ಗಾಂಧಿ ಜಯಂತಿ ಕಥಾಸ್ಪರ್ಧೆ ಫಲಿತಾಂಶ

This post was written by admin on December 7, 2008
Posted Under: Uncategorized

ನಾನು “ವಿಕ್ರಾಂತ ಕರ್ನಾಟಕ”ದ ಮೂಲಕ ಪ್ರಾಯೋಜಿಸಿದ್ದ “ಗಾಂಧಿ ಜಯಂತಿ ಕಥಾಸ್ಪರ್ಧೆ“ಯ ಫಲಿತಾಂಶ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಲೇಖಕ ಡಿ.ಎಸ್. ನಾಗಭೂಷಣ್, ಕಾದಂಬರಿಗಾರ್ತಿ ಡಾ. ಎಚ್. ನಾಗವೇಣಿ, ಮತ್ತು ಕವಿ ಸವಿತಾ ನಾಗಭೂಷಣ್‍ರವರು ತೀರ್ಪುಗಾರರಾಗಿ ಕತೆಗಳನ್ನು ಪರಿಶೀಲಿಸಿ, ಫಲಿತಾಂಶ ಮತ್ತು ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಈ ಹಿರಿಯ ಮಿತ್ರರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೆ, ಈ ಕಥಾಸ್ಪರ್ಧೆ ಆಯೋಜಿಸಲು ಸಹಕರಿಸಿದ ಮತ್ತು ನಡೆಸಿಕೊಟ್ಟ “ವಿಕ್ರಾಂತ ಕರ್ನಾಟಕ”ದ ಸಂಪಾದಕೀಯ ಮಂಡಳಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಕತೆಗಾರ ಮಿತ್ರರಿಗೂ ನನ್ನ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು.

ರವಿ…

“ವಿಕ್ರಾಂತ ಕರ್ನಾಟಕ”ದ ಮೂಲಸಂಸ್ಥಾಪಕರಾಗಿದ್ದ ರವಿ ಕೃಷ್ಣಾ ರೆಡ್ಡಿಯವರು ಪ್ರಾಯೋಜಿಸಿರುವ “ಗಾಂಧಿ ಜಯಂತಿ ಕಥಾಸ್ಪರ್ಧೆ”ಗೆ ಬಂದ ಕಥೆಗಳಲ್ಲಿ ತೀರ್ಪುಗಾರರಾದ ನಮ್ಮ ಬಳಿ ಬಂದವು ಒಟ್ಟು 24 ಕಥೆಗಳು. ಕಥೆಗಳು ಗಾಂಧಿವಾದದ ಮೌಲ್ಯಗಳನ್ನಾಧರಿಸಿರಬೇಕೆಂಬುದು ಸ್ಪರ್ಧೆಯ ಮುಖ್ಯ ಆಶಯ. ಈ ಆಶಯವೇನೋ ಇಂದಿನ ರಾಜಕೀಯ ಸಂದರ್ಭದಲ್ಲಿ ಅಮೂಲ್ಯವೆನಿಸುವುದಾದರೂ, ಯಾವುದೇ ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ಕಥೆ ಕಟ್ಟಲು ನೀಡುವುದು ಒಳ್ಳೆಯ ಕಥೆಗಳ ಸೃಷ್ಟಿಯನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಮಾರ್ಗವೇನೂ ಅಲ್ಲ ಎಂಬುದು ಈ ತೀರ್ಪುಗಾರರ ಅಭಿಮತ. ಹಾಗೇ ಗಾಂಧೀ ಮೌಲ್ಯಗಳನ್ನು ಸಾಕಷ್ಟು ವಿಸ್ತರಿಸಿ ನಿರೂಪಿಸಿರುವ ಸ್ಪರ್ಧೆ; ಕಥೆ ವರದಿಯಂತಿರಬಾರದು, ಸಮಾಜಶಾಸ್ತ್ರೀಯ ಸೃಜನಶೀಲ ದಾಖಲೆಯ ಮಟ್ಟದಲ್ಲಿರಬೇಕು. ಕಲಾತ್ಮಕವಾಗಿರಬೇಕು ಎಂದು ಸೂಚಿಸುವ ಮೂಲಕ ವ್ಯಕ್ತಪಡಿಸಿರುವ ನಿರೀಕ್ಷೆಗಳು ಕಥೆಗಾರರಿಗೆ ರಚನಾತ್ಮಕ ಸವಾಲುಗಳಿಗಿಂತ ಹೆಚ್ಚಾಗಿ ಅವರ ಮೇಲೆ ಸಾಕಷ್ಟು ಒತ್ತಡಗಳನ್ನು ಹಾಕಿರುವುದು ಸ್ಪರ್ಧೆಗೆ ಬಂದ ಕಥೆಗಳನ್ನು ಓದಿದಾಗ ನಮ್ಮ ಗಮನಕ್ಕೆ ಬಂತು.

ಬಹಳಷ್ಟು ಕಥೆಗಳು ಸಮಕಾಲೀನ ರಾಷ್ಟ್ರೀಯ ಸಂಕಟವೆನಿಸಿರುವ ಕೋಮುವಾದಿ ರಾಜಕಾರಣದ ಸುತ್ತಲೇ ಗಿರಕಿ ಹೊಡೆದಿವೆ. ಹಾಗೇ ಕೆಲವು ಕಥೆಗಳು ಭ್ರಷ್ಟಾಚಾರದ ವಸ್ತುವಿನ ಸುತ್ತ ತಿರುಗುತ್ತಾ, ಇಂದಿನ ರಾಜಕೀಯ ಅವನತಿಗೆ ಸಾರ್ವಜನಿಕ ಜೀವನದಲ್ಲಿ ಗಾಂಧಿ ಮೌಲ್ಯಗಳು ಕಣ್ಮರೆಯಾಗಿರುವುದೇ ಕಾರಣವಾಗಿದೆ ಎಂದು ಸೂಚಿಸುವ ಪ್ರಯತ್ನ ಮಾಡಿವೆ. ಆದರೆ ಇವೆಲ್ಲವೂ ಸಮಕಾಲೀನ ಪರಿಸ್ಥಿತಿಯ ಸಂಕೀರ್ಣತೆಗಳನ್ನು, ಜಟಿಲತೆಗಳನ್ನು ಅರಿಯುವ ಪ್ರಯತ್ನ ಮಾಡದೆ, ಗಾಂಧಿವಾದದ ಸರಳ ಗ್ರಹಿಕೆಯ ರೂಪದಲ್ಲಿ ಮೂಡಿ, ಕಥೆಗಳನ್ನು ಜಾಳುಜಾಳುಗೊಳಿಸಿವೆ. ಇನ್ನು ಕೆಲವು ಕಥೆಗಳು ದಟ್ಟ ಸಾಮಾಜಿಕ ವರ್ಣನೆಗಳನ್ನು ಒಳಗೊಂಡು ವಿಶ್ವಾಸ ಹುಟ್ಟಿಸುವುವಾದರೂ, ಆ ವರ್ಣನೆಗಳು ಅಂತಿಮವಾಗಿ ಹುಸಿ ಭಾವನಾತ್ಮಕ ಅಂತ್ಯಗಳನ್ನು ಕಟ್ಟಿ ಕೊಡುವುದರಲ್ಲಿ ವ್ಯರ್ಥವಾಗಿವೆಯಷ್ಟೆ.

ಕಥಾ ಸ್ಪರ್ಧೆಯ ಆಶಯ, ಉದ್ದೇಶ ಮತ್ತು ಸೂಚನೆಗಳನ್ನು ಸರಿಸಿ ನಾವು ಬಹುಮಾನಗಳಿಗೆ ಅರ್ಹವಾದ ಕಥೆಗಳನ್ನು ಹುಡುಕತೊಡಗಿದಾಗ ನಮಗೆ ನಿರಾಶೆಯಾಯಿತೆಂದೇ ಹೇಳಬೇಕು. ಹೀಗಾಗಿ ಈ ಆಶಯ, ಉದ್ದೇಶ, ಸೂಚನೆಗಳನ್ನು ಹಿನ್ನೆಲೆಯ ಸರಿಸಿ; ಗಾಂಧಿವಾದದ ನೇರ ಹಾಗೂ ಸ್ಪಷ್ಟ ಚಹರೆಗಳನ್ನು ಒಳಮೌಲ್ಯವಿದ್ದರೂ, ಕಥೆ ಸೃಷ್ಟಿಸುವ ಒಟ್ಟು ಭಾವನೆಯ ಮಟ್ಟದಲ್ಲಿ ಸ್ಥೂಲವಾಗಿಯಾದರೂ ಗಾಂಧಿ ಮೌಲ್ಯಗಳನ್ನು ಧ್ವನಿಸುವಂತಹ ಕಥೆಗಳನ್ನು ಗುರುತಿಸುವ ಪ್ರಯತ್ನ ಮಾಡಿದಾಗ ದೊರಕಿದ್ದು ಆರು ಕಥೆಗಳು. ಇವುಗಳಲ್ಲಿ ಪ್ರತಿಯೊಂದು ಕಥೆಯೂ ಕಥೆಗಾರಿಕೆಯ ಬೇರೆ ಬೇರೆ ಆಯಾಮಗಳಲ್ಲಿ ಪ್ರಕಟಪಡಿಸಿರುವ ಬೇರೆ ಬೇರೆ ಮಟ್ಟದ ಸಾಧನೆಗಳನ್ನು ಒಟ್ಟು ಮಾಡಿ ನೋಡಿದಾಗ, ಅವೆಲ್ಲವೂ ಹೆಚ್ಚೂಕಡಿಮೆ ಒಂದೇ ಮಟ್ಟದವು ಎನ್ನಿಸಿದವು. ಹಾಗಾಗಿ ನಾವು ಬಹುಮಾನಗಳನ್ನು ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸುವುದು ಉಚಿತವೆನ್ನಿಸದೆ, ಈ ಆರೂ ಕಥೆಗಳಿಗೂ ತಲಾ ಎರಡು ಸಾವಿರ ರೂಪಾಯಿಗಳ ಬಹುಮಾನ ನೀಡುವಂತೆ ಶಿಫಾರಸು ಮಾಡಿದ್ದೇವೆ:

  1. ಪುನರಪಿ- ಚಲಂ, ಹಾಸನ
  2. ಉತ್ತರಾಧಿಕಾರ- ದೀಪಾ ಹಿರೇಗುತ್ತಿ, ಕೊಪ್ಪ
  3. ಪಾಲು- ವೆಂಕಟ್ ಮೋಂಟಡ್ಕ, ಬೆಂಗಳೂರು
  4. ಮಬ್ಬು ಕವಿದ ಹಾದಿ- ಮಾರ್ನಮಿಕಟ್ಟೆ ನಾಗರಾಜ, ಬೆಂಗಳೂರು
  5. ಮೊಹರಂ ಹಬ್ಬದ ಕಡೆಯ ದಿನ- ಹನುಮಂತ ಹಾಲಿಗೇರಿ, ಬೆಂಗಳೂರು
  6. ಆವರ್ತ- ಡಾ.ಟಿ.ಎಸ್.ವಿವೇಕಾನಂದ, ಬೆಂಗಳೂರು.

“ಪುನರಪಿ” ಅವಿಚಲವಾದ ನ್ಯಾಯ ಪ್ರಜ್ಞೆ, ಬದ್ಧತೆ, ಕ್ಷಮೆ, ಪ್ರೀತಿ ಮತ್ತು ನಿರ್ಮೋಹಗಳ ಶಕ್ತಿಯನ್ನು ನಿರೂಪಿಸುವ ತನ್ನ ನಿರಾಭರಣ ಮತ್ತು ಸರಳ ಶೈಲಿಯಿಂದಾಗಿ ಗಮನ ಸೆಳೆಯುತ್ತದೆ. “ಉತ್ತರಾಧಿಕಾರ”, ಓರ್ವ ಸಮಕಾಲೀನ ರಾಜಕಾರಣಿಯ ಮಾನಸಿಕ ತೊಳಲಾಟವನ್ನು Flash basis ತಂತ್ರದ ಮೂಲಕ ಸ್ವಲ್ಪ ‘ನವ್ಯ’ ಶೈಲಿಯಲ್ಲಿ ನಿರೂಪಿಸುತ್ತಾ, ಗಾಂಧಿ ನಮ್ಮನ್ನು ಒಂದು ‘ಪಾಪಪ್ರಜ್ಞೆ’ಯಾಗಿ ಕಾಡುತ್ತಿರುವ ಪರಿಯನ್ನು ಸೂಕ್ಷ್ಮವಾಗಿ ಹಿಡಿದಿಡುತ್ತದೆ. “ಪಾಲು” ದಟ್ಟ ಪ್ರಾಕೃತಿಕ ವಿವರಗಳ ಹಿನ್ನೆಲೆಯಲ್ಲಿ, ಲೋಭ ತಂದೊಡ್ಡುವ ಆತ್ಯಂತಿಕ ದುರಂತವನ್ನು ಸಾಂಕೇತಿಕ ನೆಲೆಯಲ್ಲಿ ಒಪ್ಪಿಸುವ ಪ್ರಯತ್ನ ಮಾಡುತ್ತದೆ. “ಮಬ್ಬು ಕವಿದ ಹಾದಿ”, ಗಾಂಧಿ ಯುಗದ ಆದರ್ಶಗಳನ್ನು ಥಣ್ಣಗೆ ಇಂದಿನ ನೈತಿಕ ಅವನತಿಯ ದಿನಗಳ ಸಂದರ್ಭದಲ್ಲಿಟ್ಟು ಹುಟ್ಟಿಸುವ ವಿಷಾದದಿಂದ ಗಮನ ಸೆಳೆಯುತ್ತದೆ. “ಮೊಹರಂ ಹಬ್ಬದ ಕಡೆಯ ದಿನ”, ಊರ ಹಬ್ಬವಾಗಿದ್ದ ಮೊಹರಂ ಆಚರಣೆ ಈ ಜನಗಳ ಕೋಮುವಾದಿ ರಾಜಕಾರಣ ಪರಿಣಾಮವಾಗಿ ಊರಕೆರೆಯನ್ನು ಒಣಗಿಸುವ ದೈವಶಾಪದ ಸಂಕೇತವಾಗುವ ದುರಂತವನ್ನು ಸೂಚ್ಯವಾಗಿ ಹೇಳುತ್ತದೆ. “ಆವರ್ತ”, ರಚನಾತ್ಮಕ ಕೆಲಸಗಳು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಲ್ಲಬಲ್ಲವು ಎಂಬುದನ್ನು ಸೂಚಿಸುತ್ತಿರುವಂತೆಯೇ ಇಂದಿನ ರಾಜಕಾರಣ ಅದನ್ನು ವ್ಯಂಗ್ಯಕ್ಕೊಡ್ಡುವ ಪರಿಯನ್ನು ಕುತೂಹಲಕಾರಿ ಕಥನ ಶೈಲಿ ಮತ್ತು ಅನಿರೀಕ್ಷಿತ ಅಂತ್ಯದೊಂದಿಗೆ ನಿರೂಪಿಸುತ್ತದೆ.

ಹಾಗೆ ನೋಡಿದರೆ, ಈ ಸ್ಪರ್ಧೆ ತನ್ನ ವಸ್ತು ನಿರ್ಬಂಧದಿಂದಾಗಿ ಕನ್ನಡದ ಅತ್ಯುತ್ತಮ ಕಥನ ಪ್ರತಿಭೆಗಳನ್ನು ಆಕರ್ಷಿಸದೆ ಬಹುಮಾನಗಳಿಗೆ ಅರ್ಹವಾದ ಕಥೆಗಳು ಬರದಂತಾಗಿದೆ ಎಂದೂ ಹೇಳುವಂತಿಲ್ಲ. ಏಕೆಂದರೆ ಸರಿಸುಮಾರು ಇದೇ ಸಂದರ್ಭದಲ್ಲಿ ನಾಡಿನ ಪ್ರತಿಷ್ಠಿತ ಪತ್ರಿಕೆಗಳ ದೀಪಾವಳಿ ಕಥಾಸ್ಪರ್ಧೆಗಳು ಬಹುಮಾನಿತ ಕಥೆಗಳೂ ಈ ಕಥೆಗಳಿಗಿಂತ ತುಂಬಾ ಉತ್ತಮವಾಗೇನೂ ಇಲ್ಲ! ಹೀಗಾಗಿ, ಅವಕಾಶಗಳು ಹೆಚ್ಚಾಗಿಯೋ, ಪ್ರೋತ್ಸಾಹ ಅತಿಯಾಗಿಯೋ, ಬಹುಮಾನಗಳ ಮೊತ್ತ ವಿಪರೀತವಾದುದರ ಕಾರಣವೋ ಕನ್ನಡ ಕಥೆಗಾರಿಕೆ ಸದ್ಯಕ್ಕಂತೂ ತನ್ನ ಮಹತ್ವಾಕಾಂಕ್ಷೆಯನ್ನು ಕಳೆದುಕೊಂಡಂತಿದೆ. ವೈಯಕ್ತಿಕ ಸ್ತರದಲ್ಲಾಗಲೀ, ಸಾಮುದಾಯಕ ಪ್ರಜ್ಞೆಯ ಸ್ತರದಲ್ಲಾಗಲೀ ತಮ್ಮನ್ನು ಅಲ್ಲಾಡಿಸುವಂತಹ ಕಥೆಗಾಗಿ ಈಗ ಕುತೂಹಲದಿಂದ ಕಾಯುವಂತಾಗಿದೆ.

ಡಿ.ಎಸ್.ನಾಗಭೂಷಣ
ಡಾ.ಎಚ್.ನಾಗವೇಣಿ
ಸವಿತಾ ನಾಗಭೂಷಣ


ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ಆಯೋಜಿಸಿದಾಗ ನಾನು ಬರೆದುಕೊಂಡಿದ್ದ ಕಾರಣ ಮತ್ತು ಹಿನ್ನೆಲೆಗಳ ಬ್ಲಾಗ್ ಲೇಖನ ಇದು.

Reader Comments

ರವಿಯವರೇ,
“ಗಾಂಧಿ ಜಯಂತಿ ಕಥಾಸ್ಪರ್ಧೆ”ಯನ್ನು ಪ್ರಾಯೋಜಿಸಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ವಂದನೆಗಳು. ನನ್ನ ಕಥೆಯೊಂದನ್ನು ಸಮಾಧಾನಕರ ಬಹುಮಾನಕ್ಕೆ ಆಯ್ಕೆ ಮಾಡಿರುವ ತೀರ್ಪುಗಾರರಿಗೆ ಹಾಗೂ”ವಿಕ್ರಾಂತ ಕರ್ನಾಟಕ”ವಾರಪತ್ರಿಕೆಗೆ ನನ್ನ ಕೃತಜ್ಞತೆಗಳು.

#1 
Written By ಮಾರ್ನಮಿಕಟ್ಟೆ ನಾಗರಾಜ on December 16th, 2008 @ 9:15 am

Add a Comment

required, use real name
required, will not be published
optional, your blog address