ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.

ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬಹಳ ವಯಸ್ಸಾಗಿದ್ದ ಹಿರಿಯರೊಬ್ಬರಿಗೆ ಡ್ರೈವರ್ ಆಗಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದೆ. ಅವರು ಜೀವನದಲ್ಲಿ ಸಾಧನೆ ಮಾಡಿದ್ದ ದೊಡ್ಡ ಮನುಷ್ಯರಾಗಿದ್ದರು. ಒಂದು ದೊಡ್ಡ ಉದ್ದಿಮೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹಳ ಬುದ್ಧಿವಂತರೂ ಆಗಿದ್ದ ಅವರು ಆ ಮುಪ್ಪಿನಲ್ಲಿಯೂ ತಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಿದ್ದರಾದರೂ ಅಷ್ಟೇನೂ ಚೆನ್ನಾಗಿ ಕೆಲಸ ಮಾಡುತ್ತಿಲ್ಲದ ದೇಹದಲ್ಲಿ ಬಂಧಿಯಾಗಿಬಿಟ್ಟಿದ್ದರು. ಅವರಿಗೆ ನಡೆಯಲು ಬಹಳ ಕಷ್ಟವಾಗುತ್ತಿತ್ತು. ಮೆಟ್ಟಲುಗಳನ್ನು ಹತ್ತಲು ಆಗುತ್ತಲೆ ಇರಲಿಲ್ಲ. ಅನ್ನನಾಳದ ತೊಂದರೆಯಿಂದಾಗಿ ಊಟತಿಂಡಿ ತಿನ್ನಲು ಬಹಳ ತ್ರಾಸವಾಗುತ್ತಿತ್ತು. ತಿನ್ನುವಾಗ ಆಗಾಗ್ಗೆ ವಾಂತಿಯಾಗಿಬಿಡುತ್ತಿತ್ತು. ಮುಖಕ್ಷೌರ ಮಾಡಿಕೊಳ್ಳುವುದಾಗಲಿ, ಸ್ನಾನ ಮಾಡುವುದಾಗಲಿ ಪ್ರಯಾಸವಾಗಿದ್ದರಿಂದ ವೇಷಭೂಷಣಗಳಲ್ಲಿ ಒಪ್ಪಓರಣವಿರಲಿಲ್ಲ. ಗಲೀಜಾಗಿ, ಅವಲಕ್ಷಣವಾಗಿ ಕಾಣಿಸುತ್ತಿದ್ದರು. ಆಗಾಗ್ಗೆ ಗಬ್ಬೂ ಹೊಡೆಯುತ್ತಿದ್ದರು.

ಅವರನ್ನು ಪಾರ್ಕಿಗೆ, ಹೋಟೆಲಿಗೆ, ಅಥವ ಅವರು ಇಷ್ಟಪಟ್ಟ ಜಾಗಕ್ಕೆ ಕರೆದುಕೊಂಡು ಹೋಗುವುದು ನನ್ನ ಕೆಲಸವಾಗಿತ್ತು. ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಿಲ್ಲದ, ಸಲೀಸಾಗಿ ನಡೆದು ಹೋಗಬಹುದಾದ ದಾರಿಯಲ್ಲಿ ಅವರನ್ನು ಕರೆದುಕೊಂಡು ಹೋಗುವುದು ನನ್ನ ಕರ್ತವ್ಯವಾಗಿತ್ತು. ಹಾಗಾಗಿ, ಆ ಸಮಯದಲ್ಲಿ ಮೆಟ್ಟಿಲು, ಪಾದಚಾರಿ ರಸ್ತೆಯಲ್ಲಿಯ ಏರಿಳಿತಗಳು, ಎಲಿವೇಟರ್‌ಗಳ ಮೂಲಕ ಪ್ರಪಂಚವನ್ನು ನೋಡಲು ಕಲಿತೆ. ಅವರು ಕಾರಿನಿಂದ ಇಳಿಯಲು, ಹತ್ತಲು ಸಹಾಯ ಮಾಡುತ್ತಿದ್ದೆ. ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದೆ. ಊಟ ಮಾಡುತ್ತ ಮೈಮೇಲೆಲ್ಲ ಚೆಲ್ಲಿಕೊಳ್ಳುತ್ತಿದ್ದರಿಂದ ಆ ಸಮಯದಲ್ಲಿ ಅವರ ಅಂಗಿ ಮತ್ತು ಪ್ಯಾಂಟ್ ಒರೆಸಲು ಹಾಗೂ ವಾಂತಿ ಮಾಡಿಕೊಂಡಾಗ ಟೇಬಲ್ ಒರೆಸಲು ಸದಾ ಸಿದ್ಧನಾಗಿ ಇರುತ್ತಿದ್ದೆ. ಪ್ರತಿ ಏರುತಗ್ಗಿನಲ್ಲೂ, ಪ್ರತಿ ಹೆಜ್ಜೆಗೂ ಅವರಿಗೆ ಸಹಾಯ ಮಾಡುತ್ತಿದ್ದೆ.

ಇದೆಲ್ಲದರಿಂದಾಗಿ ನಾವು ನಿಜಕ್ಕೂ ಸ್ನೇಹಿತರಂತೆ ಇರಬೇಕಿತ್ತು. ನನಗೆ ಅವರು ಇಷ್ಟವಾಗುತ್ತಿದ್ದರು. ಅವರ ಅನುಭವಗಳನ್ನು ಕೇಳಲು ಇಷ್ಟವಾಗುತ್ತಿತ್ತು. ಅವರ ಸಾಧನೆಗಳಿಂದ ನಾನು ನಿಜಕ್ಕೂ ಪ್ರಭಾವಿತನಾಗಿದ್ದೆ. ಹೀಗಿದ್ದರೂ, ನನ್ನ ಬಗ್ಗೆ ಅವರು ಯಾವಾಗಲೂ ಅಸಮಧಾನದಿಂದ ಸಿಡುಕುತ್ತಿದ್ದದ್ದನ್ನು ಮಾತ್ರ ಒಪ್ಪಿಕೊಳ್ಳಲು ಕಷ್ಟವಾಗುತ್ತಿತ್ತು. ಅವರು ಕಾರಿನಿಂದ ಇಳಿಯುವಾಗ ಸರಿಯಾಗಿ ಸಹಾಯ ಮಾಡಲಿಲ್ಲ; ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಬಿಟ್ಟಿದ್ದೆ; ಕೈಯನ್ನು ಬಹಳ ಸಡಿಲವಾಗಿ ಹಿಡಿದುಕೊಂಡಿದ್ದೆ; ಊಟಕ್ಕೆ ಕೆಟ್ಟ ಹೋಟೆಲ್ ಅನ್ನು ಆಯ್ಕೆ ಮಾಡಿರುವೆ; ಕಿಟಕಿಯ ಹತ್ತಿರದ, ಚಳಿಯಾಗುತ್ತಿರುವ ಟೇಬಲ್ ಹಿಡಿದಿದ್ದೇವೆ; ಅವರು ಬಯಸಿದ್ದ ತಿಂಡಿ ಅಲ್ಲಿ ಸಿಗಲಿಲ್ಲ; ಹೀಗೆ ದೂರುಗಳೋ ದೂರುಗಳು. ನಾನು ಅವರಿಗೆ ಸಹಾಯ ಮಾಡಲು ಆರಂಭಿಸಿ ವಾರಗಳು ಉರುಳಿದವು. ಅನೇಕ ಕಡೆ ಹೋಗಿ ಬರುತ್ತಲೆ ಇದ್ದೇವೆ. ಆದರೆ ಅವರ ಪ್ರಕಾರ ಯಾವಾಗಲೂ ನಾನು ತಪ್ಪನ್ನೆ ಮಾಡುತ್ತಿದ್ದೇನೆ. ಒಮ್ಮೊಮ್ಮೆ ನನಗೆ ವಿಪರೀತ ಕೋಪ ಬಂದು ಬಿಡುತ್ತಿತ್ತು. ಅಂತಹ ಸಮಯದಲ್ಲೆಲ್ಲ “ಛೇ, ನಾನು ಏನೊ ಸಹಾಯ ಮಾಡಲು ಎಂದು ಬಂದರೆ,” ಎಂದು ಅರಚಲು ಬಾಯಿಗೆ ಬಂದು ಬಿಡುತ್ತಿತ್ತು. ಆದರೂ ನಾನು ಬಾಯಿ ಮುಚ್ಚಿಕೊಂಡು ಇರುತ್ತಿದ್ದೆ.

ಒಂದು ದಿನ ಊಟಕ್ಕೆಂದು ಹೊರಗೆ ಹೋಗಲು ಅವರು ಸಿದ್ಧವಾಗುತ್ತಿದ್ದರು. ನಾನು ಕಾಯುತ್ತ ನಿಂತಿದ್ದೆ. ಆಗ, ಅವರಿರುವ ಪರಿಸ್ಥಿತಿಯಲ್ಲಿ ಯಾರೇ ಇರಲಿ, ಅವರಿಗೆ ತಮ್ಮ ಬಗ್ಗೆ ಏನನ್ನಿಸುತ್ತದೆ ಎಂದು ಯೋಚಿಸಲು ಪ್ರಾರಂಭಿಸಿದೆ. ತನ್ನ ಕೆಲಸವನ್ನೂ ಮಾಡಿಕೊಳ್ಳಲಾಗದ ಸ್ಥಿತಿ ಒಬ್ಬ ಮನುಷ್ಯನಿಗೆ ಆಗಿಬಿಟ್ಟಾಗ ಆತನಿಗೆ ಹೇಗೆ ಅನ್ನಿಸುತ್ತದೆ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಆಗ ನನಗೆ ಅರ್ಥವಾದದ್ದು ಏನೆಂದರೆ, ಆ ಮುದುಕಪ್ಪನಿಗೆ ನನ್ನ ಬಗ್ಗೆ ಕಿರಿಕಿರಿ ಆಗುತ್ತಿಲ್ಲ. ಬದಲಿಗೆ, ಕಾರಿನಿಂದ ಸ್ವತಃ ತಾವೆ ಇಳಿಯಲಾಗದ್ದಕ್ಕೆ, ಯಾರ ಆಸರೆಯೂ ಇಲ್ಲದೆ ನಡೆಯಲಾಗದ್ದಕ್ಕೆ, ಮೆಟ್ಟಲುಗಳನ್ನು ಹತ್ತಲಾಗದ್ದಕ್ಕೆ, ವಾಂತಿ ಮಾಡದೆ ತಿನ್ನಲು ಆಗದೆ ಇರುವುದಕ್ಕೆ, ಅವರಿಗೆ ತಮ್ಮ ಬಗ್ಗೆಯೇ ಕಿರಿಕಿರಿ ಆಗುತ್ತಿದೆ. ಅವರಿಗೆ ನನ್ನ ಮೇಲೆ ಕೋಪ ಇಲ್ಲ. ಬದಲಿಗೆ ತಮ್ಮ ಜೀವನದ ಬಗ್ಗೆಯೇ ಕೋಪ ಇದೆ. ಇದು ಅರ್ಥವಾದ ಮೇಲೆ ನನಗೆ ಎಲ್ಲವೂ ಸುಲಭವಾಗಿಬಿಟ್ಟಿತು. ಆಮೇಲೆಯೂ ಅವರು ಗೊಣಗುವುದನ್ನು, ರೇಗುವುದನ್ನು ನಿಲ್ಲಿಸಲಿಲ್ಲ, ಆದರೆ ಅವರ ಗೊಣಗಾಟ ನನಗೆ ಅಸಮಧಾನ ಉಂಟು ಮಾಡುತ್ತಿರಲಿಲ್ಲ.

ಯಾವುದೊ ಒಂದು ವಿಷಯಕ್ಕೆ ಒಂದಲ್ಲ ಒಂದು ಸಮಯದಲ್ಲಿ ನಮಗೆಲ್ಲರಿಗೂ ಸಹಾಯ ಬೇಕಿರುತ್ತದೆ. ಹೊಸದನ್ನು ಕಲಿಯಲು, ಸಮಸ್ಯೆಗಳನ್ನು ನಿಭಾಯಿಸಲು, ಸಮಯ ಹೊಂದಿಸಿಕೊಳ್ಳಲು, ಹಣದ ತಾಪತ್ರಯಗಳಿಗೆ, ಜೀವನದಲ್ಲಿನ ಬೇರೆಬೇರೆ ತೊಂದರೆಗಳಿಗೆ ಅನೇಕ ರೀತಿಯಲ್ಲಿ ಅನೇಕರಿಂದ ಸಹಾಯ ಬೇಕಾಗಿರುತ್ತದೆ. ನಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು, ನೈತಿಕ ದ್ವಂದ್ವಗಳನ್ನು ಪರಿಹರಿಸಿಕೊಳ್ಳಲು ಇನ್ನೊಬ್ಬರ ಸಹಾಯ ಬೇಕೇ ಬೇಕು. ಯಾರಿಗೂ ಎಲ್ಲವೂ ಗೊತ್ತಿರುವುದಿಲ್ಲ ಹಾಗೂ ಎಲ್ಲವನ್ನೂ ಒಬ್ಬರೇ ಮಾಡಲು ಸಾಧ್ಯವೂ ಇಲ್ಲ. ಯಾವಾಗ ನಮಗೆ ಸಹಾಯ ಬೇಕು ಮತ್ತು ಅದು ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳುವುದು ನಮ್ಮ ಉಳಿವಿಗೆ, ಅಸ್ತಿತ್ವಕ್ಕೆ, ಸಂತೋಷಕ್ಕೆ ಅತ್ಯವಶ್ಯಕ.

ಸಹಾಯದ ಅಗತ್ಯ ಇದ್ದರೂ ಕೆಲವರು ತಮಗೆ ಅದರ ಅಗತ್ಯ ಇಲ್ಲ ಎಂದು ನಿರಾಕರಿಸುತ್ತಾರೆ. ಅವರು ತಮ್ಮ ಅಸಾಮರ್ಥ್ಯಗಳನ್ನು ಎದುರಿಸಲು ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ ತಮಗೆ ಸಹಾಯದ ಅವಶ್ಯಕತೆ ಇದೆ ಎಂದು ಗೊತ್ತಿರುತ್ತದೆ, ಆದರೆ ಯಾರಾದರು ಸಹಾಯ ಮಾಡಲು ಬಂದರೆ ಸಿಟ್ಟಾಗುತ್ತಾರೆ. ಅಸಹಾಯಕರಂತೆ ಕಾಣುವುದಾಗಲಿ, ಇನ್ನೊಬ್ಬರ ಮೇಲೆ ಅವಲಂಬಿತವಾಗುವುದಾಗಲಿ ಅವರಿಗೆ ಇಷ್ಟವಾಗುವುದಿಲ್ಲ್ಲ. ಅವರಿಗೆ ಸಹಾಯದ ಅಗತ್ಯವಿರುವುದು ಎದ್ದು ಕಾಣಿಸುತ್ತಿದ್ದರೂ, ನೀವು ಸಹಾಯ ಮಾಡಲು ಮುಂದಾದ ತಕ್ಷಣ ಅದಕ್ಕೆ ಕೆಟ್ಟದಾಗಿ ಪ್ರತಿಕ್ರಿಯಿಸಿ ಬಿಡುತ್ತಾರೆ. ಕೆಲವೊಮ್ಮೆ ನಿಮ್ಮ ಮೇಲೆ ಹಲ್ಲೆಯೂ ಮಾಡಿ ಬಿಡುತ್ತಾರೆ.

ಆಗೆಲ್ಲ ಅವರು ತಮ್ಮ ಆತ್ಮಾಭಿಮಾನದೊಂದಿಗೆ, ತಾವೆ ಕಟ್ಟಿಕೊಂಡಿರುವ ತಮ್ಮ ಇಮೇಜಿನೊಂದಿಗೆ ಗುದ್ದಾಡುತ್ತಿರಬಹುದು. ತಾವೀಗ ಏನು ಮಾಡಬೇಕು ಎಂದಾಗಲಿ, ತಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂಬುದಾಗಲಿ, ಹಿಂದೆ ತಾವು ಚೆನ್ನಾಗಿದ್ದಾಗ ಇದ್ದಂತೆ ಈಗ ಬದುಕು ಇಲ್ಲ ಎಂಬುದಾಗಲಿ ಅವರಿಗೆ ಗೊತ್ತಾಗದೆ ಹೋಗಿರಬಹುದು.

ಕೆಲವೊಮ್ಮೆ ಸಿಗುವ ಸಹಾಯಗಳೂ ಕೆಟ್ಟದಾಗಿರುತ್ತವೆ, ಅಥವ ಕೆಟ್ಟ ರೀತಿಯಲ್ಲಿ ಕೊಡಲಾಗಿರುತ್ತದೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡುವಾಗ ಅವರ ಘನತೆಯನ್ನು ಕಾಪಾಡುವ ಹಾಗೆ ಮತ್ತು ಅವರಿಗೆ ಅದನ್ನು ಸ್ವೀಕರಿಸಲು ಇಲ್ಲವೆ ನಿರಾಕರಿಸಲು ಆಯ್ಕೆ ಇರುವ ಹಾಗೆ ಕೊಡಬೇಕು. ಸಹಾಯ ಕೊಡಲು ಮುಂದಾಗುವುದಕ್ಕಿಂತ ಮೊದಲು ಅವರಿಗೆ ಅದರ ಅವಶ್ಯಕತೆ ನಿಜವಾಗಲೂ ಇದೆ ಎನ್ನುವುದನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕು. ನಾವು ನೀಡುವ ಸಹಾಯ ಸಮಂಜಸವಾಗಿರುವಂತೆ, ಗೌರವಯುತವಾಗಿರುವಂತೆ ನೋಡಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯದ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಏನೋ ದೊಡ್ಡ ಉಪಕಾರ ಮಾಡುತ್ತಿರುವಂತೆ ಆಗಲಿ, ದೊಡ್ಡಸ್ತಿಕೆ, ಯಜಮಾನಿಕೆ ಮಾಡುವುದಾಗಲಿ ಮಾಡಬಾರದು. ಸಹಾಯದ ಅಗತ್ಯ ಇರುವ ಕೆಲವರು ಈ ಮುಂಚೆ ವಿಶ್ವಾಸದ್ರೋಹಕ್ಕೆ ಒಳಗಾಗಿರಬಹುದು, ಅವರ ನಿರೀಕ್ಷೆಗಳು ಸುಳ್ಳಾಗಿರಬಹುದು. ಹಾಗಾಗಿ, ಮತ್ತೊಮ್ಮೆ ಆಶಾಭಂಗಕ್ಕೊಳಗಾಗುವುದನ್ನಾಗಲಿ, ದ್ರೋಹಕ್ಕೊಳಗಾಗುವುದನ್ನಾಗಲಿ ಅವರು ಬಯಸುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಅವರು ಸಹಾಯಕ್ಕೆ ತೆರೆದುಕೊಳ್ಳದೆ ಹೋಗಬಹುದು. ನಮ್ಮನ್ನು ಬೇಗನೆ ನಂಬದೆ ಇರಬಹುದು.

ಇನ್ನೊಬ್ಬರಿಗೆ ನಿಜವಾಗಲೂ ಸಹಾಯದ ಅವಶ್ಯಕತೆ ಇದೆಯಾ ಎಂದು ನಿಮಗೆ ಸಂದೇಹ ಹುಟ್ಟಿದ ಸಮಯದಲ್ಲಿ ಮೂಲಭೂತ ಅಗತ್ಯಗಳ ಬಗ್ಗೆ ಯೋಚಿಸಿ ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಊಟ, ಬಟ್ಟೆ, ವಸತಿ, ಇವು ಮನುಷ್ಯನಿಗೆ ಮೂಲಭೂತ ಅಗತ್ಯಗಳು. ಅದರ ಮೇಲೆ ಮನುಷ್ಯನಿಗೆ ಸ್ನೇಹಿತರು ಬೇಕು. ಅರ್ಥಪೂರ್ಣವಾದ ಚಟುವಟಿಕೆಗಳು ಬೇಕು. ಜನರನ್ನು ಗಮನಿಸುವುದರಿಂದ, ಪ್ರಶ್ನೆಗಳನ್ನು ಕೇಳುವುದರಿಂದ, ಅವರು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳುವುದರಿಂದ, ಅವರಿಗೆ ಬೇಕಾದ ಅಗತ್ಯಗಳು ಏನು ಎಂದು ನೀವು ಕಂಡುಕೊಳ್ಳಬಹುದು. ಅದಾದ ಮೇಲೆ ಅದನ್ನು ನೀಡುವ ಅತ್ಯುತ್ತಮ ವಿಧಾನದ ಬಗ್ಗೆ ಯೋಚಿಸಿ.

ನೀವು ಯಾವ ಕಡೆ ನೋಡಿದರೂ ಸಹಾಯದ ಅಗತ್ಯ ಇರುವ ಜನ ನಿಮಗೆ ಕಾಣಿಸುತ್ತಾರೆ. ಯಾವಾಗಲೂ ನಿಮ್ಮ ಕೈಲಾದ ಸಹಾಯ ಮಾಡುತ್ತಲೆ ಇರಿ. ಸಹಾಯ ಮಾಡಲು ಮುಂದಾದ ತಕ್ಷಣ ಅಥವ ನಂತರ ಕೆಲವೊಮ್ಮೆ ಅವರು ನಿಮ್ಮ ಮೇಲೆಯೆ ದಾಳಿ ಮಾಡಬಹುದು. ಆದರೆ ನೆನಪಿಡಿ, ಆ ದಾಳಿ ನಿಮ್ಮ ಮೇಲೆ ಮಾಡಿದ ದಾಳಿ ಆಗಿಲ್ಲದೆ ಇರಬಹುದು. ಅವರು ತಮ್ಮ ಸ್ಥಿತಿಯ ಮೇಲೆಯೆ ಕೋಪಗೊಂಡಿರಬಹುದು. ಅಥವ ತಮ್ಮ ಅಸಹಾಯಕ ಭಾವನೆಗಳ ವಿರುದ್ಧ ಹೋರಾಡುತ್ತಿರಬಹುದು. ಅದರೆ ಆ ದಾಳಿಗಳು ನಿಮ್ಮನ್ನು ನಿಲ್ಲಿಸಲು ಬಿಡಬೇಡಿ. ಬೇರೆಯವರು ನಿಮಗೆ ಅನೇಕ ಸಲ ಸಹಾಯ ಮಾಡಿದ್ದಾರೆ. ಮಾಡುತ್ತಲೆ ಇದ್ದಾರೆ. ಈಗ ನಿಮ್ಮ ಸರದಿ. ಅವಶ್ಯಕತೆ ಇರುವವರಿಗೆ ಸಮಂಜಸವಾದ ರೀತಿಯಲ್ಲಿ ಸಹಾಯ ಮಾಡುವುದರಿಂದ ಹಾಗೂ ಅವರ ಜೀವನದ ಗುಣಮಟ್ಟ ಉತ್ತಮವಾಗಲು ಶ್ರಮಿಸುವುದರಿಂದ ನಿಮ್ಮಲ್ಲಿ ಆಳವಾದ ಅರ್ಥ ಹುಟ್ಟುತ್ತದೆ. ಅದನ್ನು ಸಂತೋಷದಿಂದ ಅನುಭವಿಸಿ.

ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.
ಆದ್ರೂ, ಸಹಾಯ ಮಾಡಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

Leave a Reply