ನೀವು ಪ್ರಾಮಾಣಿಕರಾಗಿದ್ದರೆ ಇನ್ನು ಲಂಚ ಕೊಡಬೇಕಾಗಿಲ್ಲ!

This post was written by admin on October 29, 2006
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 10, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ನನ್ನ ಪ್ರಕಾರ ಲಂಚದಲ್ಲಿ ಎರಡು ವಿಧ. ಒಂದು, ಕಾನೂನುಬದ್ಧವಾಗಿ ಯಾವುದೇ ತಕರಾರಿಲ್ಲದೆ ಆಗಬೇಕಾದ ಕೆಲಸಕ್ಕೆ ಕೊಡುವ ಲಂಚ; ಉದಾಹರಣೆಗೆ, ಜನನಮರಣ ಪತ್ರಕ್ಕೆ, ಚಾಲಕ ಪರವಾನಿಗೆ ಪಡೆಯಲು, ರೇಷನ್ ಕಾರ್ಡ್ ಪಡೆಯಲು, ವಿದ್ಯುತ್ ಸಂಪರ್ಕ ಪಡೆಯಲು, ಜಾತಿ ಪ್ರಮಾಣ ಪತ್ರ, ಇತರೆ. ಇನ್ನೊಂದು, ಕಾನೂನು ವಿರೋಧಿ ಕೆಲಸಗಳಿಗೆ ಕೊಡುವ ಲಂಚ: ಉದಾಹರಣೆಗೆ, ಇನ್ನೂ ಆಗದಿರುವ ಕಾಮಗಾರಿಗಳಿಗೆ ಕಳ್ಳತನದಲ್ಲಿ ಬಿಲ್ ಮಾಡಿಸಿಕೊಳ್ಳಲು ಕೊಡುವ ಹಣ, ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ಕೊಡುವ ಹಣ, ಕೋಟ್ಯಂತರ ಬೆಲೆಯ ಜಮೀನುಗಳನ್ನು ಲಕ್ಷಗಳ ಲೆಕ್ಕದಲ್ಲಿ ಮಂಜೂರು ಮಾಡಿಸಿಕೊಳ್ಳಲು ಕೊಡುವ ಹಣ, ನಾವು ಕೇಳುವ ಎಲ್ಲಾ ತರಹದ ಬೋಫೋರ್ಸ್, ಶವಪೆಟ್ಟಿಗೆ, ಛಾಪಾ ಕಾಗದ ಹಗರಣ, ಇತ್ಯಾದಿ. ಇವೆರಡರಲ್ಲಿ ದೇಶಕ್ಕೆ ಅತಿ ಕೆಟ್ಟದ್ದು ಯಾವುದಿರಬಹುದು?

ಭ್ರಷ್ಟಾಚಾರ ಭ್ರಷ್ಟಾಚಾರವೆ. ಆದರೆ ನನಗನ್ನಿಸುವುದು ಜನಸಾಮಾನ್ಯರು ತಮ್ಮ ನ್ಯಾಯಬದ್ಧ ಕೆಲಸ ಮಾಡಿಸಿಕೊಳ್ಳಲು ಕೊಡುವ ಹಣವೆ ಎಲ್ಲಕ್ಕಿಂತ ಅಪಾಯಕಾರಿಯಾದದ್ದು. ದೊಡ್ಡ ಮೊತ್ತಕ್ಕಿಂತ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವುದೆ ಇದರಿಂದ. ಲಂಚ ತೆಗೆದುಕೊಂಡವರಿಗೆ ತಪ್ಪಿಸಿಕೊಳ್ಳಲು ಇಲ್ಲಿ ಅನೇಕ ದಾರಿಗಳಿರುತ್ತವೆ. ಈ ತರಹದ ಲಂಚ ತೆಗೆದುಕೊಳ್ಳುವವರು ಇದನ್ನು ಪ್ರತಿದಿನ ಮಾಡುತ್ತಿರುವುದರಿಂದ ಎಲ್ಲರೂ ಇದನ್ನೊಂದು ಜೀವನ ಕ್ರಮ ಎಂದು ಭಾವಿಸುವ ಸಾಧ್ಯತೆ ಇರುತ್ತದೆ. ಕೊಡುವವರು ಮತ್ತು ತೆಗೆದುಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಎಲ್ಲರೂ ನೈತಿಕವಾಗಿ ದುರ್ಬಲರಾಗುತ್ತ ಹೋಗುತ್ತಾರೆ. ಆದರೆ, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗುವವರಿಗೆ ಎಂದಿಗೂ ಒಂದು ಭಯವಿರುತ್ತದೆ. ಯಾರು ಬಂದು ಎಂದು ತಮ್ಮ ಫೈಲ್ ಓಪನ್ ಮಾಡುತ್ತಾರೊ ಎನ್ನುವ ಅಂಜಿಕೆಯಿರುತ್ತದೆ. ಎಷ್ಟೋ ಸಲ ಸಿಕ್ಕಿಯೂ ಹಾಕಿಕೊಳ್ಳುತ್ತಾರೆ. ಬಯಲಿಗೆಳೆಯಲು ಬೇಕಾಗುವುದು ಕೇವಲ ಒಬ್ಬ ವ್ಯಕ್ತಿ. ಈ ಮಟ್ಟದ ಭ್ರಷ್ಟಾಚಾರದಲ್ಲಿ ಕೆಲವೆ ಜನ ತೊಡಗಿರುವುದರಿಂದ ಅದು ಬಹುಜನರ ನೈತಿಕ ಶ್ರದ್ಧೆಯನ್ನು ಹಾಳು ಮಾಡುವುದಿಲ್ಲ. ಯಾರೊ ಒಬ್ಬ ಗಣ್ಯ/ಗಣ್ಯೆ ವ್ಯಭಿಚಾರ ಮಾಡುವುದಕ್ಕೂ ಊರೂರಿನಲ್ಲಿ ವ್ಯಭಿಚಾರ ಎನ್ನುವುದು ಸಾಮಾನ್ಯ ಎನ್ನುವುದಕ್ಕೂ ವ್ಯತ್ಯಾಸ ಇರುತ್ತದೆ.

ಈಗ ಇಂತಹ ಎರಡೂ ತರಹದ ಲಂಚವನ್ನು ಭಾರತದಾದ್ಯಂತ ಕೊಡದಿರಲು, ತಡೆಯಲು, ಕಂಡುಹಿಡಿಯಲು, ಭಾರತದ ಪ್ರತಿಯೊಬ್ಬ ಪ್ರಜೆಗೂ ಈಗ ಒಂದು ಅವಕಾಶವಿದೆ, ಆಯುಧವಿದೆ. ಈ ಆಯುಧ ಕೇವಲ ರಾಮನೊಬ್ಬ ಹೆದೆಯೇರಿಸಬಹುದಾದ ಬಿಲ್ಲಲ್ಲ. ಬದಲಿಗೆ ಸೀತೆಯೆಂಬ ಅಗ್ನಿದಿವ್ಯ ನೈತಿಕತೆಯನ್ನು ಪಡೆಯಲು ಪ್ರತಿಯೊಬ್ಬ ಪ್ರಜೆಯೂ ಉಪಯೋಗಿಸಬಹುದಾದ ಬಿಲ್ಲಿದು. ಹೆದೆಯೇರಿಸಲು ಬೇಕಾದದ್ದು ಕೇವಲ ಹತ್ತು ರೂಪಾಯಿ, ಒಂದು ಅರ್ಜಿ, ಸ್ವಲ್ಪ ಧೈರ್ಯ, ಮತ್ತು ಆಗಾಗ 30 ದಿನಗಳ ತಾಳ್ಮೆ! ಇದನ್ನು ದೆಹಲಿಯಲ್ಲಿನ ಅತಿ ಸಾಮಾನ್ಯ ಸ್ಲಮ್ ನಿವಾಸಿಗಳೂ ಹೆದೆಯೇರಿಸಿ ಬಾಣ ಹೂಡಿ ಭ್ರಷ್ಟತೆಯನ್ನು ಭೇದಿಸಿದ್ದಾರೆ. ಅವರಿಗೆ ಪ್ರಾರಂಭದಲ್ಲಿ ಇದನ್ನು ತೋರಿಸಿದ್ದು ದೆಹಲಿಯಲ್ಲಿನ ಪರಿವರ್ತನ್ ಎಂಬ ಜನಾಂದೋಲನ ಸಂಸ್ಥೆ ಮತ್ತು ಅರವಿಂದ್ ಖೇಜ್ರಿವಾಲ್ ಎಂಬ ಅದರ ರೂವಾರಿ.

ಐಐಟಿಗಳು ನಮ್ಮ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು. ಇಂಜಿನಿಯರಿಂಗ್‌ನಲ್ಲಿ ಆಸಕ್ತರಾದ ದೇಶದ ಅತಿ ಬುದ್ಧಿವಂತ ವಿದ್ಯಾರ್ಥಿಗಳು ಈ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯ ಮುಖಾಂತರ ಸೇರಿಕೊಳ್ಳುತ್ತಾರೆ. ದೇಶವಿದೇಶಗಳಲ್ಲಿ ಐಐಟಿಗಳಿಂದ ಪದವಿ ಪಡೆದವರ ಸಾಧನೆ ಬಹಳ ಗಣನೀಯವಾದದ್ದು. ವಿದ್ಯಾರ್ಥಿಗಳಷ್ಟೆ ಅಲ್ಲ, ನಮ್ಮ ದೇಶವೂ ಅಷ್ಟೆ; ಬಹಳ ಕಾಳಜಿಯಿಂದ ಈ ಕಾಲೇಜುಗಳಲ್ಲಿ ಸಿಗುವ ಶಿಕ್ಷಣ ಶ್ರೇಷ್ಠ ಮಟ್ಟದ್ದಾಗಿರುವಂತೆ ಕೋಟ್ಯಂತರ ರೂಪಾಯಿ ವಿನಿಯೋಗಿಸಿದೆ, ವಿನಿಯೋಗಿಸುತ್ತಿದೆ. ತಾವು ಕಡಿಮೆ ಬೆಲೆಗೆ ಇಲ್ಲವೆ ಉಚಿತವಾಗಿ ಪಡೆಯುವ ಈ ಶ್ರೇಷ್ಠ ಮಟ್ಟದ ಶಿಕ್ಷಣ ಭಾರತೀಯರ ಶ್ರಮದ, ತೆರಿಗೆಯ ಹಣ ಎನ್ನುವುದು ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಿಗೆ ತಿಳಿದಿರುವುದರಿಂದಲೆ ಅವರೂ ಸಹ ಅನೇಕ ಸಾಮಾಜಿಕ ಸೇವೆಗಳಲ್ಲಿ, ಧನಸಹಾಯದ ರೂಪದಲ್ಲಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿರುತ್ತಾರೆ. ಇಂತಹ ಐಐಟಿಗಳಲ್ಲೊಂದಾದ ಖರಗ್‌ಪುರ್ ಐಐಟಿಯಿಂದ 1989 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು ಅರವಿಂದ್ ಖೇಜ್ರಿವಾಲ್. ಐಐಟಿಗಳಿಂದ ಬಂದವರಿಗೆ ನಿರುದ್ಯೋಗದ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳಬಹುದೇನೊ. ಪದವಿ ಮುಗಿಸುವುಷ್ಟರಲ್ಲೆ ಅವರ ಕೈಯಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಪಡೆದ ಪ್ರತಿಷ್ಠಿತ ಕಂಪನಿಗಳ ಉದ್ಯೋಗದ ಆಫರ್ ಲೆಟರ್ ಇರುತ್ತದೆ. ಆದರೆ ಅರವಿಂದ್ ಖೇಜ್ರಿವಾಲ್ ಸಿವಿಲ್ ಸರ್ವಿಸಸ್ ಪರೀಕ್ಷೆ ತೆಗೆದುಕೊಂಡು, 1992 ರಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್ (IRS) ನಲ್ಲಿ ತೆರಿಗೆ ಅಧಿಕಾರಿಯಾಗಿ ಸೇರಿಕೊಳ್ಳುತ್ತಾರೆ. ತೆರಿಗೆ ಇಲಾಖೆಯಲ್ಲಿನ ತಮ್ಮ ಆರಂಭಿಕ ದಿನಗಳಲ್ಲಿಯೆ ಅವರಿಗೆ ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಅಲ್ಲಿ ಪಾರದರ್ಶಕತೆ ಇಲ್ಲದಿರುವುದೆ ಒಂದು ಮುಖ್ಯ ಕಾರಣ ಎಂದು ಗೊತ್ತಾಗುತ್ತದೆ. ತಮ್ಮ ಸರ್ಕಾರಿ ಕೆಲಸದಿಂದ ಸುದೀರ್ಘ ರಜೆ ತೆಗೆದುಕೊಂಡ ಅರವಿಂದ್, ವ್ಯವಸ್ಥೆಯಲ್ಲಿನ ಭ್ರಷ್ಟತೆಯ ವಿರುದ್ಧ ಹೋರಾಡಲು ತೊಡಗಿಸಿಕೊಳ್ಳುತ್ತಾರೆ. ಕೊನೆಗೆ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ದೆಹಲಿಯಲ್ಲಿ ಪರಿವರ್ತನ್ ಆರಂಭಿಸುತ್ತಾರೆ. ನಾಲ್ಕೈದು ವರ್ಷಗಳಲ್ಲಿಯೆ ಇವರಿಗೆ ಎಷ್ಟು ಬೆಂಬಲ ಮತ್ತು ಯಶಸ್ಸು ದೊರೆತಿದೆಯೆಂದರೆ, ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ಇವರಿಗೆ ದೊರಕಿದೆ.

ನೀವು ಪರಿವರ್ತನ್‌ನ ವೆಬ್‌ಸೈಟಿಗೆ ಹೋದರೆ, ಆ ಸೈಟಿನಲ್ಲಿನ ಇತರೆ ವಿಷಯ ನೋಡುವುದಕ್ಕೆ ಮೊದಲು ಮುಖಪುಟದಲ್ಲಿ ಕೇವಲ ಹತ್ತು ಸಾಲುಗಳಿವೆ. ಅವೇನೆಂದರೆ:

  • ಭಾರತದ ಪ್ರಜೆಗಳಾದ ನಾವು ಈ ದೇಶದ ಧಣಿಗಳು. ಸರ್ಕಾರಗಳು ಇರುವುದು ನಮ್ಮ ಸೇವೆಗಾಗಿ.
  • ನಾವೆಲ್ಲರೂ ತೆರಿಗೆ ಕಟ್ಟುತ್ತೇವೆ. ರಸ್ತೆಯಲ್ಲಿನ ಭಿಕ್ಷುಕ ಸಹ ತೆರಿಗೆ ನೀಡುತ್ತಾನೆ. ಅವನು ಸೋಪು ಅಥವ ಬೆಂಕಿಪೊಟ್ಟಣ ಅಂತಹುದನ್ನು ಕೊಂಡುಕೊಂಡಾಗ ಮಾರಾಟ ತೆರಿಗೆ, ಎಕ್ಸೈಜ್ ತೆರಿಗೆ, ಇತ್ಯಾದಿ ರೂಪದಲ್ಲಿ ತೆರಿಗೆ ಕೊಡುತ್ತಾನೆ. ಈ ದುಡ್ಡು ನಮಗೆ ಸೇರಿದ್ದು.
  • ನಮ್ಮ ಕ್ಷೇಮಾಭಿವೃದ್ಧಿಗಾಗಿ ಎಷ್ಟೊಂದು ಹಣ ವಿನಿಯೋಗಿಸಲಾಗಿದೆ ಎಂದು ಕಾಗದದ ಮೇಲಿದೆಯಲ್ಲ, ಆದರೆ ಆ ದುಡ್ಡೆಲ್ಲ ಎಲ್ಲಿ ಹೋಗುತ್ತದೆ? ಆಸ್ಪತ್ರೆಗಳಲ್ಲಿ ಯಾಕೆ ಔಷಧಿಗಳಿಲ್ಲ? ಸರ್ಕಾರಿ ಶಾಲೆಗಳಲ್ಲಿನ ಆ ಶಿಕ್ಷಕರೆಲ್ಲ ಎಲ್ಲಿ ಹೋದರು? ಜನ ಯಾಕೆ ಹಸಿವೆಯಿಂದ ಸಾಯುತ್ತಿದ್ದಾರೆ? ರಸ್ತೆಗಳೆಲ್ಲ ಯಾಕೆ ಇಷ್ಟೊಂದು ಹದಗೆಟ್ಟ ಸ್ಥಿತಿಯಲ್ಲಿವೆ? ಬೀದಿಗಳೆಲ್ಲ ಯಾಕೆ ಇಷ್ಟೊಂದು ಗಲೀಜಾಗಿವೆ?
  • ಧಣಿಯ ಪ್ರಾಥಮಿಕ ಕರ್ತವ್ಯ ಏನೆಂದರೆ ಸಮಯಕ್ಕೆ ಸರಿಯಾಗಿ ತನ್ನ ಸೇವಕನಿಂದ ಕೆಲಸದ ಲೆಕ್ಕ ತೆಗೆದುಕೊಳ್ಳುವುದು. ನಾವು, ಧಣಿಗಳು, ನಮ್ಮ ಸರ್ಕಾರಗಳಿಂದ ಎಂದೂ ಲೆಕ್ಕ ತೆಗೆದುಕೊಂಡಿಲ್ಲ. ಯಾಕೆಂದರೆ, ಲಭ್ಯವಿದ್ದ ಕಾನೂನು ಮತ್ತು ಆಡಳಿತದ ಚೌಕಟ್ಟಿನಲ್ಲಿ, ಹಾಗೆ ಮಾಡಲು ಸಾಧ್ಯವಿರಲಿಲ್ಲ.
  • ಆದರೆ, ಈಗ ನಮಗೆ ಸರ್ಕಾರಗಳನ್ನು ಪ್ರಶ್ನಿಸುವ ಅಧಿಕಾರ ಇದೆ. ಸರ್ಕಾರಗಳು ನಮಗೆ ಮಾಹಿತಿ ನೀಡುವುದು ಈಗ ಕಾನೂನುಬದ್ಧ. ಹಲವಾರು ರಾಜ್ಯ ಸರ್ಕಾರಗಳು ಮಾಹಿತಿ ಹಕ್ಕಿನ ಕಾನೂನುಗಳನ್ನು ತಂದಿವೆ. ಇದು ಸರ್ಕಾರವನ್ನು ಪ್ರಶ್ನಿಸಲು, ಅವರ ಕಡತಗಳನ್ನು ಪರಿಶೀಲಿಸಲು, ಸರ್ಕಾರದ ದಾಖಲೆಗಳ ಪ್ರತಿ ತೆಗೆದುಕೊಳ್ಳಲು, ಹಾಗೂ ಸರ್ಕಾರ ಕೈಗೊಳ್ಳುವ ಕೆಲಸಗಳನ್ನು ಪರಿಶೀಲಿಸುವ ಅಧಿಕಾರವನ್ನು ಪ್ರಜೆಗಳಿಗೆ ಕೊಟ್ಟಿದೆ.

ಮುಂದಿನ ವಾರ, ಖೇಜ್ರಿವಾಲ್ ಹೇಳಿದ ಮಾಹಿತಿ ಹಕ್ಕು ಕಾಯ್ದೆಯ ಹಿನ್ನೆಲೆ, ಅದನ್ನು ಬಳಸುವ ಬಗ್ಗೆ, ಮತ್ತು ಅದನ್ನು ಲಂಚಕ್ಕಿಂತ ಶಕ್ತಿಯುತವಾಗಿ ಬಳಸಿ ಯಶಸ್ಸು ಪಡೆದವರ ಕೆಲವು ನಿಜಕತೆಗಳು.

Add a Comment

required, use real name
required, will not be published
optional, your blog address