ವಿಜ್ಞಾನವೇ, ದೇವರನ್ನು ಹುಡುಕಿಕೊಡು…

This post was written by admin on October 16, 2008
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 24, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಸರಿಯಾಗಿ 50 ವರ್ಷಗಳ ಹಿಂದೆ (1958) ಭೂಮಿಯ ಕಕ್ಷೆಯನ್ನು ದಾಟಿ ಹೋಗುವಂತಹ ರಾಕೆಟ್ ಉಡಾಯಿಸಿದ್ದು. ಕೃತಕ ಉಪಗ್ರಹವೊಂದು ಚಂದ್ರನನ್ನು ಸುತ್ತು ಹಾಕಿ ಬರುವುದು ಆ ಉಡಾವಣೆಯ ಗುರಿಯಾಗಿತ್ತು. ಆದರೆ ಉಡಾಯಿಸಿದ 77 ಸೆಕೆಂಡುಗಳಲ್ಲಿ, ಭೂಮಿಗಿಂತ ಕೇವಲ 16 ಕಿ.ಮಿ. ಮೇಲೆ ಆ ರಾಕೆಟ್ ಸ್ಫೋಟವಾಗಿ, ಮೊದಲ ಪ್ರಯತ್ನದಲ್ಲೆ ಸೋಲಾಗಿತ್ತು. ಆದರೂ, ಸೋವಿಯತ್ ರಷ್ಯಾಕ್ಕೆ ಸೋಲಬಾರದೆಂಬ ಪೈಪೋಟಿಯಲ್ಲಿ ಅವರು ಮುಂದಿನ ಒಂದೇ ವರ್ಷದಲ್ಲಿ ಮತ್ತೆ ಐದು ಸಲ ಪ್ರಯತ್ನಿಸಿದರು. ಆದರೆ ರಷ್ಯಾದ ರಾಕೆಟ್ 1959 ರಲ್ಲೆ ಚಂದ್ರನನ್ನು ಸುತ್ತಿ ಬಂತು. ಅಮೆರಿಕಕ್ಕೆ ಮೊದಲ ಯಶಸ್ಸು ಸಿಕ್ಕಿದ್ದು 1964 ರಲ್ಲಿ. ಅದಾದ ಕೆಲವೆ ತಿಂಗಳುಗಳಲ್ಲಿ (1965) ರಷ್ಯಾ ಮೊದಲ ಬಾರಿಗೆ ತನ್ನ ರೊಬೊಟ್ ಅನ್ನು ಚಂದ್ರನ ಮೇಲೆಯೆ ಇಳಿಸಿತು. ನಾಲ್ಕು ತಿಂಗಳ ನಂತರ ಅಮೆರಿಕವೂ ಅದನ್ನು ಸಾಧಿಸಿತು. ಆಮೇಲೆ ಆರಂಭವಾಗಿದ್ದು ಚಂದ್ರನ ಮೇಲೆ ಮನುಷ್ಯನನ್ನೆ ಇಳಿಸುವ ರೇಸು. 1968 ರ ಕೊನೆಯಲ್ಲಿ ಮೊದಲ ಬಾರಿಗೆ ಮನುಷ್ಯ ಚಂದ್ರನನ್ನು ಸುತ್ತು ಹಾಕಿಕೊಂಡು ಬಂದ. ಅದಾದ ಏಳೇ ತಿಂಗಳಿಗೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದೆ ಬಿಟ್ಟ. ನಂತರದ ದಿನಗಳಲ್ಲಿ 24 ಅಮೆರಿಕನ್ನರು ಚಂದ್ರನ ಮೇಲೆ ಇಳಿದರು. ಒಟ್ಟು 12 ಜನ ತಮ್ಮ ಅಂತರಿಕ್ಷ ನೌಕೆಯಿಂದ ಕೆಳಕ್ಕಿಳಿದು ಚಂದ್ರನ ಮೇಲೆ ಓಡಾಡಿದರು. Left to right: Armstrong, Collins, Aldrinಕೊನೆಯ ಸಲ ಮನುಷ್ಯ ಚಂದ್ರನ ಮೇಲೆ ಕಾಲಿಟ್ಟದ್ದು 1972 ರಲ್ಲಿ.

ಚಂದ್ರನ ವಿಷಯದ ಮೇಲೆ ಇತ್ತೀಚಿನ ಸುದ್ದಿ ಏನೆಂದರೆ, ಭಾರತವೂ ಚಂದ್ರಯಾನ ಮಾಡುವುದು. ಈ ವಿಷಯದ ಬಗ್ಗೆ ಸ್ವಲ್ಪ ಸಿನಿಕತನದಿಂದ ನೋಡಿದರೆ, ರಷ್ಯಾ 1959 ರಲ್ಲಿಯೆ ಸಾಧಿಸಿದ್ದನ್ನು (ಚಂದ್ರನ ಸುತ್ತ ಕೃತಕ ಉಪಗ್ರಹ ಸುತ್ತುವುದು) ಭಾರತ ಈ ವರ್ಷ ಸಾಧಿಸುತ್ತದಂತೆ. ಅದೆ ರಷ್ಯಾ 1965 ರಲ್ಲಿ ಸಾಧಿಸಿದ್ದನ್ನು (ಚಂದ್ರನ ಮೇಲೆ ಮಾನವರಹಿತ ಯಂತ್ರವನ್ನು ಇಳಿಸುವುದು) ನಮ್ಮವರು 2011 ರಲ್ಲಿ ಸಾಧಿಸುತ್ತಾರಂತೆ. ಅಮೆರಿಕ 1969 ರಲ್ಲಿ ಸಾಧಿಸಿದ್ದನ್ನು (ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು) 2020 ರಲ್ಲಿ ಸಾಧಿಸುತ್ತಾರಂತೆ.

ಇದರ ಹೊರತಾಗಿ ನೋಡಿದರೆ, ಈ ವಾರ ಭಾರತದ ವೈಜ್ಞಾನಿಕ ಪ್ರಪಂಚಕ್ಕೆ ಹೆಮ್ಮೆಯ ವಾರ. ಇದೇ ಅಕ್ಟೋಬರ್ 22 ರಿಂದ 26 ರ ಒಳಗೆ, ನಮ್ಮ ಇಸ್ರೊ ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲವೂ ನಡೆದರೆ, ಶ್ರೀಹರಿಕೋಟದಿಂದ ಭಾರತದ ಮೊದಲ “ಚಂದ್ರಯಾನ” ಆರಂಭವಾಗಲಿದೆ. ಉಡಾವಣೆಯ ನಂತರ ಈ ಅಂತರಿಕ್ಷ ನೌಕೆ ಭೂಮಿಯನ್ನು ಎರಡು ಸುತ್ತು ಹಾಕಿ, ನಂತರ ಭೂಕಕ್ಷೆಯನ್ನು ಸೀಳಿಕೊಂಡು ಚಂದ್ರನತ್ತ ಸಾಗುತ್ತದೆ. ಒಟ್ಟು ಐದೂವರೆ ದಿನಗಳ ನಂತರ ಅದು ಚಂದ್ರನ ಕಕ್ಷೆ ಸೇರುತ್ತದೆ. ಮೊದಲಿಗೆ ಚಂದ್ರನಿಗಿಂತ 1000 ಕಿ.ಮಿ. ದೂರದಲ್ಲಿ ಚಂದ್ರನನ್ನು ಸುತ್ತು ಹಾಕುತ್ತದೆ. ನಂತರ ನಿಧಾನವಾಗಿ ಚಂದ್ರನಿಗೆ ಹತ್ತಿರವಾಗುತ್ತ ಹೋಗಿ, Chandrayaan-1 ಕೊನೆಗೆ ಚಂದ್ರನಿಗೆ 100 ಕಿ.ಮಿ. ದೂರದಲ್ಲಿ ಸುತ್ತು ಹಾಕಲಾರಂಭಿಸುತ್ತದೆ. ಹಾಗೆ ಅದು ಸುಮಾರು ಎರಡು ವರ್ಷಗಳ ಕಾಲ ಚಂದ್ರನನ್ನು ಸುತುತ್ತ, ಚಂದ್ರನ ಧ್ರುವಗಳಲ್ಲಿ ಮಂಜು ಇರಬಹುದೆ ಎಂದು ಪರೀಕ್ಷಿಸುತ್ತಿರುತ್ತದೆ.

ಕಳೆದ ಶತಮಾನದಲ್ಲಿಯ ಅಮೆರಿಕ ಮತ್ತು ಸೋವಿಯತ್ ರಷ್ಯಾಗಳ ಮಿಲಿಟರಿ ಪೈಪೋಟಿ ಅಂತರಿಕ್ಷದಲ್ಲೂ ತಮ್ಮ ಸಾರ್ವಭೌಮತೆಯನ್ನು ಸಾಧಿಸುವ ಪೈಪೋಟಿಗೆ ತಿರುಗಿಕೊಂಡಿತ್ತು. ಆದರೆ ಯಾವಾಗ ಅವೆರಡರ ನಡುವೆ ಶೀತಲ ಸಮರ ಮುಗಿಯಿತೊ ಅಂತರಿಕ್ಷದಲ್ಲಿಯ ಪೈಪೋಟಿಯೂ ನಿಂತಿತು. ನಂತರ ಅಮೆರಿಕ ಬೇರೆಬೇರೆ ಗ್ರಹಗಳನ್ನು ಅಭ್ಯಸಿಸುವುದರತ್ತ, ವಿಶೇಷವಾಗಿ ಮಂಗಳ ಗ್ರಹದತ್ತ ತನ್ನ ದೃಷ್ಟಿ ನೆಟ್ಟಿತು.

ರಾಕೆಟ್ ಸೈನ್ಸ್ ಮತ್ತು ಅಂತರಿಕ್ಷ ಯೋಜನೆಗಳು ಅಪಾರವಾದ ಹಣವನ್ನೂ, ಅಷ್ಟೇ ಕರಾರುವಾಕ್ಕಾದ ವೈಜ್ಞಾನಿಕ ಲೆಕ್ಕಾಚಾರಗಳನ್ನೂ ಬೇಡುವ ವಿಭಾಗ. ಕಳೆದ ಶತಮಾನದ ಕೊನೆಕೊನೆಗಂತೂ ಇಂತಹ ವೈಜ್ಞಾನಿಕ ಪ್ರಯೋಗಗಳಿಗೆ ತೆರೆದುಕೊಳ್ಳುವ ಬೌದ್ಧಿಕ ಸಂಪತ್ತಾಗಲಿ, ಆರ್ಥಿಕ ಸಂಪತ್ತಾಗಲಿ ಅಮೆರಿಕ ಬಿಟ್ಟರೆ ಬೇರೆ ಯಾವ ದೇಶಕ್ಕೂ ಇರಲಿಲ್ಲ ಅಂದರೆ ಅದು ಅತಿಶಯೋಕ್ತಿಯಲ್ಲ. Artist's Concept of Rover on Marsಆದರೆ ಈ ಶತಮಾನ ಹೊಸಹೊಸ ಆಟಗಾರರನ್ನು ರಂಗಕ್ಕಿಳಿಸಿದೆ. ಯೂರೋಪಿನ ಮುಂದುವರೆದ ರಾಷ್ಟ್ರಗಳು ಯೂರೋಪಿಯನ್ ಯೂನಿಯನ್ ಮಾಡಿಕೊಂಡು ಸಂಯುಕ್ತವಾಗಿ ಅಂತರಿಕ್ಷದ ಪ್ರಯೋಗಗಳಿಗೆ ಮುಂದಾಗುತ್ತಿವೆ. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಿ ಹೊಮ್ಮಿರುವ ಚೀನಾಕ್ಕೆ ತನ್ನ ಶಕ್ತಿಯನ್ನು ಸಾಬೀತುಪಡಿಸುವ ಮಾರ್ಗವಾಗಿ ಅಂತರಿಕ್ಷ ವಿಜ್ಞಾನ ಕಾಣಿಸುತ್ತಿದೆ. ಅದೆ ಹಾದಿಯಲ್ಲಿರುವ ಭಾರತ ಈಗ ಚೀನಾಕ್ಕಿಂತ ಮೊದಲೆ ತನ್ನ ಉಪಗ್ರಹವನ್ನು ಚಂದ್ರನ ಸುತ್ತ ಸುತ್ತಿಸುವ ಹಾದಿಯಲ್ಲಿದೆ. ಆದರೆ, ಇವರೆಲ್ಲ ಈಗಾಗಲೆ ಮಂಗಳ ಗ್ರಹದಲ್ಲಿ ತನ್ನ ರೊಬೊಟ್ ಇಳಿಸಿರುವ ಅಮೆರಿಕಕ್ಕಿಂತ ಸುಮಾರು ಐದಾರು ದಶಕಗಳಷ್ಟು ಹಿಂದುಳಿದಿದ್ದಾರೆ ಎಂದರೆ ಅದು ಈ ವಿಭಾಗದಲ್ಲಿ ಅಮೆರಿಕದ ಸಾಧನೆಯನ್ನು ತೋರಿಸುತ್ತದೆ.

—X—

ಈಗ, ಈ ವೈಜ್ಞಾನಿಕ ಸಾಧನೆ ಮತ್ತು ಆಲೋಚನೆಗಳನ್ನು ಬಿಟ್ಟು ನಾನು ಸ್ವಲ್ಪ ಸಾಮಾನ್ಯ ಮಾನವ ಸಹಜ ಕುತೂಹಲದಿಂದ ಆಲೋಚಿಸುತ್ತೇನೆ. ಸೂರ್ಯ ಎನ್ನುವ ಬೆಂಕಿ ಉಂಡೆಯ ನಕ್ಷತ್ರ. ಅದನ್ನು ಎಂಟೊ-ಒಂಬತ್ತೊ ಗ್ರಹಗಳು ಸುತ್ತುತ್ತವೆ. ಅವುಗಳಲ್ಲಿ ಕೆಲವು ಗ್ರಹಗಳನ್ನು ಅವಕ್ಕಿಂತ ಸಣ್ಣ ಗ್ರಹಗಳು ಸುತ್ತುತ್ತವೆ. ನಮ್ಮದೆ ಭೂಮಿ ಸೂರ್ಯನೆಂಬ ನಕ್ಷತ್ರವನ್ನೂ, ಚಂದ್ರ ಎಂಬ ಉಪಗ್ರಹ ನಮ್ಮ ಭೂಮಿಯನ್ನೂ ಸುತ್ತುತ್ತದೆ. Solar eclipseಇವೆಲ್ಲ ಎಷ್ಟು ಕರಾರುವಾಕ್ಕಾಗಿ ಒಂದಕ್ಕಿಂತ ಒಂದು ದೂರದಲ್ಲಿ ಇದೆಯೆಂದರೆ, ಭೂಮಿಗೂ ಸೂರ್ಯನಿಗೂ ಮಧ್ಯೆ ಈ ಚಂದ್ರ ಬಂದರೆ ಅದು ಸಂಪೂರ್ಣವಾಗಿ ಸೂರ್ಯನನ್ನು ಮರೆಮಾಡುತ್ತದೆ. ಚಂದ್ರನ ಆಕಾರ ಮತ್ತು ಅಂತರ ಸರಿಯಾಗಿ ಸೂರ್ಯನನ್ನು ನಮ್ಮಿಂದ ಮರೆ ಮಾಡುವಷ್ಟು ಮಾತ್ರ ಇದೆ. ಸ್ವಲ್ಪವೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಅದೇ ರೀತಿ, ಸೂರ್ಯನಿಗೂ ಚಂದ್ರನಿಗೂ ಮಧ್ಯೆ ಭೂಮಿ ಬಂದರೆ, ಭೂಮಿಯ ಆಕಾರ ಮತ್ತು ಅದು ಸೂರ್ಯನಿಗಿಂತ ದೂರ ಇರುವ ಅಂತರ, ಒಂದೆ ಒಂದು ಸೂರ್ಯ ಕಿರಣವೂ ಚಂದ್ರನನ್ನು ನೇರವಾಗಿ ಮುಟ್ಟದಷ್ಟು ಕರಾರುವಾಕ್ಕಾಗಿದೆ. ಅಲ್ಲಾ, ಇದೆಲ್ಲ ಹೇಗಾಯಿತು? ಇದು ತನ್ನಷ್ಟಕ್ಕೆ ತಾನು ಆಗಿರುವುದು, ಯಾರೂ ನಿರ್ದಿಷ್ಟ ಉದ್ದೇಶದಿಂದ ಮಾಡಿದ್ದಲ್ಲ ಎಂದುಕೊಳ್ಳಲು ಸಾಧ್ಯವೆ?

ಪಾಪ. ಮನುಷ್ಯನೆಂಬ ಪ್ರಾಣಿ ಸಹಸ್ರಾರು ವರ್ಷಗಳಿಂದ ತಾನು ದೇವರ ಸೃಷ್ಟಿ ಎಂದು ಹೇಳಿಕೊಳ್ಳುತ್ತ ಬಂದ. ವಿಚಿತ್ರ ಏನೆಂದರೆ, ಆ ದೇವರು ಭೂಮಿಯ ಒಂದೊಂದು ಕಡೆ ಇದ್ದವರಿಗೆ ಒಂದೊಂದು ರೀತಿ ಇದ್ದ. ಕೆಲವರು, ‘ದೇವರು ಈ ಭೂಮಿ, ಆಕಾಶ, ಪಶುಪಕ್ಷಿ, ಮನುಷ್ಯ ಇತ್ಯಾದಿಗಳನ್ನು ಒಂದು ವಾರದಲ್ಲಿ ಸೃಷ್ಟಿಸಿದ.’ ಎಂದರು. The hominoids are descendants of a common ancestor. -Wikipedia.ಇನ್ನೂ ಕೆಲವರು, ‘ಹಾಗಲ್ಲ, ಆ ನಿಮ್ಮ ದೇವರು ನಮ್ಮನ್ನು ಸೃಷ್ಟಿಸಲಿಲ್ಲ, ಈ ನಮ್ಮ ದೇವರು ತಲೆಯಿಂದ ಹಿಡಿದು ಕಾಲಿನ ತನಕವೂ ಹೀಗೆ ಸೃಷ್ಟಿಸಿದ.’ ಎಂದರು. ಮತ್ತೊಂದಷ್ಟು ಜನ, ‘ ಎಲ್ಲಿಂದ ಹೇಗೆ ಬಂದೆವು ಅನ್ನುವುದರ ಗೊಡವೆಯೇ ಬೇಡ, ಇಲ್ಲಿ ನಾವು ಹೇಗೆ ಇರಬೇಕು ಎಂದಷ್ಟೆ ಯೊಚಿಸೋಣ,’ ಎಂದರು. ಆಗ ಕೆಲವರು, ‘ಹಾಗೆ ದೇವರನ್ನು ನಿರಾಕರಿಸುವುದೆ ತಪ್ಪು, ನಾವು ಹೇಳಿದ್ದನ್ನು ಒಪ್ಪಿಕೊಳ್ಳಲೇಬೇಕು,’ ಎಂದರು. ಆದರೆ, ಎಲ್ಲರೂ ಒಪ್ಪಿಕೊಳ್ಳುವಂತಹ ಅಭಿಪ್ರಾಯ ಮೂಡದೆ ಇದ್ದುದ್ದರಿಂದ ಕೊನೆಗೆ ಮನುಷ್ಯ ತನ್ನ ಮೂಲಕ್ಕೆ ಇಳಿಯುತ್ತ ಹೋದ. ಕಳೆದ ಒಂದೆರಡು ಶತಮಾನಗಳ ಹಿಂದೆಯಷ್ಟೆ ಅವನು ಕೆಲವು ಆಧಾರಗಳ ಮೂಲಕ, ‘ಮನುಷ್ಯನೆ ಏನು, ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವಿಕಾಸವಾಗುತ್ತ ಬಂದಿದೆ; ಈಗ ಮನುಷ್ಯ ಇರುವ ರೂಪದಲ್ಲಿಯೆ ಯಾರೂ ಅವನನ್ನು ನೇರವಾಗಿ ಸೃಷ್ಟಿಸಲಿಲ್ಲ,’ ಎಂದ.

Youtubeನಲ್ಲಿ ಈ ಲೇಖನದ ವಾಚನ

ಮೊದಲಿಗೆ ಭೂಮಿಯ ಬಗ್ಗೆಯೂ ಮನುಷ್ಯನ ಕಲ್ಪನೆ ಸರಿ ಇರಲಿಲ್ಲ. “ಭೂಮಿ ಚಪ್ಪಟೆಯಾಗಿದೆ, ಸೂರ್ಯ ಮತ್ತು ಚಂದ್ರರು ಭೂಮಿಯನ್ನು ಸುತ್ತುತ್ತವೆ,” ಎನ್ನುತ್ತಿದ್ದರು. ಆದರೆ, ತನ್ನ ಕಾಲಕ್ಕಿಂತ ಮುಂದಿದ್ದ ಬುದ್ಧಿಜೀವಿಯೊಬ್ಬ ಐದುನೂರು ವರ್ಷಗಳ ಹಿಂದೆ “ಭೂಮಿ ಗುಂಡಗಿದೆ ಮತ್ತು ಅದು ಸೂರ್ಯನ ಸುತ್ತ ಸುತ್ತುತ್ತದೆ.” ಎಂದ. ಅದರ ಆಧಾರದ ಮೇಲೆ ಕೆಲವರು ಪ್ರಯೋಗಗಳನ್ನು ಮಾಡುತ್ತ ಹೋಗಿ ಏನೇನೊ ಸತ್ಯಗಳನ್ನು ಕಂಡುಕೊಂಡರು. ಕಳೆದ ಐದುನೂರು ವರ್ಷಗಳಲ್ಲಿ ಈ ಸತ್ಯಗಳು ಯಾವ ರೀತಿ ಸ್ಫೋಟಿಸಿದವೆಂದರೆ, ಒಂದೇ ಸ್ಥಳದಲ್ಲಿ ನಿಲ್ಲದೆ ಓಡುತ್ತಿರುವ ಭೂಮಿಯಿಂದ ಹಾರಿದ ಮನುಷ್ಯ ಒಂದೇ ಸ್ಥಳದಲ್ಲಿ ನಿಲ್ಲದೆ ಓಡುತ್ತಿರುವ ಚಂದ್ರನ ಮೇಲೆ ಇಳಿದೇ ಬಿಟ್ಟ. ಚಂದ್ರ ಭೂಮಿಯಿಂದ ಹತ್ತಿರತ್ತಿರ ನಾಲ್ಕು ಲಕ್ಷ ಕಿ.ಮಿ. ದೂರದಲ್ಲಿದ್ದಾನೆ. ಅಷ್ಟು ದೂರವನ್ನೂ ಮನುಷ್ಯ ಕೇವಲ ನಾಲ್ಕೆ ದಿನಗಳಲ್ಲಿ ಕ್ರಮಿಸಿಬಿಟ್ಟ!

ನನ್ನ ಕುತೂಹಲ ಮತ್ತು ಆಸೆ ಪ್ರಾರಂಭವಾಗುವುದೆ ಇಲ್ಲಿನಿಂದ. ಅಲ್ಲಾ, ಇದೆಲ್ಲ ನಮ್ಮನ್ನು ಎಲ್ಲಿಗೆ ಮುಟ್ಟಿಸುತ್ತದೆ? ನಾನಂದುಕೊಳ್ಳುವುದು, “ದೇವರಲ್ಲಿಗೆ.” ಈ ಸೃಷ್ಟಿಯ ಸಾಕ್ಷಾತ್ಕಾರ ಮಾಡಿಸುವಲ್ಲಿಗೆ.

ಮನುಷ್ಯ ಮತ್ತು ಇತರ ಪ್ರಾಣಿಗಳು ಭೂಮಿಯ ಮೇಲೆ ಹುಟ್ಟುತ್ತ, ವಿಕಾಸವಾಗುತ್ತ, ನಾಶವಾಗುತ್ತ, Animation (not to scale) of Theia forming in Earth’s L5 point and then, perturbed by gravity, colliding to help form the moon. The animation progresses in one-year steps making Earth appear not to move. The view is of the south pole.- Wikipedia.ಮತ್ತೆ ಇನ್ನೊಂದು ರೀತಿಯಲ್ಲಿ ಹುಟ್ಟುತ್ತ ಹೇಗೆ ಸಾಗಿವೆ ಎನ್ನುವುದನ್ನು ಈಗ ನಾವು ಒಂದು ಹಂತದ ತನಕ ತಿಳಿದುಕೊಂಡಿದ್ದೇವೆ. ಆದರೆ, ಈ ಭೂಮಿಯೆ ಹೇಗೆ ಹುಟ್ಟಿತು ಎನ್ನುವುದು ಇನ್ನೂ ಸ್ಪಷ್ಟವಾಗಿ, ಸರಳವಾಗಿ ಗೊತ್ತಾಗಿಲ್ಲ. ಕೆಲವರು ಈಗಾಗಲೆ ಕೆಲವು ವಾದಗಳನ್ನು ಮಂಡಿಸಿದ್ದಾರೆ. ಆದರೆ, ಇವು ಯಾವುವೂ ಅಷ್ಟು ಸರಳವಾಗಿ ತೋಚುತ್ತಿಲ್ಲ. ನಮ್ಮ ಗೆಲಾಕ್ಸಿಯ ವಿಚಾರ ತೆಗೆದುಕೊಂಡರೆ ಅದರಲ್ಲಿ ನಮ್ಮ ಸೌರಮಂಡಲ ಸಮುದ್ರದಲ್ಲಿನ ಒಂದು ಹನಿಗೆ ಸಮಾನ ಇರಬಹುದು; ಆ ಸೌರಮಂಡಲದಲ್ಲಿ ನಮ್ಮ ಭೂಮಿ ಒಂದು ಹನಿ ಮಾತ್ರದ್ದೇನೊ! ಭೂಮಿಯ ಮೇಲಿನ ಸಹಸ್ರಾರು ಕೋಟಿ ಜೀವಜಂತುಗಳಲ್ಲಿ ಮನುಷ್ಯನೂ ಒಬ್ಬ. ಹಾಗಾದರೆ ಈ ಬ್ರಹ್ಮಾಂಡದಲ್ಲಿ ನಮ್ಮ ಸ್ಥಾನ ಏನು?

ಮತಾಚರಣೆಗಳು ಮತ್ತು ನಂಬಿಕೆಗಳು ಒಬ್ಬೊಬ್ಬರದು ಒಂದೊಂದು ರೀತಿ ಇರಬಹುದು. ಆದರೆ, ಭೂಮಿಯ ಮೇಲಿನ ಎಲ್ಲರಿಗೂ ಸಮಾನವಾಗಿ ಅನ್ವಯಿಸುವುದು ಈ ವಿಜ್ಞಾನ. ಈ ವಿಜ್ಞಾನವೆ ಎಲ್ಲಾ ಮನುಷ್ಯರು ಸರ್ವಸಮ್ಮತವಾಗಿ ಒಪ್ಪುವ ದೇವರ ಅಥವ ಸೃಷ್ಟಿಯ ಮೂಲವನ್ನು ಎಂದಾದರೊಮ್ಮೆ ತೋರಿಸುತ್ತದೆ ಎನ್ನುವ ಆಶಾವಾದ ನನ್ನದು. ಆಗ ನಮ್ಮ ಎಷ್ಟೋ ಸಂಕುಚಿತ ಯೋಚನೆಗಳಿಗೆ ಮತ್ತು ಮಾನವ ನಿರ್ಮಿತ ಸಮಸ್ಯೆಗಳಿಗೆ ಅರ್ಥವೆ ಇರುವುದಿಲ್ಲ. ಆಸ್ತಿಕತೆ ಮತ್ತು ನಿರಾಸಕ್ತಿಗಳ ನಡುವೆ ತೊಳಲಾಡುವ ನಾಸ್ತಿಕನಲ್ಲದ ನಾನು ವಿವಿಧ ಮತಗಳ ಪುರೋಹಿತಶಾಹಿಗಳ ದೇವರಿಗಿಂತ ವಿಜ್ಞಾನದ ದೇವರಿಗೆ ಕಾಯುತ್ತಿದ್ದೇನೆ. ನೀವು?

Reader Comments

ಎಲ್ಲರೂ ಕಂಡುಕೊಳ್ಳಬಹುದಾದ ‘ದೇವರ’ನ್ನು ವಿಜ್ಞಾನಕ್ಕೆ ಮಾತ್ರ ಅನ್ವೇಷಿಸಲು ಸಾಧ್ಯ ಎನ್ನುವುದು ಸರಿಯಾದ ಮಾತು. ‘ದೇವರು’ ಎನ್ನುವ ಪದ ನಮ್ಮ ಪ್ರಜ್ಞೆಯಲ್ಲಿ ಅದೆಷ್ಟು ಆಳವಾದ ಬೇರುಗಳನ್ನು ಇಳಿಸಿದೆಯೆಂದರೆ, ದೇವರು ವಿಜ್ಞಾನ ಪರಸ್ಪರ ವಿರುದ್ಧವಾದವು ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ ಇಡೀ ಸೃಷ್ಟಿಯ ರಹಸ್ಯವೇ ದೇವರು, ಸತ್ಯವೇ ದೇವರು ಎನ್ನುವುದಾದರೆ ಆ ಗುರಿಯನ್ನು ಮುಟ್ಟುವಲ್ಲಿ ಅಹರ್ನಿಶಿಯಾಗಿ ದುಡಿಯುತ್ತಿರುವವರು ವಿಜ್ಞಾನಿಗಳು. ಹೀಗಾಗಿ ದೇವರನ್ನು ಕಾಣಿಸಲು ನಿಜವಾದ ಅರ್ಹತೆಯಿರುವುದು ವಿಜ್ಞಾನಕ್ಕೆ ಮಾತ್ರ. ತುಂಬಾ ಸಕಾಲಿಕವಾದ ಬರಹ ಸರ್…ಧನ್ಯವಾದಗಳು

#1 
Written By ಸುಪ್ರೀತ್.ಕೆ.ಎಸ್. on October 17th, 2008 @ 11:38 am

Add a Comment

required, use real name
required, will not be published
optional, your blog address