ಓ ದೇವರೇ, ಈ ರೈತರನ್ನು ಕಾಪಾಡಪ್ಪ…

This post was written by admin on June 11, 2008
Posted Under: Uncategorized

[2007 ರ ಏಪ್ರಿಲ್‍ನಲ್ಲಿ ಬರೆದದ್ದು ಈ ಲೇಖನ. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಮೇ 25, 2007 ರ ಸಂಚಿಕೆಯಲ್ಲಿ ಮುಖಪುಟ ಲೇಖನವಾಗಿ ಪ್ರಕಟವಾಗಿತ್ತು. ಎರಡು ದಿನಗಳ ಹಿಂದೆ (ಜೂನ್ 10, 2008) ರೈತನೊಬ್ಬ ಗುಂಡಿಗೆ ಬಲಿಯಾಗಿದ್ದಾನೆ. ವ್ಯವಸ್ಥೆ ಅಷ್ಟೇನೂ ಸ್ಥಿತಿವಂತನಲ್ಲದ ರೈತನ ಪರ ಇರುವುದು ಅಪರೂಪ. ಜೊತೆಗೆ ಆತನವೇ ಒಂದಷ್ಟು ಸ್ವಯಂಕೃತಾಪರಾಧಗಳು; ಕಮ್ಮಿ ಬುದ್ಧಿವಂತಿಕೆ; ಪರಾವಲಂಬಿ ಜೀವನ. ಇವುಗಳ ನಡುವೆ ರೈತರ ಆತ್ಮಹತ್ಯೆಗಳು ಸಾಲದೆಂದು ಹತ್ಯೆಗಳೂ ಸಹ... ಮಡಿದವನ ಮತ್ತು ಬೀಜ ಮತ್ತು ಗೊಬ್ಬರಕ್ಕೆ ಸುಡುಬಿಸಿಲಲ್ಲಿ ಸರದಿಯಲ್ಲಿ ನಿಂತಿರುವ ಸಹಸ್ರಾರು ಜನರ ನೆನಪಿನಲ್ಲಿ...]


ಕಳೆದ ವರ್ಷ ಪತ್ರಿಕೆಯ ಆರಂಭಕ್ಕೆಂದು ನಾಲ್ಕು ವಾರ ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿಗೆ ಬಂದಿದ್ದೆ. ನಾಲ್ಕು ವಾರ ಎಂದಿದ್ದು ಏಳು ವಾರಕ್ಕಿಂತ ಮೇಲಾಯಿತು. ಬಹುಶಃ ನಾನು ಆ ಸಮಯದಲ್ಲಿ ಅನುಭವಿಸಿದ ಮಾನಸಿಕ ಯಾತನೆ, ಭಯ, ಅಸಹಾಯಕತೆ, ಹಿಂದೆ ಅನುಭವಿಸಿದವುಗಳಿಗಿಂತ ಬೇರೆ ತೆರನಾಗಿದ್ದವು.

ನಾನು ಈಗಿನ H1 ವೀಸಾದ ಮೇಲೆ ಅಮೇರಿಕಕ್ಕೆ ಬರುವ ಸಮಯದಲ್ಲಿ ನನಗೆ ಗೊತ್ತಿಲ್ಲದ ಹಾಗೆಯೆ ಯಾರೋ ಒಬ್ಬ ತನ್ನ ಲಾಭಕ್ಕಾಗಿ ನನ್ನ ನೇಣಿಗೊಂದು ಕುಣಿಕೆ ಬಿಗಿದಿದ್ದ. ಪ್ರತಿ ಎರಡು ಮೂರು ವರ್ಷಕ್ಕೆ ನಾನು ಹೋಗಿಬರಬೇಕಾದ ದಾರಿಯಲ್ಲಿ ಅದನ್ನು ತಗಲಿಹಾಕಿ ಹೋಗಿದ್ದ. ಯಾವಾಗ ಎಲ್ಲಿ ಬೇಕಾದರೂ ಬೀಳಬಹುದಾಗಿದ್ದ ನೇಣು ಅದು. ಪುಣ್ಯಭೂಮಿ ಭಾರತದ “ರಾಮಭಂಟ” ಲೋಕಸಭಾ ಸದಸ್ಯರೆ ಕ್ರಿಮಿನಲ್‌ಗಳಾಗಿ, ಬೇರೆ ದೇಶಕ್ಕೆ ಕಳ್ಳತನದಲ್ಲಿ ಜನರನ್ನು ಸ್ಮಗಲ್ ಮಾಡುವಂತಹ ಫ್ರಾಡ್ ಮಾಡಿ ಸಿಕ್ಕಿಹಾಕಿಕೊಂಡಿರುವ ಹಿನ್ನೆಲೆಯಲ್ಲಿ ನನ್ನ ಕತೆಯನ್ನೂ ನೋಡಬಹುದು. ಜನರನ್ನು ಕಳ್ಳತನದಲ್ಲಿ ವಿದೇಶಗಳಿಗೆ ಸಾಗಿಸುವ ಗುಂಪೊಂದು ನನ್ನ ದಾಖಲೆ ಪತ್ರಗಳನ್ನು ಕದ್ದು ದುರುಪಯೋಗಪಡಿಸಿಕೊಂಡು ಆಗಲೆ ನಾಲ್ಕು ವರ್ಷಗಳಾಗಿದ್ದವು. ಯಾರಿಗೂ ಗೊತ್ತಿರಲಿಲ್ಲ…

ನನಗೆ ಆ ಕ್ರಿಮಿನಲ್‌ಗಳು ಬಿಗಿದಿದ್ದ ಕುಣಿಕೆಯನ್ನು ಎಷ್ಟು ಜಾಣತನದಿಂದ ಹೆಣೆಯಲಾಗಿತ್ತು ಎಂದರೆ, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಇದು ಬೇರೆಯವರು ನನ್ನನ್ನು ನೇಣಿಗೆ ಹಾಕಲು ಮಾಡಿರುವ ತಂತ್ರ,” ಎಂದು ಸಾಬೀತು ಮಾಡಲು ನನ್ನಲ್ಲಿ ಯಾವುದೇ ಪುರಾವೆ ಇಲ್ಲದ ರೀತಿಯಲ್ಲಿ ಹೆಣೆಯಲಾಗಿತ್ತು. ನಾಲ್ಕು ವರ್ಷದ ಹಿಂದೊಮ್ಮೆ ನಾನು ಆ ಕುಣಿಕೆ ಇದ್ದ ಬಾಗಿಲಿನಲ್ಲಿ ಹೋಗಿದ್ದೆ. ಆಗ ಅದು ಬೀಳಲಿಲ್ಲ. ಈಗ ಅವಲೋಕಿಸಿದಾಗ, ಆಗೇನಾದರೂ ಆ ಕುಣಿಕೆ ಬಿದ್ದಿದ್ದರೆ ಬಹುಶಃ ನನ್ನ ವೈಯಕ್ತಿಕ ಮತ್ತು ಸಾಂಸಾರಿಕ ಜೀವನವೆ ನಾಶವಾಗಿಬಿಡುತ್ತಿದ್ದ ಸಾಧ್ಯತೆಗಳೆ ಹೆಚ್ಚಿಗಿದ್ದವು ಎನ್ನಿಸುತ್ತದೆ! ಉತ್ತರ ಭಾರತದ ಎನ್ನಾರೈ ಮದುವೆ ಗಂಡುಗಳು ಮೋಸ ಮಾಡುವ ಸುದ್ದಿಗಳು ಪತ್ರಿಕೆಗಳಲ್ಲಿ ಬರುವಂತೆ, ನನ್ನದೂ ಸಹ ಎಲ್ಲರೂ ನಂಬಿಬಿಡಬಹುದಾಗಿದ್ದ ಸುದ್ದಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು! ಆದರೆ ಆ ಕುಣಿಕೆ ಮೊದಲ ಎರಡು ಮೂರು ಸಲವೂ ಬೀಳದೆ, ಕಳೆದ ವರ್ಷ ಪತ್ರಿಕೆಯ ಕೆಲಸವನ್ನು ಮೈಮನಕ್ಕೆಲ್ಲಾ ಹೊದ್ದುಕೊಂಡು ಬಂದಿದ್ದಾಗ ಬಿತ್ತು!

ನನ್ನ ನಿರಪರಾಧಿತನವನ್ನು anti-fraud ತನಿಖೆದಾರರಿಗೆ ಸಾಬೀತು ಪಡಿಸಲು ನನ್ನಲ್ಲಿ ತಾರ್ಕಿಕ ವಾದಗಳಿದ್ದವೆ ಹೊರತು, ಸಾಕ್ಷ್ಯಗಳಲ್ಲ. ಈ ವಿಚಾರವಾಗಿ ನಡೆದ ಘಟನೆಗಳು ಯಾಕೆ, ಎಲ್ಲಿಂದ, ಯಾರಿಂದ ಆರಂಭವಾದವು ಎನ್ನುವುದರಿಂದ ಹಿಡಿದು ಎಲ್ಲಿ, ಹೇಗೆ ತೀರ್ಮಾನವಾಗುತ್ತವೆ ಎನ್ನುವವರೆಗೂ ಪ್ರತಿಯೊಂದೂ ಮನುಷ್ಯನ ಮನೋ ಪ್ರಪಂಚದಲ್ಲಿ ಆ ಸಮಯಕ್ಕೆ ಅವನಿಗೆ ದಿಕ್ಕು ತೋರಿದಂತೆ ನಡೆಯುತ್ತಿದ್ದವೆ ಹೊರತು ಅವನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಯಾವುದೇ ವೈಜ್ಞಾನಿಕ, ತಾರ್ಕಿಕ ಕಾರಣಗಳು ಆಧಾರವಾಗಿರಲಿಲ್ಲ. ನನ್ನ ಭವಿಷ್ಯ ಮತ್ತು ಇತಿಹಾಸ ಕೆಲವೇ ಕೆಲವು ಮನುಷ್ಯರ ಆ ಸದ್ಯದ ಮೂಡಿನ ಮೇಲೆ, ಅವರ ಮನಸ್ಸಿನ ಉಲ್ಲಾಸ, ಖುಷಿಯ ಮೇಲೆ ಸಂಪೂರ್ಣವಾಗಿ ನಿಂತಿತ್ತು. ನನ್ನ ನಗು, ನಡೆ, ನುಡಿ ಎಲ್ಲವನ್ನೂ ಕಿಂಡಿಯ ಆಚೆ ಬದಿಯಿದ್ದವ ನೆಗೆಟಿವ್ ಆಗಿ ತೆಗೆದುಕೊಳ್ಳಬಹುದಿತ್ತು; ಇಲ್ಲವೆ ಪಾಸಿಟಿವ್ ಆಗಿಯೂ. ಆ ಸಮಯದಲ್ಲಿ ನನ್ನ ಪರಿಸ್ಥಿತಿ ಹೇಗಿತ್ತೆಂದರೆ, “ಓ ದೇವರೇ, ತಿರುಪತಿ ತಿಮ್ಮಪ್ಪ, ಸಂಕಟ ಬಂದಿದೆಯೊ ವೆಂಕಟರಮಣ, ಕಾಪಾಡು ತಂದೆ,” ಎಂದು ಮೌನವಾಗಿ ಏಕಾಂತದಲ್ಲಿ ಮೊರೆಯಿಕ್ಕುವಷ್ಟು.

ಎಲ್ಲೆಲ್ಲಿ ಏನಾಗಿದೆ, ಏನಾಗುತ್ತಿದೆ, ಇದು ಎಲ್ಲಿಯವರೆಗೂ ಹೋಗಬಹುದಾದ ಸಾಧ್ಯತೆಗಳಿವೆ ಎಂದು ಗೊತ್ತಿದ್ದದ್ದು ಆಗ ನನಗೆ ಮಾತ್ರ. ನನಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಯಾರೊಬ್ಬರೂ ಇರಲಿಲ್ಲ. ಏನೇನು ಮಾಡಬಹುದೊ ಅದೆಲ್ಲವನ್ನೂ ನಾನೇ ಮಾಡಬೇಕಿತ್ತು. ನನ್ನ ಅಂತರಾತ್ಮ ಮತ್ತು ನನ್ನ ಆಸ್ತಿಕತೆ ಮಾತ್ರ ನನಗೆ ಆಗ ಆತ್ಮಸ್ಥೈರ್ಯ ತುಂಬಬಹುದಿತ್ತು. ಕೆಂಪುಪಟ್ಟಿಯ ಎಳೆದಾಟಕ್ಕೆ ಅಷ್ಟಾಗಿ ಸಿಕ್ಕಿಸದೆ ಸಂಬಂಧಪಟ್ಟವರು ಕೊನೆಗೂ ನನ್ನ ಕೇಸನ್ನು ತೀರ್ಮಾನಿಸಿದರು. ಆಗಲೂ ಅದು ನಾಲ್ಕು ವಾರಗಳಷ್ಟು ಸುದೀರ್ಘ ಸಮಯ ತೆಗೆದುಕೊಂಡಿತ್ತು. ಮುಂಬಯಿಗೆ ಎರಡು ಸಲ, ಚೆನ್ನೈಗೆ ಒಂದು ಸಲ ಹೋಗಿ ಬರಬೇಕಾಯಿತು. ನನ್ನದು ತಪ್ಪಿರಲಿಕ್ಕಿಲ್ಲ ಎಂದು ಸ್ವತಃ ಸಾಬೀತು ಪಡಿಸಿಕೊಳ್ಳುವುದೂ ಸ್ವತಃ ಅವರಿಗೂ ಕಷ್ಟವಿತ್ತು. ಆದರೂ ನನ್ನ ಪರವಾಗಿಯೇ ತೀರ್ಮಾನ ತೆಗೆದುಕೊಂಡರು. ದೇವರು ಕೈಬಿಡಲಿಲ್ಲ ಎಂದುಕೊಂಡೆ!

ಇದು ನನ್ನೊಬ್ಬನ ವೈಯಕ್ತಿಕ ಯಾತನೆಯ ವಿಚಾರ. ಒಂದು ವರ್ಗದ ಕೋಟ್ಯಾಂತರ ಜನ ತಮ್ಮ ತಪ್ಪಿಲ್ಲದಿದ್ದರೂ ಪ್ರತಿವರ್ಷವೂ ಒಂದಲ್ಲ ಒಂದು ತರಹ ಅನುಭವಿಸುವ ಯಾತನೆಗೆ ಪೀಠಿಕೆಯಾಗಿ ಇದನ್ನು ತೆಗೆದುಕೊಂಡಿದ್ದು. ಅದು ಕೆಲವೊಮ್ಮೆ ಆ ಜನರ ಅಜ್ಞಾನದಿಂದ, ಮೌಢ್ಯದಿಂದ, ಸ್ವಯಂಕೃತಾಪರಾಧದಿಂದ ಆದರೂ, ಬಹುಪಾಲು ನಿಸರ್ಗ ಮತ್ತು ಸಮಾಜ ಅವರನ್ನು ಆ ಸ್ಥಿತಿಗೆ ತಳ್ಳುತ್ತದೆ. ಮೂರು ವಾರದ ಹಿಂದೆ ಅಮೇರಿಕಕ್ಕೆ ಮರಳುವ ಮೂರ್ನಾಲ್ಕು ದಿನದ ಹಿಂದೆ ಮನೆಯವರೆಲ್ಲ ಸೇರಿ ತಿರುಪತಿಗೆ ಹೋಗುತ್ತಿದ್ದಾಗ ಕಾಣಿಸಿದ್ದು ಆ ದೃಶ್ಯ. ಬೆಳ್ಳಂಬೆಳಿಗ್ಗೆಯೆ ಕೋಲಾರ ದಾಟಿ ಮುಳಬಾಗಿಲಿನತ್ತ ಹೋಗುತ್ತಿತ್ತು ಗಾಡಿ. ಆಗ ಪತ್ರಿಕೆಯ ಪ್ರಕಾಶಕರಾದ ನನ್ನಣ್ಣ ಸುರೇಶ್ ರಸ್ತೆಯ ಬದಿಗೊಮ್ಮೆ ಕೈತೋರಿಸಿ, “ನೋಡೊ, ಟೊಮೇಟೋಗೆ ಕೇಜಿಗೆ 40 ಪೈಸೆಯಂತೆ!! ರೈತರೆಲ್ಲ ಟೊಮ್ಯಾಟೊ ತಂದು ಇಲ್ಲಿ ರಸ್ತೆಗೆ ಸುರಿದಿದ್ದಾರೆ. ನೋಡು. ಈ ದರಿದ್ರ ಸರ್ಕಾರ, ಅಧಿಕಾರಿಗಳು ಏನು ಮಾಡುತ್ತಾರೊ? ಒಂದು ಕೇಜಿ ಸಾಮಗ್ರಿಯನ್ನು ಶೈತ್ಯೀಕರಿಸಲು ಇಡೀ ತಿಂಗಳಿಗೆ ಕೇವಲ ಒಂದು ರೂಪಾಯಿ ಮಾತ್ರ ಖರ್ಚು ಬೀಳುತ್ತದೆ. ಇನ್ನೊಂದು ತಿಂಗಳಿಗೆಲ್ಲ ಟೊಮ್ಯಾಟೊ ಕೇಜಿಗೆ ಐದು ಹತ್ತು ರೂಪಾಯಿ ಆಗುತ್ತದೆ. ತಮ್ಮ ಇಡೀ ವರ್ಷದ ದುಡಿಮೆ ಮತ್ತು ಜೀವನ ಹಾಳು ಮಾಡಿಕೊಂಡ ಈ ನಿಷ್ಪಾಪಿ ರೈತರ ಹತ್ತಿರ ಇದನ್ನೆಲ್ಲ ಕೊಂಡುಕೊಂಡು ಒಂದು ತಿಂಗಳು ಕೋಲ್ಡ್-ಸ್ಟೋರೇಜ್‌ನಲ್ಲಿ ಇಟ್ಟಿದ್ದರೆ ಸಾಕಿತ್ತು, ಸರ್ಕಾರ ಇವರನ್ನೆಲ್ಲ ಉಳಿಸಬಹುದಿತ್ತು,” ಎಂದರು.


ಟೊಮ್ಯಾಟೊ ರಸ್ತೆಗೆ: ರೈತ ಬೀದಿಗೆ!

ಮನೆಯಲ್ಲಿ ಉಳುವ ಎತ್ತುಗಳು ಇಲ್ಲ ಅಂದರೆ ಬೆಂಗಳೂರಿನ ಸುತ್ತಮುತ್ತ ರಾಗಿ, ಭತ್ತ ಬೆಳೆಯಲು ಬೇರೆಯವರ ಮೇಲೆ ಬಹಳವೆ ಅವಲಂಬಿಸಬೇಕು. ಜೊತೆಗೆ ಈ ರಾಗಿ-ಭತ್ತದಂತಹ ಬೆಳೆಗಳು ಹೊಟ್ಟೆ ತುಂಬಿಸಬಲ್ಲವೆ ಹೊರತು ಮೈಮುಚ್ಚಲು ಬಟ್ಟೆಯಾಗಲಿ, ಮನೆಯ ಖರ್ಚಿಗಾಗಲಿ, ಮನೆಯ ಮಕ್ಕಳ ಓದಿಗಾಗಲಿ ಹಣ ತರುವುದಿಲ್ಲ. ಬೆಂಗಳೂರಿನ ಸುತ್ತಮುತ್ತ ಮತ್ತು ಕೋಲಾರ ಜಿಲ್ಲೆಯಲ್ಲಿ ಬಾವಿ ಬೋರು ಇರುವವರು ಟೊಮ್ಯಾಟೊ, ಕೋಸು, ಶೇವಂತಿಗೆ, ಬಾಳೆ, ಬೀನ್ಸ್, ಕೊತ್ತಂಬರಿ, ಬದನೆ, ಕ್ಯಾರೆಟ್, ಆಲೂಗಡ್ಡೆ, ಮುಂತಾದ ವಾಣಿಜ್ಯ ಬೆಳೆಗಳನ್ನು ಹಲವಾರು ದಶಕಗಳಿಂದ ಬೆಳೆಯುತ್ತಿದ್ದಾರೆ.

ಹದಿನೇಳು-ಹದಿನೆಂಟು ವರ್ಷದ ಹಿಂದಿನ ಕತೆ. ನಾನಾಗ ಹೈಸ್ಕೂಲ್‌ನಲ್ಲಿದ್ದೆ. ನಮ್ಮದೊಂದು ಬಾವಿಯಿತ್ತು. ನಮ್ಮ ತಂದೆ ಅದರೊಳಗೊಂದು ಬೋರು ಹಾಕಿಸಿದ್ದರು. ಬೇಸಿಗೆಯಲ್ಲಿ ಒಂದರ್ಧ ಎಕರೆ ತೋಟ ಮಾಡುವಷ್ಟು ನೀರು ಇತ್ತು. ಕೃಷಿಯಲ್ಲಿ ಅಷ್ಟೇನೂ ಇಷ್ಟವಿಲ್ಲದಿದ್ದರೂ ಕಾಲೇಜು ಓದುತ್ತಿದ್ದ ನನ್ನಣ್ಣ ಆರಡಿ ಎತ್ತರ ಬೆಳೆಯುವ ನವೀನ್ ಎಂಬ ಜಾತಿಯ ಟೊಮ್ಯಾಟೊವನ್ನು ಅರ್ಧ ಎಕರೆ ಜಮೀನಿನಲ್ಲಿ ನಾಟಿ ಮಾಡಿಸಿದರು. ಆಗೆಲ್ಲ ನನ್ನ ಕೆಲಸ ಶಾಲೆಗೆ ಹೋಗುವುದಕ್ಕಿಂತ ಮುಂಚೆ ನೀರು ಹಾಯಿಸುವುದು, ಇಲ್ಲವೆ ಉದ್ದುದ್ದ ಬೆಳೆಯುವ ಟೊಮ್ಯಾಟೊ ಗಿಡಗಳ ಬಳ್ಳಿ ಕಟ್ಟುವುದು, ಇಲ್ಲವೆ ಹೆಗಲಿಗೆ ಔಷಧಿ ಹೊಡೆಯುವ ಪಂಪ್ ನೇತಾಕಿಕೊಂಡು ಸೊಂಪಾಗಿ ಬೆಳೆದಿದ್ದ ಗಿಡಗಳಿಗೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತ ಔಷಧಿ ಹೊಡೆಯುವುದು. ಹೀಗೆ ಎರಡು ತಿಂಗಳು ಸಾಗಿದವು. ನಾವು ಅಲ್ಲಿಯವರೆಗೂ ಅಷ್ಟು ಸೊಂಪಾಗಿ ಯಾವ ಬೆಳೆಯನ್ನೂ ಬೆಳೆದಿರಲಿಲ್ಲ! ಇಡೀ ತೋಟ ದಾರಿಹೋಕರ ಮನಸೆಳೆಯುವಂತಿತ್ತು. ನನ್ನಣ್ಣ ಪುಸ್ತಕ ಓದಿ, ಈ ಮುಂಚೆ ಬೆಳೆದಿದ್ದವರನ್ನೆಲ್ಲ ಕೇಳಿ, ಅದಕ್ಕೆ ಬೇಕಾದ ರಾಸಾಯನಿಕ ಗೊಬ್ಬರ, ಔಷಧಿ, ಬಳ್ಳಿ ಕಟ್ಟಲು ಬೇಕಾದ ನೀಲಗಿರಿ ಮರದ ಉದ್ದನೆಯ ಗೂಟಗಳು, ಮುಂತಾದುವೆಲ್ಲವನ್ನೂ ಸಮಯಕ್ಕೆ ಸರಿಯಾಗಿ ಹೊಂದಿಸಿದ್ದರು. ಗಿಡಗಳ ಮೈಯೆಲ್ಲಾ ಹೂವು. ಈ ಜಾತಿಯ ಟೊಮ್ಯಾಟೊ ಗಿಡ ಸುಮ್ಮನೆ ಉದ್ದ ಬೆಳೆಯುತ್ತೆ, ಒಳ್ಳೆಯ ಫಸಲು ಕೊಡುವುದಿಲ್ಲ ಎಂಬ ಮಾತುಗಳನ್ನೆಲ್ಲ ಸುಳ್ಳು ಮಾಡಿ, ಗಿಡಗಳಲ್ಲಿನ ಹೂವೆಲ್ಲಾ ಕಾಯಿಯಾದವು. ಎಲ್ಲಾ ಕಾಯಿಗಳೂ ಬದುಕಿಕೊಂಡವೇನೋ ಎನ್ನುವ ಹಾಗೆ ಕಡು ಹಸಿರು ಬಣ್ಣದಲ್ಲಿ ನಲಿಯುತ್ತಾ ಬಲಿತವು. ಒಳ್ಳೆಯ ಬಿಸಿಲು ಬಿದ್ದರೆ ಒಂದೆರಡು ವಾರದಲ್ಲಿ ಅವು ಹಣ್ಣಾಗಿ ಕೊಯಿಲು ಆರಂಭಿಸಬೇಕು ಎನ್ನುವ ಕಾಲ.

ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಆಕಾಶದಲ್ಲಿ ಕಾರ್ಮೋಡಗಳು ತುಂಬಿಕೊಂಡವು. ಒಂದು ರಾತ್ರಿ ಎಡಬಿಡದೆ ಮಳೆ ಸುರಿಯಿತು. ಮೊದಲ ಮಳೆ ಆರಂಭವಾದಾಗ, ಅಬ್ಬಾ, ಇನ್ನೊಂದು ವಾರ ನೀರು ಹಾಯಿಸುವ ತೊಂದರೆ ಇಲ್ಲ ಎಂದುಕೊಂಡೆ ನಾನು! ಮಾರನೆಯ ದಿನ ಎದ್ದು ನೋಡಿದರೆ ತೋಟದಲ್ಲಿ ಪಾತಿಗಳ ತುಂಬೆಲ್ಲಾ ನೀರು ಇನ್ನೂ ನಿಂತೇ ಇದೆ! ಒಂದಷ್ಟು ಕಾಯಿಗಳು ಗಾಳಿ-ಮಳೆಗೆ ತುತ್ತಾಗಿ ಉದುರಿಹೋಗಿವೆ. ತಕ್ಷಣ ನಾವು ಅಣ್ಣತಮ್ಮ ನಿಂತ ನೀರು ಹೊರಹೋಗಲು ಕೆಲವು ಪಾತಿಗಳನ್ನೆಲ್ಲ ಹೊಡೆದೆವು. ಆಕಾಶದಲ್ಲಿ ಮೋಡಗಳು ಇನ್ನೂ ಸುಳಿದಾಡುತ್ತಿದ್ದವು…

ಮುಂದಿನ ಮೂರುನಾಲ್ಕು ದಿನಗಳು ಬೆಂಗಳೂರಿನ ಸುತ್ತಮುತ್ತಲ ಬಯಲುಸೀಮೆ ಅಕ್ಷರಶಃ ಮಲೆನಾಡಾಗಿ ಹೋಗಿತ್ತು. ಜಿಟಿಜಿಟಿಗುಟ್ಟುವ ಮಳೆ ಒಮ್ಮೊಮ್ಮೆ ರಭಸವಾಗಿ ಸುರಿಯುತ್ತಿತ್ತು. ನೀರು ನೆಲದಾಳಕ್ಕೆ ಇಳಿಯುವುದು ನಿಧಾನವಾಗಿ ನೆಲದ ಮೇಲೆ ನಿಂತಿತ್ತು. ಅಷ್ಟರಲ್ಲಿ ಹಸಿರು ಬಣ್ಣದ ಟೊಮ್ಯಾಟೊ ಕಾಯಿಗಳು ಹಣ್ಣಾಗಲು ಹಳದಿ ಬಣ್ಣಕ್ಕೆ ತಿರುಗುವುದರ ಬದಲು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದವು; ಗಿಡದಲ್ಲಿಯೆ ಕೊಳೆಯುತ್ತಿದ್ದವು; ಕೊಳೆತು ನೆಲಕ್ಕೆ ಉದುರುತ್ತಿದ್ದವು. ಒಳ್ಳೆಯ ಬೆಳೆ, ಇನ್ನೊಂದು ಕೊಳವೆ ಬಾವಿ, ಒಂದಷ್ಟು ದುಡ್ಡು, ಹೀಗೆಲ್ಲಾ ಯೋಚಿಸುತ್ತಿದ್ದ ನಮ್ಮ ಎದೆ ಧಸಕ್ಕೆಂದಿತು. ಪಾತಿಗಳಲ್ಲಿ ನಾಲ್ಕೈದು ದಿನದಿಂದ ನಿಂತಿರುವ ನೀರೆ ಇದಕ್ಕೆ ಕಾರಣ ಎಂದು ಕೂಡಲೆ ಗೊತ್ತಾಗಿ ತಗ್ಗಿನಲ್ಲಿರುವ ಆ ತೋಟದಿಂದ ನೀರು ಹೊರಹೋಗಲು ಏನೇನು ಮಾಡಬಹುದೊ ಎಲ್ಲವನ್ನೂ ಮಾಡಿದೆವು. ಐದಾರು ದಿನಗಳ ನಂತರ ಮಳೆ ನಿಂತಿತು. ತೋಟದಲ್ಲಿ ಎಲ್ಲಾ ಕಡೆಯೂ ಕೊಳೆತ ಟೊಮ್ಯಾಟೊ ವಾಸನೆ. ಹಸಿರು ಹೊನ್ನಿನಂತಹ ಕಾಯಿಗಳು ಕಪ್ಪಾಗಿ ತಾವೇ ತಾವಾಗಿ ಇನ್ನೂ ಉದುರುತ್ತಿದ್ದವು. ನಿಸರ್ಗ ಒಂದೇ ಏಟಿನಲ್ಲಿ ನಮ್ಮ ಅರ್ಧ ಬೆಳೆಯನ್ನೂ, ಶ್ರಮವನ್ನೂ, ಕನಸನ್ನೂ ತನ್ನೊಂದಿಗೆ ಕೆರೆಗೆ ಸಾಗಿಸಿತ್ತು…

ಇಷ್ಟೆಲ್ಲಾ ಆದರೂ, ಉಳಿದ ಬೆಳೆಗೆ ಒಳ್ಳೆಯ ಬೆಲೆ ಸಿಗಬಹುದು ಎಂದುಕೊಂಡೆವು. ಹಾಗಾಗಲಿಲ್ಲ. ಮಳೆ ಬೀಳುವುದಕ್ಕೆ ಮುಂಚೆ 15-20 ರೂಪಾಯಿ ಇದ್ದ ಒಂದು ಮಂಕರಿ (9-10 ಕೇಜಿ ಹಣ್ಣು ಹಿಡಿಸುವ ಬುಟ್ಟಿ) ನಂತರವೂ ಅಷ್ಟೇ ಇತ್ತು. ಕೂಲಿ ಆಳುಗಳನ್ನಿಟ್ಟುಕೊಳ್ಳದೆ ನಾವೇ ಎರಡು ಮೂರು ದಿನಕ್ಕೊಮ್ಮೆ ಹಣ್ಣು ಕೀಳುತ್ತಿದ್ದೆವು. ರಾತ್ರಿಯೆಲ್ಲಾ ಕೂತು ಅವನ್ನು ಚೆನ್ನಾಗಿ ವಿಂಗಡಿಸಿ, ಮಂಕರಿಗಳಿಗೆ ತುಂಬಿಸಿ, ಅದರ ಮೇಲೆ ಕತ್ತರಿಸಿದ ಗೋಣಿ ಚೀಲ ಮುಚ್ಚಿ, ದಬ್ಬಳದಿಂದ ಹೊಲೆಯುತ್ತಿದ್ದೆವು. ಬೆಳಗ್ಗೆ ಐದಕ್ಕೆಲ್ಲ ಎದ್ದು ಮನೆಯಿಂದ ನೂರಿನ್ನೂರು ಮೀಟರ್ ದೂರ ಇರುವ ಬಿ.ಟಿ.ಎಸ್. ಬಸ್‌ಸ್ಟ್ಯಾಂಡಿಗೆ ಮಂಕರಿಗಳನ್ನು ತಲೆಯ ಮೇಲೆ ಇಟ್ಟುಕೊಂಡು ಸಾಗಿಸುತ್ತಿದ್ದೆವು. ಆದಷ್ಟು ಬೇಗ ಕೆ.ಆರ್. ಮಾರ್ಕೆಟ್‌ಗೆ ಸಾಗಿಸಬೇಕು; ಇಲ್ಲದಿದ್ದರೆ ಬೆಳಗ್ಗಿನ ವ್ಯಾಪಾರಿಗಳು ಹೋಗಿಬಿಟ್ಟ ಮೇಲೆ ಹೋದರೆ ಅವು ಮಾರಾಟವಾಗಲು ಒಮ್ಮೊಮ್ಮೆ ಸಾಯಂಕಾಲದವರೆಗೂ ಕಾಯಬೇಕಿತ್ತು.

ಆಗಲೆ ಒಂದು ಬುಟ್ಟಿಗೆ ಒಂದೂವರೆ ರೂಪಾಯಿ ಬಸ್ ಚಾರ್ಜ್ ಇತ್ತು. ಕಲಾಸಿಪಾಳ್ಯಂನಲ್ಲಿನ ಬಸ್‌ಸ್ಟ್ಯಾಂಡಿನಿಂದ ಕೆ.ಆರ್. ಮಾರ್ಕೆಟ್‌ನ ತರಕಾರಿ ಮಂಡಿಗೆ ಮಂಕರಿ ಸಾಗಿಸಲು ಒಂದು ಮಂಕರಿಗೆ ಎರಡು ರೂಪಾಯಿ ಕೊಡಬೇಕಿತ್ತು. ಎರಡು ಮಂಕರಿಯನ್ನು ಒಂದರ ಮೇಲೊಂದು ಇಟ್ಟುಕೊಂಡು ಕೂಲಿಯವರ ಜೊತೆ ನಾನೂ ಹೊತ್ತು ನಾಲ್ಕು ರೂಪಾಯಿ ಉಳಿಸುತ್ತಿದ್ದೆ! ಮಾರುಕಟ್ಟೆಗೆ ಹೋದ ಅರ್ಧ ಘಂಟೆಗೆಲ್ಲ ವ್ಯಾಪಾರ ಮುಗಿದು ಹೋಗುತ್ತಿತ್ತು. ಏಳೂವರೆಗೆಲ್ಲ ಖಾಲಿ ಮಂಕರಿಯೊಂದಿಗೆ ಊರಿಗೆ ಹೋಗುವ ಬಸ್ಸಿನಲ್ಲಿರುತ್ತಿದೆ. ಏಕೆಂದರೆ, ಮತ್ತೆ ಒಂಬತ್ತು ಗಂಟೆಗೆ ಅತ್ತ ಕಡೆಯಿಂದ ಶಾಲೆಗೆ ಬೆಂಗಳೂರಿಗೆ ಬರಬೇಕಿತ್ತು. ಹೋಗುವಾಗ ಕಲಾಸಿಪಾಳ್ಯಂನಲ್ಲಿ ಕೊಂಡ ಲಂಕೇಶ್ ಪತ್ರಿಕೆ ಇಲ್ಲವೆ ವೈಕುಂಠರಾಜುರವರ ವಾರಪತ್ರಿಕೆ ಕೈಯಲ್ಲಿರುತ್ತಿತ್ತು.

ನಿಸರ್ಗ ಮತ್ತು ಮಾರುಕಟ್ಟೆ ನಮಗೆ ದೊಡ್ಡದಾಗಿ ಸಹಕರಿಸದಿದ್ದರೂ ಆ ವರ್ಷ ಮತ್ತು ಅದರ ಮುಂದಿನ ವರ್ಷ ನಾವು ಬಹುಶಃ ಇಪ್ಪತ್ತು-ಇಪ್ಪತ್ತೈದು ಸಾವಿರ ರೂಪಾಯಿ ಟೊಮ್ಯಾಟೊ ಒಂದರಿಂದಲೆ ದುಡಿದಿರಬಹುದು. ಅಷ್ಟೊತ್ತಿಗೆ ಬಾವಿಯಲ್ಲಿನ ನೀರು ಸಾಕಾಗುತ್ತಿರಲಿಲ್ಲ. ನಮ್ಮ ತಂದೆ ಮತ್ತು ಅಣ್ಣ ಕೊಳವೆ ಬಾವಿ ಕೊರೆಸಲು ತೀರ್ಮಾನಿಸಿದರು. ಮೊದಲ ಪಾಯಿಂಟ್ ಜಿಯಾಲಜಿಸ್ಟ್‌ಗಳು ಹೇಳಿದ್ದು. ಆಗ ಇನ್ನೂರು ಅಡಿ ಕೊರೆದರೆ ಅದೇ ಸುತ್ತಮುತ್ತಲಿಗೆಲ್ಲ ಆಳವಾದ ಬೋರ್. ನಮ್ಮದು ಇನ್ನೂರರ ಮೇಲೆ ಹೋದರೂ ಮೇಲೆ ಬರುತ್ತಿದ್ದದ್ದು ನೀರಲ್ಲ, ಕಲ್ಲಿನ ಪುಡಿ! ಇನ್ನೂ ಕೊರೆಸುವುದು ಮೂರ್ಖತನ ಎಂದು ನಿಲ್ಲಿಸಿದರು. ಆದರೆ ಅಷ್ಟರಲ್ಲಿ ಅಲ್ಲಿದ್ದವರು ಯಾರೊ ಒಬ್ಬರು ನಾಟಿ ಶಾಸ್ತ್ರದವನನ್ನು ಹಿಡಿದುಕೊಂಡು ಬಂದು, “ಇವರಿಂದ ಪಾಯಿಂಟ್ ತೋರಿಸಿ ಈಗಲೆ ಕೊರೆಸಿಬಿಡಿ; ಬೋರ್ ಮೆಷಿನ್ ಹೋದ ಮೇಲೆ ಮತ್ತೆ ಯಾವಾಗಲೊ ಹಾಕಿಸುವುದು,” ಎಂದರು. “ಇಲ್ಲಿಯವರೆಗೂ ನಾನು ನೋಡಿರುವ ಎಲ್ಲಾ ಪಾಯಿಂಟ್‌ಗಳಲ್ಲೂ ಗಂಗಾ ಮಾತೆ ತಾನೆ ತಾನಾಗಿ ಮೇಲಕ್ಕೆ ಉಕ್ಕಿ ಹರಿದಿದ್ದಾಳೆ,” ಎಂದ ಆ ಮಹಾತ್ಮ, ನಮ್ಮ ಜಮೀನಿನಲ್ಲೆಲ್ಲಾ ಓಡಾಡಿ ಒಂದು ಜಾಗ ತೋರಿಸಿದ. ಕೊರೆಯುತ್ತಿದ್ದದ್ದನ್ನು ನಿಲ್ಲಿಸಿ, ಅದಕ್ಕೆ ಹಾಕಿದ್ದ ಕೇಸಿಂಗ್ ಪೈಪ್ ಕಿತ್ತುಕೊಂಡು, ಬೋರ್‌ವೆಲ್ ಲಾರಿ ಹೊಸ ಪಾಯಿಂಟ್‌ನಲ್ಲಿ ಕೊರೆತ ಶುರು ಹಚ್ಚಿಕೊಂಡಿತು.

ಬದುಕಲು ಮನುಷ್ಯನಿಗೆ ಕನಸು ಅತ್ಯಗತ್ಯ. ನೀರಿನ ಕನಸಿನ ಹಿಂದೆ ಬಿದ್ದ ನಾವು ಆ ಎರಡು ವರ್ಷಗಳಲ್ಲಿ ಉಳಿಸಿದ್ದನ್ನೆಲ್ಲವನ್ನೂ ಆ ಒಂದೆರಡು ದಿನದಲ್ಲಿ ಭೂಮಿಗೆ ಕೊಳವೆ ಕೊರೆದು ಅದರಲ್ಲಿ ಸುರಿದಿದ್ದೆವು! ನೀರು ಮಾತ್ರ ಬರಲಿಲ್ಲ! ರೈತ ಬೆಳೆಯುವುದು ರಸ ಆದರೆ ತಿನ್ನುವುದು ಕಸ, ಎನ್ನುವಂತಹ ಸ್ಥಿತಿ. ಕೃಷಿಯ ಅನಿಶ್ಚಿತತೆಯಿಂದ ನಮ್ಮನ್ನು ನಿಸರ್ಗವೆ ಹೀಗೆ ಬಲವಂತವಾಗಿ ಹೊರ ಹಾಕಿತು. ಅಲ್ಲಿಗೆ ನಮ್ಮ ವ್ಯವಸಾಯ, ತೋಟಗಾರಿಕೆ ನಿಂತಿತು. ನಾವು ಬದುಕಿಕೊಂಡೆವು…

ಜೀವನದ ಮೊದಲ ಎರಡು ದಶಕಗಳನ್ನು ಮಣ್ಣಿನ ಒಡನಾಟದೊಂದಿಗೆ ಹಾಗೂ ಗೋಪಾಲನೆಯೊಂದಿಗೆ ಕಳೆದ ನನ್ನ ವೈಯಕ್ತಿಕ ಅನುಭವದ ಪ್ರಕಾರ, ಬಯಲುಸೀಮೆಯ ಕೃಷಿ ಮತ್ತು ಕೃಷಿಕನ ಜೀವನ ಅನಿಶ್ಚಿತತೆಯ ಪರಮಘಟ್ಟ ಎಂತಲೆ ಹೇಳಬೇಕು. ಇದು ಬಹುಶಃ ಎಲ್ಲಾ ಕಡೆಯ ಕೃಷಿಕರಿಗೂ ಅನ್ವಯಿಸಬಹುದು. “ಅಮೇರಿಕಾದ ಡೈರಿಲ್ಯಾಂಡ್” ಎಂದು ಬಿರುದಾಂಕಿತ ವಿಸ್ಕಾನ್ಸಿನ್ ಎನ್ನುವ ರಾಜ್ಯದಲ್ಲಿ ನಾನು ಹತ್ತು ತಿಂಗಳಿದ್ದೆ. ನನ್ನ ಹಾಗೆಯೆ ಕೃಷಿ ಮೂಲದಿಂದ ಬಂದಿದ್ದ ಕೆಲವು ಅಮೇರಿಕನ್ನರು ನನ್ನ ಸಹೋದ್ಯೋಗಿಗಳಾಗಿದ್ದರು. ಅವರ ಜೊತೆ ಮಾತನಾಡುತ್ತಿದ್ದಾಗ ಅವರೆಲ್ಲರೂ ಹೇಳುತ್ತಿದ್ದದ್ದು, “ಕೃಷಿ ಮಾಡುವವರಿಗೆ ಬುದ್ಧಿ ಇಲ್ಲ. ಏನೂ ಮಾಡಲಾಗದವರು ಕೃಷಿ ಮಾಡುತ್ತಾರೆ. ವರ್ಷಪೂರ್ತಿ ಸಾಲ ಮಾಡಿ, ನಿಸರ್ಗವನ್ನು ನೆಚ್ಚಿಕೊಂಡು, ಮಾರುಕಟ್ಟೆಯನ್ನು ನೆಚ್ಚಿಕೊಂಡು ಮಾಡುವ ಆ ಕೆಲಸ ಲಾಟರಿ ಜೂಜಿಗಿಂತ ಕೆಟ್ಟ ಜೂಜು,” ಎಂದು. ಅಮೇರಿಕದ ಜನಸಂಖ್ಯೆಯಲ್ಲಿ ಶೇ. 1 ಕ್ಕೂ ಕಡಿಮೆ ಜನ ನೇರವಾಗಿ ಕೃಷಿ ಉದ್ಯೋಗದಲ್ಲಿ ತೊಡಗಿರುವವರು. ಅವರಿಗೆ ಆಪತ್ತು ಬಂದಾಗ ಸರ್ಕಾರವೆ ಅವರ ಸಹಾಯಕ್ಕೆ ಬರುತ್ತದೆ. ಅನೇಕ ತರಹದ ಸಬ್ಸಿಡಿಗಳನ್ನು ನೀಡುತ್ತದೆ. ಅಷ್ಟಿದ್ದರೂ, “ಲೂಸರ್‍ಸ್ ಮಾತ್ರ ಕೃಷಿ ಮಾಡುತ್ತಾರೆ,” ಎನ್ನುವಂತಹ ಮಾತನ್ನು ನನ್ನ ಸಹೋದ್ಯೋಗಿಗಳು ಆಡುತ್ತಿದ್ದರು! ಇದೇ ಹಿನ್ನೆಲೆಯಲ್ಲಿ ನಾನು ನಮ್ಮ ಮನೆಯ ವಿಚಾರಕ್ಕೆ ಹೇಳುವುದು; “ನಾವು ಕೃಷಿ ನಿಲ್ಲಿಸಿದೆವು,ಬದುಕಿಕೊಂಡೆವು.”

ಬೆಂಗಳೂರಿನಿಂದ 25 ಕಿ.ಮೀ. ದೂರದ ನನ್ನ ಊರಿನ ಸುತ್ತಮುತ್ತಲಿನ ಕೃಷಿಕರಿಗೆ ಬೇರೆಬೇರೆ ಅವಕಾಶಗಳಿವೆ. ಈಗಲೂ ಕೃಷಿ ಮಾಡುತ್ತಿರುವವರು ಲಾಭದಾಯಕವಾದ, ಮಿನಿಮಮ್ ಗ್ಯಾರಂಟಿ ಇರುವ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ. ಕೆಲವು ಮಣ್ಣಿನ ಮಕ್ಕಳು ಬೇಸಾಯದ ಮೇಲಿನ ಪ್ರೀತಿಯಿಂದ, ಏನಾದರೂ ಸರಿ ವ್ಯವಸಾಯ ಬಿಡಬಾರದು ಎಂದು ನಷ್ಟವಾದರೂ ಮುಂದುವರಿಸುತ್ತಿದ್ದಾರೆಯೆ ಹೊರತು ಅದನ್ನೇ ಜೀವನಾಧಾರವಾಗಿ ಮಾಡಿಕೊಂಡಿಲ್ಲ. ಆದರೆ ಬೆಂಗಳೂರಿನಿಂದ 40-50 ಕಿ.ಮೀ. ದೂರ ಹೋದರೆ, ಕೃಷಿ ಬಿಟ್ಟರೆ ಹಳ್ಳಿಗರಿಗೆ ಬೇರೆ ಉದ್ಯೋಗವಾಗಲಿ, ಜೀವನಾಧಾರವಾಗಲಿ ಇಲ್ಲ. ಬಹುಶಃ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಲವಾರು ಕುಟುಂಬಗಳು ಕೇವಲ ಕೃಷಿಯನ್ನೆ ನೆಚ್ಚಿಕೊಳ್ಳದೆ, ಹೈನುಗಾರಿಕೆಯಿಂದ ಮನೆ ನಡೆಸುತ್ತಿರಬಹುದು. ಆದರೆ ಮನೆಯ ಹೆಂಗಸರು ಹೈನುಗಾರಿಕೆಯಲ್ಲಿ ಉಳಿಸಿದ ದುಡ್ಡನ್ನು ಗಂಡಸರು ವ್ಯವಸಾಯವೆಂಬ ಲಾಟರಿ ಟಿಕೆಟ್ ಕೊಳ್ಳಲು ಬಳಸುತ್ತಾರೇನೊ ಎಂಬ ಸಂಶಯ ನನಗೆ…

ಈಗ ಒಂದು ಟೊಮ್ಯಾಟೊ ಮಂಕರಿಯನ್ನು ತೋಟದಿಂದ ಮಾರುಕಟ್ಟೆಗೆ ಸಾಗಿಸುವ ಸಾರಿಗೆ ಖರ್ಚು ಎಷ್ಟಿದೆಯೆಂದಾಗಲಿ, ಕೂಲಿಯವರಿಗೆ ಎಷ್ಟು ಕೊಡಬೇಕು ಎಂಬುದಾಗಲಿ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ಒಂದೂವರೆ ದಶಕದ ಹಿಂದೆಯೆ ಅದು ಒಂದೂವರೆ-ಎರಡು ರೂಪಾಯಿ ಇತ್ತು. ಅಂದರೆ ಹಣ್ಣನ್ನು ತೋಟದಿಂದ ಮಾರುಕಟ್ಟೆಗೆ ಸಾಗಿಸುವ ವೆಚ್ಚ ಆಗಲೆ ಕೇಜಿಗೆ ಮುವ್ವತ್ತು ಪೈಸೆ ತಗಲುತ್ತಿತ್ತು. ಈಗ ಅದು ಕೇಜಿಗೆ ಎರಡು ರೂಪಾಯಿಗಿಂತ ಕಡಿಮೆ ಇರುವುದಿಲ್ಲವೇನೊ. ರೈತನ ಶ್ರಮವನ್ನೂ, ಅವನ ಬಂಡವಾಳವನ್ನೂ ಲೆಕ್ಕ ಹಾಕಿಕೊಂಡರೆ ಒಂದು ಕೇಜಿ ಟೊಮ್ಯಾಟೋಗೆ ಈಗ ಏನಿಲ್ಲವೆಂದರೂ ನಾಲ್ಕೈದು ರೂಪಾಯಿ ಉತ್ಪಾದನಾ ವೆಚ್ಚವೇ ತಗಲುತ್ತದೆ. ಆದರೆ ಅವನಿಗೆ ಸಿಗುತ್ತಿರುವುದು ನಲವತ್ತು ಪೈಸೆ! ಇದು ಕೇವಲ ಟೊಮ್ಯಾಟೊ ಬೆಳೆಯುವ ರೈತನ ವಿಷಯ ಮಾತ್ರ. ಆದರೆ ಅವನು ಬೆಳೆಯುವ ಬಹುಪಾಲು ಬೆಳೆಗಳ ವಿಷಯವೂ ಹೀಗೆಯೆ ಇರುತ್ತದೆ.

ಕರ್ನಾಟಕವನ್ನೆ ತೆಗೆದುಕೊಳ್ಳೋಣ; ಇಲ್ಲಿ ಇವತ್ತು ಅತಿ ಹೆಚ್ಚು ಜನರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ನೀಡುತ್ತಿರುವ ಕ್ಷೇತ್ರ ಕೃಷಿ. ಇದಕ್ಕೆ ಇನ್ನೊಂದು ಕಾರಣ ನಮ್ಮ ದೇಶದ ಬಡತನ ಹಾಗೂ ಬಹುಪಾಲು ಜನರ ಸವಾಲು ಎರಡು ಹೊತ್ತಿನ ಊಟ ಮಾತ್ರ ಆಗಿರುವುದು. ಹಳ್ಳಿಗಳನ್ನು ಮತ್ತು ಮಳೆಯನ್ನು ಸೂಕ್ಷ್ಮವಾಗಿ ಗಮನಿಸುವ ಜನರಿಗೆ ಒಂದು ವಿಷಯ ಗೊತ್ತಿರುತ್ತದೆ. ಅದೇನೆಂದರೆ, ಯಾವಯಾವ ವರ್ಷ ಒಳ್ಳೆಯ ಮಳೆಯಾಗಿ, ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಕೈತುಂಬ ಕೆಲಸವಿರುತ್ತದೊ ಆ ವರ್ಷ ಜನ ಸುಭಿಕ್ಷವಾಗಿರುತ್ತಾರೆ, ಹಾಗೂ ಹಳ್ಳಿಗಳಲ್ಲಿ ಆ ವರ್ಷ ಕಳ್ಳತನ, ಸುಲಿಗೆಗಳು ಕಮ್ಮಿಯಾಗಿರುತ್ತವೆ ಎಂದು. ಇನ್ನು ಅನಾವೃಷ್ಟಿಯಾದ ವರ್ಷ ದೊಡ್ಡದೊಡ್ಡ ನಗರಗಳಿಗೆ ಗುಳೆ ಹೋಗುವುದು ರೈತ ಕಾರ್ಮಿಕರ ಜೀವನ ಸಂಗ್ರಾಮದಲ್ಲಿ ಅಗತ್ಯವಾಗಿ ಮಾಡಬೇಕಾದ ತೀರ್ಥಯಾತ್ರೆ ಆಗಿಬಿಟ್ಟಿದೆ.

ಈ ಕ್ಷೇತ್ರ ಬಹುಸಂಖ್ಯಾತ ಜನರಿಗೆ ಉದ್ಯೋಗ ನೀಡುತ್ತಿರುವ ಹಿನ್ನೆಲೆಯಲ್ಲಿ ಗಮನಿಸಿದಾಗ, ನಮ್ಮ ಸರ್ಕಾರದಲ್ಲಿ ಹಣಕಾಸು ಇಲಾಖೆಯ ನಂತರ ಅತಿ ಹೆಚ್ಚು ಪ್ರಾಮುಖ್ಯ ಇರಬೇಕಾದ ಇಲಾಖೆ, ಕೃಷಿ ಇಲಾಖೆ. ಆದರೆ ಗಮನಿಸಿ ನೋಡಿ; ಭೈರೇಗೌಡರ ನಂತರ ಬಂದ ಯಾವ ಪುಣ್ಯಾತ್ಮ ಕೃಷಿ ಮಂತ್ರಿ ನಮಗೆ ಜ್ಞಾಪಕ ಬರುತ್ತಾನೆ? ಹಾಗೆಯೆ, ರೈತನ ಬಗ್ಗೆ ಕಾಳಜಿಯಿರುವ, ಪ್ರಾಮಾಣಿಕನಾದ, ದೂರದೃಷ್ಟಿಯಿರುವ, ಕೆಲಸ ಮಾಡುವ ಒಬ್ಬನೇ ಒಬ್ಬ ಯೋಗ್ಯ ಮಂತ್ರಿ ಕರ್ನಾಟಕದ ಕೃಷಿ ಮಂತ್ರಿಯಾಗಿ ಇತ್ತೀಚಿನ ವರ್ಷಗಳಲ್ಲಿ ಬರದೆ ಇರುವುದಕ್ಕೆ ಬಹುಸಂಖ್ಯಾತ ರೈತ ಮತದಾರನನ್ನು ಬಿಟ್ಟು ಇನ್ಯಾರನ್ನು ದೂರಬೇಕು?


ರೈತನನ್ನು ಉಳಿಸುವವರು ಯಾರು? ದೇವರಾ?

ಯೋಚಿಸಿ ನೋಡಿ; ಇವತ್ತು ಕರ್ನಾಟಕದ ರಾಜಕೀಯದ ದಿಕ್ಕು ದೆಸೆ ಬದಲಿಸಬಲ್ಲವನು ಯಾರು? ರೈತನೆ ತಾನೆ? ಕಳೆದ ಬಾರಿ ಇಡೀ ಬೆಂಗಳೂರಿನ ಜನ ಎಸ್ಸೆಂ ಕೃಷ್ಣರ ಕಾಂಗ್ರೆಸ್ಸಿಗೆ ಬೆಂಬಲಿಸಿದರೆ, ಬೆಂಗಳೂರಿನಾಚೆಯ ಗ್ರಾಮಾಂತರ ರೈತರ ಆಯ್ಕೆ ಎಸ್ಸೆಂ ಕೃಷ್ಣ ಬಿಟ್ಟು ಬೇರೆಯವರು ಎಂಬುದಾಗಿತ್ತು. ಇದು ಏನನ್ನು ಹೇಳುತ್ತದೆ? ತನ್ನೆಲ್ಲ ಜಾತಿವಾದ, ಸಣ್ಣತನಗಳಿಂದ ಕೂಡಿದ ಗ್ರಾಮಾಂತರ ಜನತೆ ತಮಗೆ ಇಂತಹವರು ಬೇಡ ಎಂದು ನಿರ್ಧರಿಸುವ ಸ್ಥಿತಿಯಲ್ಲಿ ಇದ್ದಾರೆಯೆ ಹೊರತು, ತಮಗೆ ಇಂತಹವರು ಬೇಕು ಎಂದು ಆರಿಸಿಕೊಳ್ಳುವ ಸ್ಥಿತಿಯಲ್ಲಿ ಅಲ್ಲ. ಇದು ರೈತನ ದುರಂತ; ದೇಶದ ದುರಂತ. ಕೃಷಿಯನ್ನು ಬಿಟ್ಟ ರೈತರೆ ಹೇಳುವಂತೆ ಎಷ್ಟೇ ಆಗಲಿ ರೈತರು ಮೂರ್ಖರು, ಅಲ್ಲವೆ? ಇಲ್ಲದಿದ್ದರೆ ಅವರೇಕೆ ಗೊತ್ತಿದ್ದೂ ಗೊತ್ತಿದ್ದು ಇರುಳ ಕಂಡ ಬಾವಿಯಲ್ಲಿ ಹಗಲು ಬೀಳುತ್ತಿದ್ದರು?

ಈಗೊಂದು ನಾಲ್ಕೈದು ವರ್ಷಗಳಿಂದ ಭಾರತದ ರೈತ ಜನಾಂಗಕ್ಕೆ ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆಯೆ ಪರಿಹಾರ ಎಂಬ ದಟ್ಟದರಿದ್ರ ಐಡಿಯಾ ಇದ್ದಕ್ಕಿದ್ದಂತೆ ಹೊಳೆದು ಬಿಟ್ಟಂತೆ ಕಾಣಿಸುತ್ತಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಭಾರತದ ದಿನಪತ್ರಿಕೆಗಳಲ್ಲಿ ಮತ್ತದೇ ರೈತರ ಆತ್ಮಹತ್ಯೆಯ ಸುದ್ದಿಗಳೆ ಇಣುಕುತ್ತಿವೆ. ಈಗ ಕಬ್ಬು ಬೆಳೆಗಾರನ ಸರದಿ. ಮೊನ್ನೆ ತಿರುಪತಿಯಿಂದ ರಸ್ತೆಯಲ್ಲಿ ಬರುತ್ತಿರುವಾಗ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುವಿನ ಹುಟ್ಟೂರಾದ ಚಂದ್ರಗಿರಿಯ ಹತ್ತಿರ ಕಾಡಿಗೆ ಬೆಂಕಿ ಹತ್ತಿಕೊಂಡಿರುವಂತಹ ದೃಶ್ಯ ಕಾಣಿಸಿತು. ಹೊತ್ತಿ ಉರಿಯುತ್ತಿದ್ದ ಆ ಪ್ರದೇಶವನ್ನು ಹತ್ತು-ಹದಿನೈದು ನಿಮಿಷಗಳ ನಂತರ ದಾಟಿದೆವು. ಅದು ಕಾಡಿನ ಬೆಂಕಿಯಲ್ಲ. ನಾಡಿಗೆ ಬಿದ್ದ ಬೆಂಕಿ. ಯಾರೊ ನತದೃಷ್ಟ ರೈತ ಯಾರೂ ಕೊಳ್ಳುವವರಿಲ್ಲದ ತನ್ನ ಕಬ್ಬಿನ ತೋಟಕ್ಕೆ ಬೆಂಕಿ ಹಚ್ಚಿದ್ದ. ಎರಡು ವಾರದ ಹಿಂದೆ ಪ್ರಜಾವಾಣಿಯಲ್ಲಿ ಒಂದು ಸುದ್ದಿ ಬಂದಿತ್ತು. ತನ್ನ ಕಬ್ಬನ್ನು ಕೇಳುವವರಿಲ್ಲದ ಕಾರಣ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರನೊಬ್ಬ ತಾನು ಈಗಾಗಲೆ ಮಾಡಿರುವ ಸಾಲವನ್ನು ತೀರಿಸುವ ಬಗೆ ಕಾಣದೆ ತನ್ನ ಕೈಯಾರೆ ತಾನು ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಆ ಉರಿಯುತ್ತಿರುವ ಬೆಂಕಿಯೊಳಕ್ಕೆ ತಾನೂ ನುಗ್ಗಿ ಆತ್ಮಹತ್ಯೆ ಮಾಡಿಕೊಂಡನಂತೆ.ಆತ್ಮಹತ್ಯೆಗಳೆಲ್ಲ ಯಾಕೆ ಆಗುತ್ತಿದೆ ಎಂದರೆ ಸಮಾಜವಾಗಲಿ, ಸರ್ಕಾರವಾಗಲಿ ಅವನನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿರುವುದಕ್ಕೆ. ಅಲ್ಲವೆ? ಹಾಗಾದರೆ ಅವನನ್ನು ಉಳಿಸಬಲ್ಲವನು ಯಾರು? ದೇವರೇ ತಾನೆ? ಓ ದೇವರೆ, ಈ ಮೂರ್ಖ, ಅಸಹಾಯಕ, ಅಸಂಘಟಿತ, ದಯಾಮರಣ ಬೇಡುವ ರೈತನನ್ನು ಕಾಪಾಡಪ್ಪ…. ಎಲ್ಲಾ ಜಾತಿ-ಮತಗಳಲ್ಲೂ ಇರುವ, ಭೂಮಿಯ ಮೇಲಿನ ಎಲ್ಲಾ ಭೂಭಾಗಗಳಲ್ಲೂ ಇರುವ ಅವನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬೇಡವೊ ಭಗವಂತಾ… ನಿನ್ನ ದಯೆ ಎಲ್ಲರಿಗಿಂತಾ ಹೆಚ್ಚಾಗಿ ಬೇಕಾಗಿರುವುದು ಅಮಾಯಕ ರೈತನಿಗೇನೆ…ಕೃಷಿಯನ್ನು ಉದ್ದಿಮೆ ಎಂದು ಪರಿಗಣಿಸಿದರೆ, ಭಾರತದಲ್ಲಿನ ಈ ಉದ್ದಿಮೆಯ ಪ್ರತಿಯೊಂದು ಜನರ ಗುಂಪೂ ಅಸಂಘಟಿತವಾದದ್ದೆ. ರೈತನಷ್ಟು ಅಸಂಘಟಿತ, ಶೋಷಿತ, ಉತ್ಪ್ರೇಕ್ಷಿತ ದೊರೆ ಇನ್ನೊಬ್ಬನಿಲ್ಲ. ಕೇವಲ ಐದಾರು ಸಾವಿರ ಜನರಿಗೆ ಉದ್ಯೋಗ ನೀಡುವ, ನಷ್ಟದಲ್ಲಿ ನಡೆಯುವ ಸರ್ಕಾರಿ ಕಾರ್ಖಾನೆಗೆ ತೊಂದರೆಯೇನಾದರೂ ಬಂದರೆ ಇಡೀ ದೇಶದ ಕಮ್ಯುನಿಸ್ಟರು ಎದ್ದು ನಿಂತು ಬಿಡುತ್ತಾರೆ. ಜನ ದಿನಪತ್ರಿಕೆಗಳಲ್ಲಿ ಬೊಬ್ಬೆ ಹಾಕಲು ಆರಂಭಿಸುತ್ತಾರೆ. ಸರ್ಕಾರ ರಾತ್ರೋರಾತ್ರಿ ಆ ಕಾರ್ಖಾನೆಗೆ ನೆರವು ಘೋಷಿಸಿಬಿಡುತ್ತದೆ. ಅದೇ ಸಾಲಸೋಲ ಮಾಡಿ ಬೆಳೆ ಬೆಳೆಯುವ ಲಕ್ಷಾಂತರ ರೈತರು ತಮ್ಮನ್ನು ಮೀರಿದ ಶಕ್ತಿಗಳಿಂದ, ನಿಸರ್ಗದಿಂದ ಸೋತು ಸುಣ್ಣವಾಗುತ್ತಿರಬೇಕಾದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರಬೇಕಾದರೆ ಸರ್ಕಾರ ಅವರತ್ತ ಕಣ್ಣೆತ್ತಿ ನೋಡುವುದು ಅದು ಒಂದು ಚುನಾವಣೆಯ ವಿಷಯವಾದಾಗ ಮಾತ್ರ. ಯಾವುದೊ ಒಂದು ಕಂಪನಿ “ನಮ್ಮ ಹುಡುಗರಿಗೆ ಕಛೇರಿಗೆ ಬರಲು ಬೆಂಗಳೂರಿನಲ್ಲಿ ಟ್ರಾಫಿಕ್ ಪ್ರಾಬ್ಲಂ ಕಣ್ರಿ,” ಎಂದ ತಕ್ಷ್ಷಣ ಸರಿಪಡಿಸಲು ಎದ್ದುಬಿದ್ದು ಹೋಗುವ ಸರ್ಕಾರ ಅದೇ ಮುತುವರ್ಜಿಯನ್ನು ಸಾವಿರಾರು ಜನ ರೈತರಿಗೆ ಅವಶ್ಯಕವಾದ ಒಂದು ಸಣ್ಣ ಕಾಲುವೆ ಮಾಡಿಸಲು, ಕೆರೆ ಹೂಳೆತ್ತಿಸಲು ಮುಂದಾಗುವುದಿಲ್ಲ. ನೆಹರೂ ಮುಂದಾಲೋಚನೆಯ ದೊಡ್ಡ ಅಣೆಕಟ್ಟುಗಳ ನೀರಾವರಿ ಮತ್ತು ಸಣ್ಣ ರೈತರ ಉದ್ಯಮಶೀಲತೆಯ ಕುರುಹಾದ ಕೊಳವೆ ಬಾವಿಗಳ ನೀರಾವರಿ ಇಲ್ಲದೆ ಹೋಗಿದ್ದರೆ ನಮ್ಮ ಬಡ ದೇಶದ 110 ಕೋಟಿ ಜನರ ಹೊಟ್ಟೆಗೆ ಹಿಟ್ಟು ಎಲ್ಲಿಂದ ಬರುತ್ತಿತ್ತೊ ಗೊತ್ತಿಲ್ಲ…


Add a Comment

required, use real name
required, will not be published
optional, your blog address