ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.

ಅದು ಅರವತ್ತರ ದಶಕ. ಅಮೆರಿಕದ ಮಧ್ಯಭಾಗದ ರಾಜ್ಯವೊಂದರ ವಿಶ್ವವಿದ್ಯಾಲಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಅಧ್ಯಾಪಕ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅವುಗಳಲ್ಲಿನ ಒಂದು ಗುಂಪಿಗೆ ನಾನು ಮಾರ್ಗದರ್ಶಕ. ನನ್ನಷ್ಟು ಚಿಕ್ಕ ವಯಸ್ಸಿನವನನ್ನು ಆ ವಿಶ್ವವಿದ್ಯಾಲಯದವರು ಅಲ್ಲಿಯ ತನಕ ನೇಮಿಸಿಕೊಂಡೇ ಇರಲಿಲ್ಲ. ಬಹುಶ: ನನ್ನ ವಯಸ್ಸಿನಿಂದಾಗಿಯೆ ಇರಬೇಕು, ಒಂದು ಸಾಯಂಕಾಲದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಶಿಬಿರದ ನಿರ್ದೇಶಕರು ನನಗೆ ಹೇಳಿದ್ದರು.

ನನ್ನ ಭಾಷಣದ ದಿನ ಹತ್ತಿರವಾಗುತ್ತಿದ್ದಂತೆ ಆ ನಿರ್ದೇಶಕರಿಗೆ ಆತಂಕ ಶುರುವಾಯಿತು. ಒಂದು ದಿನ ನನ್ನ ಹತ್ತಿರ ಹಾಗೆಯೆ ಲೋಕಾಭಿರಾಮವಾಗಿ ಮಾತನಾಡಲೆಂಬಂತೆ ಬಂದು, ನಾನು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ತಮಾಷೆಯಾಗಿ ಕೇಳಿದರು. ನಾನು ಏನು ಮಾತನಾಡಿಬಿಡುತ್ತೇನೊ ಎಂಬ ಭಯ ಇದ್ದದ್ದರಿಂದ, ಏನು ಮಾತನಾಡಲಿದ್ದೇನೆ ಎಂದು ತಿಳಿದುಕೊಳ್ಳುವ ಕುತೂಹಲ ಅವರಿಗೆ. ನನ್ನ ಭಾಷಣದ ವಿಷಯವನ್ನು ಕುರಿತು ನಾನು ಇನ್ನೂ ಆಲೋಚಿಸುತ್ತಿದ್ದೆ. ಅದನ್ನೆ ಅವರಿಗೆ ಪ್ರಾಮಾಣಿಕವಾಗಿ ಹೇಳಿದೆ. ಅದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದಂತೆ ಕಾಣಿಸಿತು.

ಕೊನೆಗೂ ತಮ್ಮ ಆತಂಕವನ್ನು ತಡೆಹಿಡಿದುಕೊಳ್ಳಲಾಗದೆ ನೇರವಾಗಿ ವಿಷಯಕ್ಕೇ ಬಂದು ಬಿಟ್ಟರು. ನಾನು ಏನೇನೊ ಮಾತನಾಡಿ ಹುಡುಗರನ್ನು ಉದ್ರೇಕಗೊಳಿಸುವುದು ಅವರಿಗೆ ಬೇಕಾಗಿರಲಿಲ್ಲ. ನಾನು “ಚಳವಳಿಗಾರ”ನಂತೆ ಮಾತನಾಡುವುದಾಗಲಿ, “ವ್ಯವಸ್ಥೆ”ಯ ವಿರುದ್ಧ ಮಾತನಾಡುವುದಾಗಲಿ ಅವರಿಗೆ ಬೇಕಿರಲಿಲ್ಲ. ನಾನು ಹಾಗೆ ಮಾಡಿದ್ದಾದರೆ ಶಿಬಿರದಲ್ಲಿನ ನನ್ನ ಭವಿಷ್ಯಕ್ಕೆ ಒಳ್ಳೆಯದಲ್ಲ; ನಾನು ಯಾರನ್ನೂ ಕೆಣಕದೆ, “ನಯವಾದ, ಎಲ್ಲಾ ಚೆನ್ನ” ಎನ್ನುವಂತಹ ಒಂದೆರಡು ಒಳ್ಳೆಯ ಮಾತನ್ನಷ್ಟೆ ಆಡಬೇಕು ಎಂದು ಅವರು ಬಯಸಿದರು. ನಾನು ಹಾಗೆ ಮಾಡುತ್ತೇನೆ ಎಂದುಕೊಂಡೆ ಅವರು ಈ ಮೊದಲು ನನಗೆ ಭಾಷಣ ಮಾಡಲು ಹೇಳಿದ್ದಿದ್ದು.

ಆ ಸಂಜೆ ಬಂತು. ಆಡಿಟೋರಿಯಮ್‌ನ ವೇದಿಕೆಯ ಮೇಲೆ ಹೋಗಿ, ಮಾತನಾಡಲು ಸಿದ್ಧನಾಗಿ ಪೋಡಿಯಮ್‌ನ ಹಿಂದೆ ನಿಂತೆ. ಮುಂದೆ ನೂರಾರು ಜನ ವಿದ್ಯಾರ್ಥಿಗಳು ಕುಳಿತಿದ್ದರು. ಅವರಲ್ಲಿ ಒಂದಷ್ಟು ಜನ ಮಾತನಾಡುತ್ತಿದ್ದರು; ಒಂದಷ್ಟು ಜನ ತಮ್ಮ ಕುರ್ಚಿಗಳಲ್ಲಿ ಇಳಿಜಾರಿಕೊಂಡು ಕುಳಿತಿದ್ದರು; ಮತ್ತೊಂದಷ್ಟು ವಿದ್ಯಾರ್ಥಿಗಳು ಕೂರಲಾಗದ ರೀತಿ ಚಡಪಡಿಸುತ್ತಿದ್ದರು. ಆಡಿಟೋರಿಯಮ್‌ನ ಹಿಂಭಾಗದ ಎರಡು ಸಾಲುಗಳಲ್ಲಿ ಮಾನವ ಗೋಡೆಯ ರೀತಿ ದೊಡ್ಡವರು, ಅಂದರೆ ಅಧ್ಯಾಪಕರು ಮತ್ತು ವಿದ್ಯಾರ್ಥಿ ಮಾರ್ಗದರ್ಶಕರು ಕುಳಿತಿದ್ದರು.

ನಾನು ನಿರ್ಧಾರ ಮಾಡಿಯಾಗಿತ್ತು. ಅಧ್ಯಾಪಕರನ್ನಾಗಲಿ, ವಿದ್ಯಾರ್ಥಿ ಮಾರ್ಗದರ್ಶಕರನ್ನಾಗಲಿ, ಅಥವ “ವ್ಯವಸ್ಥೆ”ಯ ಮೇಲಾಗಲಿ ಆಕ್ರಮಣ ಮಾಡಬಾರದು ಎಂದು ನಾನು ನಿರ್ಧರಿಸಿದ್ದೆ. ಅದಕ್ಕಿಂತಲೂ ಮುಖ್ಯವಾದದ್ದನ್ನು ಮಾಡಬೇಕೆಂದು ತೀರ್ಮಾನಿಸಿದ್ದೆ. ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಥಿ ಕೌನ್ಸಿಲ್‌ಗಳ ಬಗ್ಗೆ ನನ್ನ ಅಭಿಪ್ರಾಯ ಏನು ಎಂದು ಹೇಳಲು, ಅವರಿಗೆ ಸವಾಲು ಹಾಕಲು ತೀರ್ಮಾನಿಸಿದ್ದೆ. ಅವರೊಂದಿಗೆ ಪ್ರಾಮಾಣಿಕವಾಗಿ, ಮುಕ್ತವಾಗಿ ಇರಲು ನಿರ್ಧರಿಸಿದ್ದೆ.

ಭಾಷಣವನ್ನು ಆರಂಭಿಸಿ, ಇಲ್ಲಿರುವ ನಿಮ್ಮಲ್ಲಿನ ಬಹುಪಾಲು ವಿದ್ಯಾರ್ಥಿ ಕೌನ್ಸಿಲ್‌ಗಳು ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುವ, ಸ್ವಕೇಂದ್ರಿತ, ಸ್ವಹಿತಾಸಕ್ತಿಯನ್ನಷ್ಟೆ ಬಯಸುವ, ಕಾಲೇಜು ಪ್ರವೇಶಕ್ಕೆ ತಮ್ಮ ಪರಿಚಯ ಪತ್ರ ತಯಾರಿಸುವುದರಲ್ಲಷ್ಟೆ ಮಗ್ನರಾಗಿರುವವರ ಗುಂಪು ಎಂದು ನೇರವಾಗಿ ಹೇಳಿದೆ. ನೀವು ಸುಲಭವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರೆಂದೂ, ಯಾರಿಗೆ ಬೇಕಾಗಲಿ ಬಿಡಲಿ ಪ್ರತಿ ವರ್ಷವೂ ಒಂದೇ ತರಹದ ಚಟುವಟಿಕೆಗಳನ್ನು ಮಾಡುತ್ತಿದ್ದೀರೆಂದು ಹೇಳಿದೆ. ಅವರಲ್ಲಿನ ಬಹುಪಾಲು ಜನ ತಮ್ಮನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳ ಬಗ್ಗೆ, ತಮ್ಮ ವಿದ್ಯಾರ್ಥಿ ಸಂಘದ ಬಗ್ಗೆ ಯಾವುದೆ ಕಾಳಜಿ ಹೊಂದಿಲ್ಲವೆಂದೆ. ನೀವು ನಿಮ್ಮ ಸಹವಿದ್ಯಾರ್ಥಿಗಳು ಹೇಳುವುದನ್ನು ಕೇಳಿಸಿಕೊಳ್ಳಬೇಕೆಂದೂ, ಅವರೊಡನೆ ಹೆಚ್ಚಿಗೆ ಬೆರೆಯಬೇಕೆಂದೂ, ಹಾಗೂ ಕೆಲವೊಬ್ಬರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಒಳ್ಳೆಯದಾಗುವಂತೆ ವ್ಯವಸ್ಥೆಯ ಮುಖಾಂತರವೆ ಪ್ರಯತ್ನಿಸಬೇಕೆಂದೂ ಹೇಳಿದೆ. ನಾನು ಅವರಿಗೆ ಹೇಳಿದ ಮಾತಿನ ಅರ್ಥ ಏನಿತ್ತೆಂದರೆ, ನೀವೆಲ್ಲರೂ ವಂಚಕರು, ಆದರೆ ನೀವು ಹಾಗೆ ಆಗುವ ಅವಶ್ಯಕತೆ ಇಲ್ಲ, ಎಂದಾಗಿತ್ತು. ಅವರು ತಮ್ಮ ಶಾಲೆಯಲ್ಲಿನ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಗಣನೀಯವಾದ ಬದಲಾವಣೆಗಳನ್ನು ತರಬಹುದೆಂದು ಹೇಳಿದೆ.

ಅರ್ಧ ಗಂಟೆಯ ನನ್ನ ಭಾಷಣವನ್ನು ಮುಗಿಸಿದಾಗ, ಅಲ್ಲಿ ಮೌನ ನೆಲೆಸಿತ್ತು. ಕೊನೆಯಲ್ಲಿ ಧನ್ಯವಾದ ಹೇಳಿ ನನ್ನ ಟಿಪ್ಪಣಿಗಳನ್ನು ಕೂಡಿಸಿಕೊಳ್ಳಲು ಆರಂಭಿಸಿದೆ. ಆಗ ಚಪ್ಪಾಳೆ ಬೀಳಲು ಆರಂಭವಾಗಿ, ಅದರ ಸದ್ದು ಕ್ಷಣಕ್ಷಣಕ್ಕೂ ಬೆಳೆಯಿತು. “ಎಲ್ಲಾ ಚೆನ್ನಾಗಿದೆ, ಎಲ್ಲಾ ಸರಿ” ಎನ್ನುವಂತಹ ಅತಿವಿನಯದ ತೋರಿಕೆಯ ವಾತಾವರಣವನ್ನು ಭೇಧಿಸುವುದರಲ್ಲಿ ನಾನು ಸಫಲನಾಗಿದ್ದೆ. ವಿದ್ಯಾರ್ಥಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಕೇವಲ ಪಾರ್ಟಿಗಳನ್ನು ಮಾಡಿಕೊಳ್ಳುವ ಬದಲು ಅದಕ್ಕಿಂತ ಮುಖ್ಯವಾದದ್ದನ್ನು ಮಾಡಲು ಹೇಳಿದ್ದೆ. ಅವರಿಗೆ ವಿಷಯ ಮುಟ್ಟಿತ್ತು.

ವಿದ್ಯಾರ್ಥಿಗಳು ಎದ್ದು, ಮುನ್ನುಗ್ಗುತ್ತ ವೇದಿಕೆಗೇ ಬಂದುಬಿಟ್ಟರು. ನನ್ನನ್ನು ತಮ್ಮ ಭುಜದ ಮೇಲೆ ಹೊತ್ತು ಹೊರಕ್ಕೆ ಕೊಂಡೊಯ್ದರು. ಎಲ್ಲೆಲ್ಲೂ ಹರ್ಷ, ಆನಂದ ಉಕ್ಕುತ್ತಿತ್ತು. ಆಚೆ ನಿಂತು ನಾವೆಲ್ಲ ಬಹಳ ಹೊತ್ತು ಮಾತನಾಡಿದೆವು. ನಮ್ಮ ಆ ಮಾತುಕತೆಗಳೆಲ್ಲ ಪ್ರಾಮಾಣಿಕವಾಗಿದ್ದವು. ನಾವು ಈಗ ಮಾಡುತ್ತಿರುವುದಕ್ಕಿಂತ ಇನ್ನೂ ಹೆಚ್ಚಿನ ಕೆಲಸ ಮಾಡಬಹುದು; ನಮ್ಮಂತವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು; ನಮ್ಮ ಶಾಲೆಯ ವಾರ್ಷಿಕ ದಿನಾಚರಣೆಯ ದಿನ ಯಾವ ಹಾಡುಗಳನ್ನು ಹಾಡಿಸಬೇಕು ಎಂದುಕೊಳ್ಳುವುದಕ್ಕಿಂತ ಇನ್ನೂ ಮುಖ್ಯವಾದದ್ದನ್ನು ನಾವು ಮಾಡಬಹುದು; ಎಂದೆಲ್ಲ ಆ ಮಾತುಕತೆ ಹರಿಯಿತು.

ಹಾಗೆಯೆ ಬಹಳ ಹೊತ್ತು ಹೊರಗೆ ನಿಂತು ಮಾತನಾಡಿದ ಮೇಲೆ, ಅಲ್ಲಿದ್ದ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ನನ್ನ ಕೈಕುಲುಕಿ ತಮ್ಮ ರೂಮುಗಳತ್ತ ಹೋಗಲಾರಂಭಿಸಿದರು. ಅವರೆಲ್ಲರೂ ಹೋದ ನಂತರ ನಾನು ನನ್ನ ರೂಮಿನ ಕಡೆ ನಡೆಯಲಾರಂಭಿಸಿದೆ. ದಾರಿಯಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಲ್ಕು ಜನ ನನ್ನನ್ನು ಸುತ್ತುವರಿದು ಬಿಟ್ಟರು. ಅವರಲ್ಲಿ ಶಿಬಿರದ ನಿರ್ದೇಶಕರೂ ಒಬ್ಬರಾಗಿದ್ದರು. ನನ್ನನ್ನು ಈ ಕೂಡಲೆ ಕೆಲಸದಿಂದ ತೆಗೆದು ಹಾಕಿದ್ದೇನೆಂತಲೂ, ತಕ್ಷಣವೆ ಅಲ್ಲಿಂದ ಜಾಗ ಖಾಲಿ ಮಾಡಿಕೊಂಡು ಹೋಗುವಂತೆಯೂ ನನಗೆ ಅವರು ಹೇಳಿದರು.

ಆ ನಾಲ್ಕೂ ಜನ ಬೆಂಗಾವಲಾಗಿ ನನ್ನ ಜೊತೆಯೆ ರೂಮಿಗೆ ಬಂದರು. ಒಳಗೆ ಬಂದಿದ್ದೆ ಬಾಗಿಲಿನ ಚಿಲಕ ಹಾಕಿದರು. ಕೂಡಲೆ ನನ್ನ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಳ್ಳುವಂತೆ ಆದೇಶಿಸಿದರು. ನಾನು ಒಂದು ಫೋನ್ ಕರೆ ಮಾಡಬೇಕೆಂದರೂ ಅವಕಾಶ ಕೊಡಲಿಲ್ಲ. ಯಾರಿಗಾದರೂ ಸಂದೇಶ ಬಿಡುತ್ತೇನೆ ಎಂದರೆ ಅದಕ್ಕೂ ಅವಕಾಶ ಕೊಡಲಿಲ್ಲ. ನನ್ನ ಗುಂಪಿನಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ನನ್ನ ಒಂದೆರಡು ಸ್ವಂತ ಪುಸ್ತಕಗಳನ್ನು ಕೊಟ್ಟಿದ್ದೇನೆ, ಅವನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಹೇಳಿದರೂ, ಅವರದನ್ನು ಕಿವಿಯ ಮೇಲೆಯೆ ಹಾಕಿಕೊಳ್ಳಲಿಲ್ಲ.

ನನ್ನ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡಾದ ಮೇಲೆ ನನ್ನನ್ನು ಅಲ್ಲಿಂದ ನೇರವಾಗಿ ಪಾರ್ಕಿಂಗ್ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆಗಲೆ ಸಿದ್ಧವಾಗಿ ನಿಂತಿದ್ದ ಕಾರೊಂದರ ಹಿಂಭಾಗದಲ್ಲಿ ನನ್ನನ್ನು ಕೂರಿಸಿದರು. ಬಹುಶಃ ಯಾರಾದರೂ ನೋಡುತ್ತಾರೆ ಎಂತಲೋ ಏನೊ, ಹೆಡ್‌ಲೈಟ್‌ಗಳನ್ನು ಸಹ ಹಾಕದೆ ಆ ಕಾರಿನ ಚಾಲಕ ಪಾರ್ಕಿಂಗ್ ಸ್ಥಳದಿಂದ ಹೊರಹೊರಟ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಸುಮಾರು ಇಪ್ಪತ್ತು ಮೈಲುಗಳ ದೂರ ಬಂದ ಮೇಲೆ ಅಲ್ಲೆಲ್ಲಿಯೊ ಇದ್ದ ಒಂದು ಬಸ್ ನಿಲ್ದಾಣದಲ್ಲಿ ನನ್ನನ್ನು ಇಳಿಸಿದರು. ಆ ಬಸ್‌ನಿಲ್ದಾಣದಲ್ಲಿ ಕೂರಲು ಬೆಂಚೊಂದು ಮಾತ್ರ ಇತ್ತು. ಆಗ ರಾತ್ರಿ ಒಂಬತ್ತೂವರೆ. ರಸ್ತೆಯಲ್ಲಿ ಹೋಗುತ್ತಿದ್ದ ಕಾರುಗಳ ಹೆಡ್‌ಲೈಟುಗಳಿಂದ ತೂರಿ ಬರುತ್ತಿದ್ದ ಬೆಳಕನ್ನೆ ನೋಡುತ್ತ ಕತ್ತಲಲ್ಲಿ ಒಬ್ಬನೇ ಕುಳಿತಿದ್ದೆ. ನನಗಾಗ ಹದಿನೆಂಟು ವರ್ಷ ವಯಸ್ಸು ಮತ್ತು ನಾನು ಆಗ ತಾನೆ ಏನೊ ಒಂದು ಹೊಸ ಪಾಠವನ್ನು ಕಲಿತಿದ್ದೆ.

ನಾವು ಪ್ರಾಮಾಣಿಕವಾಗಿ, ತೆರೆದ ಮನಸ್ಸಿನಿಂದ ಇರಲು ತಿರ್ಮಾನಿಸಿದ್ದೆ ಅಂದು ನನ್ನ ಮತ್ತು ಆ ವಿದ್ಯಾರ್ಥಿಗಳ ನಡುವೆ ಪರಸ್ಪರ ವಿಶ್ವಾಸ ಮೂಡುವಂತಹ ಒಂದು ಸಂಬಂಧ ಏರ್ಪಡಲು ಮುಖ್ಯ ಕಾರಣ, ಎನ್ನುವುದೆ ನಾನು ಅಂದು ಕಲಿತ ಪಾಠ. ನಾವು ತೋರಿಕೆಯ ನಟನೆಯನ್ನು ನಿಲ್ಲಿಸಿ ನೈಜವಾಗಿ ಮಾತನಾಡಲು ಆರಂಭಿಸಿದ್ದೆವು. ನಮ್ಮ ಆ ಪ್ರಾಮಾಣಿಕತೆ ಮತ್ತು ಮುಕ್ತತೆ, ತೋರಿಕೆಯ ನಟನೆಯೆ ಮುಂದುವರೆಯಬೇಕು ಎಂದು ಆಶಿಸಿದ್ದ ದೊಡ್ಡವರಲ್ಲಿ ಭಯವನ್ನುಂಟು ಮಾಡಿತು. ನಾನು ಏನು ಹೇಳಿದೆ ಅದು ನನ್ನನ್ನು ದುರ್ಬಲನನ್ನಾಗಿ ಮಾಡಿತು; ನನ್ನನ್ನು ಅಕ್ಷರಶಃ ಊರಿನಿಂದ ಓಡಿಸುವಂತೆ ಮಾಡಿತು. ಆದರೆ ನಾನು ಅದಕ್ಕೆ ವಿಷಾದ ಪಡಲಿಲ್ಲ. ನಾನು ಮತ್ತು ಆ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕ ಬೆಳೆಸಿಕೊಂಡು ಕಳೆದ ಆ ಸಣ್ಣ ಅವಧಿ ನಿಜಕ್ಕೂ ಅಭೂತಪೂರ್ವವಾಗಿತ್ತು.

ಮಹಾನ್ ವ್ಯಕ್ತಿಗಳ ಬಗ್ಗೆ ಯೋಚಿಸಿದಾಗೆಲ್ಲ ನಾನು ಅವರ ಪ್ರಾಮಾಣಿಕತೆ ಮತ್ತು ತೆರೆದಮನಸ್ಸಿನ ಬಗ್ಗೆ ಯೋಚಿಸುತ್ತೇನೆ. ಅವರ ಪ್ರಾಮಾಣಿಕತೆ ಮತ್ತು ನೇರವಂತಿಕೆಯೆ ನನಗೆ ಅವರನ್ನು ಮೆಚ್ಚಲು ಮತ್ತು ನಂಬಲು ಸುಲಭಸಾಧ್ಯವಾಗಿಸುತ್ತದೆ. ಜಾರ್ಜ್ ವಾಷಿಂಗ್‌ಟನ್ನಿನ ಪ್ರಾಮಾಣಿಕತೆಯ ಬಗ್ಗೆ ಅನೇಕ ದಂತಕತೆಗಳೆ ಇವೆ. ಹಾಗೆಯೆ ಅಬ್ರಹಾಂ ಲಿಂಕನ್‌ನನ್ನು “ಆನೆಸ್ಟ್ ಏಬ್,” ಅಂದರೆ, ಪ್ರಾಮಾಣಿಕ ಅಬ್ರಹಾಂ ಎಂದೇ ಅನ್ನುತ್ತಿದ್ದರು. ಅಮೆರಿಕದ ಇನ್ನೊಬ್ಬ ರಾಷ್ಟ್ರಾಧ್ಯಕ್ಷ ಹ್ಯಾರಿ ಟ್ರೂಮನ್‌ನಲ್ಲಿ ನಾವು ಮೆಚ್ಚುವ ಅತಿ ದೊಡ್ಡ ಗುಣವೆಂದರೆ ಇದ್ದದ್ದನ್ನು ಇದ್ದಂತೆ ಹೇಳುತ್ತಿದ್ದ ಆತನ ನೇರವಂತಿಕೆ.

ನಾವು ಪರಸ್ಪರರೊಂದಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇದ್ದಾಗ ದೃಢವಾದ ಸಂಬಂಧಗಳನ್ನು ಕಟ್ಟಬಹುದು. ಹಾಗಿದ್ದಾಗ ನಮ್ಮನಮ್ಮ ನಿಲುವುಗಳೇನು ಎನ್ನುವುದು ನಮಗೆ ಗೊತ್ತಿರುತ್ತದೆ. ಪರಸ್ಪರರ ಅವಶ್ಯಕತೆಗಳನ್ನು ಪೂರೈಸುವುದು ಹೇಗೆ ಮತ್ತು ಪರಸ್ಪರರ ಕನಸುಗಳನ್ನು ನನಸು ಮಾಡುವುದು ಹೇಗೆ ಎನ್ನುವುದೂ ನಮಗೆ ಗೊತ್ತಿರುತ್ತದೆ. ಅದಿಲ್ಲದಿದ್ದರೆ, ನಾವು ತಪ್ಪುಗಳನ್ನು ಮಾಡುತ್ತೇವೆ. ನಮಗೆ ಗೊತ್ತಿಲ್ಲದೆ ನಮ್ಮನ್ನು ನಾವೆ ಗಾಸಿ ಮಾಡಿಕೊಳ್ಳುತ್ತೇವೆ ಹಾಗು ಇತರರನ್ನೂ ಗಾಸಿ ಮಾಡುತ್ತೇವೆ.

ಕೌಟುಂಬಿಕ ಜೀವನದಲ್ಲಿ ಮತ್ತು ಹಾಗೆಯೆ ಸಂಘಸಂಸ್ಥೆಗಳ ಸೇವಾಜೀವನದಲ್ಲಿಯೂ ಅತ್ಯಂತ ಮುಖ್ಯವಾದ ವಿಷಯ ಏನೆಂದರೆ ನಂಬಿಕೆ ಮತ್ತು ವಿಶ್ವಾಸ. ನಿಮ್ಮ ಭಾವನೆಗಳನ್ನು, ನಿಮ್ಮ ಆಲೋಚನೆಗಳನ್ನು, ನಿಮ್ಮ ಕನಸುಗಳನ್ನು, ನಿಮ್ಮ ಭಯಗಳನ್ನು ಮುಚ್ಚಿಟ್ಟುಕೊಳ್ಳುವುದರ ಮೂಲಕ ನೀವು ನಂಬಿಕೆಯನ್ನು ಕಟ್ಟಲಾಗುವುದಿಲ್ಲ. ಅವೆಲ್ಲವನ್ನೂ ಹಂಚಿಕೊಳ್ಳುವುದರಿಂದ, ಪ್ರಾಮಾಣಿಕವಾಗಿ, ಮುಕ್ತವಾಗಿ ಇರುವುದರಿಂದ ನೀವು ನಂಬಿಕೆಯನ್ನು ಕಟ್ಟಿ ಬೆಳೆಸುತ್ತೀರಿ. ನಿಮ್ಮ ಸಂಬಂಧಗಳಲ್ಲಿ, ತಂಡದಲ್ಲಿ, ಸಂಸ್ಥೆಯಲ್ಲಿ, ಹಾಗೂ ಸಮುದಾಯದಲ್ಲಿ ನೀವು ಯಶಸ್ವಿಯಾಗಬೇಕಾದರೆ, ನಂಬಿಕೆಯನ್ನು ಬೆಳೆಸುವುದು ನೀವು ಮಾಡಲೇಬೇಕಾದ ಕೆಲಸ. ಅದಿಲ್ಲದೆ ನೀವು ಯಶಸ್ವಿಯಾಗಲಾರಿರಿ.

ಹೌದು, ಜಾಣ್ಮೆಯಿಂದ ಇರಬೇಕಾದದ್ದು ಬಹಳ ಮುಖ್ಯವೆ. ಕೆಲವೊಂದು ವಿಷಯಗಳನ್ನು ಹೇಳುವುದಕ್ಕೆ ಸಮಯ-ಸಂದರ್ಭ ಇರುತ್ತದೆ. ಹಾಗೆಯೆ, ಯಾವ ಸಮಯದಲ್ಲಿಯೂ ಹೇಳಲೇಬಾರದ ಕೆಲವೊಂದು ವಿಷಯಗಳೂ ಇರುತ್ತವೆ. ಅಂತರಂಗದಲ್ಲಿ ಹೇಳಿದ ಕೆಲವೊಂದು ವಿಷಯಗಳ ಗೋಪ್ಯತೆ ಉಳಿಸಿಕೊಳ್ಳುವುದು ವಿಶ್ವಾಸಪೂರ್ವಕ ಸಂಬಂಧದಲ್ಲಿ ಬಹಳ ಮುಖ್ಯವಾದ ಭಾಗ. ಕೆಲವನ್ನು ಕೇವಲ ಒಬ್ಬರಲ್ಲಿ, ಮತ್ತೆ ಕೆಲವನ್ನು ಕೇವಲ ಕೆಲವೇ ಜನರಲ್ಲಿ ಹಂಚಿಕೊಳ್ಳಲು ಮಾತ್ರ ಅವು ಯೋಗ್ಯವಾಗಿರುತ್ತವೆ. ಆದರೆ ನಿಮ್ಮ ಬಹಳಷ್ಟು ದೈನಂದಿನ ವಿಷಯಗಳಲ್ಲಿ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇರಲು ಜಾಣ್ಮೆ ಮತ್ತು ಗೋಪ್ಯತೆಗಳು ಯಾವುದೆ ಅಡ್ಡಿ ಮಾಡುವುದಿಲ್ಲ.

ಹೌದು, ಪ್ರಾಮಾಣಿಕತೆ ಮತ್ತು ಮುಕ್ತತೆ ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ ಎನ್ನುವುದೇನೊ ನಿಜ. ನೀವು ಹಾಗೆ ಮುಕ್ತವಾಗಿ ಇದ್ದಾಗ ನಿಮಗೆ ಗಾಸಿ ಮಾಡುವುದು ಹೇಗೆ, ನಿಮ್ಮ ಮೇಲೆ ಹೇಗೆ ದಾಳಿ ಮಾಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಜನರಿಗೆ ಸುಲಭವಾಗಿ ಗೊತ್ತಾಗಿ ಬಿಡುತ್ತದೆ. ನಿಮ್ಮ ರಕ್ಷಣಾವಲಯದಿಂದ ಹೊರಬಂದ ತಕ್ಷಣ ನಿಮಗೆ ರಕ್ಷಣೆ ಇಲ್ಲವಾಗಿ ಬಿಡುತ್ತದೆ. ಇದು ನಿಮ್ಮ ಅನ್ಯೋನ್ಯ ಸಂಬಂಧಗಳಲ್ಲಷ್ಟೆ ಅಲ್ಲ, ನಿಮ್ಮ ಸ್ನೇಹಿತರ ಗುಂಪುಗಳಲ್ಲಿಯೂ, ನೀವು ಕೆಲಸ ಮಾಡುವ ಸಂಸ್ಥೆಗಳ ವಿಷಯದಲ್ಲಿಯೂ ನಿಜ.

ಆದರೆ, ಇಂತಹ ದುರ್ಬಲತೆಯೂ ಒಳ್ಳೆಯದೆ. ನೀವು ದುರ್ಬಲವಾಗಿದ್ದಾಗ ಜನರೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದು ಸುಲಭವಾಗುತ್ತದೆ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಅವರಿಂದ ಕಲಿಯಲು ಸುಲಭವಾಗುತ್ತದೆ. ಅದೇ ರೀತಿ ಅವರಿಗೂ ಸಹ ನಿಮ್ಮೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಈ ದುರ್ಬಲತೆ ಹೊಸ ಸಂಬಂಧಗಳಿಗೆ, ಹೊಸ ಅವಕಾಶಗಳಿಗೆ, ಹೊಸ ದಾರಿಗಳಿಗೆ, ಹೊಸ ಬದುಕಿಗೆ, ಹಾಗೆಯೆ ಜೊತೆಯಾಗಿ ಕೂಡಿ ಕೆಲಸ ಮಾಡುವುದಕ್ಕೆ ಬಾಗಿಲು ತೆರೆಯುತ್ತದೆ.

ಸಂಘರ್ಷದಿಂದ ಕೂಡಿದ ಈ ಪ್ರಪಂಚ ನಾವು ನಮ್ಮ ರಕ್ಷಣಾವಲಯವನ್ನು ಭದ್ರಪಡಿಸಿಕೊಂಡು, ಕವಚಧಾರಿಗಳಾಗಿ ಓಡಾಡಲು ಪ್ರಲೋಭಿಸುತ್ತದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಒಂದು ನಿರ್ದಿಷ್ಟ ಅಳತೆಯಲ್ಲಿ ಹಿಡಿದಿಟ್ಟು ಕೊಳ್ಳುವುದರ ಮೂಲಕ ಕವಚ ನಿಮ್ಮನ್ನು ರಕ್ಷಿಸುತ್ತದೆ. ಆ ಕವಚ ಎಷ್ಟು ದೊಡ್ಡದಿದೆಯೊ ಅಷ್ಟು ಮಾತ್ರ ನೀವು ಬೆಳೆಯಲು ಸಾಧ್ಯ. ಇನ್ನೂ ಬೆಳೆಯಬೇಕೆಂದರೆ ನೀವು ಆ ರಕ್ಷಣಾಕವಚದಿಂದ ಹೊರ ಬರಲೇ ಬೇಕು.

ಆ ರಕ್ಷಣಾಕವಚದಿಂದ ಹೊರ ಬಂದ ತಕ್ಷಣ ಮತ್ತೆ ನೀವು ದುರ್ಬಲರಾಗಿಬಿಡುತ್ತೀರ. ಆದರೆ ಆ ಅಸುರಕ್ಷಿತೆಯ ಜೊತೆಜೊತೆಗೆ ಬೆಳೆಯುವ ಸ್ವಾತಂತ್ರ್ಯವೂ ಬರುತ್ತದೆ. ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬೆಳೆಯುತ್ತ ಹೋದಂತೆ, ನಿಮಗೆ ಆ ರಕ್ಷಣಾಕವಚದ ಅವಶ್ಯಕತೆ ಇಲ್ಲ ಎಂದು ತಿಳಿಯುತ್ತಾ ಹೋಗುತ್ತದೆ. ನಿಮಗೆ ತಾಕತ್ತು ನಿಮ್ಮ ಒಳಗಿನಿಂದ ಬರುತ್ತದೆ.

ಹಾಗಾಗಿ, ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇರಲು ನಿಮ್ಮ ಕೈಯ್ಯಲ್ಲಿ ಎಷ್ಟೆಲ್ಲ ಸಾಧ್ಯವೊ ಅಷ್ಟೆಲ್ಲ ಮಾಡಿ. ಅದು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ, ಆದರೆ ಆ ದುರ್ಬಲತೆಯೆ ನೀವು ಇತರರೊಂದಿಗೆ ಬೆರೆಯಲು, ಹಾಗೂ ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಕವಚದಿಂದ ಹೊರಬನ್ನಿ. ಪ್ರಾಮಾಣಿಕವಾಗಿ, ಮುಕ್ತವಾಗಿ ಇರುವುದರಿಂದ ಹುಟ್ಟುವ ಅರ್ಥ ಮತ್ತು ಸಂತೃಪ್ತಿಯನ್ನು ಆನಂದಿಸಿ.

ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.
ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply