ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?

This post was written by admin on September 5, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 12, 2008 ರ ಸಂಚಿಕೆಯಲ್ಲಿನ ಲೇಖನ.)

ಕಾಲ್ಪನಿಕ ಕತೆಗಳನ್ನು ಬರೆಯುವ ಕತೆಗಾರರನ್ನೂ ಮೀರಿಸುವಂತಹ ಅದ್ಭುತವಾದ ಐತಿಹಾಸಿಕ ಸಂದರ್ಭದಲ್ಲಿ ಇವತ್ತು ಅಮೆರಿಕ ಬಂದು ನಿಂತುಬಿಟ್ಟಿದೆ. ಈ ದೇಶದ ಕೋಟ್ಯಾಂತರ ಜನರು ಮತ್ತು ಕೆಲವು ಅರ್ಹ ವ್ಯಕ್ತಿಗಳು ಸೇರಿಕೊಂಡು ಈ ಇತಿಹಾಸ ನಿರ್ಮಿಸ ಹೊರಟಿದ್ದಾರೆ. ಈಗಾಗಲೆ ಒಂದು ಹಂತದ ಇತಿಹಾಸ ನಿರ್ಮಾಣವಾಗಿ ಹೋಗಿದೆ. ಕೇವಲ ನಲವತ್ತು-ಐವತ್ತು ವರ್ಷಗಳ ಹಿಂದೆ ಅಮೆರಿಕದ ಕೆಲವು ದಕ್ಷಿಣ ರಾಜ್ಯಗಳ ರೆಸ್ಟಾರೆಂಟ್‌ಗಳಿಗೆ, ಟಾಯ್ಲೆಟ್‌ಗಳಿಗೆ, ಬಸ್ಸಿಗೆ ಕಾಯುವ ಕೋಣೆಗಳಿಗೆ, ಮತ್ತೂ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಿಗೆ ಯಾವೊಬ್ಬ ಕಪ್ಪು ಮನುಷ್ಯನಿಗೂ ಪ್ರವೇಶವಿರಲಿಲ್ಲ. ಬಿಳಿಯರಿಗೇ ಒಂದು ಜಾಗ, ಕರಿಯರಿಗೇ ಒಂದು ಜಾಗ ಎಂದು ಆಗ ಬೇರ್ಪಡಿಸಲಾಗಿತ್ತು. ಶಾಲಾಕಾಲೇಜುಗಳೂ ಅಷ್ಟೆ. ಬಸ್ಸಿನಲ್ಲಿ ಯಾರಾದರೂ ಬಿಳಿಯ ಸ್ತ್ರೀ/ಪುರುಷ ಬಂದರೆ ಅವರಿಗೆ ಕರಿಯರು ಎದ್ದು ಸೀಟು ಬಿಡಬೇಕಿತ್ತು. ಬಿಳಿಯ ಕ್ರಿಶ್ಚಿಯನ್ನರ ಮತಾಂಧ ಗುಂಪಾದ ಕೂ ಕ್ಲಕ್ಸ್ ಕ್ಲಾನ್ (KKK) ಇನ್ನೂ ಕೆಲವೆಡೆ ಸಕ್ರಿಯವಾಗಿತ್ತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ ನಾಗರಿಕ ಹಕ್ಕುಗಳ ಹೋರಾಟ ನಡೆಯುತ್ತಿದ್ದಾಗ ಕೆಕೆಕೆ ಮತಾಂಧರು ಕೆಲವು ಕಡೆ ಕರಿಯರನ್ನು ಮತ್ತು ಚಳವಳಿಕಾರರನ್ನು ಮರಕ್ಕೆ ನೇತು ಹಾಕಿ ನೇಣು ಬಿಗಿಯುತ್ತಿದ್ದರು. ಕರಿಯರನ್ನು ಬೆದರಿಸಲು ಅವರುಗಳ ಮನೆಯ ಮುಂದೆ ಶಿಲುಬೆ ಸುಡುತ್ತಿದ್ದರು. ಆಗ ಅಮೆರಿಕದ ಜನಸಂಖ್ಯೆಯಲ್ಲಿ ಶೇ. 14 ರಷ್ಟಿದ್ದ ಕಪ್ಪು ಜನಾಂಗದ ಬಹುಪಾಲು ಜನರು ಮತದಾರರ ಪಟ್ಟಿಯಲ್ಲಿಯೇ ಇರಲಿಲ್ಲ.

ಆದರೆ ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ ನೋಡಿ. ತಮ್ಮ ಹಿಂದಿನ ತಲೆಮಾರಿನ ವರ್ಣಭೇದ, ಅಸಮಾನತೆ, ಜನಾಂಗೀಯದ್ವೇಷ ಮುಂತಾದ ಕೀಳು ಸಂಗತಿಗಳನ್ನೆಲ್ಲ ದಾಟಿಕೊಂಡು ಒಬ್ಬ ಕಪ್ಪು ಮನುಷ್ಯನನ್ನು ಅಮೆರಿಕದ ಅಧ್ಯಕ್ಷನನ್ನಾಗಿ ಮಾಡುವ ಐತಿಹಾಸಿಕ ಸಂದರ್ಭಕ್ಕೆ ಇವತ್ತು ಅಮೆರಿಕದ ಬಹುಪಾಲು ಜನತೆ ಸಾಗಿ ಬಂದುಬಿಟ್ಟಿದ್ದಾರೆ.


ಲೇಖನದ ವಿಡಿಯೊ ಪ್ರಸ್ತುತಿ

ಅನೇಕ ವಿಚಾರಗಳಿಗೆ ಬರಾಕ್ ಒಬಾಮ ಅಮೆರಿಕದ ಇತರ ಟಿಪಿಕಲ್ ಕಪ್ಪು ಜನಾಂಗದವರಂತೆ ಅಲ್ಲ. ಒಬಾಮಾನ ತಾಯಿ ಬಿಳಿಯ ಹೆಂಗಸು. ಆಕೆ ಇನ್ನೂ ಹದಿನೆಂಟರ ಹರೆಯದಲ್ಲಿದ್ದಾಗಲೆ ಸ್ಪಷ್ಟ ಆಲೋಚನೆಗಳಿದ್ದ, ವರ್ಣಭೇದವನ್ನು ನಿರಾಕರಿಸುತ್ತಿದ್ದ ನಾಸ್ತಿಕ ಯುವತಿ. ಫೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪರಾಜ್ಯ ಹವಾಯಿಯಲ್ಲಿ ಆಕೆ ಕೀನ್ಯಾದಿಂದ ಬಂದಿದ್ದ ಒಬ್ಬ ಕರಿಯ ವಿದ್ಯಾರ್ಥಿಯನ್ನು ಸಂಧಿಸಿದ್ದು. ಆತನ ಹೆಸರು ಬರಾಕ್ ಹುಸೇನ್ ಒಬಾಮ. ಪರಿಚಯ ಸ್ನೇಹಕ್ಕೆ ಪ್ರೇಮಕ್ಕೆ ತಿರುಗಿತು. ಆಕೆ ಇನ್ನೂ ಇಪ್ಪತ್ತು ವರ್ಷ ವಯಸ್ಸು ದಾಟುವ ಮುಂಚೆಯೆ ಆತನ ಹೆಂಡತಿಯಾಗಿದ್ದಳು. ಇಂತಹ ಅಪರೂಪದ ದಾಂಪತ್ಯಕ್ಕೆ ಹುಟ್ಟಿದವನು ಬರಾಕ್ ಒಬಾಮ.

ಕೀನ್ಯಾದಿಂದ ಅಮೆರಿಕಕ್ಕೆ ಸ್ಕಾಲರ್‌ಶಿಪ್ ಮೇಲೆ ಬಂದಿದ್ದ ಒಬಾಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮದ ಹವಾಯಿಯಿಂದ ಪೂರ್ವದ ಹಾರ್ವರ್ಡ್‌ಗೆ ಒಬ್ಬನೆ ಹೋದ. ಐದಾರು ಸಾವಿರ ಮೈಲುಗಳ ದೂರ ಸಂಸಾರವನ್ನೂ ಬೇರ್ಪಡಿಸಿತು. ಹೆಂಡತಿಗೆ ವಿಚ್ಚೇದನ ನೀಡಿದ ಹಿರಿಯ ಒಬಾಮ ತನ್ನ ವಿದ್ಯಾಭ್ಯಾಸದ ನಂತರ ತಾಯ್ನಾಡಿಗೆ ಹಿಂದಿರುಗಿದ. ಹೀಗೆ ಅಪ್ಪನ ಪ್ರೀತಿ ಮತ್ತು ಒಡನಾಟವನ್ನು ಅನುಭವಿಸದೆ ತನ್ನ ತಾಯಿ ಮತ್ತು ಅಜ್ಜಅಜ್ಜಿಯರೊಂದಿಗೆ ಕಿರಿಯ ಒಬಾಮ ಬೆಳೆದ. ಮಗನಿಗೆ ಆರು ವರ್ಷವಾಗಿದ್ದಾಗ ಒಬಾಮಾನ ತಾಯಿ ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆ ಮಾಡಿಕೊಂಡು ಆತನೊಂದಿಗೆ ಇಂಡೋನೇಷ್ಯಾಕ್ಕೆ ಹೋದಳು. ಮಗ ಆಕೆಯನ್ನು ಹಿಂಬಾಲಿಸಿದ. ಆದರೆ ಅಲ್ಲಿ ಮೂರ್ನಾಲ್ಕು ವರ್ಷ ಕಳೆದ ನಂತರ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ತಾಯಿ ಒಬಾಮನನ್ನು ತನ್ನ ಪೋಷಕರ ಬಳಿಗೆ ಹವಾಯಿಗೆ ಕಳುಹಿಸಿಬಿಟ್ಟಳು. ಮುಂದಕ್ಕೆ ಕಾಲೇಜಿಗೆ ಹೋಗುವ ತನಕವೂ ಆತ ಅಜ್ಜಅಜ್ಜಿಯರ ಆರೈಕೆಯಲ್ಲಿ ಬೆಳೆದ.

ಶಾಲಾ ದಿನಗಳಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ವಿದ್ಯಾರ್ಥಿಯಾಗಿರದಿದ್ದ ಒಬಾಮಾ ಕಾಲೇಜಿಗೆಂದು ಲಾಸ್ ಏಂಜಲಿಸ್‌ಗೆ ಬಂದ. ಅಲ್ಲಿ ಎರಡು ವರ್ಷ ಓದಿದ ನಂತರ ಇನ್ನೂ ಗಂಭೀರವಾಗಿ ವ್ಯಾಸಂಗ ಮಾಡಲು ನ್ಯೂಯಾರ್ಕಿಗೆ ಹೋದ. ಅಲ್ಲಿ ನಾಲ್ಕು ವರ್ಷ ಓದಿದ ನಂತರ ಕಪ್ಪುಜನರ ಚರ್ಚುಗಳ ಪರವಾಗಿ ಸಮುದಾಯ ಸಂಘಟಕನ ಕೆಲಸ ಮಾಡಲು ಶಿಕಾಗೊಗೆ ಹೋದ. ಅಲ್ಲಿ ಮೂರು ವರ್ಷಗಳ ಕಾಲ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ. ನಂತರವೆ ಆತ ಅಮೆರಿಕದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್‌ಗೆ ಕಾನೂನು ಓದಲು ಹೋದದ್ದು. ಅಲ್ಲಿ ಓದುವಾಗಲೆ ಅಪಾರ ಹೆಸರು ಮತ್ತು ಯಶಸ್ಸು ಗಳಿಸಿದ. ಓದು ಮುಗಿಸಿದ ನಂತರ ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಬಹುದಾಗಿದ್ದ ಕೆಲಸಗಳನ್ನೆಲ್ಲ ಬಿಟ್ಟು ಮತ್ತೆ ಶಿಕಾಗೋಗೆ ಮರಳಿದ. ಅಲ್ಲಿ ಮತ್ತೊಮ್ಮೆ ಸಮುದಾಯ ಕೆಲಸಗಳಲ್ಲಿ ತೊಡಗಿಸಿಕೊಂಡ. ರಾಜಕೀಯವನ್ನೂ ಅರಿತುಕೊಳ್ಳುತ್ತ ಹೋದ. ಆ ಮಧ್ಯೆ ಮಿಷೆಲ್ ಜೊತೆ ಮದುವೆಯೂ ಆದ.

ಇದೇ ಸಮಯದಲ್ಲಿ ಆತನ ಕರ್ತೃತ್ವ ಶಕ್ತಿಯನ್ನು ಮೆಚ್ಚಿಕೊಂಡಿದ್ದ ಕಪ್ಪು ಜನಾಂಗದ ಶಾಸಕಿಯೊಬ್ಬಳು ತನ್ನ ಸೀಟನ್ನು ಆತನಿಗೆ ಬಿಟ್ಟುಕೊಟ್ಟು ತಾನು ಇನ್ನೂ ಮೇಲಿನ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿದಳು. ಒಬಾಮ ಇಲಿನಾಯ್ ರಾಜ್ಯದ ಶಾಸನಸಭೆಯ ಚುನಾವಣೆಗೆ ಅಣಿಯಾಗುವಷ್ಟರಲ್ಲಿ ಆ ಹಾಲಿ ಶಾಸಕಿ ವಾಪಸು ಬಂದು ತಾನೆ ಮತ್ತೆ ಪುನರ್‌ಸ್ಪರ್ಧಿಸುವುದಾಗಿ ಹೇಳಿದಳು. ಆದರೆ ಒಬಾಮ ಹಿಂದೆಗೆಯಲಿಲ್ಲ. ಆಕೆಯೂ ಸ್ಪರ್ಧಿಸಿದಳು. ಆದರೆ ಆಕೆಯ ನಾಮಪತ್ರವನ್ನು ಪರಿಶೀಲಿಸಿದ ಒಬಾಮ ಆಕೆಯ ನಾಮಪತ್ರದಲ್ಲಿ ಕೆಲವು ಮತದಾರರ ಸಹಿಗಳಲ್ಲಿನ ದೋಷಗಳನ್ನು ಗುರುತಿಸಿ ಆಕೆ ಆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಳಾಗುವಂತೆ ನೋಡಿಕೊಂಡ. ಮತ್ತೂ ಕೆಲವು ಸ್ಪರ್ಧಿಗಳ ಗತಿ ಅದೇ ಅಯಿತು. ಹೀಗೆ ಒಬಾಮ 1996 ರಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸುಲಭವಾಗಿ ಗೆದ್ದುಬಿಟ್ಟ. ಅದಾದ ನಾಲ್ಕು ವರ್ಷಗಳಿಗೆ ಒಬಾಮ ಇನ್ನೂ ಮೇಲಿನ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಿದ. ಆದರೆ ಈ ಸಲ ತನ್ನದೇ ಪಕ್ಷದ ಪ್ರಾಥಮಿಕ ಸ್ಪರ್ಧೆಯಲ್ಲಿ ತನ್ನದೇ ಜನಾಂಗದ ಬಲಿಷ್ಠ ಅಭ್ಯರ್ಥಿಯೆದುರು ಸೋತು ಹೋದ. ಆದರೆ ಅದಾದ ನಾಲ್ಕೆ ವರ್ಷಗಳಿಗೆ ದೇಶದ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಿದ. ಅದೇ ಸಮಯದಲ್ಲಿ (2004) ಆತ ಜಾನ್ ಕೆರ್ರಿ ಪರವಾಗಿ ಡೆಮೊಕ್ರಾಟ್ ಪಕ್ಷದ ಸಮ್ಮೆಳನದಲ್ಲಿ ಇಡೀ ದೇಶದ ಗಮನ ಸೆಳೆಯುವಂತಹ ಪ್ರಭಾವಕಾರಿ ಭಾಷಣ ಮಾಡಿದ. ಅಂದೇ ಬರಾಕ್ ಒಬಾಮ ಎಂಬ ಭವಿಷ್ಯದ ರಾಷ್ಟ್ರನಾಯಕನನ್ನು ಈ ದೇಶದ ರಾಜಕೀಯ ವಿಶ್ಲೇಷಕರು ಗುರುತಿಸಿಬಿಟ್ಟರು. ಅದಾದ ನಂತರ ನಡೆದ ಚುನಾವಣೆಯಲ್ಲಿ ಕೆರ್ರಿ ಬುಷ್‌ಗೆ ಸೋತಿದ್ದ. ಆದರೆ ಇಲಿನಾಯ್‌ನಲ್ಲಿ ಸೆನೆಟ್ ಸ್ಥಾನವನ್ನು ಒಬಾಮ ಸುಲಭವಾಗಿ ಗೆದ್ದಿದ್ದ.

ಈಗ, ಅದಾದ ನಾಲ್ಕೇ ವರ್ಷಗಳಲ್ಲಿ “ಬದಲಾವಣೆ ಮತ್ತು ಭರವಸೆ” ಎಂಬ ಸ್ಲೋಗನ್ನಿನಡಿಯಲ್ಲಿ ಹಿಲ್ಲರಿ ಕ್ಲಿಂಟನ್‌ಳಂತಹ ದೈತ್ಯ ನಾಯಕಿಯನ್ನೂ ಸೋಲಿಸಿ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾನೆ. ಕರಿಯ ಮನುಷ್ಯನೊಬ್ಬ ದೊಡ್ಡ ಪಕ್ಷವೊಂದರ ಅಧಿಕೃತ ಅಭ್ಯರ್ಥಿಯಾದ ಈ ಸಂದರ್ಭವಂತೂ ಅಮೆರಿಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯದ ಮಹತ್ವದ ಘಟನೆ. ಯಾವುದೆ ಸಹಾಯಕಾರಿ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ, ಕಷ್ಟಪಟ್ಟು, ಕೆಲವೊಮ್ಮೆ ಭಾರಿ ಕಿಲಾಡಿತನದಿಂದ ಪೂರ್ವಯೋಜಿತ ಕರಾರುವಾಕ್ಕು ದಾಳಗಳನ್ನು ಉರುಳಿಸಿಯೆ ಬರಾಕ್ ಒಬಾಮಾ ರಾಜಕೀಯದಲ್ಲಿ ಮೇಲೆ ಬಂದಿದ್ದಾನೆ. ಈ ಯಶಸ್ಸು ಮತ್ತು ಆತನ ಪ್ರಭಾವಶಾಲಿ ಮಾತುಗಾರಿಕೆ ಆತನಿಗೆ ಸೆಲೆಬ್ರಿಟಿ ವ್ಯಕ್ತಿತ್ವ ತಂದುಕೊಟ್ಟುಬಿಟ್ಟಿದೆ. ಅದನ್ನು ಆತ ತನ್ನ ಉಪಯೋಗಕ್ಕೂ ಬಳಸಿಕೊಳ್ಳುತ್ತಿದ್ದಾನೆ. ರಾಜಕೀಯದಲ್ಲಿ ಆಸಕ್ತಿ ತೋರದ ಯುವಜನತೆ ಇವತ್ತು ಆ ವ್ಯಕ್ತಿತ್ವದಿಂದಾಗಿಯೆ ಆತನೆಡೆಗೆ ಆಕರ್ಷಿತರಾಗಿದ್ದಾರೆ. ಇಡೀ ದೇಶದ ಬಹುಪಾಲು ಉದಾರವಾದಿ ಯುವಜನತೆ ಆತನನ್ನು ಒಬ್ಬ ರಾಕ್ ಸ್ಟಾರ್‌ನಂತೆ, ತಮ್ಮ ಆಶಾಕಿರಣದಂತೆ ಕಾಣುತ್ತಿದ್ದಾರೆ. ಹಾಗೆಯೆ, ಜಗತ್ತಿನ ಬಲಿಷ್ಠ ರಾಷ್ಟ್ರವಾದ ಬಹುಸಂಖ್ಯಾತ ಬಿಳಿಯರ ಅಮೆರಿಕಕ್ಕೆ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಅಧ್ಯಕ್ಷನಾಗಬಹುದಾದ ಈ ಒಂದು ಐತಿಹಾಸಿಕ ಸಂದರ್ಭದಿಂದಾಗಿ ಇಡೀ ವಿಶ್ವವೆ ಇವತ್ತು ಬರಾಕ್ ಒಬಾಮನತ್ತ ನೋಡುತ್ತಿದೆ.

ಕೇವಲ ಅಮೆರಿಕದಲ್ಲಿಯಷ್ಟೆ ಅಲ್ಲ, ವಿಶ್ವದ ಹಲವಾರು ಕಡೆ 47 ವರ್ಷದ ಈ ಬರಾಕ್ ಒಬಾಮ ಗೆಲ್ಲಬೇಕೆಂದು ಜನ ಬಯಸುತ್ತಿದ್ದಾರೆ. ಅದಕ್ಕೆ ನಾನಾ ಕಾರಣಗಳಿವೆ. ಹಾಗೆ ಆದಲ್ಲಿ ಅದು ಒಂದು ಅದ್ಭುತವಾದ ಸಂಕೇತವಾಗಲಿದೆ. ಸಮಾನತೆಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವ ಸಿದ್ಧಾಂತದೊಂದಿಗೆ ಹೋರಾಡುವವರಿಗೆ ಅದು ಮಹತ್ತರ ಸ್ಫೂರ್ತಿಯಾಗಲಿದೆ. ಆದರೆ, ಇಂತಹ ಸ್ಫೂರ್ತಿ ಮತ್ತು ಮಾದರಿಯಾಗಬಹುದಾದ ಅವಕಾಶಕ್ಕೆ ಎದುರು ನಿಂತಿರುವವನು ಜಾನ್ ಮೆಕೈನ್ ಎಂಬ 72 ವರ್ಷದ ಹಿರಿಯ. ಒಂದು ರೀತಿಯ ದೈವಿಕಪ್ರಭೆ ಬೆಳೆಸಿಕೊಂಡು ಬಿಟ್ಟಿರುವ ಒಬಾಮನ ವಿರುದ್ಧ ಸ್ಪರ್ಧಿಸಲಿರುವ ಆತ ದುಷ್ಟನೂ, ಅನರ್ಹನೂ, ಬಿಳಿಯ ಮತಾಂಧನೂ ಆಗಿರಬೇಕು ಎಂದು ಯಾರಾದರೂ ಅಂದುಕೊಂಡರೆ ಅದೊಂದು ತಪ್ಪು ಅಭಿಪ್ರಾಯ.

ಜಾನ್ ಮೆಕೈನ್ ಸಾಮಾನ್ಯನೇನಲ್ಲ. ಆತನ ಅಪ್ಪ ಮತ್ತು ಅಜ್ಜ ಇಬ್ಬರೂ ಅಮೆರಿಕದ ನೌಕಾದಳದಲ್ಲಿ ಎರಡನೆ ಅತ್ಯುನ್ನತ ಸ್ಥಾನವಾದ ಅಡ್ಮಿರಲ್ ಆಗಿದ್ದವರು. ಜಾನ್ ಮೆಕೈನ್ ಸಹ ನೌಕಾದಳದಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದ. ಅದು 60 ರ ದಶಕದ ವಿಯಟ್ನಾಮ್ ಯುದ್ಧ. ಮೆಕೈನ್ ಹಾರಿಸುತ್ತಿದ್ದ ಯುದ್ಧವಿಮಾನವನ್ನು ವಿಯಟ್ನಾಮ್ ಕ್ರಾಂತಿಕಾರಿಗಳು ಹೊಡೆದುರುಳಿಸಿದರು. ಪ್ಯಾರಾಚೂಟ್‌ನಿಂದ ಹಾರಿ ಮೆಕೈನ್ ಪ್ರಾಣ ಉಳಿಸಿಕೊಂಡ. ಆದರೆ ಆತನನ್ನು ಸುತ್ತುವರೆದ ವಿಯಟ್ನಾಮ್ ಜನ ಎಗ್ಗಾಮುಗ್ಗಾ ಹೊಡೆದು ಸೈನಿಕರ ಬಂಧಿಖಾನೆಗೆ ತಳ್ಳಿದರು. ಐದೂವರೆ ವರ್ಷಗಳ ಕಾಲ ಯುದ್ಧಖೈದಿಯಾಗಿದ್ದ ಆತನಿಗೆ ಅಲ್ಲಿ ಅಪಾರವಾದ ಚಿತ್ರಹಿಂಸೆಗಳನ್ನು ಕೊಟ್ಟರು. ಅದೇ ಸಮಯದಲ್ಲಿ ಆತನ ಅಪ್ಪ ಅಡ್ಮಿರಲ್ ಆದ. ಯುದ್ಧಖೈದಿಗಳ ಮನೋಸ್ಥೈರ್ಯವನ್ನು ಬಗ್ಗುಬಡಿಯಲು ಮೆಕೈನ್‌ನಂತಹ ದೊಡ್ಡ ಮನುಷ್ಯರ ಮಗನನ್ನು ಬಿಡುಗಡೆ ಮಾಡಲು ವಿಯಟ್ನಾಮ್ ಸೈನ್ಯ ಮುಂದೆ ಬಂತು. ಆದರೆ ಅದಕ್ಕೆ ಸ್ವತಃ ಮೆಕೈನ್ ಒಪ್ಪಿಕೊಳ್ಳಲಿಲ್ಲ. ತನಗೆ ಸರದಿ ಪ್ರಕಾರವೇ ಬಿಡುಗಡೆ ಆಗಲಿ ಎಂದು ಕುಳಿತುಕೊಂಡ. ತಮ್ಮ ಯೋಜನೆಗೆ ಅಡ್ಡಿಪಡಿಸಿದ ಮೆಕೈನ್ ಬಗ್ಗೆ ವಿಯಟ್ನಾಮ್ ಸೈನಿಕರು ಕೋಪಗೊಂಡರು. ಶಿಕ್ಷೆ ಜೋರಾಯಿತು. ಆ ಚಿತ್ರಹಿಂಸೆಗಳು ಎಷ್ಟು ಭೀಕರವಾಗಿದ್ದವೆಂದರೆ ದೇಶಭಕ್ತ ಮೆಕೈನ್ ತನ್ನ ರಾಷ್ಟ್ರದ ವಿರುದ್ಧವೇ ತಪ್ಪೊಪ್ಪಿಗೆ ಹೇಳಿಕೆ ಬರೆದುಕೊಟ್ಟ. ನಂತರವೂ ಶಿಕ್ಷೆ ಮುಂದುವರೆಯುತ್ತಿತ್ತು. ಅಂತಿಮವಾಗಿ ಯುದ್ಧ ಮುಗಿದ ನಂತರ ಮೆಕೈನ್ ಬಿಡುಗಡೆ ಆದ.

ಬಿಡುಗಡೆಯ ನಂತರವೂ ಆತ ನೌಕಾದಳದಲ್ಲಿ ಸೇವೆ ಸಲ್ಲಿಸಿದ. ಆದರೆ ಆತನ ಯುದ್ಧಖೈದಿ ಸ್ಥಾನಮಾನ ಆತನಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿತ್ತು. ಅನೇಕ ವರ್ಷಗಳ ಕಾಲ ರಾಜಕೀಯ ನಾಯಕರುಗಳೊಂದಿಗೆ ನೌಕಾದಳದ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ. ಕೊನೆಗೆ ಅರಿಜೋನ ರಾಜ್ಯದಿಂದ ಅಮೆರಿಕದ ಪ್ರಜಾಪ್ರತಿನಿಧಿ ಸಭೆಗೆ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ. ನಂತರ ಸೆನೆಟರ್ ಆದ. ರಿಪಬ್ಲಿಕನ್ ಪಕ್ಷ ಅಮೆರಿಕದ ಈಗಿನ ಸಂದರ್ಭದಲ್ಲಿ ಮತೀಯ ಸಂಪ್ರದಾಯವಾದಿಗಳ ಪಕ್ಷ. ಇಂತಹ ಪಕ್ಷದಲ್ಲಿದ್ದರೂ ಮೆಕೈನ್ ನೇರಮಾತಿನ ನಿಷ್ಠುರವಾದಿ ಮತ್ತು ಅನೇಕ ವಿಷಯಗಳಿಗೆ ಉದಾರವಾದಿ. ಒಮ್ಮೆ ಆಗಿನ ಜನಪ್ರಿಯ ಅಧ್ಯಕ್ಷನಾಗಿದ್ದ ರೋನಾಲ್ಡ್ ರೇಗನ್ ವಿರುದ್ಧವೆ ಗುಡುಗಿದ್ದ. ಅನೇಕ ವಿಷಯಗಳಿಗೆ ಬಲಪಂಥೀಯ ಕ್ರಿಶ್ಚಿಯನ್ನರನ್ನು ಎದುರು ಹಾಕಿಕೊಂಡಿದ್ದ.

ಜಾನ್ ಮೆಕೈನ್ ಎಂಟು ವರ್ಷಗಳ ಹಿಂದೆಯೆ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಬೇಕಿತ್ತು. ಆದರೆ ಆಗ ಜಾರ್ಜ್ ಬುಷ್ ಎದುರು ತನ್ನ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಸೋತುಹೋದ. ಆ ಚುನಾವಣೆಯಲ್ಲಿ ಆತನ ವಿರುದ್ಧ ಮತೀಯ ಬಲಪಂಥೀಯರು ಬಹಳ ಕೆಟ್ಟದಾದ ಪ್ರಚಾರ ಕೈಗೊಂಡರು. ಆತನ ಹೆಂಡತಿ ಬಾಂಗ್ಲಾ ದೇಶದಿಂದ ಒಬ್ಬ ಅನಾಥ ಬೆಂಗಾಲಿ ಹುಡುಗಿಯನ್ನು ತಂದು ಸಾಕಿಕೊಂಡಿದ್ದಳು. ಆ ಹುಡುಗಿ ಇಲ್ಲಿನ ಆಫ್ರಿಕನ್ ಅಮೆರಿಕನ್ನರಂತೆ ಕಪ್ಪಗಿದ್ದಳು. ಅದನ್ನೆ ತಮ್ಮ ದಾಳವಾಗಿ ಬಳಸಿಕೊಂಡ ಬಿಳಿಯ ಫ್ಯಾಸಿಸ್ಟ್‌ಗಳು ಆ ಹುಡುಗಿ ಜಾನ್ ಮೆಕೈನ್‌ನ ಅಕ್ರಮ ಸಂಬಂಧದ ಶಿಶು ಎಂಬ ಸುಳ್ಳುಸುದ್ದಿಗಳನ್ನು ಹಬ್ಬಿಸಿಬಿಟ್ಟರು. ಅದನ್ನೆ ಬಳಸಿಕೊಂಡ ಜಾರ್ಜ್ ಬುಷ್ ತಾನು ಎಲ್ಲರಿಗಿಂತ ಕಟ್ಟರ್ ಸಂಪ್ರದಾಯವಾದಿ, ಪಕ್ಕಾ ಕ್ರಿಶ್ಚಿಯನ್ ದೈವಭಕ್ತ ಎಂದು ನಂಬಿಸಿಬಿಟ್ಟ. ಜಾತ್ಯಾತಿತ ಅಮೆರಿಕ ದೇಶದ ರಿಪಬ್ಲಿಕನ್ ಬಲಪಂಥೀಯರು ಬುಷ್‌ನನ್ನು ಗೆಲ್ಲಿಸಿಬಿಟ್ಟರು!

ಹೀಗೆ ತನ್ನದೇ ಪಕ್ಷದಲ್ಲಿ ಜಾನ್ ಮೆಕೈನ್ ಒಬ್ಬಂಟಿ. ಆತನನ್ನು ಎಲ್ಲರೂ ಗುರುತಿಸುವುದೆ “ಒಂಟಿ ಸಲಗ” (Maverick- ಸ್ವತಂತ್ರ ವ್ಯಕ್ತಿತ್ವದ ಏಕಾಂಗಿ ಎಂಬ ಅರ್ಥ) ಎಂದು. ತನ್ನದೇ ಪಕ್ಷದ ಮತಾಂಧರನ್ನು ಎದುರು ಹಾಕಿಕೊಳ್ಳಬಲ್ಲ ಈತನಿಗೆ ಬೇರೆ ಮತಾಂಧರ ಬಗ್ಗೆಯೂ ತಾಳ್ಮೆ ಇಲ್ಲ. ಪ್ರಜಾಪ್ರಭುತ್ವವಾದಿ ಸಹ. ಅದೇ ಕಾರಣಕ್ಕೆ ಸದ್ಧಾಮನ ಸರ್ವಾಧಿಕಾರ ಕೊನೆಗೊಳಿಸಲು ಈತನ ಬೆಂಬಲವಿತ್ತು. ದೇಶದ ವಿಷಯ ಬಂದಾಗ ತನ್ನೆಲ್ಲ ವೈಯಕ್ತಿಕ ಸ್ವಾರ್ಥವನ್ನು ಪಕ್ಕಕ್ಕಿಡಬಲ್ಲ ಮನುಷ್ಯ. ತನಗೆ ಸರಿ ಅನ್ನಿಸಿದ್ದನ್ನು ಮುಲಾಜಿಲ್ಲದೆ ಆಡಬಲ್ಲ. ಹಾಗೆಯೆ ಚಾಲಾಕಿ ಕೂಡ. ಹಿಲ್ಲರಿ ಕ್ಲಿಂಟನ್‌ಳನ್ನು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸದ ಒಬಾಮಾನ ನಡವಳಿಕೆಯನ್ನು ಎತ್ತಿ ತೋರಿಸಲು ಮತ್ತು ಆ ಮೂಲಕ ಹೆಚ್ಚಿನ ಮಟ್ಟದಲ್ಲಿ ಸ್ತ್ರೀ ಮತದಾರರನ್ನು ಸೆಳೆಯಲು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಯಾರಾ ಪೇಲಿನ್ ಎಂಬ ಸುಂದರ ಮೊಗದ ರಾಜ್ಯಪಾಲೆಯನ್ನು ಆರಿಸಿಕೊಂಡಿದ್ದಾನೆ. ಈ ಅನಿರೀಕ್ಷಿತ ಆಯ್ಕೆ ಇಷ್ಟು ದಿನ ಒಬಾಮಾನ ಪರ ಇದ್ದ ಅಲೆಯನ್ನು ಕಟ್ಟಿಹಾಕಿಬಿಟ್ಟಿದೆ. ಒಬಾಮಾನ ಬೆಂಬಲಿಗರು ಈಗ ನಿಜಕ್ಕೂ ದಂಗಾಗಿದ್ದಾರೆ.

ಸೈದ್ಧಾಂತಿಕ ಒಲವುಗಳನ್ನು ಬದಿಗಿಟ್ಟು ನೋಡಿದರೆ ಒಬಾಮ ಮತ್ತು ಜಾನ್ ಮೆಕೈನ್ ಇಬ್ಬರೂ ಅರ್ಹರೆ. ಇಂತಹ ಸಂದರ್ಭ ಅನೇಕ ದೇಶಗಳಿಗೆ ಒದಗಿ ಬರುವುದಿಲ್ಲ. ಹಾಗೆ ನೋಡಿದರೆ ಹಿಲ್ಲರಿ ಕ್ಲಿಂಟನ್ ಸಹ ಅರ್ಹ ಅಭ್ಯರ್ಥಿಯೆ. ಜಾನ್ ಮೆಕೈನ್ ಒಳ್ಳೆಯ ಮನುಷ್ಯನಾದರೂ ಆತನ ಮತೀಯ ಸಂಪ್ರದಾಯವಾದಿ ಮತ್ತು ಯುದ್ಧದಾಹಿ ಪಕ್ಷ ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. ಹಾಗಾಗಿಯೆ ಅಮೆರಿಕದ ಬಲಪಂಥೀಯತೆಗೆ ಕಡಿವಾಣ ಬೀಳಲು ಈ ಬಾರಿ ರಿಪಬ್ಲಿಕನ್ ಪಕ್ಷ ಸೋಲಬೇಕಿತ್ತು. ಜಾನ್ ಮೆಕೈನ್‌ನನ್ನು ಸೋಲಿಸಲು ಒಬಾಮಾಗಿಂತ ಹಿಲ್ಲರಿಗೆ ಹೆಚ್ಚಿನ ಅವಕಾಶಗಳಿದ್ದವು. ಆದರೆ ಸದ್ಯದ ಸ್ಥಿತಿಯಲ್ಲಿ ಫೋಟೋಫಿನಿಷ್ ಫಲಿತಾಂಶ ಬರುವ ಸಾಧ್ಯತೆಗಳೇ ಜಾಸ್ತಿ. ನನ್ನ ಊಹೆಯ ಪ್ರಕಾರ ಈಗ ಜಾನ್ ಮೆಕೈನ್ ಗೆಲ್ಲುವ ಸಾಧ್ಯತೆಗಳೆ ಹೆಚ್ಚಿವೆ. ಯಾಕೆಂದರೆ ಈ ಮತೀಯ ಬಲಪಂಥೀಯರು ಜನಾಂಗೀಯ ದ್ವೇಷ ಬಿತ್ತುವಲ್ಲಿ, ಸುಳ್ಳುಸುದ್ದಿ ಹಬ್ಬಿಸುವುದರಲ್ಲಿ, ಭವಿಷ್ಯದ ಬಗ್ಗೆ ವಿನಾಕಾರಣ ಭಯಪಡುವಂತೆ ಮಾಡುವಲ್ಲಿ ಮತ್ತು ಕೊನೆಕ್ಷಣದ ಕಾರ್ಯಾಚರಣೆಯಲ್ಲಿ ಸಿದ್ಧಹಸ್ತರು. ಎಲ್ಲಾ ಮತಗಳಲ್ಲೂ, ಎಲ್ಲಾ ದೇಶಗಳಲ್ಲೂ ಇರುವ ಇವರ ಕುತಂತ್ರಗಳು ಒಂದೇ ತರಹನವು. ನಮ್ಮಲ್ಲೂ ಹೀಗೆಯೆ. ಅಲ್ಲವೆ?

Add a Comment

required, use real name
required, will not be published
optional, your blog address