ಗಾಂಧಿ, ಸಾವರ್ಕರ್, ಪ್ರಚೋದಕರು…
Posted Under: Uncategorized
ಈಗ ಓದುತ್ತಿರುವ “Gandhi – The Man, His People, and the Empire” ನಲ್ಲಿ ಲೇಖಕ ರಾಜ್‌ಮೋಹನ್ ಗಾಂಧಿ, ಸಾವರ್ಕರ್ ಮತ್ತು ಮೋಹನ್‌ದಾಸ್ ಗಾಂಧಿಯ ನಡುವಿನ ಎರಡು ಭೇಟಿಗಳ ಬಗ್ಗೆ ಬರೆಯುತ್ತಾರೆ. ಆ ಭಾಗಗಳನ್ನು ಓದುವ ಒಂದೆರಡು ದಿನಗಳ ಹಿಂದೆಯಷ್ಟೆ ನಾನು ಇಲ್ಲಿ ಒಬ್ಬ ಮಂಡ್ಯದ ಯುವಕನನ್ನು ಭೇಟಿಯಾಗಿದ್ದೆ. ಬುದ್ಧಿವಂತ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಎಲ್ಲಾ ಓದುತ್ತಾನೆ. ಅಲ್ಲಿ ಹತ್ತಾರು ವರ್ಷಗಳ ಕಾಲ ಸಾವರ್ಕರ್ ಪ್ರಣೀತ ಹಿಂದೂ ಮತೀಯವಾದಿಗಳ ಅಂಗಳದಲ್ಲೂ ಓಡಾಡಿದ್ದಾನೆ. ಆತನ ಜೊತೆ ಮಾತನಾಡುತ್ತಿದ್ದಾಗ ಅಚಾನಕ್ಕಾಗಿ ಗಾಂಧಿ ವಿಷಯ ಬಂತು. ನಾನೆಂದೆ, ‘ಅಲ್ರಿ, ಈ ಹಿಂದೂ ಮತೀಯವಾದಿಗಳಿಗೆ ಗಾಂಧೀಜಿ ಅಂದ್ರೆ ಯಾಕಿಷ್ಟು ಕೋಪ? ಅದು ಯಾಕೆ ಗಾಂಧಿಯನ್ನು ಈ ಪರಿ ದ್ವೇಷಿಸುತ್ತಾರೆ?’
ಆ ಯುವಕನ ಉತ್ತರ ನನ್ನ ಬುದ್ಧಿ ಮತ್ತು ವಿವೇಚನಾ ಶಕ್ತಿಯನ್ನೆ ಅಣಕಿಸಿತು. ಜನರ ದುಷ್ಟತನ ಅಥವ ಪಿತೂರಿಗಳನ್ನು ಅರ್ಥ ಮಾಡಿಕೊಳ್ಳುವ ನನ್ನ ಅಸಾಮರ್ಥ್ಯವನ್ನೂ ನನಗೆ ಎತ್ತಿ ತೋರಿಸಿತು. ಆತ ಹೇಳಿದ್ದು, ‘ನೀವು ಚೆನ್ನಾಗಿ ಹೇಳ್ತೀರ, ಗಾಂಧೀನ ಕಂಡೆಮ್ ಮಾಡದೇ ಇದ್ದರೆ ಸಾವರ್ಕರ್ ಗ್ರೇಟು ಅಂತ ತೋರಿಸೋದು ಹೇಗೆ? ಸಾವರ್ಕರ್‌ನ ಮುಂದಕ್ಕೆ ತರಬೇಕು ಅಂದರೆ ಗಾಂಧೀನ ಬೈಯ್ಯಲೇಬೇಕು.’ ಇದು ಮತೀಯವಾದಿಗಳ ಪಡಸಾಲೆಯಲ್ಲಿ ಓಡಾಡಿ ಎದ್ದುಬಂದವನ ಮಾತು. ಆತನ ಮಾತನ್ನು ಒಪ್ಪಿಕೊಳ್ಳದೆ ಇರಲು ನನಗೆ ಯಾವ ಕಾರಣಗಳೂ ಕಾಣುತ್ತಿಲ್ಲ.
ಈಗ ಗಾಂಧಿ ಓದುವಾಗ ಆ ಯುವಕನ ಮಾತುಗಳು ಪದೇಪದೆ ನೆನಪಾಗುತ್ತವೆ.
ಸಾವರ್ಕರ್‌ರ ಗುರು ಕೃಷ್ಣವರ್ಮ ಎಂಬಾತ ಲಂಡನ್ನಿನಲ್ಲಿ Indian Socialogist ಎನ್ನುವ ಪತ್ರಿಕೆ ನಡೆಸುತ್ತಿದ್ದ. ಆತನ ಸಿದ್ಧಾಂತ ಬ್ರಿಟಿಷರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿತ್ತು. ಅದಕ್ಕೆ ತರಬೇತಿಯೂ ಕೊಡಲಾಗುತ್ತಿತ್ತು. ಗಾಂಧಿ ಬ್ರಿಟಿಷರ ಜೊತೆ ದಕ್ಷಿಣ ಆಫ್ರಿಕಾದ ಭಾರತೀಯರ ಸಮಸ್ಯೆಗಳನ್ನು ಚರ್ಚಿಸಲು 1905 ರಲ್ಲಿ ಲಂಡನ್ನಿಗೆ ಬಂದಿದ್ದಾಗ ಅವರ ಅಹಿಂಸಾತ್ಮಕ ಹೋರಾಟವನ್ನು ಟೀಕಿಸಿದ್ದ ಕೃಷ್ಣವರ್ಮನನ್ನೂ ಭೇಟಿ ಆಗುತ್ತಾರೆ. ಆಗಿನ ಕೆಲ ಭಾರತೀಯರಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಹಿಂಸಾತ್ಮಕ ವಿರೋಧವನ್ನು ಕಂಡ ಗಾಂಧಿ ಕೃಷ್ಣವರ್ಮನ ಗುಂಪಿನ ಜೊತೆ ಎರಡು ದಿನ ಕಳೆಯುತ್ತಾರೆ. ಅವರ ಸಿದ್ಧಾಂತದ ಬಗ್ಗೆ ಕಳವಳಗೊಂಡಿದ್ದ ಗಾಂಧಿ ಅವರನ್ನು ಮಾತುಕತೆಯ ಮೂಲಕ, ಚರ್ಚೆಯ ಮೂಲಕ ಎಂಗೇಜ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂಸೆಗೆ ಪರ್ಯಾಯವಾಗಿ ಅವರಿಗೆ ಶಾಂತಿಯುತ ಅಸಹಕಾರವನ್ನು ಅಪ್ಪಿಕೊಳ್ಳಲು ಹೇಳುತ್ತಾರೆ. ಅಲ್ಲಿಯೇ 23 ವರ್ಷದ ಸಾವರ್ಕರ್ 36 ವರ್ಷದ ಗಾಂಧಿಯನ್ನು ಮೊದಲ ಸಲ ಭೇಟಿ ಆಗಿದ್ದು.
ಗಾಂಧಿ 1909 ರಲ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಿಂದ ಲಂಡನ್ನಿಗೆ ಬರುತ್ತಾರೆ. ಅವರು ಬರುವುದಕ್ಕೆ ಎಂಟು ದಿನಗಳ ಹಿಂದೆಯಷ್ಟೆ ಕೃಷ್ಣವರ್ಮ ಮತ್ತು ಸಾವರ್ಕರ್‌ರಿಂದ ಪ್ರಚೋದನೆಗೊಂಡ ಮದನ್‍ಲಾಲ್ ಧಿಂಗ್ರಾ ಎಂಬ ಯುವಕ ಕರ್ಜನ್ ವಿಲ್ಲಿ ಎಂಬಾತನನ್ನು ಕೊಂದಿರುತ್ತಾನೆ. (ಕರ್ಜನ್ ವಿಲ್ಲಿ ಆಗಿನ ಇಂಗ್ಲೆಂಡ್ ಸರ್ಕಾರದಲ್ಲಿ ಭಾರತದ ಉಸ್ತುವಾರಿ ನೋಡಿಕೊಳ್ಳುತ್ತಿದ ವಿದೇಶಾಂಗ ಸಚಿವನ ರಾಜಕೀಯ ಸಹಾಯಕ.) ಇದೇ ಹಿನ್ನೆಲೆಯಲ್ಲಿ ಗಾಂಧಿ ಮತ್ತೊಮ್ಮೆ ಉಗ್ರವಾದಿ ವಿದ್ಯಾರ್ಥಿಗಳ ಜೊತೆ ಒಂದು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಅವರಿಂದಲೆ ಬಂದಿದ್ದ ಆಹ್ವಾನ. ಆ ಸಭೆಯಲ್ಲಿ ಗಾಂಧಿ ಧಿಂಗ್ರಾನನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎನ್ನುತ್ತಾರೆ. ಅಲ್ಲಿ ಸಾವರ್ಕರ್ ಇನ್ನೊಬ್ಬ ಭಾಷಣಕಾರ. ಆತ ಏನು ಹೇಳಿದ ಎಂದು ಈ ಪುಸ್ತಕದಲ್ಲಿ ಹೇಳಿಲ್ಲ. ಆ ಸಮಯದಲ್ಲಿ ಕರ್ಜನ್‌ನ ಕೊಲೆಯಲ್ಲಿಯ ಸಾವರ್ಕರ್ ಪಾತ್ರ ಇನ್ನೂ ಬಹಿರಂಗವಾಗಿರಲಿಲ್ಲ.
ಆದರೆ ತದನಂತರದ ದಿನಗಳಲ್ಲಿ ಆ ಕೊಲೆಯಲ್ಲಿ ಸಾವರ್ಕರ್‌ರ ಪ್ರಚೋದನೆ ಮತ್ತು ಸಮರ್ಥನೆ ನಿರೂಪಿತವಾಗಿ, ಸಾವರ್ಕರ್‌ಗೆ ಜೈಲುಶಿಕ್ಷೆಯಾಗಿ ಅಂಡಮಾನಿಗೆ ಕಳಿಸಲಾಗುತ್ತದೆ.
ಈ ಮೇಲಿನ ಪ್ರಸಂಗದ ಬಗ್ಗೆ ರಾಜ್‌ಮೋಹನ್ ಬರೆಯುತ್ತಾರೆ: “ನಂತರದ ದಿನಗಳಲ್ಲಿ ಸಾವರ್ಕರ್ ಗಾಂಧಿಯ ಬಗ್ಗೆ ತೋರಿಸುವ ದ್ವೇಷ ಬಹುಶಃ ಯಾವಾಗ ಗಾಂಧಿ ಕರ್ಜನ್ ವಿಲ್ಲಿಯನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎಂದರೊ ಆಗ ಹುಟ್ಟಿದ್ದಾಗಿರಬೇಕು.”
ಈ ಪ್ರವಾಸದ ನಂತರದ ಹಡಗು ಪ್ರಯಾಣದಲ್ಲೆ ಗಾಂಧಿ “ಹಿಂದ್ ಸ್ವರಾಜ್” ಬರೆದದ್ದು.
(ಇದೇ ಸಮಯದಲ್ಲಿ, ತಾವು ಮಾಡುತ್ತಿರುವುದೇ ಸರಿಯಾದ ಹೋರಾಟ, ಅದಕ್ಕೆ ಸಶಸ್ತ್ರ ಹೋರಾಟವೆ ಸರಿ ಎಂದು ಸಮರ್ಥಿಸಿಕೊಳ್ಳುವ ನಕ್ಸಲ್‌ವಾದಿಗಳೂ ನೆನಪಾಗುತ್ತಾರೆ. ತಮ್ಮ ಲೌಕಿಕ ಸುಖಗಳನ್ನು ತ್ಯಾಗ ಮಾಡಿ ಹೋರಾಟ ಮಾಡಿದಾಕ್ಷಣಕ್ಕೆ ಯಾರೊಬ್ಬರ ಹಿಂಸಾತ್ಮಕ ಹೋರಾಟವೂ ಆದರ್ಶಪ್ರಾಯವಲ್ಲ ಮತ್ತು ಪ್ರಶಂಸನೀಯವಲ್ಲ. ಅದು ದೇಶಪ್ರೇಮಿ ಉಗ್ರವಾದಿಗಳಿಗೂ, ಮೂಲಭೂತವಾದಿಗಳಿಗೂ, ಅಸಮಾನತಾ ವಿರೋಧಿ ನಕ್ಸಲ್‌ವಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ.)