ರೋಮ್ ಕಲಿಸುವ ಪಾಠಗಳು – (ಸೋನಿಯಾ ಗಾಂಧಿಯ ತವರಲ್ಲಿ; ಜೂಲಿಯಸ್ ಸೀಸರನ ಸ್ಮರಣೆಯಲ್ಲಿ…)
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 8, 2008 ರ ಸಂಚಿಕೆಯಲ್ಲಿ ಈ ಲೇಖನ “ಸೋನಿಯಾ ಗಾಂಧಿಯ ತವರಲ್ಲಿ; ಜೂಲಿಯಸ್ ಸೀಸರನ ಸ್ಮರಣೆಯಲ್ಲಿ…” ಹೆಸರಿನಲ್ಲಿ ಪ್ರಕಟವಾಗಿದೆ.)
ಅದೊಂದು ಅರೆ ಪ್ರಜಾತಂತ್ರ ರಾಜ್ಯ. ಆ ದೇಶದ ರಾಜಕೀಯ ಮತ್ತು ಸೈನ್ಯದ ಮುಖ್ಯಸ್ಥನಾದ ಆತನಿಗೆ ಸಾಮ್ರಾಟನಾಗಬೇಕೆಂಬ ಆಸೆ ಇತ್ತು. ಆದರೆ ಯಾರನ್ನೇ ಆಗಲಿ ದೊರೆ ಎಂದು ಒಪ್ಪಿಕೊಳ್ಳುವುದಕ್ಕೆ ಆ ದೇಶದ ಜನರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆತ “ಆಮರಣ ಸರ್ವಾಧಿಕಾರಿ” ಪಟ್ಟಕ್ಕೆ ಸೀಮಿತವಾದ. ಆದರೂ ಆತನ ಆಸೆ ಇನ್ನೂ ಜೀವಂತವಾಗಿತ್ತು. ಅದನ್ನು ಗಮನಿಸುತ್ತಿದ್ದ ಸಂಸತ್‌ಸದಸ್ಯರು ಅವನು ಬದುಕಿದ್ದರೆ ದೇಶದಲ್ಲಿನ ಪ್ರಜಾಪ್ರಭುತ್ವಕ್ಕೇ ಗಂಡಾಂತರ ಎಂದು ಹೇಳಿ ಆತನನ್ನು ಸುತ್ತುವರೆದು ಕಗ್ಗೊಲೆ ಮಾಡಿಬಿಟ್ಟರು. ಸುಮಾರು ಅರವತ್ತಕ್ಕೂ ಹೆಚ್ಚಿನ ಸಂಸತ್‌ಸದಸ್ಯರು 23 ಸಲ ಆತನಿಗೆ ಚಾಕು ಹಾಕಿದರು! ಆದರೆ ವಿಪರ್ಯಾಸ ನೋಡಿ; ಆತ ಸತ್ತ ಹಲವೇ ವರ್ಷಗಳಲ್ಲಿ ಆ ಸಂಸತ್‌ಸದಸ್ಯರು ಕೊಲೆಗೀಡಾದ ಮುಖ್ಯಸ್ಥನ ದತ್ತು ಮಗನನ್ನೆ ದೇಶದ ಮೊಟ್ಟಮೊದಲ ಸಾಮ್ರಾಟನನ್ನಾಗಿ ಘೋಷಿಸುವ ಪರಿಸ್ಥಿತಿ ಉಂಟಾಗಿಬಿಟ್ಟಿತು. ೨೦೦೦ ವರ್ಷಗಳ ಹಿಂದೆ ರೋಮನ್ ಗಣರಾಜ್ಯ ರೋಮನ್ ಸಾಮ್ರಾಜ್ಯವಾಗಿ ಬದಲಾದ ಕತೆ ಇದು. ಹಾಗೆ ಕೊಲೆಗೀಡಾದವನು ಜೂಲಿಯಸ್ ಸೀಸರ್; ಪ್ರಸಿದ್ಧ ಈಜಿಪ್ಟ್ ಸುಂದರಿ ಕ್ಲಿಯೋಪಾತ್ರಾಳ ಪ್ರೇಮಿ.
ಸಣ್ಣಪುಟ್ಟ ವಿಷಯಕ್ಕಾಗಿಯೊ, ಅಥವ ಬಡತನದಿಂದಾಗಿಯೊ, ಅಥವ ಇನ್ಯಾವುದೇ ಗಂಭೀರ ಕಾರಣಕ್ಕಾಗಿಯೊ ಜನ ದಂಗೆ ಏಳದಂತೆ ತಡೆಯುವುದು, ಅವರ ಮನಸ್ಸನ್ನು ನೈಜ ವಿಷಯದಿಂದ ವಿಮುಕ್ತರನ್ನಾಗಿ ಮಾಡುವುದು ಅಧಿಕಾರಸ್ಥರಿಗೆ ಎಂದಿಗೂ ಕಷ್ಟದ ಕೆಲಸವೆ. ಅದಕ್ಕಾಗಿ ರೋಮನ್ ಅಧಿಕಾರಸ್ಥರು ಮತ್ತು ದೊರೆಗಳು ಆಯ್ದುಕೊಂಡದ್ದು ಮಾತ್ರ ಬಿಚ್ಚುಗತ್ತಿವೀರರ, ಅಂದರೆ ಗ್ಲಾಡಿಯೇಟರ್‌ಗಳ ಮಾರಣಾಂತಿಕ ಮಲ್ಲಯುದ್ಧಗಳು. ಸೀಸರ್‌ನ ಹತ್ಯೆಯಾದ ಸುಮಾರು 120 ವರ್ಷಗಳಿಗೆ ಇಂತಹ ಕ್ರೀಡೆಗಳಿಗಾಗಿಯೆ ಒಂದು ಅದ್ಭುತವಾದ, ದೊಡ್ಡದಾದ, ಇಂದಿನ ಆಧುನಿಕ ಕ್ರೀಡಾಂಗಣಳನ್ನೂ ಮೀರಿಸುವಂತಹ ಸೂಕ್ಷ್ಮತೆಯಿಂದ ಕೂಡಿದ ಕ್ರೀಡಾಂಗಣ ರೋಮ್ ನಗರದಲ್ಲಿ ಕಟ್ಟಲ್ಪಡುತ್ತದೆ. 615 ಅಡಿ ಉದ್ದ, 510 ಅಡಿ ಅಗಲವಿರುವ, ಸುಮಾರು ಆರು ಎಕರೆ ವಿಸ್ತೀರ್ಣದ ಮೊಟ್ಟೆಯಾಕಾರದ ಕ್ರೀಡಾಂಗಣ ಅದು. ಅದರ ಹೊರಗೋಡೆಯ ಎತ್ತರವೆ ಸುಮಾರು 160 ಅಡಿಗಳು. 50000 ಕ್ಕೂ ಹೆಚ್ಚಿನ ಜನರು ಕೂಡಬಹುದಾದ ಕಾಲಿಸೀಯಮ್ ಅದು. 2000 ವರ್ಷಗಳ ಹಿಂದಿನ ರೋಮನ್ನರ ಕಟ್ಟಡ ನಿರ್ಮಾಣದ ಕಲೆ ಮತ್ತು ತಂತ್ರಜ್ಞಾನಕ್ಕೆ ಜೀವಂತ ಸಾಕ್ಷಿ. (ಕ್ರಿ.ಶ. 2000 ರಲ್ಲಿ ಬಿಡುಗಡೆಯಾದ ಅರೆ ಕಾಲ್ಪನಿಕ ಕತೆ ಹೊಂದಿರುವ ಸಿನೆಮಾ ಕಾವ್ಯ “ಗ್ಲಾಡಿಯೇಟರ್” ನಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿ ಈ ಕ್ರೀಡಾಂಗಣವನ್ನು ಸಾಕಷ್ಟು ನೈಜವಾಗಿಯೆ ಮರುಸೃಷ್ಟಿ ಮಾಡಲಾಗಿದೆ.)
ಕಳೆದ ವಾರ “ಇಟಾಲಿಯನ್ ಜಾಬ್” ಒಂದರ ಪ್ರಯುಕ್ತ ಇಟಲಿಯಲ್ಲಿದ್ದೆ. ಹಾಗೆಯೇ ರೋಮ್ ನಗರವನ್ನೂ ಸಂದರ್ಶಿಸಿದೆ. ಕ್ರಿಶ್ಚಿಯನ್ ಪೋಪ್‌ಗಳ ನಿರ್ಲಕ್ಷ್ಯಕ್ಕೆ ಈಡಾಗಿ, ಭೂಕಂಪಗಳನ್ನು ಕಂಡು, ಅರೆಬರೆ ಮಣ್ಣಿನಲ್ಲಿ ಮುಸುಕಿ, ಮತ್ತೆ ಉತ್ಖನನದ ಪ್ರಯುಕ್ತ ನೋಡಲು ಸಾಧ್ಯವಾಗಿರುವಂತೆ ಆಗಿರುವ 2000 ವರ್ಷಗಳ ಹಳೇಯ ಬೃಹತ್ ಕ್ರೀಡಾಂಗಣ ಕಾಲಿಸೀಯಮ್, ಮತ್ತು ಅದರ ಪಕ್ಕ ಇರುವ್ ರೋಮನ್ ಫೋರಮ್ ಅನ್ನು ನೋಡುತ್ತಿದ್ದರೆ ಸದ್ಯದ ಅಮೆರಿಕದ ಮತ್ತು ಭಾರತದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳು ಮತ್ತು ಅವುಗಳ ಭವಿಷ್ಯದ ಕಾಲಜ್ಞಾನವೆ ಕಣ್ಮುಂದೆ ಸರಿಯುತ್ತಿತ್ತು. ವಿದೇಶಗಳ ಮೇಲೆ ದಾಳಿ ಮಾಡಿ, ಕೊಳ್ಳೆ ಹೊಡೆದು, ತನ್ನ ಸೈನಿಕರನ್ನು ಮತ್ತು ಶ್ರೀಮಂತ ಸೆನೆಟರ್‌ಗಳನ್ನು ಆ ಸಂಪತ್ತಿನಿಂದ ತೃಪ್ತಿಪಡಿಸುತ್ತ ರೋಮನ್ ಸಾಮ್ರಾಜ್ಯ ಮೆರೆಯುತ್ತಿತ್ತು. ಹೀಗೆ ಯುದ್ಧ ರೋಮನ್ನರಿಗೆ ಲಾಭದಾಯಕ ಉದ್ಯಮ; ಇವತ್ತಿನ ಅಮೆರಿಕಕ್ಕೆ ಇದ್ದಂತೆ. ಇನ್ನು ಜನರೋ, 365 ದಿನಗಳ ವರ್ಷದಲ್ಲಿ 150 ದಿನಗಳ ಕಾಲ ಬರ್ಬರ, ಪೈಶಾಚಿಕ ಗ್ಲಾಡಿಯೇಟರ್ ಮಲ್ಲಯುದ್ಧಗಳನ್ನು ಮತ್ತಿತರ ಮನರಂಜನಾ ಕಾರ್ಯಕ್ರಮಗಳನ್ನು ಕಾಲಿಸೀಯಮ್‌ನಲ್ಲಿ ನೋಡುತ್ತ ಕಾಲತಳ್ಳುತ್ತಿದ್ದರು. ದೊರೆಯ ಸೈನಿಕರು ತಮ್ಮತ್ತ ಎಸೆಯುವ ಬ್ರೆಡ್ಡು ಮತ್ತಿತರ ಆಹಾರವನ್ನು ಆಯ್ದುಕೊಳ್ಳುತ್ತ, ಅದೇ ಕಾಲಿಸೀಯಮ್‌ನಲ್ಲಿ ಖೈದಿಗಳ ಜೀವಂತ ದೇಹಗಳನ್ನೆ ಬೆಳಕಿಗಾಗಿ ಉರಿಸುವುದನ್ನು ಆಸ್ವಾದಿಸುತ್ತ, ತಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ಮರೆತಿದ್ದರು; ಇವತ್ತಿನ ಭಾರತದಲ್ಲಿ ಕ್ರಿಕೆಟ್ ಎಂಬ ಆಟದ ಉನ್ಮಾದದಲ್ಲಿ ಮುಳುಗಿ, ಎಂತಹ ಕ್ಷುಲ್ಲಕ ಸಂಗತಿಯನ್ನೂ ಅತಿರಂಜಿಸಿಬಿಡುವ ಮತ್ತು ಎಂತಹ ಗಂಭೀರ ವಿಷಯವನ್ನೂ ಪೇಲವ ಮಾಡಿಬಿಡುವ ಟಿವಿ ಮತ್ತು ಸಿನೆಮಾಲೋಕದ ಅತಿಭ್ರಾಮಕ ಪ್ರಪಂಚವನ್ನೆ ವಾಸ್ತವ ಎನ್ನುವಂತೆ ಸ್ವೀಕರಿಸುತ್ತ, ರಾಜಕಾರಣಿಗಳ ಅನೈತಿಕ ನಡವಳಿಕೆಗಳನ್ನು ಮನರಂಜನೆಯೆಂಬಂತೆ ಟಿವಿಯ ಮುಂದೆ ಕುಳಿತು ಚಪ್ಪರಿಸಿ ನೋಡುತ್ತಿರುವ ಬಹುಸಂಖ್ಯಾತ Indifferent ಜನರಂತೆ!
ಸ್ಥಳೀಯ ಇಟಾಲಿಯನ್ ಭಾಷೆಯಲ್ಲಿ ರೋಮಾ ಎಂದೇ ಕರೆಯಲ್ಪಡುವ ರೋಮ್ ನಗರ ಈಗಲೂ ಚಾಲ್ತಿಯಲ್ಲಿರುವ ವಿಶ್ವದ ಅತಿ ಪುರಾತನ ನಗರಗಳಲ್ಲಿ ಒಂದು. ದಂತಕತೆಯೊಂದರ ಪ್ರಕಾರ ಕ್ರಿಸ್ತ ಪೂರ್ವ 753 ರಲ್ಲಿ ಈ ನಗರ ಸ್ಥಾಪನೆಯಾಯಿತು. ಮುಂದೆ ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಬಹುಪಾಲು ಯೂರೋಪಿನ ಇತಿಹಾಸ ಈ ನಗರದ ಸುತ್ತಲೆ ಹಬ್ಬಿತ್ತಲ್ಲದೆ, ಪ್ರಪಂಚದ ಕಾಲು ಭಾಗಕ್ಕಿಂತ ಹೆಚ್ಚಿನ ಜನರು ರೋಮನ್ನರ ಅಧೀನದಲ್ಲಿದ್ದರು. ಯೂರೋಪಿನಷ್ಟೆ ಪುರಾತನ ಇತಿಹಾಸವಿರುವ ಮತ್ತು ಅನೇಕಾನೇಕ ಸಾಮ್ರಾಟರುಗಳಿಂದ, ವಂಶಗಳಿಂದ ಆಳಲ್ಪಟ್ಟ ಇಡೀ ಏಷ್ಯಾ ಖಂಡಕ್ಕೆ ಆಡಳಿತ ವ್ಯವಸ್ಥೆಗಳಲ್ಲಿಯೆ ಅತುತ್ತಮವಾದ ಪ್ರಜಾಪ್ರಭುತ್ವ ಕಾಲಿಟ್ಟದ್ದೆ ಕಳೆದ ಇಪ್ಪತ್ತನೆ ಶತಮಾನದಲ್ಲಾದರೆ ಒಂದು ಮಟ್ಟದ ಗಣರಾಜ್ಯ 25 ಶತಮಾನಗಳ ಹಿಂದೆಯೆ ರೋಮನ್ ದೇಶದಲ್ಲಿತ್ತು. ಜೂಲಿಯಸ್ ಸೀಸರ್ “ಅಮರಣ ಸರ್ವಾಧಿಕಾರಿ” ಆಗುವ ತನಕ ಅದು ಸುಮಾರು ನಾಲ್ಕೂವರೆ ಶತಮಾನಗಳ ಕಾಲ ಅಬಾಧಿತವಾಗಿತ್ತು.
ರೋಮನ್ ಗಣತಂತ್ರ ರೋಮನ್ ಸಾಮ್ರಾಜ್ಯವಾಗಿ ಬದಲಾದ ಸಮಯದಲ್ಲಿಯೆ ಕೈಸ್ತ ಮತವೂ ರೋಮಿಗೆ ಕಾಲಿಟ್ಟಿತು. ಏಸು ಕ್ರಿಸ್ತನ ಊರಾದ ಜೆರುಸಲೆಮ್ ಆಗ ರೋಮನ್ನರ ಆಳ್ವಿಕೆಗೆ ಒಳಪಟ್ಟಿತ್ತು. ಯಹೂದಿ ಪುರೋಹಿತಶಾಹಿಯ ಮಾತು ಕೇಳಿಕೊಂಡು ಕ್ರಿಸ್ತನನ್ನು ಶಿಲುಬೆಗೇರಿಸಿದ್ದೇ ರೋಮನ್ ಸೈನಿಕರು. ಆದರೆ ಇನ್ನೊಂದು ವಿಪರ್ಯಾಸ ನೋಡಿ. ಅದೇ ರೋಮ್‌ನ ಜನರು ಮತ್ತು ಅದರ ಅಧೀನದಲ್ಲಿದ್ದ ಭೂಭಾಗವೆಲ್ಲ ಮುಂದಿನ ನಾಲ್ಕೈದು ಶತಮಾನಗಳಲ್ಲಿ ಸಂಪೂರ್ಣವಾಗಿ ಕ್ರೈಸ್ತಭೂಮಿಯಾಗಿಬಿಟ್ಟಿತು. ಕ್ಯಾಥೊಲಿಕ್ ಕ್ರೈಸ್ತರ ಮುಖ್ಯಸ್ಥ “ಅಪ್ಪಾಜಿ” ಪೋಪ್‌ಗಳೆ ಅನೇಕ ಶತಮಾನಗಳ ಕಾಲ ರೋಮ್ ಮತ್ತು ಅದರ ಸುತ್ತಮುತ್ತಲ ಭೂಭಾಗವನ್ನು ಆಳಿದರು. ಹಾಗೆಯೆ ಹಳೆಯ ರೋಮನ್ ಪರಂಪರೆಯನ್ನು ಕಡೆಗಣಿಸಿ, ಅವುಗಳನ್ನು ಮಣ್ಣುಗೂಡಿಸಿದರು.
ಕ್ರಿಸ್ತ ಪೂರ್ವದ ರೋಮನ್ ಧರ್ಮ ಹೆಚ್ಚುಕಮ್ಮಿ ಇಂದಿನ ಹಿಂದೂ ಮತಾಚರಣೆಗೆ ಹತ್ತಿರವಾದದ್ದು. ಪೇಗನ್ ಎನ್ನುವುದು ಅವರ ಕಾಲದಲ್ಲಿ ಚಲಾವಣೆಯಲ್ಲಿಲ್ಲದ ಪದವಾದರೂ ಕ್ರೈಸ್ತ ಮತಪ್ರಚಾರದ ಸಮಯದಲ್ಲಿ ರೋಮನ್ ಮತೀಯರನ್ನು ಪೇಗನ್ ಮತೀಯರು (ಹಳ್ಳಿಗುಗ್ಗುಗಳು) ಎಂದೇ ಗುರುತಿಸಿ ರೂಢಿ. ರೋಮಿನ ಪೇಗನ್ನರು ಬಹುದೈವಗಳನ್ನು ಆರಾಧಿಸುತ್ತಿದ್ದರು. ಗತಿಸಿದ ತಮ್ಮ ಹಿರಿಯರನ್ನು ಪೂಜಿಸುತ್ತಿದ್ದರು. ಹಾಗೆಯೆ ವಿಗ್ರಹಾರಾಧಕರೂ ಸಹ. ಎಲ್ಲವನ್ನೂ ಒಳಗೊಳ್ಳುವ ಹಿಂದೂ ಮತದಂತೆಯೆ ತನ್ನ ಪರಿಧಿಗೆ ಬಂದ ಇತರ ಸಂಸ್ಕೃತಿಗಳನ್ನು ಅಥವ ತನ್ನನ್ನು ಪ್ರಭಾವಿಸಿದ ಪ್ರತಿಯೊಂದು ಸಂಸ್ಕೃತಿಯ ರೀತಿರಿವಾಜುಗಳನ್ನೂ ತನ್ನದನ್ನಾಗಿಸಿಕೊಳ್ಳುತ್ತಿದ್ದ ಪಂಥ ಅದು. ಇತರೆ ಅಬ್ರಹಾಮಿಕ್ ಮತಗಳಾದ ಯಹೂದಿ, ಇಸ್ಲಾಮ್‌ಗಳಂತೆ ಕ್ರೈಸ್ತರದೂ ಏಕದೈವ ಪಂಥ. ವಿಗ್ರಹಾರಾಧನೆ ಕೂಡದು. ಈ ಎಲ್ಲವುಗಳ ಹಿನ್ನೆಲೆಯಲ್ಲಿ ಕ್ರೈಸ್ತ “ಅಪ್ಪಾಜಿ”ಗಳು ವೈಭವೋಪೇತವಾದ ಪೇಗನ್ ರೋಮನ್ನರ ಅರಮನೆಗಳನ್ನು, ದೇವಾಲಯಗಳನ್ನು ಪಾಳು ಬಿಟ್ಟರು. ಅವರ ಕ್ರೀಡಾಂಗಣ, ಅರಮನೆ, ಬೃಹತ್ ವಾಣಿಜ್ಯ ಸಮುಚ್ಚಯಗಳಲ್ಲಿನ (ಫೋರಮ್) ಫಳಫಳ ಹೊಳೆಯುವ ಅಮೃತಶಿಲೆಯನ್ನು ಕೀಳಿಸಿ ತಮ್ಮ ಬಸ್ಸಿಲಿಕಗಳಿಗೆ, ವ್ಯಾಟಿಕನ್ನಿನ ಚರ್ಚುಗಳಿಗೆ ಏರಿಸುತ್ತ ಬಂದರು.
ಅದೇ ಕ್ರೈಸ್ತ ಮತಾನುಯಾಯಿಗಳಾದ ಈಗಿನ ರೋಮಿನ ಗೈಡುಗಳು ಈ ಇತಿಹಾಸವನ್ನೆಲ್ಲ ಪಾಳುಬಿದ್ದ ಕಾಲಿಸೀಯಮ್ ಮತ್ತು ಫೋರಮ್ಮಿನ ಬೃಹತ್ ಅವಶೇಷಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದರೆ ನನಗೆ ಯಾಕೊ ನಮ್ಮ ಆಸ್ಥಾನ ಪಂಡಿತ ಚಿದಾನಂದ ಮೂರ್ತಿಗಳೇ ನೆನಪಿಗೆ ಬರುತ್ತಿದ್ದರು. ಬಹುಶಃ ಅಂದಿಗೆ ಕೆಲದಿನಗಳ ಹಿಂದೆ ಮಾತ್ರವೆ ಈ ಪೂರ್ವಾಗ್ರಹಪೀಡಿತ ಸಂಶೋಧಕರು ಹಂಪಿಯ ದುರ್ಗತಿಯ ಬಗ್ಗೆ ಎಂದಿನಂತೆ ವಾಚಕರವಾಣಿಗೆ ಪತ್ರ ಬರೆದಿದ್ದರು. ರೋಮನ್ ಸಾಮ್ರಾಜ್ಯದ ಸೈನಿಕರಿಂದ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತ, ಅತನ ಮತಾನುಯಾಯಿಗಳಿಂದ ಆಳಲ್ಪಟ್ಟ ರೋಮ್, ಅವರಿಂದ ನಿರ್ಲಕ್ಷಿಸಲ್ಪಟ್ಟ ರೋಮನ್ ಪರಂಪರೆ, ಈಗ ಅದೇ ಪೋಪುಗಳ ಅನುಯಾಯಿಗಳಿಂದ “ರೋಮನ್ ಕಟ್ಟಡಗಳ ಅಮೃತಶಿಲೆ ಕಿತ್ತು ಪೋಪ್‌ಗಳು ಚರ್ಚುಗಳನ್ನು ಕಟ್ಟಿಸಿ, ಐತಿಹಾಸಿಕ ಕಟ್ಟಡಗಳನ್ನು ಪಾಳುಬಿಟ್ಟರು” ಎಂಬ ಐತಿಹಾಸಿಕ ಸತ್ಯದ ಅನಾವರಣ. ಈಗಿನ ರೋಮಿನ ವೈಚಾರಿಕ ಪ್ರಜ್ಞೆಯ ಇಂತಹ ವಿದ್ಯಾವಂತರುಗಳನ್ನು ನಾವೂ ಸಹ ಸೃಷ್ಟಿಸಿಕೊಂಡರೆ ಮಾತ್ರವೆ ಯಾವುದೆ ಜಾತಿಜನಾಂಗಕ್ಕೆ ಸೇರಿರಲಿ ನಮ್ಮ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇರುತ್ತದೆ ಮತ್ತು ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಅರಿವು ಚಿದಾನಂದ ಮೂರ್ತಿಗಳ ಅಪ್ರಬುದ್ಧ ಆವೇಶದ ಹಿನ್ನೆಲೆಯಲ್ಲಿ ಕಾಡುತ್ತಲೆ ಇತ್ತು. ಇತಿಹಾಸದೆಡೆಗೆ ಕುತೂಹಲ ಮತ್ತು ಗೌರವ ಇಲ್ಲದಿದ್ದರೆ ಯಾವೊಂದು ಐತಿಹಾಸಿಕ ಸ್ಥಾವರವೂ ಮುಂದಿನ ಪೀಳಿಗೆಗೆ ಉಳಿಯಲಾರದು ಎನ್ನುವ ಸರಳ ಸತ್ಯ ನಮ್ಮ ಈ “ಜಂಗಮ” ಪಂಡಿತರಿಗೆ ತಿಳಿಯದೆ? ಜನರಲ್ಲಿ ಪರಸ್ಪರ ಪ್ರೀತಿ ಮತ್ತು ವೈಚಾರಿಕತೆ ಬೆಳೆಸುವ ಉದ್ದೇಶವಿಲ್ಲದೆ ತಮ್ಮ ನಂತರವೂ ಜನ ದ್ವೇಷದಿಂದ ಕಚ್ಚಾಡಿ ಸಾಯಲಿ ಎಂಬ ಕ್ಷುದ್ರ ಆಸೆ ಈ ಮೂರ್ತಿಗಳಿಗೆ ಏಕೆ? ಬಹುಶಃ ಅದು ಎಲ್ಲಾ ಮತಗಳಲ್ಲಿಯೂ ಇರುವ ಅವರಂತಹ ಫ್ಯಾಸಿಸ್ಟರ ಕೀಳರಿಮೆ ಮತ್ತು ಜೀವವಿರೋಧಿ ಮನೋಭಾವದಿಂದಿರಬೇಕು.
ರೋಮಿನ ಹಿನ್ನೆಲೆಯಲ್ಲಿ ಮೂರ್ತಿಗಳು ನನ್ನನ್ನು ಕಾಡಲು ಇನ್ನೂ ಒಂದು ಪ್ರಬಲ ಕಾರಣವಿತ್ತು. ಈ ಫ್ಯಾಸಿಸ್ಟರೆಲ್ಲರ ಪರಮಗುರುವಾದ ಹಿಟ್ಲರ್ ಮಹಾಶಯ ರಕ್ತಶುದ್ಧಿಯ ಹಿನ್ನೆಲೆ ಇಟ್ಟುಕೊಂಡು ಅರೆಕೋಟಿಗೂ ಹೆಚ್ಚಿನ ಯಹೂದಿಗಳ ನಿರ್ಮೂಲನೆಯಲ್ಲಿ ತೊಡಗಿದ್ದದ್ದು ನಿಮಗೆ ಗೊತ್ತಿರಬಹುದು. ಅದರ ಜೊತೆಜೊತೆಗೆಯೇ, ಯೂರೋಪಿನಲ್ಲಿ ಶತಮಾನಗಳಿಂದ ವಾಸಿಸುತ್ತಿದ್ದ ಭಾರತೀಯ ಮೂಲದ ಜನಾಂಗವೊಂದರ ನಿರ್ಮೂಲನೆಯಲ್ಲೂ ಆತ ತೊಡಗಿದ್ದ. ಆ ಹಿಟ್ಲರ್‌ನ ಸ್ನೇಹಿತನಾಗಿದ್ದವನು ಇಟಲಿಯ ಫ್ಯಾಸಿಸ್ಟ್ ಪಕ್ಷದ ಮುಸ್ಸೊಲಿನಿ. ಅವನೂ ಸಹ ಯಹೂದಿಗಳ ವಿರುದ್ಧ ತಾರತಮ್ಯ ಮಾಡಿದ್ದ. ಬಹುಶ: ಅವನದೇ ಮುಂದುವರೆದ ಸಂತತಿ ಈಗ ಇಟಲಿಯಲ್ಲಿ ಭಾರತೀಯ ಮೂಲದ ಈ Forgotten ಜನಾಂಗವೊಂದರ ವಿರುದ್ಧ ಜನಾಂಗತಾರತಮ್ಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ಕಳೆದ ವಾರ ಇಟಲಿ ಸುದ್ದಿ ಮಾಡಿದ್ದೆ ಈ ಕಾರ್ಯಾಚರಣೆಯ ವಿಷಯವಾಗಿ. ಇತ್ತೀಚಿನ ದಶಕಗಳಲ್ಲಿ ಅಪಾರವೆನಿಸುವಷ್ಟು ಸಹನಶೀಲರೂ, ಉದಾರವಾದಿಗಳೂ ಆಗಿರುವ ಯೂರೋಪಿನಲ್ಲಿ ಮತ್ತೆ ಚಿಗುರೊಡೆಯುತ್ತಿರುವ ಜನಾಂಗದ್ವೇಷದ ಕುರುಹು ಈ ಭಾರತೀಯ ಮೂಲದವರನ್ನು ಫಿಂಗರ್‌ಪ್ರಿಂಟ್ ಮಾಡುವ ಕೆಲಸ. ಅದರ ಬಗ್ಗೆ ಮುಂದಿನ ವಾರ…
(ರೋಮಾ ನಗರದ ಮತ್ತಷ್ಟು ಚಿತ್ರಗಳು ಇಲ್ಲಿವೆ.)
Reader Comments
ಚೆನ್ನಾಗಿದೆ ಲೇಖನ..ಚಿಂತನೆಗೆ ಹಚ್ಚಿತು…
ಮುಂದಿನ ಭಾಗಕ್ಕಾಗಿ ಕಾಯುವೆ..
ನಮಸ್ತೆ, ಇಂತಹ ಮಾಹಿತಿಪೂರ್ಣ ಲೇಖನದ ಮಧ್ಯೆಯೂ ಚಿದಾನಂದ ಮೂರ್ತಿಗಳಂತಹ ಹಿರಿಯರನ್ನು ಟೀಕಿಸುವ ಸೋಗಲಾಡಿತನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಚಿ.ಮೂ.ಗಳು ಐತಿಹಾಸಿಕ ಸತ್ಯಗಳನ್ನು ಹೇಳುತ್ತಿದ್ದಾರೆಯೇ ಹೊರತು ಅದನ್ನು ಹಿಡಿದುಕೊಂಡು ಬಡಿದಾಡಿ ಎಂದು ಯಾವತ್ತೂ ಕರೆಕೊಟ್ಟಿಲ್ಲ. ನಿಮ್ಮ ದೃಷ್ಟಿಯಲ್ಲಿ ರೋಮಿನಲ್ಲಿ ಕಟ್ಟಡಗಳ ಅಮೃತಶಿಲೆ ಕಿತ್ತು ಪೋಪ್‌ಗಳು ಚರ್ಚುಗಳನ್ನು ಕಟ್ಟಿಸಿ, ಐತಿಹಾಸಿಕ ಕಟ್ಟಡಗಳನ್ನು ಪಾಳುಬಿಟ್ಟರು ಎಂಬುದು ಐತಿಹಾಸಿಕ ಸತ್ಯದ ಅನಾವರಣವಾಗುತ್ತದೆ. ಆದರೆ ಅದನ್ನೇ ಇಲ್ಲಿ ಭಾರತದಲ್ಲಿ ಮುಸ್ಲಿಂ ಆಳ್ವಿಕೆಯಲ್ಲಿ ಹಿಂದೂ ದೇವಾಲಯಗಳ ಮೇಲೆ ಮಸೀದಿ ಕಟ್ಟಿಸಿದರು ಎಂದರೆ ಅವರು ಪೂರ್ವಗ್ರಹ ಪೀಡಿತ, ಕೋಮುವಾದಿ ಆಗಿಬಿಡುತ್ತಾರೆ ! ಹಂಪಿಯಲ್ಲಿ ಐತಿಹಾಸಿಕ ಸ್ಮಾರಕದ ಮೇಲೆ ಮುಸ್ಲಿಮರು ಈಗ ಗೋರಿ ಕಟ್ಟಿಕೊಂಡದ್ದನ್ನು ನೋಡುತ್ತಾ ಸುಮ್ಮನೇ ಇದ್ದು ಮುಂದೆ ಬರುವ ಪ್ರವಾಸಿಗರಿಗೆ ಹೀಗೆ ಹೀಗೆ ಎಂದು ವಿವರಿಸಿದರೆ ಅದು ಪ್ರಬುದ್ಧತೆಯೇ?
Information is very interesting and way of presentation also very good. But before conclude about chidananda murthy you have to thinking is better.
ಲೇಖನ ತುಂಬಾ ಚೆನ್ನಾಗಿದೆ ಸರ್. ಚಿಮೂ ಬಗ್ಗೆ ಸರಿಯಾಗಿಯೇ ಹೇಳಿದ್ದೀರಿ. ಮೇಲೆ ಪ್ರತಿಕ್ರೀಯಿಸಿರುವ ಅಜಯರಂತವರಿಗೆ ಇತಿಹಾಸ ನೋಡುವ ದೃಷ್ಠಿ ಅರ್ಥಮಾಡಿಸುವುದು ಕಷ್ಟ. ಇಂತಹ ಮನಸುಗಳ ಆಲೋಚನಾ ಕ್ರಮ ತಿದ್ದುವುದು ಸಾಧ್ಯವಿಲ್ಲ.
ನಿಮ್ಮ ಲೇಖನ ಚೆನ್ನಾಗಿದೆ. ಆದರೆ ನಾವು ನಮ್ಮವರನ್ನೆ ಟೀಕಿಸುವುದು ಸರಿಯಲ್ಲ
ನಾವು ಎಲ್ಲರನ್ನು ಗೌರವಿಸುತ್ತೇವೆ. ರೋಮನ್ನು ನೋಡಿ ನೋಯುವ ನೀವು
ನಮ್ಮ ಧೇಶದ ಇತಿಹಾಸವನ್ನೂ, ಆಗಿರುವ ಅನ್ಯಾಯಗಳನ್ನೂ ಸ್ವಲ್ಪ ಯೋಚಿಸಿ.
ಭಾರತ ಪುಣ್ಯ ಭೂಮಿ, ಹಿಂದುಗಳೆ ಸಹನಶೀಲರು, ಭೇರೆ ಯಾರಿಗು ಇದು ಸಾಧ್ಯವಿಲ್ಲ
ನಮ್ಮಲ್ಲಿ ಒಳ ಜಗಳಗಳಿರಬಹುದು, ಅಂದ ಮಾತ್ರಕ್ಕೆ ನಾವು ಕಿಳಲ್ಲ
ನಾವೆಲ್ಲ ಒಂದೆ.
-ಬಿ ಎ ಎಂ