ಶತಮಾನದ ಹಿಂದೆ ಗಾಂಧಿ ಹೇಳಿದ್ದು…

This post was written by admin on December 27, 2008
Posted Under: Uncategorized

ವಿಚಾರ ಮಂಟಪದ basic ಕೆಲಸ ಮುಗಿದ ತಕ್ಷಣ, ಈ ಒಂದು ಮೂರು ದಿನದಿಂದ ಗಾಂಧಿಯ ಮೊಮ್ಮಗ ರಾಜ್‌ಮೋಹನ್ ಗಾಂಧಿ ಬರೆದಿರುವ “Gandhi – The Man, His People, and the Empire” ಹಿಡಿದುಕೊಂಡು ಕುಳಿತಿದ್ದೇನೆ.

ನನಗೆ ನಾನೆ ಮನನ ಮಾಡಿಕೊಳ್ಳುವುದು, ಗುರುತು ಮಾಡಿಕೊಳ್ಳುವುದು ಬಹಳಷ್ಟು ಇದೆ. ಲೈಬ್ರರಿ ಕಾಪಿ ಎಂದು ಸುಮ್ಮನಾಗುತ್ತೇನೆ. ಸಾಧ್ಯವಾದಾಗ ಇಲ್ಲಿಯೇ ಬರೆದುಕೊಳ್ಳಬೇಕು ಎನ್ನಿಸುತ್ತದೆ. ಈಗ ಅಂತಹುದೊಂದು.

ಸರಿಯಾಗಿ 100 ವರ್ಷದ ಹಿಂದೆ ಗಾಂಧಿ ಮೊದಲ ಬಾರಿಗೆ ಜೈಲಿಗೆ ಹೋಗಿದ್ದು (1908 ರ ಆರಂಭದಲ್ಲಿ). ಸತ್ಯಾಗ್ರಹದ ಆರಂಭ ಕಾಲ ಅದು. 1908 ರ ಅಂತ್ಯದಲ್ಲಿ, ಗಾಂಧಿ ಜೈಲಿನಿಂದ ಹೊರಗೆ ಇರುವಾಗ, ಗಾಂಧಿಯ ಸತ್ಯಾಗ್ರಹದಲ್ಲಿ ಪಾಲ್ಗೊಂಡ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರು ಅಲ್ಲಿನ ಭಾರತೀಯರ ವಿರುದ್ಧದ ಕಾನೂನುಗಳನ್ನು ಉಲ್ಲಂಘಿಸಿ ಜೈಲಿಗೆ ಹೋಗುತ್ತಾರೆ. ಆದರೆ ಕೆಲವು ಭಾರತೀಯರು ಜೈಲಿಗೂ ತಮ್ಮ ಜಾತಿಶ್ರೇಷ್ಠತೆಯನ್ನು ಒಯ್ಯುತ್ತಾರೆ. ದಲಿತನ ಪಕ್ಕ ಮಲಗಲು ಕೆಲವರು ಒಪ್ಪುವುದಿಲ್ಲ. ಅದನ್ನು ಕೇಳಿ, ಕ್ರುದ್ಧ ಗಾಂಧಿ ಬರೆಯುತ್ತಾರೆ:

“ಈ ಆಷಾಢಭೂತಿತನದ ಮೇಲು ಕೀಳು ಭೇದಗಳಿಂದಾಗಿ ಮತ್ತು ಚಾಲ್ತಿಯಲ್ಲಿರುವ ಜಾತಿ ದಬ್ಬಾಳಿಕೆಯಿಂದಾಗಿ ನಾವು ಸತ್ಯಕ್ಕೆ ಬೆನ್ನು ತೋರಿಸಿ ಅಸತ್ಯವನ್ನು ಅಪ್ಪಿಕೊಂಡಿದ್ದೇವೆ. ಈ ಚಳವಳಿಯಲ್ಲಿ ಪಾಲ್ಗೊಂಡಿರುವ ಭಾರತೀಯರು ಈ ದುಷ್ಟತನ ಎಲ್ಲೆಲ್ಲಿ ಕಾಣಿಸುತ್ತದೊ ಅಲ್ಲೆಲ್ಲವೂ, ತಮ್ಮ ಜಾತಿಯ ವಿರುದ್ಧವೂ, ಕುಟುಂಬದ ವಿರುದ್ಧವೂ ಸತ್ಯಾಗ್ರಹ ಮಾಡಲು ಮುಂದಾಗಲಿ ಎಂದು ಬಯಸುತ್ತೇನೆ. ” (ಜನವರಿ 30, 1909 ರಂದು Indian Opinion ನಲ್ಲಿ)

ಈಗಲೂ ಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ಬಲಿಷ್ಠವಾಗಿಯೇ ಮುಂದುವರೆಯುತ್ತಿರುವ ಜಾತೀಯತೆ, ಕೋಮುದ್ವೇಷ, ಮೂಲಭೂತವಾದಿತನಗಳ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ನಾವು ಸುಧಾರಿಸಿಯೇ ಇಲ್ಲ. ಇಲ್ಲಿಯತನಕದ ಸುಧಾರಣೆ ಸುಧಾರಣೆಯೇ ಅಲ್ಲ. ಬಹುಸಂಖ್ಯಾತರಿಗೆ ಗಾಂಧಿಯ ಸರಳ ಕಾನ್ಸೆಪ್ಟ್‌ಗಳಾಗಲಿ, ಸಮಾನತೆ, ಸರ್ವೋದಯ, ಸಹಬಾಳ್ವೆಯ ವಿಷಯಗಳಾಗಲಿ ಇನ್ನೂ ತಲುಪಿಯೇ ಇಲ್ಲ. ಇದರಲ್ಲಿ ಅಕ್ಷರ ಕಲಿತವರೂ, ಸಮಾಜದಲ್ಲಿ ಗಣ್ಯರಾಗಿರುವವರೂ, ಬರಹಗಾರರೂ ಇದ್ದಾರೆ ಎನ್ನುವುದು ಇನ್ನೂ ಶೋಚನೀಯವಾದ ವಿಷಯ. ಒಂದು ಮುಂದಡಿ ಇಟ್ಟು ಎರಡು ಹಿಂದಡಿ ಇಡುತ್ತಿರುವ ಸಮಾಜವೆ ನಮ್ಮದು?

Add a Comment

required, use real name
required, will not be published
optional, your blog address