ಭಾರತದಲ್ಲಿಯ ಇಸ್ಲಾಮ್ ಮೂಲಭೂತವಾದಿಗಳನ್ನು ಮತ್ತು ಕೋಮುವಾದವನ್ನು ಎದುರಿಸುವುದು ಹೇಗೆ?

This post was written by admin on September 18, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.)

ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ್ತಿದ್ದಾರೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ಮತ್ತು ಇಲ್ಲಿಯ ವೈವಿಧ್ಯತೆಯನ್ನು ಸಹಿಸದ ಕೆಲವು ವಿಕೃತ ಮನಸ್ಸಿನ ಜನ ಕೈಗೊಂಡ ದಾಳಿ ಇದು. ವಿಪರ್ಯಾಸ ಏನೆಂದರೆ, ಮತಾಂಧತೆ ಮತ್ತು ಜನಾಂಗದ್ವೇಷದಿಂದ ನರಳುವ ಈ ಗುಂಪಿನ ಪ್ರತಿ ಕಾರ್ಯವೂ ಅವರಂತಹುದೆ ಆಲೋಚನೆಗಳ ಇನ್ನೊಂದು ಗುಂಪಿಗೆ ಬಲವನ್ನು ನೀಡುತ್ತ್ತಿದೆ. ಆ ಮಟ್ಟಿಗೆ ಅವರ ಕೃತ್ಯಗಳಿಗೆ ದುಪ್ಪಟ್ಟು ವಿನಾಶಕಾರಿ ಬಲವಿದೆ. ಇಂತಹ ಘಟನೆ ಘಟಿಸುವ ಪ್ರತಿಸಲವೂ ದೇಶ ತಕ್ಕಷ್ಟು ಮಟ್ಟಿಗೆ ಅಸ್ಥಿರವೂ ಅನಾಗರಿಕವೂ ಆಗುತ್ತಿದೆ. ದೇಶ ಇಂತಹುದನ್ನು ತಡೆದುಕೊಳ್ಳಬಲ್ಲ ಬಲ ಕ್ಷೀಣಿಸುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಕೋಮುವಾದವನ್ನು ಇಷ್ಟು ದಿನ ಎದುರಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ಎದುರಿಸದಿದ್ದರೆ ನಮ್ಮ ದೇಶದ ಭವಿಷ್ಯ ಇನ್ನೂ ಕರಾಳವಾಗಲಿದೆ. ಅದು ಅಪನಂಬಿಕೆಯಿಂದ, ಸಂಘರ್ಷಗಳಿಂದ, ಅಂತಃಕಲಹಗಳಿಂದ, ಭೀಭತ್ಸ ಘಟನೆಗಳಿಂದ ಕೂಡಲಿದೆ. ಈಗ ಘಟಿಸುತ್ತಿರುವ ಘಟನೆಗಳಿಂತ ಹೆಚ್ಚು ಪಾಲು ಮುಂದಕ್ಕೆ ಘಟಿಸುವ ಸಾಧ್ಯತೆಗಳಿವೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಬಾಂಬ್ ಸ್ಫೋಟಗಳನ್ನು ಮತ್ತು ಕೋಮುಹಿಂಸಾಚಾರಗಳನ್ನು ಗಮನಿಸಿದರೆ ಸಾಕು, ಭಯೋತ್ಪಾದನೆ ಮತ್ತು ಕೋಮುವಾದದ ಸಮಸ್ಯೆಯನ್ನು ಮುಂದೂಡುವ ಸ್ಥಿತಿಯಲ್ಲಿ ಭಾರತೀಯ ಸಮಾಜ ಇಲ್ಲದಿರುವುದನ್ನು ಅದು ತೋರಿಸುತ್ತದೆ.

ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 13 ರಷ್ಟಿರುವ ಭಾರತೀಯ ಮುಸಲ್ಮಾನರು ನಮ್ಮದೇ ನೆಲದವರು. ಇವರಲ್ಲಿನ ಬಹುಪಾಲು ಜನ ನಾನಾ ಕಾರಣಗಳಿಗೆ ಹಿಂದೂ ಸಮಾಜದಿಂದ ಮುಸಲ್ಮಾನ ಮತಕ್ಕೆ ಮತಾಂತರವಾದವರು. ಇತರೆಲ್ಲರಂತೆ ಸಹಸ್ರಾರು ವರ್ಷಗಳಿಂದ ಭಾರತದ ನೆಲದಲ್ಲಿ ಬೇರು ಬಿಟ್ಟವರು. ಆದರೆ, ಭಾರತದ ಇವತ್ತಿನ ಸಂದರ್ಭದಲ್ಲಿ ತೀರಾ ಅಪನಂಬಿಕೆಯಿಂದ, ಪರಕೀಯತೆಯಿಂದ, ಬಡತನದಿಂದ, ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದಿಂದ, ತನ್ನದೇ ಮತದ ಪುರೋಹಿತಶಾಹಿಯಿಂದ ನರಳುತ್ತಿರುವ ದೊಡ್ಡ ಸಮುದಾಯ ಎಂದರೆ ಅದು ಈ ಮುಸಲ್ಮಾನ ಸಮುದಾಯ. ಇದನ್ನು ನಾವು ಕೇವಲ ಭಾರತೀಯ ಮುಸಲ್ಮಾನರ ದುರಂತ ಎನ್ನಲಾಗದು. ಅದು ನಿಜಕ್ಕೂ ಭಾರತದ ದುರಂತ. ಪ್ರತಿ ಏಳು ಭಾರತೀಯರಲ್ಲಿ ಒಬ್ಬ ಈ ಸಮುದಾಯಕ್ಕೆ ಸೇರಿದವನು. ಈ ಸಮುದಾಯದವರ ಹಿಂದುಳಿದಿರುವಿಕೆಯನ್ನು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ತೊಂದರೆಯಾಗದಂತೆ ಸರಿಪಡಿಸುವ ಕರ್ತವ್ಯ ಇಡೀ ಭಾರತದ ಮೇಲಿದೆ. ತನ್ನದೇ ಜನರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ಕಡೆಗಣಿಸುವ ದೇಶ ದೇಶವಲ್ಲ. ಅದೊಂದು ಪಟ್ಟಭದ್ರ ಸ್ವಾರ್ಥಿಗಳ ಒಕ್ಕೂಟ. ಅದು ನಾವಾಗಕೂಡದು.

ದಿಕ್ಕುಗೆಡಿಸುವ ಪರಿಸ್ಥಿತಿ

ಇವತ್ತಿನ ಭಾರತೀಯ ಹಿಂದೂ ಸಮುದಾಯದಲ್ಲಿ ಎರಡು ರೀತಿಯ ದೇಶಪ್ರೇಮಿ ಗುಂಪುಗಳಿವೆ. ಒಂದು ತಮ್ಮ ಹಿಂದೂ ಮತಪ್ರೇಮವನ್ನೇ ದೇಶಪ್ರೇಮ ಎಂದುಕೊಂಡ ಗುಂಪಾದರೆ ಇನ್ನೊಂದು ಮತದ ಹೊರತಾಗಿ ದೇಶದ ಬಗ್ಗೆ ಯೋಚಿಸುವ ಜಾತ್ಯತೀತರ ಗುಂಪು. ಒಟ್ಟಾರೆ ಭಾರತೀಯ ಸಮಾಜದ ಏಳಿಗೆಯ ಬಗ್ಗೆ ಯೋಚಿಸುವ ಈ ಜಾತ್ಯತೀತರ ಗುಂಪನ್ನು ಮುಸಲ್ಮಾನ ಪ್ರೇಮಿಗಳೆಂದು ಹಿಂದೂ ಮತಾಂಧರು ಬಿಂಬಿಸಿ ತಮ್ಮದೇ ನೈಜ ದೇಶಪ್ರೇಮ ಎಂದು ಸಾರುತ್ತಿದ್ದಾರೆ. ಮತಸಹಿಷ್ಣ್ಣುತೆಯ ಸಂದರ್ಭದಲ್ಲಿ “ಮುಸಲ್ಮಾನ ಪ್ರೇಮಿ” ಎನ್ನುವುದು ಕೆಟ್ಟ ಪದ ಅಲ್ಲದಿದ್ದರೂ ಇಸ್ಲಾಮಿಗೂ ಭಯೋತ್ಪಾದಕತೆಗೂ ಗಂಟುಬಿದ್ದಿರುವ ಈ ಸಂದರ್ಭದಲ್ಲಿ ಅದಕ್ಕೆ “ದೇಶದ್ರೋಹಿ” ಪಟ್ಟವಿದೆ. ಇದು ಎಂತಹ ದೇಶಪ್ರೇಮಿಯನ್ನೂ ಧೃತಿಗೆಡಿಸುವ ಪಟ್ಟ.


ಲೇಖನದ Youtube ಪ್ರಸ್ತುತಿ

ಹೇಗೆ ಹಿಂದೂ ಮೂಲಭೂತವಾದಿಗಳು ಇಡೀ ಹಿಂದೂ ಸಮಾಜವನ್ನು ಪ್ರತಿನಿಧಿಸುವುದಿಲ್ಲವೊ ಹಾಗೆಯೆ ಇಸ್ಲಾಮ್ ಮೂಲಭೂತವಾದಿ ಭಯೋತ್ಪಾದಕರು ಭಾರತೀಯ ಮುಸಲ್ಮಾನರನ್ನು ಪ್ರತಿನಿಧಿಸುವುದಿಲ್ಲ ಹಾಗೆ ಪ್ರತಿನಿಧಿಸಿದ್ದರೆ ದೇಶ ಪ್ರತಿದಿನವೂ ಹೊತ್ತಿ ಉರಿಯುತ್ತಿತ್ತು. ಹಾಗಾಗಿ ಜಾತ್ಯತೀತ ಹಿಂದೂಗಳು ಇಸ್ಲಾಮ್ ಮತಾಂಧರ ಭಯೋತ್ಪಾದಕತೆಯ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯವನ್ನಷ್ಟೆ ಖಂಡಿಸುತ್ತಾರೆ. ಒಬ್ಬರ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಅಮಾನವೀಯ ಎನ್ನುವ ಕನಿಷ್ಠ ಕಾಳಜಿಯಿಂದ ಇಸ್ಲಾಮ್ ಅನ್ನು ಹೊರಗಿಟ್ಟು ಟೀಕೆ ಮಾಡುತ್ತಾರೆ. ಆದರೆ ಭಯೋತ್ಪಾದಕರ ಕೃತ್ಯಕ್ಕೆ ಇಡೀ ಮುಸಲ್ಮಾನ ಸಮುದಾಯವನ್ನು ಗಲ್ಲಿಗೇರಿಸಬೇಕು ಎನ್ನುವ ಹಿಂದೂ ರಾಷ್ಟ್ರೀಯವಾದಿಗಳಿಗೆ ಇದು ಸಾಕಾಗುವುದಿಲ್ಲ. ಅದಕ್ಕೆ “ತುಷ್ಟೀಕರಣ”ದ ಲೇಪ ಹಚ್ಚುತ್ತಾರೆ. ಮುಸ್ಲಿಂ ವಿರೋಧಿ ಭಾವನೆಗಳ ಜೊತೆಜೊತೆಗೆ ಜಾತ್ಯತೀತ ವಿರೋಧಿ ಭಾವನೆಗಳನ್ನೂ ಸಾಮಾನ್ಯ ಜನತೆಯಲ್ಲಿ ಉದ್ಧೀಪಿಸುತ್ತಾರೆ. ಇದೇ ಸಂದರ್ಭದಲ್ಲಿ ಮುಸಲ್ಮಾನ ಸಮುದಾಯದಿಂದ ಬಲಿಷ್ಠವಾಗಿ ಮೂಡಿಬಂದಿಲ್ಲದ ವೈಚಾರಿಕ ಜಾತ್ಯತೀತ ನಾಯಕತ್ವದ ಕೊರತೆ ಸಹ ದೇಶದ ಜಾತ್ಯತೀತರ ಕೆಲಸವನ್ನು ಮತ್ತಷ್ಟು ಕಠಿಣ ಮಾಡುತ್ತಿದೆ.

ಇನ್ನು ನಮ್ಮ ದೇಶದ ಜಾತ್ಯತೀತ ರಾಜಕಾರಣಿಗಳ “ಪೊಲಿಟಿಕಲಿ ಕರೆಕ್ಟ್” ಮತ್ತು ಚುನಾವಣಾ ಕೇಂದ್ರಿತ ನಡವಳಿಕೆ ಎರಡೂ ಮತಗಳ ಮತಾಂಧರ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಹಿಂದೂ ಮತಾಂಧತೆಯನ್ನು ಎದುರಿಸುವಾಗ ತೋರಿಸುವ ಅಲ್ಪಧೈರ್ಯವನ್ನೂ ಮುಸಲ್ಮಾನ ಮತಾಂಧತೆಯನ್ನು ಎದುರಿಸುವಾಗ ತೋರುತ್ತಿಲ್ಲ. ಇದು ಇಸ್ಲಾಮ್ ಮತಾಂಧರಿಗೆ ಕೆಲವು ರಹದಾರಿಗಳನ್ನು ಕೊಟ್ಟರೆ ಹಿಂದೂ ಮತಾಂಧರಿಗೆ ನೈತಿಕ ಬಲ ನೀಡುತ್ತಿದೆ.

ಮತೀಯ ಮೂಲಭೂತವಾದಕ್ಕೆ ಅನೇಕ ಕಾರಣಗಳಿವೆ. ಆದರೆ ಭಾರತದಲ್ಲಿ ಇಸ್ಲಾಮ್ ಮೂಲಭೂತವಾದಕ್ಕೆ ಬಲ ಸಿಗುತ್ತಿರುವುದು ಆ ಸಮುದಾಯದಲ್ಲಿನ ಅವಿದ್ಯೆ, ಅಜ್ಞಾನ, ಬಡತನ, ಮತ್ತು ಹೊರಗಿನ ಪ್ರಭಾವದಿಂದಾಗಿ. ಈ ಸಮುದಾಯದ ಬಹುಪಾಲು ಜನ ಹಿಂದೂ ಸಮಾಜದಲ್ಲಿನ ದಲಿತರಷ್ಟೆ ಬಡವರೂ, ಹಿಂದುಳಿದವರೂ ಆಗಿದ್ದಾರೆ. ಇದನ್ನು ಸರಿಪಡಿಸಲು ಅನೇಕ ಯೋಜನೆ ಮತ್ತು ಕಾನೂನುಗಳನ್ನು ತರಬೇಕಿದೆ. ಆದರೆ ಚುನಾವಣಾ ರಾಜಕಾರಣದಿಂದಾಗಿ ಮತ್ತು ದೇಶದಲ್ಲಿ ಬಲಪಡೆದುಕೊಳ್ಳುತ್ತಿರುವ ಮೂಲಭೂತವಾದದಿಂದಾಗಿ ಇದು ಆಗಬೇಕಾದಷ್ಟು ಆಗುತ್ತಿಲ್ಲ. ಇದರ ಜೊತೆಗೆ ಮುಲ್ಲಾ-ಮಸೀದಿ-ಪುರೋಹಿತಶಾಹಿಯ ಕಪಿಮುಷ್ಟಿಯಲ್ಲಿರುವ ಬಹುಪಾಲು ಇಸ್ಲಾಮ್ ಸಮುದಾಯವೂ ಸಾಕಷ್ಟು ಆಧುನಿಕವಾಗುತ್ತಿಲ್ಲ ಮತ್ತು ಸ್ಥಳೀಯವಾಗುತ್ತಿಲ್ಲ. ಸಾಚಾರ್ ಕಮಿಟಿಯ ಶಿಫಾರಸುಗಳ ಅನುಷ್ಠಾನಕ್ಕೆ ಆಗ್ರಹಿಸುವ ಬದಲು ಅದರ ಸಮುದಾಯ ನಾಯಕರು ಒಸಾಮಾ-ತಾಲಿಬಾನ್-ಸದ್ಧಾಮ್‌ಗಳ ಬೆಂಬಲಕ್ಕೆ ಜಾಥಾ ತೆಗೆಯುತ್ತಾರೆ. ಸ್ಥಳೀಯ ಭಾಷೆಗಳನ್ನು ಕಲಿತು ಕಾಯ್ದೆ-ಕಾನೂನು ಅರಿಯುವ ಬದಲು ಅವರಲ್ಲಿಯ ಬಡವರು ಉರ್ದು-ಅರಬ್ಬಿ ಕಲಿಯುತ್ತಾರೆ. ಇದೊಂದು ದಿಕ್ಕುಗೆಡಿಸುವ ಪರಿಸ್ಥಿತಿ.

ಶಿಕ್ಷಣದ ಹಕ್ಕು ಮತ್ತು ಶಾಲೆಗಳ ರಾಷ್ಟ್ರೀಕರಣ

ಕಳೆದ ಶತಮಾನದ ಭಾರತ ಬಡಭಾರತ. ದೇಶದ ಜನತೆಗೆ ಎರಡು ಹೊತ್ತಿನ ಊಟ ಒದಗಿಸುವುದೆ ಸರ್ಕಾರಕ್ಕೆ ಕಷ್ಟವಾಗಿದ್ದಾಗ ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವುದು ಸರ್ಕಾರದ ಮೊದಲ ಆದ್ಯತೆ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಧಾರ್ಮಿಕ ಸಂಸ್ಥೆಗಳು, ಮಠಗಳು, ಚರ್ಚುಗಳು, ಹಾಗು ವ್ಯಕ್ತಿಗಳು ಶಾಲೆಗಳನ್ನು ತೆರೆದು ದೊಡ್ಡ ಮಟ್ಟದ ಶೈಕ್ಷಣಿಕ ಕ್ರಾಂತಿ ಮಾಡಿದರು. ಆವತ್ತಿನ ಸಂದರ್ಭದಲ್ಲಿ ಅವರು ಮಾಡಿದ್ದು ದೇಶ ಕಟ್ಟುವ ಕೆಲಸ. ಆದರೆ ಈಗಿನ ಸಂದರ್ಭದಲ್ಲಿ ಈ ಶಾಲೆಗಳನ್ನು ರಾಷ್ಟ್ರೀಕರಣ ಮಾಡಿದರೆ ಅಷ್ಟರ ಮಟ್ಟಿಗೆ ಕೋಮುವಾದವನ್ನೂ ತಡೆಯಬಹುದು ಎನ್ನಿಸುತ್ತದೆ. ಯಾಕೆಂದರೆ, ಇವತ್ತು ಈ ಮಠಗಳು, ಕೋಮು ಸಂಘಟನೆಗಳು, ಮಸೀದಿಗಳು, ಚರ್ಚುಗಳು ನಡೆಸುತ್ತಿರುವ ಶಾಲೆಗಳಲ್ಲಿ ದೇಶದ ಸಾಮರಸ್ಯಕ್ಕೆ ಮತ್ತು ಜಾತ್ಯತೀತ ಸಿದ್ಧಾಂತಕ್ಕೆ ಪೂರಕವಾದ ಶಿಕ್ಷಣ ಸಿಗುತ್ತಿಲ್ಲ. ಜ್ಞಾನ ಮತ್ತು ವಿಜ್ಞಾನವನ್ನು ಕಲಿಯಬೇಕಾದ ಚಿಕ್ಕಮಕ್ಕಳು ವೇದ, ಅರೇಬಿಕ್ ಕುರಾನ್, ಬೈಬಲ್ ಗಾಸ್ಪೆಲ್‌ಗಳ ಬಾಯಿಪಾಠದ ಮೂಲಕ ಕೋಮುವಾದವನ್ನೂ ಕಲಿಯುತ್ತಿದ್ದಾರೆ. ತಮ್ಮ ಮತೀಯ ಹೆಚ್ಚುಗಾರಿಕೆಯ ಬಗ್ಗೆ ಉಪದೇಶ ಪಡೆದುಕೊಂಡೇ ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ತಮ್ಮ ಸಮುದಾಯ, ಮಠ, ಮತದ ಬಗ್ಗೆ ಪ್ರಶ್ನಿಸಲಾಗದ ನಾಯಿನಿಷ್ಠೆ ಇರುವ ಪರಿಸ್ಥಿತಿ ಇದೆ.

ಇವತ್ತಿನ ಸಂದರ್ಭದಲ್ಲಿ ಭಾರತ ಸರ್ಕಾರವೆ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕೊಡುವ ಕೆಲಸ ಮಾಡಬಹುದಾಗಿದೆ. ಅಷ್ಟಿದ್ದರೂ ಕಳೆದ ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ “ಶಿಕ್ಷಣದ ಹಕ್ಕು” ಕಾಯಿದೆಯನ್ನು ಜಾರಿಗೊಳಿಸದೆ ಮುಂದಕ್ಕೆ ಹಾಕುತ್ತಿದೆ. ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಎಷ್ಟು ಬೇಗ ತರುತ್ತದೊ ಅಷ್ಟು ಬೇಗ ನಮ್ಮ ದೇಶದ ಮಕ್ಕಳು ಕೋಮುವಾದಿಗಳ ವಿಷಪೂರಿತ ಸಿದ್ಧಾಂತದಿಂದ ತಪ್ಪಿಸಿಕೊಳ್ಳುವ ಅವಕಾಶ ಇದೆ. ಈ ಕಾಯಿದೆಗಾಗಿ ಭಾರತದ ಜಾತ್ಯತೀತ ಪ್ರಜೆಗಳು ಆಗ್ರಹಿಸಬೇಕಿದೆ.

ಪೊಲೀಸರ ದಕ್ಷತೆ ಮತ್ತು ಹಸ್ತಕ್ಷೇಪ

ದೇಶದಲ್ಲಿಯ ಇಸ್ಲಾಮ್-ಭಯೋತ್ಪಾದಕರನ್ನು ಮತ್ತು ಹಿಂದು-ಭಸ್ಮಾಸುರರನ್ನು ತಡೆಯಲು ಸರ್ಕಾರಗಳು ಅನೇಕ ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಾತ್ಯತೀತ-ಪ್ರಜಾಪ್ರಭುತ್ವವಾದಿ-ವೈಜ್ಞಾನಿಕ ಶಿಕ್ಷಣ ಮತ್ತು ಬಡತನ ನಿವಾರಣೆಯ ಮೂಲಕ ಕೋಮುವಾದನ್ನು ತಡೆಯುವುದು ದೀರ್ಘಕಾಲೀನ ಪರಿಹಾರವಾದರೆ ದೇಶದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ತಕ್ಷಣ ಮಾಡಬೇಕಾದ ಕೆಲಸ. ಆದರೆ ಇದು ಆಗುವ ಸಾಧ್ಯತೆ ಕಡಿಮೆ. ಈಗಾಗಲೆ ನಮ್ಮ ದೇಶದ ಪೊಲೀಸರು ಕೀಳರಿಮೆ, ರಾಜಕೀಯ ಹಸ್ತಕ್ಷೇಪ, ಮತ್ತು ಸಂಪನ್ಮೂಲಗಳ ಕೊರತೆಯಿಂದ ನರಳುತ್ತಿದ್ದಾರೆ. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಸ್ ಆಫಿಸರ್ ಒಬ್ಬರನ್ನು ಭೇಟಿ ಆಗಿದ್ದೆ. ಮಾತುಕತೆಯ ನಡುವೆ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಎಂದೆ. ಅಷ್ಟಕ್ಕೆ ಆತ, “ಐಪಿಎಸ್‌ನಲ್ಲಿ ನಾನು ಫಸ್ಟ್ ರ್‍ಯಾಂಕ್ ಬಂದಿದ್ದೆ; ಆದರೂ ನನಗೆ ಜುಜುಬಿ ಸಂಬಳ ಬರುತ್ತದೆ; ಈ ಸಾಫ್ಟ್‌ವೇರ್‌ನ ಹುಡುಗರು ನನಗಿಂತ ಹೆಚ್ಚಿಗೆ ಸಂಬಳ ಪಡೆಯುತ್ತಾರೆ; ನಾನೇನು ಕಮ್ಮಿ; ಈ ಸರ್ಕಾರಿ ಕೆಲಸಕ್ಕೆ ಸೇರಿಕೊಂಡು ಜೀವನ ಹಾಳಾಯಿತು;” ಹಾಗೆ ಹೀಗೆ ಎಂದು ಹುಚ್ಚನಂತೆ ಮಾತನಾಡಿದ್ದ. ಆತ ಬಹುಶಃ ಬೆಂಗಳೂರಿನ ನಂಬರ್-2 ಫೋಲಿಸ್ ಆಫಿಸರ್! ವೃತ್ತಿಯ ಮಹತ್ವ ಗೊತ್ತಿಲ್ಲದೆ ಕೇವಲ ಸಂಬಳದಿಂದ ತಮ್ಮ ಯೋಗ್ಯತೆ ಅಳೆದುಕೊಳ್ಳುವ ಇಂತಹವರಿಂದ ಬೆಂಗಳೂರು, ದೆಹಲಿ, ಹೈದರಾಬಾದುಗಳಲ್ಲಿ ಸುರಕ್ಷತೆ ಅಪೇಕ್ಷಿಸುವುದು ನಮ್ಮ ಹುಚ್ಚುತನ.

ಇನ್ನು ನಮ್ಮಲ್ಲಿಯ ರಾಜಕೀಯ ಹಸ್ತಕ್ಷೇಪ ಎಂತಹ ಪ್ರಾಮಾಣಿಕ ಪೊಲೀಸರನ್ನೂ ಸಿನಿಕರನ್ನಾಗಿ ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ. ಇಲ್ಲದಿದ್ದರೆ ಕೋಮುದ್ವೇಷ ಹುಟ್ಟಿಸುವ ಆದಿಉಡುಪಿಯ ಬೆತ್ತಲೆ ಪ್ರಕರಣದಲ್ಲಿ ಪೊಲೀಸರು ನಿರ್ವೀರ್ಯರಾಗುತ್ತಿದ್ದರೆ? ಪದ್ಮಪ್ರಿಯ ಎಂಬ ಹೆಂಗಸನ್ನು ಆತ್ಮಹತ್ಯೆಗೆ ತಳ್ಳಿದ ಮನುಷ್ಯ ರಾಜಾರೋಷವಾಗಿ ಓಡಾಡಲು ಸಾಧ್ಯವಿತ್ತೆ? ಮುಗ್ಧರನ್ನು ಬಸ್ಸಿನಲ್ಲಿ ಕೂಡಿಹಾಕಿ ಸುಟ್ಟವರು ನಾಯಕರಾಗಲು ಸಾಧ್ಯವಿತ್ತೆ? ಇಂತಹ ಪ್ರತಿದಿನದ ಘಟನೆಗಳಿಗೂ ಪೊಲೀಸರ ದಕ್ಷತೆಯನ್ನು ಆಗ್ರಹಿಸಿದರೆ ಮಾತ್ರ ಆಗಾಗ್ಗೆ ಸಂಭವಿಸುವ ಮುಸಲ್ಮಾನ ಭಯೋತ್ಪಾದಕರ ಬಾಂಬು ದಾಳಿಗಳಿಂದಲೂ ನಮಗೆ ರಕ್ಷಣೆ ಸಿಗುತ್ತದೆ. ಇದನ್ನು ಭಾವಾವೇಶದಲ್ಲಿ ಪ್ರತಿಕ್ರಿಯಿಸುವ ಸಮಾಜ ಆಲೋಚಿಸಬೇಕಿದೆ.

Reader Comments

ನಿಮ್ಮಂತವರು ಈ ದೇಶ ಬಿಟ್ಟು ತೊಲಗಿದರೆ ಖಂಡಿತ ನಿಮ್ಮ ಶೀರ್ಷಿಕೆಯಲ್ಲಿನ ಪ್ರಶ್ನೆಗೆ ಉತ್ತರ ಸಿಗುತ್ತದೆ.

#1 
Written By ಕಿರಣ್ on November 9th, 2009 @ 8:37 am

this is gud article

#2 
Written By nani on September 9th, 2010 @ 11:41 pm

Add a Comment

required, use real name
required, will not be published
optional, your blog address