ಆಮಿಷಕ್ಕೊಳಗಾಗದ ಆಮಿಷರು
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 20, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಅಂದು ಗಾಂಧಿ ಜಯಂತಿ. ಬೆಳಗಿನಿಂದ ಅಲ್ಲಲ್ಲಿ ಕೇಳಿಬಂದ ಗಾಂಧಿಯನ್ನು ನೆನಪಿಸಿಕೊಳ್ಳುತ್ತ ಭಾರತದಲ್ಲಿನ ಮಕ್ಕಳು ಇನ್ನೇನು ನಿದ್ದೆಯ ಸೆರಗಿಗೆ ಜಾರಿಕೊಳ್ಳಬೇಕು ಎನ್ನುವ ಸಮಯದಲ್ಲಿ ಅಮೇರಿಕದ ಪೆನ್‌ಸಿಲ್ವೇನಿಯ ರಾಜ್ಯದಲ್ಲಿ ಬೆಳ್ಳನೆ ಬೆಳಗು. ಅಲ್ಲಿಯ ಏಕೋಪಾಧ್ಯಾಯ ಶಾಲೆಯೊಂದರಲ್ಲಿ ಹಿರಿಕಿರಿಯ ಮಕ್ಕಳು ಒಂದೇ ಕೋಣೆಯಲ್ಲಿ ಪಾಠಕ್ಕೆ ಸೇರಿದ್ದರು! ಹೌದು, ಎಲ್ಲಾ ವಯಸ್ಸಿನ ಎಲ್ಲಾ ತರಗತಿಯ ಮಕ್ಕಳಿಗೂ ಒಂದೇ ಕೋಣೆಯಲ್ಲಿ ಒಬ್ಬರೆ ಅಧ್ಯಾಪಕರು ಪಾಠ ಮಾಡುವ ಇಂತಹ ಅನೇಕ ಏಕೋಪಾಧ್ಯಾಯ ಶಾಲೆಗಳು ಅಮೇರಿಕದಲ್ಲಿವೆ. ಆದರೆ ಇವು ಯಾವುವೂ ದುಡ್ಡಿಲ್ಲದೆ, ಅನುಕೂಲವಿಲ್ಲದೆ, ಸರ್ಕಾರದ ಅಥವ ಸಮಾಜದ ಕಾಳಜಿಯಿಲ್ಲದೆ ವಿಧಿಯಿಲ್ಲದೆ ನಡೆಸುವ ಏಕೋಪಾಧ್ಯಾಯ ಶಾಲೆಗಳಲ್ಲ. ಬದಲಿಗೆ ಗಾಂಧಿಯ ಹೆಸರು ಕೇಳದೆ ಇದ್ದರೂ ಪ್ರಜ್ಞಾಪೂರ್ವಕವಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಪ್ರೀತಿ, ಸಮುದಾಯ ಸೇವೆಯನ್ನು ಮಾತ್ರ ನೆಚ್ಚಿಕೊಂಡು ಆಧುನಿಕ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಕ್ರೈಸ್ತ ಮತದ ಆಮಿಷ್ ಜನಾಂಗಕ್ಕೆ ಸೇರಿದ ಶಾಲೆಗಳು.
ದಿನಾಂಕ ಅಕ್ಟೋಬರ್ 2, 2006. ಹಾಲು ಗಾಡಿ ಓಡಿಸುವ 32 ವರ್ಷ ವಯಸ್ಸಿನ ಲಾರಿ ಚಾಲಕ ಇಂತಹ ಏಕೋಪಾಧ್ಯಾಯ ಶಾಲೆಗೆ ತನ್ನ ಬಂದೂಕಿನೊಡನೆ ನುಗ್ಗಿದ. ಬಂದೂಕನ್ನು ಸ್ವತಃ ನೋಡಿರುವುದು ಇರಲಿ, ಅದರ ಚಿತ್ರವನ್ನೂ ನೋಡಿರದ ಅನೇಕ ಮಕ್ಕಳು ಆ ಶಾಲೆಯಲ್ಲಿ ಇದ್ದರು. ಅಮೇರಿಕದಲ್ಲಿನ ಮಕ್ಕಳು ಬಂದೂಕಿನ ಚಿತ್ರವನ್ನೂ ನೋಡಿರುವುದಿಲ್ಲ ಎನ್ನುವುದು ಇಲ್ಲಿ ಅಷ್ಟು ದೊಡ್ಡ ಉತ್ಪ್ರೇಕ್ಷೆಯೇನಲ್ಲ. ಯಾಕೆಂದರೆ ಊರು ಬಿಟ್ಟು ಹೊರಗೆ ಹೋಗಿರದ ಆ ಶಾಲೆಯ ಕೆಲವು ಮಕ್ಕಳು ಅದನ್ನು ನೋಡಿರುವ ಸಾಧ್ಯತೆ ಇರುವುದಿಲ್ಲ. ಯಾಕೆಂದರೆ ಅವರ ಮನೆಗಳಲ್ಲಿ ಟೀವಿ ಇಲ್ಲ, ಅವರು ಚಲನಚಿತ್ರ ನೋಡುವುದಿಲ್ಲ. ಮೊದಲಿಗೆ ಅವರ ಮನೆಗಳಿಗೆ ವಿದ್ಯುತ್‌ನ ಪ್ರವೇಶವೇ ಇಲ್ಲ! ಅವರು ಬಡವರೂ ಅಲ್ಲ.
ಆ ಬಂದೂಕುದಾರಿಯ ಹೆಸರು ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್ ಎಂದು. ಒಳಗೆ ನುಗ್ಗಿದವನೆ ಕೋಣೆಯಲ್ಲಿನ ಎಲ್ಲಾ 15 ಗಂಡು ಮಕ್ಕಳನ್ನು ಮತ್ತು ನಾಲ್ಕು ಜನ ವಯಸ್ಕರನ್ನು ಹೊರಗೆ ಕಳುಹಿಸಿದ. ಉಳಿದ ಹತ್ತು ಜನ ಹೆಣ್ಣು ಮಕ್ಕಳ ಕೈಕಾಲು ಕಟ್ಟಿದ. ನಂತರ ಅವರನ್ನು ಸಾಲಾಗಿ ನಿಲ್ಲಿಸಿ ಅವರ ಮೇಲೆ ಅನೇಕ ಸುತ್ತು ಎಲ್ಲೆಂದರಲ್ಲಿ ಗುಂಡು ಹಾರಿಸಿದ. ಮೂವರು ಹೆಣ್ಣುಮಕ್ಕಳು ಸ್ಥಳದಲ್ಲೇ ಸತ್ತರು. ಒಂದು ಗುಂಡು ತನಗೆ ಹೊಡೆದುಕೊಂಡ; ಸತ್ತ. ಮತ್ತಿಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಸತ್ತರು. ಉಳಿದ ಐದು ಮಕ್ಕಳು ಗುಂಡೇಟಿನ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ತವರೆಲ್ಲ 6 ರಿಂದ 13 ವರ್ಷ ವಯಸ್ಸಿನ ಮಕ್ಕಳು.
ಈ ಘಟನೆಯಾಗುವುದಕ್ಕೆ ಕೇವಲ 5 ದಿನಗಳ ಹಿಂದೆಯಷ್ಟೆ, ಸೆಪ್ಟೆಂಬರ್ 27 ರಂದು ಸುಮಾರು ಐವತ್ತು ವಯಸ್ಸಿನ ವ್ಯಕ್ತಿ ಅಮೇರಿಕದ ಬೇರೊಂದು ರಾಜ್ಯದಲ್ಲಿ ಶಾಲೆಯೊಂದಕ್ಕೆ ನುಗ್ಗಿ ಬಂದೂಕು ತೋರಿಸಿ ಆರು ವಿದ್ಯಾರ್ಥಿನಿಯರನ್ನು ತನ್ನ ವಶಕ್ಕೆ ತೆಗೆದುಕೊಂಡ. ನಂತರ ಅವರಲ್ಲಿ ನಾಲ್ವರನ್ನು ಹೊರಕ್ಕೆ ಕಳುಹಿಸಿದ. ನಮ್ಮಲ್ಲಿನ ಕಮ್ಯಾಂಡೊ ಮಾದರಿಯ ಇಲ್ಲಿನ ವಿಶೇಷ ಆಯುಧ ಮತ್ತು ತಂತ್ರ ತಂಡ (SWAT) ಬಂದಾಗ ತನ್ನ ವಶದಲ್ಲಿದ್ದ ಇಬ್ಬರು ಹುಡುಗಿಯರಲ್ಲಿ ಒಬ್ಬಳ ಮೇಲೆ ಪ್ರಾಣಾಂತಿಕ ಗುಂಡುಹಾರಿಸಿ ನಂತರ ತನಗೆ ತಾನೆ ಇನ್ನೊಂದು ಗುಂಡು ಹೊಡೆದುಕೊಂಡು ಸ್ಥಳದಲ್ಲೆ ಸತ್ತ. ಗುಂಡು ತಗಲಿದ ಹುಡುಗಿ ಆಸ್ಪತ್ರೆಯಲ್ಲಿ ಸತ್ತಳು. ಇದಾದ ಎರಡೇ ದಿನಕ್ಕೆ ಮತ್ತೊಂದು ರಾಜ್ಯದಲ್ಲಿ 15 ವರ್ಷ ವಯಸ್ಸಿನ ಹುಡುಗ ತನ್ನ ಶಾಲೆಯ ಪ್ರಿನ್ಸಿಪಾಲ್‌ಗೆ ಗುಂಡು ಹೊಡೆದು ಸಾಯಿಸಿದ. ಇದಕ್ಕೂ ಮುಂಚಿನ ಸೆಪ್ಟೆಂಬರ್ ಎರಡನೆ ವಾರದ ಮತ್ತೊಂದು ಘಟನೆಯಲ್ಲಿ ೨೫ ವರ್ಷದ ವ್ಯಕ್ತಿ ಶಾಲೆಯಲ್ಲಿ ಗುಂಡು ಹಾರಿಸಿ ಒಬ್ಬನನ್ನು ಕೊಂದು ಇತರೆ ೨೦ ಜನರನ್ನು ಗಾಯಗೊಳಿಸಿದ್ದ.
ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು ಹಾಗು ವಯಸ್ಕರು ಸುಲಭವಾಗಿ ಸಿಕ್ಕುವ ಗನ್ ಹಿಡಿದು ಆಗಾಗ್ಗೆ ಶಾಲೆ ಕಾಲೇಜುಗಳಿಗೆ ನುಗ್ಗಿ ಗುಂಡು ಹಾರಿಸಿ ಬೇರೆಯವರನ್ನು ಸಾಯಿಸುತ್ತಿರುತ್ತಾರೆ. ಕೊಲರ್‍ಯಾಡೊ ರಾಜ್ಯದ ಕೊಲಂಬೈನ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಏಪ್ರಿಲ್ 20, 1999 ರಂದು ತಮ್ಮ ಶಾಲೆಗೆ ನುಗ್ಗಿ 12 ಜನ ವಿದ್ಯಾರ್ಥಿಗಳನ್ನು ಹಾಗು ಒಬ್ಬ ಉಪಾಧ್ಯಾಯರನ್ನು ಕೊಂದಿದ್ದು ತಮ್ಮ ದೇಶದಲ್ಲಿನ ಬಂದೂಕು ಸಂಸ್ಕೃತಿಯ ಬಗ್ಗೆ ಇಲ್ಲಿನ ಜನ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಆ ಘಟನೆಯ ಹಿನ್ನೆಲೆಯಲ್ಲಿ ಮೈಕೆಲ್ ಮೂರ್ ತೆಗೆದ ‘ಬೌಲಿಂಗ್ ಫಾರ್ ಕೊಲಂಬೈನ್’ ಸಾಕ್ಷ್ಯಚಿತ್ರ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದದ್ದಲ್ಲದೆ ಅನೇಕ ಚರ್ಚೆಗಳನ್ನು ಹುಟ್ಟಿಹಾಕಿತ್ತು. ಇದೇ ಗಾಂಧಿ ಜಯಂತಿಯಂದು ಆದ ಮೇಲೆ ವಿವರಿಸಿದ ರಕ್ತಪಾತ ಮತ್ತೊಮ್ಮೆ ಅಂತಹ ಚರ್ಚೆಯನ್ನು ಹುಟ್ಟುಹಾಕಿರುವುದಲ್ಲದೆ ಇಡೀ ಅಮೇರಿಕಕ್ಕೆ ತಮ್ಮ ಪಾಡಿಗೆ ತಾವಿದ್ದ ಒಂದು ವಿಶಿಷ್ಟ ಪಂಗಡದ ಪರಿಚಯವನ್ನು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ.
ಬಹುಶಃ ಮೂರ್‍ನಾಲ್ಕು ವರ್ಷದ ಹಿಂದೆ ಇರಬಹುದು ನಾನು ಹ್ಯಾರಿಸನ್ ಫೋರ್ಡ್‌ನ ‘ವಿಟ್ನೆಸ್’ ಸಿನೆಮಾ ನೋಡಿದ್ದು. ಆ ಸಿನೆಮಾ ನೋಡುವಾಗಲೆ ಅಮಿಷ್ ಎನ್ನುವ ಪದ ಮೊದಲ ಸಲ ಕೇಳಿದ್ದು. ಆ ಚಿತ್ರದಲ್ಲಿ ತಮ್ಮ ಸುತ್ತಮುತ್ತ ಅತ್ಯಾಧುನಿಕತೆಯ ಕಾರು-ರೈಲು-ಯಂತ್ರಗಳಿಂದ ಅಮೇರಿಕ ಆವರಿಸಿಕೊಂಡಿದ್ದರೂ ತಾವು ಮಾತ್ರ ಜಟಕಾ ಬಂಡಿಗಳಲ್ಲಿ ಓಡಾಡುವ, ಕರೆಂಟ್ ಉಪಯೋಗಿಸದ, ಎರಡು ಶತಮಾನದ ಹಿಂದಿನ ರೀತಿಯ ಜೀವನ ನಡೆಸುವವರಂತೆ ಕಾಣಿಸುತ್ತಿದ್ದ ಐರೋಪ್ಯ ಮೂಲದ ಆ ಬಿಳಿಯ ಕೈಸ್ತ ಜನರನ್ನು ನೋಡಿ ನನಗೆ ನಂಬಲಾಗಲಿಲ್ಲ. ತಕ್ಷಣ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಸುಮಾರು ಎರಡು ಲಕ್ಷದಷ್ಟು ಆಮಿಷ್ ಜನ ಅಮೇರಿಕದಲ್ಲಿ ವಾಸವಾಗಿದ್ದಾರೆ, ಅವರೆಲ್ಲ ಹೆಚ್ಚಾಗಿ ಪೂರ್ವರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ ಎಂದು ಗೊತ್ತಾಯಿತು. ಹಾಗೂ ‘ವಿಟ್ನೆಸ್’ ಚಲನಚಿತ್ರದಲ್ಲಿ ತೋರಿಸಿರುವುದು ಉತ್ಪ್ರೇಕ್ಷೆಯಲ್ಲ ಎಂದೂ ತಿಳಿಯಿತು. ಆಮಿಷ್ ಜನ ತಮ್ಮ ಫೋಟೊ ತೆಗೆಸಿಕೊಳ್ಳುವುದಿಲ್ಲ. ಮಕ್ಕಳಿಗೆಂದು ತರುವ ಬೊಂಬೆಗಳಿಗೆ ತಲೆಯೇ ಇರುವುದಿಲ್ಲ. ಕೃಷಿಯಲ್ಲಿ ಯಂತ್ರಗಳ ಉಪಯೋಗವಿಲ್ಲ. ಕಟ್ಟಳೆ ಮೀರಿದವರಿಗೆ ಕಠಿಣ ಶಿಕ್ಷೆಯ ಬಹಿಷ್ಕಾರ ಬೇರೆ. ಅಂದ ಹಾಗೆ ಆಮಿಷ್ ಗಂಡಸರು ಮೀಸೆ ಬಿಡುವುದಿಲ್ಲ. ಮೀಸೆ ಬಿಡದಿರುವುದಕ್ಕೆ ಕಾರಣ ಏನು ಗೊತ್ತೆ? ಗೊತ್ತಿದ್ದರೆ ಒಂದು ಸಾಲು ಬರೆಯಿರಿ. ಇಂತಹ ಎಷ್ಟೋ ವಿಭಿನ್ನತೆಗಳಿರುವ ಆಮಿಷ್ ಜನಾಂಗದ ಮತ್ತು ತಮ್ಮ ಮಕ್ಕಳನ್ನು ಕೊಂದವನ ಬಗ್ಗೆ ಅವರು ನಡೆದುಕೊಂಡ ರೀತಿಯ ಬಗೆಗಿನ ಮತ್ತಷ್ಟು ವಿವರಗಳನ್ನು ಮುಂದಿನ ವಾರ ಬರೆಯುತ್ತೇನೆ.