ಸರ್ಕಾರಿ ದುಡ್ಡು ಮತ್ತು ಬೇಕಾಬಿಟ್ಟಿ ಖರ್ಚು…
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 7, 2008 ರ ಸಂಚಿಕೆಯಲ್ಲಿನ ಲೇಖನ.)
ಕ್ಯಾಲಿಫೋರ್ನಿಯ ಜನಸಂಖ್ಯೆಯ ದೃಷ್ಟಿಯಲ್ಲಿ ಅಮೆರಿಕದ ಅತಿದೊಡ್ಡ ರಾಜ್ಯ. ಹಾಗೆಯೆ, ಉದಾರವಾದಿ, ಪ್ರಭಾವಶಾಲಿ, ಶ್ರೀಮಂತ ರಾಜ್ಯ ಸಹ. ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ತಂತ್ರಜ್ಞಾನ ಉತ್ತುಂಗಕ್ಕೆ ಏರುತ್ತಿದ್ದ 1999 ರ ಕಾಲದಲ್ಲಿ ಸಿಲಿಕಾನ್ ಕಣಿವೆಯ ಈ ರಾಜ್ಯವನ್ನು ಒಂದು ಸ್ವತಂತ್ರ ದೇಶವಾಗಿ ಪರಿಗಣಿಸಿದ್ದರೆ ಅದು ಪ್ರಪಂಚದ ಆರನೆಯ ಅಥವ ಏಳನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು. ಆಗ 125 ಕೋಟಿ ಜನಸಂಖ್ಯೆಯ ಚೀನಾಕ್ಕಿಂತ ಕೇವಲ 3 ಚಿಲ್ಲರೆ ಕೋಟಿ ಜನಸಂಖ್ಯೆಯ ಈ ರಾಜ್ಯವೆ ಆರ್ಥಿಕವಾಗಿ ದೊಡ್ಡದು! ಆ ದಿನಗಳಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು ಗ್ರೇ ಡೇವಿಸ್. ಆತ ಅಧಿಕಾರಕ್ಕೆ ಬಂದ ಸಮಯದಲ್ಲಿ ಖರ್ಚು ಮಾಡಲಾಗದಷ್ಟು ದುಡ್ಡು ರಾಜ್ಯದ ಬೊಕ್ಕಸಕ್ಕೆ ಬಂದು ಬೀಳುತ್ತಿತ್ತು. ಯಾವಾಗಲೂ ಉಳಿತಾಯದ ಬಜೆಟ್ಟೆ.
“ಆಹಾ! ಹಾಲು-ತುಪ್ಪದ ಹೊಳೆ ಎಲ್ಲೆಲ್ಲೂ!” ಎಂದು ಹಾಡುತ್ತ ಕುಣಿಯುತ್ತ ಇರುವಾಗಲೆ 2000 ದ ಕೊನೆಯಲ್ಲಿ ಡಾಟ್‌ಕಾಮ್ ಗುಳ್ಳೆ ಒಡೆಯಿತು. ಷೇರು ಮಾರುಕಟ್ಟೆ ಬಿತ್ತು. ಲಕ್ಷಾಂತರ ಜನ ತಮ್ಮ ಆತ್ಮವಿಶ್ವಾಸವನ್ನು ಮಾತ್ರವಲ್ಲದೆ ಕೆಲಸಗಳನ್ನೂ ಕಳೆದುಕೊಂಡರು. ಬೊಕ್ಕಸಕ್ಕೆ ತೆರಿಗೆಯ ರೂಪದಲ್ಲಿ ಹಣ ತುಂಬುತ್ತಿದ್ದ ಅನೇಕ ಕಂಪನಿಗಳು ಮುಚ್ಚಿಕೊಂಡವು. ಮಾಹಿತಿ ತಂತ್ರಜ್ಞಾನದ ಉದ್ದಿಮೆಯ ಮೇಲೆ ಪರೋಕ್ಷವಾಗಿ ಅವಲಂಬಿತವಾಗಿದ್ದವರ ಮೇಲೂ ಅದು ಕೆಟ್ಟ ಪರಿಣಾಮ ಬೀರಿತು. ನಿಧಾನಕ್ಕೆ ಒಂದಲ್ಲ ಒಂದು ಹೊಡೆತ ಬೀಳುತ್ತಲೆ ಹೋಯಿತು. ಅಷ್ಟೊತ್ತಿಗೆ ಕ್ಯಾಲಿಫೋರ್ನಿಯಾದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಡೇವಿಸ್ ನಂತರದ ದಿನಗಳಲ್ಲಿ ಕೊರತೆ ಬಜೆಟ್‌ನಿಂದಾಗಿ ಮತ್ತು ಹಲವು ಮಿಸ್‌ಮ್ಯಾನೇಜ್‌ಮಿಂಟ್‌ಗಳಿಂದಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಾ ಹೋದ. ವರ್ಷಕ್ಕೆ ಒಂದು ಬಾರಿಯೂ ಕರೆಂಟ್ ಹೋಗದ ದೇಶ ಇದು. ಹಾಗಿರುವಾಗ ಈತನ ಅವಧಿಯಲ್ಲಿ ಕ್ಯಾಲಿಫೋರ್ನಿಯ ಹಲವಾರು ಸಲ ಲೋಡ್-ಶೆಡ್ಡಿಂಗ್ ಕಂಡಿತು. ಅಷ್ಟಿದ್ದರೂ ಆತ 2002 ರ ಮರುಚುನಾವಣೆಯಲ್ಲಿ ಇನ್ನೊಂದು ಅವಧಿಗೆ ಗವರ್ನರ್ ಆಗಿ ಚುನಾಯಿತನಾದ.
ಅವನ ದುರಾದೃಷ್ಟ ಮತ್ತು ಆಲಸ್ಯ. ಹಾಗೆ ಮರುಚುನಾಯಿತನಾದ ಕೆಲವೇ ತಿಂಗಳುಗಳಿಗೆ ಆತನ ಪರಿಸ್ಥಿತಿ ತೀರಾ ಹದಗೆಟ್ಟಿತು. ಸರ್ಕಾರದ ಆದಾಯ ಕುಗ್ಗುತ್ತ ಅದರೆ ಖರ್ಚು ಬೆಳೆಯುತ್ತಾ ಹೋಯಿತು. ನೀಡಬೇಕಾದ ಸಮಯದಲ್ಲಿ ಆತ ಒಳ್ಳೆಯ ನಾಯಕತ್ವ ನೀಡಲಿಲ್ಲ. ಆತನ ಪಕ್ಷದಲ್ಲೂ ಆತನಿಗೆ ಒಳ್ಳೆಯ ಬೆಂಬಲ ಇರಲಿಲ್ಲ. ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿಗೆ ಗ್ರೇ ಡೇವಿಸ್‌ನೇ ಜವಾಬ್ದಾರಿ ಎಂದು ಎಲ್ಲರೂ ಭಾವಿಸಿಬಿಟ್ಟರು. ಇದೇ ಸಮಯ ನೋಡುತ್ತಿದ್ದ ವಿರೋಧ ಪಕ್ಷದ ನಾಯಕನೊಬ್ಬ ತಾನು ಇದೇ ಸಮಯದಲ್ಲಿ ಗವರ್ನರ್ ಆಗಿಬಿಡಬಹುದು ಎಂದು ಗ್ರಹಿಸಿ ಗ್ರೇ ಡೇವಿಸ್‌ನನ್ನು ಗವರ್ನರ್ ಹುದ್ದೆಯಿಂದ ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿಯೇ ಬಿಟ್ಟ. ಕೇಂದ್ರ ಮಟ್ಟದ ಚುನಾಯಿತ ಪ್ರತಿನಿಧಿಗಳನ್ನು ಬಿಟ್ಟು ಮಿಕ್ಕ ಯಾರನ್ನು ಬೇಕಾದರೂ ಅವರ ಅವಧಿ ಮುಗಿಯುವುದಕ್ಕಿಂತ ಮೊದಲೆ ವಾಪಸ್ ಮನೆಗೆ ಕಳುಹಿಸುವ ಅವಕಾಶ ಈ ದೇಶದಲ್ಲಿ ಇದೆ. ಗ್ರೇ ಡೇವಿಸ್‌ನನ್ನು ಕೆಳಗಿಳಿಸುವ Recall ಚುನಾವಣೆಗೆ ಅಗತ್ಯವಾಗಿ ಬೇಕಾದಷ್ಟು ಸಹಿ ಸಂಗ್ರಹಿಸಿ ಒಂದು ಗುಂಪಿನ ಜನ ಚುನಾವಣೆಯನ್ನು ಹೇರಿಯೇ ಬಿಟ್ಟರು. ನಂತರ ಅದಕ್ಕೆ ಜನಬೆಂಬಲವೂ ದೊರೆಯಿತು. ಆ ಚುನಾವಣೆಯಲ್ಲಿ ಶೇ. 54 ರಷ್ಟು ಮತದಾರರು ಡೇವಿಸ್‌ನನ್ನು ಅಧಿಕಾರದಿಂದ ಇಳಿ ಎಂದು ಇಳಿಸೇಬಿಟ್ಟರು. ಕೇವಲ ಹತ್ತು ತಿಂಗಳ ಹಿಂದೆಯಷ್ಟೆ ಆತನನ್ನು ನಾಲ್ಕು ವರ್ಷಗಳ ಅವಧಿಗೆ ಚುನಾಯಿಸಿದ್ದ ಜನ ಈಗ ವರ್ಷವಾಗುವುದಕ್ಕಿಂತ ಮೊದಲೆ ಇಳಿಸಿಯೂ ಬಿಟ್ಟರು. ಅದೇ ಚುನಾವಣೆಯಲ್ಲಿ ಅನಾಯಾಸವಾಗಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು, ಆಸ್ಟ್ರಿಯಾ ದೇಶದಲ್ಲಿ ಹುಟ್ಟಿ, ಅಮೆರಿಕಾಕ್ಕೆ ಬಂದು, ದೊಡ್ಡ ಹಾಲಿವುಡ್ ಆಕ್ಷನ್ ಸ್ಟಾರ್ ಆಗಿ ಬೆಳೆದ ನಟ, ಆರ್ನಾಲ್ಡ್ ಶ್ವಾರ್ಜನೆಗ್ಗರ್.
ಹೊಸ ಗವರ್ನರ್ ಆರ್ನಾಲ್ಡ್‌ಗೆ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿರಲಿಲ್ಲ. ಮತ್ತೆ ಸಿಲಿಕಾನ್ ಕಣಿವೆಯಲ್ಲಿ ಉದ್ದಿಮೆಗಳು ಚಿಗಿತುಕೊಂಡವು. ಕೆಲವೊಮ್ಮೆ ಓಲೈಸಿಕೊಂಡು, ಮತ್ತೆ ಕೆಲವೊಮ್ಮೆ ತನ್ನ ಮಾತು ಕೇಳದಿದ್ದರೆ ಜನರ ಬಳಿಗೇ ನೇರವಾಗಿ ಹೋಗುತ್ತೇನೆಂದು ಜನಪ್ರತಿನಿಧಿಗಳನ್ನು ಹೆದರಿಸಿಕೊಂಡು, ಆಡಳಿತ ನಡೆಸುತ್ತ ಬಂದ. ಜನಪ್ರಿಯತೆಯನ್ನೂ ಉಳಿಸಿಕೊಂಡ. ಅದರಿಂದಾಗಿಯೆ ಎರಡು ವರ್ಷಗಳ ಹಿಂದಿನ ಮರುಚುನಾವಣೆಯಲ್ಲಿ ಈತನ ವಿರುದ್ಧ ಬಲವಾದ ಅಭ್ಯರ್ಥಿಯೇ ಇರಲಿಲ್ಲ. ಚುನಾವಣೆ ಇದೆ ಎನ್ನುವ ಸದ್ದೂ ಇಲ್ಲದಷ್ಟು ಪ್ರಶಾಂತವಾಗಿದ್ದ ಆ ಚುನಾವಣೆಯಲ್ಲಿ ಸುಲಭವಾಗಿ ಮರುಆಯ್ಕೆಯಾದ.
ಆದರೆ ಈ ವರ್ಷ ಆತನಿಗೂ ಕುತ್ತಿಗೆಗೆ ಬಂದಿದೆ. ಸುಮಾರು 75000 ಕೋಟಿ ರೂಪಾಯಿಗಳ ಕೊರತೆ ಬಜೆಟ್ ಇಟ್ಟುಕೊಂಡು ಆತ ಈಗ ಆಡಳಿತ ನಡೆಸಬೇಕಿದೆ. ಆತನ ಈ ಕೊರತೆ ಬಜೆಟ್‌ಗೆ ಈ ರಾಜ್ಯದ ಜನಪ್ರತಿನಿಧಿಗಳು ಯಾವ ಪರಿಯ ವಿರೋಧ ವ್ಯಕ್ತಪಡಿಸಿದರೆಂದರೆ ಸುಮಾರು ಮೂರು ತಿಂಗಳ ಕಾಲ ಆತನ ಬಜೆಟ್‌ಗೆ ಅನುಮೋದನೆಯನ್ನೇ ಕೊಡಲಿಲ್ಲ. ದೈತ್ಯದೇಹಿ ಆರ್ನಾಲ್ಡ್‌ನ ಯಾವ ಬೆದರಿಕೆಗಳೂ ಇಲ್ಲಿ ಕೆಲಸ ಮಾಡಲಿಲ್ಲ. ಹೊಸ ಯೋಜನೆಗಳನ್ನು ಸೇರಿಸುವುದರ ಮೂಲಕ ಅಗಾಧವಾದ ಬಜೆಟ್ ಕೊರತೆಯನ್ನು ಹೆಚ್ಚಿಸಬೇಡಿ ಎನ್ನುವುದು ಆತನ ವಾದ. ಆದರೆ ತಮ್ಮ ಇಷ್ಟದ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಳ್ಳಲು ಪಟ್ಟುಹಿಡಿದು ಕೂತ ಜನಪ್ರತಿನಿಧಿಗಳು ಆತನ ಯಾವ ಒತ್ತಡಗಳಿಗೂ ತಿಂಗಳುಗಳ ಕಾಲ ಜಗ್ಗಲಿಲ್ಲ.
ಈಗ, ಕೇವಲ ಮೂರು ವಾರದ ಹಿಂದೆಯಷ್ಟೆ ಆರ್ನಾಲ್ಡ್‌ನ ರಾಜ್ಯ ಸರ್ಕಾರ ಜಾರ್ಜ್ ಬುಷ್‌ನ ಕೇಂದ್ರ ಸರ್ಕಾರಕ್ಕೆ ತುರ್ತಾಗಿ 35000 ಕೋಟಿ ರೂಪಾಯಿಗಳ ತಾತ್ಕಾಲಿಕ ಸಾಲ ಬೇಕಾಗಿದೆ ಎಂದು ಮೊರೆ ಇಟ್ಟಿತ್ತು. ಖಜಾನೆಯಲ್ಲಿ ದುಡ್ಡಿಲ್ಲ, ಈಗ ಸಾಲ ಕೊಡದೆ ಇದ್ದರೆ ಸರ್ಕಾರಿ ?ಕರರಿಗೆ ಸಂಬಳ ಕೊಡುವುದೂ ಕಷ್ಟವಾಗುತ್ತದೆ, ನಿಮ್ಮ ಸಾಲವನ್ನು ಮುಂದಿನ ವರ್ಷದ ಆದಾಯ ತೆರಿಗೆ ಹಣ ಬಂದ ತಕ್ಷಣ ತೀರಿಸುತ್ತೇವೆ, ಎನ್ನುವುದೆ ಆ ಮೊರೆಯ ಸಾರಾಂಶ. ಈಗಲೂ ವಿಶ್ವದ ಏಳನೆಯದೊ ಎಂಟನೆಯದೊ ಅರ್ಥವ್ಯವಸ್ಥೆಯಾಗಿರುವ ಕ್ಯಾಲಿಫೋರ್ನಿಯಾದ ಕತೆ ಇದು. ಹಿಂದಿನ ಸರ್ಕಾರಗಳ ದುಂದುಗಾರಿಕೆ ಮತ್ತು ಮುಂದಾಲೋಚನೆಯಿಲ್ಲದ ಯೋಜನೆಗಳಿಗೆಲ್ಲ ಹಣ ನೀಡಬೇಕಾಗಿರುವುದರಿಂದ ಮತ್ತು ಇದರಲ್ಲಿ ಆರ್ನಾಲ್ಡ್‌ನ ತಪ್ಪು ಕನಿಷ್ಠವಾದ್ದರಿಂದ ಸದ್ಯ ಆಎನಾಲ್ಡ್‌ನನ್ನೂ ಹಿಂದಕ್ಕೆ ಕರೆಸಿಕೊಳ್ಳುವ ಮಾತನ್ನು ಯಾರೂ ಆಡುತ್ತಿಲ್ಲ!
ಈಗ ಸಿಲಿಕಾನ್ ಕಣಿವೆಯ ಕ್ಯಾಲಿಫೋರ್ನಿಯಾದಿಂದ ಸಿಲಿಕಾನ್ ಸಿಟಿಯ ಕರ್ನಾಟಕಕ್ಕೆ ಬರೋಣ. ನನಗೆ ಯಾಕೊ ಈ ಮೇಲಿನ ಸಂಗತಿ ಕರ್ನಾಟಕದ ಭವಿಷ್ಯದ ಮುನ್ಸೂಚನೆಯನ್ನೇ ನೀಡುತ್ತಿದೆ. 2004 ರಿಂದ ಕರ್ನಾಟಕವೂ ಉಳಿತಾಯದ ಬಜೆಟ್ ಕಾಣುತ್ತಿದೆ. ಏರುತ್ತ ಹೋದ ಐಟಿ-ಬಿಟಿ-ಬಿಪಿಒ ಉದ್ದಿಮೆಗಳು, ಅಭಿವೃದ್ಧಿಯ ಪಥದಲ್ಲಿ ಮುನ್ನಡೆದ ದೇಶ, ಏರಿದ ಷೇರು ಮಾರುಕಟ್ಟೆ, ಸ್ಥಳೀಯ ಶ್ರೀಮಂತರ ಜೊತೆಗೆ ಆಂಧ್ರದ ಮತ್ತು ಉತ್ತರ ಭಾರತದ ಶ್ರೀಮಂತರು ಹಾಗೂ ಎನ್ನಾರೈಗಳ ಹೂಡಿಕೆಯಿಂದ ಲಂಗುಲಗಾಮಿಲ್ಲದೆ ನಡೆದ ರಿಯಲ್ ಎಸ್ಟೇಟ್ ವ್ಯವಹಾರ, ಬಳ್ಳಾರಿ ಅದಿರು ಉತ್ಪಾದಿಸಿದ ಎಲ್ಲೆಯಿಲ್ಲದ ಶ್ರೀಮಂತಿಕೆ, ಹೀಗೆ ಅಣೇಕ ಕಾರಣಗಳಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ಬಂದು ಬೀಳುತ್ತಲೆ ಹೋಯಿತು. ಇದೂ ಸಾಲದೆಂಬಂತೆ ಕುಮಾರಸ್ವಾಮಿ-ಯಡ್ಡ್‌ಯೂರಪ್ಪ ಸರ್ಕಾರ ಬೆಂಗಳೂರು ಸುತ್ತಮುತ್ತಲ ಸರ್ಕಾರಿ ಜಮೀನಿನ ಹರಾಜಿಗೂ ಇಳಿದುಬಿಟ್ಟರು. ದುಡ್ಡು. ದುಡ್ಡು. ದುಡ್ಡು. ಯಾವ ಮೂಲದಿಂದ ನೋಡಿದರೂ ದುಡ್ಡು.
ಇಷ್ಟೊಂದು ಉಳಿತಾಯದ ಬಜೆಟ್‌ನ ದುಡ್ಡನ್ನು ನೋಡಿ ನಮ್ಮ ಯಡ್ಡ್‌ಯೂರಪ್ಪನವರ ತಲೆತಿರುಗಿದ್ದು ಸಹಜವೆ. ಸಿಕ್ಕಸಿಕ್ಕಿದ್ದಕ್ಕೆಲ್ಲ, ಜಾತಿಸಂಘಗಳಿಗೆಲ್ಲ ಸರ್ಕಾರಿ ದುಡ್ಡು, ದಾನ-ದತ್ತಿ. ಈಗಾಗಲೆ ಸಾಕಷ್ಟು ಸ್ಥಿತಿವಂತವಾಗಿರುವ, ರಾಜ್ಯದಲ್ಲಿ ಸಂವಿಧಾನೇತರ ಶಕ್ತಿಗಳಾಗಿ ವಿಜೃಂಭಿಸುತ್ತಿರುವ ಮಠಗಳಿಗೂ ಸಹ ಯಾವುದೋ ರೂಪದಲ್ಲಿ ದುಡ್ಡು. ಜನರ ತೀರ್ಪನ್ನು ಕಾಲಕಸ ಮಾಡಿ ಕೇವಲ ಆರು ತಿಂಗಳಿನಲ್ಲಿಯೆ ಮರುಚುನಾವಣೆ ಹೇರಿದ ಅನೈತಿಕ ರಾಜಕಾರಣಿಗಳ ಕ್ಷೇತ್ರಾಭಿವೃದ್ಧಿಗೆಂದು ರಾತ್ರೋರಾತ್ರಿ ಹುಟ್ಟುಹಾಕಿದ ಯೋಜನೆಗಳಿಗೂ ದುಡ್ಡು. ಪ್ರತಿದಿನವೂ ಕೋಟಿಕೋಟಿ ರೂಪಾಯಿಗಳ ಯೋಜನೆಗಳ ಘೋಷಣೆ. ವಾವ್! ಹಾಲುತುಪ್ಪ ನದಿಯೋಪಾದಿಯಾಗಿ ಹರಿಯುತ್ತಿರುವ ಸುಭಿಕ್ಷ ನಾಡು ಈ ಕರ್ನಾಟಕ. ಬಡತನ, ಅಸಮಾನತೆ, ನಿರುದ್ಯೋಗಗಳನ್ನೆಲ್ಲ ಬುಡಮಟ್ಟ ಕಿತ್ತು ಬಿಸಾಕಿರುವ ರಾಮರಾಜ್ಯ! ಇನ್ನೇನು ಚಿದಾನಂದ ಮೂರ್ತಿಗಳು ಹಂಪಿಯಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ರಸ್ತೆಬದಿಯಲ್ಲಿ ಹರಡಿಕೊಂಡು ವ್ಯಾಪಾರ ಮಾಡುವುದೊಂದೇ ಬಾಕಿ!
ಅರೆ. ಇದೇನಿದು? ಈ ಸಲದ ದೀಪಾವಳಿಗೆ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಉತ್ಸಾಹವೆ ಇಲ್ಲವಂತಲ್ಲ? ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅದೇನೊ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಮೀನು-ಸೈಟು-ಫ್ಲಾಟುಗಳ ನೋಂದಾವಣೆಯೂ ಕಮ್ಮಿ ಆಗಿ, ಸರ್ಕಾರಕ್ಕೆ ಬರುತ್ತಿದ್ದ ಆದಾಯಕ್ಕೂ ಹೊಡೆತ ಬಿದ್ದುಬಿಟ್ಟಿದೆಯಂತಲ್ಲ? ಬಳ್ಳಾರಿ-ಕಾರವಾರದ ಮಾರ್ಗದಲ್ಲಿ ರಾತ್ರಿ-ಹಗಲು ಎಡಬಿಡದೆ ಹರಿದಾಡುತ್ತಿದ್ದ ಅದಿರು ಲಾರಿಗಳ ಭರಾಟೆಯೂ ನಿಂತು ಹೋಗಿದೆಯಂತಲ್ಲ? ಅದೇನೊ ಷೇರು ಮಾರುಕಟ್ಟೆ ಒಂದೇ ವರ್ಷದಲ್ಲಿ ಅರ್ಧ ಬೆಲೆ ಕಳೆದುಕೊಂಡಿದೆಯಂತಲ್ಲ? ಬೆಂಗಳೂರಿನಲ್ಲಿ ಸರ್ಕಾರವೆ ಖುದ್ದು ನಿಂತು ನಡೆಸಿಕೊಡುವ ಸರ್ಕಾರಿ ಜಮೀನು ಹರಾಜಿನಲ್ಲಿ ಹರಾಜು ಕೂಗುವವರೆ ಇಲ್ಲವಂತಲ್ಲ?
ಯಡ್ಡ್‌ಯೂರಪ್ಪನವರ ಮಧುಚಂದ್ರ ಅಂದುಕೊಂಡಿದ್ದಕ್ಕಿಂತ ಬೇಗನೆ ಮುಗಿಯುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿಯ ಅಭಿವೃದ್ಧಿಗೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ, ಮತ್ತು ನಮ್ಮದೇ ರಾಜ್ಯದ ಸ್ವಾವಲಂಬನೆಗೆ ಗಮನ ಕೊಡದೆ ಹುಚ್ಚುಚ್ಚು Populist ಯೋಜನೆಗಳನ್ನು ಹಮ್ಮಿಕೊಂಡು ಹೋಗುತ್ತಿರುವ ನಮ್ಮ ರಾಜ್ಯ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಹೊಸಹೊಸ ಪಾಠಗಳನ್ನು ಕಲಿಯುವುದು ಅನಿವಾರ್ಯವಾಗಲಿದೆ. ಐದಾರು ವರ್ಷಗಳ ಹಿಂದೆ ಮಾಡುತ್ತಿದ್ದಂತೆ ಕೇಂದ್ರದ ಅನುದಾನ ಕೇಳುವುದು ಮುಂದಿನ ವರ್ಷದಿಂದ ಹೆಚ್ಚಲಿದೆ. ಮುಂದಿನ ವರ್ಷವೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಥವ ಬಿಜೆಪಿಯೇತರ ಸರ್ಕಾರ ಇದ್ದಲ್ಲಿ “ಕೇಂದ್ರದ ಮಲತಾಯಿ ಧೋರಣೆ” ಪದೆಪದೆ ಕನ್ನಡಿಗರ ಕಿವಿಗೆ ಬೀಳುವುದೂ ಹೆಚ್ಚಾಗಲಿದೆ. ಪರಿಸ್ಥಿತಿ ಕೆಟ್ಟದಾಗಿಯೆ ಮುಂದುವರೆದರೆ ಸರ್ಕಾರಿ ನೌಕರರಿಗೆ ಸಂಬಳ ಕೊಟ್ಟ ಮೇಲೆ ಬೇರೆ ಏನಕ್ಕೂ ದುಡ್ಡೇ ಇಲ್ಲದ ಸ್ಥಿತಿ ಬರಲಿದೆ. ಅಧಿಕಾರ ವಹಿಸಿಕೊಂಡ ಮಾರನೆಯ ವರ್ಷವೆ ಯಡ್ಡ್‌ಯೂರಪ್ಪನವರು ಖೋತಾ ಬಜೆಟ್ ಮಂಡಿಸಲಿದ್ದಾರೆ. ಇತಿಹಾಸ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಪುನರಾವರ್ತನೆಯಾಗುತ್ತದೆ.
Reader Comments
ರವಿಯವರೆ, ನಿಜವಾಗಿಯೂ ನಿಮ್ಮಂತ ಬರಹಗಾರರು ಹಿಂದೆಂದಿಗಿಂತಲೂ ಇಂದು ತುಂಬಾ ಅವಶ್ಯಕತೆ ಇದೆ.ಕನ್ನಡದ ಮಟ್ಟಿಗೆ ಹೇಳುವುದಾದರೆ ಪ್ರಜಾವಾಣಿಯ ದಿನೇಶ್ ಅಮ್ಮಿನ್ ಮಟ್ಟು, ಇಂದು ಸಂಜೆಯ ದಿನೇಶ್ ಕುಮಾರ್ ಮತ್ತು ನೀವು ಪ್ರಸ್ತುತ ಸಂದರ್ಭದ ಅವಶ್ಯಕತೆಗಳನ್ನು ನಿಕರವಾಗಿ ಮತ್ತು ಎಲ್ಲರಿಗೂ ಮುಟ್ಟುವಂತೆ ತಿಳಿಸುತ್ತಿದ್ದೀರಿ. ಧನ್ಯವಾದಗಳು.
ಹೌದೌದು ಇನ್ನೇನು ಚಿದಾನಂದ ಮೂರ್ತಿಗಳು ಹಂಪಿಯಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ರಸ್ತೆಬದಿಯಲ್ಲಿ ಹರಡಿಕೊಂಡು ವ್ಯಾಪಾರ ಮಾಡುವುದೊಂದೇ ಬಾಕಿ!
- ಮಂಜುನಾಥ ಸ್ವಾಮಿ