ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.

ಅದು 1945 ರ ಸುಮಾರು. ಎರಡನೆ ವಿಶ್ವಯುದ್ಧ ಮುಗಿಯುತ್ತ ಬಂದಿದ್ದ ಸಮಯವದು. ಅಮೆರಿಕೆಯ ನೌಕಾದಳದ ಕ್ಯಾಪ್ಟನ್ ಒಬ್ಬ ಚೀನಾದ ತ್ಸಿಂಗ್ಟಾವೊ ನಗರದಲ್ಲಿ ಬಂದಿಳಿದ. ಆ ಊರಿನಲ್ಲಿ ಯಾರೂ ಅಮೆರಿಕನ್ನರಿರಲಿಲ್ಲ. ಹಾಗಾಗಿ ಸ್ಥಳೀಯ ಹೋಟೆಲ್‌ನಲ್ಲಿ ಇಳಿದುಕೊಂಡ. ಉತ್ತರ ಚೀನಾದಲ್ಲಿದ್ದ ಜಪಾನಿ ಸೈನ್ಯಪಡೆಗಳ ಶರಣಾಗತಿಗೆ ಏರ್ಪಾಟು ಮಾಡುವುದು ಆ ಕ್ಯಾಪ್ಟನ್‌ನ ಮುಖ್ಯ ಜವಾಬ್ದಾರಿಯಾಗಿತ್ತು. ಆ ನಿಟ್ಟಿನಲ್ಲಿ ತನ್ನ ಹಡಗಿನಲ್ಲಿನ ಸರುಕುಗಳನ್ನು ಇಳಿಸಿಕೊಳ್ಳುವುದಕ್ಕೆ ಕೂಲಿಗಳನ್ನು ನೇಮಿಸಿಕೊಳ್ಳುವುದು ಮತ್ತು ತನ್ನ ಸೈನಿಕರಿಗೆ ವಸತಿ ಏರ್ಪಾಟು ಮಾಡುವುದು ಆತ ತಕ್ಷಣ ಮಾಡಬೇಕಾದ ಕೆಲಸವಾಗಿತ್ತು.

ಅದು ಯುದ್ಧಕಾಲದಿಂದ ಶಾಂತಿಗೆ ಬದಲಾಗುತ್ತಿದ್ದ ಕಾಲ. ಸೈನಿಕರು ರಣರಂಗದಿಂದ ಸೈನ್ಯದ ಕಚೇರಿಗಳಿಗೆ, ಬ್ಯಾರಕ್‌ಗಳಿಗೆ ಮರಳುತ್ತಿದ್ದರು. ತ್ಸಿಂಗ್ಟಾವೊದಲ್ಲಿ ಬಂದಿಳಿದ ನೌಕಾದಳದ ಸೈನಿಕರಲ್ಲಿ ಬಹುಪಾಲು ಜನ ಸೈನ್ಯಕ್ಕೆ ಸೇರಿಕೊಂಡಂದಿನಿಂದ ಇಲ್ಲಿಯತನಕ ರಣರಂಗದಲ್ಲಿಯೇ ತಮ್ಮ ಜೀವನವನ್ನು ಕಳೆದಿದ್ದರು. ಅವರಿಗೆ ಸೇನಾಶಿಬಿರಗಳಲ್ಲಿ ಕೆಲಸ ಮಾಡಿ ಅಭ್ಯಾಸವೇ ಇರಲಿಲ್ಲ. ಆಗ ತಾನೆ ಹೊಸದಾಗಿ ಸಾರ್ಜೆಂಟ್ ಆಗಿ ಬಡ್ತಿ ಪಡೆದಿದ್ದ ಅವರಲ್ಲಿನ ಒಬ್ಬ ಯುವ ಸೈನಿಕನಿಗೆ ಅಲ್ಲಿನ ಬ್ಯಾರಕ್‌ಗಳಿಗೆ ಕಾವಲು ಸಾರ್ಜೆಂಟ್ ಆಗಿ ನೇಮಿಸಲಾಗಿತ್ತು. ಆತನ ಕರ್ತವ್ಯದ ಭಾಗವಾಗಿ 35 ಸ್ವೆಟರ್ ತರಹದ ಉಣ್ಣೆಯ ಜಾಕೆಟ್‌ಗಳನ್ನು ಆತನ ಸುಪರ್ದಿಗೆ ಒಪ್ಪಿಸಲಾಗಿತ್ತು. ಮೊದಲ ದಿನದ ಕೆಲಸ ಮಾಡಿದ ಆತನನ್ನು ಮಾರನೆ ದಿನ ಕಾವಲು ಕೆಲಸದಿಂದ ಬಿಡುಗಡೆ ಮಾಡಿದಾಗ ಆ ಜಾಕೆಟ್‌ಗಳಲ್ಲಿ ಕೇವಲ ಎರಡು ಮಾತ್ರ ಲೆಕ್ಕಕ್ಕೆ ಸಿಕ್ಕವು. ಆಗ ಚಳಿಗಾಲ ಹತ್ತಿರ ಬರುತ್ತಿತ್ತು. ಸೈನಿಕರು ಇದ್ದ ಬಿಡಾರಗಳನ್ನು ಬಿಸಿ ಮಾಡುವ ವ್ಯವಸ್ಥೆಗಳೇನೂ ಇರಲಿಲ್ಲ. ಅಂತಹ ಸ್ಥಿತಿಯಲ್ಲಿ ಆ ಉಣ್ಣೆಯ ಜಾಕೆಟ್‌ಗಳು ಅಲ್ಲಿದ್ದ ಸೈನಿಕರಿಗೆ ಬಹಳ ಅಮೂಲ್ಯವಾಗಿದ್ದವು. ಹಾಗಾಗಿ ಮುವ್ವತ್ತಮೂರು ಜಾಕೆಟ್‌ಗಳು ರಾತ್ರೋರಾತ್ರಿ ಕಣ್ಮರೆಯಾಗಿದ್ದವು.

ಆ ಘಟನೆಯಾಗುವುದಕ್ಕೆ ಕೆಲವೆ ದಿನಗಳ ಮುಂಚೆ ನೌಕಾಪಡೆಯ ಮುಖ್ಯ ಕಚೇರಿಯಿಂದ ಶಿಬಿರದಲ್ಲಿನ ಸರಕುಸಾಮಗ್ರಿಗಳ ಲೆಕ್ಕ ಇಡಲು ಕಠಿಣ ಆದೇಶ ಹೊರಡಿಸಲಾಗಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಯಾರೂ ಲೆಕ್ಕವೇ ಇಡುತ್ತಿರಲಿಲ್ಲ, ಇಟ್ಟರೂ ಅದನ್ನು ಯಾರೂ ಗಮನಿಸುತ್ತಿರಲಿಲ್ಲ. ಸೈನಿಕರೆಲ್ಲ ಯುದ್ಧ ಮಾಡುವುದರಲ್ಲಿ ವ್ಯಸ್ತರಾಗಿದ್ದರಿಂದ ಸಾಮಾನುಗಳ ವಿವರಗಳನ್ನು ಕಾಲಕಾಲಕ್ಕೆ ಲೆಕ್ಕ ಇಡುವುದಾಗಲಿ, ತೆಗೆದುಕೊಂಡ ವಸ್ತುಗಳಿಗೆ ಫಾರಂ ತುಂಬುವುದಾಗಲಿ ಸೈನಿಕರಿಗೆ ಮುಖ್ಯವಾಗಿರಲಿಲ್ಲ. ಆದರೆ ಈಗ ಶಾಂತಿಸಮಯ. ಹೊಸ ಆದೇಶಗಳು ಜಾರಿಗೆ ಬಂದುಬಿಟ್ಟಿದ್ದವು. ಹಾಗಾಗಿ, ಕಣ್ಮರೆಯಾದ ಜಾಕೆಟ್‌ಗಳ ಕಾರಣಕ್ಕಾಗಿ ಸಾರ್ಜೆಂಟ್‌ನನ್ನು ಸೇನಾನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಯಿತು.

ಕೋರ್ಟ್-ಮಾರ್ಷಲ್‌ನಲ್ಲಿ ಸಾರ್ಜೆಂಟ್‌ನ ಪರವಾಗಿ ವಾದಿಸಲು ಆ ಕ್ಯಾಪ್ಟನ್ ಒಪ್ಪಿಕೊಂಡ. ಕೇಸಿನ ಹಿಂದೆಮುಂದೆಲ್ಲ ಪರಿಶೀಲಿಸಿದ ನಂತರ, ತುಕಡಿಯ ಸೇನಾಧಿಕಾರಿಯನ್ನು, ಫಿರಂಗಿದಳದ ಕಮ್ಯಾಂಡರ್‌ನನ್ನು, ಮತ್ತು ಇನ್ನೂ ಹಲವು ಸೇನಾ ಅಧಿಕಾರಿಗಳನ್ನು, ಇತರೆ ಕೆಲವು ಸಾರ್ಜೆಂಟ್‌ಗಳನ್ನು ವಿಚಾರಣೆಗಾಗಿ ಕಟಕಟೆಗೆ ಕರೆಯಲು ತೀರ್ಮಾನಿಸಿದ. ಇವರೆಲ್ಲರೂ ಜಾಕೆಟ್‌ಗಳು ಕಣ್ಮರೆಯಾದ ಮತ್ತು ಅದರ ಅಸುಪಾಸಿನ ದಿನಗಳಲ್ಲಿ ಅಲ್ಲಿನ ಉಸ್ತುವಾರಿ ವಹಿಸಿದ್ದವರು ಇಲ್ಲವೆ ಆ ಸ್ಥಳದಲ್ಲಿದ್ದವರು. ಅವರೆಲ್ಲರನ್ನೂ ಕಟಕಟೆಗೆ ಕರೆದರೆ ಅವರಿಗೆ ಸಂಬಂಧಪಟ್ಟ ವಿವರಗಳೆಲ್ಲ ಕೋರ್ಟ್‌ಮಾರ್ಷಲ್ ದಾಖಲೆಯಲ್ಲಿ ಸೇರಿಕೊಳ್ಳುತ್ತದೆ. ನಂತರ ಆ ವರದಿ ವಾಷಿಂಗ್ಟನ್ ಡಿ.ಸಿ.ಯ ಮುಖ್ಯಕಚೇರಿಗೆ ಪರಿಶೀಲನೆಗೆ ಹೋಗುತ್ತದೆ.

ಹಾಗಾಗಿ ಕಟಕಟೆ ಹತ್ತಬೇಕಾಗಿದ್ದ ಪ್ರತಿಯೊಬ್ಬ ಅಧಿಕಾರಿಗೂ ಇದು ಸೂಕ್ಷ್ಮವಾದ ವಿಷಯ. ಅವರಲ್ಲಿನ ಕೆಲವರು ಸೈನ್ಯದ ಕಾಯಂ ಉದ್ಯೋಗದಲ್ಲಿರದ ಮೀಸಲು ಗುಂಪಿನವರು ಹಾಗೂ ಯುದ್ಧದ ನಂತರ ಪೂರ್ಣಾವಧಿ ಕೆಲಸದ ಆಸೆಯಲ್ಲಿದ್ದರು. ಮಿಕ್ಕ ಕಾಯಂ ಸೇನಾಧಿಕಾರಿಗಳು ತಮ್ಮ ವೃತ್ತಿಯಲ್ಲಿ ಮೇಲೆ ಹೋಗಲು ಅನುಕೂಲವಾಗುವಂತಹ ಹುದ್ದೆಗಳನ್ನು ಬಯಸುತ್ತಿದ್ದವರು. ಅವರೆಲ್ಲರಿಂದಲೂ ಕ್ಯಾಪ್ಟನ್‌ಗೆ ಫೋನ್ ಕರೆಗಳು ಬರಲಾರಂಭಿಸಿದವು. ಯಾವನೋ ಒಬ್ಬ ನಗಣ್ಯ ಸಾರ್ಜೆಂಟ್‌ಗಾಗಿ ಯಾಕೆ ನೀವು ಇಷ್ಟೆಲ್ಲ ಪರಿಶ್ರಮವಹಿಸಿ, ಇದನ್ನು ಇಷ್ಟು ದೂರಕ್ಕೆ ಒಯ್ಯುತ್ತಿದ್ದೀರಿ ಎಂದು ಅವರೆಲ್ಲ ಕೇಳಲಾರಂಭಿಸಿದರು. ಕ್ಯಾಪ್ಟನ್‌ನನ್ನು ಆತನಿಗಿಂತ ಮೇಲಿದ್ದ ತುಕಡಿಯ ಮುಖ್ಯ ಸೇನಾಧಿಕಾರಿ, ಆತನ ಮೇಲಿನ ಅಧಿಕಾರಿ, ಕೊನೆಗೆ ತುಕಡಿಯ ಕಮ್ಯಾಂಡರ್ ಸಹ ತಮ್ಮತಮ್ಮ ಕಛೇರಿಗೆ ಕರೆಸಿಕೊಂಡು ಮಾತನಾಡಿಸಿದರು. ತಮ್ಮನ್ನು ಸಾಕ್ಷಿಗಳಾಗಿ ಕಟಕಟೆಗೆ ಕರೆಸದೇ ಇರುವುದರಿಂದ ಸಂಬಂಧಪಟ್ಟವರೆಲ್ಲರಿಗೂ ಒಳ್ಳೆಯದಾಗುತ್ತದೆಂದೂ, ಕ್ಯಾಪ್ಟನ್‌ಗೂ ಸಹ ಅದರಿಂದ ಒಳ್ಳೆಯದಾಗುತ್ತದೆಂದು ಆ ಮೂವರೂ ಮೇಲಧಿಕಾರಿಗಳು ಸಲಹೆ ಕೊಟ್ಟರು.

ಕ್ಯಾಪ್ಟನ್ ಸಹ ರಿಸರ್ವ್ ಗುಂಪಿನಲ್ಲಿದ್ದಾತ. ಆತನಿಗೂ ನೌಕಾದಳದಲ್ಲಿ ಮುಂದುವರೆಯಲು ಮನಸ್ಸಿತ್ತು. ಹಿರಿಯ ಅಧಿಕಾರಿಗಳಿಗೆ ಬೇಸರ ಉಂಟುಮಾಡುವುದರಿಂದ ತನಗೆ ಸಿಗಬಹುದಾದ ಕಾಯಂ ಉದ್ಯೋಗಕ್ಕೆ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಒಳ್ಳೆಯದಲ್ಲ ಎನ್ನುವುದು ಆತನಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಆದರೆ ಆತ ಹಿಂಜರಿಯಲಿಲ್ಲ. ಅವರೆಲ್ಲರನ್ನು ಕಟಕಟೆಗೆ ಕರೆಸುವುದರಿಂದ ಮಾತ್ರ ಮೊಕದ್ದಮೆಗೆ ಸಂಬಂಧಪಟ್ಟ ಸರಿತಪ್ಪುಗಳನ್ನು ಸಾಬೀತುಪಡಿಸಲು ಸಾಧ್ಯ ಎಂದು ಆತ ತನ್ನ ಮೇಲಧಿಕಾರಿಗಳಿಗೆ ನೇರವಾಗಿ ತಿಳಿಸಿದ.

ಒತ್ತಡ ಹೆಚ್ಚುತ್ತ ಹೋಯಿತು. ಅಲ್ಲಿನ ನೌಕಾ ವಿಭಾಗದ ಹಿರಿಯ ಅಧಿಕಾರಿಗಳೆಲ್ಲ ಒಂದು ಶನಿವಾರದ ಸಂಜೆ ಹೋಟೆಲ್ ಒಂದರಲ್ಲಿ ಪಾರ್ಟಿ ಏರ್ಪಡಿಸಿ, ಅದಕ್ಕೆ ಕ್ಯಾಪ್ಟನ್‌ನನ್ನು ಆಹ್ವಾನಿಸಿದರು. ಆತ ಅಲ್ಲಿಗೆ ಹೋದ ತಕ್ಷಣ ಸಹಾಯಕ ಡಿವಿಷನ್ ಕಮ್ಯಾಂಡರ್ ಹತ್ತಿರ ಹೋಗಿ ಮಾತನಾಡಲು ಸೂಚಿಸಲಾಯಿತು. ಆ ಸಹಾಯಕ ಡಿವಿಷನ್ ಕಮ್ಯಾಂಡರ್ ಬರಲಿರುವ ಕೋರ್ಟ್-ಮಾರ್ಷಲ್ ಬಗ್ಗೆ ಮಾತನಾಡುತ್ತ, ಕ್ಯಾಪ್ಟನ್ ಮಾಡುತ್ತಿರುವುದರ ಬಗ್ಗೆ ತಾನು ವೈಯಕ್ತಿಕವಾಗಿ ಚಿಂತೆಗೊಳಗಾಗಿದ್ದೇನೆಂತಲು, ಅದರಿಂದ ಕ್ಯಾಪ್ಟನ್‌ನ ಕಾಯಂ ಕೆಲಸಕ್ಕೆ ತೊಂದರೆಯಾಗಬಹುದೆಂತಲೂ ತಿಳಿಸಿದ. ಡಿವಿಷನ್ ಕಮ್ಯಾಂಡರ್‌ಗೆ ಸಹ ಈ ಕೇಸಿನ ಆಗುಹೋಗುಗಳ ಬಗ್ಗೆ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ ಎಂದೂ ಸಹ ಆ ಸಹಾಯಕ ಡಿವಿಷನ್ ಕಮ್ಯಾಂಡರ್ ಹೇಳಿದ. ಆ ಪಾರ್ಟಿಗೆ ಬಂದಿದ್ದ ಬೆಟಾಲಿಯನ್‌ನ ಕಮ್ಯಾಂಡರ್ ಸಹ ಕೇಸನ್ನು “ಹಗುರವಾಗಿ” ತೆಗೆದುಕೊಳ್ಳಲು ಕ್ಯಾಪ್ಟನ್‌ಗೆ ಸೂಚಿಸಿದ.

ಆವರೆಲ್ಲರ ಮಾತನ್ನೂ ಕ್ಯಾಪ್ಟನ್ ವಿನಮ್ರವಾಗಿ ಕೇಳಿಸಿಕೊಂಡ. ತನ್ನ ವೃತ್ತಿಜೀವನದ ಭವಿಷ್ಯವೆ ಇಲ್ಲಿ ಪಣವಾಗಿಬಿಟ್ಟಿರುವುದು ಆತನಿಗೆ ಗೊತ್ತಾಯಿತು. ಆದರೆ ಸಾರ್ಜೆಂಟ್ ಅಪರಾಧಿ ಎಂದು ಆತನಿಗೆ ಅನ್ನಿಸಿರಲಿಲ್ಲ ಮತ್ತು ತಾನು ಮಾಡಿರದ ಅಪರಾಧಕ್ಕಾಗಿ ಸಾರ್ಜೆಂಟ್ ಶಿಕ್ಷೆ ಅನುಭವಿಸುವುದು ಸರಿ ಎಂದೂ ಆತನಿಗೆ ಅನ್ನಿಸಲಿಲ್ಲ. ಮತ್ತೊಮ್ಮೆ ಆತ ನಿರ್ಧಾರ ಮಾಡಬೇಕಿತ್ತು. ಮಾಡಿದ. ಸಹಾಯಕ ಡಿವಿಷನ್ ಕಮ್ಯಾಂಡರ್‌ಗೂ, ಬೆಟಾಲಿಯನ್ ಕಮ್ಯಾಂಡರ್‌ಗೂ ತಾನು ಈ ಕೇಸನ್ನು ಹಗುರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದ.

ಅದಾದ ಮಾರನೆಯ ಸೋಮವಾರದ ಮಧ್ಯಾಹ್ನ ಆರೋಪಕ್ಕೊಳಗಾಗಿದ್ದ ಸಾರ್ಜೆಂಟ್ ಕ್ಯಾಪ್ಟನ್‌ನ ಕಚೇರಿಗೆ ಅಚ್ಚರಿಯ ಸುದ್ದಿಯೊಂದಿಗೆ ಓಡುತ್ತ ಬಂದ. ತಾನೀಗ ನೇರವಾಗಿ ಬ್ಯಾರಕ್‌ಗಳಿಂದ ಬರುತ್ತಿದ್ದೇನೆಂತಲೂ, ಅಲ್ಲಿ ತನಗೆ ಈಗ ತಾನೆ 33 ಉಣ್ಣೆಯ ಜಾಕೆಟ್‌ಗಳು ದೊರಕಿದವೆಂತಲೂ ತಿಳಿಸಿದ. ಅವು ಇವರ ನೌಕಾದಳದ ಜಾಕೆಟ್‌ಗಳಾಗಿದ್ದಂತೆ ಕಾಣಿಸದೆ, ಬದಲಿಗೆ ಅಲ್ಲಿದ್ದ ಅಮೆರಿಕದ ಬೇರೆ ನೌಕಾದಳದಿಂದ ತಂದಿದ್ದವಾಗಿದ್ದವು. ಕ್ಯಾಪ್ಟನ್ ಮತ್ತು ಸಾರ್ಜೆಂಟ್ ಇಬ್ಬರೂ ಆ ಜಾಕೆಟ್‌ಗಳನ್ನು ಹೊತ್ತುಕೊಂಡು ಸೈನ್ಯದ ಕಚೇರಿಗೆ ಹೋಗಿ ಅವರಿಂದ ಪಾವತಿಯ ರಸೀತಿ ಪಡೆದರು. ಅದನ್ನು ತೆಗೆದುಕೊಂಡು ತುಕಡಿಯ ಸೇನಾಧಿಕಾರಿಯ ಬಳಿಗೆ ಹೋದ ಸಾರ್ಜೆಂಟ್, ಜಾಕೆಟ್‌ಗಳು ಸಿಕ್ಕವೆಂತಲೂ, ಅವನ್ನು ಹಿಂದಿರುಗಿಸಿ ಲೆಕ್ಕಪತ್ರ ಚುಕ್ತಾ ಮಾಡಲಾಯಿತೆಂತಲೂ ತಿಳಿಸಿದ. ಮಾರನೆಯ ದಿನವೆ ಸಾರ್ಜೆಂಟ್ ಮತ್ತು ಕ್ಯಾಪ್ಟನ್ ಇಬ್ಬರಿಗೂ ಕೋರ್ಟ್-ಮಾರ್ಷಲ್ ಅನ್ನು ರದ್ದು ಮಾಡಲಾಗಿದೆಯೆಂದೂ, ಸಾರ್ಜೆಂಟ್ ಮೇಲಿನ ಅಪಾದನೆಗಳನ್ನು ಹಿಂದೆಗೆದುಕೊಳ್ಳಲಾಗಿದೆಯೆಂದೂ ಸುದ್ದಿ ಬಂತು.

ಅದಾದ ಕೆಲವು ವರ್ಷಗಳ ನಂತರ ಆ ಸಾರ್ಜೆಂಟ್ ಗೌರವಯುತವಾಗಿ ಸೈನ್ಯದ ಕೆಲಸದಿಂದ ಬಿಡುಗಡೆಯಾದ. ಅದಕ್ಕೆ ಮೊದಲು ಆತನಿಗೆ ಮತ್ತೊಮ್ಮೆ ಬಡ್ತಿ ಸಹ ದೊರಕಿತ್ತು. ನಗಣ್ಯನಾಗಿದ್ದ ಸಾರ್ಜೆಂಟ್‌ಗಾಗಿ ತನ್ನ ವೃತ್ತಿಯನ್ನೆ ಪಣಕ್ಕಿಟ್ಟಿದ್ದ ಕ್ಯಾಪ್ಟನ್‌ಗೆ ಸಹ ತಾನು ಬಯಸಿದ್ದ ಸೈನ್ಯದ ಕಾಯಂ ಕೆಲಸ ಸಿಕ್ಕಿತು. ಸೈನ್ಯದಲ್ಲಿ ಮುವ್ವತ್ತು ವರ್ಷ ಪ್ರಾಮಾಣಿಕವಾಗಿ ದುಡಿದ ಆ ಕ್ಯಾಪ್ಟನ್ ಹಂತಹಂತವಾಗಿ ಮೇಲೇರಿ ಕೊನೆಗೆ ಕರ್ನಲ್ ಆಗಿ ನಿವೃತ್ತಿ ಹೊಂದಿದ.

ಇಲ್ಲಿ, ಈ ಮೇಲಿನ ಕೇಸಿನ ಆಗುಹೋಗುಗಳ ಬಗ್ಗೆ ಡಿವಿಷನ್ ಕಮ್ಯಾಂಡರ್‌ಗೆ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ ಎಂದು ಹೇಳಲಾಗಿತ್ತಲ್ಲವೆ. ತ್ಸಿಂಗ್ಟಾವೊದ ಕೋರ್ಟ್-ಮಾರ್ಷಲ್ ಘಟನೆ ಆದ ಏಳೆಂಟು ವರ್ಷಗಳ ನಂತರ, ಆ ಡಿವಿಷನ್ ಕಮ್ಯಾಂಡರ್ ಜೊತೆ ನಿಕಟವಾಗಿ ಕೆಲಸ ಮಾಡಲು ಈ ಕ್ಯಾಪ್ಟನ್ ಆಯ್ಕೆಯಾದ. ಆ ಕಮ್ಯಾಂಡರ್ ಈಗ ನೌಕಾಪಡೆಯ ಕಮ್ಯಾಂಡಿಂಗ್ ಜನರಲ್ ಆಗಿದ್ದ. ಆತನಿಗೆ ತಾನು ಪ್ರಾಮಾಣಿಕವಾಗಿ ನಂಬಬಲ್ಲ ಒಬ್ಬ ನಂಬಿಕಸ್ಥ ಮನುಷ್ಯ ಬೇಕಾಗಿತ್ತು. ಕ್ಯಾಪ್ಟನ್‌ನನ್ನು ನಂಬಬಹುದು ಎಂದು ಕಮ್ಯಾಂಡರ್‌ಗೆ ಗೊತ್ತಿತ್ತು.

ಈ ಕತೆಗೇನೋ ಸುಖಾಂತ್ಯವಿದೆ. ಆದರೆ ಇದರಲ್ಲಿ ಬರುವ ಸ್ಥೈರ್ಯ, ಕೆಚ್ಚು ಮತ್ತು ತೊಂದರೆಗಳು ವಾಸ್ತವವಾದವು. ನನಗೆ ಈ ಕತೆ ಗೊತ್ತಿರಲು ಕಾರಣವೇನೆಂದರೆ, ಈ ಎಲ್ಲಾ ತೊಂದರೆಗಳನ್ನು ಎದುರಿಸುವ ಧೈರ್ಯ ತೋರಿದ ಆ ಮನುಷ್ಯನ ಪರಿಚಯ ನನಗಿತ್ತು. ಆತ ನನ್ನಪ್ಪ.

ನಾವು ದುರ್ಬಲರಿಗೆ ಸಹಾನುಭೂತಿ ತೋರಿಸುತ್ತೇವೆ. ಅವರೊಡನೆ ಗುರುತಿಸಿಕೊಳ್ಳುತ್ತೇವೆ. ಎಲ್ಲಾ ಎಡರುತೊಡರುಗಳನ್ನು ಎದುರಿಸಿ ಕೊನೆಗೂ ಗೆಲ್ಲುವ ದುರ್ಬಲರ ಮೇಲಿನ ಕತೆಗಳನ್ನು ಕೇಳಲು ಇಷ್ಟಪಡುತ್ತೇವೆ. ಅವರು ಗೆಲ್ಲಲೆಂದು ಬಯಸುತ್ತೇವೆ.

ಆದರೆ ನಮ್ಮ ಕುಟುಂಬವಾಗಲಿ, ನಮ್ಮ ವೃತ್ತಿಯಾಗಲಿ, ಅಥವ ನಮ್ಮ ಹೆಸರಾಗಲಿ ಪಣವಾಗಿ ಬಿಟ್ಟಾಗ ಸಾಮಾನ್ಯವಾಗಿ ನಾವು ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ.

 

ಯಾಕೆಂದರೆ, ದುರ್ಬಲನು ಗೆಲ್ಲುವ ಸಾಧ್ಯತೆಗಳಿಗಿಂತ ಸೋಲುವ ಸಾಧ್ಯತೆಗಳೆ ಜಾಸ್ತಿ. ಆ ದುರ್ಬಲ ಮನುಷ್ಯನು ಸತ್ಯವಂತನಾಗಿದ್ದರೂ, ನ್ಯಾಯ ಆತನ ಪರ ಇದ್ದರೂ, ನಮ್ಮ ಹೃದಯದಲ್ಲಿ ನಮ್ಮ ಬೆಂಬಲ ಆತನಿಗೇ ಇದ್ದರೂ, ಅವನನ್ನು ಬಹಿರಂಗವಾಗಿ ಬೆಂಬಲಿಸುವುದು ಸೋಲನ್ನು ನಮ್ಮ ಮೈಮೇಲೆ ಎಳೆದುಕೊಂಡಂತೆ; ಕೆಲವು ಜನರನ್ನು, ಪಟ್ಟಭದ್ರರನ್ನು ಎದುರುಹಾಕಿಕೊಂಡಂತೆ. ಅದರಿಂದ ಕೆಲವೊಮ್ಮೆ ನಮ್ಮ ಕೆಲಸವನ್ನೆ ಕಳೆದುಕೊಳ್ಳಬೇಕಾಗಬಹುದು; ಸಿಗಬೇಕಾದ ಬಡ್ತಿ ಸಿಗದೆ ಹೋಗಬಹುದು; ಅಥವ ವೃತ್ತಿಯಲ್ಲಿ ಯಶಸ್ಸು ಸಿಗದೆ ಹೋಗಬಹುದು. ಹಾಗಾಗಿ, ನಾವು ದುರ್ಬಲನನ್ನು ಪ್ರೀತಿಸುತ್ತೇವೆ, ಆದರೆ ಸಬಲರನ್ನು ಹಿಂಬಾಲಿಸುತ್ತೇವೆ. ಯಶಸ್ವಿಯಾಗಿ ಓಡುತ್ತಿರುವ ಬಂಡಿಯನ್ನು ಹತ್ತಿ, ಯಾವುದು ಮೇಲ್ನೋಟಕ್ಕೆ ಗೌರವನೀಯವಾಗಿ ಕಾಣಿಸುವುದೊ ಅದನ್ನಷ್ಟೆ ಮಾಡುತ್ತೇವೆ. ಎಲ್ಲವನ್ನು ಅನುಸರಿಸಿಕೊಂಡು ಹೋಗುತ್ತೇವೆ. ಎಲ್ಲದಕ್ಕೂ ತಲೆಯಾಡಿಸುತ್ತೇವೆ. ಗಾಳಿ ಎತ್ತ ಬೀಸುತ್ತದೊ ಅತ್ತ ಹಾರುತ್ತೇವೆ.

ಎಲ್ಲ ದುರ್ಬಲರೂ ಸತ್ಯವಂತರಲ್ಲದಿರಬಹುದು. ಹಾಗೆಯೆ ದೀನದುರ್ಬಲನ ಪ್ರತಿಯೊಂದು ಸಮಸ್ಯೆಯೂ ಅಷ್ಟೇನೂ ಮುಖ್ಯವಾದದ್ದು ಆಗಿಲ್ಲದೆ ಇರಬಹುದು. ಆದರೆ ಕೆಲವಂತೂ ಖಂಡಿತವಾಗಿ ಮುಖ್ಯವಾಗಿರುತ್ತವೆ. ನಿಮ್ಮ ಸಹಾಯಕ್ಕೆ ಯೋಗ್ಯನಾದ, ಅದು ಬಹಳ ಅಗತ್ಯವೂ ಆಗಿರುವ ದುರ್ಬಲನು ನಿಮಗೆ ಕಾಲಕಾಲಕ್ಕೆ ಕಾಣಿಸುತ್ತಿರುತ್ತಾನೆ. ನೀವು ಏನಾಗಿರುವಿರೊ, ಏನನ್ನು ನಂಬಿದ್ದೀರೊ, ಅದಕ್ಕಾಗಿಯಾದರೂ ನೀವು ಆತನಿಗೆ ಸಹಾಯ ಮಾಡಬೇಕು. ನಿಮ್ಮ ಜೀವನದ ಕೊನೆಯ ಗಳಿಗೆಯಲ್ಲಿ ಒಮ್ಮೆ ಹಿಂದಿರುಗಿ ನಿಮ್ಮ ಜೀವನವನ್ನು ನೋಡಿಕೊಂಡಾಗ, ಆ ಕೆಲವಾದರೂ ದುರ್ಬಲರ, ದಲಿತರ ಪರವಾಗಿ ಹೋರಾಡಿದ್ದು ನೀವು ಮಾಡಿದ ಕೆಲಸಗಳಲ್ಲೆಲ್ಲ ಅತ್ಯಂತ ಅರ್ಥಪೂರ್ಣವಾದದ್ದು ಎಂದು ನಿಮಗೆ ಅರಿವಾಗುತ್ತದೆ.

ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.
ಹಾಗಿದ್ರೂ, ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply