ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
Posted Under: Uncategorized
(ಜನವರಿ 2008 ರಲ್ಲಿ ಬರೆದ ಲೇಖನ ಇದು. “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ “ಪ್ರಜಾ ರಾಜ್ಯಂ” ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.)
1980 ರಲ್ಲಿ ಇತ್ತ ಕರ್ನಾಟಕದಲ್ಲಿ ಗುಂಡೂರಾವ್ ಎಂಬ ಅರೆ ಜೋಕರ್, ಅರೆ ಗೂಂಡಾ ಮುಖ್ಯಮಂತ್ರಿಯಾದರೆ, ಅತ್ತ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದಾತನ ಹೆಸರು ಅಂಜಯ್ಯ. ಪೂರ್ಣ ಜೋಕರ್. ಯಾವೊಬ್ಬ ಆಂಧ್ರದ ಮುಖ್ಯಮಂತ್ರಿಯೂ ಮುಂದೆ ಸಾಧಿಸಲಾಗದ್ದನ್ನು ಆತ ಮಾಡಿದ. ಏನೆಂದರೆ, 72 ಜನರನ್ನು ಮಂತ್ರಿಗಳನ್ನಾಗಿ ಮಾಡಿದ್ದ! ಆತನನ್ನು ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಸಿದಾಗ ಆತ ಹೀಗೆ ಅಂದ ಅನ್ನುತ್ತಾರೆ: “ನಾನು ಮೇಡಮ್ಮಿನ ಆಶೀರ್ವಾದದಿಂದ ಬಂದೆ, ಈಗ ಅವರ ಅದೇಶದ ಮೇರೆಗೆ ಹೋಗುತ್ತಿದ್ದೇನೆ. ನಾನು ಯಾಕೆ ಬಂದೆ, ಈಗ ಯಾಕೆ ಹೋಗುತ್ತಿದ್ದೇನೆ ಎನ್ನುವುದೇನೂ ನನಗೆ ಗೊತ್ತಿಲ್ಲ.”
ಪಾಪ. ಇಂತಹ ಕುರಿಯನ್ನೂ, ಆತ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನೂ ನೋಡದೆ ಹೈದರಾಬಾದಿನ ವಿಮಾನನಿಲ್ದಾಣದಲ್ಲಿ ಆಗಿನ ಪ್ರಧಾನಿಯ ಮಗ ರಾಜೀವ ಗಾಂಧಿ ಅವಮಾನಿಸಿ ಬಿಟ್ಟರು. ಅಷ್ಟು ಸಾಲದೆಂಬಂತೆ, ದೋಸೆ ಮಗುಚುವಂತೆ ಕೇವಲ ಎಂಟೇ ತಿಂಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಗರ್ವಿಷ್ಟ ದಿಲ್ಲಿ ದೊರೆಗಳು ಆಂಧ್ರದಲ್ಲಿ ಬದಲಾಯಿಸಿಬಿಟ್ಟರು. 1982 ರಲ್ಲಿ ಆಂಧ್ರ ಕಂಡದ್ದು ಮೂವರು ಮುಖ್ಯಮಂತ್ರಿಗಳನ್ನು. ಇದನ್ನೆಲ್ಲ ಮೂಕವಾಗಿ ನೋಡಿದ ತೆಲುಗು ಜನ ಇದು ತಮಗಾದ ಅವಮಾನ ಎಂದುಕೊಂಡು ಕನಲಿ ಹೋದರು. ಅದಕ್ಕಿಂತ ಕೆಲವು ವರ್ಷಗಳ ಮೊದಲಿನಿಂದಲೂ ರಾಜಕೀಯಕ್ಕೆ ಬರಲು ಸಮಯ ನೋಡುತ್ತಿದ್ದ ತೆಲುಗಿನ ಜನಪ್ರಿಯ ಚಲನಚಿತ್ರ ನಟ, “ಅನ್ನಗಾರು” (ಅಣ್ಣಾವ್ರು) ಎನ್.ಟಿ. ರಾಮರಾವ್, ಆಗ ಜನರನ್ನು ಕೇಳಿದ್ದು ಒಂದೇ ಪ್ರಶ್ನೆ: “ಏನಾಯಿತು ತೆಲುಗು ಆತ್ಮಗೌರವ?”
ಈ ತೆಲುಗು ಆತ್ಮಗೌರವದ ಪ್ರಶ್ನೆಯನ್ನೆ ಮುಂದಿಟ್ಟುಕೊಂಡು, ದಿಲ್ಲಿ ದೊರೆಸಾನಿಯ ಗುಲಾಮರ ವಿರುದ್ಧ ಎನ್.ಟಿ.ಆರ್. ತೆಲುಗು ದೇಶಂ ಪಕ್ಷ ಕಟ್ಟಿದರು. ಅದಾದ ಒಂಬತ್ತು ತಿಂಗಳಿಗೆ ನಡೆದ ಚುನಾವಣೆಯಲ್ಲಿ, 35 ವರ್ಷಗಳ ನಿರಂತರ ಕಾಂಗ್ರೆಸ್ ಆಡಳಿತ ಧೂಳಿಪಟವಾಗಿ ಹೋಯಿತು. ಜನರ ಆತ್ಮಗೌರವ ಎಷ್ಟು ತೀವ್ರವಾಗಿ ಕೆಲಸ ಮಾಡಿತೆಂದರೆ, ಇಂದಿರಾ ಗಾಂಧಿ ಸತ್ತ ಮೇಲೆ ಇಡೀ ದೇಶ ರಾಜೀವ್ ಗಾಂಧಿಯ ಕೈಗೆ ಮೂರನೆ ಎರಡರಷ್ಟು ಬಹುಮತ ಕೊಟ್ಟರೆ, ಆಂಧ್ರದಲ್ಲಿ ಜನ ಕ್ಯಾರೇ ಎನ್ನಲಿಲ್ಲ. ಅದು ಯಾವ ಮಟ್ಟಕ್ಕೆಂದರೆ, ಆ ಲೋಕಸಭೆಯಲ್ಲಿ ತೆಲುಗು ದೇಶಂ ಎನ್ನುವ ಒಂದೇ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ ಇಡೀ ದೇಶಕ್ಕೆ ಅಧಿಕೃತ ವಿರೋಧ ಪಕ್ಷವಾಗಿತ್ತು!
ಆಂಧ್ರದ ವಿಷಯಕ್ಕೆ ಬಂದರೆ, ಒಂದು ವಿಷಯದಲ್ಲಂತೂ ಕಳೆದ 25 ವರ್ಷಗಳಲ್ಲಿ ಮತ್ತೊಮ್ಮೆ ಇತಿಹಾಸ ಮೂಲ ಸ್ಥಾನಕ್ಕೆ ಬಂದಿದೆ. ಈಗಲೂ ದಿಲ್ಲಿ ದೊರೆಸಾನಿಯ ಗುಲಾಮರೆ ಆಂಧ್ರವನ್ನು ಆಳುತ್ತಿರುವವರು. ಈಗಿನ ಮುಖ್ಯಮಂತ್ರಿಯ ಪಾಪ್ಯುಲರ್ ಸ್ಲೋಗನ್ ಏನೆಂದರೆ, “ಮರಳಿ ಇಂದಿರಮ್ಮ ಪಾಲನ.”
ಅದು ಬಿಟ್ಟರೆ, ಮತ್ತೆ ಜನ ಈಗ ಮತ್ತೊಬ್ಬ ಸಿನೆಮಾ ನಟನತ್ತ ನೋಡುತ್ತಿದ್ದಾರೆ. ಮುಠಾಮೇಸ್ತ್ರಿ ಎಂಬ ಯಶಸ್ವಿ ಸಿನೆಮಾದಲ್ಲಿ ಎಮ್‌ಎಲ್‌ಎ. ಆಗಿ, ಮಂತ್ರಿಯೂ ಅಗಿದ್ದ ಆ ನಟ ರಾಜಕೀಯಕ್ಕೆ ಬರುವುದು ಇನ್ನೇನು ಖಾಯಂ. ಎನ್.ಟಿ.ಆರ್. ನಂತರ ಅಷ್ಟೆ ಜನಪ್ರಿಯತೆ ಮತ್ತು ಫ್ಯಾನ್ ಫಾಲ್ಲೊಯಿಂಗ್ ಇರುವ ಚಿರಂಜೀವಿ, ಆಂಧ್ರದ ಮುಖ್ಯಮಂತ್ರಿ ಆಗುತ್ತಾರೆಯೆ ಎನ್ನುವುದೆ ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಆಂಧ್ರದ ಪತ್ರಿಕೆಗಳು, ಟಿವಿ, ಮತ್ತು ತೆಲುಗು ವೆಬ್‌ಸೈಟುಗಳು ಈಗ ಇದೇ ಸುದ್ದಿಯಿಂದ ಅಕ್ಷರಶಃ ತುಂಬಿ ತುಳುಕುತ್ತಿವೆ.
ರೆಡ್ಡಿ, ಕಮ್ಮರ ಪ್ರಾಬಲ್ಯದಲ್ಲಿ ರಾಜಕೀಯ ಬಲ ಪಡೆದುಕೊಳ್ಳದ ದಲಿತ-ಹಿಂದುಳಿದ ವರ್ಗಗಳು
ಚಿರಂಜೀವಿ ಆಂಧ್ರದ ರಾಜಕಾರಣಕ್ಕೆ ಇಳಿಯುವುದಕ್ಕೆ ಎನ್.ಟಿ.ಆರ್. ಗೆ ಒದಗಿದಂತಹ ಭಾವಾವೇಶದ, ಎಲ್ಲವೂ ಕೂಡಿಬಂದಂತಹ ಸನ್ನಿವೇಶ ಬರದೆ ಇದ್ದರೂ, ಅಲ್ಲಿಯ ಈಗಿನ ಸಾಮಾಜಿಕ ಪರಿಸ್ಥಿತಿ ಚಿರಂಜೀವಿಗೆ ಅನುಕೂಲವಾಗಿ ಇದೆ ಅಂತಲೆ ಅನ್ನಬೇಕು. ಆಂಧ್ರದ ಇತಿಹಾಸದಲ್ಲಿ ಒಂದು ಬಾರಿಗೆ ದಲಿತ, ಮತ್ತೊಂದು ಬಾರಿಗೆ ಹಿಂದುಳಿದ ವರ್ಗದವರೊಬ್ಬರು ಮುಖ್ಯಮಂತ್ರಿಯಾದದ್ದು ಬಿಟ್ಟರೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆದವರೆಲ್ಲ ರೆಡ್ಡಿ, ಕಮ್ಮ, ವೆಲಮ, ಅಥವ ಬ್ರಾಹ್ಮಣರಂತಹ ಜಮೀನ್ದಾರಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾದ ಜಾತಿಗೆ ಸೇರಿದವರು. ಅದರಲ್ಲೂ ಆಂಧ್ರದ ಜನಸಂಖ್ಯೆಯಲ್ಲಿ ಕೇವಲ ಶೇ. 6.5 ರಷ್ಟಿರುವ ರೆಡ್ಡಿಗಳು 30 ವರ್ಷಕ್ಕಿಂತ ಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿದ್ದರೆ, ಶೇ. 5 ಕ್ಕಿಂತ ಕಮ್ಮಿ ಇರುವ ಕಮ್ಮರು 15-20 ವರ್ಷಗಳ ಕಾಲ ಆಳಿದ್ದಾರೆ. ಆಂಧ್ರದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ಜಾತಿಗಳಿಗೆ ಸೇರಿದವರಲ್ಲಿ ಒಬ್ಬರು ಮಾತ್ರ ಆಂಧ್ರದ ಮುಖ್ಯಮಂತ್ರಿ ಆಗಿದ್ದರು. ಆತ, ರಾಜೀವ್ ಗಾಂಧಿಯಿಂದ ಅವಮಾನ ಮಾಡಿಸಿಕೊಂಡ ಅಂಜಯ್ಯ.
ಈ ಜಾತಿ ಸಮೀಕರಣವೆ ಈಗ ಚಿರಂಜೀವಿಗೆ ಸಹಕಾರಿಯಾಗಿರುವುದು. ಚಿರಂಜೀವಿ ಮತ್ತವರ ಸಹಚರರು ಜಾತಿ ವಿಷಯವನ್ನು ಎಲ್ಲೂ ಎತ್ತದೆ, ಅದನ್ನು ಬಹಳ ಹುಷಾರಾಗಿ ಹ್ಯಾಂಡ್ಲ್ ಮಾಡುತ್ತಿದ್ದರೂ, ಮೂರನೆ ಶಕ್ತಿಯ ಹುಡುಕಾಟದಲ್ಲಿರುವ ಆಂಧ್ರಪ್ರದೇಶದ ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಪಕ್ಷಗಳು ಅದನ್ನು ನೇರವಾಗಿಯೆ ಹೇಳುತ್ತಿದ್ದಾರೆ. ಆಂಧ್ರದಲ್ಲಿನ ಮೇಲ್ಜಾತಿಯ ನಾಯಕತ್ವಕ್ಕೆ ಕೊನೆ ಹಾಡಲೇ ಬೇಕು ಎನ್ನುತ್ತಿದ್ದಾರೆ.
ಆಂಧ್ರದ ಇಂದಿನ ಜನಸಂಖ್ಯೆಯಲ್ಲಿ ಬಲಿಜ, ಒಂಟರಿ, ತೆಲುಗ ಮುಂತಾದ ಹಲವು ಉಪಜಾತಿಗಳನ್ನು ಹೊಂದಿರುವ ಕಾಪು ಎಂಬ ಹಿಂದುಳಿದ ಜಾತಿಯ ಜನರ ಸಂಖ್ಯೆ ಶೇ. 18-22. ಕೇಂದ್ರದಲ್ಲಿ ಮಂತ್ರಿಯಾಗಿರುವ, ಹಲವಾರು ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ ದಾಸರಿ ನಾರಾಯಣರಾವ್ ಬಿಟ್ಟರೆ ಈ ಜಾತಿಯ ಯಾರೊಬ್ಬರೂ ಈಗ ರಾಜಕೀಯದಲ್ಲಿ ಪ್ರಬಲವಾಗಿಲ್ಲ. ಚಿರಂಜೀವಿ ಸಹ ಇದೇ ಜಾತಿಗೆ ಸೇರಿದವರು. ಮೂರು ವರ್ಷಗಳ ಹಿಂದಿನ ಚುನಾವಣೆಯಲ್ಲಿಯೆ ಚಿರಂಜೀವಿಯನ್ನು ರಾಜಕೀಯಕ್ಕೆ ತಂದು ಹೊಸ ಪಕ್ಷ ಸ್ಥಾಪಿಸಬೇಕೆಂದು ದಾಸರಿಗೆ ಯೋಜನೆಯಿತ್ತು. ಆದರೆ ಯಾವಾಗ ಚಿರಂಜೀವಿ ಧೈರ್ಯ ತೋರಲಿಲ್ಲವೊ, ಅವರು ಹೋಗಿ ಕಾಂಗ್ರೆಸ್ ಸೇರಿಕೊಂಡರು. ನಂತರ, ಹಿಂದುಳಿದ ಜಾತಿಗಳನ್ನು ಸೇರಿಸಿಕೊಂಡು ರಾಜಕೀಯ ಮಾಡುವ ಧೈರ್ಯವನ್ನು ರೆಡ್ಡಿ-ಕಾಂಗ್ರೆಸ್ ಮತ್ತು ಕಮ್ಮ-ತೆಲುಗು ದೇಶಂ ನ ಯಾವೊಬ್ಬ ಹಿಂದುಳಿದ ನಾಯಕರೂ ಮಾಡಲಿಲ್ಲ.
ಆಂಧ್ರದ ರಾಜಕೀಯದಲ್ಲಿ ರೆಡ್ಡಿಗಳ ಪ್ರಾಬಲ್ಯವಾದರೆ, ಅಲ್ಲಿಯ ಸಿನೆಮಾ ರಂಗದಲ್ಲಿ ಕಮ್ಮರ ಪ್ರಾಬಲ್ಯ. ಸಿನೆಮಾ ರಂಗದಲ್ಲಿನ ಕಮ್ಮರ ಪ್ರಾಬಲ್ಯದ ನಡುವೆಯೂ ಕಳೆದ 25 ವರ್ಷಗಳಿಂದ ಚಿರಂಜೀವಿ ತೆಲುಗು ಸಿನೆಮಾ ಲೋಕದಲ್ಲಿ ಅನಭಿಷಿಕ್ತ ಸಾಮ್ರಾಟನಾಗಿ ಮೆರೆಯುತ್ತಲೆ ಬಂದಿದ್ದಾರೆ. ಈಗ, ಅದೇ ಸಾಧನೆ ರೆಡ್ಡಿ-ಕಮ್ಮರ ಹಿಡಿತದಲ್ಲಿರುವ ರಾಜಕೀಯದಲ್ಲಿಯೂ ಆಗುತ್ತದೆಯೆ ಎನ್ನುವುದೇ ಸದ್ಯದ ಪ್ರಶ್ನೆ. ಆಂಧ್ರದ ಪತ್ರಿಕೆಗಳಿಗಂತೂ ಈ ಪ್ರಶ್ನೆ ಪ್ರತಿನಿತ್ಯದ ಆಮ್ಲಜನಕವಾಗಿ ಹೋಗಿದೆ.
ಒಟ್ಟಿನಲ್ಲಿ ದಲಿತ-ಹಿಂದುಳಿದ ಜಾತಿಗಳ ಹೊಸ ಜಾತಿ ಸಮೀಕರಣದಲ್ಲಿ ಆಂಧ್ರ ಮುಳುಗೇಳುತ್ತಿದೆ. ಇದು, ಕೋಲಾರದಿಂದ ಹಿಡಿದು ಬೀದರ್ ತನಕ ಗಡಿ ಹಂಚಿಕೊಂಡಿರುವ ಕರ್ನಾಟಕದ ಗಡಿಜಿಲ್ಲೆಗಳಲ್ಲಿಯೂ ಏನಾದರೂ ಪ್ರಭಾವ ಬೀರುತ್ತದೆಯೆ ಎನ್ನುವುದು ಕುತೂಹಲಕಾರಿ. ಅದನ್ನು, ಈ ಭಾಗದ ಜನಜೀವನವನ್ನು ಕಂಡಿರುವುದಷ್ಟೆ ಅಲ್ಲದೆ, ಸ್ವತಃ ಆಂಧ್ರದ ಸರ್ಕಾರಿ ಶಾಲೆಯಲ್ಲಿ ಮಾಸ್ತರರಾಗಿರುವ ಕನ್ನಡದ ಪ್ರಸಿದ್ಧ ಸಾಹಿತಿ “ಅರಮನೆ”ಯ ಕುಂ. ವೀರಭದ್ರಪ್ಪನವರು ಬಹುಶಃ ಅಧಿಕಾರಯುತವಾಗಿ ಹೇಳಬಹುದೇನೊ. ಇದರ ಬಗ್ಗೆ ಅವರಷ್ಟೆ ಅಧಿಕಾರಯುತವಾಗಿ, ಸಂಖ್ಯಾಬಲದ ಮತ್ತು ಜಾಗೃತ ಪ್ರಜ್ಞೆಯ ಹಿನ್ನೆಲೆಯಿಂದ ಹೇಳಬಲ್ಲವರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೋಲಾರ ಮೂಲದ ಡಾ. ಸಿ.ಎಸ್. ದ್ವಾರಕಾನಾಥ್ ಅವರು.
ಸ್ವಯಂಕೃಷಿ, ಪದ್ಮಭೂಷಣ ಚಿರಂಜೀವಿ
ಈಗ ತಮಿಳುನಾಡಿಗೆ ಸೇರಿರುವ ಊರಿನಲ್ಲಿ ಹುಟ್ಟಿಬೆಳೆದ ಕನ್ನಡದ ಅಣ್ಣಾವ್ರು ನಟಿಸಿದ “ಅನುರಾಗ ಅರಳಿತು” ಸಿನೆಮಾ ಮತ್ತು ಅವರು ಆ ಚಿತ್ರದಲ್ಲಿ ಹಾಡಿದ “ಶ್ರೀಕಂಠ, ವಿಷಕಂಠ” ಎಂಬ ಹಾಡು ನಿಮಗೆ ನೆನಪಿರಬಹುದು. ಅದೇ ಸಿನೆಮಾ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮರಾಠಿ-ಕನ್ನಡಿಗ-ತಮಿಳ ರಜನಿಕಾಂತ್ ನಟಿಸಿದ “ಮನ್ನನ್” ಎಂಬ ತಮಿಳು ಚಿತ್ರವಾಯಿತು. ಅದೇ ಸಿನೆಮಾ ತೆಲುಗಿನಲ್ಲಿ ಮನೆ ಅಳಿಯ ಅಥವ ಮನೆಗೆ ಗಂಡ ಎಂಬರ್ಥದ “ಘರಾನಾ ಮೊಗುಡು” ಆಯಿತು. ಆ ಚಿತ್ರದಲ್ಲಿ ಚಿರಂಜೀವಿ ಎಂಬ ತೆಲುಗಿನ ಆಗಿನ ಸೂಪರ್‌ಸ್ಟಾರ್ ನಟ ಡಿಸ್ಕೊ ಶಾಂತಿ ಎಂಬ ಕ್ಯಾಬರೆ ನರ್ತಕಿಯೊಂದಿಗೆ “ಬಂಗಾರು ಕೋಡಿ ಪೆಟ್ಟ” ಎಂಬ ಹಾಡಿಗೆ ಹೆಜ್ಜೆ ಹಾಕಿದ ರೀತಿ ಬಹುಶಃ ಇಡೀ ದಕ್ಷಿಣ ಭಾರತದ ಯುವಜನಾಂಗ ಆ ಹಾಡಿನಿಂದ ರೋಮಾಂಚಿತರಾಗುವಂತೆ ಮಾಡಿಬಿಟ್ಟಿತು. ಅಲ್ಲಿಯವರೆಗಿನ ತೆಲುಗಿನ ಎಲ್ಲಾ ದಾಖಲೆಗಳನ್ನು ಮುರಿದ ಆ ಚಿತ್ರ ಚಿರಂಜೀವಿಯನ್ನು ಆಗಿನ ಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ “ಇಂಡಿಯಾ ಟುಡೆ” ಮುಖಪುಟದಲ್ಲಿ ಪ್ರತಿಷ್ಠಾಪಿಸಿ, ಆ ಪತ್ರಿಕೆ ಚಿರಂಜೀವಿಯನ್ನು “ಬಿಗ್ಗರ್ ದ್ಯಾನ್ ಬಚ್ಚನ್” ಎಂದು ಘೋಷಿಸುವಂತೆ ಮಾಡಿಬಿಟ್ಟಿತು.
ಆ ಸಿನೆಮಾ ಬರುವುದಕ್ಕಿಂತ ಹತ್ತುಹದಿನೈದು ವರ್ಷದಿಂದಲೆ ತೆಲುಗಿನಲ್ಲಿ ಚಿರಂಜೀವಿ ಹವಾ ಆರಂಭವಾಗಿತ್ತು. ಎನ್.ಟಿ.ಆರ್. ನಿಧಾನಕ್ಕೆ ರಾಜಕೀಯದತ್ತ ವಾಲುತ್ತಿದ್ದರು. ಅದಕ್ಕೆ ಪೂರಕವಾಗೆಂಬಂತೆ ಅವರು ರಾಜಕೀಯ ಪ್ರೇರಿತವಾದ ಸಾಮಾಜಿಕ ಚಿತ್ರಗಳನ್ನು ಮತ್ತು ತಮ್ಮ ದೈವಪ್ರಭೆಯನ್ನು ಬೆಳೆಸುವಂತಹ ಚಾರಿತ್ರಿಕ, ಪೌರಾಣಿಕ ಪಾತ್ರಗಳಲ್ಲಷ್ಟೆ ಮಾಡುತ್ತಿದ್ದರು. ಮತ್ತೊಬ್ಬ ನಟ ಅಕ್ಕಿನೇನಿ ನಾಗೇಶ್ವರ್‌ರಾವ್‌ರವರದು ಮೊದಲಿನಿಂದಲೂ ಸಾಫ್ಟ್ ಪಾತ್ರಗಳೆ. ಜೊತೆಗೆ ಅವರಿಬ್ಬರಿಗೂ ವಯಸ್ಸೂ ಆಗುತ್ತ ಬಂದಿತ್ತು. ಮತ್ತೊಬ್ಬ ನಟ ಕೃಷ್ಣ ಸಹ ಒಂದೇ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಯ. ಆಗ ಈ ಯುವಕ ಆಗಿನ ಕಾಲಕ್ಕೆ ಮೈನವಿರೇಳುವಂತೆ ಕುಣಿಯುತ್ತ, ತೆಲುಗಿನಲ್ಲಿ ಅಭೂತಪೂರ್ವವೆನಿಸಿದ್ದಂತಹ ಫೈಟಿಂಗ್‌ಗಳನ್ನು ಮಾಡುತ್ತ, ಮಾದಕವಾಗಿ ಕಾಣಿಸುತ್ತಿದ್ದ ರಾಧ, ರಾಧಿಕ, ಮಾಧವಿ, ವಿಜಯಶಾಂತಿ, ಸುಮಲತ ಎಂಬಿತ್ಯಾದಿ ನವತರುಣಿಯರ ಜೊತೆಗೆ ಮತ್ತು ಜಯಮಾಲಿನಿ, ಜ್ಯೋತಿಲಕ್ಷ್ಮಿ, ಸಿಲ್ಕ್‌ಸ್ಮಿತರಂತಹ ಭಯಂಕರ ಕಾಮಪ್ರಚೋದಿನಿಯರೊಂದಿಗೂ ಸಮಾನವಾಗಿ ಬಳುಕುತ್ತ ತೆಲುಗು ಸಿನೆಮಾವನ್ನು ಆವರಿಸಿಕೊಂಡುಬಿಟ್ಟ. ಎನ್.ಟಿ.ಆರ್. ಆಂಧ್ರದ ಮುಖ್ಯಮಂತ್ರಿಯಾದ ವರ್ಷದಲ್ಲಿಯೆ ಬಿಡುಗಡೆಯಾದವನು “ಖೈದಿ.” ಆ ಸಿನೆಮಾದಲ್ಲಿ ಚಿರಂಜೀವಿ, ಒಂದು ಕಡೆ ಕಾಮಕನ್ನಿಕೆಯಂತೆ ಕಾಣಿಸುತ್ತಿದ್ದ ಮಾಧವಿಯೊಡನೆ ನಾಗದೇವತೆಗಳಂತೆ ಅರೆನಗ್ನರಾಗಿ “ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ” ಹಾಡಿನಲ್ಲಿ ಶೃಂಗಾರ ರಸವನ್ನು ಚೆಲ್ಲುತ್ತ, ಮತ್ತೊಂದು ಕಡೆ ರೋಷತಪ್ತ ಯುವಕನಾಗಿ ಬೆಂಕಿಯುಂಡೆಗಳನ್ನು ಚೆಲ್ಲುತ್ತ ದುಷ್ಟಸಂಹಾರ ಮಾಡಿದ್ದೆ, ತೆಲುಗು ಸಿನೆಮಾ ಪ್ರೇಕ್ಷಕರು ಆತನಿಗೆ ಶರಣಾಗಿ ಬಿಟ್ಟರು. ಅದಾಗಿ 25 ವರ್ಷಗಳಾದವು. “ಕೊಣಿದೆಲ ಶಿವ ಶಂಕರ ವರ ಪ್ರಸಾದ್” ಎಂಬ ಮೂಲಹೆಸರಿನ ಮೆಗಾಸ್ಟಾರ್ ಚಿರಂಜೀವಿ ಈಗಲೂ ಆ ಜನರನ್ನು ದಾಸ್ಯಮುಕ್ತರನ್ನಾಗಿ ಮಾಡಿಲ್ಲ!
“ಪದ್ಮಭೂಷಣ” ಚಿರಂಜೀವಿಯ ಕೌಟುಂಬಿಕ ವಿಷಯಕ್ಕೆ ಬಂದರೆ, ಆತ ಮದುವೆ ಆಗಿರುವುದು ತೆಲುಗಿನ ಪೋಷಕ-ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಅಲ್ಲು ರಾಮಲಿಂಗಯ್ಯನವರ ಮಗಳನ್ನು. ಆಲ್ಲು ರಾಮಲಿಂಗಯ್ಯ ನಟನೆಯಲ್ಲಿ ಮತ್ತು ಹಾವಭಾವದಲ್ಲಿ ನಮ್ಮ ಕನ್ನಡದ ಮುಸುರಿ ಇದ್ದಂತೆ. ಆದರೆ ಅವರು “ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ” ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಹ. ಅರ್ಧ ಶತಮಾನದಲ್ಲಿ ಸಾವಿರಕ್ಕೂ ಹೆಚ್ಚಿನ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಆ ಹಿರಿಯ ನಟನ ಅನುಭವ ಮತ್ತು ಶ್ರೇಯೋಭಿಲಾಷೆ ಅಳಿಯ ಚಿರಂಜೀವಿಗೆ ಸಿಕ್ಕಿದ್ದು ಒಂದು ರೀತಿಯಲ್ಲಿ ಅದೃಷ್ಟವೆ.
ಚಿರಂಜೀವಿಯ ಮೊದಲ ತಮ್ಮ ನಾಗೇಂದ್ರ ಬಾಬು ಅಷ್ಟೇನೂ ಯಶಸ್ವಿಯಾಗದ ನಟ. ತನ್ನ ಒರಟು ಮುಖದಿಂದಾಗಿ ಪೋಷಕ ಅಥವ ವಿಲ್ಲನ್ ಪಾತ್ರಗಳಿಗೆ ಸೀಮಿತವಾಗಿದ್ದು ಈಗ ನಿರ್ಮಾಪಕನಾಗಿದ್ದಾನೆ. ಕೊನೆಯ ತಮ್ಮ ಪವನ್ ಕಲ್ಯಾಣ್. ಮಾತೆತ್ತಿದರೆ ಬಿರುದಾಂಕಿತರಾಗಿ ಬಿಡುವ ಸಿನೆಮಾ ರಂಗದಲ್ಲಿ ಆತನಿಗಿರುವ ಬಿರುದು “ಪವರ್ ಸ್ಟಾರ್.” ಇತ್ತೀಚಿನ ತೆಲುಗು ಯುವನಟರಲ್ಲಿ ಬಹಳ ಭರವಸೆಯ, ಪ್ರಯೋಗಶೀಲ, ಜನಪ್ರಿಯ ನಾಯಕನಟ. ಜೀವನದಲ್ಲಿಯೂ ಒಂದು ರೀತಿಯಲ್ಲಿ ಪ್ರಯೋಗಶೀಲನೆ. ಹತ್ತು ವರ್ಷಗಳ ಹಿಂದೆಯೆ ಈತನಿಗೆ ಮದುವೆ ಆಗಿ ಒಂದು ಮಗುವೂ ಇತ್ತು. ಆದರೆ ಹೆಂಡತಿಯಿಂದ ಬೇರೆ ಇದ್ದು, ತನ್ನ ಸಹನಟಿಯೊಂದಿಗೆ ವಾಸವಾಗಿದ್ದ. ಎರಡನೆ ಮದುವೆ ಮಾಡಿಕೊಂಡ ಎಂದೂ ಸುದ್ದಿಯಾಗಿತ್ತು. ಆಗ ಮೊದಲ ಹೆಂಡತಿ ಎರಡನೆ ಮದುವೆ ಮಾಡಿಕೊಂಡಿದ್ದಾನೆ ಎಂದು ಕೋರ್ಟಿಗೆ ಹೋದಳು. ಎಚ್ಚರಗೊಂಡ ಈತ ಈಗ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಒಮ್ಮೆ ಆತ ಆಂಧ್ರಪ್ರದೇಶದ ಡೆಕ್ಕನ್ ಹೆರಾಲ್ಡ್ ಆದ “ಡೆಕ್ಕನ್ ಕ್ರಾನಿಕಲ್”ನ ಪತ್ರಕರ್ತರ ಮೇಲೆ ಕೈಮಾಡಿ ಅದೊಂದು ದೊಡ್ಡ ರಾದ್ಧಾಂತವೆ ಆಗಿ ಹೋಗಿತ್ತು. ಇತ್ತೀಚೆಗೆ ತಾನೆ ಒಂದು ಕೋಟಿ ಹಣ ಹೂಡಿ “Common Man Protection Force” ಎಂಬ ಸಾಮಾಜಿಕ ಸೇವಾ ಸಂಸ್ಥೆ ಬೇರೆ ಸ್ಥಾಪಿಸಿದ್ದಾನೆ.
ಇಪ್ಪತ್ತರ ಹರೆಯದ ಹುಡುಗಿಯರೊಂದಿಗೆ ಕುಣಿಯುತ್ತ, ಅವರ ಮೈಮೇಲೆಲ್ಲ ಕೈಯಾಡಿಸುವ 52 ವರ್ಷದ ಚಿರಂಜೀವಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಆಗಿದೆ. ಚಿರಂಜೀವಿ ಸ್ವತಃ ಮುತುವರ್ಜಿ ವಹಿಸಿ ಮೊದಲ ಮಗಳಿಗೆ ಭರವಸೆಯ ಯುವನಟನಾಗಿ ಹೊಮ್ಮುತ್ತಿದ್ದ ಉದಯ್ ಕಿರಣ್ ನೊಂದಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿದ್ದ. ಆದರೆ ಅದು ನಿಶ್ಚಿತಾರ್ಥಕ್ಕೇ ಕೊನೆಯಾಯಿತು. ಕೊನೆಗೆ ಬೇರೊಬ್ಬ ಉದ್ಯಮಿಯೊಂದಿಗೆ ಆಕೆಯ ಮದುವೆ ಆಯಿತು. ಎರಡನೆಯ ಮಗಳು ಇತ್ತೀಚೆಗೆ ತಾನೆ ಮನೆಯಿಂದ ಓಡಿಹೋಗಿ ಆರ್ಯಸಮಾಜದಲ್ಲಿ ಮದುವೆಯಾದಳು. ಹೈದರಾಬಾದಿನಲ್ಲಿಯೆ ಇದ್ದರೆ ಅಪ್ಪನ ಅಭಿಮಾನಿಗಳು ಮತ್ತು ಶಾರ್ಟ್‌ಟೆಂಪರ್ ಚಿಕ್ಕಪ್ಪ ಪವನ್ ಕಲ್ಯಾಣ್ ಏನು ಮಾಡಿಬಿಡುತ್ತಾರೊ ಎಂದು ಗೋವಾದ ತನಕ ಗುಟ್ಟಾಗಿ ಕಾರಿನಲ್ಲಿ ಹೋಗಿ, ಅಲ್ಲಿಂದ ವಿಮಾನದಲ್ಲಿ ದೆಹಲಿಗೆ ಹೋಗಿ, ಅಲ್ಲಿ ಆಂಧ್ರದ ಒಬ್ಬ ಪ್ರಸಿದ್ಧ ವಕೀಲರನ್ನು ಹಿಡಿದುಕೊಂಡು ತನಗೆ ಅಪ್ಪನಿಂದ ಭದ್ರತೆ ಬೇಕು ಎಂದು ಸುಪ್ರಿಮ್‌ಕೋರ್ಟಿನಲ್ಲಿ ಕೇಸು ಹಾಕಿ, ಅಪ್ಪನಿಗೆ ಇನ್ನಿಲ್ಲದ ಫಜೀತಿ, ಮುಜುಗರ, ಅವಮಾನ ಮಾಡಿಬಿಟ್ಟಳು. ಕೆಲವು ಊಹಾಪೋಹಗಳ ಪ್ರಕಾರ ಆಕೆಗೆ ಹೈದರಾಬಾದಿನ ಕೆಲವು ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ ಇತ್ತು ಎಂದೂ ಆಂಧ್ರದ ಪತ್ರಿಕೆಗಳು ವರದಿ ಮಾಡಿದ್ದವು.
ಮಗನ ಹೆಸರು ರಾಮ್ ಚರಣ್ ತೇಜ. ಒಂದೆರಡು ತಿಂಗಳ ಹಿಂದೆ ಆತನ ಮೊದಲ ಸಿನೆಮಾ ಬಿಡುಗಡೆ ಆಯಿತು. ಅಪಾರ ನಿರೀಕ್ಷೆಯೊಂದಿಗೆ ಬಿಡುಗಡೆ ಆದ ಈ ಚಿತ್ರ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಗಡಿ ಊರುಗಳಲ್ಲಿ ಒಟ್ಟು 44 ಥಿಯೇಟರುಗಳಲ್ಲಿ ಬಿಡುಗಡೆ ಆಯಿತು. ಇತ್ತೀಚಿನ ಸುದ್ದಿಯ ಪ್ರಕಾರ ಈ ಚಿತ್ರ ಕರ್ನಾಟಕವೊಂದರಲ್ಲಿಯೆ ಎರಡೂವರೆ ಕೋಟಿ ಸಂಪಾದಿಸಿದೆಯಂತೆ.
ಮುಂದಿನ ಭಾಗದಲ್ಲಿ:
- ಆಂಧ್ರದಿಂದ ಹಾರಿಹೋದ ಶಾಕುಂತಲೆ
- “ಅಮ್ಮಾ, ತಾಯೆ, ತೆಲಂಗಾಣ” ವಿಜಯಶಾಂತಿಯ ಮಂತ್ರಪಠಣ
- ಸುವಾಸನೆ ಬೀರಲಿದ್ದಾಳೆಯೆ ರೋಜಾ?
- ಬಾಲಕೃಷ್ಣ ಆಗುವನೆ ಅನ್ನಗಾರು?
ಪೂರಕ ಓದಿಗೆ:
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು