ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.

ನಾನು ರಾಜ್ಯ ಸರ್ಕಾರದ ಇಲಾಖೆಯೊಂದರ ನಿರ್ದೇಶಕನಾಗಿ ಹಾಗೂ ರಾಜ್ಯಪಾಲರ ಮಂತ್ರಿಮಂಡಲದ ಸದಸ್ಯನಾಗಿ ಆಯ್ಕೆಯಾದಾಗ, ಎಷ್ಟೊಂದು ಜನ ಹೊಸಬರು ಇದ್ದಕ್ಕಿದ್ದಂತೆ ನನ್ನ ಸ್ನೇಹಿತರಾಗಿದ್ದನ್ನು ಕಂಡು ನನಗೆ ಅತ್ಯಾಶ್ಚರ್ಯವಾಯಿತು. ಉದ್ಯಮಿಗಳು, ಜನ ಪ್ರತಿನಿಧಿಗಳಂತಹ ಪ್ರಮುಖರೆಲ್ಲ ನಾನು ಯಾವಾಗ ಭೇಟಿಯಾಗಬೇಕಿದೆ ಅಂದರೆ ಆ ಕ್ಷಣವೆ ಲಭ್ಯವಿರುತ್ತಿದ್ದರು. ಹೇಳಬೇಕೆಂದರೆ, ಕೆಲವರಂತೂ ತಮ್ಮ ಯೋಚನೆ ಮತ್ತು ಯೋಜನೆಗಳಿಗೆ ನನ್ನ ಬೆಂಬಲವನ್ನು ಬಯಸಿ, ತಾವೆ ಖುದ್ದಾಗಿ ಬಂದು ನನ್ನನ್ನು ಕಾಣಲು ಬಯಸುತ್ತಿದ್ದರು. ಸಭೆ-ಸಮಾವೇಶಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ನಾನು ಭಾಷಣ ಮಾಡಲು ಬರಬೇಕೆಂದು ನೂರಾರು ಆಹ್ವಾನಗಳು ಬರುತ್ತಿದ್ದವು. ಅನೇಕ ಸಭೆಗಳಲ್ಲಿ ಸಭೆಗೆ ನಾನೆ ಮುಖ್ಯಅತಿಥಿ ಆಗಿರುತ್ತಿದ್ದೆ. ವರದಿಗಾರರು ತಪ್ಪದೆ ನಿಯಮಿತವಾಗಿ ಕರೆ ಮಾಡಿ ಸಂದರ್ಶನ, ಅಭಿಪ್ರಾಯ ಕೇಳುತ್ತ್ತಿದ್ದರು. ದಿನಪತ್ರಿಕೆಗಳಲ್ಲಿ ಹದಿನೈದು ದಿನಗಳಿಗೆ ಒಮ್ಮೆಯಾದರೂ ಸುದ್ದಿಯಲ್ಲಿರುತ್ತಿದ್ದೆ. ತಿಂಗಳಿಗೆ ಒಂದು ಸಲವಾದರೂ ರೇಡಿಯೋ ಅಥವ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ಅನೇಕ ಜನ ಹೊಸ ಸ್ನೇಹಿತರು ಹುಟ್ಟಿಕೊಂಡು ಬಿಟ್ಟಿದ್ದರು.

ಅದರ ಜೊತೆಗೇ, ಅನೇಕ ಹೊಸ ಶತ್ರುಗಳೂ ಹುಟ್ಟಿಕೊಂಡಿದ್ದರು. ವಾಸ್ತವದಲ್ಲಿ, ಅವರೇನೂ ನನಗೆ ಶತ್ರುಗಳಾಗಿರಲಿಲ್ಲ. ಆದರೆ ಅವರು ಮಾತ್ರ ನನ್ನನ್ನು ತಮ್ಮ ಶತ್ರುವೆಂದು ತಿಳಿದಿದ್ದರು. ಇದನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಕಷ್ಟವಾಗುತ್ತಿತ್ತು. ಯಾಕೆಂದರೆ, ನಾನು ಅವರ ಮೇಲೆ ಎಂದೂ ಯಾವುದೇ ರೀತಿಯಲ್ಲಿ ಕೇಡು ಅಥವ ದಾಳಿ ಮಾಡಿರಲಿಲ್ಲ. ಇನ್ನೂ ಹೇಳಬೇಕೆಂದರೆ, ಅವರಲ್ಲಿ ಬಹಳಷ್ಟು ಜನ ನನಗೆ ಈ ಮುಂಚೆ ಗೊತ್ತೇ ಇರಲಿಲ್ಲ. ನನ್ನ ಮೇಲೆ ದಾಳಿ ಮಾಡುವುದರಿಂದ ರಾಜ್ಯಪಾಲರ ಮೇಲೆ, ಇಲ್ಲವೆ ನನ್ನ ಪಕ್ಷದ ಮೇಲೆ, ಅಥವ ಸರ್ಕಾರದ ಮೇಲೆ ದಾಳಿ ಮಾಡಿದಂತಾಗುತ್ತದೆ ಎಂದುಕೊಂಡು ನನ್ನ ಮೇಲೆ ದಾಳಿ ಮಾಡುತ್ತಿದ್ದರು. ನಾನು ಯಾವತ್ತೂ ಹೇಳಿರದೇ ಇರುವ ಮಾತುಗಳಿಗಾಗಿ, ಮಾಡದೇ ಇರುವ ಕೆಲಸಗಳಿಗಾಗಿ, ಹೀಗೆ ಹೇಳಿದ್ದಾನೆ, ಹಾಗೆ ಮಾಡಿದ್ದಾನೆ ಎಂದು ಸುಳ್ಳುಸುಳ್ಳೆ ದೋಷಾರೋಪಣೆ ಮಾಡುತ್ತಿದ್ದರು.

ಮೇಲ್ನೋಟಕ್ಕೆ ಸ್ನೇಹಿತರು ಎಂದು ತೋರಿಸಿಕೊಳ್ಳುತ್ತಿದ್ದ, ಅದರೆ ಒಳಗೊಳಗೆ ಸದ್ದಿಲ್ಲದೆ ನನ್ನ ಉಚ್ಚಾಟನೆಗೆ ಪ್ರಯತ್ನಿಸುತ್ತಿದ್ದ ಕೆಲವರು ನನ್ನ ಇಲಾಖೆಯ ಒಳಗೇ ಇದ್ದರು. ನಾನು ಬಯಸುತ್ತಿದ್ದ ದಿಕ್ಕಿನಲ್ಲಿ ಇಲಾಖೆ ಹೋಗುವುದು ಅವರಿಗೆ ಬೇಕಿರಲಿಲ್ಲ. ಅದು ಮೊದಲಿನಿಂದಲೂ ಹೇಗಿತ್ತೊ ಹಾಗೆ ಇರಬೇಕೆಂದು ಅವರ ಬಯಕೆ. ಸಾಮೂಹಿಕ ಜವಾಬ್ದಾರಿ ಇರುವ ಉಸ್ತುವಾರಿ ತಂಡವನ್ನು ಕಟ್ಟಲು ನಾನು ಬಯಸಿದರೆ, ಅವರು ಮಾತ್ರ ಯಾರ ಅಧೀನವೂ ಇಲ್ಲದ ತಮ್ಮ ಸರ್ವತಂತ್ರ ಸ್ವತಂತ್ರ ಸಾಮ್ರಾಜ್ಯಗಳನ್ನು ಈಗಿನಂತೆಯೆ ಆಳಬೇಕೆಂದು ಬಯಸಿದ್ದರು. ಇಲಾಖೆಯಲ್ಲಿ ಹೊಸದಾದ ಗುರಿಗಳು, ಹೊಸ ಕಾರ್ಯವಿಧಾನ, ಹಾಗೂ ಚೌಕಟ್ಟನ್ನು ಸ್ಥಾಪಿಸಬೇಕಾದ ಕಷ್ಟತಮ ಗಳಿಗೆ ಅದು.

ರಾಜ್ಯಪಾಲರ ಅಧಿಕಾರಾವಧಿ ಮುಗಿದು, ಇಲಾಖೆಯ ಮುಖ್ಯಸ್ಥನಾಗಿ ನನ್ನ ಅವಧಿಯೂ ಮುಗಿಯುತ್ತ ಬಂತು. ಅಷ್ಟೊತ್ತಿಗೆ ನನ್ನ ಜೊತೆ ಕೆಲಸ ಮಾಡುತ್ತಿದ್ದ ಉದ್ಯಮಿಗಳ ಹಾಗೂ ಸಮುದಾಯ ನಾಯಕರೊಡನೆಯ ನನ್ನ ವೃತ್ತಿಬಾಂಧವ್ಯ ನಿಜಕ್ಕೂ ಆನಂದಿಸುವಷ್ಟು ಚೆನ್ನಾಗಿತ್ತು. ಇಲಾಖೆಯೊಳಗಿನ ಸಹೋದ್ಯೋಗಿಗಳೊಡನೆಯೂ ಒಳ್ಳೆಯ ಒಡನಾಟ ಬೆಳೆದಿತ್ತು. ಅವರೊಡನೆ ಕೆಲಸ ಮಾಡಲು ಖುಷಿಯಾಗುತ್ತಿತ್ತು. ನಾವುಗಳೆಲ್ಲ ನನ್ನ ಅಧಿಕಾರಾವಧಿಯಲ್ಲಿ ಸಾಧಿಸಿದ್ದರ ಬಗ್ಗೆ ನನಗೆ ಹೆಮ್ಮೆಯಾಗುತ್ತಿತ್ತು. ನನ್ನೊಡನೆ ಕೆಲಸ ಮಾಡುತ್ತಿದ್ದವರನ್ನು ನಾನು ಇಷ್ಟಪಡುತ್ತಿದ್ದೆ.

ಆದರೆ, ನನ್ನ ಅವಧಿ ಮುಗಿದು ನಾನು ಕಚೇರಿಯಿಂದ ಹೊರಬಿದ್ದ ಕೊನೆಯ ದಿನ ನನ್ನ ಅನೇಕ ಸಂಬಂಧಗಳು ಬದಲಾದವು. ಆಗ ವಾಣಿಜ್ಯೋದ್ಯಮದಲ್ಲಿ ಒಂದು ಅತ್ಯುತ್ತಮ ಎನ್ನಬಹುದಾದ ಕೆಲಸಕ್ಕೆ ಸೇರಿಕೊಂಡೆ. ಆದರೆ ನಾನು ಆ ಕಂಪನಿಯ ಸಿ.ಇ.ಒ. ಆಗಿರಲಿಲ್ಲ. ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಿಂತ ಕೆಲವು ಹಂತ ಕೆಳಗಿದ್ದ ಹುದ್ದೆ ಅದು. ಅದು ಬಹಳ ಒಳ್ಳೆಯ ಹುದ್ದೆ ಆಗಿದ್ದರೂ, ನಾನೀಗ ಮೊದಲಿನಂತೆ “ಪ್ರತಿಷ್ಠಿತ” ಅಲ್ಲ. ನನಗೀಗ ದೊಡ್ಡ ಸ್ಥಾನಮಾನ ಇರಲಿಲ್ಲ. ರಸ್ತೆಯಲ್ಲಿ ನಾನು ಅಡ್ಡ ಸಿಕ್ಕಿದರೆ ಈ ಮುಂಚೆ ನನ್ನೊಡನೆ ಕೆಲಸ ಮಾಡುತ್ತಿದ್ದ ಜನ ಮುಜಗರ ಅನುಭವಿಸುತ್ತಿದ್ದಂತೆ ಕಾಣುತ್ತಿತ್ತು. ಅಧಿಕಾರದ ಮೊಗಸಾಲೆಗಳಲ್ಲಿ ಅವರೀಗಲೂ ಅಧಿಕಾರ ಚಲಾಯಿಸಬಲ್ಲವರಾಗಿದ್ದರೆ, ಈಗ ನಾನೇನೂ ಆಗಿರಲಿಲ್ಲ. ನನಗೀಗ ಯಾವುದೇ ಸಭೆ-ಸಮಾವೇಶಗಳಿಗೆ ಆಹ್ವಾನಗಳು ಬರುತ್ತಿರಲಿಲ್ಲ. ನನ್ನ ಬೆಂಬಲವನ್ನು ಯಾರೂ ಕೋರುತ್ತಿರಲಿಲ್ಲ. ಸಂದರ್ಶನ ಬೇಕೆಂದು ಪತ್ರಕರ್ತರ್‍ಯಾರೂ ಕರೆ ಮಾಡುತ್ತಿರಲಿಲ್ಲ.

ಹೀಗೆ ಇದ್ದಕ್ಕಿದ್ದಂತೆ ಸ್ನೇಹಿತರು ಹಾಗೂ ವೈರಿಗಳು ಹುಟ್ಟಿಬಿಡುವುದನ್ನು ಮತ್ತು ಇದ್ದಕ್ಕಿದ್ದಂತೆ ಅವರನ್ನು ಕಳೆದುಕೊಳ್ಳುವುದನ್ನು ನಾನು ಒಂದು ಸಲಕ್ಕಿಂತ ಹೆಚ್ಚಿನ ಸಲ ಅನುಭವಿಸಿದ್ದೇನೆ. ಇದೇ ತರಹದ ಅನುಭವ ಸಾವಿರಾರು ಜನರಿಗೆ ಆಗಿರುವುದೂ ನನಗೆ ಗೊತ್ತು. ಇದರಿಂದ ನನಗೆ ಆಶ್ಚರ್ಯವಾಗಲಿ, ಭ್ರಮನಿರಸನವಾಗಲಿ ಆಗಲಿಲ್ಲ. ಅದೃಷ್ಟವಶಾತ್, ನಾನು ಇಲಾಖೆಯ ಮುಖ್ಯಸ್ಥನಾಗಿ ನೇಮಕವಾದ ಮೊದಲ ದಿನ ನನ್ನ ಮಾರ್ಗದರ್ಶಿಯೊಬ್ಬರು, “ಯಾವಾಗಲೂ ನೀನೆ ನಿರ್ದೇಶಕನಾಗಿ ಶಾಶ್ವತವಾಗಿ ಅಲ್ಲಿ ಇರುವುದಿಲ್ಲ ಎನ್ನುವುದನ್ನು ಅಲ್ಲಿರುವಷ್ಟು ದಿನ ಪ್ರತಿದಿನವೂ ಜ್ಞಾಪಕದಲ್ಲಿಟ್ಟುಕೊ,” ಎಂದು ಹೇಳಿದ್ದರು. ಜನರಿಗೆ ಕಾಣಿಸುವಂತೆ ಲೈಮ್‌ಲೈಟ್‌ನಲ್ಲಿ ಯಾವಾಗಲೂ ಇರುತ್ತೇನೆ ಎನ್ನುವುದು ಸುಳ್ಳು. ಯಾವಾಗಲೂ ಪ್ರಭಾವಿಯಾದ ಹುದ್ದೆಯಲ್ಲಿಯೆ ಇರುತ್ತೇನೆ ಎನ್ನಲಾಗದು. ಸಮಯ ಬಹಳ ಬೇಗ ಹೋಗಿ ಬಿಡುತ್ತದೆ ಎಂಬ ಅರಿವಿನಲ್ಲಿ ನಾನು ಕೆಲಸ ಮಾಡಬೇಕು. ಇದು ಮುಗಿದ ನಂತರ ಹೊಸ ಜಾಗ, ಹೊಸ ಸ್ಥಾನದಲ್ಲಿ ಕೆಲಸ ಮುಂದುವರೆಸುತ್ತಿರುತ್ತೇನೆ. ಆ ಹೊಸ ಸ್ಥಾನ ಈಗಿನದಕ್ಕಿಂತ ಕಡಿಮೆ ಅಧಿಕಾರದ, ಅಷ್ಟೇನೂ ಎದ್ದು ಕಾಣಿಸದ್ದು ಆಗಿರಬಹುದು. ಇದೊಂದು ಹಳೆಯ ನಾಣ್ನುಡಿಯಂತೆ: ನೀನು ಮೇಲಕ್ಕೆ ಹೋಗುತ್ತಿರುವಾಗ ನಿನಗೆ ಜೊತೆ ಸಿಕ್ಕಿದವರೊಡನೆ ಸೌಜನ್ಯದಿಂದ, ಅನುಕಂಪದಿಂದ ನಡೆದುಕೊ; ಯಾಕೆಂದರೆ, ನೀನು ಕೆಳಕ್ಕೆ ಬರುವಾಗ ಎದುರು ಸಿಕ್ಕುವವರು ಇದೇ ಜನ.

“ಯಶಸ್ವಿ” ಆದ ಜನ, ತಮಗೆ ಎರಡು ತರಹದ ಸ್ನೇಹಿತರು ಇರುತ್ತಾರೆ ಎನ್ನುವುದನ್ನು ತಿಳಿದುಕೊಂಡಿರುತ್ತಾರೆ. ಒಬ್ಬರು “ವೈಯಕ್ತಿಕ, ಖಾಸಾ” ಸ್ನೇಹಿತರಾದರೆ ಮತ್ತೊಬ್ಬರು “ಸ್ಥಾನಾಧಾರಿತ, ನಮಗಿರುವ ಅಧಿಕಾರ ಸ್ಥಾನದಿಂದ ಹುಟ್ಟುವ” ಸ್ನೇಹಿತರು. ನೀವು ಯಾವುದೇ ಕಷ್ಟನಷ್ಟಗಳಲ್ಲಿರಲಿ, ಮೇಲಿನ ಸ್ಥಾನದಲ್ಲಿರಲಿ ಇಲ್ಲವೆ ಕೆಳಗಿನ ಸ್ಥಾನದಲ್ಲಿರಲಿ, ಅಥವ ಯಾವುದೇ ಸ್ಥಾನದಲ್ಲಿ ಇಲ್ಲದೆ ಇರಲಿ, ನಿಮ್ಮ ಖಾಸಾ ಸ್ನೇಹಿತ ನಿಮ್ಮೊಡನೆ ಇರುತ್ತಾನೆ. ನಿಮ್ಮ ಬಗ್ಗೆ ಈ ಸ್ನೇಹಿತ ನಿಜವಾಗಲೂ ಕಾಳಜಿಯಿಂದ ಯೋಚಿಸುತ್ತಾನೆ. ನಿಮ್ಮೊಡನೆಯ ಒಡನಾಟವನ್ನು ನಿಜಕ್ಕೂ ಆನಂದಿಸುತ್ತಾನೆ.

ಅದೇ ಈ “ಸ್ಥಾನಾಧಾರಿತ” ಸ್ನೇಹಿತ ನಿಮಗಿರುವ ಪ್ರಭಾವ ಅಥವ ಅಧಿಕಾರ ಸ್ಥಾನದ ಸ್ನೇಹಿತ. ಇವನು, ಈಗ ನಿಮಗಿರುವ ಅಧಿಕಾರ ಹಿಂದೆ ಯಾರಿಗಿತ್ತೊ ಆತನ ಸ್ನೇಹಿತನೂ ಆಗಿದ್ದ, ಹಾಗು ನಿಮ್ಮ ಈಗಿನ ಸ್ಥಾನಕ್ಕೆ ಮುಂದೆ ಯಾರು ಬರುತ್ತಾರೊ ಆತನ ಸ್ನೇಹಿತನೂ ಆಗುತ್ತಾನೆ. ಇದು ನೀವು ಮಾಡುತ್ತಿರುವ ಕೆಲಸಕ್ಕೆ, ವ್ಯವಹಾರಕ್ಕೆ ಒಳ್ಳೆಯದು. ನಿಮಗಿಬ್ಬರಿಗೂ ಅನುಕೂಲವಾಗುವ ಒಂದು ಸಂಪರ್ಕಜಾಲವನ್ನು ಈ ಸ್ನೇಹ ಮುಂದುವರೆಸಿಕೊಂಡು ಹೋಗುತ್ತದೆ. ಇದರಲ್ಲಿ ಯಾವುದೇ ದೋಷವಿಲ್ಲ. ಆದರೆ ಈ ಸ್ಥಾನಾಧಾರಿತ ಸ್ನೇಹಿತರನ್ನು ಖಾಸಾ ಸ್ನೇಹಿತರೆಂದು ತಪ್ಪಾಗಿ ಭಾವಿಸಿಕೊಳ್ಳ ಬಾರದು. ಸ್ಥಾನಾಧಾರಿತ ಸ್ನೇಹಿತರು “ನಿಜವಾದ” ಸ್ನೇಹಿತರಲ್ಲ.

ಸರ್ಕಾರಿ ಮುಖ್ಯಸ್ಥರು, ಮಿಲಿಟರಿ ಜನರಲ್‌ಗಳು, ದೊಡ್ಡ ದೊಡ್ಡ ಕಂಪನಿಗಳ ಸಿ.ಇ.ಓ.ಗಳು ತಮ್ಮ ಸ್ಥಾನವನ್ನು ಬಿಟ್ಟ ಮೇಲೆ ಅಥವ ತಾವು ನಿವೃತ್ತಿಯಾದ ಮೇಲೆ ತಮ್ಮ ಈ ಸ್ಥಾನಾಧಾರಿತ ಸ್ನೇಹಿತರ ನಡವಳಿಕೆ ಬದಲಾಗುವುದನ್ನು ಕಾಣುತ್ತಾರೆ. ಇವರು ಊಟಕ್ಕೊ, ಕಾಫಿಗೊ ಕರೆದರೆ ಅವರು ಇದ್ದಕ್ಕಿದ್ದಂತೆ ಬ್ಯುಸಿ ಆಗಿ ಬಿಟ್ಟಿರುತ್ತಾರೆ. ಇವರ ಸ್ಥಾನಾಧಾರಿತ ಸ್ನೇಹಿತರು ಮೊದಲಿನಂತೆ ಈಗ ಫೋನ್ ಕರೆಗಳನ್ನು ಹಿಂದಿರುಗಿಸುವುದಿಲ್ಲ. ಇವರು ಮಾಡುವ ಜೋಕ್‌ಗಳಿಗೆ ಈಗ ನಗುವುದಿಲ್ಲ. ಇವರ ಹೊಸಹೊಸ ಐಡಿಯಾಗಳನ್ನು ಪ್ರಶಂಸಿಸುವುದಿಲ್ಲ. ಇದಕ್ಕೆ ಕಾರಣ ಬಹಳ ಸರಳ: ಇವರ ಸ್ಥಾನಾಧಾರಿತ ಸ್ನೇಹಿತರು ಈಗ ಹೊಸ ಮುಖ್ಯಸ್ಥನ ಮೇಲೆ, ಹೊಸ ಜನರಲ್ ಮೇಲೆ, ಹೊಸ ಸಿ.ಇ.ಓ. ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿರುತ್ತಾರೆ. ಅವರಿಗೆ ಈಗ ಹೊಸ ಲಂಚ್‌ಗಳಿಗೆ ಹೋಗುವುದಿರುತ್ತದೆ, ಹಿಂದಿರುಗಿಸಬೇಕಾದ ಹೊಸ ಫೋನ್ ಕರೆಗಳಿರುತ್ತವೆ, ಹೊಸ ಜೋಕ್‌ಗಳಿಗೆ ನಗಬೇಕಿರುತ್ತದೆ, ಹಾಗೂ ಪ್ರಶಂಸಿಸಲು ಹೊಸ ಐಡಿಯಾಗಳಿರುತ್ತವೆ.

ಇದರ ಜೊತೆಗೆ, ಕೆಲವು ನಿಜವಾಗಲೂ ಖೊಟ್ಟಿ, ಕಳ್ಳ ಸ್ನೇಹಿತರು ಹುಟ್ಟಿಕೊಂಡು ಬಿಟ್ಟಿರುತ್ತಾರೆ. ನಿಮ್ಮನ್ನು ಮತ್ತು ನಿಮ್ಮ ಹೊಸ ಸ್ಥಾನವನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಹೀನಾತಿ ಹೀನ ಜನ ಇವರು. ಸ್ಥಾನಾಧಾರಿತ ಸ್ನೇಹಿತರು ಕನಿಷ್ಠ ಪಕ್ಷ ನಿಮಗೆ ಸ್ಥಾನ ಇರುವ ತನಕವಾದರೂ ಒಂದು ಉತ್ತಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಆದರೆ ಈ ಖೊಟ್ಟಿ ಸ್ನೇಹಿತರು ಸ್ನೇಹಿತರಂತೆ ನಟಿಸುತ್ತ, ನಿಮ್ಮನ್ನು ಉಪಯೋಗಿಸಿಕೊಳ್ಳಲು ಒಂದು ಒಳ್ಳೆಯ ಸಮಯಕ್ಕಾಗಿ ಕಾದು, ಉಪಯೋಗಿಸಿಕೊಂಡ ತಕ್ಷಣ ಬೆನ್ನು ತಿರುಗಿಸಿ ಓಡಿ ಬಿಡುತ್ತಾರೆ.

ಇದಕ್ಕಿಂತ ಕೆಟ್ಟದ್ದೆಂದರೆ, ನೀವು ಯಶಸ್ವಿಯಾದಾಗ, ನಿಮಗೆ ನಿಜವಾದ, ಶಾಶ್ವತ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ನಿಮ್ಮ ಯಶಸ್ಸು ಬೇರೊಬ್ಬರಿಗೆ ಬೇಕಿರುತ್ತದೆ. ನೀವು ಗೆದ್ದಾಗ ಬೇರೊಬ್ಬ ಸೋತಿರುತ್ತಾನೆ. ನಿಮ್ಮ ಅದೃಷ್ಟ ಮೇಲಕ್ಕೇರುವುದು ಎಲ್ಲಿಯೊ ಯಾರಿಗೊ ಒಬ್ಬನಿಗೆ ಬೇಡವಾಗಿರುತ್ತದೆ. ಯಾಕೆಂದರೆ, ತನ್ನನ್ನು ತಾನು ನಿಮ್ಮ ಪ್ರತಿಸ್ಪರ್ಧಿ ಎಂದು ಆತ ತಿಳಿದಿರುತ್ತಾನೆ. ಯಾರೊ ಒಬ್ಬರು ಯಶಸ್ವಿಯಾದರೆ ಸಾಕು ಅದನ್ನು ಸಹಿಸಲಾಗದ ಈ ಜನ ಯಶಸ್ವಿಯಾದವನ ಮೇಲೆ ದಾಳಿ ಮಾಡಲು ಅಥವ ಹೇಗಾದರೂ ಸರಿ ಅವಮಾನಕ್ಕೆ ಗುರಿ ಮಾಡಲು ಸಮಯ ಸಂದರ್ಭ ಹುಡುಕುತ್ತಿರುತ್ತಾರೆ. ನಿಮ್ಮ ಕೆಲಸದಲ್ಲಿ ಅಥವ ನಿಮ್ಮ ಸಂಸ್ಥೆಯಲ್ಲಿ ನೀವು ಮೇಲಕ್ಕೆ ಹೋದಷ್ಟೂ ನಿಮ್ಮ ಮೇಲೆ ಗುರಿ ಇಡುವುದು ಸುಲಭವಾಗುತ್ತ ಹೋಗುತ್ತದೆ.

ಶತ್ರುಗಳನ್ನು ಸಂಭಾಳಿಸಲು ಕೆಲವು ಸರಳ ಮಾರ್ಗಗಳಿವೆ. ಮೊದಲನೆಯದಾಗಿ, ಅವರ ನಡವಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮೇಲೆ ಎರಗುತ್ತಿರುವ ಈ ಜನ ತಮ್ಮ ಸದ್ಯದ ಜೀವನದ ಬಗ್ಗೆ ಸಂತೋಷವಾಗಿಲ್ಲ. ತಮ್ಮ ಸೋಲಿನ ಸಂತಾಪದೊಡನೆ ಅವರು ಗುದ್ದಾಡುತ್ತಿದ್ದಾರೆ. ಅವರಿಗೆ ಆಶಾಭಂಗವಾಗಿದೆ ಹಾಗೂ ತಮ್ಮ ಆಶಾಭಂಗಕ್ಕೆ ನಿಮ್ಮನ್ನು ದೂರುತ್ತಿದ್ದಾರೆ. ನೀವು ಅವರು ಗುರಿ ಇಡಲು ಸುಲಭವಾಗಿ ಸಿಗುವ ಒಂದು ಸಂಕೇತ ಆಗಿರಬಹುದು. ಈ ದಾಳಿ ನಿಜವಾಗಲೂ ನಿಮ್ಮನ್ನು ಕುರಿತು ಅಲ್ಲ; ಅದು ಅವರನ್ನು ಕುರಿತೆ. ನೀವು ಇದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಇದನ್ನು ತಾಳ್ಮೆ ಮತ್ತು ಅನುಕಂಪದಿಂದ ಸ್ವೀಕರಿಸಬೇಕು.

ಎರಡನೆಯದು, ಬೇರೆಯವರು ನಿಮ್ಮನ್ನು ಶತ್ರು ಎಂದು ನೋಡುತ್ತಿರುವಾಗ, ನೀವು ಅವರನ್ನು ನಿಮ್ಮ ಶತ್ರುಗಳೆಂದು ಭಾವಿಸಬೇಕಿಲ್ಲ. ಕೆಲವರು ಯಾಕೆ ಇನ್ನೊಬ್ಬರ ಮೇಲೆ ಬೀಳುತ್ತಾರೆ ಎಂದರೆ ಅವರಿಗೆ ತಮ್ಮನ್ನು ಯಾರೂ ಲಕ್ಷಿಸುತ್ತಿಲ್ಲ ಎಂಬ ಭಾವನೆ ಇರುತ್ತದೆಯಾದ್ದರಿಂದ. ತಮ್ಮನ್ನು ಹೀಗಾದರೂ ಗಮನಿಸಲಿ ಎಂದು ಅವರು ನಿಮ್ಮ ಮೇಲೆ ಬೀಳುತ್ತಾರೆ. ಇನ್ನು ಕೆಲವರು ಯಾಕೆ ಹೀಗೆ ಮಾಡುತ್ತಾರೆ ಎಂದರೆ, ಅವರು ತಮ್ಮ ನಂಬಿಕೆಗಳ ಬಗ್ಗೆ ಬಹಳ ಗಾಢವಾದ ವಿಶ್ವಾಸ ಬೆಳೆಸಿಕೊಂಡಿರುತ್ತಾರೆ ಹಾಗೂ ನೀವು ಅದನ್ನು ಅವರ ದೃಷ್ಟಿಕೋನದಿಂದ ಗಮನಿಸುತ್ತಿಲ್ಲ ಎಂದು ಅಸಮಧಾನಗೊಂಡಿರುತ್ತಾರೆ.

ನೀವು ಮಾತ್ರ ಯಾವಾಗಲೂ ಮುಕ್ತ ಮನಸ್ಸಿನಿಂದ ಇರಿ, ನಿಮ್ಮ ಮೇಲೆ ದಾಳಿ ಮಾಡುವವರನ್ನು ಗೌರವಯುತವಾಗಿ ನಡೆಸಿಕೊಳ್ಳಿ, ಅವರು ಹೇಳುವುದನ್ನು ಕೇಳಿಸಿಕೊಳ್ಳಿ, ಹಾಗೂ ಯೋಗ್ಯವಾದ ಸಮಯದಲ್ಲಿ ಅವರಿಗೆ ಲಕ್ಷ್ಯ ಕೊಡಿ. ಅದರಿಂದ ಕೆಲವೊಂದನ್ನು ನೀವು ಕಲಿಯಲೂ ಬಹುದು. ಅದಕ್ಕಿಂತ ಹೆಚ್ಚಾಗಿ, ನೀವು ಅವರನ್ನು ವೈರಿಗಳ ತರಹ ನಡೆಸಿಕೊಳ್ಳದಿದ್ದರೆ ಮುಂದೆಂದಾದರೂ ಅವರು ನಿಮ್ಮ ಸ್ನೇಹಿತರಾಗಲು, ನಿಮ್ಮ ಪರ ಇರಲು ಅವರಿಗೆ ಸುಲಭವಾಗುತ್ತದೆ.

ಕೊನೆಯದಾಗಿ, ನೀವು “ಯಶಸ್ವಿ” ಆಗುವುದಕ್ಕಿಂತ ಮೊದಲು ನಿಮ್ಮ ಸಂತಸದ ಮತ್ತು ದು:ಖದ ಗಳಿಗೆಗಳನ್ನು ಹಂಚಿಕೊಂಡ ನಿಮ್ಮ ಮನೆಯವರೊಡನೆ ಮತ್ತು ಧೀರ್ಘಕಾಲದ ಸ್ನೇಹಿತರೊಡನೆ ಇರುವ ನಿಮ್ಮ ಸಂಬಂಧವನ್ನು ಹುಷಾರಾಗಿ ಕಾಪಾಡಿಕೊಳ್ಳಿ. ನಿಮ್ಮ ಮನೆಯವರು ನೀವು ಏನೇ ಆಗಿರಲಿ ನಿಮ್ಮನ್ನು ಪ್ರೀತಿಸುತ್ತಾರೆ. ಮತ್ತು, ನಿಮ್ಮ ಧೀರ್ಘಕಾಲದ ಸ್ನೇಹಿತರು ನಿಮಗಿರುವ ಅಧಿಕಾರ ಅಥವ ಸ್ಥಾನಕ್ಕಾಗಿ ನಿಮ್ಮ ಸ್ನೇಹಿತರಾಗಲಿಲ್ಲ. ಸ್ನೇಹ ಕೊನೆಯವರೆಗೂ ಬಾಳುವುದು ಪರಸ್ಪರರಿಗಿರುವ ಸಮಾನಾಸಾಕ್ತ ವಿಷಯಗಳಿಂದಾಗಿ.

ಶಾಲೆಯಲ್ಲಿ ತಮಗೆ ಕಲಿಸಲಾಗಿರುವ ಒಂದು ಹಾಡನ್ನು ನನ್ನ ಮಕ್ಕಳು ಹಾಡುತ್ತಿರುತ್ತಾರೆ: “ಹೊಸ ಸ್ನೇಹಿತರನ್ನು ಮಾಡಿಕೊ, ಆದರೆ ಹಳಬರನ್ನು ಬಿಡಬೇಡ. ಒಬ್ಬರು ಬೆಳ್ಳಿಯಾದರೆ, ಮತ್ತೊಬ್ಬರು ಬಂಗಾರ.” ಜೀವನ ಮುಂದುವರೆದಂತೆಲ್ಲ ಹಳೆಯ ಸ್ನೇಹಿತರು ನಿಮಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಾರೆ, ಹೆಚ್ಚು ಹೆಚ್ಚು ಅರ್ಥವಾಗುತ್ತಾರೆ. ಅವರೊಡನೆಯ ಸ್ನೇಹ ಅಗತ್ಯವಾಗುತ್ತದೆ. ಅದೇ ರೀತಿ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶವೂ ಬರುತ್ತದೆ. ಈ ಹೊಸ ಸ್ನೇಹಿತರಲ್ಲಿ ಕೆಲವರು ನಿಜವಾದ ಸ್ನೇಹಿತರಾಗುತ್ತಾರೆ; ಈ ಹೊಸ “ಬೆಳ್ಳಿ” ಒಂದು ದಿನ “ಬಂಗಾರ” ಆಗುತ್ತದೆ.

ದೂರದೃಷ್ಟಿ ಮತ್ತು ನೈಪುಣ್ಯತೆಯಿಂದ ಶ್ರಮ ಪಟ್ಟು ದುಡಿಯಿರಿ. ಅನಗತ್ಯವಾದ ಸಂಕೋಚ ಪಟ್ಟುಕೊಂಡು ಯಶಸ್ಸನ್ನು ದೂರ ತಳ್ಳಬೇಡಿ. ಯಾರಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ, ಅವರನ್ನು ತಾಳ್ಮೆ ಮತ್ತು ಅನುಕಂಪದಿಂದ ನಡೆಸಿಕೊಳ್ಳಿ. ಶತ್ರುಗಳನ್ನು ಭವಿಷ್ಯದ ಸಹಚರರನ್ನಾಗಿ, ಸ್ನೇಹಿತರನ್ನಾಗಿ ನೋಡಿ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ “ನಿಜವಾದ” ಸ್ನೇಹಿತರಿಗೆ ಯಾವಾಗಲೂ ಹತ್ತಿರವಾಗಿರಿ.

ಇದನ್ನೆಲ್ಲ ಮಾಡಿದರೆ, ಎಷ್ಟೇ ಜನ ಖೊಟ್ಟಿ ಸ್ನೇಹಿತರು, ನಿಜವಾದ ಶತ್ರುಗಳು ಬಂದು ನಿಮ್ಮ ಮನೆಯ ಬಾಗಿಲನ್ನು ಬಡಿಯುತ್ತಿದ್ದರೂ ನೀವು ನಿಮ್ಮ ಜೀವನದಲ್ಲಿ ವೈಯಕ್ತಿಕ ಅರಿವು ಮತ್ತು ಸಂತೋಷವನ್ನು ಕಾಣುತ್ತಿರುತ್ತೀರಿ.

ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ.
ಆದ್ರೂ, ಯಶಸ್ವಿಯಾಗಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply