ಈ ಅಸಂಗತಸತ್ಯದ ಜೀವನವನ್ನು ಜೀವಿಸುವುದು ಹೇಗೆ?

ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್‌ಗಳನ್ನು ನೀವು ಒಪ್ಪಿಕೊಂಡದ್ದೇ ಆದರೆ, ಈ ಹುಚ್ಚು ಪ್ರಪಂಚದಲ್ಲಿ ಆತ್ಮಾರ್ಥವನ್ನು ಕಂಡುಕೊಳ್ಳುತ್ತೀರಿ. ಆ ಮೂಲಕ ಈ ಅಸಂಗತ ಮಾತುಗಳ, ವಿರುದ್ಧಾರ್ಥದ ಜೀವನವನ್ನು ಜೀವಿಸಲು ಸ್ವತಂತ್ರರಾಗುತ್ತೀರಿ.

ಉತ್ತಮ ಜೀವನಕ್ಕೆ ಹತ್ತು ಸೂತ್ರಗಳಾದ ಇವನ್ನು ಪಾಲಿಸಿದರೆ ನೀವು ನಿಜವಾಗಲೂ ಯಾವ ಮನುಷ್ಯನಾಗಬೇಕಿದೆಯೊ ಅದು ಆಗಲು ಸಾಧ್ಯವಾಗುತ್ತದೆ. ನಿಮಗೆ ತೃಪ್ತಿ ಕೊಡದ, ಜೀವನದ ಪರಮಾರ್ಥಗಳಲ್ಲದ ಲೌಕಿಕ ವಿಷಯಗಳಿಂದ ಇದು ನಿಮ್ಮನ್ನು ವಿಮೋಚನೆ ಗೊಳಿಸುತ್ತದೆ. ಈ ಬದುಕಿನಲ್ಲಿ ನಿಜವಾಗಲೂ ಯಾವುದು ಮುಖ್ಯವೊ ಮತ್ತು ಯಾವುದು ಬದುಕನ್ನು ಸಂಪನ್ನಗೊಳಿಸುವುದೊ ಅದರ ಮೇಲೆ ನಿಮ್ಮ ಗಮನ ಕೇಂದ್ರೀಕೃತವಾಗುತ್ತದೆ.

ಲೌಕಿಕ ಯಶಸ್ಸಿನ ಜನಪ್ರಿಯ ಉದಾಹರಣೆಗಳಾದ ಹಣ, ಅಧಿಕಾರ, ಅಥವ ಕೀರ್ತಿಯ ಮೇಲೆ ಈ ಸೂತ್ರಗಳು ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದಿಲ್ಲ. ಬದಲಿಗೆ, ನೀವು ಇತರರನ್ನು ಪ್ರೀತಿಸುವುದರಿಂದ ಸಿಗುವ ಸಂತೋಷದ ಮೇಲೆ, ಒಳ್ಳೆಯದನ್ನು ಮಾಡುವುದರ ಮೇಲೆ, ಪ್ರಾಮಾಣಿಕರಾಗಿ ಇರುವುದರ ಮೇಲೆ, ದೊಡ್ಡದಾಗಿ ಆಲೋಚನೆ ಮಾಡುವುದರ ಮೇಲೆ, ದೀನದುರ್ಬಲದಲಿತರ ಪರವಾಗಿ ಹೋರಾಡುವುದರ ಮೇಲೆ, ಕಟ್ಟುವುದರ ಮೇಲೆ, ಇತರರಿಗೆ ಸಹಾಯ ಮಾಡುವುದರ ಮೇಲೆ, ಮತ್ತು ನಿಮ್ಮಲ್ಲಿಯ ಅತ್ಯುತ್ತಮವಾದದ್ದನ್ನೆಲ್ಲ ಈ ಪ್ರಪಂಚಕ್ಕೆ ಕೊಡುವುದರ ಮೇಲೆ, ಅದು ಕೇಂದ್ರಿತವಾಗಿದೆ. ನೀವು ಮಾಡುವ ಕ್ರಿಯೆಯಿಂದ ಮುಂದಕ್ಕೆ ಏನಾದರೂ ಆಗುತ್ತದೊ ಬಿಡುತ್ತದೊ, ಆದರೆ, ನೀವು ಮಾಡುವ ಕ್ರಿಯೆ ತನ್ನಷ್ಟಕ್ಕೆ ತಾನೆ ಪರಿಪೂರ್ಣವಾದದ್ದು. ನೀವು ಈ ಹತ್ತು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವನ್ನೇ ಜೀವಿಸಿದಾಗ, ನೀವು ಮಾಡುವ ಪ್ರತಿಯೊಂದು ಕೆಲಸವೂ ಸಂಪೂರ್ಣವಾದದ್ದೆ ಆಗುತ್ತದೆ. ಯಾಕೆಂದರೆ, ಪ್ರತಿಯೊಂದು ಕಾರ್ಯವೂ ಅದರದೇ ಆದ ಅರ್ಥವನ್ನು ನಿಮಗೆ ಕೊಡುತ್ತ ಹೋಗುತ್ತದೆ.

ಈ ಅಸಂಗತ ಸೂತ್ರಗಳ ಜೀವನವನ್ನು ಜೀವಿಸುವುದು ಹೇಗೆ? ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವುದು ಹೇಗೆ? ಹೇಗೆಂದರೆ, ನಿಮ್ಮ ಗಮನವನ್ನು ಇತರರತ್ತ ಹರಿಸುವುದರ ಮೂಲಕ ಮತ್ತು ನಿಮಗಿಂತ ದೊಡ್ಡದರ ಭಾಗವಾಗುವುದರ ಮೂಲಕ. ಒಂದು ಆದರ್ಶಮಯ ಹೋರಾಟದಲ್ಲಿ ಪಾಲ್ಗೊಳ್ಳುವುದು, ಒಂದು ಸಂಘ-ಸಂಸ್ಥೆಯಲ್ಲಿ ತೊಡಗಿಕೊಳ್ಳುವುದು, ಅಥವ ಧರ್ಮವನ್ನು ಪಾಲಿಸುವುದು, ನಿಮಗಿಂತ ಹಿರಿದಾದುದರಲ್ಲಿ ಭಾಗವಾಗುವುದಕ್ಕೆ ಉದಾಹರಣೆಗಳು.

“ಅಂತರಂಗ”ಕ್ಕೆ ಬೇಕಾದ ಅರ್ಥವನ್ನು “ಬಹಿರಂಗ”ದಲ್ಲಿ, ಅಂದರೆ, ಪರರನ್ನು ಪ್ರೀತಿಸುವುದರ ಮತ್ತು ಅವರಿಗೆ ಸಹಾಯ ಮಾಡುವುದರ ಮೂಲಕ ನೀವು ಸಾಧಿಸಬಹುದು. ಒಂದು ಶತಮಾನದ ಹಿಂದೆಯೆ ಕವಯತ್ರಿ ಎಮಿಲಿ ಡಿಕಿನ್ಸನ್ ಹೀಗೆ ಹೇಳಿದ್ದಾರೆ:

ಒಂದು ಎದೆ ಒಡೆಯುವುದನ್ನು ನಾನು ತಡೆಯಬಹುದಾದರೆ
ನಾನು ವ್ಯರ್ಥವಾಗಿ ಬದುಕುವುದಿಲ್ಲ
ಒಂದು ಜೀವದ ನೋವನ್ನು ಶಮನ ಮಾಡುವಂತಾದರೆ
ಅಥವ ಒಬ್ಬರ ವೇದನೆಯನ್ನು ಕಮ್ಮಿ ಮಾಡುವಂತಾದರೆ
ಅಥವ ಅಶಕ್ತ ಗುಬ್ಬಚ್ಚಿಯೊಂದನ್ನು
ಅದರ ಗೂಡಿಗೆ ಮರಳಿಸಲು ಸಹಾಯ ಮಾಡುವಂತಾದರೆ
ನಾನು ವ್ಯರ್ಥವಾಗಿ ಬದುಕುವುದಿಲ್ಲ.

ನಿಮ್ಮ ಸಹಾಯ ಯಾವ ಮಟ್ಟದ್ದೆ ಆಗಿರಲಿ, ಅದನ್ನು ನೀವು ಇನ್ನೊಬ್ಬರಿಗೆ ಮಾಡಿದಾಗ ನೀವು ವ್ಯರ್ಥವಾಗಿ ಬದುಕುತ್ತಿಲ್ಲ, ನಿಮ್ಮ ಬದುಕು ವ್ಯರ್ಥವಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಇನ್ನೊಬ್ಬರ ಜೀವನದಲ್ಲಿ ನೀವು ತರುವ ಅರ್ಥಪೂರ್ಣ ಬದಲಾವಣೆ ನಿಮ್ಮ ಬದುಕಿಗೂ ತನ್ನದೇ ಆದ ಆರ್ಥ ಕೊಡುತ್ತದೆ.

ಇನ್ನೊಬ್ಬರಿಗೆ ನಿಮ್ಮ ಸಹಾಯದ ಅಗತ್ಯ ಇದೆ ಎಂದು ತಿಳಿದಾಗ, ನಿಮಗೆ ಈ ಮೂರು ಆಯ್ಕೆಗಳಿರುತ್ತವೆ:

  1. ಬೇರೆಯವರ ಅಗತ್ಯಗಳನ್ನು ನಿರ್ಲಕ್ಷಿಸಿ, ಏನನ್ನೂ ಮಾಡದಿರುವುದು – ಇದು ನೈತಿಕ ಸೋಲಿನ ಆಯ್ಕೆ; ಅಥವ
  2. ಬೇರೆಯವರ ದೌರ್ಬಲ್ಯಗಳನ್ನು ನಿಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು, ಸಿನಿಕತೆಯಿಂದ ಅವರನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು – ಇದು ನೈತಿಕ ಸೋಲಿಗಿಂತ ಕೀಳಾದ ಆಯ್ಕೆ; ಅಥವ
  3. ಸರಿಯಾದುದನ್ನು ಮಾಡುವುದು ಮತ್ತು ಜನರ ಅಗತ್ಯಗಳಿಗೆ ಸ್ಪಂದಿಸುವುದು.

ಈ ಕೊನೆಯ ಆಯ್ಕೆಯೆ ನೈತಿಕ ಜೀವನದ ಆಯ್ಕೆ. ಮೇಲಿನ ಮೂರು ಆಯ್ಕೆಗಳಲ್ಲಿ ಪ್ರೀತಿಯ ಮೇಲೆ ಆಧಾರಿತವಾದ ಆಯ್ಕೆ ಇದೊಂದೆ. ಜೀವನಕ್ಕೆ ಭರವಸೆಯನ್ನು ಕೊಡುವ ಆಯ್ಕೆಯೂ ಇದೆ. ನೀವು ಮಾಡಬೇಕೆಂದುಕೊಂಡಿದ್ದನ್ನು ಪೂರ್ತಿಯಾಗಿ ಮಾಡಲಿಕ್ಕಾಗದೆ ಹೋದರೂ ಇದೇ ಸರಿಯಾದ ಆಯ್ಕೆ. ಇದರ ಹೊರತಾಗಿ ಬೇರೆ ದಾರಿಯೆ ಇಲ್ಲ.

ಯಾವುದು ಸರಿಯಾದುದೊ, ಒಳ್ಳೆಯದೊ, ಸತ್ಯವಾದದ್ದೊ ಅದನ್ನು ಮಾಡಲು ಪ್ರಯತ್ನಿಸಿ, ಆ ಪ್ರಯತ್ನದಲ್ಲಿ ಸೋತೆ ಎಂಬ ಭಾವನೆ ನಿಮ್ಮಲ್ಲಿ ಬಂದುಬಿಟ್ಟರೆ, ಇತರರನ್ನು ನಿಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಪ್ರಲೋಭನೆ ಅಥವ ಏನನ್ನೂ ಮಾಡದೆ ಸುಮ್ಮನೆ ಇದ್ದುಬಿಡುವ ಆಲೋಚನೆ ನಿಮ್ಮಲ್ಲಿ ಬಂದುಬಿಡಬಹುದು. ಆದರೆ ನೀವು ಅಂದುಕೊಂಡ ಹಾಗೆ ಆಗಲಿಲ್ಲ ಎನ್ನುವುದು ಅಥವ ನೀವು ಯಾರಿಗೆ ಸಹಾಯ ಮಾಡಲು ಯತ್ನಿಸಿದಿರೊ ಅವರು ನಿಮ್ಮನ್ನು ಪ್ರಶಂಸಿಸಲಿಲ್ಲ ಎನ್ನುವುದು, ಮೇಲಿನ ಆ ಎರಡು ಅನೈತಿಕ ಕೆಲಸಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಮರ್ಥನೆಯಾಗುವುದಿಲ್ಲ.

ನಾವು ಮಾಡುವ ಕೆಲಸಕ್ಕೆ ಫಲಿತಾಂಶ ಇರಬೇಕು ಮತ್ತು ಅದನ್ನು ಪಡೆಯಲು ಗಮನ ಹರಿಸಬೇಕು. ನಾವು ಮಾಡುತ್ತಿರುವ ಕೆಲಸಕ್ಕೆ ನಕಾರಾತ್ಮಕ ಟೀಕೆಗಳು ಬಂದಾಗ ನಾವು ಏನನ್ನು ಮಾಡುತ್ತಿದ್ದೇವೊ ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರೀಕ್ಷಿಸಿಕೊಳ್ಳಬೇಕು. ಈಗ ಮಾಡುತ್ತಿರುವುದರಿಂದ ನಾವು ಕಲಿತದ್ದು ಏನು? ಮುಂದಿನ ಸಲ ಅದನ್ನು ಬೇರೆ ರೀತಿ ಮಾಡಬೇಕೆ? ನಾವು ಮಾಡುತ್ತಿರುವ ಕೆಲಸದಿಂದ ಇತರರಿಗೆ ನಿಜವಾಗಲೂ ಸಹಾಯ ಆಗುತ್ತಿದೆಯೆ? ಸಹಾಯ ಮಾಡಲು ಇದಕ್ಕಿಂತ ಬೇರೆ ದಾರಿ ಇದೆಯೆ? ಈ ಸಹಾಯ ಮಾಡಲು ನಮಗಿಂತಲೂ ಯೋಗ್ಯರಾದವರು ಇದ್ದಾರೆಯೆ? ಹೀಗೆ ಎಲ್ಲವನ್ನೂ ತಾಳ್ಮೆಯಿಂದ ಗಮನಿಸುವುದು, ಇನ್ನೊಬ್ಬರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುವುದು, ವಿಚಾರ ಮಾಡುವುದು, ಮತ್ತು ಸಮಂಜಸವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು, ಇವೆಲ್ಲ ಬಹಳ ಮುಖ್ಯವಾದವು. ಸುಮ್ಮನೆ ಕೈಚೆಲ್ಲಿ ಬಿಡುವುದಕ್ಕಿಂತ ಕಲಿಯುವುದು ಮತ್ತು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಮುಖ್ಯವಾದದ್ದು. ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಥವ ನಿಮ್ಮ ಪ್ರಯತ್ನಗಳು ನೀವಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ ನೀವು ಕೈಚೆಲ್ಲಿ ಬಿಡಬಾರದು.

ನಾವು ಮಾಡುವ ಕೆಲಸವನ್ನು ಬೇರೆಯವರು ಮೆಚ್ಚಬೇಕು ಎನ್ನುವುದು ಮುಖ್ಯವಾದ ವಿಷಯವೆ. ನಾನು ಇಷ್ಟೆಲ್ಲ ಮಾಡಿದರೂ ಯಾರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ನಮ್ಮಲ್ಲಿ ಬಹಳ ಜನ ಅಂದುಕೊಳ್ಳುತ್ತೇವೆ. ನಾವು ಸಹಾಯ ಮಾಡುವ ಜನ ನಮ್ಮನ್ನು ಪ್ರಶಂಸಿಸುತ್ತಿಲ್ಲ, ಹಾಗಿರುವಾಗ ಯಾಕೆ ನಾವು ನಮ್ಮ ಕೈಲಾದದ್ದನ್ನೆಲ್ಲ ಮಾಡಬೇಕು? ಇದಕ್ಕೆ ಉತ್ತರ ಏನೆಂದರೆ, ನಮಗೆ ನಮ್ಮದೆ ಆದ ವೈಯಕ್ತಿಕ ಬದ್ಧತೆ ಇದೆ ಮತ್ತು ನಮ್ಮ ಕೈಲಿ ಸಾಧ್ಯವಾದಷ್ಟೂ ಉತ್ತಮ ಕೆಲಸ ಮಾಡುವುದರಿಂದ ನಮಗೆ ಆತ್ಮತೃಪ್ತಿ ಲಭಿಸುತ್ತದೆ. ನಾವು ಮಾಡುವ ಒಳ್ಳೆಯ ಕೆಲಸ ಇತರರಿಗೆ ಗೊತ್ತಾಗುತ್ತದೆ ಅಥವ ನಮಗೆ ಪ್ರಶಂಸೆ ಲಭಿಸುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ನಮ್ಮ ಕೈಯಲ್ಲಿ ಏನೆಲ್ಲ ಸಾಧ್ಯವಿದೆಯೊ ಅದನ್ನು ನಾವು ಯಾವಾಗಲೂ ಮಾಡಬೇಕಾಗುತ್ತದೆ. ಇದು ಬೇರೆಯವರ ಬಗ್ಗೆ ಅಲ್ಲ, ನಮ್ಮ ಬಗ್ಗೆ. ಇದು ನಮಗೆ ಎಷ್ಟು ಕಾಳಜಿ ಇದೆ ಎನ್ನುವುದರ ಬಗ್ಗೆಯೆ ಹೊರತು ಇನ್ನೊಬ್ಬರಿಗೆ ಎಷ್ಟು ಕಾಳಜಿ ಇದೆ ಎನ್ನುವುದರ ಬಗ್ಗೆಯಲ್ಲ.

ಇನ್ನೊಬ್ಬರಿಂದ ಪ್ರಶಂಸಿಸಲ್ಪಡಬೇಕು ಎಂದುಕೊಳ್ಳುವ ಬಯಕೆ ಸಹಜವಾದದ್ದೆ. ಆದರೆ ನಾವು ಅಂತಹುದಕ್ಕೆ ಹಪಹಪಿಸುತ್ತ ಹೋದರೆ ಜೀವನಾರ್ಥ ಕಂಡುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ. ಮೆಚ್ಚಿಗೆಗೆ ಹಪಹಪಿಸುವ ಮನುಷ್ಯ ಇನ್ನೊಬ್ಬರ ಅಗತ್ಯಗಳನ್ನು ಪೂರೈಸುವುದರ ಮೇಲೆ ದೃಷ್ಟಿ ಹರಿಸದೆ ತನ್ನ ಹಪಹಪಿ ಪೂರೈಸುಕೊಳ್ಳುವುದರತ್ತ ದೃಷ್ಟಿ ಹರಿಸುತ್ತಾನೆ. ನೀವು ಮೆಚ್ಚಿಗೆಗಾಗಿ ಕಾತರಿಸುತ್ತಿದ್ದರೆ, ನಿಮ್ಮ ಸಂತೋಷ ಬೇರೆಯವರ ಮರ್ಜಿಯನ್ನು ಅವಲಂಬಿಸಿರುತ್ತದೆ. ಅದರ ಬದಲಿಗೆ, ಬೇರೆಯವರು ಮೆಚ್ಚುತ್ತಾರೊ ಬಿಡುತ್ತಾರೊ, ನೀವು ಪರರಿಗೆ ಸಹಾಯ ಮಾಡುವುದರಿಂದ ಬರುವ ಆತ್ಮಸಂತೋಷ ಮತ್ತು ತೃಪ್ತಿ ಯಾವಾಗಲೂ ನಿಮ್ಮದೇ ಆಗಿರುತ್ತದೆ.

ಹೀಗೆ ಮಾಡುವುದೆಲ್ಲ “ಸಂತತ್ವ” ಎಂತಲೊ, “ಸಾತ್ವಿಕ” ಎಂತಲೊ, ಸಾಧುಸಂತರಿಂದ ಮಾತ್ರ ಸಾಧ್ಯ ಅಂತಲೊ ನಿಮಗೆ ಅನ್ನಿಸಬಹುದು. ಈ ವಿಪರ್‍ಯಾಸಾರ್ಥದ ಸೂತ್ರಗಳ ಪಾಲನೆ ಸಂತತ್ವವನ್ನು ಪಡೆಯುವುದರ ಬಗ್ಗೆ ಅಲ್ಲ, ಬದಲಿಗೆ ಮಾನಸಿಕ ಶಾಂತಿಯನ್ನು ಪಡೆಯುವುದರ ಬಗ್ಗೆ, ನಮ್ಮ ವಿವೇಕವನ್ನು ಉಳಿಸಿಕೊಳ್ಳುವುದರ ಬಗ್ಗೆ. ಇತರರಿಗೆ ಸಹಾಯ ಮಾಡುವುದರಿಂದ ಮತ್ತು ಅವರನ್ನು ಪ್ರೀತಿಸುವುದರಿಂದ ದೊರಕುವ ಖುಷಿಗಿಂತ ಹೆಚ್ಚಿನದು ಇತರರು ನಮ್ಮನ್ನು ಗುರುತಿಸುವುದರಿಂದ ಅಥವ ಅವರ ಪ್ರಶಂಸನೆಗಳಿಂದ ಬರುವುದಿಲ್ಲ ಎನ್ನುವುದರ ಬಗ್ಗೆ ಇದು. ಇತರರು ನಿಮ್ಮನ್ನು ಪ್ರಶಂಸಿಸುವಂತೆ ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ನೀವು ಪ್ರೀತಿಸುವುದನ್ನು ಮತ್ತು ಸಹಾಯ ಮಾಡುವುದನ್ನು ನಿಲ್ಲಿಸಿಬಿಡಬಾರದು.

ಈ ಅಸಂಗತಸತ್ಯದ ಜೀವನವನ್ನು ಜೀವಿಸುವ ನಿರ್ಧಾರ ಮತ್ತೇನೂ ಅಲ್ಲ; ಅದು ಒಂದು ಬಗೆಯ ವ್ಯಕ್ತಿಯಾಗಲು ತೀರ್ಮಾನಿಸುವ ನಿರ್ಧಾರ. ಸಮಾಜ ಅಥವ ನಿಮ್ಮ ಸಂಸ್ಥೆ ನೀವು ಏನಾಗಬೇಕೆಂದು ನಿಮ್ಮ ಮೇಲೆ ಒತ್ತಡ ಹಾಕುತ್ತಿದೆಯೊ ಅದಾಗದೆ, ನೀವು ನಿಜವಾಗಲೂ ಯಾರೊ ಅದಾಗಲು, ಅಥವ ನೀವು ನಿಜವಾಗಲೂ ಏನಾಗಬೇಕಿದೆಯೊ ಅದು ಆಗಲು ತೆಗೆದುಕೊಂಡ ನಿರ್ಧಾರವದು. ಅದು ನಿಮ್ಮ ಹೃದಯಕ್ಕೆ ಹತ್ತಿರವಾದ ಮೌಲ್ಯಗಳಿಗೆ ಸಂಬಂಧಿಸಿದ್ದು; ಆ ಮೌಲ್ಯಗಳನ್ನು ಹೇಗೆ ಪಾಲಿಸುವುದು, ಅವನ್ನೆ ಹೇಗೆ ಜೀವಿಸುವುದು ಎನ್ನುವುದಕ್ಕೆ ಸಂಬಂಧಿಸಿದ್ದು. ಅದು ನಿಮ್ಮ ಬದ್ಧತೆ, ಪ್ರಾಮಾಣಿಕತೆ, ಮತ್ತು ನಿಮ್ಮ ಸಂಪೂರ್ಣತೆಯ ಬಗ್ಗೆ; ನೀವು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹರು ಎನ್ನುವ ಬಗ್ಗೆ.

ಇದರ ಜೊತೆಗೇ, ನೀವು ಎಷ್ಟು ಮಾತ್ರದ ದೃಢಮನಸ್ಸಿನವರು, ನಂಬಿದ ಮೌಲ್ಯಗಳಿಗಾಗಿ ಎಷ್ಟು ದೂರ ಹೋಗಬಲ್ಲಿರಿ ಎನ್ನುವುದನ್ನೂ ಈ ನಿರ್ಧಾರ ತೋರಿಸುತ್ತದೆ. ನೀವು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ಬೇರೆಯವರನ್ನೂ ಬಹಳ ಕಾಲ ಪ್ರೀತಿಸಿ, ದೀರ್ಘಕಾಲ ಅವರಿಗೆ ಸಹಾಯ ಮಾಡಬಲ್ಲವರಾಗುತ್ತೀರಿ. ನಿಯಮಿತವಾಗಿ ವ್ಯಾಯಾಮ ಮಾಡಿ; ಸರಿಯಾದ, ಆರೋಗ್ಯಕರವಾದ ಆಹಾರವನ್ನು ತಿನ್ನಿ; ಅಗತ್ಯವಾದಷ್ಟು ಸಮಯ ನಿದ್ದೆ ಮಾಡಿ. ನಿಮ್ಮ ಹುಮ್ಮಸ್ಸನ್ನು ನವೀಕರಿಸಿಕೊಳ್ಳಲು ಸ್ವಲ್ಪ ಬಿಡುವು ಮಾಡಿಕೊಳ್ಳಿ. ಬೌದ್ಧಿಕವಾಗಿ ಬೆಳೆಯಲು, ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಹೊಸಹೊಸ ದಾರಿಗಳನ್ನು ಕಂಡುಕೊಳ್ಳಿ. ಹಾಗೆಯೆ, ನಿಮ್ಮ ಬಳಿಗೆ ಬರುವ ಅಥವ ನಿಮಗೆ ಕಾಣಿಸುವ ಪ್ರತಿಯೊಂದು ಕೆಲಸವನ್ನೂ, ಪ್ರತಿಯೊಂದು ಹೋರಾಟವನ್ನೂ ಒಪ್ಪಿಕೊಂಡುಬಿಟ್ಟು ನಿಮ್ಮ ಮಿತಿಗೆ ಮೀರಿದ ಭಾಧ್ಯತೆಗಳನ್ನು ನಿಭಾಯಿಸಲು ಹೆಣಗಬೇಡಿ. ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ; ಎಲ್ಲವೂ ಸಮತೋಲನವಾಗಿರಲಿ. ಸಿಕ್ಕಾಪಟ್ಟೆ ದಣಿವಾಗುವಂತೆ ಎಲ್ಲದರಲ್ಲೂ ತೊಡಗಿಸಿಕೊಂಡು ಬಿಟ್ಟರೆ ಇತರರನ್ನು ಪ್ರೀತಿಸಲು ಹಾಗು ಸಹಾಯ ಮಾಡಲು ನಿಮಗೆ ತ್ರಾಣವೆ ಇರುವುದಿಲ್ಲ.

ನಾವು ಪ್ರತಿಯೊಬ್ಬರೂ ಯಾವುದೊ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜನಿಸಿದ್ದೇವೆ, ಹಾಗೂ ಆ ಉದ್ದೇಶ ಯಾವುದೆಂದು ಕಂಡುಕೊಂಡು ಅದನ್ನು ಈಡೇರಿಸುವುದರಿಂದ ನಮಗೆ ಅಪಾರವಾದ ನೆಮ್ಮದಿ, ಅರ್ಥ ಮತ್ತು ಆತ್ಮಸಂತೋಷ ದೊರಕುತ್ತದೆ ಎಂದು ನಾನು ನಂಬಿದ್ದೇನೆ. ಆ ಉದ್ದೇಶ ಬೇರೇನೂ ಆಗಿರದೆ ನಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ, ಅಥವ ಸಮಾಜಕ್ಕೆ ಸಕಾರಾತ್ಮಕ ಪರಿಣಾಮ ಉಂಟು ಮಾಡುವುದೆ ಆಗಿರುತ್ತದೆ.

ಈ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದು ಹೇಗೆ? ಪರಿಹರಿಸಬೇಕಾದ ದೊಡ್ಡದೊಡ್ಡ ಸಮಸ್ಯೆಗಳೆ ಇವೆ. ಯುದ್ಧ, ಹಸಿವು, ರೋಗರುಜಿನಗಳು, ಅಧಃಪತನವಾಗುತ್ತಿರುವ ಪರಿಸರ, ಅಪರಾಧಗಳು, ನಿರುದ್ಯೋಗ, ಜಾತಿಭೇದ, ವರ್ಣಭೇದ, ಶೋಷಣೆ, ಸರ್ವರಿಗೂ ಶಿಕ್ಷಣ ಮತ್ತು ಸ್ವಾಸ್ಥ್ಯದ ಲಭ್ಯತೆ; ಇವೆಲ್ಲವೂ ದೊಡ್ಡ, ಗಂಭೀರ ಸಮಸ್ಯೆಗಳು.

ತಮಗೆ ಅಥವ ತಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ, ಅಥವ ನೆರೆಹೊರೆಯವರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಕೆಲವೊಮ್ಮೆ ಜನರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ. ತಾವು ಪ್ರತ್ಯಕ್ಷವಾಗಿ ಕಂಡ ಅಥವ ಅನುಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಇವರು ಶ್ರಮಿಸುತ್ತಾರೆ. ಬೈಬಲ್ಲಿನ ನೀತಿಕತೆಯೊಂದರಲ್ಲಿ ಬರುವ ಸಜ್ಜನ ಪರೋಪಕಾರಿ ಮನುಷ್ಯನ ಹಾಗೆ ಇವರು. ಕಳ್ಳರಿಂದ ಹಲ್ಲೆಗೊಳಗಾಗಿ ತನ್ನಲ್ಲಿ ಇದ್ದದ್ದನ್ನೆಲ್ಲ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ್ನನ್ನು ನೋಡಿದ ಆ ಪರೋಪಕಾರಿ ಸಮೇರಿಟನ್, ಅಪರಿಚಿತ ಗಾಯಾಳುವನ್ನು ಛತ್ರವೊಂದಕ್ಕೆ ಕರೆದುಕೊಂಡು ಹೋಗಿ ಅವನ ಶುಶ್ರೂಷೆ ಮಾಡುತ್ತಾನೆ. ಅಪರಿಚಿತರಿಗೆ, ಅನಾಥರಿಗೆ, ದುರ್ಬಲರಿಗೆ ಕಾಳಜಿ ತೋರಿಸುವುದು ಲೋಕೋತ್ತರ ಮಾನವೀಯ ಗುಣ. ನಮ್ಮ ಹೆಚ್ಚಿನ ನೀತಿಕತೆಗಳ ಸಾರಾಂಶ ಇಂತಹ ಬಡವರ, ದುರ್ಬಲರ, ಮುದುಕರ, ಹಾಗೂ ಅನಾಥರ ಬಗ್ಗೆ ವಿಶೇಷ ಕಾಳಜಿ ತೋರುವುದೇ ಆಗಿದೆ.

ನೀವು ಗಮನ ಕೊಡಲು ತೀರ್ಮಾನಿಸಿದ ಸಮಸ್ಯೆ ದೊಡ್ಡದೇ ಇರಲಿ ಸಣ್ಣದೇ ಇರಲಿ, ತತ್ಸಮಯದ್ದೇ ಆಗಿರಲಿ ದೀರ್ಘಕಾಲೀನವಾದದ್ದೆ ಆಗಿರಲಿ, ಹತ್ತಿರದ್ದೆ ಆಗಿರಲಿ ಇಲ್ಲವೆ ದೂರದಲ್ಲಿರುವುದೇ ಆಗಿರಲಿ, ಪ್ರತಿಯೊಂದು ಕಾರ್ಯದಲ್ಲೂ ಸಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ನೀವು ಮನುಷ್ಯನ ಮೂಲಭೂತ ಅಗತ್ಯಗಳನ್ನು ಪರಿಹರಿಸಲು ತೊಡಗಿಕೊಂಡಾಗ, ಅದರ ಪರಿಣಾಮ ಖಂಡಿತವಾಗಿ ಗಣನೀಯವಾಗಿರುವ ಸಾಧ್ಯತೆಯೆ ಹೆಚ್ಚು. ಈ ಅಗತ್ಯಗಳು ಪ್ರಪಂಚದ ಎಲ್ಲಾ ಕಡೆಯೂ ಒಂದೇ ತೆರನಾದವು. ಜನರಿಗೆ ತಿನ್ನಲು ಆಹಾರ (ಅಶನ) ಬೇಕು, ಹೊದೆಯಲು ಬಟ್ಟೆ (ವಸನ) ಬೇಕು, ಹಾಗೂ ತಲೆಯ ಮೇಲೊಂದು ಸೂರು (ಆಶ್ರಯ) ಇರಬೇಕು. ಹಾಗೆಯೆ ಉತ್ತಮ ಆರೋಗ್ಯ, ಸುರಕ್ಷಿತ ಪರಿಸರ, ಕಲಿಯಲು ಮತ್ತು ಬೆಳೆಯಲು ಅನುಕೂಲವಾದ ಅವಕಾಶಗಳು, ಅರ್ಥಪೂರ್ಣ ಉದ್ಯೋಗ, ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಬೆರೆಯಲು ಅಗತ್ಯವಾದಷ್ಟು ಬಿಡುವು, ಮತ್ತು ಸಮುದಾಯದಲ್ಲಿ ತಾನೂ ಒಬ್ಬ ಎನ್ನುವ ಭಾವನೆ, ಇವೂ ಸಹ ಅವರಿಗೆ ಬೇಕು. ಹಾಗೆಯೆ, ಘನತೆ, ಶಾಂತಿ ಮತ್ತು ನ್ಯಾಯವೂ ಸಹ.

ಜನರಿಗೆ ಮೂಲಭೂತ ಅಗತ್ಯಗಳನ್ನು ಒದಗಿಸಲು ಪ್ರಯತ್ನಿಸುವುದರಿಂದ ಅಪಾರವಾದ ನೆಮ್ಮದಿ ಸಿಗುತ್ತದೆ. ಹಾಗಾಗಿ ಅದನ್ನು ಮಾಡಿ. ವಿಶ್ವಶಾಂತಿಗಾಗಿ ದುಡಿಯಿರಿ. ನ್ಯಾಯಕ್ಕಾಗಿ ಹೋರಾಡಿ. ಪರಿಸರವನ್ನು ರಕ್ಷಿಸಿ. ಹಸಿವು ಮತ್ತು ಕಾಯಿಲೆಗಳ ವಿರುದ್ಧ ಹೋರಾಡಿ. ಜನರಿಗೆ ಓದಲು ಕಲಿಸಿ. ಪುಟ್ಟ ಮಗುವಿಗೆ ಹಾಡೊಂದನ್ನು ಹಾಡಿ. ಹುಡುಗರಿಗೆ ಮಾರ್ಗದರ್ಶನ ಮಾಡಿ. ಪ್ರತಿನಿತ್ಯ ಏನಾದರೂ ಒಂದನ್ನು ಮಾಡಿ. ನಿಲ್ಲಿಸದೆ ಪ್ರತಿದಿನವೂ ಮಾಡುತ್ತಲೆ ಇರಿ.

ಫ್ರೆಂಚ್ ಕತೆಗಾರ ಜೀನ್ ಜಿಯೋನೊ ಬರೆದ “ಭರವಸೆಯನ್ನು ಬಿತ್ತಿ ಸಂತೋಷವನ್ನು ಬೆಳೆದ ಮನುಷ್ಯ” ಎಂಬ ಅದ್ಭುತವಾದ ಕತೆಯೊಂದಿದೆ. ಆ ಕತೆಯಲ್ಲಿ ಬರುವ ಮನುಷ್ಯ ಇಪ್ಪತ್ತನೆ ಶತಮಾನದ ಆದಿ ಭಾಗದಲ್ಲಿ ಆಗ್ನೇಯ ಫ್ರಾನ್ಸ್‌ನಲ್ಲಿ ವಾಸವಾಗಿದ್ದಾತ. ಅದಕ್ಕೆ ಮೊದಲು ಊರುಗಳ ಸಮೇತ ಸುಂದರ ಅರಣ್ಯ ಪ್ರದೇಶವಾಗಿದ್ದ, ಆದರೆ ಈಗ ಬಂಜರು ಬಿದ್ದಿದ್ದ ಜಾಗದಲ್ಲಿ ಆತನೊಬ್ಬನೇ ವಾಸವಾಗಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಪ್ರತಿದಿನವೂ ಆತ ತಾನೊಬ್ಬನೆ ಆ ಪ್ರದೇಶದಲ್ಲೆಲ್ಲ ಗಿಡಮರಗಳನ್ನು ನೆಡುತ್ತ, ಬೀಜಗಳನ್ನು ಬಿತ್ತುತ್ತ ಬಂದ. ವರ್ಷಗಳು ಉರುಳಿದವು. ದಶಕಗಳು ಕಳೆದವು. ಈತ ಮಾತ್ರ ಬೀಜವಾದ ಮೇಲೆ ಬೀಜ ಬಿತ್ತುತ್ತ ಬಂದ. ಗಿಡಮರಗಳು ಕಾಡಾಗಲು ಆರಂಭವಾಯಿತು. ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಮತ್ತಷ್ಟು ಗಿಡಗಳು ಬೆಳೆಯಲು ಬೆಳೆದ ಮರಗಳು ಸಹಾಯ ಮಾಡಿದವು. ಪಕ್ಷಿಗಳು ಗೂಡು ಕಟ್ಟಿಕೊಳ್ಳಲು ಮರಗಳ ಆಸರೆ ಸಿಕ್ಕಿತು. ಹಳ್ಳ ತೊರೆಗಳು ಹರಿಯಲು ಆರಂಭವಾದವು. ಮತ್ತೆ ಮರಳಿ ಬಂದ ಜನ ಅಲ್ಲೆಲ್ಲ ಮನೆಗಳನ್ನು ಕಟ್ಟಲು ಆರಂಭಿಸಿದರು. ತನ್ನ ಕೊನೆ ದಿನಗಳು ಸಮೀಪಿಸುವಷ್ಟರಲ್ಲಿ ಆ ಇಡೀ ಬಂಜರು ಭೂಮಿಯನ್ನು ಮಾರ್ಪಡಿಸಿ, ಆ ಪರಿಸರವನ್ನು ಮತ್ತೆ ಮೂಲಸ್ಥಿತಿಗೆ ಆ ಮನುಷ್ಯ ಮರಳಿಸುತ್ತಾನೆ.

ಸುಂದರವಾದ, ಅರ್ಥಪೂರ್ಣವಾದ ಬದುಕಿಗೆ ಈ ಕತೆ ಒಂದು ರೂಪಕ; ಅತ್ಯುತ್ತಮ ಉದಾಹರಣೆ. ಪರರಿಗೆ ಸಂತೋಷವನ್ನು ಬೆಳೆಯಲು ಪ್ರತಿದಿನವೂ ಕನಸನ್ನು ಬಿತ್ತಿ; ಭರವಸೆಯನ್ನು ನೆಡಿ. ತಮ್ಮ ಮಕ್ಕಳಿಗೆ ದಿನಪ್ರತಿದಿನ ಸಹಾಯ ಮಾಡುವ ಹೆತ್ತವರು ಮತ್ತು ಪೋಷಕರಿಗಂತೂ ಇದೊಂದು ವಿಶೇಷವಾದ ಉದಾಹರಣೆ. ಆ ಕೆಲಸ ಸರಳವಾದದ್ದು ಮತ್ತು ಸಾಮಾನ್ಯವಾದದ್ದು ಆಗಿರಬಹುದು. ಆದರೂ ಆದರ ಪರಿಣಾಮ ಬಹಳ ಗಂಭೀರವಾದದ್ದು ಮತ್ತು ದೀರ್ಘಕಾಲೀನ ವಾದದ್ದು.

ಕೂಲಂಕಷವಾಗಿ ವಿಶ್ಲೇಷಿಸಿದಾಗ, ಯಾರು ಗುರುತರವಾದ ಪ್ರಭಾವ, ಪರಿಣಾಮ ಹೊಂದಿರುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ದೊರಕುತ್ತದೆ. ಸ್ಥಳೀಯ, ರಾಷ್ಟ್ರೀಯ, ಆಂತರರಾಷ್ಟ್ರೀಯ ನಾಯಕರು ಪ್ರಭಾವ ಹೊಂದಿರುತ್ತಾರೆ. ಆದರೆ ಇವರಲ್ಲಿನ ಬಹಳಷ್ಟು ಜನ ಕೆಲವೆ ಜನರ ಮೇಲೆ ದೊಡ್ಡ ಪ್ರಭಾವ ಬೀರುತ್ತಾರೆ ಎನ್ನುವುದಕ್ಕಿಂತ ಬಹುಸಂಖ್ಯೆಯ ಜನರ ಮೇಲೆ ಕಮ್ಮಿ ಎನ್ನುವಷ್ಟು ಪ್ರಮಾಣದ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಪೋಷಕರು, ಸಂಬಂಧಿಕರು, ಹಾಗೂ ಸ್ನೇಹಿತರು ಕೆಲವೆ ಎನ್ನಬಹುದಾದಷ್ಟು ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ, ದೊಡ್ಡದಾದ, ಗಂಭೀರವಾದ ಪ್ರಭಾವ ಬೀರುತ್ತಾರೆ.

ಮಕ್ಕಳಿಗೆ ಏನಾಗುತ್ತದೆ ಎನ್ನುವುದಕ್ಕಿಂತ ಮುಖ್ಯವಾದದ್ದು ಬೇರೇನೂ ಇಲ್ಲ. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಭರವಸೆಯಿದ್ದರೆ ಆಗ ಪ್ರತಿಯೊಂದರ ಬಗ್ಗೆಯೂ ಭರವಸೆ ಇಟ್ಟುಕೊಳ್ಳಬಹುದು. ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಭರವಸೆ ಇಲ್ಲದೆ ಹೋಗಿ ಬಿಟ್ಟರೆ ಯಾವುದರ ಬಗ್ಗೆಯೂ ಭರವಸೆ ಇಲ್ಲವಾಗಿಬಿಡುತ್ತದೆ. ಇವತ್ತಿನ ಮಕ್ಕಳು ನಾಳೆ ಯಾವ ತರಹದ ಮನುಷ್ಯರಾಗುತ್ತಾರೆ ಎನ್ನುವುದರ ಮೇಲೆ ವಿಶ್ವದ ಭವಿಷ್ಯ ನಿಂತಿರುತ್ತದೆ.

ಮಕ್ಕಳಿಗೆ ಸಾಕಷ್ಟು ಪ್ರೀತಿ ಮತ್ತು ಗಮನ ಬೇಕು ಎನ್ನುವುದು ನಮಗೆಲ್ಲ ಗೊತ್ತು. ಪುಟ್ಟ ಕಂದಮ್ಮಗಳಿಗೆ ಬಹಳ ಉತ್ತೇಜನ ಬೇಕು. ಬೆಳೆದ ಮಕ್ಕಳಿಗೆ ಮಾರ್ಗದರ್ಶನ ಮತ್ತು ಸ್ನೇಹ ಬೇಕು. ಇರುವ ಇಬ್ಬರು ಪೋಷಕರೂ ಕೆಲಸಕ್ಕೆ ಹೊರಗೆ ಹೋಗುವ, ಒಂಟಿ ಪೋಷಕರು ಮಕ್ಕಳನ್ನು ಬೆಳೆಸುವ ಕಡೆಗೆ ಸಮಾಜ ಬದಲಾಗುತ್ತಿರುವಾಗ, ಬಹಳಷ್ಟು ಮಕ್ಕಳಿಗೆ ಅವರಿಗೆ ಅಗತ್ಯವಾದಷ್ಟು ಉತ್ತೇಜನ, ಮಾರ್ಗದರ್ಶನ, ಮತ್ತು ಸ್ನೇಹ ಸಿಗುತ್ತಿಲ್ಲ. ಇವೆಲ್ಲವುಗಳ ನಕಾರಾತ್ಮಕ ಪರಿಣಾಮ ಗಂಭೀರವೂ, ದೀರ್ಘಕಾಲೀನವೂ ಆಗಿಬಿಡುವ ಸಂಭವ ಇರುತ್ತದೆ.

ಮೆದುಳಿನ ಬೆಳವಣಿಗೆಯ ಬಗ್ಗೆ ಕಳೆದ ಮುವ್ವತ್ತು ವರ್ಷಗಳಲ್ಲಿ ನಾವು ತಿಳಿದುಕೊಂಡಿರುವ ಜ್ಞಾನ ಅಗಾಧವಾದದ್ದು. ಮಗು ಹುಟ್ಟಿದಾಗ ಅದರ ಮೆದುಳಿನಲ್ಲಿನ ಕೋಟ್ಯಾಂತರ ನ್ಯೂರಾನ್‌ಗಳು ಪ್ರೊಗ್ರ್ಯಾಮ್ ಆಗಿರದೆ ಖಾಲಿ ಇರುತ್ತವೆ. ಬಾಹ್ಯ ಪ್ರಚೋದನೆಯಿಂದ, ಉದ್ದೀಪನೆಯಿಂದ ಮಾತ್ರ ಆ ನ್ಯೂರಾನ್‌ಗಳು ಮೆದುಳಿನ ಮಂಡಲದೊಂದಿಗೆ (ಸರ್ಕ್ಯೂಟ್) ಸಂಪರ್ಕ ಏರ್ಪಡಿಸಿಕೊಳ್ಳಬಲ್ಲವು. ಈ ಉದ್ದೀಪನೆಯ ವೈವಿಧ್ಯಶ್ರೀಮಂತಿಕೆಯೆ ಮಗುವಿನ ಮೆದುಳಿನ ರಚನೆ ಮತ್ತು ಸಾಮರ್ಥ್ಯಗಳನ್ನು ನಿರ್ಧರಿಸುತ್ತದೆ.

ಮಗುವಿನ ಬೆಳವಣಿಗೆಯಲ್ಲಿ ಸಕಾರಾತ್ಮಕ ವ್ಯತ್ಯಾಸಗಳನ್ನು ಉಂಟು ಮಾಡುವ ಕೆಲಸಗಳನ್ನೆ ನಾವೆಲ್ಲರೂ ಮಾಡಬೇಕಾದದ್ದು. ನಮ್ಮಲ್ಲಿನ ಪ್ರತಿಯೊಬ್ಬರೂ ಮಗುವೊಂದನ್ನು ಅಪ್ಪಿಕೊಳ್ಳಬಹುದು; ಅದರೊಂದಿಗೆ ಮಾತನಾಡಬಹುದು; ಅದಕ್ಕೆ ಲಾಲಿ ಹಾಡಬಹುದು; ಅದರ ಜೊತೆಗೆ ಆಟವಾಡಬಹುದು. ಮಗುವೊಂದು ವಿವಿಧಾಕೃತಿಯ, ವಿವಿಧ ಬಣ್ಣಗಳ, ವಿವಿಧ ತೆರನ ವಸ್ತುಗಳನ್ನು ಮುಟ್ಟಲು, ಅವನ್ನು ಅನ್ವೇಷಿಸಲು ನಾವೆಲ್ಲರೂ ಸಹಾಯ ಮಾಡಬಹುದು. ನಾವೆಲ್ಲರೂ ಮಗುವೊಂದಕ್ಕೆ ಸಂಗೀತ ನುಡಿಸಬಹುದು, ಅದರೊಂದಿಗೆ ಸಣ್ಣ ಸುತ್ತಾಟಕ್ಕೆ ಹೋಗಬಹುದು, ಅಥವ ಯಾವುದಾದರೂ ಚೆಂಡಾಟ ಆಡಬಹುದು. ಇದರರ್ಥ ಏನೆಂದರೆ, ನಮಗೆಲ್ಲರಿಗೂ ಮಾಡಲು ಗೊತ್ತಿರುವ ಸರಳವಾದ, ಪ್ರೇಮಮಯವಾದ ಕೆಲಸಗಳನ್ನು ಮಾಡುವ ಮೂಲಕ ನಾವು ಬದುಕುಗಳನ್ನೆ ಬದಲಾಯಿಸಬಹುದು.

ಹಾಗೆಯೆ, ಇದೆಲ್ಲವೂ ಚಿಕ್ಕ ಮಕ್ಕಳೊಂದಿಗೇ ಕೊನೆಯಾಗುವುದಿಲ್ಲ. ಚಿಕ್ಕ ವಯಸ್ಸಿನ ಹುಡುಗರನ್ನು ನಿಮಗೆ ಬೇಕಾದದ್ದು ಏನು ಎಂದು ಸಂಶೋಧಕರು ಕೇಳಿದರೆ, ಬಹಳಷ್ಟು ಹುಡುಗಹುಡುಗಿಯರು ತಮ್ಮ ಪೋಷಕರೊಂದಿಗೆ, ಪಾಲಕರೊಂದಿಗೆ, ಅಥವ ತಮ್ಮ ನೆಚ್ಚಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಹೇಳಿದರು. ಮೂರರಲ್ಲಿ ಎರಡರಷ್ಟು ಮಕ್ಕಳು ತಾವು ಗೌರವಿಸುವ ಮತ್ತು ನಂಬುವ ಹಿರಿಯರ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಇಚ್ಚೆ ತೋರಿದರು.

ವಯಸ್ಸಿನ ಆಧಾರದ ಮೇಲೆ ಪ್ರತ್ಯೇಕಿಸಲ್ಪಟ್ಟಿರುವ ಈಗಿನ ಸಮಾಜದಲ್ಲಿ ಹದಿಹರೆಯದವರ ಮತ್ತು ವಯಸ್ಕರ ನಡುವೆ ಸಾಕಷ್ಟು ಉತ್ತಮ ಸಂಬಂಧಗಳು ಏರ್ಪಡುತ್ತಿಲ್ಲ. ನಾವು ಅದನ್ನು ಬದಲಾಯಿಸಬಹುದು. ಪ್ರತಿಯೊಬ್ಬ ಹದಿವಯಸ್ಕಳಿಗೆ ತಾನು ಹೇಳುವುದನ್ನು ಕೇಳಿಸಿಕೊಳ್ಳುವ, ತನಗೆ ಕಲಿಸುವ, ತನ್ನನ್ನು ಉತ್ತೇಜಿಸುವ, ಹಾಗೂ ತನ್ನ ಸಾಧನೆಗಳನ್ನು ಪ್ರಶಂಸಿಸುವ ಆತ್ಮೀಯ ವಯಸ್ಕರೊಬ್ಬರ ಅವಶ್ಯಕತೆ ಇರುತ್ತದೆ. ನಾವು ಪ್ರತಿಯೊಬ್ಬರೂ ಮಾರ್ಗದರ್ಶಕರಾಗಬಹುದು. ಹಿತೈಷಿಗಳಾಗಬಹುದು. ಯುವಕ ಇಲ್ಲವೆ ಯುವತಿಯೊಬ್ಬಳು ಜೀವನದ ಗುಟ್ಟುಗಳನ್ನು ಕಲಿಯಲು, ಸಮಾಜ ಬಯಸುವ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು, ಹಾಗೂ ಪ್ರತಿರೋಧಶಕ್ತಿಯನ್ನು ಬೆಳೆಸುವ ಆರೋಗ್ಯಕರ ಮನೋಭಾವವನ್ನು ಕಲಿಯಲು ನಾವೆಲ್ಲರೂ ಅವರ ಜೊತೆ ವಾರಕ್ಕೆ ಒಂದೆರಡು ಗಂಟೆಗಳನ್ನು ಕಳೆಯಬಹುದು. ತಮ್ಮ ಸಮಯ, ವಿವೇಕ, ಜ್ಞಾನ, ಮುಂತಾದವುಗಳನ್ನು ನೀಡುವ ಹಿತೈಷಿಗಳು, ಮಾರ್ಗದರ್ಶಕರು, ಗುರುಗಳು, ಯುವಗುಂಪುಗಳೊಂದಿಗೆ ತೊಡಗಿಕೊಳ್ಳುವ ಹಿರಿಯರು, ಹಾಗೂ ವಯಸ್ಕರ ಶಿಕ್ಷಣದ ಕಾರ್ಯಕರ್ತರು ಗಣನೀಯ ಪರಿಣಾಮ ಉಂಟುಮಾಡುವವರಿಗೆ ಉದಾಹರಣೆಗಳು. ಇಂತಹವರ ಜೀವನವೆ ಯುವಕರಿಗೆ ಒಂದು ಪ್ರತ್ಯಕ್ಷ ಉದಾಹರಣೆಯಾಗಿರುತ್ತದೆ. ನಮ್ಮ ಹದಿಹರಯದವರಿಗೆ ಭರವಸೆ ಹುಟ್ಟಿಸುವ ಹಾಗೂ ಅವರು ಕೆಲವು ತಪ್ಪುಗಳನ್ನು ಮಾಡದಂತೆ ಕಾಪಾಡುವ ಹಿತೈಷಿ ಹಿರಿಯರು ನಾವಾಗಬಹುದು.

ಈ ಅಸಂಗತಸತ್ಯದ ಜೀವನವನ್ನು ನೀವು ಜೀವಿಸಿದಾಗ, ಇತರರನ್ನು ಪ್ರೀತಿಸುವುದರ ಮತ್ತು ಅವರಿಗೆ ಸಹಾಯ ಮಾಡುವುದರ ಮೂಲಕ ಹಿರಿದಾದ ಅರ್ಥವನ್ನು ಕಂಡುಕೊಳ್ಳುತ್ತೀರಿ. ಇತರರೂ ಈ ಅರ್ಥವನ್ನು ಪಡೆದುಕೊಳ್ಳಲು ಅವರಿಗೆ ಸಹಾಯ ಮಾಡುವುದರ ಮೂಲಕವೂ ನೀವು ಈ ಆತ್ಮಾರ್ಥವನ್ನು ಪಡೆಯುತ್ತೀರಿ. ನೀವು ಏನು ಕಲಿತಿದ್ದೀರೊ ಅದನ್ನು ಇತರರೂ ಕಲಿತುಕೊಳ್ಳಲು ಸಹಾಯ ಮಾಡಿ. ಅವರು ನಿಮ್ಮ ತರಹವೇ ತಮ್ಮ ಸ್ವಂತ ಅಸಂಗತಸತ್ಯ ಜೀವನವನ್ನು ಕಂಡುಕೊಳ್ಳಲು ಮತ್ತು ಜೀವಿಸಲು ಸಾಧ್ಯವಾಗುವಂತಹ ಉದಾಹರಣೆ ನೀವಾಗಿ.

ಹೀಗೆ ಮಾಡುವುದರಲ್ಲಿ ಅಪಾರವಾದ ಭರವಸೆಯಿದೆ. ಆಶಾಭಾವವಿದೆ. “ಯಶಸ್ಸಿನ” ಮೇಲೆ ಗಮನ ಹರಿಸುವುದಕ್ಕಿಂತ ಹೆಚ್ಚಿನ ಗಮನವನ್ನು ಜೀವನದ ಅರ್ಥಪೂರ್ಣತೆಯ ಮೇಲೆ ಹೆಚ್ಚು ಹೆಚ್ಚು ಜನರು ಹರಿಸಲು ತೊಡಗಿಕೊಂಡಾಗ ಈ ಪ್ರಪಂಚ ಅಸಂಬದ್ಧವೆನಿಸದೆ ಸುಸಂಬದ್ಧವಾಗುತ್ತ ಹೋಗುತ್ತದೆ. ಯಾರಿಗೆ ಹೆಸರು ಸಿಕ್ಕಿಬಿಡುತ್ತದೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಜನ ಸಹಾಯ ಮಾಡಲು ಮುಂದಾಗುತ್ತಾರೆ. ತಮಗಿಂತ ಮೇಲಿನ ಸ್ಥಾನಗಳಿಗೆ ಹೋಗಿಬಿಡುತ್ತಾರೆ ಎನ್ನುವುದರತ್ತ ಗಮನ ಹರಿಸದೆ ತಮ್ಮ ಸಂಘಸಂಸ್ಥೆಗಳಲ್ಲಿ ಪರಸ್ಪರ ಸಹಾಯ ಮಾಡುತ್ತ ಹೋಗುತ್ತಾರೆ. ತಾವು ಮಾಡುವ ಕೆಲಸಗಳಿಂದ ಅಧಿಕಾರ, ಆಸ್ತಿ, ಅಂತಸ್ತು ಬರದೆ ಇದ್ದರೂ, ತಮ್ಮ ಮೌಲ್ಯಗಳನ್ನು ಜೀವಿಸಿ, ತಮ್ಮ ಹೃದಯಕ್ಕೆ ಹತ್ತಿರವಾದದ್ದರ ಹಿಂದೆ ಹೋಗುತ್ತಾರೆ. ತಾವು ಏನು ಮಾಡಲು ಹುಟ್ಟಿದ್ದಾರೊ ಅದನ್ನು ಮಾಡಲು ತೊಡಗುತ್ತಾರೆ. ಯಾರ ಅಧಿಕಾರ ಹೆಚ್ಚು ಎನ್ನುವ ಸಂಕುಚಿತ ಹಿನ್ನೆಲೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಜನ-ಸಂಸ್ಥೆ-ಸಮುದಾಯ-ಸಮಾಜಕ್ಕೆ ಯಾವುದು ಅತ್ಯಂತ ಹಿತವಾದದ್ದೊ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜನ ಆಗ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ತಮ್ಮ ಆತ್ಮಾರ್ಥವನ್ನು ಹೆಚ್ಚಿಸಿಕೊಳ್ಳಲು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಇಂತಹ ವ್ಯಕ್ತಿಗಳು ಮುಂದೆ ಬಂದು ಅತ್ಯಗತ್ಯವಾದ ವಿಷಯಗಳತ್ತ ಗಮನ ಹರಿಸಿದಾಗ ಮತ್ತು ಪ್ರಶಂಸೆಗಳ ಬಗ್ಗೆ ಯೋಚಿಸದೆ ಸಮಸ್ಯೆಗಳನ್ನು ಪರಿಹರಿಸಲು ತೊಡಗಿಕೊಂಡಾಗ ಈ ಪ್ರಪಂಚದ ಹುಚ್ಚಾಟ ಬಹಳಷ್ಟು ಕಮ್ಮಿ ಆಗಿರುತ್ತದೆ.

ನೀವು ಏನೇ ಮಾಡಲು ನಿರ್ಧರಿಸಿದರೂ, ಒಂದಂತೂ ಖಂಡಿತ: ಈ ಅಸಂಗತಸತ್ಯ ಜೀವನವನ್ನು ನೀವು ಜೀವಿಸಿದಾಗ ನಿಮಗೆ ಈ ತಿಕ್ಕಲು ಹುಚ್ಚು ಪ್ರಪಂಚದಲ್ಲಿ ಆರ್ಥ ಮತ್ತು ಆತ್ಮಸಂತೋಷ ದೊರಕುತ್ತದೆ. ನೀವು ಗುರುತರವಾದ ಸಕಾರಾತ್ಮಕ ವ್ಯತ್ಯಾಸವನ್ನು ಉಂಟುಮಾಡುತ್ತೀರಿ. ಬದುಕುಗಳನ್ನು ಬದಲಾಯಿಸುತ್ತೀರಿ.

ಹಾಗೆ ನೀವು ಬದಲಾಯಿಸುವ ಬದುಕುಗಳಲ್ಲಿ ಒಂದು ಬದುಕು ನಿಮ್ಮದೇ ಆಗಿರುತ್ತದೆ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

2 Comments

  1. venkataraya bhandary

    one of the best books i have ever read .nice effort at translation also.very meaningful thanks dr.p.v.bhandary

  2. venkataraya bhandary

    sorry mail id was wrong

Leave a Reply