ನೀವು ಒಳ್ಳೆಯದನ್ನು ಮಾಡಿದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.

ಈ ಸಂದೇಶವನ್ನು ನಾನು ಕಲಿತಿದ್ದು ನಾನು ಹೈಸ್ಕೂಲಿನ ಎರಡನೆ ವರ್ಷದಲ್ಲಿದ್ದಾಗ. ಆಗ ನನಗೆ ಹದಿನೈದು ವರ್ಷ ವಯಸ್ಸು.

ನನಗೆ ವಿದ್ಯಾರ್ಥಿಗಳ ಉಸ್ತುವಾರಿಯಲ್ಲಿ ನಡೆಯುವ ವಿದ್ಯಾರ್ಥಿ ಆಡಳಿತದ ಬಗ್ಗೆ ಆಸಕ್ತಿಯಿತ್ತು. ನನ್ನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಅಸೆಂಬ್ಲಿ ಇತ್ತು. ಅದು ಶಾಲೆಯ ಪ್ರತಿಯೊಂದು ತರಗತಿಯ ಚುನಾಯಿತ ಪ್ರತಿನಿಧಿಗಳಿಂದ ಕೂಡಿತ್ತು. ಹಾಗೆಯೆ ವಿದ್ಯಾರ್ಥಿ ಸಂಘದ ಸಮಿತಿ ಸದಸ್ಯರುಗಳೂ ಈ ಕ್ಲಾಸ್ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರತಿಯೊಂದು ವರ್ಗದ ಎಲ್ಲಾ ಕ್ಲಾಸ್ ಲೀಡರ್‌ಗಳೂ ತಮ್ಮ ತರಗತಿಗೆ ಸಂಬಂಧಪಟ್ಟಂತಹ ಚಟುವಟಿಕೆಗಳನ್ನು ಆಯೋಜಿಸಲು, ಅದರ ಬಗ್ಗೆ ಮಾತನಾಡಲು ಈ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ನಾನು ಹೈಸ್ಕೂಲಿನ ದ್ವಿತೀಯ ವರ್ಷದಲ್ಲಿದ್ದಾಗ, ಶಾಲೆ ಪ್ರಾರಂಭವಾದ ಕೆಲವೇ ವಾರಗಳಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಈ ಪ್ರತಿನಿಧಿ ಅಸೆಂಬ್ಲಿ ವ್ಯವಸ್ಥೆಯನ್ನು ವಜಾ ಮಾಡುವ ಹಾಗೂ ಅದಕ್ಕೆ ಬದಲಾಗಿ ಕೇವಲ ಕ್ಲಾಸ್ ಲೀಡರ್ ಮತ್ತು ವಿದ್ಯಾರ್ಥಿ ಸಂಘದ ಸಮಿತಿ ಸದಸ್ಯರನ್ನು ಒಳಗೊಂಡ ಚಿಕ್ಕ ಒಕ್ಕೂಟವೊಂದನ್ನು ಮಾಡಲು ತೀರ್ಮಾನಿಸಿದರು. ಹೀಗೆ ಕ್ಲಾಸ್ ಕೌನ್ಸಿಲ್‌ಗಳನ್ನು ಹಾಗೂ ವಿದ್ಯಾರ್ಥಿ ಸಂಘವನ್ನು ಒಗ್ಗೂಡಿಸಿದರೆ ಮತ್ತಷ್ಟು ದಕ್ಷತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆಂದು ಅವರು ಹೇಳಿದರು. ಇದು ಖಂಡಿತವಾಗಿಯೂ ಸುಧಾರಿತ ವ್ಯವಸ್ಥೆ ಎಂದು ಅವರು ಪ್ರಾಮಾಣಿಕವಾಗಿಯೆ ನಂಬಿದ್ದರು.

ಅವರ ಈ ಪುನರ್‌ರಚನಾ ಕಾರ್ಯ ನನ್ನನ್ನು ಗೊಂದಲಗೊಳಿಸಿತು. ಪ್ರತಿನಿಧಿಗಳ ಅಸೆಂಬ್ಲಿ ಸುಮಾರು 65 ವಿದ್ಯಾರ್ಥಿಗಳಿಂದ ಕೂಡಿದ್ದ, ಎಲ್ಲರನ್ನೂ ಸಮಗ್ರವಾಗಿ ಒಳಗೊಂಡಿದ್ದ ವಿಶಾಲ ಗುಂಪು. ಹೊಸ ಕೌನ್ಸಿಲ್ ಕೇವಲ 25 ಜನರನ್ನು ಮಾತ್ರ ಒಳಗೊಂಡ ಗುಂಪು. ನನ್ನ ಪ್ರಕಾರ, ಈ ಪ್ರತಿನಿಧಿಗಳ ಅಸೆಂಬ್ಲಿಯೆಂದರೆ ಬೇರುಮಟ್ಟದ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ಹೊಸ ಕೌನ್ಸಿಲ್‌ನಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮೂರನೇ ಎರಡು ಭಾಗದಷ್ಟು ಕಡಿತವಾಗುತ್ತದೆ. ಆಗ ಅದು ಕೆಲವೆ ಕೆಲವರ, ಗಣ್ಯರ ಗುಂಪಾಗಿ ಬಿಡುತ್ತದೆ ಎಂದು ನನಗನ್ನಿಸಿತು. 2400 ವಿದ್ಯಾರ್ಥಿಗಳನ್ನು ಕೇವಲ 20 ವಿದ್ಯಾರ್ಥಿಗಳು ಪ್ರತಿನಿಧಿಸುವ ವ್ಯವಸ್ಥೆ ಅದು.

ಈ ಪುನರ್‌ರಚನಾ ಕಾರ್ಯ ಕಾರ್ಯರೂಪಕ್ಕೆ ಬರಲು ವಿದ್ಯಾರ್ಥಿ ಆಡಳಿತದ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿತ್ತು. ಆ ತಿದ್ದುಪಡಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಮತ ಹಾಕಬೇಕಿತ್ತು. ಹಾಗಾಗಿ ವಿದ್ಯಾರ್ಥಿ ನಾಯಕರು ಆ ವಿಚಾರದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಅವರು ತಮ್ಮ ಆ ಯೋಜನೆಯನ್ನು ನಮ್ಮ ಮುಂದೆ ಇಟ್ಟಾಗ ನಾನು ಅದರ ವಿರುದ್ಧ ಮಾತನಾಡಿದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷ ಆ ಯೋಜನೆಯ ಪರವಾಗಿ ಸಾರ್ವಜನಿಕವಾಗಿ ಬೆಂಬಲ ಘೋಷಿಸಿದ. ಆಗ ನಾನು ಅದರ ವಿರುದ್ಧ ಮಾತನಾಡಲು ಅವಕಾಶ ಕೋರಿದೆ. ವಿರೋಧ ಭಾಷಣ ಮಾಡಲು ಆತನಿಗೆ ಕೊಟ್ಟಷ್ಟೆ ಸಮಯವನ್ನು ನನಗೂ ಕೊಟ್ಟರು. ಶಾಲಾ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಪುನರ್ರಚನೆಗೆ ಬೆಂಬಲ ಸೂಚಿಸಿ ಪ್ರಕಟಿಸಿದಾಗ ನಾನು ಅದನ್ನು ಟೀಕಿಸಿ ಪತ್ರ ಬರೆದೆ. ಹಲವಾರು ವಾರಗಳ ಕಾಲ ಆ ಹೊಸ ಯೋಜನೆಯ ವಿರುದ್ಧ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸುವವನು ನಾನೊಬ್ಬನೇ ಆಗಿದ್ದೆ.

ನನ್ನ ಟೀಕೆ ಕ್ಯಾಂಪಸ್‌ನಲ್ಲಿನ ನಾಯಕರನ್ನು ರೇಗಿಸಿತು. ಅವರು ಹುಡುಗರ ಮಧ್ಯೆ ಬಹಳ ಬೆಲೆಯಿದ್ದವರು; ಇಡೀ ಕ್ಯಾಂಪಸ್‌ನ ನಾಯಕರುಗಳು. ಅವರಿಗೆ ಅಲ್ಲಿಯತನಕ ಇಂತಹ ಯಾವುದೇ ತರಹದ ವಿರೋಧದ ಅನುಭವ ಆಗಿರಲಿಲ್ಲ. ಹಾಗಾಗಿ ನಾನು ಅವರೆಲ್ಲರ ಗೇಲಿಗೆ, ಅಪಹಾಸ್ಯಕ್ಕೆ, ಚುಚ್ಚು ಮಾತಿಗೆ ಒಳಗಾಗಿ ಕಾಲ ತಳ್ಳಬೇಕಾಯಿತು. ನನ್ನ ತರಗತಿಯ ಟೈಮ್‌ಟೇಬಲ್ ಪಡೆದುಕೊಂಡು, ಎರಡು ಸಲ ನಾನು ಅಟೆಂಡ್ ಮಾಡುತ್ತಿದ್ದ ತರಗತಿಗೇ ಬಂದು, ನನ್ನೊಂದಿಗೆ ಅಲ್ಲಿಯೆ, ಆ ಕ್ಷಣದಲ್ಲಿಯೆ ಚರ್ಚೆ ಮಾಡಬೇಕೆಂದು ನನ್ನ ತರಗತಿಯ ಉಪಾಧ್ಯಾಯರಿಗೆ ಕೇಳಿದರು. ಒಮ್ಮೆ ಒಬ್ಬ ಉಪಾಧ್ಯಾಯರೂ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟು ಬಿಟ್ಟರು. ಇನ್ನೊಮ್ಮೆ ಮಧ್ಯಾಹ್ನ ಊಟದ ಸಮಯದಲ್ಲಿ ಪುನರ್ರಚನೆಯ ಪರ ಇದ್ದವರು ನನಗೆ ಮುತ್ತಿಗೆಯನ್ನೂ ಹಾಕಿಬಿಟ್ಟರು. ಅವರು ಶಾಲೆಯ ಹೊರಗೆ ವೃತ್ತಾಕಾರದಲ್ಲಿ ಸುತ್ತುತ್ತ ಪ್ರಚಾರ ಮಾಡುತ್ತಿದ್ದ ಘೋಷಣಾ ಫಲಕಗಳಲ್ಲಿ ಪುನರ್ರಚನೆಯ ಪರವಾಗಿ ಮಾತ್ರವಲ್ಲದೆ ನನ್ನ ಮೇಲಿನ ವೈಯಕ್ತಿಕ ದಾಳಿಯ ಪದಗಳೂ ಇದ್ದವು. ನಾನು ಆ “ಗಣ್ಯ” ಮನುಷ್ಯರ ಗುಂಪಿನಲ್ಲಿ ಲೆಕ್ಕಕ್ಕಿಲ್ಲದ, ಅಮಾನ್ಯ ಹುಡುಗನಾಗಿ ಹೋಗಿದ್ದೆ.

ಕೆಲವು ವಾರಗಳ ನಂತರ ಇತರ ಐದಾರು ಜನ ವಿದ್ಯಾರ್ಥಿಗಳು ಆ ಯೋಜನೆಯನ್ನು ಸಾರ್ವಜನಿಕವಾಗಿ ವಿರೋಧಿಸಲು ತೀರ್ಮಾನಿಸಿದರು. ಕ್ಯಾಂಪಸ್‌ನಲ್ಲಿ ಆ ವಿಚಾರದ ಬಗ್ಗೆ ಅರಿವು ಮೂಡಲಾರಂಭಿಸಿತು. ಕೊನೆಯಲ್ಲಿ ಏನಾಯಿತೆಂದರೆ, ವಿದ್ಯಾರ್ಥಿಗಳು ಮತ ಚಲಾಯಿಸುವುದಕ್ಕಿಂತ ಮುನ್ನ ಎಲ್ಲರ ಸಮ್ಮುಖದಲ್ಲಿ ಆ ವಿಚಾರದ ಬಗ್ಗೆ ಚರ್ಚೆಯಾಗಲಿ ಎಂಬ ತೀರ್ಮಾನವಾಯಿತು. ಎರಡೂ ಕಡೆಯ ಜನರು ಮಾತನಾಡಲು ಅನುಕೂಲವಾಗುವಂತೆ ಆಡಿಟೋರಿಯಮ್‌ನಲ್ಲಿ ವ್ಯವಸ್ಥೆ ಮಾಡಿದರು. ವಿರೋಧ ಗುಂಪಿನ ಭಾಷಣಕಾರರಿಗೆ ನಾನು ಮುಂದಾಳತ್ವ ವಹಿಸಿದ್ದೆ. ಈ ಚರ್ಚಾಕೂಟ ಒಂದು ಗಂಟೆಗಿಂತ ಹೆಚ್ಚಿಗೆ ನಡೆಯಲಿಲ್ಲ. ಆದರೆ ನಮ್ಮ ಅಭಿಪ್ರಾಯಗಳನ್ನು ಎಲ್ಲರಿಗೂ ವಿವರಿಸಲು ನಮಗೆ ಅಷ್ಟು ಸಮಯ ಸಾಕಾಗಿತ್ತು.

ಚುನಾವಣೆಯ ಫಲಿತಾಂಶ ಬಂದಾಗ ಪುನರ್ರಚನಾ ಗೊತ್ತುವಳಿಗೆ ಸೋಲಾಯಿತು. ಅದರ ಪರವಾಗಿ 400 ಮತಗಳು ಬಿದ್ದರೆ, ವಿರುದ್ಧವಾಗಿ 1700 ಮತಗಳು ಬಿದ್ದಿದ್ದವು. ನಮಗೆಲ್ಲರಿಗೂ ನಿಬ್ಬೆರಗಾಗುವಂತಹ ವಿಜಯ ಲಭಿಸಿತ್ತು. ಅವರು ಹೇಳುತ್ತಿದ್ದ ಸಣ್ಣ ಕೌನ್ಸಿಲ್ ಕಡೆಗೂ ರಚನೆಯಾಗಲಿಲ್ಲ. ಹಾಗೆಯೆ ಪ್ರತಿನಿಧಿ ಅಸೆಂಬ್ಲಿಯೂ ರದ್ದಾಗಲಿಲ್ಲ. ಇದಾದ ಹಲವು ತಿಂಗಳುಗಳ ನಂತರ, ಆ ಪುನರ್ರಚನಾ ಯೋಜನೆಯೆ ತಪ್ಪಾಗಿತ್ತೆಂದೂ, ಅದು ಸೋತಿದ್ದಕ್ಕೆ ತನಗೆ ಈಗ ಸಂತೋಷವಾಗಿದೆಯೆಂದೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನನಗೆ ಹೇಳಿದಳು.

ಕ್ಯಾಂಪಸ್‌ನ ನಾಯಕರನ್ನು ಶಾಲೆ ಪ್ರಾರಂಭವಾದ ಎರಡೇ ತಿಂಗಳಲ್ಲಿ ಹಾಗೆ ಎದುರು ಹಾಕಿಕೊಳ್ಳಲು ನನಗೆ ನಿಜವಾಗಲೂ ಎದೆಗಾರಿಕೆ ಇದ್ದಿರಬೇಕು ಎಂದು ನಾನಂದುಕೊಂಡೆ. ವಿರೋಧದ ಏಕೈಕ ಧ್ವನಿ ನನ್ನೊಬ್ಬನದೇ ಆಗಿದ್ದ ಆ ಮೊದಲ ಹಲವು ವಾರಗಳು ನಿಜವಾಗಲೂ ಬಹಳ ಏಕಾಂಗಿ ದಿನಗಳು. ಅವರು ನನ್ನ ಮೇಲೆ ಮಾತಿನ ದಾಳಿ ನಡೆಸುವುದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ದಾಳಿ ಮಾಡುವಂತೆ ಗುಂಪಾಗಿ ನನ್ನ ಮೇಲೆ ಏರಿ ಬಂದದ್ದನ್ನೂ ನನ್ನ ಕೈಯಲ್ಲಿ ನಂಬಲೇ ಆಗಲಿಲ್ಲ. ನಾನೊಬ್ಬ ಬಹಿಷ್ಕೃತ ಎಂಬ ಭಾವನೆ ಹುಟ್ಟುವಂತೆ ಮಾಡಿಬಿಟ್ಟಿದ್ದರು. ಅದು ಖಂಡಿತವಾಗಿ ಹಿತವಾದ ಅನುಭವ ಅಲ್ಲ.

ನಾವು ಗೆದ್ದ ಮೇಲೆ ನಾನು ಸಂತೋಷದಿಂದ ಹಿಗ್ಗಿಬಿಟ್ಟೆ. ನಾನು ಏಕಾಂಗಿಯಲ್ಲ ಎನ್ನುವುದನ್ನು ಚುನಾವಣೆ ಸಾಬೀತು ಮಾಡಿತು. ಹೇಳಬೇಕೆಂದರೆ ಶೇ. 80 ವಿದ್ಯಾರ್ಥಿಗಳು ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೆನೊ ಅದನ್ನು ಅರ್ಥ ಮಾಡಿಕೊಂಡಿದ್ದರು. ಹಾಗಾಗಿ ನಾನು ಇನ್ನೂ ಹೆಚ್ಚಾಗಿ ಈ ವಿದ್ಯಾರ್ಥಿ ಸಂಘದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. ಮುಂದಿನ ಅವಧಿಯಲ್ಲಿ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಲು ಹೆಸರು ನೋಂದಾಯಿಸಿದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಾಗ, ಅದರಲ್ಲಿ ನನ್ನ ಹೆಸರಿದ್ದದ್ದನ್ನು ನೋಡಿದ ಕ್ಯಾಂಪಸ್‌ನ ನಾಯಕನೊಬ್ಬ ತನ್ನ ಕೊನೆಯ ಟೀಕಾಸ್ತ್ರವನ್ನು ನನ್ನತ್ತ ಎಸೆದ. “ನನಗೆ ಗೊತ್ತಿತ್ತು,” ಅವನೆಂದ, “ನೀನು ಪುನರ್ರಚನೆಯನ್ನು ವಿರೋಧಿಸಿದ್ದು ನಿನ್ನ ಹೆಸರು ಎಲ್ಲರಿಗೂ ಗೊತ್ತಾಗಲಿ, ಅದರಿಂದ ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಲು ಅನುಕೂಲವಾಗಲಿ ಎಂದು. ನೀನು ಕೇವಲ ಅವಕಾಶವಾದಿ ಮಾತ್ರ.” ಮುಖದಲ್ಲಿ ಒಂದು ತರಹದ ಭಾವ ಪ್ರದರ್ಶಿಸಿ ಆತ ಹೊರಟು ಹೋದ.

ನಾನು ಸ್ತಂಭೀಭೂತನಾದೆ. ಯಾವುದೇ ತರಹದಲ್ಲಿ ಯಾವುದಕ್ಕಾದರೂ ಚುನಾಯಿತನಾಗುವ ಇಲ್ಲವೆ ನಾಮಕರಣವಾಗುವ ಅವಕಾಶವನ್ನು ನಾನು ಈಗಲೆ ಬಿಟ್ಟುಕೊಡುತ್ತಿದ್ದೇನೆ ಎನ್ನುವುದು ಪುನರ್ರಚನೆಯನ್ನು ವಿರೋಧಿಸಿದಾಗಲೆ ನನಗೆ ಖಾತರಿಯಾಗಿತ್ತು. ಕ್ಯಾಂಪಸ್‌ನಲ್ಲಿನ ನಾಯಕರ ನಡುವೆ ಆಗ ನಾನು ತಿರಸ್ಕಾರದ ವಸ್ತುವಾಗಿದ್ದೆ. ಅವರನ್ನು ವಿರೋಧಿಸಿ ಗೆಲ್ಲುತ್ತೇನೆ ಎಂದೇನೂ ನಾನು ನಿರೀಕ್ಷಿಸಿರಲಿಲ್ಲ. ಪುನರ್ರಚನೆಯ ಕುರಿತು ನನಗೆ ಗಾಢ ಚಿಂತನೆ ಉಂಟಾದ ಕಾರಣ ಅದರ ವಿರುದ್ಧ ಮಾತನಾಡಲು ತೀರ್ಮಾನಿಸಿದ್ದೆ. ಈಗ ನೋಡಿದರೆ, ನಾನು ಆಗ ತೆಗೆದುಕೊಂಡ ನಿಲುವು ಜನಸಂಪರ್ಕದ ಸ್ಟಂಟ್ ಎಂದೂ, ರಾಜಕೀಯ ಅವಕಾಶವಾದಿಯೊಬ್ಬನ ಲೆಕ್ಕಾಚಾರದ ನಡೆಯೆಂದೂ ಈತ ಪರಿಗಣಿಸಿದ್ದಾನೆ. ಯಾರಾದರೂ ಅದನ್ನು ಬಾಯಿ ಬಿಟ್ಟು ಹೇಳುವುದಿರಲಿ, ಹಾಗೆಂದು ಯೋಚಿಸುತ್ತಾರೆನ್ನುವುದನ್ನೂ ನನಗೆ ನಂಬಲಾಗಲಿಲ್ಲ.

ಇದು ಪದೇಪದೆ ಆಗುವುದನ್ನು ನಾನು ನೋಡಿದ್ದೇನೆ. ತಿರುಚಿಸಿಕೊಂಡ, ಬಗ್ಗಿಹೋದ, ಸೋತು ಹೋದ, ಸಿನಿಕವಾಗಿ ಬಿಟ್ಟಿರುವ ಜನ ತಾವು ಒಳ್ಳೆಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಟ್ಟಿರುತ್ತಾರೆ. ಅದರ ಬದಲಿಗೆ, ತಾವು ತಮ್ಮ ಸ್ವಂತಕ್ಕೆ ಏನನ್ನು ಮಾಡಿಕೊಳ್ಳಲು ಸಾಧ್ಯವೊ ಅಷ್ಟಕ್ಕೆ ಮಾತ್ರ ಪ್ರಯತ್ನಿಸುತ್ತಿರುತ್ತಾರೆ. ಎಲ್ಲರೂ ಅದೇ ತರಹ ಮಾಡುತ್ತಾರೆ, ಪ್ರತಿಯೊಬ್ಬರೂ ಮಾಡಿಕೊಳ್ಳುವುದು ತಮ್ಮ ಸ್ವಂತಕ್ಕೆ ಮಾತ್ರ ಎಂದು ಹೇಳುತ್ತ ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುತ್ತಾರೆ. ತಮ್ಮ ಸ್ವಂತ ಉದ್ದೇಶಗಳನ್ನು ಬೇರೆಯವರಿಗೂ ಆರೋಪಿಸಿ ಬಿಡುತ್ತಾರೆ. ಒಳ್ಳೆಯ ಕೆಲಸ ಮಾಡುತ್ತಿರುವ ಜನರನ್ನು ಕಂಡಾಗ ಅವರು ಒಳ್ಳೆಯ ಕೆಲಸ ಮಾಡುತ್ತಿರುವ ಹಾಗೆ ತೋರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಅದರೆ ಅದೇ ಸಮಯದಲ್ಲಿ ತಾವು ಮಾತ್ರ ಸ್ವಾರ್ಥದ ಹಿಂದೆ ಬಿದ್ದಿರುತ್ತಾರೆ.

ತಮ್ಮದೇ ಆದ ಸ್ವಾರ್ಥದ ದುರುದ್ದೇಶಗಳನ್ನು ಇಟ್ಟುಕೊಂಡಿರುವ ಜನರು ಬೇರೆಯವರು ಅದೇ ದುರುದ್ದೇಶಗಳನ್ನಿಟ್ಟುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ಹಾಗಾಗಿ, ನೀವು ಒಳ್ಳೆಯದನ್ನು ಮಾಡಿದರೆ, ಈ ವಕ್ರಗೊಂಡ, ಬಾಗಿದ, ಸೋತು ಹೋಗಿರುವ, ಸಿನಿಕ ಜನ ನೀವು ಮಾಡಿದ ಆ ಕೆಲಸವನ್ನು ಕೀಳಾಗಿ ಕಂಡು ಅಲಕ್ಷಿಸುತ್ತಾರೆ. ಇದು ನಿಜವಾಗಲೂ ವಿಷಾದಕರ. ಆದರೆ ಅದು ಅವರ ಬಗ್ಗೆಯೆ ಹೆಚ್ಚಿಗೆ ಹೇಳುತ್ತದೆಯೆ ಹೊರತು ನಿಮ್ಮನ್ನು ಕುರಿತಲ್ಲ.

ಆಗಲೂ ಸಹ, ಯಾವುದು ಸರಿಯಾದದ್ದೊ, ಒಳ್ಳೆಯದೊ, ಸತ್ಯವಾದದ್ದೊ ಅದನ್ನೆ ನೀವು ಮಾಡಬೇಕು. ಅದರಲ್ಲಿಯೆ ನಾವು ನಮ್ಮ ಸ್ವಂತ ಅರಿವು ಹಾಗು ತೃಪ್ತಿಯನ್ನು ಕಂಡುಕೊಳ್ಳಬೇಕು.

ನೀವು ಒಳ್ಳೆಯದನ್ನು ಮಾಡಿದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.
ಯಾರು ಏನೇ ಹೇಳ್ಲಿ, ಒಳ್ಳೆಯದನ್ನೆ ಮಾಡಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply