ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

This post was written by admin on August 26, 2008
Posted Under: Uncategorized

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ರಂತಹ ತೆಲುಗು ಸೂಪರ್‌ಸ್ಟಾರ್‌ಗಳ ಬಹುಪಾಲು ಚಿತ್ರಗಳಲ್ಲಿ ಹೆಂಗಸು ಸ್ವಂತ ವ್ಯಕ್ತಿತ್ವವೇ ಇಲ್ಲದ ಗ್ಲಾಮರ್ ಬೊಂಬೆ ಅಷ್ಟೆ. ಆಧುನಿಕ ಕಾಲದ ಜೀವನ ನೀತಿಗಳಾಗಲಿ, ಪ್ರಜಾಪ್ರಭುತ್ವದಲ್ಲಿನ ಕಾನೂನು ಪರಿಜ್ಞಾನವಾಗಲಿ, ವಾಸ್ತವಿಕತೆಯಾಗಲಿ, ಈ ಸೂಪರ್‌ಸ್ಟಾರ್‌ಗಳ ಚಿತ್ರಗಳಲ್ಲಿ ಅಪರೂಪವೆಂದರೆ ಅಪರೂಪ. ಅದರಲ್ಲೂ ಚಿರಂಜೀವಿ ಮತ್ತು ಬಾಲಕೃಷ್ಣರಂತೂ ಹಾಲಿವುಡ್ ಆಕ್ಷನ್ ನಟರನ್ನೂ ಮೀರಿಸುವಂತಹ ನಾನಾತರಹದ ಸಾಹಸಗಳನ್ನು ಮೆರೆವ, ಬೇಕಾದರೆ ಆಕಾಶವನ್ನೆ ಕಾಲಿನಲ್ಲಿ ಅಳೆದುಬಿಡಬಲ್ಲ ಪುರುಷಸಿಂಹರು. ಇವರಿಗೆಲ್ಲ ತಮ್ಮ ಚಿತ್ರದಲ್ಲಿ ಒಬ್ಬಳೇ ಪ್ರೇಯಸಿ ಅಥವ ಒಬ್ಬಳೇ ಹೆಂಡತಿ ಸಾಕಾಗುವುದಿಲ್ಲ. ಕನಿಷ್ಠ ಇಬ್ಬರಾದರೂ ಇರಲೇಬೇಕು. ಮಾತೆತ್ತಿದರೆ ತೊಡೆ ತಟ್ಟಿ, ಮೀಸೆ ತಿರುವುವ ಈ ಸೂಪರ್‌ಸ್ಟಾರ್‌ಗಳು “ನಾನು ಧೀರಗಂಡಸು, ಪುರುಷಸಿಂಹ,” ಎಂದರೇನೆ ಅಲ್ಲಿನ ಪ್ರೇಕ್ಷರಿಗೆ ತೃಪ್ತಿ. ಕಾನೂನಿನ ಪ್ರಕಾರ ಅಪರಾಧವಾದ ಇಬ್ಬರು ಹೆಂಡತಿಯರನ್ನು ಮದುವೆ ಮಾಡಿಕೊಳ್ಳುವುದು ಇವರ ಸಿನೆಮಾ ಕತೆಗಳಿಗೆ ಅನ್ವಯಿಸುವುದಿಲ್ಲ. ಇಂತಹ ಚಿತ್ರಗಳಲ್ಲೆ ನಟಿಸುವ ಇವರು ಜನರಿಗೆ ಯಾವ ತರಹದ ಸಂದೇಶ ಕೊಡುತ್ತಾರೆ? ರಾಜಕೀಯ ಆಕಾಂಕ್ಷೆಗಳಿರುವವರಾದರೂ ಜನರನ್ನು ಮನರಂಜಿಸುವುದಕ್ಕಿಂತ ಮುಖ್ಯವಾಗಿ ಅವರ ಜಾಗೃತಿಗೆ ಪ್ರಯತ್ನಿಸಬಾರದೆ? ಇಲ್ಲ. ಭಾರತಾದ್ಯಂತದ ಬಹುಪಾಲು ಸಿನೆಮಾ ಸ್ಟಾರ್‌ಗಳ ಸ್ಥಿತಿಯೂ ಇದೆ. ತಮ್ಮ ಚಿತ್ರಗಳು ಯಾವಾಗಲೂ ನೆಲದ ಕಾನೂನಿಗೆ ಅತೀತವಾದ ವಿಷಯ ಹೊಂದಿರಬೇಕು, ಆದಷ್ಟೂ ವಾಸ್ತವದಿಂದ ದೂರ ಇರಬೇಕು, ಜನರನ್ನು ಆದಷ್ಟೂ ಪಲಾಯನವಾದಿಗಳನ್ನಾಗಿ ಮಾಡಬೇಕು, ಎಂಬುದೆ ಅವರೆಲ್ಲರ ಬುದ್ಧಿಹೀನ ತೀರ್ಮಾನವಾದಂತಿದೆ.

Add a Comment

required, use real name
required, will not be published
optional, your blog address