"ಕನ್ನಡ, ಪೂರ್ವದ ಇಟಾಲಿಯನ್" ಮತ್ತು "ಪಂಪೆ, ಹಾಳುಕೊಂಪೆ"

This post was written by admin on August 14, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 22, 2008 ರ ಸಂಚಿಕೆಯಲ್ಲಿನ ಲೇಖನ.)

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಹೆಚ್ಚೂಕಮ್ಮಿ ಒಂದೇ ರೀತಿ ಇರುವುದರಿಂದ ಮತ್ತು ಕರ್ನಾಟಕ ಮತ್ತು ಆಂಧ್ರ ನೂರಾರು ಮೈಲು ಉದ್ದದ ಗಡಿ ಹಂಚಿಕೊಂಡಿರುವುದರಿಂದ ಆಗಾಗ್ಗೆ ಕನ್ನಡದ ಪತ್ರಿಕೆಗಳಲ್ಲಿ ತೆಲುಗಿನ ಅಥವ ಆಂಧ್ರದ ಸುದ್ದಿಗಳು ಬರುವುದು ಸಹಜ. ಅಂತಹ ಲೇಖನಗಳಲ್ಲಿ ಅನೇಕ ಸಲ ಬರುವ ಕ್ಲಿಷೆ, ತೆಲುಗು, ಪೂರ್ವದ ಇಟಾಲಿಯನ್. ಎಂದು. ಇದನ್ನು ಮೆಚ್ಚುಗೆಯ ರೂಪದಲ್ಲಿಯೊ ಅಥವ ಹೆಮ್ಮೆಯ ರೂಪದಲ್ಲಿಯೋ ಬಳಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಾಕ್ಯ ಕಂಡಾಗಲೆಲ್ಲ ನನಗೆ ಆಂಧ್ರದ ಕಾಂಗ್ರೆಸ್ಸಿಗರು ದೆಹಲಿ ಹೈಕಮ್ಯಾಂಡಿನ ಇಟಲಿಯಮ್ಮನನ್ನು ಭೇಟಿಯಾದಾಗ ’ನಾನು ಆಂಧ್ರದವನು, ನಮ್ಮ ಭಾಷೆಯನ್ನು ಪೂರ್ವದ ಇಟಾಲಿಯನ್ ಎನ್ನುತ್ತಾರೆ,’ ಎಂಬ ರೆಡಿಮೇಡ್ ವಾಕ್ಯದಿಂದಲೆ ಆರಂಭಿಸುತ್ತಾರಾ? ಎಂಬ ತಮಾಷೆಯ ಆಲೋಚನೆ ಬರುತ್ತದೆ. ನಮ್ಮ ದೇಶದ ಕೆಲವು ಗುಲಾಮಿ ಮನಸ್ಥಿತಿಗಳನ್ನು ಕಂಡಾಗ ಅದು ಅಸಾಧ್ಯವೂ ಅಲ್ಲವೇನೊ?

ಇಟಲಿಯಲ್ಲಿದ್ದಾಗ ನಾನು ಇದರ ಬಗ್ಗೆ ಬಹಳ ಯೋಚಿಸಿದೆ. ಸ್ವಲ್ಪ ಅಧ್ಯಯನವನ್ನೂ ಮಾಡಿದೆ. ಯಾಕೆ ನಾವು ಕೊಡಗನ್ನು ಕರ್ನಾಟಕದ ಕಾಶ್ಮೀರ ಎನ್ನುತ್ತೇವೆ? ಕಾಶ್ಮೀರವನ್ನು ಭಾರತದ ಸ್ವಿಟ್ಜರ್‌ಲ್ಯಾಂಡ್ ಎನ್ನುತ್ತೇವೆ? ತೆಲುಗನ್ನು ಪೂರ್ವದ ಇಟಾಲಿಯನ್ ಎನ್ನುತ್ತೇವೆ? ನಮ್ಮದಲ್ಲದ, ಅಥವ ನಾವು ನೋಡಿಲ್ಲದ, ಕಂಡಿಲ್ಲದ ಅನ್ಯ ವಸ್ತುವಿಗೆ, ಸ್ಥಳಕ್ಕೆ, ಭಾಷೆಗೆ, ವ್ಯಕ್ತಿಗೆ (ಅದೂ ವಿಶೇಷವಾಗಿ ಬಿಳಿಯರಿಗೆ ಅಥವ ಪಶ್ಚಿಮಕ್ಕೆ) ಹೋಲಿಸಿದರೆ ಮಾತ್ರ ನಮ್ಮ ಹಿರಿಮೆ ನಮಗೆ ಮನದಟ್ಟಾಗುತ್ತದೆಯೆ? ಇಲ್ಲದಿದ್ದರೆ ಅದು ಪೀಚು-ಪೇಲವ ಆಗಿಬಿಡುತ್ತದೆಯೆ? ಛೇ, ಎಂತಹ ಕೀಳರಿಮೆ ಇದು. ನಮ್ಮ ಸ್ವಂತಿಕೆಯ ಮತ್ತು ಮಹತ್ತಿನ ಬಗ್ಗೆ ನಮಗೇ ನಂಬಿಕೆಯಿಲ್ಲದಾಗ ಇಂತಹ ಪದಪುಂಜಗಳು ಬಳಕೆಯಾಗುತ್ತವೆ.

“ತೆಲುಗು, ಪೂರ್ವದ ಇಟಾಲಿಯನ್” ಎಂಬ ಮಾತಿಗೂ ಇದೇ ಆಧಾರ. ಈ ಮಾತನ್ನು ಜನ ಸಾಮಾನ್ಯವಾಗಿ ಬಳಸುವುದು ಇಟಾಲಿಯನ್ ಭಾಷೆ ಬಹಳ ಇಂಪಂತೆ, ಹಾಗೆಯೆ ತೆಲುಗು ಸಹ ಇಂಪು, ಎಂದು. ಆದರೆ, ಹೀಗೆ ಹೇಳುವ ಎಷ್ಟೋ ಜನರಿಗೆ ಇಟಾಲಿಯನ್ ಭಾಷೆ ಹೇಗೆ ಧ್ವನಿಸುತ್ತದೆ ಎಂಬ ಕಲ್ಪನೆಯೂ ಇಲ್ಲ. ವಿಚಿತ್ರ ಏನೆಂದರೆ, ತೆಲುಗನ್ನು ಪೂರ್ವದ ಇಟಾಲಿಯನ್ ಎಂದಾತ ಅದನ್ನು ಹಾಗೆ ಹೇಳಿದ್ದು ಅ ಭಾಷೆಯಲ್ಲಿನ ಪದ ಉತ್ಪತ್ತಿಯ ಸಾಮ್ಯತೆಗಳನ್ನು ಗುರುತಿಸಿಯೆ ಹೊರತು ಆ ಭಾಷೆಗಳು ಇಂಪಾಗಿ ಕೇಳಿಸುತ್ತವೆ ಎಂದಲ್ಲ.

ಆ ಭಾಷಾಶಾಸ್ತ್ರಜ್ಞ ಹಾಗೆ ಹೇಳಿದ್ದು, ಇಟಲಿಯಾನೊ ಭಾಷೆಯಂತೆ ತೆಲುಗಿನಲ್ಲಿಯೂ ಪದಗಳು ಸ್ವರದಿಂದಲೆ ಕೊನೆಯಾಗುತ್ತವೆ ಎಂಬ ಕಾರಣಕ್ಕೆ. ಬಹುಶಃ ಆತ ಬಹುಪಾಲು ಪದಗಳು ಅರ್ಧಾಕ್ಷರಗಳಲ್ಲಿಯೆ ಕೊನೆಯಾಗುವ ಹಿಂದಿ ಮತ್ತಿತರ ಉತ್ತರ ಭಾರತದ ಭಾಷೆಗಳನ್ನು ಗಮನಿಸಿ ನಂತರ ದಕ್ಷಿಣ ಭಾರತದ ಭಾಷೆಗಳನ್ನು ಗಮನಿಸಿರಬೇಕು. ಆತ ಹಾಗೆ ಗಮನಿಸಿದ ಮೊದಲ ಭಾಷೆಯೆ ತೆಲುಗು ಆಗಿದ್ದಿರಬೇಕು. ಅಥವ ಇಂತಹುದೆ ಯಾವುದೊ ಒಂದು ಸಂದರ್ಭವಾಗಿರಬೇಕು. ಆಗ ಆತ ತೆಲುಗಿನ ಬಹುಪಾಲು ಪದಗಳು ಅಕಾರಾದಿ ಸ್ವರಗಳಿಂದಲೆ ಕೊನೆಯಾಗುವುದನ್ನು ಗಮನಿಸಿದ್ದಾನೆ. ಇಂಗ್ಲಿಷ್‌ನ ಬಹುಪಾಲು ಪದಗಳು ಅರ್ಧಾಕ್ಷರದಲ್ಲಿಯೆ ಕೊನೆಯಾಗುತ್ತವೆ. ಆದರೆ ಯೂರೋಪಿನ ಅನೇಕ ಭಾಷೆಗಳು ಹೀಗೆ ತೆಲುಗಿನಂತೆಯೆ ಸ್ವರಾಕ್ಷರದ ಜೋಡಣೆಯಿಂದ ಕೊನೆಯಾಗುತ್ತವೆ. ಅದರಲ್ಲಿ ಇಟಾಲಿಯನ್ ಸಹ ಒಂದು. ಬಹುಶಃ ಆತನಿಗೆ ಇಟಾಲಿಯನ್ ಚೆನ್ನಾಗಿ ಗೊತ್ತಿದ್ದಕ್ಕೊ ಅಥವ ಮತ್ತೆನ್ನಿಂತದ್ದಕ್ಕೊ, ತೆಲುಗು ಪೂರ್ವದ ಇಟಾಲಿಯನ್ ಅಂದಿದ್ದಾನೆ, ಅಷ್ಟೆ.

ಆದರೆ ಆತ ತೆಲುಗಿಗಿಂತ ಮುಂಚೆ ಕನ್ನಡವನ್ನು ಗಮನಿಸಿದ್ದರೆ ಇಷ್ಟೊತ್ತಿಗೆ ನಮ್ಮವರೂ, ಕನ್ನಡ, ಪೂರ್ವದ ಇಟಾಲಿಯನ್ ಎಂದು ಇಟಾಲಿಯನ್ ನಾಮಸ್ಮರಣೆ ಮಾಡುತ್ತಿದ್ದರು. ಹೌದು, ನೀವೇ ಗಮನಿಸಿ ನೋಡಿ. ಕನ್ನಡದ ಪದಗಳೂ ಸ್ವರದಿಂದಲೇ ಕೊನೆಯಾಗುತ್ತವೆ. ಅರ್ಧಾಕ್ಷರದಿಂದ ಕೊನೆಯಾಗುವ ಬೇರೆ ಭಾಷೆಯ ಪದಗಳಿಗೆ ನಾವು ’ಉ’ಕಾರ ಸೇರಿಸಿಕೊಂಡು ನಮ್ಮದಾಗಿಸಿಕೊಂಡಿದ್ದೇವೆ. ಆಡು ಭಾಷೆಯಲ್ಲಿ ಇಂಗ್ಲಿಷ್ ಇಂಗ್ಲೀಷು ಆಗಿದೆ; ಕಾರ್, ಬಸ್, ರೈಲ್, ಸ್ಕೂಲ್ ಗಳೆಲ್ಲ ಕಾರು ಬಸ್ಸು ರೈಲು ಸ್ಕೂಲುಗಳಾಗಿವೆ. ಈಗೀಗ ನಮ್ಮದನ್ನಾಗಿ ಮಾಡಿಕೊಳ್ಳುವಲ್ಲಿ ಸೋಲುತ್ತಲೊ, ಅಥವ ಇಂಗ್ಲಿಷ್ ಪದಗಳನ್ನು ಇಂಗ್ಲಿಷರಂತೆ ಬಳಸಿದರೆ ಮಾತ್ರ ಘನತೆ ಎಂಬ ಕಾರಣಕ್ಕಾಗಿಯೊ ಕೆಲವು ಪದಗಳನ್ನು ಮೂಲರೂಪದಲ್ಲಿಯೆ ಬಳಸಲು ಆರಂಭಿಸಿದ್ದೇವೆ. ಇವುಗಳನ್ನು ಬಿಟ್ಟರೆ ನಮ್ಮ ಮೂಲಪದಗಳೆಲ್ಲ ಅಆ..ಓಔ ಸ್ವರದಲ್ಲಿಯೆ ಕೊನೆಯಾಗುತ್ತವೆ. ತೆಲುಗು ಪದಗಳೂ ಹೀಗೆಯೆ. ಇಟಾಲಿಯನ್ ಭಾಷೆಯಲ್ಲಿಯೂ ಹೀಗೆಯೆ. ಅಂದ ಹಾಗೆ, ಇಟಾಲಿಯನ್ ಭಾಷೆಯನ್ನು ಆ ಭಾಷೆಯಲ್ಲಿ ಹೇಳುವುದು ಇಟಲಿಯಾನೊ ಎಂದು. ಇಂಗ್ಲಿಷ್‌ನ ಹೆಸರು ಇಟಾಲಿಯನ್‌ನಲ್ಲಿ “ಇಂಗ್ಲೀಸೆ” (Inglese) ಎಂದು.

ಕನ್ನಡ ಓದುಗರಿಗೆ “ಜೀಸಸ್ ಕ್ರೈಸ್ಟ್” ಪರಿಚಯವಾಗುವುದಕ್ಕಿಂತ ಮೊದಲು ಏಸು ಕ್ರಿಸ್ತನ ಪರಿಚಯವಾಗಿತ್ತು. ಅದೇ ರೀತಿ ಇಟಾಲಿಯನ್ನರಿಗೆ ಆತ ಜೆಸೂ ಕ್ರಿಸ್ತೊ. ಗ್ರೀಕ್‌ನ ಹೆಸರು ಗ್ರೇಚೊ ಎಂದು. ನಾಮಪದಗಳೂ ಹಾಗೆಯೆ: ಡೇವಿಡ್-ದವೀಡೆ; ಪೀಟರ್-ಪೀತ್ರೊ; ಕಾರ್ಲ್-ಕಾರ್ಲೊ; ಅಂತೊನಿಯೊ, ಮರಿಯ, ಸೋನಿಯ, ಪಾವ್ಲ, ಡಾಂಟೆ, ಬರ್ಲುಸ್ಕೊನಿ, ಮಾರ್ಕೋನಿ, ಇತ್ಯಾದಿ. ರೋಮ್, ಮಿಲಾನ್ ನಗರಗಳನ್ನು ಕರೆಯುವುದು ರೋಮಾ, ಮಿಲಾನೊ ಎಂದು. ಅಚ್ಚ ಇಟಾಲಿಯನ್ನರಿಗೆ ಇಂಗ್ಲಿಷರ ಬ್ಯಾಂಗಲೂರ್‌ಗಿಂತ ಕನ್ನಡಿಗರಿಗೆ ಹತ್ತಿರವಾದ ಬೆಂಗಲೂ(ಳೂ)ರು ಬಹಳ ಹತ್ತಿರವಾಗಬಹುದು. ಈ ಎಲ್ಲಾ ಸಾಮ್ಯತೆಗಳಿಂದಾಗಿ ಯಾರಾದರೂ “ಕನ್ನಡ, ಪೂರ್ವದ ಇಟಾಲಿಯನ್” ಅಂದರೆ ಅವರ ಮನಸ್ಥಿತಿಯಲ್ಲಿ ದೋಷ ಹುಡುಕಬಹುದೆ ಹೊರತು ಆ ಮಾತಿನಲ್ಲಲ್ಲ.

ಪಂಪೆ, ಹಾಳುಕೊಂಪೆ…

ಇತ್ತೀಚೆಗೆ ಸ್ನೇಹಿತರೊಬ್ಬರು ಒಂದು ವಿಷಯ ಹೇಳುತ್ತಿದ್ದರು. ಅದು ಕತೆಯೊ, ಕಟ್ಟುಕತೆಯೊ, ಅಥವ ವಾಸ್ತವವೊ ಹೇಳುವುದು ಸ್ವಲ್ಪ ಕಷ್ಟವೆ. ವಿಷಯ ಏನೆಂದರೆ, ಕಳೆದ ಐದತ್ತು ವರ್ಷಗಳಲ್ಲಿ ಕರ್ನಾಟಕ ರಾಜಕೀಯ ರಂಗದ ಮೇಲೆ ಮುಂಚೂಣಿಗೆ ಬಂದುಬಿಟ್ಟಿರುವ ಗಣಿದೊರೆಗಳಾದ ಜನಾರ್ಧನ ರೆಡ್ಡಿ ಮತ್ತವರ ಕುಟುಂಬದವರಿಗೆ ಇಷ್ಟು ಐಶ್ವರ್ಯ ಹೇಗೆ ಬಂತು ಎನ್ನುವುದು. ನಾಡಿನ ಜನತೆಗೆ ಗೊತ್ತಿರುವಂತೆ ರೆಡ್ಡಿಯವರ ತಂದೆ ಕರ್ನಾಟಕ ಸರ್ಕಾರದ ಪೋಲಿಸ್ ಇಲಾಖೆಯಲ್ಲಿದ್ದವರು. ಕತೆ ಆರಂಭವಾಗುವುದು ಅವರು ಹಂಪಿಯಲ್ಲಿ ದಫೇದಾರ್ ಆಗಿದ್ದಾಗಿನಿಂದ. ಆ ಸಮಯದಲ್ಲಿ ಹಾಳು ಹಂಪಿಯಲ್ಲಿ ನಿಧಿ ಹುಡುಕಾಟ ಸಾಮಾನ್ಯವಾಗಿತ್ತಂತೆ. ಯಾರಿಗೊ ಎಲ್ಲಿಯೊ ಏನೊ ಸಿಕ್ಕಿತು ಎಂಬಂತಹ ಸುದ್ದಿಗಳು ಕೇಳಿಬರುತ್ತಿತ್ತಂತೆ; ಆಗ ಹೀಗೆಯೆ ಯಾರೊ ಕೂಲಿಯವನಿಗೆ ನಿಧಿ ಸಿಕ್ಕಿತು; ಅದನ್ನು ರೆಡ್ಡಿಯವರ ದಫೇದಾರ್ ತಂದೆ ವಶಪಡಿಸಿಕೊಂಡು ತಮ್ಮ ಮನೆಗೆ ಹೊತ್ತೊಯ್ದರು; ಇದೇ ಅವರ ಶ್ರೀಮಂತಿಕೆಯ ಮೂಲ, ಎಂದು ಹಂಪಿಯ ಸುತ್ತಮುತ್ತ ಆ ದಫೇದಾರರ ಕಾಲದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದೆ ಆ ವಿಷಯ.

ಇದು ನಿಜವೊ, ಸುಳ್ಳೊ, ದಫೇದಾರರಿಗೆ ಎಷ್ಟು ಸಿಕ್ಕಿತೊ ಇಲ್ಲವೊ, ನಿಜ ಯಾರಿಗೆ ಗೊತ್ತು? ಯುದ್ಧದಲ್ಲಿ ಸೋತ ನಂತರ ಅವ್ಯಾಹತ ಕೊಳ್ಳೆಗೊಳಗಾದ ಹಂಪಿಯಲ್ಲಿ ನಿಧಿ ಸಿಗುವುದು ಸ್ವಲ್ಪ ಕಷ್ಟವೇ ಆದರೂ, ಬೆಂಕಿ ಇಲ್ಲದೆ ಹೋಗೆ ಏಳುವುದಿಲ್ಲ ಎನ್ನುವ ಮಾತಿನ ಹಿನ್ನೆಲೆಯಲ್ಲಿ ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವುದೂ ಕಷ್ಟವೆ. ಯಾಕೆಂದರೆ, ಕಾಲಾಂತರದಲ್ಲಿ ಊರುಗಳು ಕಣ್ಮರೆಯಾಗುವುದು, ಆಗಾಗ್ಗೆ ಉತ್ಖನನದಲ್ಲಿ ಸಾಕ್ಷ್ಯಗಳು ಕಾಣಿಸುವುದು, ಕೆಲವೊಮ್ಮೆ ಯಾವುದೊ ಪಾಳುಬಿದ್ದ ಊರಿನ ಯಾವುದೊ ಜಾಗದಲ್ಲಿ ಸಾಮಾನುಗಳು ಅಥವ ಒಡವೆಗಳು ಸಿಗುವುದು ಅಸಂಭವವೇನಲ್ಲ.


ಲೇಖನದ ವಿಡಿಯೊ ಪ್ರಸ್ತುತಿ

ಅವರು ಹಂಪೆಯ ಈ ವಿಷಯ ಹೇಳುತ್ತಿದ್ದಾಗ ನನಗೆ ಹಂಪೆಯ ತರಹವೆ ಹೆಸರಿರುವ ಇಟಲಿಯ ಊರೊಂದು ನೆನಪಾಯಿತು. ಅದು ಪಂಪೆ. ಕ್ರಿಸ್ತ ಪೂರ್ವ 7 ನೇ ಶತಮಾನದಲ್ಲಿ ಸ್ಥಾಪನೆಯಾದ ನಗರ. ಅಂದರೆ, ಹಂಪೆಗಿಂತ ಎರಡು ಸಾವಿರ ವರ್ಷಗಳ ಹಳೆಯ ನಗರ. ಆದರೆ ಆ ಊರಿನಲ್ಲಿ ಜನ ಓಡಾಡಿದ್ದು ಮಾತ್ರ ಈಗಿನ ಹಂಪೆಯ ಇತಿಹಾಸವಿದ್ದಷ್ಟು ಕಾಲ. ಮೊದಲ ಶತಮಾನದ ಸಮಯದಲ್ಲಿ ಸುಮಾರು 20 ಸಾವಿರ ಜನಸಂಖ್ಯೆಯ ನಗರ ಅದು. ಯೋಜನಾಬದ್ಧವಾಗಿ, ರೋಮನ್ ವಾಸ್ತಿಶಿಲ್ಪದ ಪ್ರಕಾರ ಕಟ್ಟಲ್ಪಟ್ಟ ನಗರ. ಇಂತಹ ಪಟ್ಟಣ ಹೆಚ್ಚೂಕಮ್ಮಿ 17 ಶತಮಾನಗಳ ಕಾಲ ಮಣ್ಣಿನಲ್ಲಿ, ಬೂದಿಯಲ್ಲಿ ಹೂತುಹೋಗಿತ್ತು. ಅದು ಹೀಗೆ ಪಾಳುಬೀಳುವಂತಾಗಲು ಯಾರೂ ದಾಳಿ ಮಾಡಲಿಲ್ಲ. ಬೆಂಕಿ ಹಚ್ಚಲಿಲ್ಲ. ಭೂಕಂಪವಾಗಲಿಲ್ಲ. ಪ್ರಳಯವಾಗಲಿಲ್ಲ. ಹಾಗೆಯೆ ಒಂದು ರೀತಿಯಲ್ಲಿ ಈ ಎಲ್ಲವೂ ನಿಜ. ನಿಸರ್ಗವೆ ಅದರ ಕಾರಣಕರ್ತೃ. ಅದು ಕ್ರಿ.ಶ. 78. ಆ ನಗರಕ್ಕೆ ಹೊಂದಿಕೊಂಡು ಇದ್ದ ಮೌಂಟ್ ವಿಸೂವಿಯಸ್ ಪರ್ವತ ಮುನಿಸಿಕೊಂಡಿತು. ಮೊದಲು ಭೂಕಂಪವಾಯಿತು. ನಂತರ ಪರ್ವತ ಬೆಂಕಿ ಉಗುಳಿತು. ಕಾಕತಾಳೀಯವೆಂಬಂತೆ ಅದು ಆರಂಭವಾಗಿದ್ದು ಮಾತ್ರ ಸ್ಥಳೀಯ ರೋಮನ್ ಜನ ತಮ್ಮ ಅಗ್ನಿದೇವತೆಯ ಹಬ್ಬ ಮಾಡಿದ ಮಾರನೆಯ ದಿನ.

ಅಗ್ನಿಪರ್ವತ ಅನೇಕ ತಿಂಗಳುಗಳ ಕಾಲ ಬೆಂಕಿ ಮತ್ತು ಬೂದಿಯನ್ನು ಉಗುಳಿತು. ಹಲವರು ಇದ್ದ ಜಾಗದಲ್ಲಿಯೆ ಬೂದಿಯಲ್ಲಿ ಮುಚ್ಚಿಹೋಗಿ ಸತ್ತುಹೋದರು. ದಪ್ಪ ಪದರುಗಳ ಬೂದಿ ನಿಧಾನವಾಗಿ ನಗರವನ್ನು ಮುಚ್ಚುತ್ತ ಬಂತು. ಬದುಕುಳಿದವರು ಊರನ್ನು ತೊರೆದು ಹೋದರು. ಇಡೀ ಊರು ನಿರ್ಮಾನುಷವಾಯಿತು. ಕಾಲಾಂತರದಲ್ಲಿ ಇಂತಹ ಊರು ಇಲ್ಲಿತ್ತು, ಅದರ ಇತಿಹಾಸ ಇದು ಎನ್ನುವುದೆ ಸುತ್ತಮುತ್ತಲಿನ ಜನರಿಗೆ ಮರೆತು ಹೋಗುವಷ್ಟು ಕಣ್ಮರೆಯಾಗುತ್ತ ಬಂತು. ಆ ಊರು ಮತ್ತು ಅದರ ಸುತ್ತಲಿನ ಇನ್ನೂ ಒಂದೆರಡು ನಗರಗಳು ಹೀಗೆಯೆ ಸುಮಾರು 12 ವಿವಿಧ ಬಗೆಯ ಮಣ್ಣಿನ ಪದರಗಳಲ್ಲಿ ಹೂತುಹೋದವು.

ಅದಾದ ಹದಿನೈದು ಶತಮಾನಗಳ ನಂತರವೆ ಭೂಮಿಯೊಳಗಿನ ಆ ನಗರಗಳ ಇರುವಿಕೆ ಇಟಾಲಿಯನ್ನರಿಗೆ ಗೊತ್ತಾಗಿದ್ದು. ಆದರೆ ನಿಜವಾದ ಉತ್ಖನನ ಆರಂಭವಾದದ್ದು ಮಾತ್ರ 18 ನೇ ಶತಮಾನದಲ್ಲಿ. ಕಳೆದ ಎರಡು ಶತಮಾನಗಳಿಂದ ಅದು ಮುಂದುವರೆದಿದೆ. ಆ ಉತ್ಖನನದ ಸಮಯದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಕಾಮಪ್ರಚೋದಕ ವರ್ಣಭಿತ್ತಿಚಿತ್ರಗಳದೆ ಒಂದು ದೊಡ್ಡ ಕತೆ! ನೇಪಲ್ಸ್‌ನಲ್ಲಿರುವ ಅವಶೇಷಗಳ ಮ್ಯೂಸಿಯಮ್‌ನ ರಹಸ್ಯ ಕೋಣೆಯಲ್ಲಿ ಇಟ್ಟಿರುವ ಆ ವರ್ಣಚಿತ್ರಗಳನ್ನು ನೋಡಲು ಚಿಕ್ಕವರಿಗೆ ಈಗಲೂ ಪ್ರವೇಶವಿಲ್ಲ! ಅನೇಕ ವರ್ಷಗಳ ಕಾಲ ವಯಸ್ಕರಿಗೂ ಇರಲಿಲ್ಲ!
ಎರಡು ಸಹಸ್ರ ವರ್ಷಗಳ ಹಿಂದಿನ ನಗರ ಅದರ ಮೂಲರೂಪದಲ್ಲಿಯೆ ಸಿಕ್ಕಿದ್ದರಿಂದಾಗಿ ಮತ್ತು ಅದರ ಇತಿಹಾಸದಿಂದಾಗಿ ಪಂಪೆ ಇಂದು ಇಟಲಿಯ ಅತಿಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರತಿ ವರ್ಷ ಸುಮಾರು 25 ಲಕ್ಷ ಪ್ರವಾಸಿಗರು ಈ ಗತಕಾಲದ ಊರನ್ನು ನೋಡಲು ಬರುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ ಉತ್ಖನನದಿಂದ ಎದ್ದ ಈ ಪಾಳುನಗರ ಈಗ ಮತ್ತೆ ಪಾಳು ಬೀಳುತ್ತಿದೆಯಂತೆ. ಕಾರಣ? !ಅತಿಯಾದ ಪ್ರವಾಸೋದ್ಯಮ ಮತ್ತು ಪ್ರವಾಸಿಗರು. ಕೆಲವು ಪ್ರವಾಸಿಗರು ಗೋಡೆಯ ಮೇಲಿನ ಭಿತ್ತಿಚಿತ್ರಗಳ ಪದರವನ್ನು ಕಿತ್ತು ಅಥವ ಕೈಗೆ ಸಿಕ್ಕದ್ದನ್ನು ಬಾಚಿಕೊಂಡು ಒಯ್ಯುತ್ತಿದ್ದಾರಂತೆ.

ಇಂತಹ ದರೋಡೆಗಳಿಂದ ನಿಜವಾದ ನಷ್ಟವಾಗುವುದು ಮಾತ್ರ ನಮ್ಮ ಮನುಷ್ಯ ಜಾತಿಯ ಪರಂಪರೆಗೆ ಮತ್ತು ಇತಿಹಾಸವನ್ನು ಅರ್ಥೈಸಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ. ಅದು ಪಂಪೆಯ ವಿಚಾರದಲ್ಲೂ ನಿಜ, ಹಂಪೆಯ ವಿಚಾರದಲ್ಲೂ ನಿಜ.

Add a Comment

required, use real name
required, will not be published
optional, your blog address