ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು.

ಚಾರ್ಲ್ಸ್ ಶ್ಕುಲ್ಜ್‌ರ “ಪೀನಟ್ಸ್” ಕಾರ್ಟೂನಿನಲ್ಲಿ ಬರುವ ಲೂಸಿ ಎಂಬ ಪಾತ್ರ ಹೀಗನ್ನುತ್ತದೆ: “ನಾನು ಮನುಷ್ಯಜಾತಿಯನ್ನು ಪ್ರೀತಿಸುತ್ತೇನೆ. ಆದರೆ ಈ ’ಮನುಷ್ಯರನ್ನೆ’ ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಆಗದಿರುವುದು.”

ಕೆಲವು ಜನರು ಬಹಳ ಅಸಾಧ್ಯರಾಗಿರುತ್ತಾರೆ. ಹಾಗಾಗಿ, ಅಂತಹವರನ್ನು ಇಷ್ಟಪಡುವುದು ಬಹಳವೆ ಕಷ್ಟ. ಕೆಲವರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳೂ ಆಗಿದ್ದು, ಅವರನ್ನು ಸಹಿಸಿಕೊಳ್ಳುವುದು ನಮಗೆ ನಿಜಕ್ಕೂ ಅಸಾಧ್ಯ. ಆದರೂ, ಏನೇ ಆಗಲಿ ನಾವು ಅವರನ್ನು ಪ್ರೀತಿಸಬೇಕು.

ಪ್ರೀತಿ ಎನ್ನುವುದು ನಾವು ಕೊಡಬಲ್ಲ, ತೆಗೆದುಕೊಳ್ಳಬಲ್ಲ ಒಂದು ಮಹೋನ್ನತ ಉಡುಗೊರೆ. ಅದು ನಾವೆಲ್ಲರೂ ಕೊಡಲೇಬೇಕಾದ, ತೆಗೆದುಕೊಳ್ಳಲೇಬೇಕಾದ ಕಾಣಿಕೆ. ಪ್ರೀತಿಯಿಲ್ಲದೆ ಬದುಕಿದ ಬದುಕು ಪೂರ್ಣವಾಗಿ ಬದುಕಿದ ಬದುಕಲ್ಲ. ನಿಮ್ಮ ಪ್ರೀತಿಯನ್ನು ಪರಿಮಿತ ಗೊಳಿಸಿಕೊಂಡು ನಿಮ್ಮ ಜೀವನವನ್ನು ಪರಿಮಿತ ಮಾಡಿಕೊಳ್ಳಬೇಡಿ.

ಮನುಷ್ಯನ ಬೆಳವಣಿಗೆಗೆ ವಿಟಮಿನ್‌ಗಳು, ಖನಿಜಗಳು, ಹಾಗೂ ಪ್ರೋಟೀನ್‌ಗಳು ಎಷ್ಟು ಅತ್ಯವಶ್ಯವೊ, ಪ್ರೀತಿ ಎನ್ನುವುದೂ ಅಷ್ಟೇ ಅತ್ಯವಶ್ಯವಾದದ್ದು ಎಂದು ಮನ:ಶ್ಶಾಸ್ತ್ರಜ್ಞ ಅಬ್ರಹಾಮ್ ಮಸ್ಲೊವ್ ಒಮ್ಮೆ ಅಭಿಪ್ರಾಯ ಪಟ್ಟಿದ್ದರು. ಮನುಷ್ಯರು ಪ್ರೀತಿ ಎನ್ನುವ ಪೆಟ್ರೋಲ್‌ನಿಂದ ಓಡಲು ತಯಾರಿಸಿರುವ ಇಂಜಿನ್‌ಗಳು ಎಂದು ನಾನು ನಂಬುತ್ತೇನೆ. ನಮ್ಮನ್ನು ವಿನ್ಯಾಸ ಮಾಡಿರುವುದೆ ಹಾಗೆ. ನಾವು ಪ್ರೀತಿಯನ್ನು ಕೊಡುತ್ತಿಲ್ಲ, ತೆಗೆದುಕೊಳ್ಳುತ್ತಿಲ್ಲ ಅಂದರೆ ನಾವು ನಮ್ಮ ಇಂಜಿನ್‌ನ ಎಲ್ಲಾ ಸಿಲಿಂಡರ್‌ಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದೇ ಅರ್ಥ. ನಾವು, ನಾವು ಯಾರಾಗಬೇಕಿತ್ತೊ ಅದಲ್ಲ. ನಾವು ಏನು ಮಾಡಬಹುದೊ ಅದೆಲ್ಲವನ್ನೂ ನಾವು ಮಾಡುತ್ತಿಲ್ಲ.

ತಮಗೆ ಯಾರು ಇಷ್ಟವಾಗುವುದಿಲ್ಲವೊ ಅವರನ್ನು, ಅಥವ ತಾವು ಯಾರನ್ನು ತರ್ಕಹೀನರು, ಪರಿಜ್ಞಾನ ಇಲ್ಲದವರು, ಸ್ವಾರ್ಥಿಗಳು ಎಂದು ಅಂದುಕೊಳ್ಳುತ್ತಾರೊ ಅಂತಹವರನ್ನು ಪ್ರೀತಿಸದೆ ಇರಲು ಜನ ನಿರ್ಧರಿಸಿ ಬಿಡುವುದು ನಿಜಕ್ಕೂ ದುರಂತ. ಅದು ದುರಂತ ಯಾಕೆಂದರೆ, ಪ್ರೀತಿ ಎನ್ನುವುದು ಒಪ್ಪಿಕೊಳ್ಳಬಹುದಾದವರನ್ನು ಇಲ್ಲವೆ ಯೋಗ್ಯರಾದವರನ್ನಷ್ಟೆ ಪ್ರೀತಿಸಬೇಕು ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ. ಆಗಲೂ ಬಾರದು.

ನಮ್ಮೆಲ್ಲರಲ್ಲೂ ಕುಂದುಕೊರತೆಗಳಿವೆ. ಕೆಲವೊಂದು ತಾಳ್ಮೆ ಕಳೆದುಕೊಂಡ, ದೌರ್ಬಲ್ಯಗಳಿಗೆ ಬಲಿಯಾದ, ಅಥವ ಆಮಿಷಕ್ಕೆ ಒಳಗಾದ ನಿಮಿಷಗಳನ್ನು ನಾವೆಲ್ಲರೂ ಹೊಂದಿದ್ದೇವೆ. ಕೆಲವೊಂದು ಕೆಲಸಗಳನ್ನು ಮಾಡಿಬಿಟ್ಟು, ಆಮೇಲೆ, ಅಯ್ಯೋ ಅದನ್ನು ಮಾಡಬಾರದಿತ್ತು ಎಂದು ಹಳಹಳಿಸಿದ ಸಂಗತಿಗಳು ನಮ್ಮೆಲ್ಲರಲ್ಲೂ ಇವೆ. ಎಲ್ಲರೂ ಒಪ್ಪಬಹುದಾದ ಹಾಗೆ ನಾವು ಎಲ್ಲಾ ಸಮಯದಲ್ಲಿಯೂ ವರ್ತಿಸಿರುವುದಿಲ್ಲ. ನಾವು ಯಾವಾಗಲೂ ಯೋಗ್ಯರಾಗಿಯೆ ನಡೆದುಕೊಂಡಿದ್ದೇವೆ ಎಂದೂ ಇಲ್ಲ. ಒಪ್ಪಬಹುದಾದ ಇಲ್ಲವೆ ಯೋಗ್ಯರಾದ ಎನ್ನುವುದೇನಾದರೂ ಪ್ರೀತಿಗೆ ಅತ್ಯಗತ್ಯವಾದ ವಸ್ತುವಾಗಿಬಿಟ್ಟರೆ, ಆಗ ಈ ಜಗತ್ತಿನಲ್ಲಿ ಸ್ವಲ್ಪವೆ ಸ್ವಲ್ಪ ಪ್ರೀತಿ ಮಾತ್ರ ಇರುತ್ತದೆ.

ಉತ್ತಮವಾದ, ಉನ್ನತವಾದ ಪ್ರೀತಿಗೆ ಯಾವುದೆ ಷರತ್ತುಗಳಿಲ್ಲ. ನಮ್ಮೆಲ್ಲ ಕುಂದುಕೊರತೆಗಳ ಹೊರತಾಗಿಯೂ ನಾವು ಪ್ರೀತಿಸುತ್ತೇವೆ, ಪ್ರೀತಿಸಲ್ಪಡುತ್ತೇವೆ. ನಾವು ಅದನ್ನು ಇನ್ನೂ ಹೆಚ್ಚಿಗೆ ಮಾಡಲು ಪ್ರಯತ್ನಿಸಬೇಕು ಎನ್ನುವುದೇನೊ ನಿಜ. ಆದರೆ, ಅದನ್ನು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆ ಬರುವುದು ಮಾತ್ರ ಪ್ರೀತಿಸುವುದರಿಂದ, ಪ್ರೀತಿಸಲ್ಪಡುವುದರಿಂದ.

ಕೆಲವರ ಜೊತೆ ಸಮಯ ಕಳೆಯುವುದು ನಿಜಕ್ಕೂ ಅಸಹನೀಯ ಎನ್ನುವುದು ನಮಗೆಲ್ಲರಿಗೂ ಗೊತ್ತು. ಅವರಿಗೆ ಅಸಂಖ್ಯ ಎನ್ನುವಷ್ಟು ಬೇಡಿಕೆಗಳಿರುತ್ತವೆ. ಬಹಳ ಆಗ್ರಹದಿಂದ ದಬಾಯಿಸುತ್ತಾರೆ. ಎಷ್ಟೋ ಸಲ ಅವರು ಹೇಳುವುದರಲ್ಲಿ ಅರ್ಥವೇ ಇರುವುದಿಲ್ಲ. ಅವರ ನಡವಳಿಕೆಗಳಿಗೆ, ಅವರು ಯಾಕೆ ಹಾಗೆ ಮಾಡುತ್ತಾರೆ ಎನ್ನುವುದಕ್ಕೆ ತರ್ಕವೇ ಇರುವುದಿಲ್ಲ. ಬಹಳಷ್ಟು ಸಲ, ತಮ್ಮದನ್ನು ಮಾತ್ರ ಯೋಚಿಸುವ ಸ್ವಕೇಂದ್ರಿತ ವ್ಯಕ್ತಿಗಳಂತೆ ಕಾಣಿಸುತ್ತಾರೆ. ಬಹುಶಃ ಅವರು ಹಾಗೆ ಇರಲೂ ಬಹುದು. ಹಾಗಿದ್ದರೂ, ನಾವು ಅವರನ್ನು ಪ್ರೀತಿಸಿದರೆ, ಅವರಿಗೆ ನಮ್ಮ ಪ್ರೀತಿಯ ಅನುಭವ ಬಹುಶಃ ಆಗಬಹುದು. ಬಹುಶಃ ಅದು ಅವರಲ್ಲಿನ ಒಳ್ಳೆಯತನವನ್ನು ಹೊರಗೆ ತರಬಹುದು. ನಮ್ಮ ಪ್ರೀತಿ ಜನರನ್ನು ಬದಲಾಯಿಸಿ ಅವರು ಇನ್ನೂ ಹೆಚ್ಚಿಗೆ ಪ್ರೀತಿಸಲ್ಪಡುವಂತೆ ಮಾಡಬಹುದು. ಕವಿ ಥಿಯೋಡರ್ ರೋತ್ಕೆ ಹೇಳಿದಂತೆ, “ಪ್ರೀತಿ ಪ್ರೀತಿಯನ್ನು ಸೃಷ್ಟಿಸುತ್ತದೆ.”

ಹಂಫ್ರಿ ಬೊಗಾರ್ಟ್ ಮತ್ತು ಕ್ಯಾಥರಿನ್ ಹೆಪ್‌ಬರ್ನ್ ನಟಿಸಿರುವ “ಆಫ್ರಿಕನ್ ಕ್ವೀನ್” ನನ್ನ ಅಚ್ಚುಮೆಚ್ಚಿನ ಸಿನೆಮಾಗಳಲ್ಲಿ ಒಂದು. ಅವರಿಬ್ಬರೂ ಬೊಗಾರ್ಟ್‌ನ ದೋಣಿಯಲ್ಲಿ ಕುಳಿತು ನದಿಯೊಂದರಲ್ಲಿ ಪ್ರಯಾಣ ಆರಂಭಿಸುತ್ತಾರೆ. ಆರಂಭದಲ್ಲಿ ಬೊಗಾರ್ಟ್ ಮಾತುಮಾತಿಗೆ ಸಿಡುಕುವ ಒರಟನಾದರೆ, ಹೆಪ್‌ಬರ್ನ್ ಶ್ರೀಮದ್ಗಾಂಭೀರ್ಯದ ಸಿಸ್ಟರ್. ಆಕೆಗೆ ಅವನ ಮದ್ಯ ಸೇವನೆ ಹಿಡಿಸುವುದಿಲ್ಲ. ದೋಣಿಯಲ್ಲಿದ್ದ ಸಾರಾಯಿ ಬಾಟಲ್‌ಗಳನ್ನೆಲ್ಲ ನದಿಗೆ ಎಸೆದುಬಿಡುತ್ತಾಳೆ. ಅವನಿಗೊ, ಆಕೆ ನೀಡುವ ಉಪದೇಶಗಳು ಒಂದಿಷ್ಟೂ ಹಿಡಿಸುವುದಿಲ್ಲ. ನಾನು ಕರೆದುಕೊಂಡು ಹೋಗುತ್ತೇನೆ ಎಂದು ಅವಳಿಗೆ ಯಾಕೆ ಹೇಳಿದೆನೊ, ಯಾಕಾಗಿ ಕರೆದುಕೊಂಡು ಬಂದೆನೊ ಎಂದು ಪರಿತಾಪ ಪಡುತ್ತಿರುತ್ತಾನೆ. ಆದರೆ, ಜರ್ಮನ್ನರಿಂದ ತಪ್ಪಿಸಿಕೊಳ್ಳಬೇಕೆನ್ನುವ ಸಮಾನ ಆಸೆಯಿಂದಾಗಿ ಇಬ್ಬರೂ ನಿಧಾನ ನಿಧಾನವಾಗಿ ಹೊಂದಿಕೊಳ್ಳುತ್ತ ಹೋಗುತ್ತಾರೆ. ಆ ದೋಣಿಪಯಣದಲ್ಲಿ ಅನೇಕ ಕಷ್ಟನಷ್ಟಗಳನ್ನು ಎದುರಿಸುತ್ತಾರೆ. ಹಾಗೆಯೆ ಜೊತೆಜೊತೆಯಾಗಿ ಆತ್ಮೀಯತೆಯನ್ನೂ ಹಂಚಿಕೊಳ್ಳುತ್ತ ಹೋಗುತ್ತಾರೆ. ಪರಸ್ಪರ ಪ್ರೇಮದಲ್ಲಿಯೂ ಬೀಳುತ್ತಾರೆ. ಆಗ ಅವರಿಬ್ಬರೂ ಬೇರೆಯೆ ವ್ಯಕ್ತಿಗಳಾಗಿ ಬಿಡುತ್ತಾರೆ. ಪ್ರಯಾಣದ ಆರಂಭದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತರ್ಕಹೀನ, ವಿವೇಚನೆಯಿಲ್ಲದ, ಸ್ವಾರ್ಥಿ ಎಂದು ಅಂದುಕೊಂಡಿರುತ್ತಾರೆ. ಆದರೆ ಪ್ರಯಾಣ ಕೊನೆಯಾದಾಗ ಅವರು ಪರಸ್ಪರರನ್ನು ನೋಡುವುದು ಆ ರೀತಿಯಲ್ಲ. ಅವರಿಬ್ಬರೂ ಜರ್ಮನ್ನರ ಕೈಗೆ ಸಿಕ್ಕಿ ಹಾಕಿಕೊಂಡು ಜರ್ಮನ್ ಯುದ್ಧನೌಕೆಯ ಕ್ಯಾಪ್ಟನ್‌ನಿಂದಲೆ ತಮ್ಮ ಅಂತಿಮ ಆಸೆಯಾದ ಮದುವೆಯನ್ನು ಮಾಡಿಸಿಕೊಳ್ಳುತ್ತಿರುವಾಗ ಪ್ರೀತಿಪ್ರೇಮದಿಂದ ತುಂಬಿ ತುಳುಕುತ್ತಿರುತ್ತಾರೆ. ಅದೇ ಸಮಯದಲ್ಲಿ ಅರ್ಧ ಮುಳುಗಿದ ಅವರ ಆಫ್ರಿಕನ್ ಕ್ವೀನ್ ದೋಣಿಯಿಂದ ಹೊರಟ ಅವರು ಕೈಯಾರೆ ತಯಾರಿಸಿದ ಟಾರ್ಪಿಡೊ ಆ ಜರ್ಮನ್ ಯುದ್ಧ ನೌಕೆಯನ್ನು ಅಪ್ಪಳಿಸುತ್ತದೆ. ಪ್ರೀತಿಯಿಂದ ತುಳುಕುತ್ತಿದ್ದ ಪ್ರೇಮಿಗಳು ಬಚಾವಾಗುತ್ತಾರೆ.

ಕೆಲವೊಮ್ಮೆ ಜನ ಬೇರೆಯದೆ ತರ್ಕವನ್ನು ಉಪಯೋಗಿಸಿ, ಬೇರೆಯದೆ ರೀತಿಯಲ್ಲಿ ವಾದ ಮಂಡಿಸುವಾಗ ತರ್ಕವಿಲ್ಲದವರಂತೆ, ವಿವೇಚನೆಯಿಲ್ಲದವರಂತೆ ಕಾಣಿಸುತ್ತಾರೆ. ಅವರಿಗೆ ಜಗತ್ತನ್ನು ನೋಡುವ ಅವರದೇ ಆದ ವಿಭಿನ್ನವಾದ ದೃಷ್ಟಿ ಇರಬಹುದು. ಅಥವ ವಿಭಿನ್ನವಾದ ಅನುಭವಗಳಿರಬಹುದು. ಅಥವ ನಾವು ನೋಡುವುದಕ್ಕಿಂತ ಬೇರೆಯದೇ ಕಾರಣಗಳನ್ನು ಅವರು ನೋಡುತ್ತಿರಬಹುದು.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಓದಿದ್ದ ಕತೆಯೊಂದು ಜ್ಞಾಪಕಕ್ಕೆ ಬರುತ್ತದೆ. ಕಣ್ಣು ಕಾಣದ ಒಂದಷ್ಟು ಕುರುಡ ಜನ ಆನೆಯ ಸುತ್ತ ನಿಂತಿರುವುದನ್ನು ಕುರಿತ ಕತೆ ಅದು. ಒಬ್ಬ ಆನೆಯ ಸೊಂಡಿಲನ್ನು ಮುಟ್ಟಿ ಆನೆ ನೀರಿನ ಕೊಳವೆ ಇದ್ದ ಹಾಗೆ ಇದೆ ಎನ್ನುತ್ತಾನೆ. ಮತ್ತೊಬ್ಬ ತನ್ನ ಕೈಗಳನ್ನು ಆನೆಯ ಕಾಲುಗಳ ಸುತ್ತ ಬಳಸಿ, ಆನೆ ಮರದ ಕಾಂಡ ಇದ್ದ ಹಾಗೆ ಇದೆ ಎನ್ನುತ್ತಾನೆ. ಮತ್ತೊಬ್ಬ ಆನೆಯ ಮೈಯ ಬದಿಯ ಮೇಲೆ ಕೈ ಇಟ್ಟು, ಆನೆ ಗೋಡೆ ಇದ್ದ ಹಾಗೆ ಇದೆ ಎನ್ನುತ್ತಾನೆ. ಮಗದೊಬ್ಬ ಆನೆಯ ಬಾಲಕ್ಕೆ ಕೈಹಾಕಿ, ಆನೆ ಹಗ್ಗ ಇದ್ದ ಹಾಗೆ ಇದೆ ಎಂದು ಘೋಷಿಸುತ್ತಾನೆ. ಅದು ಹೀಗೆಯೆ ನಡೆಯುತ್ತದೆ. ಪ್ರತಿಯೊಬ್ಬನು ಹೇಳಿದ್ದೂ ಸರಿಯಾಗಿತ್ತು; ಹಾಗೆಯೆ ಪ್ರತಿಯೊಬ್ಬನದೂ ತಪ್ಪಿತ್ತು. ಅವರು ಮುಟ್ಟಿದ ಭಾಗಗಳ ಬಗ್ಗೆ ಅವರು ಹೇಳಿದ್ದು ಸರಿಯಾದುದಾಗಿತ್ತು. ಆದರೆ ಅವರದು ಎಲ್ಲಿ ತಪ್ಪಿತ್ತೆಂದರೆ, ಅವರು ಆನೆಯ ಸಂಪೂರ್ಣ ಚಿತ್ರವನ್ನು ನೋಡಿರಲಿಲ್ಲ. ಎಲ್ಲಿಯವರೆಗೆ ಆನೆಯ ಎಲ್ಲಾ ಭಾಗಗಳನ್ನೂ ಜೋಡಿಸಿ, ಆನೆಯ ನಿಜವಾದ ಚಿತ್ರ ಸ್ಪಷ್ಟವಾಗುವ ತನಕ ಅವರಿಗೆ ತಮ್ಮ ತಪ್ಪಿನ ಅರಿವಾಗಿರಲಿಲ್ಲ.

ಆ ಕತೆ ಓದಿದಾಗಿನಿಂದ, ಪ್ರಪಂಚದಲ್ಲಿನ ಕೆಲವು “ತರ್ಕಹೀನ, ವಿವೇಚನೆಯಿಲ್ಲದ” ಜನ ತಮ್ಮ ಕೈಗಳನ್ನು ಆನೆಯ ಮೇಲೆ ನಾನು ಮುಟ್ಟಿಲ್ಲದೆ ಇರುವ ಭಾಗಗಳ ಮೇಲೆ ಇಟ್ಟುಕೊಂಡಿದ್ದಾರೆ ಎಂದು ನೆನಪು ಮಾಡಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ. ಇನ್ನೂ ಸರಳವಾದ ಮಾತೊಂದಿದೆ. “ಪ್ರತಿಯೊಂದು ಪ್ರಶ್ನೆಗೂ ಮೂರು ಉತ್ತರಗಳಿರುತ್ತವೆ: ನಿನ್ನದು, ನನ್ನದು, ಹಾಗು ಸರಿಯಾದದ್ದು.”

ಹಾಗಾಗಿ, ಪ್ರೀತಿಯ ಕೊಟ್ಟು-ತೆಗೆದುಕೊಳ್ಳುವಿಕೆಯಿಂದ ಬರುವ ಅಗಾಧವಾದ ಸ್ವಂತ ಅರಿವನ್ನು ಅನುಭವಿಸಿ. ಕೆಲವರು “ಅಸಾಧ್ಯ”ರಾದ ಮಾತ್ರಕ್ಕೆ ಅವರನ್ನು ಪ್ರೀತಿಸುವುದನ್ನು ನಿಲ್ಲಿಸುವುದಕ್ಕಿಂತ ಹೆಚ್ಚು ಮುಖ್ಯವಾದದ್ದು ಈ ಪ್ರೀತಿ. ಬಹಳಷ್ಟು ಸಮಯ, ಅವರು ನಿಮಗಿಂತ ಅಥವ ನನಗಿಂತ ಅಸಾಧ್ಯರೇನೂ ಆಗಿರುವುದಿಲ್ಲ!

ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು.
ಏನೇ ಇರಲಿ, ಅವರನ್ನು ಪ್ರೀತಿಸಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

1 Comment

  1. Dear sir,

    it’s very intrestng. it has a lot of morality reguarding human life

Leave a Reply