ಏನೇ ಆಗಲಿ, ಒಳ್ಳೆಯದನ್ನೇ ಮಾಡಿ – ಪ್ರಸ್ತಾಪ
Posted in ಒಳ್ಳೆಯದನ್ನು ಮಾಡಿ on 12/03/2008 04:37 pm by ರವಿ ಕೃಷ್ಣಾ ರೆಡ್ಡಿನಾನು “ನಾಯಕತ್ವದ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್” ಅನ್ನು ಬರೆದಾಗ ಹಾರ್ವರ್ಡ್‌ನ ಎರಡನೆ ವರ್ಷದ ವಿದ್ಯಾರ್ಥಿಯಾಗಿದ್ದೆ. ಆಗ ನನಗೆ ಹತ್ತೊಂಬತ್ತು ವರ್ಷ ವಯಸ್ಸು. ಅವು ನಾನು ಹೈಸ್ಕೂಲ್ ವಿದ್ಯಾರ್ಥಿ ನಾಯಕರಿಗೆ ಬರೆದ “ಮೌನ ಕ್ರಾಂತಿ: ವಿದ್ಯಾರ್ಥಿ ಸಂಘಗಳಲ್ಲಿ ಕ್ರಿಯಾಶೀಲ ನಾಯಕತ್ವ” ಕೈಪಿಡಿಯ ಭಾಗವಾಗಿದ್ದವು. ಅದು 1968 ರಲ್ಲಿ ಹಾರ್ವರ್ಡ್ ಸ್ಟೂಡೆಂಟ್ ಏಜನ್ಸೀಸ್‌ನಿಂದ ಪ್ರಕಟಗೊಂಡಿತು. ನಾನು ಮತ್ತೆ ಸುಧಾರಿಸಿ ಬರೆದ ಆ ಕೈಪಿಡಿಯನ್ನು ಕೆಲವು ವರ್ಷಗಳ ಬಳಿಕ ಸೆಕಂಡರಿ ಸ್ಕೂಲ್ ಪ್ರಿನ್ಸಿಪಾಲ್‌ಗಳ ರಾಷ್ಟ್ರೀಯ ಒಕ್ಕೂಟ ಪ್ರಕಟಿಸಿತು. 60 ರ ದಶಕದ ಕೊನೆಯ ಭಾಗದಲ್ಲಿ ಮತ್ತು 70 ರ ದಶಕದ ಪ್ರಾರಂಭದಲ್ಲಿ ಅದರ ಸುಮಾರು 30 ಸಾವಿರ ಪ್ರತಿಗಳು ಮಾರಲ್ಪಟ್ಟವು.
ಅಮೆರಿಕದ ಇತಿಹಾಸದಲ್ಲಿ 60 ರ ದಶಕ ಪ್ರಕ್ಷುಬ್ಧ ಕಾಲ. ಆ ಸಮಯದಲ್ಲಿ ನಾನು ಎಂಟು ರಾಜ್ಯಗಳ ಅನೇಕ ಹೈಸ್ಕೂಲ್‌ಗಳಲ್ಲಿ, ವಿದ್ಯಾರ್ಥಿ ನಾಯಕತ್ವದ ಶಿಬಿರಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳ ಸಮಾವೇಶಗಳಲ್ಲಿ ಸಕ್ರಿಯವಾಗಿ ಭಾಷಣಗಳನ್ನು ಮಾಡುತ್ತಿದ್ದೆ. ವ್ಯವಸ್ಥೆಯ ಮುಖಾಂತರವೆ ತಮಗೆ ಬೇಕಾದ ಬದಲಾವಣೆಗಳನ್ನು ಸಾಧಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದೆ. ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುವುದು ಸುಲಭ ಎಂದೇನೂ ನಾನು ಅವರಿಗೆ ಹೇಳುತ್ತಿರಲಿಲ್ಲ್ಲ. ಬದಲಿಗೆ, ಅದಕ್ಕೆ ನಿರಂತರ ಪ್ರಯತ್ನ ಬೇಕು ಎಂದು ಹೇಳುತ್ತಿದ್ದೆ. ಆ ನಿರಂತರ ಪ್ರಯತ್ನ ಎನ್ನುವುದು ಪರರ ಕುರಿತ ಪ್ರಾಮಾಣಿಕ ಕಾಳಜಿಯಿಂದ ಮಾತ್ರ ಗಟ್ಟಿಯಾಗುತ್ತಿರುತ್ತದೆ ಎಂದು ಹೇಳುತ್ತಿದ್ದೆ. ಈ ಅಂಶವನ್ನು ನಾನು ಒತ್ತಿ ಒತ್ತಿ ಹೇಳುತ್ತಿದ್ದೆ. ಯಾಕೆಂದರೆ, ಅತ್ಯುನ್ನತ ಕನಸುಗಳಿಂದ, ಅತ್ಯುನ್ನತ ಆದರ್ಶಗಳಿಂದ ತಮ್ಮ ಕೆಲಸವನ್ನು ಆರಂಭಿಸುತ್ತಿದ್ದ, ಆದರೆ ನಕಾರಾತ್ಮಕ ಟೀಕೆ ಬಂದ ತಕ್ಷಣ, ಇಲ್ಲವೆ ಸೋಲು ಎದುರಾದ ತಕ್ಷಣ ತಮ್ಮ ಕೆಲಸವನ್ನು ನಿಲ್ಲಿಸಿಬಿಡುತ್ತಿದ್ದ ಅನೇಕ ವಿದ್ಯಾರ್ಥಿಗಳನ್ನು ನಾನು ಕಂಡಿದ್ದೆ. ಅವರಿಗೆ ನಿಜವಾಗಲೂ ಪರರ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ, ಕಷ್ಟವಾದರೂ ಮರುಪ್ರಯತ್ನ ಮಾಡುವ ಶಕ್ತಿ ಇರುತ್ತಿತ್ತು.
ನಾನು ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಅನ್ನು ಒಂದು ಸವಾಲಿಗೆ ಉತ್ತರವಾಗಿ ಪರಿಗಣಿಸಿದೆ. ಬೇರೆಯವರು ನಮ್ಮ ಕೆಲಸವನ್ನು ಮೆಚ್ಚಿ ಗೌರವಿಸದಿದ್ದರೂ ನಾವು ಮಾತ್ರ ಯಾವುದು ಸರಿಯೊ, ಒಳ್ಳೆಯದೊ, ಸತ್ಯವಾದದ್ದೊ ಅದನ್ನೆ ಮಾಡಬೇಕು ಎನ್ನುವುದೇ ಆ ಸವಾಲು. ಈ ಪ್ರಪಂಚವನ್ನು ಬದುಕಲು ಯೋಗ್ಯವಾದ ಸ್ಥಳವನ್ನಾಗಿ ಮಾಡುವುದು ನಮಗೆ ಸಿಗುವ ಚಪ್ಪಾಳೆಯ ಮೇಲೆ ಅವಲಂಬಿತವಾಗಿಲ್ಲ. ಏನೇ ಆಗಲಿ, ನಿರಂತರವಾಗಿ ಪ್ರಯತ್ನಿಸುತ್ತಲೆ ಇರಬೇಕು. ಇಲ್ಲದಿದ್ದರೆ, ಈ ಪ್ರಪಂಚದಲ್ಲಿ ಆಗಲೇಬೇಕಾದ ಎಷ್ಟೋ ಒಳ್ಳೆಯ ಕೆಲಸಗಳು ಆಗುವುದೇ ಇಲ್ಲ.
ನನಗೆ ಅನೇಕ ಸಬೂಬುಗಳನ್ನು ಹೇಳುತ್ತಿದ್ದರು. ಆದರೆ ಅವನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಇರಬಹುದು: ಬಹುಶಃ ಜನರು ತರ್ಕಹೀನರು, ಸರಿತಪ್ಪುಗಳ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು ಆಗಿರಬಹುದು. ಆದರೇನು? ಏನೇ ಇರಲಿ ನೀವು ಅವರನ್ನು ಪ್ರೀತಿಸಬೇಕು. ನೀವು ಇಂದು ಮಾಡುವ ಒಳ್ಳೆಯ ಕಾರ್ಯವನ್ನು ಜನ ನಾಳೆ ಮರೆತುಬಿಡಬಹುದು. ಆದರೇನು? ಆಗಲೂ ನೀವು ಒಳ್ಳೆಯದನ್ನು ಮಾಡಲೇಬೇಕು.
ನಾನು ಬರೆದ ಈ ಕಮ್ಯಾಂಡ್‌ಮೆಂಟ್‌ಗಳು ಜೀವನವನ್ನು ನಾನು ಗಮನಿಸಿದ ಹಾಗು ನನ್ನ ಸ್ವಂತ ಅನುಭವಗಳ ಆಧಾರದ ಮೇಲೆ ಹುಟ್ಟಿದವವು. ಅವನ್ನು ರೂಪಿಸಿದ ಹಲವಾರು ಘಟನೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಆದರೂ, ಇವುಗಳ ಹಿಂದೆ ಒಂದು ಮುಖ್ಯ ಅನುಭವದ ಕಾರಣ ಇದೆ ಎಂದು ಹೇಳುವುದಾದಲ್ಲಿ ಅದು ಮುಂದೆ ಹೇಳುವ ಘಟನೆಯಲ್ಲಿ ನನಗಾದ ಒಳನೋಟಕ್ಕೆ ಸಂಬಂಧಿಸಿದ್ದು. ಆ ಒಳನೋಟ ನನಗಾದದ್ದು ಯಾವಾಗೆಂದರೆ, ನಾನು ಹೈಸ್ಕೂಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮದ ವೇದಿಕೆಗೆ ಪ್ರಶಸ್ತಿ ಪಡೆಯಲು ನಡೆದು ಹೋಗುತ್ತಿದ್ದಾಗ. ಆ ಸಮಯದಲ್ಲಿ ನನಗೆ ಹೊಳೆದದ್ದು ಏನೆಂದರೆ, ನಾನು ಆ ವರ್ಷ ಏನೇನು ಮಾಡಿದ್ದೆನೊ ಅದರಿಂದ ನನಗೆ ಅಪರಿಮಿತ ಸಂತೋಷ ಉಂಟಾಗುತ್ತಿತ್ತು; ನಾನು ಆ ವರ್ಷ ಏನು ಕಲಿತಿದ್ದೆನೊ ಅದರ ಬಗ್ಗೆ ಮತ್ತು ಬೇರೆಯವರಿಗೆ ನನ್ನ ಕೈಲಾದ ಸಹಾಯ ಮಾಡಿದ್ದರ ಬಗ್ಗೆ ಹಿತವಾದ ಅನುಭವ ಆಗುತ್ತಿತ್ತು. ಖುಷಿಯಾಗುತ್ತಿತ್ತು. ಅದಕ್ಕಾಗಿ ನನಗೆ ಯಾವುದೆ ಪ್ರಶಸ್ತಿ ಬೇಕಾಗಿರಲಿಲ್ಲ. ನನಗೆ ಈಗಾಗಲೆ ಪ್ರತಿಫಲ ಸಿಕ್ಕಿದೆ ಎಂದುಕೊಂಡೆ. ಒಂದು ಒಳ್ಳೆಯ ಕೆಲಸ ಮಾಡಿದ್ದರಿಂದ ಬರುವ ತೃಪ್ತಿ ಮತ್ತು ಭಾವದ ಅರಿವು ನನಗೆ ಅಷ್ಟೊತ್ತಿಗೆ ಬಂದಾಗಿತ್ತು. ಬೇರೆಯವರು ಕೊಡಲಿ ಬಿಡಲಿ, ಆ ಅರಿವು ಮತ್ತು ತೃಪ್ತಿ ನನ್ನವಾಗಿದ್ದವು.
ಆಗ ಉಂಟಾದ ಆ ಜ್ಞಾನವೆ ನನ್ನ ಜೀವನದ ಒಂದು ಪ್ರಮುಖ ಬೆಳವಣಿಗೆ. ಎಲ್ಲದರಿಂದಲೂ ಸಂಪೂರ್ಣವಾಗಿ ಮುಕ್ತವಾದ, ಮನಸ್ಸು ಸಂಪೂರ್ಣವಾಗಿ ಪ್ರಶಾಂತಗೊಂಡ ಅನುಭವವಾಯಿತು. ಯಾವುದು ಸರಿಯಾದದ್ದೊ, ಒಳ್ಳೆಯದೊ, ಹಾಗು ಸತ್ಯವಾದದ್ದೊ, ಅದನ್ನು ನಾನು ಮಾಡಿದರೆ ಆ ನನ್ನ ಕ್ರಿಯೆಗಳಿಗೆ ಅವುಗಳದೇ ಆದ ಮೌಲ್ಯ ಇರುತ್ತದೆ ಎಂದು ಗೊತ್ತಾಯಿತು. ಹಾಗೆ ಮಾಡುವುದರಿಂದ ನನಗೆ ಬದುಕಿನ ಅರ್ಥ ಗೊತ್ತಾಗಿಯೇ ಆಗುತ್ತದೆ. ಅದರಿಂದ ಬರುವ ಮಿಕ್ಕ ಕೀರ್ತಿಪ್ರತಿಷ್ಠೆಗಳು ನನಗೆ ಬೇಕೇಬೇಕಾಗಿ ಇರಲಿಲ್ಲ.
ಅದಾದ ಮುಂದಿನ 25 ವರ್ಷಗಳನ್ನು ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳ ಬಗ್ಗೆ ಹೆಚ್ಚಿಗೆ ಕೇಳ್ಪಡದೆ, ನನ್ನ ಕೆಲಸ ನಾನು ಮಾಡುತ್ತ, ಅಲ್ಲಲ್ಲಿ ಭಾಷಣಗಳನ್ನು ಕೊಡುತ್ತ ಹಾಗೂ ಬರೆಯುತ್ತ, ಜೀವನವನ್ನು ಮುಂದುವರೆಸಿದೆ. ಆಗ ಒಂದು ದಿನ ನನಗೆ ಹೊನಲುಲುವಿನ ಪೋಲಿಸ್ ಮುಖ್ಯಸ್ಥ ಮೈಕೆಲ್ ನಕಮುರ ರವರಿಂದ ಫೋನ್ ಕರೆ ಬಂತು. “ನಾನು ಅಮೆರಿಕದ ಪೋಲಿಸ್ ಮುಖ್ಯಸ್ಥರ ಸಮಾವೇಶದಲ್ಲಿ ಭಾಗಿಯಾಗಿದ್ದೆ,” ಅವರು ಹೇಳಿದರು, “ಆಗ ಒಬ್ಬ ಭಾಷಣಕಾರರು ಕೆಂಟ್ ಕೀತರ ‘ನಾಯಕತ್ವದ ವಿರುದ್ಧೋಕ್ತಿ ಕಟ್ಟಳೆಗಳು’ ಅನ್ನು ಓದಿದರು. ಆ ಕೆಂಟ್ ಕೀತ್ ರವರು ನೀವೇ ಏನು?” ನಾನು ಹೌದು, ಅದು ನಾನೆ ಎಂದೆ. ಅದಾದ ವರ್ಷದ ಬಳಿಕ ಶಮಿನಾಡ್ ವಿಶ್ವವಿದ್ಯಾಲಯದ ಲೈಬ್ರರಿಯನ್ ಒಬ್ಬರು ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ನ ಪ್ರಿಂಟ್‌ಔಟ್ ತೋರಿಸಿ, ಅದನ್ನು ಇಂಟರ್‌ನೆಟ್‌ನಲ್ಲಿ ಲೈಬ್ರರಿಯನ್ನುಗಳಿಗೆ ಹಂಚುತ್ತಿದ್ದಾರೆ ಎಂದರು. ಅದಾದ ಹಲವಾರು ತಿಂಗಳುಗಳ ನಂತರ ದಕ್ಷಿಣ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಡಾ. ಫ್ರ್ಯಾನ್ ನ್ಯೂಮನ್‌ರವರು ಡಾಕ್ಟರಲ್ ಪದವಿಯ ವಿಷಯವೊಂದನ್ನು ಬೋಧಿಸಲು ಹೊನಲುಲುಗೆ ಬಂದರು. ಆಕೆ ತರಗತಿಯಲ್ಲಿ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಅನ್ನು ಹಂಚುತ್ತ, ತಾನು ಕಲಿಸುವ ಪ್ರತಿಯೊಂದು ಪದವಿ ತರಗತಿಯ ಪ್ರಾರಂಭದ ದಿನವನ್ನು ಕಮ್ಯಾಂಡ್‌ಮೆಂಟ್ಸ್ ಕುರಿತ ಮಾತಿನೊಂದಿಗೆ ಪ್ರಾರಂಭಿಸುವುದಾಗಿ ತಿಳಿಸಿದರು.
ಮದರ್ ಥೆರೆಸ ತೀರಿಕೊಂಡ ಕೆಲವು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 1997 ರಲ್ಲಿ ನಮ್ಮ ರೋಟರಿ ಕ್ಲಬ್ಬಿನ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಪ್ರತಿ ಸಭೆಯನ್ನೂ ಪದ್ಯ, ಇಲ್ಲವೆ ಪ್ರಾರ್ಥನೆ, ಇಲ್ಲವೆ ಚಿಂತನೆಯೊಂದರ ಮುಖಾಂತರ ಆರಂಭಿಸುವುದು ಸಂಪ್ರದಾಯ. ಅಂದು ನಮ್ಮ ಕ್ಲಬ್ಬಿನ ಸಹಸದಸ್ಯನೊಬ್ಬ ಮದರ್ ಥೆರೆಸ ತೀರಿಕೊಂಡದ್ದನ್ನು ಪ್ರಸ್ತಾಪಿಸಿ, ಆಕೆ ಬರೆದಿರುವ ಪದ್ಯವೊಂದನ್ನು ಓದಲು ಬಯಸುವುದಾಗಿ ತಿಳಿಸಿದ. ನಾನು ಅಲ್ಲಿ ತಲೆ ಬಾಗಿ ನಿಂತಿದ್ದಾಗ ಆ ವ್ಯಕ್ತಿ ನನಗೆ ಪರಿಚಿತವಾದದ್ದೊಂದನ್ನು ಓದುತ್ತಿರುವುದು ಕೇಳಿಸಿತು. ಅದಾದ ಮೇಲೆ ನಾನು ಆತನ ಬಳಿಗೆ ಹೋಗಿ, ಆತ ಓದಿದ ಪದ್ಯ ಆತನಿಗೆ ಎಲ್ಲಿ ಸಿಕ್ಕಿತು ಎಂದು ಕೇಳಿದೆ. ಅದು ಮದರ್ ಥೆರೆಸರ ಮೇಲಿನ ಪುಸ್ತಕವೊಂದರಲ್ಲಿ ಇತ್ತು ಎಂದನಾತ.
ಮಾರನೆಯ ದಿನ ಸಂಜೆ ಪುಸ್ತಕದ ಅಂಗಡಿಗೆ ಹೋಗಿ ಮದರ್ ಥೆರೆಸರ ಜೀವನ ಮತ್ತು ಕಾರ್ಯಗಳ ಬಗೆಗಿದ್ದ ವಿಭಾಗದಲ್ಲಿನ ಪುಸ್ತಕಗಳನ್ನು ತಿರುವಿ ಹಾಕಲಾರಂಭಿಸಿದೆ. ಅದು ಲುಸಿಂಡ ವರ್ಡೆ ಎಂಬುವವರು ಸಂಕಲಿಸಿದ್ದ “ಮದರ್ ಥೆರೆಸ: ಒಂದು ಸರಳ ಹಾದಿ” ಎಂಬ ಪುಸ್ತಕದ ಕೊನೆಯ ಪುಟದಲ್ಲಿ ಇತ್ತು. ಆ ಪದ್ಯದ ಹೆಸರು “Anyway” ಎಂದಿತ್ತು. ಅದರಲ್ಲಿ ನಾನು 1968 ರಲ್ಲಿ ಬರೆದು ಪ್ರಕಟಿಸಿದ್ದ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ನಲ್ಲಿನ ಎಂಟು ಕಟ್ಟಳೆಗಳು ಇದ್ದವು. ಅದೊಂದು ಪದ್ಯದಂತೆ ಕಾಣಲು ಕೆಲವು ಪದಗಳ ಶೈಲಿಯನ್ನು ಹೊಂದಿಸಲಾಗಿತ್ತು. ಅದನ್ನು ಬಿಟ್ಟು ಬೇರೇನೂ ಬದಲಾವಣೆಗಳಿರಲಿಲ್ಲ. ಯಾವುದೆ ಲೇಖಕ ಅಥವ ಕವಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆದರೆ ಅದರ ಕೆಳಗಡೆ, “ಕಲ್ಕತ್ತದ ಶಿಶು ಭವನದಲ್ಲಿನ ಗೋಡೆಯೊಂದರ ಫಲಕದ ಮೇಲಿದ್ದದ್ದು.” ಎಂದು ಬರೆಯಲಾಗಿತ್ತು.
ನನ್ನ ಬೆನ್ನುಹುರಿಯಲ್ಲಿ ತಣ್ಣನೆಯ ಭಾವ ಮೇಲೆ ಕೆಳಗೆ ಹರಿಯುತ್ತಿರಬೇಕಾದರೆ ನಾನು ಸ್ತಬ್ಧನಾಗಿ ನಿಂತಿದ್ದೆ. ನನಗೆ ಅದೊಂದು ಅವಿಸ್ಮರಣೀಯ ಗಳಿಗೆ. ನಾನು ಮುವ್ವತ್ತು ವರ್ಷಗಳ ಹಿಂದೆ ಬರೆದದ್ದು ಅದು ಹೇಗೋ ಪ್ರಪಂಚದ ಇನ್ನೊಂದು ಭಾಗದಲ್ಲಿನ ಭಾರತದ ತನಕ ಹೋಗಿದೆ. ಅಲ್ಲಿ ಮದರ್ ಥೆರೆಸರವರೊ, ಇಲ್ಲವೆ ಅವರ ಸಹೋದ್ಯೋಗಿಗಳೊ, ತಾವು ಮಕ್ಕಳನ್ನು ನೋಡಿಕೊಳ್ಳುತ್ತಿರುವಾಗ ಇದು ಪ್ರತಿದಿನವೂ ನೋಡಲು ಯೋಗ್ಯವಾದದ್ದು ಎಂದು ಭಾವಿಸಿ ಅದನ್ನು ಗೋಡೆಯ ಮೇಲೆ ಹಾಕಿದ್ದಾರೆ. ಆ ವಿಚಾರ ನನ್ನನ್ನು ಗಾಢವಾಗಿ ತಟ್ಟಿತು. ನನಗೆ ಮದರ್ ಥೆರೆಸರ ಆಧ್ಯಾತ್ಮಿಕತೆ ಮತ್ತು ಅವರು ಮಾಡಿದ್ದ ಕೆಲಸಗಳ ಬಗ್ಗೆ ಬಹಳವಾದ ಗೌರವವಿತ್ತು. ನನಗೆ ಶಿಶು ಭವನಗಳ ಬಗ್ಗೆಯೂ ಗೊತ್ತಿತ್ತು. ಏಕೆಂದರೆ, ನಾನು ಮತ್ತು ನನ್ನ ಪತ್ನಿ ನಮ್ಮ ಮೂವರು ಮಕ್ಕಳನ್ನು ಜಪಾನ್ ಮತ್ತು ರೊಮೇನಿಯಗಳ ಶಿಶು ಭವನಗಳಿಂದ ದತ್ತು ತೆಗೆದುಕೊಂಡಿದ್ದೆವು.
ಅದಾದ ಕೆಲವು ವಾರಗಳ ಬಳಿಕ, ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್‌ಗಳ ಬಗೆಗಿನ ಈ ವಿಷಯವನ್ನು ಹಂಚಿಕೊಳ್ಳಲು ನನ್ನ ಪಾದ್ರಿಯಾಗಿರುವ ರೆವರೆಂಡ್ ಡಾನ್ ಆಸ್ಮನ್‌ರನ್ನು ಹೋಗಿ ಭೇಟಿಯಾದೆ. ಅವರ ಕಚೇರಿಯ ಒಳಗೆ ಹೋಗಿ ನೋಡುತ್ತೇನೆ, ಅಲ್ಲಿ ಅವರ ಮೇಜಿನ ಮೇಲೆ “ಮದರ್ ಥೆರೆಸ: ಒಂದು ಸರಳ ಹಾದಿ” ಪುಸ್ತಕ ಇದೆ. ಅವರಿಗೆ ಆಗ ತಾನೆ ಯಾರೊ ಆ ಪುಸ್ತಕವನ್ನು ಕೊಟ್ಟಿದ್ದರು. ನಾನು ಆ ಪುಸ್ತಕವನ್ನು ತೆರೆದು ಅವರಿಗೆ ಆ ಪುಟವನ್ನು ತೋರಿಸಿ, ಅದರ ಕತೆಯನ್ನೆಲ್ಲ ಹೇಳಿದೆ. ನಾನು ಆ ಪುಸ್ತಕದ ಪ್ರತಿಯೊಂದನ್ನು ಕ್ಯಾಲಿಫೋರ್ನಿಯಾದಲ್ಲಿರುವ ನನ್ನ ಸೋದರಿ ಮೋನಾಗೆ ಕಳುಹಿಸಿದೆ. ಆಕೆ ಅದನ್ನು ಖಾಸಗಿ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ತನ್ನ ಮಗಳು ಲೀಸಾಳಿಗೆ ಕೊಟ್ಟಳು. ಲೀಸಾಗೆ ಆಶ್ಚರ್ಯವಾಯಿತು. ಆಕೆಗೆ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಗೊತ್ತಿದ್ದವು. ಯಾಕೆಂದರೆ ಅವನ್ನು ಅವರ ಶಿಕ್ಷಕರ ಕೊಠಡಿಯ ಗೋಡೆಯ ಮೇಲೆ ಹಾಕಲಾಗಿತ್ತು.
ಹೀಗೆ ಈ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಪ್ರಪಂಚದಾದ್ಯಂತ ಹರಡಿರುವುದನ್ನು ಹಾಗೂ ಇಪ್ಪತ್ತೈದು ವರ್ಷಗಳಾದ ನಂತರ ಬೇರೆಬೇರೆ ರೀತಿಯಲ್ಲಿ, ಬೇರೆಬೇರೆ ಆಕೃತಿಯಲ್ಲಿ ನನ್ನತ್ತ ಮರಳಿ ಬರಲು ಆರಂಭಿಸಿದ್ದನ್ನು ಕಂಡು ನಾನು ಮಂತ್ರಮುಗ್ಧನಾದೆ. ಇಂದಿಗೂ ಸಹ ಜನ ಜೀವನದ ಅರ್ಥಕ್ಕಾಗಿ, ಪಾರಮಾರ್ಥಿಕ ಸತ್ಯಕ್ಕಾಗಿ ಹಸಿವಿನಿಂದ ಕೂಡಿರುವುದನ್ನು ಇದು ನನಗೆ ಸೂಚಿಸಿತು. ಅದೇ ರೀತಿ, ಜನ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ಬಯಸುತ್ತಿರಬಹುದು ಎಂಬುದನ್ನೂ ಸೂಚಿಸಿತು.
ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕು ಎಂದುಕೊಂಡ ಜನರಿಗೆ ಈ ಪುಸ್ತಕ. ಇದು ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್ ಅಂದರೆ ಏನು, ಅವುಗಳ ಹಿಂದಿರುವ ಕತೆಗಳು ಮತ್ತು ವಿಚಾರದ ಬಗ್ಗೆ, ಹಾಗೂ ಅವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಇದೆ. ಈ ಪ್ರಪಂಚ ಎಷ್ಟೇ ಹುಚ್ಚುತನದಿಂದ ಕೂಡಿದ್ದರೂ ಜನ ತಮ್ಮ ಬದುಕಿಗೆ ಅರ್ಥವನ್ನು ಕಂಡುಹಿಡಿದು ಕೊಳ್ಳಬಹುದು ಎನ್ನುವುದು ನನಗೆ ಮನದಟ್ಟಾಗಿದೆ. ಅದೇ ರೀತಿ, ಕೀರ್ತಿ ಮತ್ತು ಪ್ರಶಂಸೆಗಿಂತ ತಮ್ಮ ಬದುಕಿನ ವ್ಯಕ್ತಿಗತ ಅರ್ಥವನ್ನು ಕಂಡುಹಿಡಿಯಲು ಜನರು ಪ್ರಯತ್ನಿಸಿದರೆ ಹಾಗೂ ಇಂತಹ ವಿಪರ್ಯಾಸ ಸತ್ಯದ ಜೀವನವನ್ನು ಪಾಲಿಸಿದರೆ ಈ ಜಗತ್ತು ನಮಗೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ ಎನ್ನುವುದೂ ನನಗೆ ಮನದಟ್ಟಾಗಿದೆ. ನಮ್ಮ ಸ್ವಂತ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಿರುವಾಗ, ನಮ್ಮಲ್ಲಿನ ಪ್ರತಿಯೊಬ್ಬರೂ, ನಮ್ಮೆಲ್ಲರಿಗಾಗಿ, ಬದುಕಲು ಯೋಗ್ಯವಾದ ಇನ್ನೂ ಉತ್ತಮ ಸ್ಥಳವಾಗಿ ಈ ಜಗತ್ತನ್ನು ಮಾಡಿಕೊಳ್ಳಬಹುದು.
ಕೆಂಟ್ ಎಂ. ಕೀತ್
ಹೊನಲುಲು, ಹವಾಯಿ ರಾಜ್ಯ, ಅಮೆರಿಕ
2002
ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು: