ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.

ನಾನು ಪ್ರೈಮರಿ ಸ್ಕೂಲ್‌ನಲ್ಲಿದ್ದಾಗ ಓದಿದ್ದ ಈಜಿಪ್ಟಿನ ಒಬ್ಬ ಯುವ ಮೇಸ್ತ್ರಿಯೊಬ್ಬನ ಕತೆ ಜ್ಞಾಪಕಕ್ಕೆ ಬರುತ್ತಿದೆ. ಈಜಿಪ್ಟಿನ ರಾಜ ಫೆರೋವಿನ ಪಿರಮಿಡ್ ಒಂದಕ್ಕೆ ತಳಪಾಯ ಹಾಕುವ ಕೆಲಸದ ಉಸ್ತುವಾರಿಯನ್ನು ಆ ಯುವ ಮೇಸ್ತ್ರಿ ನೋಡಿಕೊಳ್ಳುತ್ತಿದ್ದ. ಉರಿಬಿಸಿಲಿನಲ್ಲಿ ನಿಂತು, ಕೆಲಸದಾಳುಗಳನ್ನು ಹುರಿದುಂಬಿಸುತ್ತ, ಅವರ ಕೆಲಸವನ್ನು ಸೂಕ್ಷ್ಮವಾಗಿ ನೋಡಿ ಪರಿಶೀಲಿಸುತ್ತ, ತಪ್ಪುಗಳನ್ನು ತಿದ್ದುತ್ತಿದ್ದ. ಯಾವುದಾದರೂ ಒಂದು ಕಲ್ಲು ಸರಿಯಾಗಿ ಕುಳಿತಿಲ್ಲ ಅಂದರೆ ಅದನ್ನು ಅಲ್ಲಿಗೇ ಬಿಡದೆ, ಪ್ರತಿಯೊಂದು ಕಲ್ಲನ್ನೂ ಸರಿಪಡಿಸಿ, ಎಲ್ಲವೂ ಕ್ರಮಬದ್ಧವಾಗಿ ಕೂರುವಂತೆ ಮಾಡಿಸುತ್ತಿದ್ದ.

ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಮೇಸ್ತ್ರಿ ಕೊನೆಗೂ ತಾಳಲಾರದೆ ಅವನಿಗೆ ಬುದ್ಧಿ ಹೇಳಲು ಬಂದ. “ಈ ಅಡಿಪಾಯ ಭೂಮಿಯ ಒಳಗೆ ಇರುತ್ತದೆ. ಯಾರಿಗೂ ಅದು ಕಾಣಿಸುವುದಿಲ್ಲ. ಅದಕ್ಕೆ ಇಷ್ಟು ಯೋಚನೆ ಮಾಡಬೇಡ. ಯಾರಿಗೂ ಅದು ಗೊತ್ತಾಗುವುದಿಲ್ಲ,” ಎಂದ.

“ಯಾರಿಗೆ ಗೊತ್ತಾಗದಿದ್ದರೂ ನನಗೆ ಗೊತ್ತಾಗುತ್ತದೆಯಲ್ಲ?” ಎಂದ ಆ ಯುವಮೇಸ್ತ್ರಿ, ತನ್ನ ಕೆಲಸ ಮುಂದುವರೆಸಿದ.

ಯಾವುದು ಸರಿಯಾದದ್ದೊ, ಒಳ್ಳೆಯದ್ದೊ, ಮತ್ತು ಸತ್ಯವಾದದ್ದೊ, ಅದನ್ನು ನೀವು ಮಾಡಿದಾಗ ನಿಮಗೆ ಅದು ಗೊತ್ತಿರುತ್ತದೆ ಹಾಗೂ ನಿಮಗೆ ನೆನಪಿನಲ್ಲಿರುತ್ತದೆ. ನಿಮಗೆ ಬೇಕಾದ ಎಲ್ಲಾ ರೀತಿಯ ವೈಯಕ್ತಿಕ ಅರಿವು ಮತ್ತು ಸಂತೋಷವನ್ನು ನಿಮಗದು ನೀಡುತ್ತದೆ.

ಹೌದು, ನೀವು ಮಾಡುವ ಕೆಲವೊಂದು ಒಳ್ಳೆಯ ಕೆಲಸಗಳು ಗುರುತಿಸಲ್ಪಡುತ್ತವೆ. ಆದರೆ ಹೀಗೆ ಗುರುತಿಸಲ್ಪಟ್ಟ ಒಳ್ಳೆಯ ಕೆಲಸಗಳೂ ಕೆಲವೊಮ್ಮೆ ಜನರಿಂದ ಮರೆಯಲ್ಪಡುತ್ತವೆ. ಇಲ್ಲಿ ಮುಖ್ಯವಾದದ್ದು ಏನೆಂದರೆ, ನಾವು ಮಾಡಿದ ಕೆಲಸವನ್ನು ಯಾರಾದರೂ ಜ್ಞಾಪಕವಿಟ್ಟಿದ್ದಾರೆಯೆ ಎನ್ನುವುದಲ್ಲ. ಒಬ್ಬ ಮನುಷ್ಯನಾಗಿ ನೀವು ಏನು ಎನ್ನುವುದು ಇಲ್ಲಿ ಮುಖ್ಯವಾದದ್ದು. ನೀವು ಹೇಗೆ ಬದುಕುತ್ತೀರಿ ಎನ್ನುವುದು ಮುಖ್ಯ. ನೀವು ಔದಾರ್ಯದಿಂದ, ಪ್ರಾಮಾಣಿಕತೆಯಿಂದ ಬದುಕುತ್ತಿರುವುದೆ ನಿಜವಾಗಿದ್ದರೆ, ನೀವು ಮಾಡಿರುವ ಕೆಲಸ ಬೇರೆಯವರಿಗೆ ಗೊತ್ತಿದೆಯೆ, ಅದನ್ನು ನೆನಪಿಟ್ಟಿದ್ದಾರೆಯೆ ಎನ್ನುವುದರ ಕುರಿತು ನೀವು ಯೊಚಿಸುವುದಿಲ್ಲ.

ಹಾಗಾಗಿಯೆ, ಒಂದು ಒಳ್ಳೆಯ ಕೆಲಸವನ್ನು ನೀವು ಅನಾಮಿಕರಾಗಿಯೂ ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯದನ್ನು ಮಾಡಿದ್ದೀರಾ, ಅಷ್ಟೆ ಸಾಕು. ಯಾರಿಗೊ ಒಬ್ಬರಿಗೆ ಸಹಾಯ ಮಾಡಿದ್ದೀರ ಅಥವ ನಿಮ್ಮ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದೀರ ಎನ್ನುವುದು ನಿಮಗೆ ಗೊತ್ತಾಗಿದ್ದರೆ ಅಷ್ಟೆ ಸಾಕು.

ಆದ್ದರಿಂದಲೆ, ನೀವು ಮಾಡಿರುವ ಒಳ್ಳೆಯ ಕೆಲಸದಿಂದ ನಿಮ್ಮ ಉತ್ತರಾಧಿಕಾರಿಗೆ ಹೆಸರು ಬಂದರೂ ಪರವಾಗಿಲ್ಲ. ಸಂಘಸಂಸ್ಥೆಗಳಲ್ಲಿ ಇದೆಲ್ಲ ಮಾಮೂಲಾಗಿ ಆಗುವಂತಹುದು. ಯಾರೊ ಒಬ್ಬ ಮ್ಯಾನೇಜರ್ ಇಲಾಖೆಯ ಅಥವ ಕಂಪನಿಯ ಭವಿಷ್ಯದ ಉನ್ನತಿಗೆ ಅಡಿಪಾಯ ಹಾಕಲು ಬಹಳ ಕಷ್ಟಪಟ್ಟು ದುಡಿದಿರಬಹುದು. ಆ ಅಡಿಪಾಯ ಇಲ್ಲದಿದ್ದರೆ ಭವಿಷ್ಯದ ಗೆಲುವು, ಏಳಿಗೆ ಸಾಧ್ಯವಿಲ್ಲ. ಆದರೆ ಆ ಯಶಸ್ಸು ಸಿಕ್ಕಾಗ ಆ ಮ್ಯಾನೇಜರ್ ಅಲ್ಲಿಂದ ಬೇರೆಡೆಗೆ ಹೋಗಿರಬಹುದು ಅಥವ ನಿವೃತ್ತಿಯೂ ಆಗಿ ಬಿಟ್ಟಿರಬಹುದು. ಹಾಗಾಗಿ ಆ ಯಶಸ್ಸಿನ ಕ್ರೆಡಿಟ್ ಆತನ ಉತ್ತರಾಧಿಕಾರಿಗೆ ಸಿಕ್ಕಿರುತ್ತದೆ.

ನಿಮ್ಮ ಸಂಸ್ಥೆಯ ಭವಿಷ್ಯಕ್ಕಾಗಿ ನೀವು ಭದ್ರವಾದ ಅಡಿಪಾಯ ಹಾಕಿದಾಗ, ನೀವು ಮಾಡಿರುವ ಒಳ್ಳೆಯ ಕೆಲಸ ನಿಮಗೆ ಗೊತ್ತಾಗಿರುತ್ತದೆ. ಹಾಗೆಯೆ, ನೀವು ಹಾಕಿದ ಅಡಿಪಾಯದಿಂದ ಕಾಲಾಂತರದಲ್ಲಿ ಸಂಸ್ಥೆಗೆ ಸಿಕ್ಕ ಯಶಸ್ಸನ್ನು ನೋಡಿ ಆಗ ನೀವು ಅಲ್ಲಿ ಇಲ್ಲದಿದ್ದರೂ ನಿಮಗೆ ತೃಪ್ತಿ ದೊರೆಯುತ್ತದೆ.

ಅದೇ ರೀತಿಯಲ್ಲಿ ವಸ್ತುಸ್ಥಿತಿ ಏನೆಂದರೆ, ನೀವು ಪಡೆಯುವ ಯಶಸ್ಸಿನ ಅಡಿಪಾಯಗಳನ್ನು ನಿಮ್ಮ ಹಿಂದಿನವರು ಹಾಕಿರುತ್ತಾರೆ ಎನ್ನುವುದು. ಅದು ನಿಮಗವರು ಕೊಟ್ಟಿರುವ ಕಾಣಿಕೆ. ಆ ಕಾಣಿಕೆಯನ್ನು ಹಿಂದಿರುಗಿಸುವ ದಾರಿ ಏನೆಂದರೆ ಅದನ್ನು ಮುಂದಿನವರಿಗೆ ಕೊಟ್ಟು ಹೋಗುವುದು. ನಿಮ್ಮ ಪಾಲಿಗೆ ಬಂದಿರುವ ಕಾರ್ಯವನ್ನು ಕಷ್ಟಪಟ್ಟು ಮಾಡಿದರೆ ನಿಮ್ಮ ನಂತರ ನಿಮ್ಮ ಸ್ಥಾನವನ್ನು ತುಂಬಲು ಬರುವವರಿಗೆ ಕೊಡಲು ನಿಮ್ಮ ಬಳಿ ಆ ಕಾಣಿಕೆ ಇರುತ್ತದೆ.

ನಮ್ಮ ದೈನಂದಿನ ಜೀವನದಲ್ಲಿ ನಾವು ಪರಸ್ಪರರಿಗೆ ಮಾಡುವ ಅನೇಕ ಒಳ್ಳೆಯ ಕೆಲಸಗಳಲ್ಲಿ ಒಂದು ಮುಗುಳ್ನಗು ಹುಟ್ಟಿಸುವಂತಹ, ಸ್ಫೂರ್ತಿ ತುಂಬುವಂತಹ ಸಣ್ಣಪುಟ್ಟ ಕೆಲಸಗಳೆ ಹೆಚ್ಚಿನವು. ಕೆಲವೊಮ್ಮೆ, ನಾವು ಬೇರೆಯವರೆಡೆಗೆ ತೋರಿಸುವ ಕನಿಷ್ಠ ಸೌಜನ್ಯವೆ ನಾವು ಮಾಡಬಹುದಾದ ಒಳ್ಳೆಯ ಕೆಲಸ.

ನಾನಿರುವ ಹವಾಯಿ ದ್ವೀಪ ರಾಜ್ಯದ ಹೊನಲುಲು ನಗರದಲ್ಲಿ ರಾಬ್ಬಿ ಆಲ್ಮ್ ಎನ್ನುವವರೊಬ್ಬರು ಒಬ್ಬ ಯಶಸ್ವಿ ಲಾಯರ್, ಸರ್ಕಾರಿ ಅಧಿಕಾರಿ ಹಾಗೂ ಬ್ಯಾಂಕರ್ ಆಗಿದ್ದರು. ನಮ್ಮ ಸಮುದಾಯದಲ್ಲಿ ನಮ್ಮೆಲ್ಲರ ಜೀವನವನ್ನು ಈಗಿನದಕ್ಕಿಂತ ಹೆಚ್ಚು ನಾಗರೀಕವಾಗಿಯೂ, ಅರ್ಥಪೂರ್ಣವಾಗಿಯೂ ಮಾಡುವುದು ಹೇಗೆ ಎಂದು ಆಲೋಚಿಸಲು ಒಮ್ಮೆ ತಮ್ಮ ಕೆಲವು ಸ್ನೇಹಿತರನ್ನು ಒಂದೆಡೆ ಸೇರಿಸಿದ್ದರು. ಅವರೆಲ್ಲ ಕೂಡಿ “ಅಲೋಹವನ್ನು ಜೀವಿಸುವುದು” ಎಂಬ ಕಾರ್ಯಕ್ರಮವನ್ನು ರೂಪಿಸಿದರು. ಹವಾಯಿ ಭಾಷೆಯಲ್ಲಿ “ಅಲೋಹ” ಎನ್ನುವುದಕ್ಕೆ ಕುಶಲಸಂಭಾಷಣೆಯ ಹಲೊ ಎನ್ನುವುದರಿಂದ ಹಿಡಿದು ಬೈಬೈ ಎನ್ನುವ ತನಕ ಅನೇಕ ಅರ್ಥಗಳಿವೆ. ಆದರೆ ಅವರು ಯೋಚಿಸುತ್ತಿದ್ದ ಅಲೋಹದ ಅರ್ಥ ಏನೆಂದರೆ, ಪ್ರೀತಿ, ವಿಶ್ವಾಸ, ಕಾಳಜಿ, ಮತ್ತು ಸೌಜನ್ಯ. ಅಲೋಹವನ್ನು ಜೀವಿಸಲು ಅನೇಕ ವಿಧಾನಗಳಿದ್ದರೂ ಅವರು ರೂಪಿಸಿದ ಒಂದು ವಿಧಾನ ಏನೆಂದರೆ, ನಮ್ಮ ದೈನಂದಿನ ಜೀವನದಲ್ಲಿ ಸೌಜನ್ಯದಿಂದ, ಸಂಭಾವಿತನದಿಂದ, ನಾಗರೀಕವಾಗಿ ಜೀವಿಸುವುದು ಮತ್ತು ಅದರ ಜೊತೆಜೊತೆಗೆ ನಮ್ಮ ಜೀವನವನ್ನು ಸುಮಧುರಗೊಳಿಸುವ ಸಣ್ಣಪುಟ್ಟ ಕೆಲಸಗಳನ್ನೂ ಮಾಡುವುದು. ಅದಕ್ಕೆ ಅವರು ಕೊಟ್ಟ ಕೆಲವು ಉದಾಹರಣೆಗಳು ಇಂತಿವೆ:

  • -ಹಿರಿಯರನ್ನು ಮತ್ತು ಮಕ್ಕಳನ್ನು ಗೌರವಿಸಿ.
  • -ನೀವು ಇರುವ ಸ್ಥಳ ನೀವು ಬಂದಾಗ ಹೇಗಿತ್ತೊ ನೀವು ಬಿಡುವಾಗ ಅದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಿಟ್ಟು ಹೋಗಿ.
  • -ಯಾರಾದರೂ ಬರುತ್ತಿರುವಾಗ ಅವರಿಗಾಗಿ ಬಾಗಿಲನ್ನು ತೆರೆದಿಟ್ಟುಕೊಂಡಿರಿ.
  • -ಯಾರಾದರೂ ಬರುತ್ತಿರುವಾಗ ಲಿಫ್ಟ್ ಅನ್ನು ನಿಲ್ಲಿಸಿಟ್ಟುಕೊಳ್ಳಿ.
  • -ಯಾವ ಗಿಡವಾದರೂ ಸರಿ, ಏನನ್ನಾದರೂ ಸರಿ, ನೆಡಿ.
  • -ಸೌಜನ್ಯದಿಂದ ನಿಮ್ಮ ವಾಹನವನ್ನು ಓಡಿಸಿ. ಬೇರೆಯವರು ನಿಮ್ಮ ರಸ್ತೆಗೆ ಕೂಡಿಕೊಳ್ಳುತ್ತಿದ್ದರೆ ಅವರನ್ನು ನಿಮ್ಮ ರಸ್ತೆಯ ಒಳಗೆ ಬಿಟ್ಟುಕೊಳ್ಳಿ.
  • -ಅನ್ಯ ಸಂಸ್ಕೃತಿಯವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ.
  • -ಶಾಪಿಂಗ್ ಮಾಲ್‌ನಲ್ಲಿ ಸಾಮಾನು ಇಟ್ಟುಕೊಳ್ಳುವ ಕಾರ್ಟ್ ಅನ್ನು ಸರಿಯಾದ ಸ್ಥಾನಕ್ಕೆ ಹಿಂದಿರುಗಿಸಿ.
  • -ಮನೆಯಿಂದ ಹೊರ ಹೋಗಿ ಪ್ರಕೃತಿಯನ್ನು ಆಸ್ವಾದಿಸಿ.
  • -ರಸ್ತೆಯಲ್ಲಿನ ಕಸ-ಗಲೀಜನ್ನು ತೆಗೆದು ಕಸದ ಬುಟ್ಟಿಗೆ ಹಾಕಿ.
  • -ನಿಮ್ಮ ನೆರೆಹೊರೆಯವರೊಡನೆ ಹಂಚಿಕೊಳ್ಳಿ.
  • -ಮುಗುಳ್ನಗುಗಳನ್ನು ಸೃಷ್ಟಿಸಿ.

ಎಲ್ಲರ ಜೀವನವನ್ನೂ ಈಗ ಇರುವುದಕ್ಕಿಂತ ಚೆನ್ನಾಗಿ ಮಾಡಲು ನೀವು ರಾಜಕಾರಣಿಯೊ, ಕಂಪನಿಯ ಮುಖ್ಯಸ್ಥನೊ, ಅಥವ ಬಹಳ ಹೆಸರುವಾಸಿಯಾದ ವೈದ್ಯನೊ ಆಗಿರಲೇಬೇಕಿಲ್ಲ ಎನ್ನುತ್ತಾರೆ “ಅಲೋಹವನ್ನು ಜೀವಿಸು” ಗುಂಪಿನವರು. ಕೆಲವೊಮ್ಮೆ ಅತಿ ಸಣ್ಣ ಕೆಲಸ ಬಹಳ ದೊಡ್ಡ ಪರಿಣಾಮವನ್ನು ಬೀರಿರುತ್ತದೆ.

ಹಾಗಾಗಿ, ಅಂಗಡಿಯವನ ಜೊತೆ ಮುಗುಳ್ನಕ್ಕು ಮಾತನಾಡಲು ಸಮಯ ಮಾಡಿಕೊಳ್ಳಿ; ನಿಮ್ಮ ಕಟ್ಟಡಕ್ಕೆ ತಮ್ಮ ಸಾಮಾನುಗಳನ್ನು ಹೊತ್ತು ತರುತ್ತಿರುವವರಿಗೆ ಕೈ ನೀಡಿ; ಸಮುದಾಯದ ಕಾರ್ಯಕ್ರಮವಾದ ನಂತರ ಕುರ್ಚಿಗಳನ್ನು ಎತ್ತಿಡುವವರಲ್ಲಿ ಮೊದಲಿಗರಾಗಿ. ಅದನ್ನು ಯಾರೂ ಗಮನಿಸದೆ ಇರಬಹುದು; ಗಮನಿಸಿದ್ದವರು ಅದನ್ನು ನೆನಪಿಟ್ಟುಕೊಳ್ಳದೆ ಹೋಗಬಹುದು. ಆದರೆ ಹನಿಹನಿಗೂಡಿದರೆ ಹಳ್ಳ ಎನ್ನುವಂತೆ ಈ ತರಹದ ಸಣ್ಣಪುಟ್ಟ ಕೆಲಸಗಳ ಮೂಲಕ ನೀವು ಅವರ ಜೀವನವನ್ನು ಸಂತೋಷಗೊಳಿಸುತ್ತಾ ಹೋಗುತ್ತೀರಿ.

ಒಳ್ಳೆಯ ಕೆಲಸವನ್ನು ಒಳ್ಳೆಯದಕ್ಕಾಗಿ ಮಾಡಿ. ಒಳ್ಳೆಯ ಕೆಲಸ ಮಾಡುವುದು ನಿಮ್ಮ ವ್ಯಕ್ತಿತ್ವದ ಭಾಗವೇ ಆಗಿರುವುದರಿಂದ ಅದನ್ನು ಮಾಡಿ. ಅದು ನೀವು ಬಾಳುತ್ತಿರುವ ನಿಮ್ಮ ಜೀವನದ ಗುಣಮಟ್ಟವನ್ನು ತೋರಿಸುತ್ತದೆ. ನಿಮ್ಮ ಜೀವನದ ಭಾಗ ಅದು. ಯಾರಿಗೆ ಗೊತ್ತಾಗಲಿ ಬಿಡಲಿ, ಯಾರು ನೆನಪಿಟ್ಟುಕೊಳ್ಳಲಿ ಬಿಡಲಿ, ನೀವು ಮಾಡುವ ಒಳ್ಳೆಯ ಕೆಲಸ ನಿಮ್ಮ ಆತ್ಮಸಂತೋಷದ, ನಿಮ್ಮ ಅರಿವಿನ ಮೂಲವಾಗುತ್ತದೆ.

ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.
ಆದ್ರೂ, ಒಳ್ಳೆಯದನ್ನು ಮಾಡಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply