ಅನಾಯಕತ್ವ ಮತ್ತು ಮೂರನೇ ವಿಶ್ವಯುದ್ಧದ ಹಾದಿಯಲ್ಲಿ…
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 3, 2008 ರ ಸಂಚಿಕೆಯಲ್ಲಿನ ಲೇಖನ.)
ಕಳೆದ ಮೂರು ದಶಕಗಳ ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ನೋಡಿ. 1980 ರ ದಶಕದಲ್ಲಿ ರೊನಾಲ್ಡ್ ರೇಗನ್, ಮಾರ್ಗರೇಟ್ ಥ್ಯಾಚರ್ ಮತ್ತು ಮಿಖಾಯಿಲ್ ಗೋರ್ಬಚೆವ್‌ರ ನಾಯಕತ್ವ ಪ್ರಜಾಪ್ರಭುತ್ವವಾದಿ ಮತ್ತು ಕಮ್ಯುನಿಸ್ಟ್ ದೇಶಗಳ ನಡುವಿನ ಶೀತಲ ಸಮರಕ್ಕೆ ಕೊನೆ ಹಾಡಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮೂರು ದಶಕಗಳ ಕಾಲ ಇಡೀ ವಿಶ್ವವೆ ಮುಕ್ತ ಆರ್ಥಿಕತೆಗೆ, ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮವಾಗಿ ಕಳೆದ ಶತಮಾನದ ಹಲವಾರು ಪ್ರಮುಖ ರಾಷ್ಟ್ರಗಳು ವಿಶ್ವರಂಗದಲ್ಲಿ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳುತ್ತ ಬಂದಿವೆ. ಮುಂದುವರೆದ ರಾಷ್ಟ್ರಗಳ ಆರ್ಥಿಕ ಸಂಪತ್ತಿನ ವಿಸ್ತರಣೆ ಸ್ಥಗಿತವಾಗಿದ್ದರೆ ಚೀನಾ ಮತ್ತು ಭಾರತದಂತಹ ಪುರಾತನ ನಾಗರಿಕತೆಯ ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತ ನಡೆದಿವೆ. ಜಾಗತೀಕರಣದಿಂದ ತೃತೀಯ ವಿಶ್ವದ ಬಡ ರಾಷ್ಟ್ರಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತ ಬಂದ ಆರ್ಥಿಕ ತಜ್ಞರ ಮಾತು ನಿಜವಾಗುವತ್ತ ಸಾಗುತಿದೆ.
ಈ ಜಾಗತೀಕರಣದ ಆರಂಭದಲ್ಲಿ ಅಮೆರಿಕ, ಜಪಾನ್, ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಅಪಾರ ಲಾಭ ಮಾಡಿಕೊಂಡವು. ಪ್ರತ್ಯಕ್ಷ ಮತ್ತು ಪರೋಕ್ಷ ಒತ್ತಡಗಳಿಂದ ತೃತೀಯ ಜಗತ್ತಿನ ದೇಶಗಳ ಕಾನೂನು ಕಾಯ್ದೆಗಳನ್ನು ಬದಲಾಗುವಂತೆ ಅವರು ನೋಡಿಕೊಂಡರು. ಆ ಮೂಲಕ ಬಡ ರಾಷ್ಟ್ರಗಳಿಗೆ ತಮ್ಮ ಸಾಮಗ್ರಿಗಳನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡಿ ದುಡ್ಡು ಮಾಡಿಕೊಂಡರು. ಅದೇ ಬಡರಾಷ್ಟ್ರಗಳಲ್ಲಿನ ಅಗ್ಗದ ಕೂಲಿ ಮತ್ತು ಉತ್ಪಾದನಾ ವೆಚ್ಚದಿಂದಾಗಿ ತಮಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ದೇಶದಲ್ಲಿನ ಬೆಲೆಗಿಂತ ಅಗ್ಗದ ಬೆಲೆಗೆ ಕೊಂಡುಕೊಂಡು ತಮ್ಮ ಸುಧಾರಿಸಿದ್ದ ಲೌಕಿಕ ಜೀವನವನ್ನು ಮತ್ತೂ ಐಷಾರಾಮಿ ಮಾಡಿಕೊಂಡರು. ಅಮೆರಿಕದಂತಹ ದೇಶ ಸ್ವತಂತ್ರ ಅರ್ಥವ್ಯವಸ್ಥೆಯ ನೆಪದಲ್ಲಿ ತನ್ನ ದೇಶದ ಒಳಗೂ ಕಾಯ್ದೆಕಾನೂನುಗಳನ್ನು ಮತ್ತೂ ಸಡಿಲಿಸಿಕೊಂಡಿತು. ಮೊದಮೊದಲು ಎಲ್ಲಾ ಚೆನ್ನಾಗಿತ್ತು. ಆದರೆ ಈ ಹೊಸ ಶತಮಾನದಲ್ಲಿ ಪಾತ್ರಗಳು ಬದಲಾಗುತ್ತಿವೆ. ವಿದೇಶಗಳ ಅಗ್ಗದ ಸಾಮಾನುಗಳನ್ನು ಕೊಳ್ಳುವ ಭರದಲ್ಲಿ ಮುಂದುವರೆದ ದೇಶಗಳ ಕಾರ್ಖಾನೆಗಳು ಮುಚ್ಚುತ್ತ ಬಂದವು. ಕಳೆದ ನಾಲ್ಕೈದು ವರ್ಷಗಳಿಂದ ಆಗುತ್ತಿರುವ ಬದಲಾವಣೆಗಳನ್ನೆ ನೋಡಿ. ಜಾಗತೀಕರಣದ ಪ್ರಬಲ ಬೆಂಬಲಿಗನಾಗಿದ್ದ ಅಮೆರಿಕ ಈಗ ತನಗೆ ಅನುಕೂಲವಾಗಿಲ್ಲದ ಈ ಸಮಯದಲ್ಲಿ ಜಾಗತೀಕರಣದ ವಿರೋಧಿಯಾಗುತ್ತ ನಡೆದಿದೆ. ಆರ್ಥಿಕ ಕ್ಷೇತ್ರ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂದು ಭಾರತ-ಚೀನಾಗಳಂತಹ ದೇಶಗಳ ಮೇಲೆ ಒತ್ತಡ ಹೇರುತ್ತ ಬಂದ ದೇಶ ಈಗ ಒಂದು ವಾರದಿಂದ ಆ ದೇಶದ ಆರ್ಥಿಕ ಕ್ಷೇತ್ರವನ್ನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ, “ಸಮಾಜವಾದಿ” ದೇಶವಾಗುವತ್ತ ಹೊರಟಿದೆ.
ಯುದ್ಧಸಂಬಂಧಿ ಲೇಖನದಲ್ಲಿ ಈ ಆರ್ಥಿಕ ವಿಷಯಗಳ ಹಿನ್ನೆಲೆ ಯಾಕೆ ಎಂದು ನಿಮಗೆ ಈಗಾಗಲೆ ಅನ್ನಿಸಿರಬಹುದು. ಆದಕ್ಕೆ ಉತ್ತರವಾಗಿ ಕಳೆದ ಶತಮಾನದ ಎರಡು ವಿಶ್ವಯುದ್ಧಗಳಿಗೂ ಹಿನ್ನೆಲೆಯಾಗಿ ಇದ್ದದ್ದು ಆರ್ಥಿಕ ವಿಷಯಗಳೆ ಎನ್ನುವುದರತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಮೊದಲ ಮಹಾಯುದ್ಧ ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಳ್ಳಲು ಕಾರಣವಾಗಿದ್ದು ಜರ್ಮನಿ ಮತ್ತು ಬ್ರಿಟನ್‌ಗಳ ಆರ್ಥಿಕ ಸಾರ್ವಭೌಮತ್ವದ ಹಂಬಲ. ಕಳೆದ ಶತಮಾನದ ಆರಂಭದಲ್ಲಿ ಕೈಗಾರಿಕೀಕರಣದಿಂದ ಜರ್ಮನಿ ಶ್ರೀಮಂತವಾಗುತ್ತ ನಡೆದಿತ್ತು. ಆದರೆ ಅದಕ್ಕೆ ಆಗಿನ ನಂಬರ್ ಒನ್ ರಾಷ್ಟ್ರ ಬ್ರಿಟನ್‌ಗಿದ್ದಷ್ಟು ದೊಡ್ಡ ಗಾತ್ರದ ಸಾಮ್ರಾಜ್ಯವಿರಲಿಲ್ಲ. ತನ್ನ ದೇಶದ ಹೊರಗೂ ತನ್ನ ಆರ್ಥಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆಂಬ ಜರ್ಮನಿಯ ತುಡಿತವೆ ಸಣ್ಣವಿಷಯವೊಂದನ್ನು ಮುಂದಿಟ್ಟುಕೊಂಡು ಯೂರೋಪಿನ ರಾಷ್ಟ್ರಗಳು ಒಬ್ಬರ ಮೇಲೆ ಒಬ್ಬರು ಯುದ್ಧ ಸಾರಲು ನೆಪವಾಯಿತು. ನಾಲ್ಕು ವರ್ಷಗಳ ಆ ಯುದ್ಧ ನಾಲ್ಕು ಕೋಟಿ ಜನರ ಜೀವ ನುಂಗಿತು!
ಮೊದಲ ಯುದ್ಧವನ್ನು ಸೋತ ಜರ್ಮನಿ ಮತ್ತೆ ಹಿಟ್ಲರ್‌ನ ಮೂಲಕ ಆರ್ಥಿಕ ಸ್ಥಿರತೆ ಪಡೆದುಕೊಂಡಿತು. ಆ ಆರ್ಥಿಕ ಶ್ರಿಮಂತಿಕೆಯಿಂದ ಬಲಪಡೆದುಕೊಂಡ ಹಿಟ್ಲರ್‌ನ ಕೋಮುವಾದ ಸಾಮ್ರಾಜ್ಯಶಾಹಿಯಾಗುವತ್ತ ನಡೆಯಿತು. ಆದರೆ ಅಷ್ಟೊತ್ತಿಗೆ ವಿಶ್ವದ ಬಹುಪಾಲು ಕಡೆ ತನ್ನ ವಸಾಹುತಗಳನ್ನು ಹೊಂದಿದ್ದ ಸೂಪರ್ ಪವರ್ ಬ್ರಿಟನ್‌ಗೆ ಹಿಟ್ಲರ್‌ನ ವಸಾಹುತುಶಾಹಿಯನ್ನು ವಿರೋಧಿಸುವ ನೈತಿಕ ಬಲ ಇರಲಿಲ್ಲ. ಅದೇ ಸಮಯದಲ್ಲಿ ಅದರ ಆರ್ಥಿಕ ಬಲವೂ ಕ್ಷೀಣಿಸುತ್ತ ಬಂದಿತ್ತು. ತಮ್ಮ ಗತಕಾಲದ ಸಾಮ್ರಾಜ್ಯಶಾಹಿ ಹಿರಿಮೆಯನ್ನು ಪಡೆದುಕೊಳ್ಳಲು ಹಪಹಪಿಸಿದ ನವಶ್ರೀಮಂತ ಇಟಲಿ ಮತ್ತು ಜಪಾನ್‌ಗಳು ಜರ್ಮನಿಯ ಸಂಗಾತಿಗಳಾದರು. ಅಮೆರಿಕವನ್ನು ಬಿಟ್ಟರೆ ಬ್ರಿಟನ್-ಫ್ರಾನ್ಸ್‌ಗಳು ವಸಾಹುತುಶಾಹಿಯನ್ನು ಎದುರಿಸುವ ನೈತಿಕ ಸ್ಥಿತಿಯಲ್ಲಿ ಇರಲಿಲ್ಲ. ಆಗ ಅವರಿಗಿದ್ದ ಒಂದೇ ನೈತಿಕ ಬಲ ಎಂದರೆ ತಮ್ಮ ದೇಶಗಳ ಸ್ವತಂತ್ರ ಆಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ಹಿಟ್ಲರ್‌ನ ಜನಾಂಗೀಯ ಬರ್ಬರತೆಯನ್ನು ನಿಲ್ಲಿಸುವ ಮಾನವೀಯ ಕಾರಣಗಳು ಮಾತ್ರ.
ಎರಡನೆಯ ವಿಶ್ವಯುದ್ಧದ ನಂತರದ ಶೀತಲಸಮರ ಅಮೆರಿಕ ನಾಯಕತ್ವದ ಪ್ರಜಾಪ್ರಭುತ್ವವಾದಿ ದೇಶಗಳನ್ನು ಮತ್ತು ಸೋವಿಯತ್ ನೇತೃತ್ವದ ಕಮ್ಯುನಿಸ್ಟ್ ದೇಶಗಳನ್ನು ಹಲವಾರು ಸಲ ವಿಶ್ವಸಮರದ ಅಂಚಿಗೆ ತಂದು ನಿಲ್ಲಿಸಿದ್ದಿದೆ. ಆದರೆ, ಜಾನ್ ಕೆನ್ನೆಡಿಯಂತಹ ನಾಯಕರು ತಮ್ಮ ದೇಶದೆಡೆಗಿನ ತೀವ್ರ ಕಾಳಜಿಯಿಂದ ಅದನ್ನು ಭಂಗಗೊಳಿಸಿದ್ದಿದೆ. ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ದೇಶದ ಸೇನಾಧಿಕಾರಿಗಳು ರಷ್ಯಾದ ಮೇಲೆ ಯುದ್ಧಕ್ಕೆ ಹಾತೊರೆಯುತ್ತಿದ್ದಾಗ ಕೆನ್ನೆಡಿ ಅವರಿಗೆ ಮೊದಲ ವಿಶ್ವಯುದ್ಧ ಎಂತಹ ಸಣ್ಣ ತಪ್ಪಿನಿಂದ ಪ್ರಚೋದನೆಗೊಂಡಿತು ಎಂಬುದನ್ನು ವಿವರಿಸುವ ಪುಸ್ತಕ ಓದಲು ಕೊಟ್ಟಿದ್ದನಂತೆ.
ಈಗ ಶೀತಲಸಮರ ಇಲ್ಲ. ಆದರೆ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಜಾಗತಿಕ ರಾಷ್ಟ್ರಗಳು ಯಾವ ತರಹದ ನೈತಿಕ ಬಲಹೀನತೆ ಮತ್ತು ಯುದ್ಧಕ್ಕೆ ಹೋಗಬೇಕಾದ ಹೆದರಿಕೆಗಳಿಂದ ಕೂಡಿದ್ದವೊ ಅಂತಹುದೆ ಸಂದರ್ಭ ಈಗ ಕೂಡಿಬರುತ್ತ ಇದೆ. ಈ ಬಾರಿ ಜರ್ಮನಿ-ಇಟಲಿ-ಜಪಾನ್‌ಗಳ ಪಾತ್ರವನ್ನು ರಷ್ಯ, ಚೀನಾ, ಇರಾನ್‌ಗಳು ವಹಿಸುವ ಸಾಧ್ಯತೆಗಳಿವೆ. 1991 ರಿಂದ ಜಾಗತಿಕ ರಂಗದಲ್ಲಿ ಪರ್ಯಾಯ ನಾಯಕತ್ವವನ್ನು ಕಳೆದುಕೊಂಡ ಪರಿಣಾಮವಾಗಿ ರಷ್ಯ ಅನುಭವಿಸುತ್ತಿರುವ ಕೀಳರಿಮೆ ಎರಡನೆ ವಿಶ್ವಯುದ್ಧದ ಜರ್ಮನಿ-ಜಪಾನ್‌ಗಳ ಕೀಳರಿಮೆಯನ್ನು ನೆನಪಿಸುತ್ತಿದೆ. ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಲ್ಲಿ ಜಾತ್ಯತೀತ ಪ್ರಜಾಪ್ರಭುತ್ವವನ್ನು ಹರಡುವ ಒಳ್ಳೆಯ ಕಾರಣದ ಬದಲು ದುರ್ಬಲ ಕಾರಣ ಕೊಟ್ಟು ಇರಾಕ್ ಅನ್ನು ಆಕ್ರಮಿಸಿದ ಅಮೆರಿಕದ ಕೃತ್ಯ ಬ್ರಿಟನ್ ಸಿಕ್ಕಿಹಾಕಿಕೊಂಡಿದ್ದ ಗೊಜಲುಗಳಿಗೆ ಸಮವಾಗಿದೆ. ಇದು, ತನ್ನ ಸುಪರ್ದಿಯಲ್ಲಿದ್ದ ಹಳೆಯ ರಾಷ್ಟ್ರಗಳನ್ನು ಮತ್ತೆ ಆಕ್ರಮಿಸಿಕೊಳ್ಳಲು ನೋಡುತ್ತಿರುವ ರಷ್ಯಾದ ಪ್ರಯತ್ನಕ್ಕೆ ಇಂಬು ನೀಡುತ್ತಿದೆ. ಇನ್ನು, ಯಹೂದಿ ಜನಾಂಗದ ವಿರುದ್ಧ ಇರಾನಿನ ಅಧ್ಯಕ್ಷ ಆಡುತ್ತಿರುವ ಮಾತುಗಳು ಹಿಟ್ಲರ್‌ನ ಜನಾಂಗದ್ವೇಷದ ಪ್ರತಿರೂಪವಾಗಿ, ಯಹೂದಿ-ಕ್ರಿಶ್ಚಿಯನ್ನರ ವಿರುದ್ಧ ಕಂದಾಚಾರಿ ಮುಸ್ಲಿಮ್ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ. ಪೆಟ್ರೋಲಿನ ಮೇಲಿನ ಅಮೆರಿಕ ಮತ್ತು ಯೂರೋಪು ರಾಷ್ಟ್ರಗಳ ಅತೀವ ಅವಲಂಬನೆ ಮತ್ತು ಚೀನಾ-ಭಾರತಕ್ಕಿರುವ ತೈಲದ ಅವಶ್ಯಕತೆ ಇರಾನ್, ರಷ್ಯಾ, ವೆನಿಜುವೇಲಗಳ ಧಮಕಿಯನ್ನು ನೋಡಿಯೂ ನೋಡದಂತೆ ಇದ್ದುಬಿಡಲು ವಿಶ್ವರಾಷ್ಟ್ರಗಳನ್ನು ಪ್ರೇರೇಪಿಸುತ್ತಿದೆ.
ಇದೇ ಸಂದರ್ಭದಲ್ಲಿ, ಕ್ಷೀಣಿಸುತ್ತಿರುವ ಅಮೆರಿಕದ ಆರ್ಥಿಕ ಸಾರ್ವಭೌಮತ್ವ ಯುದ್ಧಕ್ಕೆ ಕಾಲುಕೆರೆದು ನಿಲ್ಲುವ ದೇಶಗಳಿಗೆ ಯುದ್ಧ ಬೇಡವೆಂದು ಹೇಳುವ ಅದರ ಪ್ರಭಾವವನ್ನು ಗಣನೀಯವಾಗಿ ಇಲ್ಲವಾಗಿಸುತ್ತಿದೆ. ಏಳು ವರ್ಷಗಳ ಹಿಂದೆ ದೆಹಲಿಯ ಪಾರ್ಲಿಮೆಂಟ್ ಭವನದ ಮೇಲೆ ಜಿಹಾದಿ ಭಯೋತ್ಪಾದಕರ ದಾಳಿಯ ನಂತರದ ಘಟನೆಯನ್ನೆ ನೆನಪಿಸಿಕೊಳ್ಳಿ. ಆಗ ಭಾರತ ಮತ್ತು ಪಾಕಿಸ್ತಾನಗಳೆರಡೂ ಗಡಿಯಲ್ಲಿ ಸೇನಾ ಜಮಾವಣೆ ಮಾಡಿಕೊಂಡು ಯುದ್ಧಘೋಷಕ್ಕೆ ಸಮಯ ನೋಡುತ್ತಿದ್ದರು. ಆದರೆ ಆಗ ಯಾರೊಬ್ಬರೂ ಯುದ್ಧಘೋಷ ಮಾಡದಂತೆ ತಡೆದದ್ದು ಅಮೆರಿಕ ಮತ್ತು ಹಲವರ ಆರ್ಥಿಕ ಹಿತಾಸಕ್ತಿಗಳು.
ಆ ಸೇನಾಜಮಾವಣೆಗೆ ಮೂರು ತಿಂಗಳ ಹಿಂದಷ್ಟೆ ಆಲ್‌ಖೈದಾ ಮತಾಂಧರು ಅಮೆರಿಕದ ಮೇಲೆ ದಾಳಿ ಮಾಡಿದ್ದರು. ತನ್ನ ದೇಶದ ಜನರ ಸ್ಥೈರ್ಯ ಕ್ಷೀಣಿಸಿ ಅದು ಆರ್ಥಿಕತೆಯ ಮೇಲೆ ಕೆಟ್ಟಪ್ರಭಾವ ಬೀರುವುದನ್ನು ಅಮೆರಿಕ ತಡೆಯಬೇಕಿತ್ತು. ಆಗ ಅದು ಇನ್ನೂ ಜಾಗತೀಕರಣದ ಲಾಭಗಳನ್ನು ಸವಿಯುತ್ತಿತ್ತು. ಭಾರತದಲ್ಲಿ ಅಮೆರಿಕದ ಅನೇಕ ಕಂಪನಿಗಳು ಹಣಹೂಡಿದ್ದವು. ಭಾರತ ಮತ್ತು ಪಾಕಿಸ್ತಾನ ಯುದ್ಧ ಆರಂಭವಾದರೆ ಈ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆಗಳಿದ್ದವು. ಅತ್ತ ಪಾಕಿಸ್ತಾನದ ಸ್ನೇಹವನ್ನು ಕಳೆದುಕೊಳ್ಳುವ ಮತ್ತು ಇತ್ತ ಭಾರತದ ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಅಮೆರಿಕ ಇರಲಿಲ್ಲ. ಅಮೆರಿಕಕ್ಕಷ್ಟೇ ಅಲ್ಲದೆ ಇತರ ಅನೇಕ ವಿಶ್ವರಾಷ್ಟ್ರಗಳಿಗೂ ಆ ಯುದ್ಧದಿಂದ ನಷ್ಟವಿತ್ತು. ಇನ್ನು ಆಗತಾನೆ ಪ್ರಾರಂಭವಾಗಿದ್ದ ತನ್ನ ಆರ್ಥಿಕ ಬೆಳವಣಿಗೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಭಾರತವೂ ಇರಲಿಲ್ಲ. ಹಾಗಾಗಿ ಅಮೆರಿಕ ಮತ್ತಿತರ ರಾಷ್ಟ್ರಗಳು ಭಾರತ-ಪಾಕಿಸ್ತಾನಗಳೆರಡರ ಮೇಲೂ ಒತ್ತಡ ಹೇರಿದವು. ತನ್ನದೇ ಆರ್ಥಿಕ ಕಾರಣಗಳಿಗಾಗಿ ಭಾರತ ಆ ಮಾತಿಗೆ ಕಿವಿಗೊಟ್ಟಿತು. ಯುದ್ಧಕ್ಕೆ ಹೋಗಲು ಯಾವುದೇ ನೈತಿಕ ಬಲವಾಗಲಿ, ಅಮೆರಿಕದ ಬೆಂಬಲವಾಗಲಿ ಇಲ್ಲದಿದ್ದ ಪಾಕಿಸ್ತಾನವೂ ಸುಮ್ಮನಾಯಿತು.
ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಜನೊಬ್ಬನ ಪ್ರಕಾರ ಅಮೆರಿಕದ ಆರ್ಥಿಕ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಘಟನೆಗಳು “ಶತಮಾನಕ್ಕೊಮ್ಮೆ ಘಟಿಸುವ” ಘಟನೆಗಳು. ಈ ದೇಶದ ಆಂತರಿಕ ಅರ್ಥವ್ಯವಸ್ಥೆಯೆ ಕುಸಿದು ಹೋಗುವ ವಿದ್ಯಮಾನಗಳು ಇಲ್ಲಿ ನಡೆಯುತ್ತಿವೆ. ತನ್ನ ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡಿಕೊಳ್ಳಲು “ಮುಕ್ತ ಅರ್ಥವ್ಯವಸ್ಥೆ”ಯ ಅಮೆರಿಕದ ಸರ್ಕಾರ “ಸುಮಾರು 32 ಲಕ್ಷ ಕೋಟಿ ರೂಪಾಯಿ”ಗಳನ್ನು ಹೂಡಿ “ನಿಯಂತ್ರಿತ ಅರ್ಥವ್ಯವಸ್ಥೆ”ಯತ್ತ ನಡೆದಿದೆ. ಇದಕ್ಕೆ ದುಡ್ಡು ಹೊಂಚಲು ತನ್ನ ವಿದೇಶಾಂಗ ನೀತಿಯಲ್ಲಿ ಅಮೆರಿಕ ಯಾವಯಾವ ರಾಜಿಗಳನ್ನು ಮಾಡಿಕೊಳ್ಳುತ್ತದೆ ಎನ್ನುವುದೂ ಸಹ ವಿಶ್ವದ ಭವಿಷ್ಯವನ್ನು ನಿರ್ಧರಿಸುತ್ತದೆ. ಈಗಾಗಲೆ ಯಾವುದೇ ಬಾಧ್ಯತೆಯನ್ನು ತೋರಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ರಷ್ಯಾ ಕೆಲವು ದುಷ್ಟ ರಾಷ್ಟ್ರಗಳಿಗೆ ಆಯುಧಗಳನ್ನು ಮಾರಲು ಆರಂಭಿಸಬಹುದು. ಅಮೆರಿಕವೂ ಅದನ್ನೆ ಮಾಡಬಹುದು. ಇನ್ನು ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ ಯಾವುದೆ ಪ್ರಬುದ್ಧತೆ ಮತ್ತು ನೈತಿಕ ನಾಯಕತ್ವ ನೀಡಿಲ್ಲದ ಚೀನಾ ತನ್ನ ಪ್ರಭಾವ ಮತ್ತು ಹತೋಟಿ ವಿಸ್ತರಿಸಿಕೊಳ್ಳುವ ಕೆಲಸಕ್ಕೆ ಕೈಹಾಕಬಹುದು.
ವಿಶ್ವಕ್ಕೆ ನೈತಿಕ ನಾಯಕತ್ವ ನೀಡುವ ನಿಟ್ಟಿನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷರುಗಳ ಬಗ್ಗೆಯೂ ನಂಬಿಕೆ ಇಡುವುದು ಕಷ್ಟವಾಗುತ್ತಿದೆ. ಎಲ್ಲಕ್ಕೂ ಬಲ ಮತ್ತು ಯುದ್ಧವೆ ಪರಿಹಾರ ಎನ್ನುವ ಮೆಕೈನ್-ಪೇಲಿನ್‌ರ ನಾಯಕತ್ವ ಪರಿಸ್ಥಿತಿಯನ್ನು ಮತ್ತೂ ಹದಗೆಡಿಸಿದರೆ ಮಾತುಕತೆ-ರಾಯಭಾರ ಎನ್ನುವ ಒಬಾಮ-ಬೈಡೆನ್ ನಾಯಕತ್ವ ಕೆಲವು ರೌಡಿ ರಾಷ್ಟ್ರಗಳ ಗೂಂಡಾಗಿರಿಗೆ ಹಾದಿ ನೀಡಬಹುದು. ಇವೆಲ್ಲವೂ ಬರಲಿರುವ ದಿನಗಳಲ್ಲಿ ಜಾಗತಿಕ ರಂಗದಲ್ಲಿ ಅರಾಜಕತ್ವ ಮತ್ತು ಯುದ್ಧದ ಕಾರ್ಮೋಡಗಳು ಕವಿಯಬಲ್ಲ ಸಾಧ್ಯತೆಗಳನ್ನು ತೋರಿಸುತ್ತಿದೆ.
ಆದರೆ ಇವೇ ಕಾರಣಗಳು ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆ ಮತ್ತು ಭಾರತದ ಪಾತ್ರಗಳನ್ನೂ, ಅವುಗಳ ನೈತಿಕ ನಾಯಕತ್ವವನ್ನೂ ವಿಸ್ತರಿಸಬಹುದು. ಆದರೆ ಸ್ವತಃ ಹುಸಿ-ರಾಷ್ಟ್ರೀಯವಾದಿಗಳ ಮತ್ತು ಉಗ್ರ-ಕೋಮುವಾದಿಗಳ ಕೈಗೆ ಜಾರುತ್ತಿರುವ ಭಾರತ ಆ ಮಟ್ಟದ ಬೌದ್ಧಿಕ ಮತ್ತು ನೈತಿಕ ನಾಯಕತ್ವ ನೀಡಬಲ್ಲುದೆ ಎನ್ನುವುದು ಸಂದೇಹದ ವಿಷಯ. ಛೇ, ಈ ಸಂದರ್ಭದಲ್ಲಿ ನೈತಿಕ ಮತ್ತು ಬೌದ್ಧಿಕ ಧೀಮಂತಿಕೆಯ ನೆಹರೂ ಇರಬೇಕಿತ್ತು. ವಿಶ್ವಕ್ಕೆ ನಾಯಕತ್ವ ನೀಡಬಹುದಾಗಿದ್ದ “ರಾಜರ್ಷಿ” (Philosopher King) ಅವರು.