ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆ…

This post was written by admin on November 5, 2008
Posted Under: Uncategorized

[ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗ, ವಿಕ್ರಾಂತ ಕರ್ನಾಟಕದ ನವೆಂಬರ್ 14, 2008 ರ ಸಂಚಿಕೆಗೆ ಬರೆದ ಲೇಖನ.]

ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!” ಹಾಗೆಂದು ನಾನು ಬರೆದಿದ್ದು ವಿಕ್ರಾಂತ ಕರ್ನಾಟಕದ ಜುಲೈ 7, 2007 ರ ಸಂಚಿಕೆಯಲ್ಲಿ. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಕ್ಕೆ ಅಪಾರ ಪ್ರೋತ್ಸಾಹ ಕೊಟ್ಟ ಮೈಸೂರಿನ ಚಿಂತಕ ರಾಮದಾಸರು ತೀರಿಕೊಂಡಾಗ ಬರೆದ ಲೇಖನದಲ್ಲಿ ನಾನು ಹಾಗೆ ಮೇಲಿನಂತೆ ಬರೆದದ್ದು. ಆ ಸಮಯದಲ್ಲಿ ಬಹುಪಾಲು ಜನರ ಊಹೆ ಇದ್ದದ್ದು, ಈ ಬಾರಿ ಹಿಲ್ಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷಳಾಗಲಿದ್ದಾಳೆ ಎಂದು. ಅದೇ ದಿಕ್ಕಿನಲ್ಲಿ ಯೋಚಿಸುತ್ತ, ಈ ಲೇಖನ ಬರೆಯುವುದಕ್ಕೆ ನಾಲ್ಕು ತಿಂಗಳಿನ ಮೊದಲು ಬರಾಕ್ ಒಬಾಮ ಅಮೆರಿಕದ ಸಿಲಿಕಾನ್ ಕಣಿವೆಯ ಬಳಿ ಆಯೋಜಿಸಿದ್ದ ಸಭೆಯೊಂದರಲ್ಲಿ ಆತನ ಭಾಷಣ ಕೇಳಿಕೊಂಡು ಬಂದಿದ್ದ ನಾನು, ಈ ಸಲ ಅಲ್ಲದಿದ್ದರೂ ಕ್ಲಿಂಟನ್‌ಳ ಅವಧಿ ಮುಗಿದ ನಂತರವಾದರೂ ಖಂಡಿತ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ, ಅಮೆರಿಕದ ಜನ ನನ್ನಂತಹ ಕೋಟ್ಯಾಂತರ ಜನರ ಊಹೆಗಳನ್ನೆಲ್ಲ ಹುಸಿ ಮಾಡಿಬಿಟ್ಟಿದ್ದಾರೆ; ಕನಸಿದ್ದಕ್ಕಿಂತ ಹೆಚ್ಚಿನ ಮಟ್ಟದ್ದನ್ನು ಕೊಟ್ಟುಬಿಟ್ಟಿದ್ದಾರೆ. ಈ ಒಂದೇ ಕಾರಣಕ್ಕೆ ಅಮೆರಿಕದ ಜನತೆ ವಿಶ್ವದ ಅನೇಕ ಜನರ ಪ್ರೀತಿಯನ್ನು ಗಳಿಸಿಕೊಂಡು ಬಿಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿಯಲು ಇನ್ನೂ ಎರಡು ದಿನ ಇರುವಾಗ ನಾನು ಈ ಲೇಖನ ಬರೆಯುತ್ತಿದ್ದೇನೆ. ರಾತ್ರೋರಾತ್ರಿ ಈ ದೇಶದ ಬಹುಪಾಲು ಜನರ ನಿರ್ಧಾರ ಬದಲಾಗುವಂತಹ ಬೃಹತ್‌ಘಟನೆ ಒಂದು ಜರಗದಿದ್ದರೆ, ಒಬಾಮ ಅಮೆರಿಕದ ಅಧ್ಯಕ್ಷನಾಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಈಗ ಇದೆ. ನೀವು ಈ ಲೇಖನ ಓದುವಷ್ಟರಲ್ಲಿ ಒಬಾಮ ಅಧ್ಯಕ್ಷನಾದನೆ ಅಥವ ಇಲ್ಲವೆ ಎಂದು ಅಧಿಕೃತವಾಗಿ ಗೊತ್ತಾಗಿಯೆ ಎರಡು-ಮೂರು ದಿನಗಳಾಗಿರುವುದರಿಂದ, ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗಿದ್ದಾನೆ ಎಂದು ಭಾವಿಸಿಯೇ ನಾನು ಇದನ್ನು ಬರೆಯುತ್ತಿದ್ದೇನೆ.

ಸರಿಯಾಗಿ 41 ವರ್ಷಗಳ ಹಿಂದೆ, ಅಂದರೆ 1967 ರಲ್ಲಿ ಬಿಡುಗಡೆಯಾದ ಸಿನಿಮಾ “Guess Who’s Coming to Dinner. ಅದರಲ್ಲಿ ಕ್ಯಾಥರಿನ್ ಹೆಪ್‌ಬರ್ನ್, ಸ್ಪೆನ್ಸರ್ ಟ್ರೇಸಿ, ಮತ್ತು ಸಿಡ್ನಿ ಪಾಯಿಟೀರ್ ನಟಿಸಿದ್ದಾರೆ. ಒಬ್ಬ ಕರಿಯ, ಬುದ್ಧಿವಂತ, ಸಜ್ಜನ ಡಾಕ್ಟರ್ ಬಿಳಿ ಯುವತಿಯನ್ನು ಪ್ರೇಮಿಸಿ, ಆಕೆಯ ತಂದೆತಾಯಿಯರ ಒಪ್ಪಿಗೆ ಪಡೆದುಕೊಳ್ಳಲು ಅವರ ಮನೆಗೆ ಹೋಗುವ ಕತೆ ಅದು. ಎಲ್ಲವನ್ನೂ ತೂಗಿಅಳೆದ ಹುಡುಗಿಯ ಪೋಷಕರು ಕೊನೆಗೆ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡುತ್ತಾರೆ. ಆ ಸಮಯದಲ್ಲಿ ಕರಿಯ ಡಾಕ್ಟರ್ ತಮಗೆ ಹುಟ್ಟಲಿರುವ ಕರಿಯ ಮಕ್ಕಳ ಭವಿಷ್ಯದ ಬಗ್ಗೆ ಹೀಗೆ ಹೇಳುತ್ತಾನೆ: “ನಮಗೆ ಹುಟ್ಟುವ ಮಗು ಅಮೇರಿಕದ ಪ್ರೆಸಿಡೆಂಟ್ ಆಗಲಿ ಎಂದು ಬಯಸುತ್ತೇವಾದರೂ, ಕೊನೆಗೆ ವಿದೇಶಾಂಗ ಸಚಿವನಾದರೂ ಪರವಾಗಿಲ್ಲ.” ಆ ಚಿತ್ರ ಬಂದಾಗ ಒಬ್ಬ ಕರಿಯ ಗಂಡು ಮತ್ತು ಬಿಳಿಯ ಹೆಣ್ಣಿಗೆ ಹುಟ್ಟಿದ್ದ ಒಬಾಮನಿಗೆ ಆರು ವರ್ಷ ವಯಸ್ಸು. ಇನ್ನು ಮೂರು ತಿಂಗಳಿಗೆ ಆತ ಅಮೆರಿಕದ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾನೆ. ಕಳೆದ ಎಂಟು ವರ್ಷಗಳಿಂದ ಅಮೆರಿಕದ ವಿದೇಶಾಂಗ ಸಚಿವರಾಗಿ ಕರಿಯರೇ ಇದ್ದಾರೆ. ಈಗ ಇರುವವರಂತೂ ಒಬ್ಬ ಮಹಿಳೆ.

ಬುದ್ಧಿವಂತ ಒಬಾಮ ಮತ್ತು ಆದರ್ಶದ ಕನಸಲ್ಲಿ ಜನತೆ:

ಒಬಾಮನ ಇಲ್ಲಿಯ ತನಕದ ಪಯಣ ಒಬಾಮನ ಸುತ್ತ ಹಬ್ಬಿರುವ ಪ್ರಭೆಯಂತೆ ಸಂಪೂರ್ಣವಾಗಿ ಒಂದು ಆದರ್ಶದ, ಪ್ರಾಮಾಣಿಕತೆಯ ಪಯಣ ಎಂದುಕೊಳ್ಳುವುದು ಸ್ವಲ್ಪ ತಪ್ಪೆ. ಇಲ್ಲಿಯತನಕ ಆತ ಬಹಳ ಖಿಲಾಡಿತನದಿಂದಲೆ, ಹಾಕಬೇಕಾದ ಪಟ್ಟು ಮತ್ತು ತಂತ್ರಗಾರಿಕೆಯಿಂದಲೆ ತನ್ನ ನಡೆ ನಡೆಸಿದ್ದಾನೆ. ಜೊತೆಗೆ ಆತನಿಗೆ ಅನೇಕ ಕಡೆಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಬೆಂಬಲ ದೊರಕಿದೆ. ಒಬಾಮ ಕೇವಲ ತನ್ನ ವೈಯಕ್ತಿಕ ಸಾಮರ್ಥ್ಯದಿಂದ ಚುನಾವಣೆ ಗೆದ್ದಿದ್ದಾನೆ ಎಂದುಕೊಳ್ಳುವುದಕ್ಕಿಂತ ಆತನ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಜೊತೆಜೊತೆಗೆ ಸಾಮಾನ್ಯ ಜನರ, ಎಲ್ಲಾ ಕಪ್ಪುಜನರ, ಉದಾರವಾದಿಗಳ, ಹಾಗೂ ಇಲ್ಲಿಯ ಮೀಡಿಯಾದವರ ಬೆಂಬಲ ಮತ್ತು ಆಡಳಿತ ವಿರೋಧಿ ಅಲೆಯೂ ಸಹ ಕೆಲಸ ಮಾಡಿದೆ. ಮತ್ತು, ಅಷ್ಟೆ ಮುಖ್ಯವಾಗಿ, ಚುನಾವಣೆಯ ಕೊನೆಯ ದಿನಗಳಲ್ಲಿ ಆದ ಕೆಟ್ಟ ಆರ್ಥಿಕ ಬೆಳವಣಿಗೆಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿವೆ.

ಈ ದೇಶದಲ್ಲಿ ಮೊದಲಿನಿಂದಲೂ ಶ್ರೀಮಂತ ಕ್ಯಾಪಿಟಲಿಸ್ಟ್‌ಗಳ ಬೆಂಬಲ ಇರುವುದು ರಿಪಬ್ಲಿಕನ್ ಪಕ್ಷದವರಿಗೇ. ಹಾಗಾಗಿಯೆ ಚುನಾವಣೆಗೆ ಹಣ ಕೂಡಿಸಬಲ್ಲ ತಾಕತ್ತು ಡೆಮಾಕ್ರಾಟರಿಗಿಂತ ರಿಪಬ್ಲಿಕನ್ನರಿಗೇ ಜಾಸ್ತಿ. ಕಳೆದ ಎರಡು ಸಲವಂತೂ ಜಾರ್ಜ್ ಬುಷ್‌ನ ಚುನಾವಣೆ ಖರ್ಚಿಗೆಂದು ಅಪಾರ ಹಣ ಹರಿದು ಬಂದಿತ್ತು. ಇಂತಹ ಪರಿಸ್ಥಿತಿಯಿಂದಾಗಿಯೆ, ಹಣದ ಲೆಕ್ಕಾಚಾರದಲ್ಲಿ ಪ್ರಜಾಪ್ರಭುತ್ವದ ತಕ್ಕಡಿ ಏರುಪೇರಾಗದೆ ಇರಲಿ ಎಂದು ಅಧ್ಯಕ್ಷ ಚುನಾವಣೆಗೆ ಸರ್ಕಾರವೆ ದುಡ್ಡು ಕೊಡುವ ಕಾನೂನೊಂದು ಕೆಲವು ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಅಭ್ಯರ್ಥಿಗಳ ಪ್ರಚಾರಕ್ಕೆಂದು ಸರ್ಕಾರ ಒಂದು ನಿರ್ದಿಷ್ಟ ಮೊತ್ತದ ಹಣ ಒದಗಿಸುವ ಮತ್ತು ಹಾಗೆ ಹಣ ಪಡೆದುಕೊಂಡ ಅಭ್ಯರ್ಥಿಗಳು ಖಾಸಗಿ ವ್ಯಕ್ತಿಗಳಿಂದ ಹಣ ಸಂಗ್ರಹಿಸಬಾರದ ವ್ಯವಸ್ಥೆ ಅದು. ಪ್ರಾಥಮಿಕ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮೊದಲು ಒಬಾಮ ತಾನು ಆ ಆದರ್ಶಯುತ ವ್ಯವಸ್ಥೆಯ ಪ್ರಕಾರವೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ, ಯಾವಾಗ ಆತನಿಗೆ ತಾನು ಜನರಿಂದಲೆ ಅಪಾರವಾದ ಹಣ ಸಂಗ್ರಹಿಸಬಹುದು ಮತ್ತು ಈ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಿಂತ ಹೆಚ್ಚಿಗೆ ಸಂಗ್ರಹಿಸಬಹುದು ಎನ್ನುವುದು ಖಚಿತವಾಗಿ ಖಾತ್ರಿಯಾಯಿತೊ, ಆಗ ಆತ ಕಾನೂನಿನ ಪ್ರಕಾರ ತೆಗೆದುಕೊಳ್ಳಬಹುದಿದ್ದ ಸರ್ಕಾರದ ದುಡ್ಡು ಬೇಡ ಎಂದು ನಿರಾಕರಿಸಿಬಿಟ್ಟ. ಹೀಗೆ ತಾನೆ ಕೊಟ್ಟಿದ್ದ ವಾಗ್ದಾನವನ್ನು ತಾನೆ ಮುರಿದಿದ್ದ. ಹಾಗೆಯೆ, ಹಿಂದೆ ಯಾವೊಬ್ಬ ಅಭ್ಯರ್ಥಿಯೂ ಸಂಗ್ರಹಿಸದಷ್ಟು ಹಣವನ್ನು ಸಂಗ್ರಹಿಸಿದ. ಇದರಲ್ಲಿನ ಒಳ್ಳೆಯ ಅಂಶ ಏನೆಂದರೆ, ಹಾಗೆ ಹಣಕೊಟ್ಟವರಲ್ಲಿ ಅಮೆರಿಕದ ಸಾಮಾನ್ಯ ಜನರೆ ಹೆಚ್ಚು. ಇದೆಲ್ಲದರ ಪರಿಣಾಮವಾಗಿ, ಕಳೆದ ಚುನಾವಣೆಯಲ್ಲಿ ಬುಷ್ ಮತ್ತು ಕೆರ್ರಿ ಇಬ್ಬರೂ ಸೇರಿ ಖರ್ಚು ಮಾಡಿದಷ್ಟು ಹಣವನ್ನು ಈ ಬಾರಿ ಒಬಾಮ ಒಬ್ಬನೇ ಮಾಡಿದ್ದಾನೆ. ಹಾಗೆಯೆ, ತನ್ನ ವಿರೋಧಿ ಜಾನ್ ಮೆಕೈನ್‌ಗಿಂತ ಸುಮಾರು ಎರಡು ಪಟ್ಟು ಹಣವನ್ನು ಹೆಚ್ಚಿಗೆ ಖರ್ಚು ಮಾಡಿದ್ದಾನೆ. ಒಬಾಮನ ಹಣ ಸಂಗ್ರಹದ ಬಗ್ಗೆ ಒಂದು ಉದಾಹರಣೆ ಕೊಡಬೇಕೆಂದರೆ, ಸೆಪ್ಟೆಂಬರ್ ತಿಂಗಳೊಂದರಲ್ಲಿಯೆ ಆತ ಸಂಗ್ರಹಿಸಿದ ಹಣ ಸುಮಾರು 750 ಕೋಟಿ ರೂಪಾಯಿಗಳು! ಆತನ ಚುನಾವಣೆಯ ಒಟ್ಟು ಖರ್ಚು 3000 ಕೋಟಿ ರೂಪಾಯಿಗಳನ್ನು ದಾಟಲಿದೆ.

ಅಷ್ಟೇ ಅಲ್ಲ, ಆತನ ಇಲ್ಲಿಯ ತನಕದ ಚಾರಿತ್ರಿಕ ಪಯಣಕ್ಕೆ ಮೀಡಿಯಾದವರೂ ಸಾಕಷ್ಟು ಸಹಾಯ ಮಾಡಿದ್ದಾರೆ. ಕೋಮುವಾದಿ ರಿಪಬ್ಲಿಕನ್ನರ ಕೊನೆಗಳಿಗೆಯ ಕಾರ್ಯಾಚರಣೆಗಳನ್ನು ಹಾಗು ಸುಳ್ಳು ಮತ್ತು ಕಟ್ಟುಕತೆ ಹಬ್ಬಿಸುವ ಅವರ ಸಾಮರ್ಥ್ಯವನ್ನು ಕಳೆದ ಏಳೆಂಟು ವರ್ಷಗಳಿಂದ ನೋಡಿ ಬೇಸತ್ತಿದ್ದ ಇಲ್ಲಿನ ಉದಾರವಾದಿ ಮೀಡಿಯ ಈ ಬಾರಿ ಒಬಾಮಾಗೆ ಬಹಿರಂಗವಾಗಿಯೇ ಬೆಂಬಲಿಸಿದೆ. ಆತನಿಗೆ ಹಾನಿಯಾಗಬಹುದಾದ ಸುದ್ದಿಗಳಿಗೆ ಪ್ರಾಮುಖ್ಯ ಕೊಡದೆ, ಆತನನ್ನು ಆದಷ್ಟೂ ಕಷ್ಟಕ್ಕೆ ಸಿಲುಕಿಸದೆ, ಆತನ ವಿರೋಧಿ ಪಾಳೆಯವನ್ನು -ವಿಶೇಷವಾಗಿ ಸ್ಯಾರಾ ಪೇಲಿನ್‌ಳನ್ನು, ಇಬ್ಬಂದಿಗೆ ಮತ್ತು ನಗೆಪಾಟಲಿಗೆ ಸಿಲುಕಿಸಿ ಒಬಾಮಾನಿಗೆ ಅನುಕೂಲವಾಗಿ ವರ್ತಿಸಿದ್ದಾರೆ. ಇದಕ್ಕೆ ಒಂದೆ ಒಂದು ಅಪವಾದ ಫಾಕ್ಸ್ ನ್ಯೂಸ್‌ನವರು. ಆದರೆ ಎಷ್ಟೇ ಆದರೂ ಅದು ಅಪ್ಪಟ ಕ್ಯಾಪಿಟಲಿಸ್ಟ್‌ಗಳ, ಕ್ರೈಸ್ತ ಮೂಲಭೂತವಾದಿಗಳ, ಉಗ್ರರಾಷ್ಟ್ರೀಯವಾದಿ (Jingoist) ಆಂಕರ್‌ಗಳನ್ನು ಹೊಂದಿರುವ ಚಾನೆಲ್. ಕೋಮುವಾದಿಗಳಲ್ಲದ ಜನರಲ್ಲಿ ಅದರ ಪ್ರಭಾವ ಅಷ್ಟಕ್ಕಷ್ಟೆ. ಹಾಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಅದು ಒಬಾಮಾನ ಅವಕಾಶವನ್ನು ಹಾಳು ಮಾಡಲಾಗಲಿಲ್ಲ.

ಈ ಎಲ್ಲಾ ಬೆಳವಣಿಗೆಗಳು ಒಂದು ರೀತಿ ಒಳ್ಳೆಯದೆ. ಯಾಕೆಂದರೆ, ಒಬಾಮ ಕೇವಲ ರಾಜಕಾರಣಿಯಲ್ಲ. ತನಗೆ ಸಹಕರಿಸಿದ ಅಂಶಗಳನ್ನು ಗಮನಿಸಬಲ್ಲ ಬುದ್ಧಿಜೀವಿ ಚಿಂತಕ ಸಹ. ಇದು ಆತ ನೀಡಬೇಕಿರುವ ನಾಯಕತ್ವದ ಬಗ್ಗೆ ಮತ್ತು ಆತನ ಬಗ್ಗೆ ಜನ ಇಟ್ಟುಕೊಂಡಿರುವ ಆಶೋತ್ತರಗಳ ಬಗ್ಗೆ ಆತನಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ನಾವು ಭಾವಿಸಬಹುದು. ಹಾಗೆ ಆಗಿದ್ದೆ ಆದರೆ, ಅಮೆರಿಕಕ್ಕೇ ಏನು, ವಿಶ್ವಕ್ಕೂ ಒಬ್ಬ ಒಳ್ಳೆಯ ನಾಯಕ ಹುಟ್ಟಿದ್ದಕ್ಕೆ ನಾವು ಸಾಕ್ಷಿ ಆಗುತ್ತಿದ್ದೇವೆ.

ಒಬಾಮಾನ ನಾಯಕತ್ವಕ್ಕೆ ಕಾಯುತ್ತಿರುವ ವಿಶ್ವ:

ಕಳೆದ ಹಲವಾರು ವರ್ಷಗಳಿಂದ ವಿಶ್ವದ ಏಕೈಕ ಸೂಪರ್‌ಪವರ್ ಆಗಿ ಉಳಿದಿದ್ದ ಅಮೆರಿಕದ ಅಹಂಕಾರಿ ಧೋರಣೆ ವಿಶ್ವದ ಅನೇಕ ಕಡೆ ಅಮೆರಿಕ-ವಿರೋಧಿ ಭಾವನೆಯನ್ನು ಹೆಚ್ಚಿಸಿದೆ. ಬುಷ್ ಕೇವಲ ಈ ದೇಶದಲ್ಲಿಯಷ್ಟೆ ಅಲ್ಲ, ವಿದೇಶಗಳಲ್ಲಿಯೂ ದ್ವೇಷಿಸಲ್ಪಡುವ ಮನುಷ್ಯ. ಇದರಿಂದಾಗಿ ವಿಶ್ವದ ಒಟ್ಟು ವ್ಯವಸ್ಥೆಯೆ ಅನಾಯಕತ್ವದತ್ತ ನಡೆಯುತ್ತಿರುವ ಸಮಯ ಇದು. ಅದರ ಜೊತೆಗೆ, ಭೂಮಿಯ ಮೇಲಿನ ಜೀವಸಂಕುಲಕ್ಕೆ ಅಪಾಯ ಒಡ್ಡುತ್ತಿರುವ ಜಾಗತಿಕ ತಾಪಮಾನದ ದಿನಗಳು ಇವು. ಹಾಗಾಗಿ, ಒಂದು ಸ್ಥಿರ, ಸುಭದ್ರ, ಪರಿಸರ ಸ್ನೇಹಿ ವಿಶ್ವವ್ಯವಸ್ಥೆಯನ್ನು ಬಯಸುವ ಜಾಗತಿಕ ನಾಗರಿಕರು ನೈತಿಕತೆಯ, ಸಹಿಷ್ಣುತೆಯ, ಗೌರವಯುತ ವಿಶ್ವನಾಯಕತ್ವವೊಂದರ ಹುಡುಕಾಟದಲ್ಲಿದ್ದರು. ಈಗ ಅವರೆಲ್ಲರ ಆಶೋತ್ತರಗಳ ಪ್ರತಿನಿಧಿಯಾಗಿ ಒಬಾಮ ಕಾಣಿಸುತ್ತಿದ್ದಾನೆ. ಅಷ್ಟು ಮಾತ್ರವಲ್ಲದೆ, ಸಾಮಾಜಿಕ ನ್ಯಾಯದ ಪರ ಇರುವ ಪ್ರಜಾಪ್ರಭುತ್ವವಾದಿ ಚಿಂತಕರಿಗೂ ಒಬಾಮ ಒಂದು ಸಂಕೇತವಾಗಿ ಬರುತ್ತಿದ್ದಾನೆ. ಈ ಸಂಕೇತಕ್ಕೆ ಅಪಾರವಾದ ಬಲ ಇದೆ. ಮೂಲಭೂತವಾದದ ಮುಷ್ಟಿಗೆ ಸಿಲುಕಿರುವ ದೇಶಗಳಲ್ಲಿನ ಜನರು ಉದಾರವಾದಿ ಚಿಂತನೆಯನ್ನು ರೂಢಿಸಿಕೊಳ್ಳಲು ಇದು ಪ್ರೇರೇಪಿಸಲಿದೆ. ಒಬಾಮಾನ ಅವಧಿಯಲ್ಲಿ ಕೆಲವು ಅರಬ್ ಅರಸೊತ್ತಿಗೆಗಳು ಕೊನೆಯಾಗಿ ಅಲ್ಲಿ ಪ್ರಜಾಪ್ರಭುತ್ವ ಮೊಳಕೆಯೊಡೆದರೆ ಆಶ್ಚರ್ಯ ಪಡಬೇಕಿಲ್ಲ. ಹಾಗೆಯೆ, ಭಾರತದ ಇಸ್ಲಾಮ್ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಾಕಿಸ್ತಾನವೂ ತನ್ನ ಹಾದಿ ತಿದ್ದಿಕೊಳ್ಳುವುದು ಅನಿವಾರ್ಯವಾಗಲಿದೆ. ಮತ್ತು, ಭಾರತಕ್ಕೆ ಒಬಾಮ ಒಬ್ಬ ಸಹಜ ಸ್ನೇಹಿತನಾಗಲಿದ್ದಾನೆ. ನಮ್ಮಲ್ಲಿಯ ಮೂಲಭೂತವಾದಿ ಫ್ಯಾಸಿಸ್ಟ್ ಹಿಂದುತ್ವವಾದಿಗಳು ಭಾರತದ ಅವಕಾಶವನ್ನು ಹಾಳು ಮಾಡದಿದ್ದರೆ ಭವಿಷ್ಯದಲ್ಲಿ ವಿಶ್ವಕ್ಕೆ ನೈತಿಕ ಮತ್ತು ಆರ್ಥಿಕ ನಾಯಕತ್ವ ನೀಡುವಲ್ಲಿ ಭಾರತ ಮತ್ತು ಅಮೆರಿಕ ಜೊತೆಯಾಗಲಿವೆ. ಬಹುಶ: ಇದು ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆಯ ಆರಂಭ!

ಪೂರಕ ಓದಿಗೆ:
- ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ
- ಅಮೆರಿಕದಲ್ಲಿ ಕ್ರಿಶ್ಚಿಯನ್ ಮತೀಯ ರಾಜಕಾರಣ
- ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
- ಬಾಬ್ಬಿ ಜಿಂದಾಲ್ – ಪಕ್ಕಾ ಕೆರಿಯರ್ ರಾಜಕಾರಣಿ
- ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು…
- ಅನಾಯಕತ್ವ ಮತ್ತು ಮೂರನೇ ವಿಶ್ವಯುದ್ಧದ ಹಾದಿಯಲ್ಲಿ…

Add a Comment

required, use real name
required, will not be published
optional, your blog address