Sorry, we are letting you go…

This post was written by admin on October 9, 2008
Posted Under: Uncategorized

ಊಫ್… ಮತ್ತೆ ಇನ್ನೊಂದು ದಿನ (ಅಕ್ಟೋಬರ್ 9, 08) ಅಮೆರಿಕದ ವಾಲ್ ಸ್ಟ್ರೀಟ್ ಭಯಂಕರವಾಗಿ ಬಿತ್ತು. ಕೊನೆಯ ಒಂದು ಗಂಟೆಯಲ್ಲಿ 450 ಪಾಯಿಂಟ್‌ಗಳ free fall! ಇದು ನಮ್ಮ ಕಾಲದ global meltdown. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಹೊಸ ದಿನಗಳತ್ತ ಹೆಜ್ಜೆ ಇಡುತ್ತಿದೆ ವಿಶ್ವ ವ್ಯವಸ್ಥೆ.

ಕಳೆದ ತಿಂಗಳ ಕೊನೆಯಲ್ಲಿ ಪತ್ರಿಕೆಯೊಂದು “ಅಮೆರಿಕದ ಆರ್ಥಿಕ ಸಮಸ್ಯೆಗಳು ಮತ್ತು ಅದು ಭಾರತದ ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುವವರ ಮೇಲಿನ ಪ್ರಭಾವ”ದ ಬಗ್ಗೆ ಅಭಿಪ್ರಾಯ ಕೇಳಿದ್ದರು. ಅದಕ್ಕೆ ಒಂದು ಚಿಕ್ಕ ಟಿಪ್ಪಣಿಯನ್ನು ಸುಮಾರು ಏಳೆಂಟು ದಿನಗಳ ಹಿಂದೆ ಕಳುಹಿಸಿದ್ದೆ. ಅದು ಹೀಗಿತ್ತು:

ಇತ್ತೀಚಿನ ವಾರಗಳಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಸಂಭವಿಸಿದ ಘಟನೆಗಳು ಭಾರತದ ಬಿಪಿಒ ರಂಗಕ್ಕೆ ನಿಜಕ್ಕೂ ಕೆಟ್ಟ ಸುದ್ದಿಯೆ. ಜೊತೆಗೆ, ಇದರ ಪರಿಣಾಮಗಳೂ ಸಹ ಅಲ್ಪಕಾಲಿಕವೇನಲ್ಲ. ಭಾರತದ ಐಟಿ ರಂಗಕ್ಕೆ ಇದರ ಭೀಕರತೆ ತಟ್ಟಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯ ಹಿಡಿಯಬಹುದು ಮತ್ತು ಅದು ಅಷ್ಟೇನೂ ದಾರುಣವಾಗಿರದೆ ಇರಬಹುದು. ಯಾಕೆಂದರೆ ಸಾಫ್ಟ್‌ವೇರ್ ಇವತ್ತು ಒಂದು ರೀತಿಯಲ್ಲಿ ನಿತ್ಯುಪಯೋಗಿ ವಸ್ತು. ಹಾಗಾಗಿ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅದನ್ನೆ ನಾವು ಬಿಪಿಒಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ಬಿಪಿಒಗಳ ಅವಶ್ಯಕತೆ ಇರುವುದೆ ಗ್ರಾಹಕ ಸಂಸ್ಕೃತಿಯಲ್ಲಿ. ಇವತ್ತಿನ ಅಮೆರಿಕನ್ ಗ್ರಾಹಕ ನಿಜಕ್ಕೂ ಸಂಕಷ್ಟದತ್ತ ಜಾರುತ್ತಿದ್ದಾನೆ.

ಲೆಹ್ಮನ್ ಬ್ರದರ್ಸ್, ವಾಷಿಂಗ್ಟನ್ ಮ್ಯೂಚುಯಲ್, ವಾಕೊವಿಯ ಮುಂತಾದ ಅಮೆರಿಕದ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಕಣ್ಣುಮುಚ್ಚಿಕೊಂಡದ್ದು ಇಲ್ಲವೆ ದಿವಾಳಿಯಾಗಿ ಬೇರೆ ಕಂಪನಿಗಳಿಗೆ ಮಾರಾಟವಾಗಿದ್ದು ಇಲ್ಲಿ ಹಣಕಾಸಿನ ಮುಗ್ಗಟ್ಟನ್ನು ತಂಡೊಡ್ಡಿದೆ. ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅರ್ಥವ್ಯವಸ್ಥೆ ಸಹ ಇದಕ್ಕೆ ಸಹಾಯ ಮಾಡುತ್ತಿದೆ. ಕಂಪನಿಗಳು ಮಾತ್ರವಲ್ಲದೆ ಜನರೂ ಸಹ ಈಗ ಹಣದ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಅವರ ಖರ್ಚು ಮಾಡುವ ತಾಕತ್ತು ದಿನೆದಿನೆ ಕಮ್ಮಿಯಾಗುತ್ತಿದೆ. ಸಾಲ ಸಿಗುವುದೂ ಕಷ್ಟವಾಗುತ್ತಿದೆ. ಇದೇ ಕಾರಣಕ್ಕಾಗಿ ಇಲ್ಲಿಯ ಆಟೊಮೊಬೈಲ್ ಇಂಡಸ್ಟ್ರಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 30 ರಷ್ಟು ಕಮ್ಮಿ ವ್ಯಾಪಾರ ಕಾಣುವಂತಾಗಿದೆ. ಇನ್ನು ಇಲ್ಲಿ ಶುರುವಾಗಲಿರುವ ಹಾಲಿಡೆ ಶಾಪ್ಪಿಂಗ್ ಸೀಸನ್ ಸಹ ಕಳೆದ 30 ವರ್ಷಗಳಲ್ಲಿಯೆ ಕೆಟ್ಟದಾದ ಸೀಸನ್ ಆಗಲಿದೆ ಎಂದು ಅರ್ಥತಜ್ಞರು ಹೇಳುತ್ತಿದ್ದಾರೆ.

ಇವೆಲ್ಲವೂ ಅಮೆರಿಕದ ಗ್ರಾಹಕ ಸಂಸ್ಕೃತಿಯಿಂದಾಗಿ ಬೆಳೆದ ಮತ್ತು ಅವರಿಗೆ ಸೇವೆ ಸಲ್ಲಿಸಲೆಂದೆ ಹುಟ್ಟಿಕೊಂಡ ಭಾರತದ ಬಿಪಿಒ ಉದ್ಯಮಕ್ಕೆ ಈಗಿರುವುದಕ್ಕಿಂತ ಹೆಚ್ಚಿನ ಬೇಡಿಕೆ ತರುವುದಿಲ್ಲ. ಇಲ್ಲಿಯ ಜನ ಹೊಸಹೊಸ ಸಾಮಗ್ರಿಗಳನ್ನು ಕೊಳ್ಳುವುದು ಕಡಿಮೆ ಮಾಡಿದಷ್ಟೂ ಅವುಗಳ ಬಗ್ಗೆ ಕಾಲ್ ಸೆಂಟರ್‌ಗಳಿಗೆ ಕಾಲ್ ಮಾಡುವ ಸಾಧ್ಯತೆಯೂ ಕಮ್ಮಿಯಾಗುತ್ತ ಹೋಗುತ್ತದೆ. ಅಮೆರಿಕದ ಸಾಮಾನ್ಯ ಪ್ರಜೆ ಮತ್ತೆ ಖರ್ಚು ಮಾಡಲು ಆರಂಭಿಸುವ ದಿನಗಳೂ ಹತ್ತಿರದಲ್ಲಿಲ್ಲ. ನಿರುದ್ಯೋಗ ಬೇರೆ ಹೆಚ್ಚುತ್ತ ಹೋಗುತ್ತಿದೆ. ದೊಡ್ಡ ಮಟ್ಟದ ಲೇಯಾಫ್‌ಗಳನ್ನೂ ಸಹ ಇನ್ನು ನಿರೀಕ್ಷಿಸಬಹುದು.

ಇದೆಲ್ಲದರ ಪರಿಣಾಮದಿಂದಾಗಿ ಇನ್ನು ಮುಂದಕ್ಕೆ ಅಮೆರಿಕದ ವಾಣಿಜ್ಯ ನೀತಿಗಳೂ ಬದಲಾಗಲಿವೆ. ಈಗಾಗಲೆ ಸರ್ಕಾರ ಒಂದು ಹಂತದ ರಾಷ್ಟ್ರೀಕರಣಕ್ಕೆ ಮುಂದಾಗಿದೆ. ಇದು ಅಮೆರಿಕದ ಹಲವಾರು ಉದ್ದಿಮೆಗಳ ಮೇಲೆ ಅಮೆರಿಕದ ರಾಜಕಾರಣಿಗಳ ಹತೋಟಿಯನ್ನು ಹೆಚ್ಚಿಸಲಿದೆ. ಈ ರಾಜಕಾರಣಿಗಳ ಮುಂದಿನ ಗುರಿ ಆದಷ್ಟು ಹೆಚ್ಚಿನ ಉದ್ಯೋಗಗಳನ್ನು ಇಲ್ಲಿಯೇ ಸೃಷ್ಟಿಸುವುದು ಮತ್ತು ಈಗಾಗಲೆ ಹೊರಕ್ಕೆ ಹೋಗುತ್ತಿರುವ ಉದ್ಯೋಗಗಳಿಗೆ ಕಡಿವಾಣ ಹಾಕುವುದು. ಇವೆಲ್ಲವೂ ಅಮೆರಿಕದ ಔಟ್‌ಸೋರ್ಸಿಂಗ್‌ನಿಂದಾಗಿ ಲಾಭ ಪಡೆಯಲಾರಂಭಿಸಿದ್ದ ಭಾರತಕ್ಕೆ ಮಾತ್ರವಲ್ಲದೆ, ಚೀನಾ, ತೈವಾನ್, ಮಲೇಷಿಯಾಗಳಂತಹ ದೇಶಗಳಿಗೂ ಕೆಟ್ಟ ಸುದ್ಧಿ.

ಮೊದಲೆ ಹೇಳಿದಂತೆ ಭಾರತದ ಸಾಪ್ಟ್‌ವೇರ್ ಉದ್ಯಮಕ್ಕಿಂತ ಬಿಪಿಒ ಉದ್ಯಮಕ್ಕೆ ಇದರ ಪೆಟ್ಟು ಹೆಚ್ಚು. ಈಗಾಗಲೆ ಒಂದು ಹಂತದ ಪ್ರಬುದ್ಧತೆ ಮುಟ್ಟಿಕೊಂಡಿರುವ ಐಟಿ ಉದ್ಯಮ ಈ ಸಂಕಷ್ಟದ ಸಮಯದಲ್ಲಿ ತನ್ನ ಖರ್ಚುವೆಚ್ಚಗಳನ್ನು ಕಮ್ಮಿ ಮಾಡಿಕೊಂಡು ಆಗಲೂ ಲಾಭದಲ್ಲೆ ಇರಲು ಸಾಧ್ಯವಾಗಬಹುದು. ಆದರೆ ಬಿಪಿಒ ರಂಗಕ್ಕೆ ಅಷ್ಟು ಮಾತ್ರದ ಲಕ್ಷುರಿ ಇಲ್ಲ. ಸದ್ದಿಲ್ಲದೆ ಇಲ್ಲಿ ಲೇಯಾಫ್‌ಗಳು ಶುರುವಾಗಬಹುದು. ದೊಡ್ಡ ಕಂಪನಿಗಳು ಚಿಕ್ಕ ಕಂಪನಿಗಳನ್ನು ಕೊಂಡುಕೊಂಡು ಅನಗತ್ಯವಾದ/ದುಬಾರಿ ಹುದ್ದೆಗಳನ್ನು ತೆಗೆಯಬಹುದು. ಇಂತಹ ಪರಿಸ್ಥಿತಿಗೆ ಆ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸಿದ್ಧವಾಗಬೇಕಾಗುತ್ತದೆ.

ಆದರೆ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ಒಂದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು- ಅದು, ಇವ್ಯಾವುದಕ್ಕೂ ಅವರು ಕಾರಣರಲ್ಲ. ಇದು ಮುಕ್ತ ಅರ್ಥವ್ಯವಸ್ಥೆಯಲ್ಲಿ ನಮ್ಮ ಹತೋಟಿ ಇಲ್ಲದೆ ಘಟಿಸುವ ಕೃತ್ಯಗಳು. ಉದ್ಯೋಗ ಖಾತರಿ ಇವತ್ತಿನ ಸಂದರ್ಭದಲ್ಲಿ ಶೂನ್ಯ. ನೌಕರಿ ಮತ್ತು ಸಂಪಾದನೆ ಸಮುದ್ರದಲ್ಲಿನ ಉಬ್ಬರಗಳ ಏರಿಳಿತದಂತೆಯೆ ಸಹಜವಾದದ್ದು. ಇದಕ್ಕೆ ಯುವಕರು ತಮ್ಮ ಅದೃಷ್ಟವನ್ನು ಹೀಯಾಳಿಸಿಕೊಳ್ಳುವುದಾಗಲಿ, ಪೋಷಕರು ಮಕ್ಕಳು ಏನೋ ತಪ್ಪು ಮಾಡಿದ್ದಾರೆ ಎಂದು ಭಾವಿಸುವುದಾಗಲಿ ಸಲ್ಲದು.

ಪರಿಸ್ಥಿತಿ ಹೀಗೆ ಒಂದೆರಡು ವರ್ಷಗಳಲ್ಲಿಯೆ ಮೇಲೇರುವುದು ಮತ್ತು ಕೆಳಗಿಳಿಯುವುದು ಭಾರತೀಯರಿಗೆ ಒಂದು ರೀತಿಯಲ್ಲಿ ಸಾಂಸ್ಕೃತಿಕ ಆಘಾತ. ಹಾಗಾಗಿ, ವಿಶೇಷವಾಗಿ ಪೋಷಕರು, ತಮ್ಮದಲ್ಲದ ತಪ್ಪಿಗೆ ಕೆಲಸ ಕಳೆದುಕೊಳ್ಳುವ ತಮ್ಮ ಮಕ್ಕಳಿಗೆ ಮನೋಧೈರ್ಯ ನೀಡಬೇಕು. ಸಾಧ್ಯವಾದರೆ ಅವರನ್ನು ಇನ್ನೂ ಹೆಚ್ಚಿನ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು. ಬೇರೆಬೇರೆ ರಂಗಗಳಲ್ಲಿ ಉದ್ಯೋಗ ಹುಡುಕುವಿಕೆಗೆ ಮತ್ತು ಪ್ರಯೋಗಶೀಲತೆಗೆ ಪ್ರೇರೇಪಿಸಬೇಕು. ನೌಕರಿ ಕಳೆದುಕೊಳ್ಳುವ ಯುವಜನಾಂಗವೂ ಅದೇ ರೀತಿ ಯೋಚಿಸಬೇಕು. ಯಾಕೆಂದರೆ ಮತ್ತೆ ಉದ್ಯೋಗಗಳು ಈ ರೂಪದಲ್ಲಲ್ಲವಾದರೂ ಇನ್ನೊಂದು ರೂಪದಲ್ಲಿ ಬಂದೇ ಬರುತ್ತವೆ. ಹಾಗೆ ಬಂದಾಗ ಈಗಾಗಲೆ ಉದ್ಯೋಗದ ಅನುಭವ ಇರುವ ಇವರು ಆ ಉದ್ಯೋಗಗಳನ್ನು ಪಡೆಯಲು ಮೊದಲ ಸಾಲಿನಲ್ಲಿ ಇರುತ್ತಾರೆ. ಭಾರತೀಯರಿಗೆ ಈ ಅನುಭವ ಹೊಸತಾದರೂ ಪಾಶ್ಚಾತ್ಯ ಪ್ರಪಂಚದಲ್ಲಿ ಇಂತಹವು ಕಳೆದ ಶತಮಾನದಲ್ಲಿ ಅನೇಕ ಬಾರಿ ಆಗಿಹೋಗಿದೆ.

ಮೊದಲೆ ಸಾಕಷ್ಟು ನೆಗೆಟಿವ್ ಇದ್ದ ಇದನ್ನು ಬರೆದ ಹತ್ತು ದಿನಗಳ ಒಳಗೇ ಮತ್ತೆ ಇನ್ನೂ ನೆಗೆಟಿವ್ ಆಗಿ ಬರೆಯಬೇಕಾಗಿ ಬಂದಿದೆ. ಯಾವ bailout ಆಗಲಿ, ಪ್ರಪಂಚದಾದ್ಯಂತದ ಕಂಪನಿಗಳ ಬಡ್ಡಿ ಕಡಿತವಾಗಲಿ ಜನ ತಮ್ಮ ಷೇರುಗಳನ್ನು ಕ್ಯಾಶ್ ಮಾಡಿಕೊಳ್ಳುವ ಅಥವ ಬ್ಯಾಂಕಿನಿಂದ ದುಡ್ಡು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುವ ಧಾವಂತವನ್ನು ಕಮ್ಮಿ ಮಾಡುತ್ತಿಲ್ಲ. ಇವತ್ತು ಅಮೆರಿಕದ ಎಷ್ಟೋ ಕಂಪನಿಗಳ ಬಳಿ ಇರುವ ನಗದು-ದುಡ್ಡು ಅವರ market capitalization ಗಿಂತ ಜಾಸ್ತಿ ಇದೆ ಎಂದರೆ ಅದು ಅಮೆರಿಕದ ಜನ ಸ್ಟಾಕ್‌ಗಳನ್ನು ಕ್ಯಾಶ್ ಮಾಡಿಕೊಳ್ಳುತ್ತಿರುವ ಬಯಕೆಯನ್ನು ಸೂಚಿಸುತ್ತದೆ. ಕೇವಲ ಐದೇ ತಿಂಗಳಿನಲ್ಲಿ ಸ್ಟಾಕ್ ಮಾರ್ಕೆಟ್‍ನಲ್ಲಿ ಹಣಹೂಡಿದ್ದ ಬಹುಪಾಲು ಜನ ತಮ್ಮ paper money ಮಾತ್ರವಲ್ಲದೆ ತಮ್ಮ ಕಷ್ಟಾರ್ಜಿತ ದುಡಿಮೆಯ ಶೇ. 40 ಕ್ಕೂ ಹೆಚ್ಚನ್ನು ಕಳೆದುಕೊಂಡಿದ್ದಾರೆ.

ಸುಮಾರು 7 ತಿಂಗಳ ಹಿಂದೆ “ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?” ಲೇಖನ ಬರೆದದ್ದು. ಆಗ ಅದು ಸಂದೇಹದ ಮುನ್ಸೂಚನೆ ಆಗಿದ್ದರೂ, ಇದೂ ಹೀಗೇ ಆಗುತ್ತದೆ ಎನ್ನುವ ಖಾತರಿ ಇರಲಿಲ್ಲ. ಆದರೆ ಈಗಿನ ವಸ್ತುಸ್ಥಿತಿ ಬೇರೆಯದೇ ಇದೆ. “ಇದು ಕಷ್ಟ ಕಾಲ” ಎಂದು ವರ್ಷಗಟ್ಟಲೆ ಹೇಳಿಸಿಕೊಳ್ಳುವ ದಿನಗಳಿವು.

ಬರಲಿರುವ ಮೂರು ತಿಂಗಳಂತೂ ಪಾಶ್ಚಾತ್ಯ ಜಗತ್ತಿನ ಬಹುತೇಕ ಕಂಪನಿಗಳಿಗೆ ಬಹಳ ಕಷ್ಟದ ದಿನಗಳು. ಈಗಾಗಲೆ ಭಯಭೀತರಾಗಿರುವ ಇಲ್ಲಿನ ಮಧ್ಯಮವರ್ಗದ ಹಬ್ಬದ ಸೀಸನ್‌ನಲ್ಲಿ ಅನಗತ್ಯವಾದದ್ದಕ್ಕೆ ಖರ್ಚು ಮಾಡದೆ, ಹಣದ ಚಲಾವಣೆಯನ್ನು ನಿಲ್ಲಿಸೇ ಬಿಡುವ ಸಾಧ್ಯತೆ ಇದೆ. ಕಳೆದ ನಾಲ್ಕೈದು ದಶಕಗಳಿಂದ ಅನಗತ್ಯವಾದ ಭೌತಿಕ ಸಾಮಾನುಗಳಿಗೆ ಹಣ ಹರಿಸೇ ಬೆಳೆದ ಸಮಾಜ ಇದು. ಹಣ ಖರ್ಚು ಮಾಡಿದಷ್ಟೂ ಮತ್ತೊಂದು ದಾರಿಯಿಂದ ಹಣ ಬರುತ್ತಿದ್ದ ಅರ್ಥವ್ಯವಸ್ಥೆ ಇದು. ಈಗ, ಖರ್ಚು ಮಾಡುವುದಿಲ್ಲ ಎಂದರೆ ಹಣ ಬರುವುದೂ ನಿಲ್ಲುತ್ತದೆ. (ಅಂದರೆ ಸುಲಭವಾಗಿ ಸಾಲ ಸಿಗುವುದಿಲ್ಲ, ನಿರುದ್ಯೋಗಿಗಳಿಗೆ ಬೇಗ ನೌಕರಿ ಸಿಗುವುದಿಲ್ಲ, ಈಗಾಗಲೆ ಕೆಲಸದಲ್ಲಿ ಇರುವವರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ – ಇವೆಲ್ಲದರಿಂದ ಮತ್ತದೆ ವರ್ತುಲ.)

ಜಾನ್ ಮೆಕೈನ್ ಎಂಬ ಅಮೆರಿಕದ ರಾಜಕಾರಣಿ “fundamentals of American economy are strong,” ಎಂದ. ಈಗ, ಒಂದೇ ತಿಂಗಳಿನಲ್ಲಿ ಅದೇ economy ಯ ಕಾರಣದಿಂದ ಆತ ಅಮೆರಿಕದ ಅಧ್ಯಕ್ಷನಾಗುವ ಎಲ್ಲಾ ಬಾಗಿಲುಗಳು ಮುಚ್ಚಿಕೊಂಡು ಬಿಟ್ಟಿವೆ. ಆದರೆ, ನನ್ನ ಪ್ರಕಾರ ಭಾರತದ economy ಗೆ ಅಷ್ಟು ತೊಂದರೆಯಿಲ್ಲ. ಈ ಜಾಗತಿಕ ಅಲ್ಲೋಲಕಲ್ಲೋಲಗಳಿಂದ ಭಾರತದ ಐಟಿ ಕಂಪನಿಗಳ ಗ್ಲಾಮರ್ ಕುಂದಿದರೂ ಮಿಕ್ಕ ಕ್ಷೇತ್ರಗಳಲ್ಲಿ ಭಾರತದ ಜನತೆಗೆ ಅದು ಅಷ್ಟಾಗಿ ತಟ್ಟುವ ಸಾಧ್ಯತೆ ಕಮ್ಮಿ. ಬೆಳವಣಿಗೆಯ ವೇಗ ನಿಧಾನವಾಗಬಹುದು. ಆದರೆ ಇಳಿಯುವ ಸಾಧ್ಯತೆ ಕಮ್ಮಿ. ಯಾಕೆಂದರೆ, ನಾವು ಎಂದೂ ಮೇಲೆ ಹೋಗಿರಲೇ ಇಲ್ಲ. ಮೇಲೆ ಹೋದವರು ಮಾತ್ರ ಇಳಿಯುತ್ತಿರುವ ಪ್ರಕ್ರಿಯೆ ಇದು.

ನನ್ನ ಅನಿಸಿಕೆಯ ಪ್ರಕಾರ, ಮುಂದಿನ ಒಂದು ವರ್ಷದಲ್ಲಿ ಭಾರತದಲ್ಲಿಯ ಅನೇಕ ಐಟಿ-ಬಿಪಿಒ ಕಂಪನಿಗಳು ಕಣ್ಮರೆಯಾಗಲಿವೆ. ಅಂದರೆ ಇವೆಲ್ಲ ದಿವಾಳಿಯಾಗಿ ಹೋಗಲಿವೆ ಅಂತಲ್ಲ. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಕೊಳ್ಳಲಿದ್ದಾರೆ, ಇಲ್ಲವೆ ಒಂದು ಇನ್ನೊಂದರ ಜೊತೆ ವಿಲೀನವಾಗಲಿವೆ. ಏರುವ ಖರ್ಚು ಮತ್ತು ಕಮ್ಮಿ ಆಗುವ ವರಮಾನ ಕಂಪನಿಯನ್ನು ನಷ್ಟಕ್ಕೆ ತಳ್ಳದಂತೆ ನೋಡಿಕೊಳ್ಳಲು ಕಂಪನಿಗಳು ಮಾಡುವ ಕೆಲಸ ಅದು. ಹಾಗೆ ಮಾಡುವುದರಿಂದ overlap ಆಗುವ ಇಲಾಖೆಗಳಲ್ಲಿ (HR/Payroll/Admin/Sales ಇತ್ಯಾದಿ) ಕೆಲಸ ಮಾಡುವವರ ಸಂಖ್ಯೆಯನ್ನು ಅರ್ಧಕ್ಕರ್ಧ ಇಳಿಸಿಕೊಂಡು, ಕಾಲಾಂತರದಲ್ಲಿ ಕಂಪನಿ ಬೆಳೆಯುವುದಷ್ಟೇ ಅಲ್ಲದೆ ಲಾಭದಲ್ಲೂ ಮುಂದುವರಿಯಬಹುದು. ಎರಡು ದಿನಗಳ ಹಿಂದೆ TCS ಸಿಟಿಬ್ಯಾಂಕ್ ಗ್ರೂಪಿನ e-Serve ಅನ್ನು ಕೊಂಡುಕೊಳ್ಳಲು ಕೇವಲ ಗ್ಯಾರಂಟೀಡ್ ಬ್ಯುಸಿನೆಸ್ ಮಾತ್ರ ಕಾರಣವಲ್ಲದೆ ಇದೂ ಒಂದು ಕಾರಣ. ಇಷ್ಟರಲ್ಲೆ, e-Serve ಕಂಪನಿಯಲ್ಲಿ ಮೇಲೆ ಹೇಳಿದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಇಂತಹುದು ಇನ್ನು ಮೇಲೆ ಹೆಚ್ಚಲಿದೆ.

ಕಂಪನಿಗಳು ತಮ್ಮ Quarterly ಫಲಿತಾಂಶಗಳನ್ನು ಬಿಡುಗಡೆ ಮಾಡುವ ಜಾತ್ರೆ ಇನ್ನೇನು ಮುಂದಿನ ವಾರದಿಂದ ಆರಂಭವಾಗಲಿದೆ. ಹಾಗೆಯೆ, ಮುಂದಿನ ತ್ರೈಮಾಸಿಕ ಹೇಗೆ ಇರುತ್ತದೆ ಎನ್ನುವುದರ ಮುನ್ಸೂಚನೆಯನ್ನೂ ಅವು ಕೊಡಲಿವೆ. ಅದರ ಜೊತೆಜೊತೆಗೆ, ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಮತ್ತು ಭಾರತದ ಐಟಿ-ಬಿಪಿಒ ಕಂಪನಿಗಳಲ್ಲಿ ಮ್ಯಾನೇಜರ್ ತನ್ನ ಕೈಕೆಳಗಿನ ನೌಕರನನ್ನು ಮೀಟಿಂಗ್ ರೂಮಿಗೆ ಕರೆದುಕೊಂಡು ಹೋಗಿ, “Sorry, we are letting you go!” ಎನ್ನುವ ದಿನಗಳೂ ಆರಂಭವಾಗಲಿವೆ. ಇದು ತಮಾಷೆಯಲ್ಲ. ಇದನ್ನು ಅಂತರ್ಜಾಲದಲ್ಲಿ ಓದುವ ಬಹುಪಾಲು ಜನರಿಗೆ ನಗುವ ವಿಚಾರವಂತೂ ಅಲ್ಲವೆ ಅಲ್ಲ.

Add a Comment

required, use real name
required, will not be published
optional, your blog address