ಅತ್ಯುನ್ನತವಾದ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.

ಸಾಕ್ರಟೆಸ್…ಗೆಲಿಲಿಯೊ…ಕೊಲಂಬಸ್…ಲಿಂಕನ್…ಸುಸಾನ್ ಬಿ. ಆಂಥನಿ…ಗಾಂಧಿ…ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. ನಮ್ಮ ಇತಿಹಾಸದ ಪುಸ್ತಕಗಳು ಉನ್ನತವಾದ ವಿಚಾರಗಳನ್ನು, ಆಲೋಚನೆಗಳನ್ನು ಹೊಂದಿದ್ದ ಉನ್ನತ ಮನುಷ್ಯರ ಕತೆಗಳಿಂದ ಕೂಡಿದೆ. ಈ ಎಷ್ಟೋ ಜನ ಉನ್ನತ ಮನುಷ್ಯರನ್ನು ಸಣ್ಣ ಮನುಷ್ಯರು ಸಾಂಕೇತಿಕವಾಗಿ ಮತ್ತೆ ಕೆಲವೊಮ್ಮೆ ಅಕ್ಷರಶ: ಗುಂಡು ಹೊಡೆದು ಉರುಳಿಸಿದ್ದಾರೆ. ಈ ಸಣ್ಣ ಜನರು ಆ ದೊಡ್ಡವರನ್ನು ನೋಡಿ ನಕ್ಕಿದ್ದಾರೆ; ಕಾರಾಗೃಹದಲ್ಲಿ ಕೂಡಿ ಹಾಕಿದ್ದಾರೆ; ಗುಂಡು ಹಾರಿಸಿ ಕೊಂದಿದ್ದಾರೆ.

ಮುಕ್ತವಾಗಿ ಆಲೋಚಿಸಿ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರಗಳನ್ನು ಹುಡಕಬಲ್ಲ, ಅವಕಾಶಗಳನ್ನು ಬಳಸಿಕೊಳ್ಳಬಲ್ಲ, ಉದಾರಿಗಳಾದ, ನೀತಿವಂತ, ಹಾಗೂ ಬದ್ಧತೆಯುಳ್ಳ ದೊಡ್ಡ ಮನುಷ್ಯರು ಈ ಪ್ರಪಂಚಕ್ಕೆ ಬೇಕು. ದೊಡ್ಡದೊಡ್ಡ ವಿಚಾರಗಳು, ಅದರಲ್ಲೂ ಪರಿಸ್ಥಿತಿಯನ್ನು ಸುಧಾರಿಸುವ, ಹೊಸಹೊಸ ಆವಿಷ್ಕಾರಗಳಿಗೆ ದಾರಿ ತೋರಬಲ್ಲ, ಹೊಸ ದೃಷ್ಟಿಕೋನವನ್ನು ಪ್ರಚೋದಿಸಬಲ್ಲ ವಿಚಾರಗಳು ಈ ಪ್ರಪಂಚಕ್ಕೆ ಬೇಕು. ನಮ್ಮಲ್ಲಿ ಮಹಾನ್ ಎನ್ನಬಹುದಾದ ಸಮಸ್ಯೆಗಳಿವೆ, ಹಾಗಾಗಿ ನಮಗೆ ಮಹಾನ್ ಆದ ಪರಿಹಾರಗಳು ಬೇಕು. ಯಥಾಸ್ಥಿತಿಯಿಂದ ಆಚೆಗೆ ಉತ್ತಮವಾದ ಪ್ರಪಂಚವನ್ನು ಕಾಣಬಲ್ಲ ದೂರದೃಷ್ಟಿಯುಳ್ಳ ಜನ ನಮಗೆ ಬೇಕು.

ಆದರೆ, ಈ ದೊಡ್ಡದೊಡ್ಡ ವಿಚಾರಗಳುಳ್ಳ ಉನ್ನತ ಮನುಷ್ಯರು ಸಣ್ಣ ಮನಸ್ಸಿನ ಕೀಳು ಜನರಿಗೆ ಅಪಾಯಕಾರಿ. “ಸಣ್ಣ ಮನುಷ್ಯ” ಎಂದರೆ ಯಾವುದೋ ಒಂದು ಸಣ್ಣ ಹುದ್ದೆಯಲ್ಲಿರುವ ಅಥವ ಸಣ್ಣ ಪದವಿಯಲ್ಲಿರುವ, ಅಥವ ಹೆಚ್ಚೇನೂ ವಿದ್ಯಾಭ್ಯಾಸವಿಲ್ಲದ ಅಥವ ಶ್ರೀಮಂತನಲ್ಲದ ಮನುಷ್ಯ ಎಂದೇನೂ ಅಲ್ಲ. ಈ “ಸಣ್ಣ ಮನುಷ್ಯ” ಬಹಳಷ್ಟು ಸಲ ಒಳ್ಳೆಯ ಮನುಷ್ಯನೆ ಆಗಿರುತ್ತಾನೆ. ಸಂಸ್ಥೆಗೆ ಕಷ್ಟಪಟ್ಟು ದುಡಿಯುವ ನಿಯತ್ತಿನ ಮನುಷ್ಯನೂ, ತನ್ನ ಸಹೋದ್ಯೋಗಿಗಳಿಗೆ ಒಳ್ಳೆಯ ಸ್ನೇಹಿತನೂ ಆಗಿರಬಹುದಾತ. ಒಬ್ಬ ಮನುಷ್ಯನನ್ನು “ಸಣ್ಣ ಮನುಷ್ಯ”ನನ್ನಾಗಿ ಮಾಡುವ ವಿಷಯ ಏನೆಂದರೆ ಜೀವನವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಆತನ ಗುಣ. ತನ್ನ ಸ್ವಂತ ಜೀವನಕ್ಕಿಂತ, ಅಥವ ತನ್ನ ಸಂಸ್ಥೆಗಿಂತ, ಅಥವ ತಾನಿರುವ ಸ್ಥಳ ಮತ್ತು ಕಾಲಮಾನಕ್ಕಿಂತ ಆಚೆ ಆತ ನೋಡಲಾರ. ಅವನು ತನ್ನ ದೈನಂದಿನ ಕಾರ್ಯಕ್ರಮಕ್ಕೆ ರೂಢಿಯಾಗಿಬಿಟ್ಟಿರುತ್ತಾನೆ ಮತ್ತು ಅದನ್ನು ಬದಲಾಯಿಸಲು ಸ್ವಲ್ಪವೂ ಇಷ್ಟಪಡುವುದಿಲ್ಲ. ಯಾವುದು ಹೇಗೆ ನಡೆಯುತ್ತಿರುತ್ತದೆಯೊ ಅದೇ ಪರಿಕ್ರಮಕ್ಕೆ ಆತ ಅಂಟಿಕೊಂಡು ಬಿಟ್ಟಿರುತ್ತಾನೆ. ಆದರೆ ಅದು ಯಾಕೆ ಹೀಗೆ ಇದೆ ಎಂದು ಯೋಚಿಸುವುದಿಲ್ಲ. ಪ್ರತಿಯೊಂದೂ ಕ್ರಮಬದ್ಧವಾಗಿಯೇ ನಡೆಯಬೇಕು, ಎಲ್ಲಾ ಅರ್ಜಿಗಳೂ ತ್ರಿಪ್ರತಿಗಳಾಗಿರಬೇಕು ಎನ್ನುವಂತಹ ಅಭ್ಯಾಸಬಲದ ಸಾಧಾರಣ ಆಲೋಚನಾ ಕ್ರಮ ಅವನದು. ಇನ್ನೇನು ಮಾಡಿದರೆ ನಾವು ಈಗ ಮಾಡುತ್ತಿರುವುದಕ್ಕಿಂತ ಉತ್ತಮವಾಗಿ ಮಾಡಬಹುದು ಎಂಬ ಆಲೋಚನೆಯೇ ಬೇಕಾಗಿಲ್ಲ ಅವನಿಗೆ. ಯಾಕೆಂದರೆ, ಹಾಗೇನಾದರೂ ಮಾಡಿದರೆ ಅವನ ಕೆಲಸಕಾರ್ಯಗಳು ಈಗ ಮಾಡುತ್ತಿರುವುದಕ್ಕಿಂತ ಬೇರೆ ತರಹ ಇರುತ್ತವೆ. ಹಾಗಾಗಿ ಅಂತಹ ಹೊಸ ಪ್ರಯತ್ನವನ್ನು, ಬದಲಾವಣೆಯನ್ನು ಆತ ಇಷ್ಟ ಪಡುವುದೇ ಇಲ್ಲ.

ಈ ಸಣ್ಣ ಮನುಷ್ಯ ಬಹಳಷ್ಟು ಸಲ ತನ್ನ ಬಲದ, ತನ್ನ ಪರಿಮಿತಿಯ, ಅಥವ ತನ್ನ ಅನುಕೂಲದ ದೃಷ್ಟಿಯಿಂದಷ್ಟೆ ನೋಡುತ್ತಾನೆ. ಅಷ್ಟೆ ಅಲ್ಲ, ಯಾವುದು ತನಗೆ ಒಳ್ಳೆಯದು ಎನ್ನಿಸುತ್ತದೊ ಅದೇ ತನ್ನ ಕುಟುಂಬಕ್ಕೂ, ಅಥವ ತನ್ನ ಸಂಸ್ಥೆಗೂ, ಅಥವ ತನ್ನ ಸಮುದಾಯಕ್ಕೂ ಒಳ್ಳೆಯದು ಎಂದುಕೊಂಡು ಬಿಡುತ್ತಾನೆ. ಈ ಸಣ್ಣ ಮನುಷ್ಯನ ಜೀವನ ತನ್ನ ತತ್‌ಕ್ಷಣದ ಬೇಕುಬೇಡಗಳಿಗಿಂತ, ಧೈರ್ಯಾಧೈರ್ಯಗಳಿಗಿಂತ ದೊಡ್ಡದಾಗಿರುವುದಿಲ್ಲ. ಒಂದಂತೂ ನಿಶ್ಚಿತ: ಸಣ್ಣ ವಿಚಾರಗಳ ಸಣ್ಣ ಮನುಷ್ಯ ನಮ್ಮನ್ನು ಹೊಸ ಹಿರಿಮೆಯ ಎತ್ತರಗಳಿಗೆ ಅಥವ ಉತ್ತಮ ಜೀವನಕ್ಕೆ ಕರೆದೊಯ್ಯಲಾರ.

ಈ ಪ್ರಪಂಚದಲ್ಲಿ ದೊಡ್ಡ ಮನುಷ್ಯರಿಗಿಂತ ನೂರಾರು ಪಟ್ಟು ಹೆಚ್ಚು ಸಣ್ಣ ಮನುಷ್ಯರಿದ್ದಾರೆ. ಎಲ್ಲಿ ನೋಡಿದರಲ್ಲಿ, ಸಮಾಜದ ಪ್ರತಿಯೊಂದು ಸ್ತರದಲ್ಲಿ, ಎಲ್ಲಾ ತರಹದ ವ್ಯವಹಾರಗಳಲ್ಲಿ, ಉದ್ದಿಮೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ, ಸರ್ಕಾರೇತರ ಸಂಘಸಂಸ್ಥೆಗಳಲ್ಲಿ; ಎಲ್ಲೆಲ್ಲೂ ಅವರೇ ಇದ್ದಾರೆ. ಅವರು ಎಲ್ಲೆಲ್ಲಿ ಇದ್ದಾರೊ ಅಲ್ಲೆಲ್ಲ ದೂರದೃಷ್ಟಿಯುಳ್ಳ, ದೊಡ್ಡದೊಡ್ಡ ಕನಸುಗಳುಳ್ಳ, ಉತ್ತಮ ದೃಷ್ಟಿಕೋನವುಳ್ಳ ದೊಡ್ಡ ಜನರನ್ನು ತುಳಿಯಲು ತಮ್ಮ ಕೈಲಾದದ್ದನ್ನೆಲ್ಲ ಮಾಡುತ್ತಾರೆ.

ಇದು ವಿಷಾದನೀಯ. ಯಾಕೆಂದರೆ, ಈ ಸಣ್ಣ ಮನುಷ್ಯರೂ ಸೇರಿದಂತೆ ನಾವೆಲ್ಲರೂ ಅಂತಿಮವಾಗಿ ಆ ದೊಡ್ಡ ಮನುಷ್ಯರ ಉನ್ನತ ಆಲೋಚನೆಗಳಿಂದ ಲಾಭ ಪಡೆಯುತ್ತೇವೆ. ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಾಗ, ಬಿಕ್ಕಟ್ಟುಗಳು ಸಡಿಲಗೊಂಡಾಗ, ಹೊಸ ಉತ್ಪನ್ನಗಳು ಆವಿಷ್ಕಾರವಾದಾಗ, ಹೊಸ ರೀತಿಯಲ್ಲಿ ಜೀವನವನ್ನು ಜೀವಿಸುವುದು ಕಂಡುಕೊಂಡಾಗ ಅದರ ಪ್ರಯೋಜನಗಳು ನಮಗೆಲ್ಲರಿಗೂ ಲಭಿಸುತ್ತವೆ. ಉನ್ನತವಾದ ದೂರದೃಷ್ಟಿ, ಒಂದು ದೊಡ್ಡ ಕನಸು, ಒಳ್ಳೆಯ ದೃಷ್ಟಿಕೋನ ಅನೇಕ ಹೊಸ ಅವಕಾಶಗಳಿಗೆ ಬಾಗಿಲು ತೆರೆದಾಗ ಮತ್ತು ಹೊಸದಾದ ಅಪೇಕ್ಷಣೀಯ ಫಲಿತಾಂಶಗಳನ್ನು ಒದಗಿಸಿದಾಗ ಅದರಿಂದ ಸಮಾಜದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ. ಆದರೆ ಈ ಸಣ್ಣ ಮನುಷ್ಯರು ಅದರಿಂದ ಬರುವ ವಿಶಾಲವಾದ ಸಮಷ್ಟಿಯ ಹಿತವನ್ನು ಕಾಣಲಾರರು. ಅವರು ಈಗ ತಮಗೆ ಸದ್ಯಕ್ಕಿರುವ ಸಣ್ಣ ಮಟ್ಟದ ಸೌಖ್ಯಕ್ಕೆ ಅಂಟಿಕೊಂಡು ಬಿಡುತ್ತಾರೆ.

ಕೆಲವು ಉನ್ನತವಾದ ವಿಚಾರಗಳು ದೊಡ್ಡ ಮಟ್ಟದ ವೈಫಲ್ಯವನ್ನು ಕಂಡಿವೆ ಎನ್ನುವುದೇನೋ ನಿಜವೆ. ಹಲವಾರು ಉನ್ನತವಾದ ದೂರದೃಷ್ಟಿಯ ಕನಸುಗಳು ದಬಕ್ಕೆಂದು ಬೋರಲು ಬಿದ್ದು ಸೋತಿವೆ. ಆದರೆ ಎಷ್ಟೋ ಸಲ ಒಂದು ವಿಚಾರ ನಿಜವಾಗಲೂ ಯಶಸ್ವಿಯಾಗುತ್ತದೆಯೆ ಎನ್ನುವುದನ್ನು ನಾವು ಸ್ವತಃ ಪ್ರಯತ್ನಿಸದೆ ಹೇಳಲಾಗುವುದಿಲ್ಲ. ಆ ಪ್ರಯತ್ನ ಪ್ರಾಮಾಣಿಕವಾದದ್ದಾಗಿದ್ದು, ಬುದ್ಧಿವಂತಿಕೆಯಿಂದ ಕೂಡಿದ್ದು, ಸಾಕಷ್ಟು ಸಮಯಾವಕಾಶ ಮತ್ತು ಸಂಪನ್ಮೂಲಗಳಿಂದ ಕೂಡಿದ್ದಾಗಿರಬೇಕೆ ಹೊರತು ಸುಮ್ಮನೆ ಒಲ್ಲದ ಮನಸ್ಸಿನಿಂದ, ಬಲವಂತಕ್ಕೆ ಮಾಡುವ ಪ್ರಯತ್ನವಾಗಿರಬಾರದು.

ಜನರಿಗೆ ಮತ್ತು ಸಂಸ್ಥೆಗಳಿಗೆ ಕನಸುಗಳಿರಬೇಕು. ನಾಯಕತ್ವದಲ್ಲಿ ಒಂದು ಮುಖ್ಯವಾದ ಕ್ರಿಯಾಂಶವೇನೆಂದರೆ ಸಂಸ್ಥೆಯ ಅಥವ ತಂಡದ ಉದ್ದೇಶವನ್ನು ನಿಖರವಾಗಿ ನಿರೂಪಿಸಿ ಅದನ್ನು ಸರಿಯಾಗಿ ಅಭಿವ್ಯಕ್ತಪಡಿಸುವುದು. ಆ ಉದ್ದೇಶ ಭವಿಷ್ಯದ ಬಗೆಗಿನ ಒಂದು ಯೋಜನೆಯಾಗಿರಬೇಕು; ಸಂಸ್ಥೆಯ ಮತ್ತು ಅದರಲ್ಲಿ ಪಾಲ್ಗೊಳ್ಳುವ ಜನರಿಗೆ ಭವಿಷ್ಯ ಹೇಗಿರಬಹುದು, ಹೇಗಿರಬೇಕು ಎನ್ನುವುದನ್ನು ಅದು ಸ್ಪಷ್ಟವಾಗಿ ಪ್ರತಿಪಾದಿಸಬೇಕು.

ದೂರದೃಷ್ಟಿಯ ದೊಡ್ಡದೊಡ್ಡ ವಿಚಾರಗಳು ಸವಾಲುಗಳನ್ನು ಸ್ವೀಕರಿಸಲು ಸಿದ್ಧವಿರುವ, ಕಲಿಯಲು ಸನ್ನದ್ಧವಾಗಿರುವ, ಬೆಳೆಯಲು ಇಚ್ಚಿಸುವ, ತಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಿಕೊಳ್ಳಲು ಸಿದ್ಧವಾಗಿರುವ ದೊಡ್ಡ ಮನುಷ್ಯರನ್ನು ಆಕರ್ಷಿಸುತ್ತವೆ. ಏನನ್ನಾದರೂ ಸಾಧಿಸಲು ಜನ ಇಚ್ಚಿಸುತ್ತಾರೆ. ಹಾಗಾಗಿ, ತಾವು ಮಾಡುತ್ತಿರುವುದು ಒಳ್ಳೆಯದು, ಉತ್ತಮವಾದದ್ದು ಎನ್ನುವ ಭರವಸೆ ಅವರಿಗೆ ಬೇಕು. ಅದೇ ರೀತಿ ಅವರಿಗೆ ಕಣ್ಣಿಗೆ ಕಾಣಬಲ್ಲ ಗುರಿಯೂ ಇರಬೇಕು. ಸಣ್ಣ ವಿಚಾರಗಳು ನಮ್ಮಲ್ಲಿನ ಶ್ರೇಷ್ಠತೆಯನ್ನು ಹೊರತರಲಾರವು. ಆದರೆ ದೊಡ್ಡ ವಿಚಾರಗಳು ನಮ್ಮಲ್ಲಿನ ಎಲ್ಲಾ ಒಳ್ಳೆಯದನ್ನು, ಶ್ರೇಷ್ಠವಾದದ್ದನ್ನು ಹೊರತರುತ್ತವೆ.

ನಾವು ಬದುಕುವ ರೀತಿಯನ್ನು ಹಾಗೂ ಪ್ರಪಂಚವನ್ನು ಬದಲಾಯಿಸಿದ ವಿಚಾರಗಳ ದೊಡ್ಡ ಪಟ್ಟಿಯೆ ಇದೆ. ಅಮೆರಿಕದ ಸ್ಥಾಪಕ ಪಿತೃಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಗಣರಾಜ್ಯದ ಕನಸು ಕಂಡರು. ಆ ಕನಸು ಪ್ರಪಂಚದ ಮೂಲೆಮೂಲೆಯಲ್ಲೂ ತನ್ನ ಪ್ರಭಾವ ಬೀರಿದ ರಾಷ್ಟ್ರವೊಂದಕ್ಕೆ ಜನ್ಮ ನೀಡಿತು. ಸೂಸನ್ ಬಿ. ಆಂಥನಿ ಎಂಬ ಹೆಣ್ಣುಮಗಳು ಅಮೆರಿಕದ ಸ್ತ್ರೀಯರಿಗೆ ಮತ ಚಲಾಯಿಸುವ ಹಕ್ಕು ಬರುವ ದಿನದ ಬಗ್ಗೆ ಕನಸು ಕಂಡಳು ಮತ್ತು ಸಮಾಜ ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆ ಇಡಲು ಸಾಧ್ಯವಾಗುವಂತೆ ಶ್ರಮಿಸಿದಳು. ಗಾಂಧಿ ಭಾರತದ ಸ್ವಾತಂತ್ರ್ಯದ ಬಗ್ಗೆ ಕನಸು ಕಂಡರು ಮತ್ತು ಅಹಿಂಸಾತ್ಮಕ ಹೋರಾಟದಿಂದ ಕೋಟ್ಯಾಂತರ ಜನ ಸ್ವತಂತ್ರರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ವರ್ಣ ಸಮಾನತೆಯ ಕನಸು ಕಂಡರು. ಆ ಕನಸು ಸರ್ವರಿಗೂ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕಬೇಕೆಂಬ ಕರೆಯನ್ನು ಇವತ್ತಿಗೂ ನಮಗೆಲ್ಲ ಕೊಡುತ್ತಿದೆ.

ಒಳ್ಳೆಯ ತರಬೇತಿ ಪಡೆದ ನರ್ಸುಗಳಿರುವ ಆಧುನಿಕ ಆಸ್ಪತ್ರೆಗಳ ಬಗ್ಗೆ ಫ್ಲಾರೆನ್ಸ್ ನೈಟಿಂಗೇಲ್ ಕನಸು ಕಂಡಳು. ಆ ಕನಸನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿ ಆಧುನಿಕ ನರ್ಸ್ ವೃತ್ತಿಯನ್ನು ಸ್ಥಾಪಿಸಿದಳು. ತನ್ಮೂಲಕ ಸಾವಿರಾರು ಜೀವಗಳನ್ನು ಉಳಿಸಿದಳು. ಥಾಮಸ್ ಆಲ್ವ ಎಡಿಸನ್‌ಗೆ ದೊಡ್ಡ ಕನಸುಗಳಿದ್ದವು. ಆ ಕನಸುಗಳೆ ವಿಶ್ವದಾದ್ಯಂತ ಜನರ ಜೀವನಕ್ರಮವನ್ನೆ ಬದಲಾಯಿಸಿಬಿಟ್ಟ ಎಲೆಕ್ಟ್ರಿಕ್ ಬಲ್ಬ್ ಮತ್ತು ಫೋನೋಗ್ರ್ಯಾಫ಼್ ಸಂಶೋಧನೆಯತ್ತ ಆತನನ್ನು ಕೊಂಡೊಯ್ದವು. ಪೋಲಿಯೋವನ್ನು ತಡೆಗಟ್ಟಬಹುದು ಎಂದು ಜೋನಸ್ ಸಾಲ್ಕ್ ಕನಸು ಕಂಡ. ಲಕ್ಷಾಂತರ ಜನರನ್ನು ಅಂಗವಿಕಲತೆಯಿಂದ ರಕ್ಷಿಸಬಲ್ಲ ವ್ಯಾಕ್ಸಿನ್ ಅನ್ನು ಕಂಡು ಹಿಡಿದ.

ಜಪಾನಿನ ಐಚಿ ಶಿಬಿಸವ ಬದುಕಿದ್ದದ್ದು 1840 ರಿಂದ 1931 ರವರೆಗೆ. ರೈತ ಕುಟುಂಬದಲ್ಲಿ ಜನಿಸಿದ್ದ ಆತ ಜಪಾನಿನ ಹಣಕಾಸು ಮಂತ್ರಿಯಾಗುವ ತನಕ ಬೆಳೆದ. ಕೊನೆಗೆ ತಾನೆ ಸ್ವತಃ ಉದ್ದಿಮೆ ಸ್ಥಾಪಿಸಲು ಆ ಮಂತ್ರಿ ಪದವಿ ತ್ಯಜಿಸಿದ. ಹೊಸಹೊಸ ಉದ್ದಿಮೆಗಳು, ವಾಣಿಜ್ಯ ವ್ಯವಹಾರಗಳು ಇಲ್ಲದೆ ಜಪಾನ್ ಬೆಳೆಯಲಾರದು ಎಂದು ಆತನಿಗೆ ಗೊತ್ತಿತ್ತು. ಹಾಗಾಗಿ ಅವನ್ನು ತಾನೆ ಸ್ಥಾಪಿಸಲು ಮುಂದಾದ. ತನ್ನ ಜೀವಿತಾವಧಿಯಲ್ಲಿ ಆರು ನೂರಕ್ಕಿಂತ ಹೆಚ್ಚು ಸಂಖ್ಯೆಯ ಕಾರ್ಖಾನೆಗಳನ್ನು, ಸಂಸ್ಥೆಗಳನ್ನು ಆತ ಹುಟ್ಟುಹಾಕಿ ಬೆಳೆಸಿದ. ತನ್ನ ಪ್ರತಿಭೆಯನ್ನು ಎಷ್ಟೆಲ್ಲ ಸಾಧ್ಯವೊ ಅಷ್ಟೆಲ್ಲ ಬಳಸಿಕೊಳ್ಳಬೇಕೆಂದು ಆತನಿಗೆ ಗೊತ್ತಿತ್ತು. ಹಾಗಾಗಿ ಅನೇಕ ಆಡಳಿತ ಮಂಡಳಿಗಳಲ್ಲಿ ಅನಧಿಕೃತ ಸಲಹೆಗಾರನಾಗಿ ಸೇವೆ ಸಲ್ಲಿಸಿದ. ತರಬೇತಿ ಕಾರ್ಯಾಗಾರಗಳನ್ನು, ಶಿಬಿರಗಳನ್ನು ಏರ್ಪಡಿಸಿದ. ಅರ್ಥಶಾಸ್ತ್ರದ ಪ್ರಸಿದ್ಧ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನೆರವಾದ.

ಮೆಕ್‌ಡೊನಾಲ್ಡ್ ಸೋದರರು ನಡೆಸುತ್ತಿದ್ದ ಒಂದು ಸಣ್ಣ ಹೋಟೆಲನ್ನು ಈಗಿನ ಫಾಸ್ಟ್-ಫುಡ್ ರೆಸ್ಟಾರೆಂಟ್‌ಗಳಿಗೆ ಮಾದರಿಯಾಗಿ ರೇ ಕ್ರಾಕ್ ಪರಿಭಾವಿಸಿದ. ಆ ಮಾದರಿಯನ್ನು ಆತ ಸಾವಿರಾರು ಸ್ಥಳಗಳಲ್ಲಿರುವ, ಶತಶತಕೋಟಿ ಆದಾಯ ಇರುವ ಈಗಿನ ಅಂತರರಾಷ್ಟ್ರೀಯ ಮೆಕ್‌ಡೊನಾಲ್ಡ್ ಹೋಟೆಲ್ ಸರಣಿಯಾಗಿ ಪರಿವರ್ತಿಸಿದ. ಯಾವುದೇ ತರಹದ ವ್ಯವಹಾರಿಕ ಅನುಭವವಿಲ್ಲದ, ಆಗತಾನೆ ಒಂದು ಸಣ್ಣ ಮಗುವಿನ ತಾಯಿಯಾಗಿದ್ದ ಡೆಬ್ಬಿ ಫೀಲ್ಡ್ಸ್ ಕೇವಲ ಬಿಸ್ಕತ್ತುಗಳನ್ನು ಮಾರುವ ಅಂಗಡಿಯೊಂದನ್ನು ಯಶಸ್ವಿಯಾಗಿ ನಡೆಸುವ ಕನಸು ಕಂಡಳು. ಅದಾದ ಇಪ್ಪತ್ತು ವರ್ಷಗಳ ನಂತರ ಅಮೆರಿಕದಲ್ಲಿ ಮತ್ತು ಇತರ ಹನ್ನೊಂದು ದೇಶಗಳಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚಿನ ಬಿಸ್ಕತ್ ಅಂಗಡಿಗಳನ್ನು ಆಕೆ ಹೊಂದಿದ್ದಳು.

ಹೊಸ ತರಹದ ತ್ವರಿತ ಅಂಚೆ ಸೇವೆಯ ಬಗ್ಗೆ ಫ್ರೆಡ್‌ರಿಕ್ ಸ್ಮಿಥ್ ಆಲೋಚಿಸಿದ. ಆ ಆಲೋಚನೆಯೆ ಸಹಸ್ರಾರು ಕೋಟಿಗಳ ಆದಾಯವಿರುವ, ಆರು ನೂರಕ್ಕೂ ಹೆಚ್ಚಿನ ಕಾರ್ಗೋ ವಿಮಾನಗಳಿರುವ, 61,000 ವಾಹನಗಳಿರುವ, 1,90,000 ನೌಕರರ, ಪ್ರತಿನಿತ್ಯ ಸರಾಸರಿ 30 ಲಕ್ಷ ಟಪಾಲುಗಳನ್ನು ಪ್ರಪಂಚದಾದ್ಯಂತ ವಿತರಿಸುವ ಫೆಡ್‌ಎಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮೂಲ ಕಾರಣವಾಯಿತು.

1844 ರಲ್ಲಿ ಜಾರ್ಜ್ ವಿಲ್ಲಿಯಮ್ಸ್ ಎಂಬಾತ ಲಂಡನ್ನಿನ ಜವಳಿ ಅಂಗಡಿಯಲ್ಲಿ ಸಹಾಯಕ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಮನುಷ್ಯ. ಆಗಿನ ಕಾಲದಲ್ಲಿ ಆತನಂತಹ ಯುವಜನರು ಪ್ರತಿನಿತ್ಯ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದರು. ಅವರು ನಿದ್ದೆ ಮಾಡುತ್ತಿದ್ದದ್ದು ಅವರಂತಹದೆ ಜನರಿಂದ ತುಂಬಿಹೋಗಿರುತ್ತಿದ್ದ ಕೆಲಸದ ಸ್ಥಳದಲ್ಲಿಯೆ. ಆದರೆ ವಿಲ್ಲಿಯಮ್ಸ್‌ಗೆ ತನ್ನಂತೆ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಬಂದ ಯುವಕರಿಗೆ ಕೆಲಸದ ಸ್ಥಳದಿಂದ ಹೊರಗಿನ ಜೀವನವೇ ಇಲ್ಲ, ಇದ್ದರೂ ಅದು ಸರಿಯಾದುದಾಗಿಲ್ಲ ಎಂಬ ಸಂಗತಿ ಬಹಳ ಬಾಧಿಸಿತು. ಹಾಗಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಪೂರಕವಾಗುವಂತೆ ಒಬ್ಬರಿಗೊಬ್ಬರು ಸಹಾಯ ಮಡುವ ಕ್ರಿಶ್ಚಿಯನ್ ಫೆಲೊಷಿಪ್ ಒಂದನ್ನು ಆತ ತನ್ನ ಕೆಲವು ಸಹೋದ್ಯೋಗಿಗಳೊಡನೆ ಸೇರಿ ಪ್ರಾರಂಭಿಸಿದ. ಆತನ ಆ ವಿಚಾರಕಾರ್ಯ ಬೆಳೆಯುತ್ತಾ ಹೋಯಿತು. ಒಂದೂವರೆ ಶತಮಾನದ ನಂತರ ಈಗ ಅದೇ ಗುಂಪು ಯಾವ ಮಟ್ಟಕ್ಕೆ ಬೆಳೆದಿದೆ ಅಂದರೆ, ಒಂದು ನೂರಾ ಮುವ್ವತ್ತು ದೇಶಗಳಲ್ಲಿ ಗಂಡಸರು, ಹೆಂಗಸರು, ಮಕ್ಕಳೂ ಸೇರಿದಂತೆ ಮೂರು ಕೋಟಿಗೂ ಹೆಚ್ಚು ಜನ ತಮ್ಮ ದೈಹಿಕ ಮತ್ತು ಮಾನಸಿಕ ಶಿಸ್ತು ಉಳಿಸಿಕೊಳ್ಳಲು YMCA ಗೆ ಪ್ರತಿನಿತ್ಯ ಹೋಗಿ ಬರುತ್ತಿರುತ್ತಾರೆ.

ಪಾಲ್ ಹ್ಯಾರಿಸ್ ಎನ್ನುವ ಷಿಕಾಗೊ ನಗರದ ವಕೀಲನಿಗೆ ಒಂದು ದೊಡ್ಡ ಯೋಚನೆ ಹುಟ್ಟಿಕೊಂಡಿತು. ತನ್ನ ಆಲೋಚನೆಯನ್ನು ಆತ ತನ್ನ ಮೂವರು ಸ್ನೇಹಿತರೊಂದಿಗೆ 1905 ರಲ್ಲಿ ಹಂಚಿಕೊಂಡ. ಬ್ಯುಸಿನೆಸ್ ಪ್ರಪಂಚದ ಜನರಲ್ಲಿ ಸಮುದಾಯ ಮತ್ತು ಸೇವಾಮನೋಭಾವ ವೃದ್ಧಿಸಲು ಅನುಕೂಲವಾಗುವಂತೆ ಒಂದು ಕ್ಲಬ್ಬನ್ನು ಸ್ಥಾಪಿಸಬೇಕು ಎನ್ನುವುದು ಆತನ ವಿಚಾರ. ಆತನ ಆಲೋಚನೆಯನ್ನು ಅವನ ಸ್ನೇಹಿತರೂ ಅಪ್ಪಿಕೊಂಡರು. ಅದರಿಂದ ಇವತ್ತು ಏನಾಗಿದೆ ಅಂದರೆ, 161 ದೇಶಗಳಲ್ಲಿ ಹಬ್ಬಿರುವ 29000 ರೋಟರಿ ಕ್ಲಬ್ಬುಗಳಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚಿನ ಉದ್ದಿಮೆಸಂಸ್ಥೆಗಳು ಮತ್ತು ವೃತ್ತಿಪರರು ಆ ಸಮುದಾಯ ಭಾವವನ್ನು ಹಂಚಿಕೊಳ್ಳುತ್ತ ಮಾನವೀಯ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

1976 ರಲ್ಲಿ ಮಿಲ್ಲರ್ಡ್ ಮತ್ತು ಲಿಂಡಾ ಫುಲ್ಲರ್‌ರಿಗೆ ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ ಎಂಬ ದೊಡ್ಡ ಕನಸು ಹುಟ್ಟಿಕೊಂಡಿತು. ತಮ್ಮ ಜೀವಮಾನದಲ್ಲಿ ತಮಗೆಂದೂ ತಲೆಯ ಮೇಲೊಂದು ಸ್ವಂತ ಸೂರು ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನಂಬಿದ್ದ ಜನರಿಗೆ ಸ್ವಂತ ಮನೆ ಸಾಧ್ಯವಾಗುವಂತೆ ಮಾಡುವ ದಿಕ್ಕಿನಲ್ಲಿ ತಾವು ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ಅದರಲ್ಲಿ ತೊಡಗಿಸಿಕೊಂಡರು. ಈಗ ಕೇವಲ ೨೫ ವರ್ಷಗಳಲ್ಲಿ, ಪ್ರಪಂಚದಾದ್ಯಂತ 85000 ಮನೆಗಳನ್ನು ಕಟ್ಟಿಸಿ 4,25,000 ಜನರಿಗೆ ಸುರಕ್ಷಿತವಾದ, ಕೈಗೆಟುಕುವ ಬೆಲೆಯಲ್ಲಿ ಮನೆ ಲಭಿಸುವಂತೆ ಮಾಡುವಲ್ಲಿ ಹ್ಯಾಬಿಟ್ಯಾಟ್ ಫಾರ್ ಹ್ಯುಮ್ಯಾನಿಟಿ ಸಫಲವಾಗಿದೆ.

ಹವಾಯಿಯಲ್ಲಿ ಜೀವಿಸುತ್ತಿದ್ದ ಫಿಲಿಫ್ಪೈನ್ಸ್ ಮೂಲದ ಡಾ. ರಮೋನ್ ಕೆ. ಸೈ ಮತ್ತು ಇತರ ಆರು ಜನ ವೈದ್ಯರು 1983 ರಲ್ಲಿ ತಮ್ಮ ತಾಯ್ನಾಡಿನ ಜನರ ಸೇವೆ ಮಾಡಲು ಫಿಲಿಫ್ಪೈನ್ಸ್‌ಗೆ ಹಿಂದಿರುಗಿದರು. ಈ ಸಣ್ಣ ಗುಂಪಿನ ಆಲೋಚನೆ ಕಾಲಕ್ರಮೇಣ ಅಲೋಹ ಮೆಡಿಕಲ್ ಮಿಷನ್ ಎಂಬ ಸಂಸ್ಥೆಯ ಸ್ಥಾಪನೆಗೆ ಕಾರಣವಾಗಿ, ಆ ಸಂಸ್ಥೆಯ ಆರುನೂರು ಜನ ಕಾರ್ಯಕರ್ತರು ಫಿಲಿಫ್ಪೈನ್ಸ್, ಚೀನಾ, ವಿಯೆಟ್ನಾಮ್, ಬಾಂಗ್ಲಾದೇಶ, ಕಾಂಬೋಡಿಯ, ಲಾವೋಸ್ ಮುಂತಾದ ದೇಶಗಳಲ್ಲಿನ ಸುಮಾರು 60,000 ಜನರಿಗೆ ಶಸ್ತ್ರಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ಸೇವೆ ಸಲ್ಲಿಸುವಿಕೆಗೆ ಮೂಲಕಾರಣವಾಗಿದೆ.

ಜನ-ಸಮುದಾಯ-ದೇಶಗಳು ತಮ್ಮತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವಲ್ಲಿ ದೊಡ್ಡದೊಡ್ಡ ವಿಚಾರಗಳು ನೆರವಾಗಿವೆ. ಆ ಉನ್ನತ ವಿಚಾರಗಳು ಅನೇಕ ಜೀವಗಳನ್ನು ಉಳಿಸಿವೆ. ನೈಸರ್ಗಿಕ ಪರಿಸರವನ್ನು ಹಾಗೆಯೆ ಉಳಿಸಿಕೊಳ್ಳಲು ಶಕ್ತವಾಗಿವೆ. ಹೊಸಹೊಸ ಸೇವೆಗಳಿಗೆ ದಾರಿ ತೆರೆದಿವೆ. ಕೋಟ್ಯಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ. ಸಮುದಾಯಗಳನ್ನು ಕಟ್ಟಿವೆ. ದೊಡ್ಡ ವಿಚಾರಗಳು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿವೆ. ಕೋಟ್ಯಾಂತರ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಿವೆ.

ದೊಡ್ಡ ವಿಚಾರಧಾರೆಯನ್ನು ಹೊಂದಿರುವುದು ಅಥವ ದೊಡ್ಡ ಕನಸು ಕಾಣುವುದು ನಿಮ್ಮ ಜೀವನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಮಾಡಬಹುದು. ನೀವು ದೃಷ್ಟಿಯನ್ನು ಕೇಂದ್ರೀಕರಿಸಿ ಒಂದು ಸ್ಪಷ್ಟ ದಿಕ್ಕಿನತ್ತ ಮುನ್ನಡೆಯಲು ಅದು ಕಾರಣವಾಗುತ್ತದೆ. ಯಾವುದೊ ಒಂದು ಸಾಧನೆಗಾಗಿ ಶ್ರಮಿಸಲು ಅದು ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮ ಆ ದೊಡ್ಡ ಆಲೋಚನೆಯನ್ನು ಯಾರಾದರೂ ಹೊಡೆದು ಕೆಳಗುರುಳಿಸಿದರೆ ಅದರಿಂದ ಕುಗ್ಗದೆ ಮತ್ತೆ ಆ ಆಲೋಚನೆಯನ್ನು ನೆಲದಿಂದ ಮೇಲಕ್ಕೆತ್ತಿಕೊಂಡು, ಅದರ ಧೂಳೊರೆಸಿ, ಮತ್ತೆ ಮುನ್ನಡೆಯಿರಿ. ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವತ್ತ ನೀವಿಡುವ ಪ್ರತಿಯೊಂದು ಹೆಜ್ಜೆಯೂ ನಿಮಗೆ ಅಗಣಿತ ಆತ್ಮಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತಾ ಹೋಗುತ್ತದೆ.

ಅತ್ಯುನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.
ಆದ್ರೂ, ದೊಡ್ಡದಾಗಿಯೆ ಆಲೋಚಿಸಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply