ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ…

This post was written by admin on August 28, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.)

ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು ನೆನಸಿಕೊಂಡರೆ ಇವತ್ತಿನ ಸಂದರ್ಭದಲ್ಲಿ ಮೈನಡುಗಿಸುವ ಕಲ್ಪನೆ ಅದು. ಈ ಕತೆಗೆ ಹಿನ್ನೆಲೆಯಾಗಿ ಇರುವುದು ಗಾಂಧೀಜಿ ಮಂಗಳೂರಿಗೆ ಬರುವ ಎಳೆ. ಗಾಂಧೀಜಿಯ ಆಗಮನ ಯಾವಯಾವ ಜನವರ್ಗದಲ್ಲಿ ಯಾವಯಾವ ತರಹದ ತಲ್ಲಣಗಳನ್ನೂ, ಪಲ್ಲಟಗಳನ್ನೂ, ಮೌನಕ್ರಾಂತಿಯನ್ನೂ ಮಾಡುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸುವ ಕಾದಂಬರಿ ಅದು. ಒಂದು ಐತಿಹಾಸಿಕ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ಕನ್ನಡದಲ್ಲಿ ಬಹಳ ಕಮ್ಮಿ. ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಆದರ್ಶಪ್ರಾಯವಾದವು. ಅಲ್ಲಿಯವರೆಗೂ ನಾನು ಆ ಲೇಖಕರ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ನನಗೆ ಒಂದು ರೀತಿಯ ಅವಮಾನದ ವಿಷಯವಾಗಿಬಿಟ್ಟಿತು. ಆ ಕಾದಂಬರಿಯ ಹೆಸರು, “ಗಾಂಧಿ ಬಂದ.” ಬರೆದವರು, “ತುಳುನಾಡಿನ ಹೆಣ್ತನದ ಸ್ವಾಭಿಮಾನಿ ದೇವತೆ ‘ಸಿರಿ’ಯ ಖಾಸಾ ತಂಗಿಯಂತಿರುವ” ಎಚ್. ನಾಗವೇಣಿ.

ಎರಡು ತಿಂಗಳ ಹಿಂದೆ ನಡೆದ ಪದ್ಮಪ್ರಿಯಾರ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣ ಕರ್ನಾಟಕದಲ್ಲಿನ ನ್ಯಾಯಾಂಗ ಮತ್ತು ಪೊಲಿಸ್ ವ್ಯವಸ್ಥೆ ತನ್ನ ನೀಚ ಮಟ್ಟದಲ್ಲಿ ಇರುವುದನ್ನು ಎತ್ತಿ ತೋರಿಸಿದ್ದಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಪ್ರಗತಿಪರ ಚಿಂತನೆಗೆ ಯಾವ ಮಟ್ಟದ ಹಿನ್ನಡೆ ಆಗಿದೆ ಎನ್ನುವುದನ್ನೂ ತೋರಿಸಿತು. ಹೆಂಗಸೊಬ್ಬಳ ಆತ್ಮಹತ್ಯೆ ಪ್ರಕರಣದ ಮೂಲಕ ಇಡೀ ಸಮಾಜದ ಸದ್ಯದ ಪರಿಸ್ಥಿತಿಯ Snapshot ಕೊಟ್ಟ ಘಟನೆ ಅದು. ಆ ಸಮಯದಲ್ಲಿ ಕರ್ನಾಟಕದ ಅನೇಕ ಲೇಖಕರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ನನ್ನ ಪ್ರಕಾರ ಆ ಇಡೀ ಘಟನೆಗೆ ನಮ್ಮದೇ ನೆಲದ ಉದಾಹರಣೆಯೊಂದಿಗೆ ಸಮರ್ಥವಾದ ಉತ್ತರ ಮತ್ತು ತಾರ್ಕಿಕ ಪರಿಹಾರ ಕೊಟ್ಟವರು ಡಾ. ನಾಗವೇಣಿ. ಪದ್ಮಪ್ರಿಯರ ಪ್ರಕರಣವನ್ನು ವಿಶ್ಲೇಷಿಸುತ್ತ ಅವರು ಬರೆದ “ಹೆಣ್ಣಿಗೆ ಬೇಕೆ ‘ದಾರಿದೀಪ’?” ಇಡೀ ನಾಡಿನ ಹೆಣ್ಣುಮಕ್ಕಳಿಗೆ ದಾರಿದೀಪವಾಗಬೇಕಿರುವ ಲೇಖನ. ಅದರಲ್ಲಿ ತುಳುನಾಡಿನ ಪಾಡ್ದನದ (ಜನಪದ ಮೌಖಿಕ ಕಾವ್ಯ) ಕತೆಯೊಂದನ್ನು ಉದಾಹರಿಸುತ್ತ ಸ್ವಾಭಿಮಾನಿ ಮತ್ತು ಸ್ವಾಯತ್ತ ಸಮಾಜದಲ್ಲಿ ಪದ್ಮಪ್ರಿಯ ಪ್ರಕರಣ ಹೇಗೆ ಕೊನೆಯಾಗಬೇಕಿತ್ತು ಎಂದು ಹೇಳುತ್ತಾರೆ. ಆ ಪಾಡ್ದನದ ಸ್ಥೂಲ ಕತೆ ಅವರದೆ ಬರವಣಿಗೆಯಲ್ಲಿ ಹೀಗಿದೆ:

“ಕೌಟುಂಬಿಕ ನಿಯತಿಯನ್ನು ಮುರಿದ ಗಂಡನಿಗೆ, ಹೆಂಡತಿ ಶಾಸ್ತ್ರ ಸಮ್ಮತವಾಗಿ ಬರ (ವಿಚ್ಚೇದನ) ಹೇಳಿ, ಆತನನ್ನು ತನ್ನ ಬದುಕಿನಿಂದ ಸಂಪೂರ್ಣ ನಿರಾಕರಿಸುವ ಮೂಲಕ -ಸಮಾಜದ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ- ಮತ್ತೆ ಮರುಮದುವೆಯಾಗಿ ಸುಭದ್ರವಾದ ಹೊಸ ಬದುಕನ್ನು ರೂಪಿಸಿಕೊಳ್ಳುವಲ್ಲಿ, ತುಳುವ ಸಮಾಜದ ಮಹಿಳೆಯರಿಗೆ ಮಾದರಿಯಾಗಿ ನಿಂತವಳು- ಈ ಮೌಖಿಕ ಮಹಾಕಾವ್ಯದ ಸಾಂಸ್ಕೃತಿಕ ವೀರೆ ತುಳುನಾಡಿನ ಸಿರಿ.

“ತುಳುವ ಸ್ತ್ರೀ ಸಮುದಾಯಕ್ಕೆ ಹೊಸ ಮೌಲ್ಯವನ್ನು ಕಟ್ಟಿಕೊಡುವ ಸಲುವಾಗಿಯೇ ಈ ಸಮಾಜಕ್ಕೆ ಒಂದು ಮೌಲ್ಯವಾಗಿ ಕಾಣಿಸಿಕೊಂಡ ಸಿರಿ- ಗಂಡನ ವಿಷಯಲಂಪಟತನವನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಪ್ರತಿಭಟಿಸಿ, ಸಾಮಾಜಿಕ ನ್ಯಾಯಪಂಚಾಯತಿಯ ಸಂದರ್ಭದಲ್ಲಿ ಕೈ ಹಿಡಿದ ಗಂಡನೇ ಎದುರಾಳಿ ಪಕ್ಷದ ಪರವಹಿಸಿ, ಹೆಂಡತಿಗೇ ದ್ರೋಹ ಬಗೆದಾಗ ಆ ನೀತಿಗೆಟ್ಟ ಗಂಡನಿಗೆ ಆ ದಿನವೇ ವಿಚ್ಛೇದನ ನೀಡಿ, ಆತನ ಪೌರುಷಕೆ ಸವಾಲೆಸೆದು….. ಮರುಮದುವೆಯಾಗುವ ಮೂಲಕ, ಅಲಕ್ಷಿತ ಸಮುದಾಯದಲ್ಲಿ ಆಕೆ ಒಂದು ಹೊಸ ಮಾದರಿ ವ್ಯವಸ್ಥೆಯನ್ನು ನಿರ್ಮಿಸಿದ ಪರಿ… ಈ ಪಾಡ್ದನದ ಕಥಾ ಹಂದರದಲ್ಲಿ (ಅದೆಷ್ಟು) ದಿಟ್ಟವಾಗಿ ಅರಳಿದೆ…..”

ಕನ್ನಡದ ಇವತ್ತಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಅನೇಕ ಖಾಲಿ ಕೊಡಗಳು ವಿಪರೀತ ಎನ್ನುವಷ್ಟು ಗದ್ದಲ ಮಾಡುತ್ತಿವೆ. ಮೀಡಿಯೋಕರ್‌ಗಳೆಲ್ಲ ಸ್ಟಾರ್‌ಗಳಾಗಿ ಬಿಟ್ಟಿದ್ದಾರೆ. ಇದಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಬದಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಜೊತೆಜೊತೆಗೆ ಹೊಸದಾಗಿ ಹುಟ್ಟಿರುವ ಓದುಗ ವರ್ಗವೂ ಕಾರಣ. ಇನ್ನೂ ಸ್ಪಷ್ಟ ಮಾಡಿಕೊಂಡಿಲ್ಲದ ಚಿಂತನೆಗಳ ಮತ್ತು ಪ್ರಬುದ್ಧವಾಗಿಲ್ಲದ ಆಲೋಚನೆಗಳ ಈ ಹೊಸ ಯುವ ಓದುಗ ವರ್ಗವನ್ನು ಪ್ರಭಾವಿಸುವ ಮತ್ತು ದಾರಿತಪ್ಪಿಸುವ ಒಂದು ದುಷ್ಟಕೂಟವೆ ಇವತ್ತು ಕನ್ನಡದಲ್ಲಿದೆ. ಸಾಮಾಜಿಕ ಕಾಳಜಿಗಳಾಗಲಿ, ಪ್ರಾಮಾಣಿಕ ಬದ್ಧತೆಯಾಗಲಿ ಇಲ್ಲದ ಈ ಜನರ ನಡುವೆ ನಮಗೆ ಇವೆಲ್ಲವೂ ಇರುವ ಲೇಖಕರು ಮುಖ್ಯವಾಗುತ್ತಾರೆ. ಹಾಗಾಗಿಯೆ, ಬಹುಶಃ ಕನ್ನಡದ ಹತ್ತು ಅತ್ಯುತ್ತಮ ಕಾದಂಬರಿಗಳಲ್ಲಿ ಒಂದನ್ನು ಬರೆದ ಡಾ. ನಾಗವೇಣಿಯವರು ಈ ಸಂದರ್ಭದಲ್ಲಿ ನಮಗೆ ಕಾದಂಬರಿಗಾರ್ತಿಯಾಗಿಯಷ್ಟೇ ಅಲ್ಲದೆ ಸಮಕಾಲೀನಕ್ಕೆ ಪ್ರತಿಕ್ರಿಯಿಸುವವರಾಗಿಯೂ ಪ್ರಸ್ತುತರು. ಅವರ “ವಸುಂಧರೆಯ ಗ್ಯಾನ” ಪುಸ್ತಕದಲ್ಲಿಯ “ಬರಿದಾಗುತ್ತಿರುವ ನನ್ನ ಪ್ರೀತಿಯ ಕಡಲು” ಲೇಖನ ನಮ್ಮ ರಾಜ್ಯದ ಹೈಸ್ಕೂಲು ಅಥವ ಕಾಲೇಜಿನ ತರಗತಿಗಳಲ್ಲಿ ಚರ್ಚಿಸಬೇಕಾದ ಲೇಖನ. ಲಿಂಗ, ಕೋಮು, ಮತ್ತು ವರ್ಣಭೇದಗಳನ್ನು ಮೀರಿದ ಉತ್ತಮವಾದ ಒಂದು ಸ್ವಾಭಿಮಾನಿ ಸಮಾಜ ಕಟ್ಟಲು ಇವರಂತಹ ಚಿಂತನಶೀಲ ಲೇಖಕರ ಅವಶ್ಯಕತೆ ಇಡೀ ಸಮಾಜಕ್ಕೆ ಎಂದಿಗೂ ಇರುತ್ತದೆ.


ಲೇಖನದ ವಿಡಿಯೊ ಪ್ರಸ್ತುತಿ

ಆದರೆ, ಇತ್ತೀಚಿನ ದಿನಗಳಲ್ಲಿ ನನ್ನಲ್ಲಿ ಅಪಾರವಾದ ಹೆಮ್ಮೆ ಮತ್ತು ಆತ್ಮವಿಮರ್ಶೆಯನ್ನು ಹುಟ್ಟಿಸಿದ, ನನ್ನ ಮಗಳಿಗೂ ವೈಚಾರಿಕ ಆದರ್ಶವಾಗಬೇಕೆಂದು ನಾನು ಬಯಸಿದ ಈ ನನ್ನ ಮೆಚ್ಚಿನ ಲೇಖಕಿಯೊಂದಿಗೆ ಸಹಮತವಾಗದ ವಿಚಾರಧಾರೆ ಅವರು ಕಳೆದ ವಾರ ಪತ್ರಿಕೆಯ “ಸ್ತ್ರೀಮತ” ಅಂಕಣಕ್ಕೆ ಬರೆದ “ಸ್ನೇಹಕ್ಕೆ ಬೇಕಿಲ್ಲ ಸಂಬಂಧಗಳ ಕವಚ.” ಇಡೀ ರಾಜ್ಯದ “ಮಹಿಳಾ ಸಂಕುಲದ ಏಕೈಕ ಪ್ರತಿನಿಧಿಯಾಗಿ ಸಂಪುಟದಲ್ಲಿರುವ” ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ನೇಹದ ಬಗ್ಗೆ ಬರೆಯುತ್ತ ಅವರು ಸಮರ್ಥಿಸಿಕೊಳ್ಳುವ ವ್ಯಕ್ತಿ ಮತ್ತು ವಿಚಾರಗಳು ಗಾಬರಿ ಹುಟ್ಟಿಸುವಂತಹವು. ದುರಂತ ಏನೆಂದರೆ, ಯಾವಯಾವುದನ್ನು ಶೋಭಾರವರು ಮಂತ್ರಿಯಾಗಿದ್ದುಕೊಂಡು ಮಾಡಬೇಕು ಎಂದು ಸ್ತ್ರೀಸಂಕುಲದ ಪರವಾಗಿ ನಾಗವೇಣಿಯವರು ಆಶಿಸುತ್ತಾರೊ ಅದನ್ನು ಮಾಡಲಾಗದ ಸ್ಥಿತಿಯಲ್ಲಿ ಶೋಭಾರವರು ಇರುವುದು. ಅದಕ್ಕೆ ಅವರು ಹೆಣ್ಣು ಎಂಬುದು ಕಾರಣವಲ್ಲ. ಬದಲಿಗೆ ಅವರಿಗಿಲ್ಲದ ವೈಚಾರಿಕತೆ ಮತ್ತು ಅರ್ಹತೆ. ಅವೆರಡೂ ಅವರಿಗೆ ಇದ್ದಿದ್ದೆ ಆದರೆ ಅವರು ಇವತ್ತು ಇರುವ ಉತ್ತಮ ಸ್ಥಿತಿಯಲ್ಲಿ (ಅಧಿಕಾರ) ಮತ್ತು ಕೆಟ್ಟ ಸ್ಥಿತಿಯಲ್ಲಿ (ಸಂಪುಟದಲ್ಲಿಯ “ಏಕೈಕ” ಮಹಿಳೆ ಎಂಬ ಅವಮಾನಕಾರಿ ಹೆಗ್ಗಳಿಕೆ ಮತ್ತು ಅಸಮಾನತೆ ಬೋಧಿಸುವ ಫ್ಯಾಸಿಸ್ಟ್ ಸಿದ್ಧಾಂತ) ಇರುತ್ತಿರಲಿಲ್ಲ.

ಡಾ. ನಾಗವೇಣಿಯವರು ಶೋಭಾರವರನ್ನು “ಈ ನಾಡಿನ ಅದರಲ್ಲೂ ಗ್ರಾಮೀಣ ಮಹಿಳೆಯರ ಕನಸು ಮತ್ತು ಆಶಾಕಿರಣ.” ಎಂದುಬಿಟ್ಟಿದ್ದಾರೆ! ಅದರ ಜೊತೆಗೇ, ಶೋಭಾರವರ ಬೆನ್ನಿಗೆ ನಿಂತ ಯಡಿಯೂರಪ್ಪನವರನ್ನೂ ವಾಚಾಮಗೋಚರ ಹೊಗಳಿಬಿಟ್ಟಿದ್ದಾರೆ. ಆದರೆ ಅವರು ಸ್ವಲ್ಪ ನಿಷ್ಠುರವಾಗಿ ಯೋಚಿಸಿದ್ದರೆ ಅವರಿಗೇ ಗೊತ್ತಾಗಬಹುದಾಗಿದ್ದ ವಿಚಾರ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿ ಯಾವೊಬ್ಬ ಸ್ತ್ರೀಯೂ ಮಂತ್ರಿಯಾಗದೇ ಹೋಗದ್ದಕ್ಕೆ ಶೋಭಾರವರ ಪಾಲೂ ಇದೆ ಎನ್ನುವುದು. ಯಡಿಯೂರಪ್ಪನವರಿಗೆ ಶೋಭಾ ಮಂತ್ರಿಯಾಗಬೇಕಿತ್ತೆ ಹೊರತು ಬೇರೊಬ್ಬ ಶಾಸಕಿಯಲ್ಲ. ಯಾರನ್ನಾದರೂ ಸರಿ, ಒಟ್ಟಿನಲ್ಲಿ ಒಬ್ಬ ಶಾಸಕಿಯನ್ನಾದರೂ ಮಂತ್ರಿ ಮಾಡಿ ಎಂದು ಶೋಭಾರವರು ಆಗ ಹೇಳಲಿಲ್ಲ. ಅವರ ಗುರಿ ತಾವು ಮಂತ್ರಿಯಾಗುವುದಾಗಿತ್ತೆ ಹೊರತು ಸ್ತ್ರೀಯರಿಗೆ ಪ್ರಾತಿನಿಧ್ಯ, ಅರ್ಹರಿಗೆ ಪ್ರಾತಿನಿಧ್ಯ, ಸಮಾನ ಅವಕಾಶಗಳು, ಇವು ಯಾವುವೂ ಆಗಿರಲಿಲ್ಲ. ಅವರಿಗೆ ಅನುಕೂಲವಾದರೆ ಮಾತ್ರ ಲಿಂಗಸಮಾನತೆ ಅಥವ ಅರ್ಹರಿಗೆ ಪ್ರಾತಿನಿಧ್ಯ ಎಂಬ ಮಾತುಗಳು. ಇದು ಅಪ್ಪಟ ಸಮಯಸಾಧಕತನವೆ ಹೊರತು ಬೇರೇನೂ ಅಲ್ಲ.

ಯಡಿಯೂರಪ್ಪನವರ ಜೊತೆ ಅವರಿಗೆ ಇರಬಹುದಾದ ಅಥವ ಇಲ್ಲದಿರಬಹುದಾದ ಸಂಬಂಧವನ್ನು ಬದಿಗಿಟ್ಟು ಮಂತ್ರಿಯಾದಾಗಿನಿಂದ ಶೋಭಾರವರ ಕಾರ್ಯವೈಖರಿಯನ್ನು ನೋಡಿದರೂ ಅವರಲ್ಲಿ ಎದ್ದು ಕಾಣಿಸುವುದು ಅವೈಜ್ಞಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆ. ಮೈಸೂರು ದಸರಾ ವಿಷಯದಲ್ಲಿ ಅವರ ಹೇಳಿಕೆಗಳನ್ನು ಮತ್ತು ದೇಶವಿದೇಶಗಳ ಮಹಾರಾಜರನ್ನು ಕರೆದು ಸನ್ಮಾನಿಸುವಂತಹ ಕ್ರಾಂತಿಕಾರಿ ಆಲೋಚನೆಗಳನ್ನು ಕೇಳಿದಾಗ ಅವರಿಗೆ ಇರಬಹುದಾದ ಪ್ರಾಥಮಿಕ ಜ್ಞಾನದ ಬಗ್ಗೆಯೇ ಸಂಶಯ ಬರುತ್ತದೆ. ಇಂತಹವರನ್ನು ನಮ್ಮ ನಾಡಿನ ಹೆಣ್ಣುಮಕ್ಕಳ ಆಶಾಕಿರಣ ಎಂದು ಭಾವಿಸಿಬಿಟ್ಟರೆ ನಿಜಕ್ಕೂ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ.

ಇಷ್ಟಕ್ಕೂ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ರಾಜಕೀಯದಲ್ಲಿ ಆದರ್ಶವಾಗಬೇಕಾದವರು, ಸ್ಫೂರ್ತಿಯಾಗಬೇಕಾದವರು ಅನೇಕರಿದ್ದಾರೆ. ಶೋಭಾರವರಿಗಿಂತ ಮೊದಲೆ ಅನೇಕ ಮಹಿಳೆಯರು ಕರ್ನಾಟಕದಲ್ಲಿ ಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ ೪೦ ವರ್ಷಗಳ ಹಿಂದೆಯೇ ದೇಶದ ಅತ್ಯುನ್ನತ ಹುದ್ದೆ ಕೈಗೆತ್ತಿಕೊಂಡರು. ಈಗಲೂ ದೇಶದಲ್ಲಿ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಇವರೆಲ್ಲರೂ ಶೋಭಾರವರಂತೆ ಗ್ರಾಮೀಣ ಹಿನ್ನೆಲೆಯಿಂದ ಬಂದಿಲ್ಲ ಎನ್ನುವುದೊ ಅಥವ ಅವರಂತಹ ಬಡತನದ ಹಿನ್ನೆಲೆ ಇಲ್ಲ ಎನ್ನುವುದೊ ಅವರನ್ನು ಅನರ್ಹರನ್ನಾಗಿ ಅಥವ ಕಡಿಮೆ ಸಾಧಕರನ್ನಾಗಿ ಮಾಡುವುದಿಲ್ಲ.

ಇನ್ನು, ಯಡಿಯೂರಪ್ಪನವರಿಗೆ ಶೋಭಾರವರ ಬಗೆಗೆ ಇರಬಹುದಾದ ಸ್ನೇಹ, ನಿಷ್ಠೆಯ ಬಗೆಗೆ ನಾಗವೇಣಿಯವರು ಬಹಳ ಒತ್ತು ಕೊಟ್ಟಿದ್ದಾರೆ. ಆದರೆ, ಶೋಭಾರವರಿಗೆ ಯಡಿಯೂರಪ್ಪನವರ ಪರ ನಿಷ್ಠೆ ಎಲ್ಲಿಯತನಕ ಇದೆ ಎನ್ನುವುದನ್ನು ಭವಿಷ್ಯದ ದಿನಗಳೇ ಹೇಳಬೇಕು. ರಾಜಕೀಯದಲ್ಲಿ “ನಾನು ಅವರಿಗೆ ಹನುಮಂತ” ಎಂದವನೆ ರಾವಣನಾಗಿದ್ದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಹಾಗೆಯೇ, ಎಂತಹ ದುಷ್ಟರಲ್ಲೂ ಕೆಲವೊಮ್ಮೆ ಒಂದೆರಡು ಒಳ್ಳೆಯ ಗುಣ ಇರಬಹುದೇನೊ. ಆದರೆ ಆ ಒಂದೆರಡು ಒಳ್ಳೆಯ ಗುಣಗಳು ಅವರ ಅನರ್ಹತೆ ಅಥವ ದುಷ್ಟತನವನ್ನು ಸರಿದೂಗಿಸಲಾಗದು. ತಮ್ಮ ಅವೈಚಾರಿಕತೆ, ಅಜ್ಞಾನ, ಮೂಢನಂಬಿಕೆ, ಅಪ್ರಜಾಪ್ರಭುತ್ವ ಚಿಂತನೆಗಳಿಂದಾಗಿ ಯಾರಿಗೂ ಆದರ್ಶವಾಗಬಾರದ ಶೋಭಾರವರನ್ನು ಅವರ ಬಡತನದ ಹಿನ್ನೆಲೆ ಮತ್ತು ಈಗಿನ ಪುರುಷಪ್ರಧಾನ ರಾಜಕೀಯದಲ್ಲಿ ಮಂತ್ರಿಗಿರಿಯ ತನಕದ ಸಾಧನೆಯಿಂದಾಗಿ ಆದರ್ಶ ಮಾಡಿಕೊಂಡು ಬಿಟ್ಟರೆ ಅದರಲ್ಲಿ ದೊಡ್ಡ ಅಪಾಯವಿದೆ.

ಈ ಸಮಯದಲ್ಲಿ ಯಡಿಯೂರಪ್ಪ ಮತ್ತು ಶೋಭಾರವರ ಸ್ನೇಹ ಅಥವ ಸಂಬಂಧವನ್ನು ನಿರ್ಲಕ್ಷಿಸಿ, (ಅದು ಎಷ್ಟೇ ಉದಾರವೂ ಪ್ರಶಂಸನೀಯವೂ ಆಗಿದ್ದರೂ) ಅವರು ಕರ್ನಾಟಕದ ಪ್ರಜೆಗಳಿಗೆ ಸ್ಫೂರ್ತಿಗೆ ಅರ್ಹವಾದ, ಜವಾಬ್ದಾರಿಯುತವಾದ ಆಡಳಿತ ನೀಡಬಲ್ಲರೆ ಎನ್ನುವುದನ್ನಷ್ಟೆ ಗಮನಿಸಬೇಕು. ಆ ಜವಾಬ್ದಾರಿಯುತ ಆಡಳಿತದಲ್ಲಿ ಅವರ ವೈಯಕ್ತಿಕ ನಡವಳಿಕೆಯೂ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಮಾದರಿಯಾಗಲು ಅವರಿಗಿರಬಹುದಾದ ಅರ್ಹತೆ ಎಲ್ಲಿಯವರೆಗೆ ಸಾಬೀತಾಗುವುದಿಲ್ಲವೊ ಅಲ್ಲಿಯ ತನಕ ವೈಯಕ್ತಿಕ ಸ್ನೇಹ, ನಿಷ್ಠೆ ಮುಂತಾದ ಭಾವನಾತ್ಮಕ ವಿಷಯಗಳನ್ನು ನಿರ್ಲಕ್ಷಿಸಿ, ವಿಮರ್ಶಿಸುತ್ತಿರಬೇಕು. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ನೀಡುವ ರಿಯಾಯಿತಿ ಪ್ರಜಾಪ್ರಭುತ್ವದಲ್ಲಿ ವಿಮರ್ಶೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಸ್ತ್ರವಾಗಿಬಿಡುತ್ತದೆ. ಆ ಸ್ವ್ವಾತಂತ್ರ್ಯವನ್ನು ಒತ್ತೆಯಿಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ.

Reader Comments

ಹೌಹೌದು, ಒಂದು ಕಡೆ ಶೊಭಾ ಕರಂದ್ಲಾಜೆ ಯವರನ್ನು ಶ್ರೀಮತಿ ಎಂದು ಕರೆದರೆ ತಪ್ಪಿಲ್ಲಾ…ಮದುವೆಯಾಗದ ಮಾತ್ರಕ್ಕೆ ಎಲ್ಲರೂ ಕುಮಾರಿ ಎಂದು ಕರೆಯಲ್ಪಡುವುದು ಸರಿಯೇನಲ್ಲ…ಜಯಲಲಿತಾ -ಎಮ್.ಜಿ.ಆರ್ ಬಗ್ಗೆ ಪ್ರಪಂಚಕ್ಕೆ ತಿಳಿದಿದ್ದರೂ, ಅವರು ಕುಮಾರಿ ಎಂದು ತಮ್ಮ ಹೆಸರು ಇಟ್ಟುಕೊಂಡಿಲ್ಲವೆ.. ಎಂದು ಒಬ್ಬ ಮಹಿಳೆ ಇನ್ನೊಂದು ವೆಬ್ ಸೈಟಿನಲ್ಲಿ ವಾದಿಸಿದ್ದಾರೆ…ಸರಿ, ಮತ್ತೆ…ಮಾಡಿದವರ ಪಾಪಾ ಆಡಿದವರ ಬಾಯಲ್ಲಿ ಎಂಬಂತೆ..ನಮಗೇಕೆ ಬಿಡಿ…!!!

;)
ನಾ.ಕು.

#1 
Written By ನಾಕು on November 10th, 2009 @ 12:23 am

Add a Comment

required, use real name
required, will not be published
optional, your blog address