ರಿಮಿಗಳಿಂದ ಸುಮಾರು 70 ಕೋಟಿ ಜನ ನರಳುತ್ತಿದ್ದಾರೆ ಎಂದು ಅಂದಾಜು. ದಾರಿದ್ರ್ಯದಿಂದ ಕೂಡಿದ ಎಷ್ಟೋ ದೇಶಗಳಿಗೆ ಪೋಲಿಯೊ, ಸಿಡುಬು, ಹಳದಿಜ್ವರಗಳಂತಹ ರೋಗಗಳಿಗೆ ವ್ಯಾಕ್ಸಿನ್ ಕೊಳ್ಳಲು ಅಥವ ಕ್ಷಯ, ಕುಷ್ಟರೋಗದಂತಹ ರೋಗಗಳಿಗೆ ಔಷಧಿ ಒದಗಿಸಲು ಸಾಧ್ಯವೇ ಇಲ್ಲವಾಗಿದೆ. ಬಡ ದೇಶಗಳಲ್ಲಿನ ಎಂಟು ಕೋಟಿ ಮಕ್ಕಳಲ್ಲಿ ಕೇವಲ ಎಂಬತ್ತು ಲಕ್ಷ ಮಕ್ಕಳಿಗೆ ಮಾತ್ರ ಡಿಫ್ತೀರಿಯ, ಧನುರ್ವಾತ, ಮತ್ತು ನಾಯಿಕೆಮ್ಮು ರೋಗಗಳಿಗೆ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ. ತಡೆಯಬಹುದಾದ ಕಾಯಿಲೆಗಳಿಗೆ ಸಿಲುಕಿ ಉಷ್ಣವಲಯದ ದೇಶಗಳ ಸುಮಾರು ಎರಡೂವರೆ ಕೋಟಿ ಜನ ಅಂಧತ್ವಕ್ಕೆ ಬಲಿಯಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಅಮೆರಿಕ ಪ್ರಪಂಚದಲ್ಲಿಯೆ ಅತ್ಯಂತ ಶ್ರೀಮಂತ ರಾಷ್ಟ್ರ. ಆದರೂ, ಒಂದು ಕೋಟಿಗೂ ಹೆಚ್ಚಿನ ಮಕ್ಕಳು ಇಲ್ಲಿ ದಾರಿದ್ರ್ಯ ರೇಖೆಯ ಕೆಳಗೆ ಸಿಕ್ಕಿಬಿದ್ದಿದ್ದಾರೆ. 1980 ರಿಂದ 1990 ರ ಅವಧಿಯಲ್ಲಿ ದಾರಿದ್ರ್ಯ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ಐದು ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳು ಶೇ. 23 ರಷ್ಟು ಹೆಚ್ಚಾಗಿದ್ದಾರೆ.

ನಮ್ಮ ಭವಿಷ್ಯ ನಮ್ಮ ಮಕ್ಕಳ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತೇವೆ. ಆದರೆ ನಾವು ಅವರೊಡನೆ ಕಳೆಯಬೇಕಾದಷ್ಟು ಸಮಯ ಕಳೆಯುವುದಿಲ್ಲ. ಅಪ್ಪಅಮ್ಮಂದಿರು ತಮ್ಮ ಮಕ್ಕಳೊಡನೆ ಒಂದು ದಿನದಲ್ಲಿ ಕಳೆಯುವ ಮೌಲಿಕ ಸಮಯವನ್ನು ನಿಮಿಷಗಳಲ್ಲಿ ಅಳೆದರೆ, ಮಕ್ಕಳು ದೂರದರ್ಶನ ನೋಡುತ್ತ ಕಳೆಯುವ ಸಮಯವನ್ನು ಗಂಟೆಗಳಲ್ಲಿ ಅಳೆಯಲಾಗುತ್ತದೆ. ನಾವು ಮನೆಯಲ್ಲಿ ಮಾಡಲಾಗದೆ ಹೋಗುತ್ತಿರುವ ಕೆಲಸವನ್ನು ಶಾಲೆಗಳು ಮಾಡುತ್ತವೆ ಎಂದು ಆಶಿಸುತ್ತೇವೆ. ಆದರೆ ವೃತ್ತಿಪರ ಕ್ರೀಡಾಪಟುಗಳಿಗೆ ನೀಡುವ ಹಣದಲ್ಲಿನ ಯಾವುದೋ ಒಂದು ನಿಕೃಷ್ಟ ಭಾಗವನ್ನು ಮಾತ್ರ ಶಿಕ್ಷಕರಿಗೆ ಸಂಬಳವಾಗಿ ನೀಡುತ್ತೇವೆ. ತಮ್ಮ ಹೈಸ್ಕೂಲಿನ ಮಾರ್ಕ್ಸ್‌ಕಾರ್ಡ್ ಸಹ ಓದಲು ಬಾರದಂತಹ ಲಕ್ಷಾಂತರ ವಿದ್ಯಾರ್ಥಿಗಳನ್ನು ಪ್ರತಿವರ್ಷ ಪದವೀಧರರನ್ನಾಗಿಸುತ್ತಿದ್ದೇವೆ.

ನಮ್ಮ ಹದಿಹರೆಯದ ಹುಡುಗಹುಡುಗಿಯರನ್ನು ಜಗತ್ತಿನೊಂದಿಗೆ ಬೆರೆಯದಂತೆ ಬೇರ್ಪಡಿಸಿ ಶಾಲಾ ಕಟ್ಟಡಗಳಲ್ಲಿ ಕೂಡಿ ಹಾಕುತ್ತೇವೆ. ಅವರಿಗೆ ಅತ್ಯಂತ ಕಡಿಮೆ ಜವಾಬ್ದಾರಿ ನೀಡುತ್ತೇವೆ. ಜೊತೆಗೆ, ಅದಕ್ಕಿಂತ ಕಮ್ಮಿಯದನ್ನು ಅವರಿಂದ ಬಯಸುತ್ತೇವೆ. ಅವರು ವಯಸ್ಕ ಪ್ರಪಂಚದೊಡನೆ ವ್ಯವಹರಿಸದಂತೆ ದೂರ ಇಟ್ಟು, ಅವರಾಗಿ ಅವರು ಕೆಟ್ಟ ಗ್ಯಾಂಗ್‌ಗಳ ಜೊತೆ ಗುರುತಿಸಿಕೊಳ್ಳುವಂತೆ ಮಾಡುತ್ತೇವೆ. 1980 ರ ಸುಮಾರಿನಲ್ಲಿ ಅಮೆರಿಕದಲ್ಲಿನ 1,25,000 ವಿದ್ಯಾರ್ಥಿಗಳು ಶಾಲೆಗೆ ಗನ್ನು ಒಯ್ಯುತ್ತಿದ್ದರು ಎಂದು ಅಂದಾಜು ಮಾಡಲಾಗಿದೆ. ಇದೆಲ್ಲ ಶಾಲಾಕಾಲೇಜುಗಳಲ್ಲಿನ ರಕ್ತಪಾತ-ಕಗ್ಗೊಲೆಗಳಲ್ಲಿ ಕೊನೆಗೊಂಡಾಗ ಇಡೀ ರಾಷ್ಟ್ರವೇ ಶೋಕಿಸುತ್ತದೆ.

ಅಮೆರಿಕದ ನಮ್ಮ ಸಮಾಜ ಕೋರ್ಟು ವ್ಯಾಜ್ಯಾಸಕ್ತ ಸಮಾಜ. ನಾವು ಪ್ರತಿ ವರ್ಷ ಹತ್ತು ಕೋಟಿ ದಾವೆಗಳನ್ನು ಹೂಡುತ್ತೇವೆ. ಇವುಗಳಲ್ಲಿ ಕೆಲವೊಂದು ದಾವೆಗಳನ್ನು ತಾವು ಮಾಡಿರುವ ಕೆಲಸಗಳಿಗೆ ತಾವು ಜವಾಬ್ದಾರರೆ ಅಲ್ಲ ಎಂದುಕೊಳ್ಳುವ ವ್ಯಕ್ತಿಗಳಿಂದ ಹೂಡಲ್ಪಟ್ಟಿರುತ್ತವೆ. ಅವರೇ ತಪ್ಪು ಮಾಡಿದ್ದರೂ ಬೇರೆಯವರನ್ನು ಕೋರ್ಟಿಗೆ ಎಳೆಯುತ್ತಾರೆ. ಕೆಲವರು ಅದರಿಂದ ಶ್ರೀಮಂತರೂ ಆಗಿಬಿಡುತ್ತಾರೆ.

ಇವುಗಳ ಮಧ್ಯೆ, ಗಂಡ, ಹೆಂಡತಿ, ಇಲ್ಲವೆ ಮಕ್ಕಳಿಗೆ ದ್ರೋಹ ಬಗೆಯುವವರು, ಕೊಲೆ, ಕಳ್ಳತನ, ಸುಲಿಗೆ ಮಾಡುವವರು, ಡ್ರಗ್ಸ್ ತೆಗೆದುಕೊಳ್ಳುವ ಮಾದಕದ್ರವ್ಯ ವ್ಯಸನಿಗಳು, ಅಥವ ಹೀನಾಯ ಅಪರಾಧಗಳನ್ನು ಎಸಗುವವರು ಟಿವಿಯಲ್ಲಿನ ಟಾಕ್‌ಶೋಗಳಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕೆಲವರು ತಮ್ಮ ಕತೆಯನ್ನು ಪುಸ್ತಕವಾಗಿ ಬರೆದು, ಇಲ್ಲವೆ ಅದರ ಹಕ್ಕುಗಳನ್ನು ಬೇರೆಯವರಿಗೆ ಮಾರಿಕೊಂಡು ಲಕ್ಷಾಂತರ ಡಾಲರ್‌ಗಳನ್ನೂ ಸಂಪಾದಿಸಿ ಬಿಡುತ್ತಾರೆ.

ನಮಗಿಂತ ಮುಂಚಿನ ಸಹಸ್ರಾರು ತಲೆಮಾರುಗಳಿಗೆ ದಾರಿ ತೋರಿ ಪೋಷಿಸಿದಂತಹ ಮಾನವೀಯ ಮೌಲ್ಯಗಳಿಗೆ ಇಂದು ಅನೇಕರು ಬೆನ್ನು ತಿರುಗಿಸಿದ್ದಾರೆ. ಕೆಲವು ಜನ ಪ್ರತಿಯೊಂದು ವಿಷಯವೂ ಸಾಪೇಕ್ಷವಾದದ್ದು ಹಾಗು ಅದು ತಮ್ಮ ಮೂಗಿನ ನೇರಕ್ಕೇ ಇರುವಂತದ್ದು ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಅವರು ಯಾವುದಕ್ಕೂ ಸಮಂಜಸವಾದ ಅರ್ಥವನ್ನೆ ನೀಡುವುದಿಲ್ಲ. ಆದರೆ ಆಮೇಲೆ ಮಾತ್ರ ಜೀವನ ಖಾಲಿಖಾಲಿ ಮತ್ತು ಇದಕ್ಕೆ ಅರ್ಥವೇ ಇಲ್ಲ ಎಂದು ದೂರುತ್ತಿರುತ್ತಾರೆ.

ಹೌದು, ಇದೊಂದು ಅರ್ಥವೇ ಆಗದ ವಿಚಿತ್ರ ಪ್ರಪಂಚ. ಇದು ನಿಮಗೆ ಅರ್ಥವೇ ಆಗುತ್ತಿಲ್ಲ ಎಂದುಕೊಂಡಿದ್ದೀರಾದರೆ, ನೀವು ಸರಿಯಾಗಿಯೆ ಅಂದುಕೊಂಡಿದ್ದೀರಿ. ಇದು ನಿಜವಾಗಲೂ ಅರ್ಥವೇ ಆಗುವುದಿಲ್ಲ.

ಈಗ ಇಲ್ಲಿರುವ ವಿಷಯ ಇವೆಲ್ಲವುಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುವುದಲ್ಲ. ಮುಖ್ಯವಾದ ವಿಷಯ ಏನೆಂದರೆ, ಭರವಸೆ ಕಳೆದುಕೊಳ್ಳದೆ ಇರುವುದು. ವಿಷಯ ಇದು: ಪ್ರಪಂಚ ಅರ್ಥವೇ ಆಗುವುದಿಲ್ಲ, ಆದರೆ ನೀವು ಅರ್ಥವಾಗಬಹುದು. ನೀವು ಆತ್ಮಸಂತೋಷವನ್ನು, ವ್ಯಕ್ತಿಗತವಾದ ಅರಿವನ್ನು ಕಂಡುಕೊಳ್ಳಬಹುದು. ಈ ಪುಸ್ತಕದಲ್ಲಿರುವುದೆಲ್ಲಾ ಅದರ ಬಗ್ಗೆಯೆ. ಈ ಚಿತ್ರವಿಚಿತ್ರ ಪ್ರಪಂಚದಲ್ಲಿ ನಮ್ಮ ವೈಯಕ್ತಿಕ ಅರಿವನ್ನು ಕಂಡುಕೊಳ್ಳವುದರ ಬಗ್ಗೆಯೆ ಇದರಲ್ಲಿ ಇರುವುದು.

ಈ ಪ್ರಪಂಚ ವಿಚಿತ್ರವಾಗಿದ್ದರೂ ನೀವು ಹಾಗೆ ಇಲ್ಲ. ವಿಪರ್ಯಾಸ ಎನಿಸುವ ಈ ಸತ್ಯದಲ್ಲಿ ನಿಮಗೆ ಆತ್ಮಸಂತೋಷ ಸಿಗುತ್ತದೆ. ವಿಪರ್ಯಾಸ ಸತ್ಯ (Paradox) ಎನ್ನುವುದು ಜನಪ್ರಿಯವಾದ ಅಭಿಪ್ರಾಯಕ್ಕೆ ಹೊರತಾದ, ಲೋಕಜ್ಞಾನವನ್ನೂ ತಪ್ಪು ಎನ್ನುವ, ಆದರೆ ಆಳದಲ್ಲಿ ಸತ್ಯಸ್ಯ ಸತ್ಯವಾದ ಒಂದು ವಿಚಾರ. ಈ ಪುಸ್ತಕ ಅಂತಹ ವಿಪರ್ಯಾಸ ಸತ್ಯದ ದಶಾದೇಶಗಳ (Ten Paradoxical Commandments) ಕುರಿತು.

ನೀವು ಈ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳನ್ನು ಒಪ್ಪಿಕೊಳ್ಳ ಬಲ್ಲಿರಾದರೆ, ನೀವಾಗ ಸ್ವತಂತ್ರರು. ಈ ಪ್ರಪಂಚದ ಹುಚ್ಚುತನಗಳಿಂದ ಮುಕ್ತರು. ವಿಪರ್ಯಾಸ ಸತ್ಯದ ಈ ದಶಾದೇಶಗಳು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯದ ಘೋಷಣೆಗಳೆ ಆಗಬಹುದು. ನಿಮ್ಮ ಸ್ವಾತಂತ್ರ್ಯವನ್ನು ನಿಮಗೆ ಸದಾ ಜ್ಞಾಪಿಸುತ್ತಿರುವುದರ ಗುರುತಿಗೆಂಬಂತೆ ಅವನ್ನು ಗೋಡೆಯ ಮೇಲೆ ಅಂಟಿಸಿ. ಆಗ ಯಾವುದು ಸರಿಯಾದದ್ದು, ಒಳ್ಳೆಯದು, ಮತ್ತು ಸತ್ಯವಾದದ್ದು ಎಂದು ನೀವು ನಂಬುತ್ತೀರೊ ಅದನ್ನು ನಿಮ್ಮ ಉಳಿಕೆ ಜೀವನದಾದ್ಯಂತ ಮಾಡಬಹುದು. ಯಾಕೆಂದರೆ, ಆಗ ನಿಮಗೆ ಅದರ ನಿಜವಾದ ಅರ್ಥ ಆಗಿರುತ್ತದೆ.

ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳು ರೋಗಗ್ರಸ್ತ ಗೀಳಾಗಲಿ, ನಿರಾಶಾವಾದವಾಗಲಿ ಅಲ್ಲ. ಯಾವುದು ಸರಿಯಾದದ್ದೊ, ಒಳ್ಳೆಯದೊ, ಹಾಗು ಸತ್ಯವಾದದ್ದೊ ಅದನ್ನು ನೀವು ಮಾಡಿದರೆ, ಅದಕ್ಕೆ ನಿಮಗೆ ಆಗಾಗ ಪ್ರಶಂಸೆ, ಮೆಚ್ಚಿಗೆ ಸಿಗಬಹುದು. ಆದರೆ ಪ್ರಪಂಚದ ಮೆಚ್ಚಿಗೆಯ ಅವಶ್ಯಕತೆಯಿಲ್ಲದೆಯೆ ನೀವು ಆತ್ಮಸಂತೋಷವನ್ನು ಪಡೆದಿರಾದರೆ ಆಗ ನೀವು ಸ್ವತಂತ್ರರು. ಬೇರೆಯವರು ಮೆಚ್ಚಲಿ ಬಿಡಲಿ, ನಿಮಗೆ ಯಾವುದು ಅರ್ಥವಾಗುತ್ತದೆಯೊ ಅದನ್ನು ಮಾಡಲು ನೀವು ಸ್ವತಂತ್ರರು. ನೀವು ನಿಜವಾಗಲೂ ಯಾರೊ ಅದಾಗಲು ನೀವು ಸ್ವತಂತ್ರರು. ನೀವು ಏನಾಗಬೇಕಿತ್ತೊ ಅದಾಗಲು ನೀವು ಸರ್ವಸ್ವತಂತ್ರರು. ಬೇರೆಯವರು ಕಾಣದೆ ಹೋಗಬಹುದಾದ ಅರಿವನ್ನು ಕಂಡುಕೊಳ್ಳಲು ನೀವು ಮುಕ್ತರು. ಆ ಅರಿವನ್ನು ನೀವು ಕಂಡುಕೊಂಡಾಗ, ನೀವು ಅಲ್ಲಿಯವರೆಗೂ ಅನುಭವಿಸಿರದಷ್ಟು ಆಳವಾದ ಸಂತೋಷವನ್ನು ಕಾಣುತ್ತೀರಿ.

ಈ ಪ್ಯಾರಾಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳು ಅರಿವಿಗಾಗಿ, ಜ್ಞಾನಕ್ಕಾಗಿ ಒಂದು ಕರೆ. ವಿಚಿತ್ರವಾದ ಈ ಹುಚ್ಚು ಪ್ರಪಂಚದಲ್ಲಿ ನಮ್ಮ ವೈಯಕ್ತಿಕ ಅರಿವನ್ನು ಕಂಡುಕೊಳ್ಳಲು ಮಾಡುವ ಒಂದು ಕರೆ. ಈ ಪುಸ್ತಕದಲ್ಲಿ ಮೊದಲಿಗೆ ಪ್ಯಾರಾಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳ ಅರ್ಥವನ್ನು ಕೂಲಂಕುಷವಾಗಿ ವಿಶ್ಲೇಷಿಸುತ್ತೇನೆ. ನಂತರ, ಈ ವಿಪರ್ಯಾಸ ಸತ್ಯದ ಜೀವನವನ್ನು ಹೇಗೆ ಜೀವಿಸುವುದು ಎಂದು ವಿವರಿಸುತ್ತೇನೆ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply