ಇದು ಲಂಚಕ್ಕಿಂತ ಪವರ್‌ಪುಲ್ ಕಣ್ರಿ!
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 17, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
“ಲಂಚ ಕೊಡಬೇಡಿ. ದಯವಿಟ್ಟು RTI ಬಳಸಿ. RTI is more powerful than giving bribe. ಬೇರೆಯವರಿಗೂ ಅದರ ಬಗ್ಗೆ ಹೇಳಿ. ಈಗಿನ RTI ಕಮಿಷನರ್ ಈ ಕಾಯ್ದೆಯನ್ನು ತೆಳುಮಾಡಲು, ಅದರ ಹಲ್ಲು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಬ್ಯೂರೋಕ್ರಾಟ್ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್‌ರ ಬೆಂಬಲವೂ ಅಂತಹ ಪ್ರಯತ್ನಗಳಿಗೆ ಇದ್ದಂತಿದೆ. ನೀವು, ಇಲ್ಲಿರುವ NRI ಗಳು, ಭಾರತದ ಪ್ರಧಾನಿಗೆ, ಸೋನಿಯಾ ಗಾಂಧಿಗೆ, ರಾಷ್ಟ್ರಪತಿ ಕಲಮ್‌ರಿಗೆ ದಯವಿಟ್ಟು ಇಮೇಯ್ಲ್ ಮಾಡಿ. ಅವರ ಇಮೇಯ್ಲ್ ವಿಳಾಸ ಇಲ್ಲಿದೆ ನೋಡಿ. ಹಾಗೆಯೇ ಇದರ ಬಗ್ಗೆ ಅಲ್ಲಿನ ಪತ್ರಿಕೆಗಳಿಗೂ ಬರೆಯಿರಿ,” ಎಂದು ಕ್ಯಾಲಿಪೋರ್ನಿಯಾದಲ್ಲಿನ ಅಂದಿನ ಸಭೆಯಲ್ಲಿ ಅರವಿಂದ್ ಖೇಜ್ರಿವಾಲ್ ವಿನಂತಿಸಿಕೊಂಡರು. ಇದು ಲಂಚಕ್ಕಿಂತ ಪವರ್‌ಪುಲ್ ಎನ್ನುವುದಕ್ಕೆ ಆಧಾರಪೂರ್ವಕವಾಗಿ ಅನೇಕ ಸತ್ಯ ಘಟನೆಗಳನ್ನು ಹೇಳಿದರು. ಕೆಳಗಿನದು ಅಂತಹ ಒಂದು ಘಟನೆ.
ದೆಹಲಿಯ ದಿನಗೂಲಿಯೊಬ್ಬನ ಹೆಸರು ನನ್ನು ಎಂದು. ಅವನು ತನ್ನ ರೇಷನ್ ಕಾರ್ಡ್ ಅನ್ನು ಕಳೆದುಕೊಂಡ ಪ್ರಯುಕ್ತ 2004 ರ ಜನವರಿಯಲ್ಲಿ ಡೂಪ್ಲಿಕೇಟ್ ಪ್ರತಿಗಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ. ನಿಯಮಗಳ ಪ್ರಕಾರ ಅವನಿಗೆ ಹತ್ತು ದಿನದಲ್ಲಿ ಕಾರ್ಡ್ ದೊರಕಬೇಕಿತ್ತು. ಆದರೆ, ಮೂರು ತಿಂಗಳು ಸಂಬಂಧಿಸಿದ ಇಲಾಖೆಯ ಮೆಟ್ಟಿಲು ಹತ್ತಿಳಿದರೂ ಅವನಿಗೆ ರೇಷನ್ ಕಾರ್ಡ್ ಸಿಗಲಿಲ್ಲ. ಯಾಕೆ ಸಿಗಲಿಲ್ಲ ಅಂದರೆ ಅವನು ಸಂಬಂಧಿಸಿದವರಿಗೆ ಲಂಚವೆಂಬ ಅಮೇಧ್ಯ ತಿನ್ನಿಸದಿದ್ದರಿಂದ ಇರಬಹುದು. ಅವನು ಭಿಕಾರಿಯ ತರಹ ಬೇರೆ ಕಾಣಿಸುತ್ತಿದ್ದದ್ದರಿಂದ ಅನೇಕ ಸಲ ಅವನನ್ನು ಕಛೇರಿಯ ಒಳಗೇ ಬಿಡುತ್ತಿರಲಿಲ್ಲ! ದೆಹಲಿ ರಾಜ್ಯ ಸರ್ಕಾರ 2001 ರಿಂದಲೆ ತನ್ನ ನಾಗರೀಕರಿಗೆ ಮಾಹಿತಿ ಹಕ್ಕನ್ನು ಕೊಟ್ಟಿದೆ. ಮೂರು ತಿಂಗಳ ಅಲೆದಾಟದ ನಂತರ ನನ್ನು ಆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಒಂದನ್ನು ಬರೆದು ಲಗಾಯಿಸಿದ. ಅದಾದ ನಾಲ್ಕನೆ ದಿನ ಪುಡ್ ಇನ್ಸ್‌ಪೆಕ್ಟರ್ ನೇರವಾಗಿ ನನ್ನುವಿನ ಮನೆಗೇ ಬಂದುಬಿಟ್ಟು, “ನಿಮ್ಮ ರೇಷನ್ ಕಾರ್ಡು ಸಿದ್ಧವಾಗಿದೆ. ದಯವಿಟ್ಟು ಬಂದು ಅದನ್ನು ತೆಗೆದುಕೊಳ್ಳಿ,” ಎಂದು ವಿನಂತಿಸಿ ಹೋಗುತ್ತಾನೆ. ಅದನ್ನು ಪಡೆಯಲು ನನ್ನು ಆ ಕಛೇರಿಗೆ ಹೋದರೆ, ಅಲ್ಲಿನ ಹಿರಿಯ ಅಧಿಕಾರಿ ನನ್ನುವನ್ನು ನೇರವಾಗಿ ತನ್ನ ಛೇಂಬರಿಗೆ ಕರೆದುಕೊಂಡು ಹೋಗುತ್ತಾನೆ; ಅದೂ ವಿನಯ ಪೂರ್ವಕವಾಗಿ! ಅಲ್ಲಿ ನನ್ನುವಿಗೆ ಟೀ ಕೊಡಿಸುತ್ತಾನೆ; ರೇಷನ್ ಕಾರ್ಡೂ ಸಮರ್ಪಿಸುತ್ತಾನೆ! ಜೊತೆಗೆ ಒಂದು ವಿನಂತಿಯನ್ನೂ ಮಾಡಿಕೊಳ್ಳುತ್ತಾನೆ: “ದಯವಿಟ್ಟು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀವು ಕೊಟ್ಟಿರುವ ಅರ್ಜಿಯನ್ನು ವಾಪಸು ತೆಗೆದುಕೊಳ್ಳಿ.” ಆ ಕಛೇರಿಯ ಸಿಬ್ಬಂದಿಯ ಕಣ್ಣಿನಲ್ಲಿ ಮೂರು ತಿಂಗಳಿನಿಂದಲೂ ಬೀದಿಭಿಕಾರಿಯಾಗಿ ಕಾಣಿಸುತ್ತಿದ್ದ ನನ್ನು ಇದ್ದಕ್ಕಿದ್ದಂತೆ VIP ಆಗಿಬಿಟ್ಟ. ಇಷ್ಟಕ್ಕೂ ತನ್ನ ಅರ್ಜಿಯಲ್ಲಿ ನನ್ನು ಕೇಳಿದ್ದದ್ದು ನಾಲ್ಕೇ ನಾಲ್ಕು ಪ್ರಶ್ನೆಗಳು:
- ನಾನು ಇಂತಿಂತಹ ದಿನಾಂಕದಂದು ಡೂಪ್ಲಿಕೇಟ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ಆ ಅರ್ಜಿಯ ಮೇಲೆ ಇಲ್ಲಿಯವರೆಗೂ ಆಗಿರುವ ಪ್ರತಿದಿನದ ಬೆಳವಣಿಗೆಯನ್ನು ತಿಳಿಸಿ.
- ದಯವಿಟ್ಟು ನನ್ನ ಅರ್ಜಿಯ ಮೇಲೆ ಯಾವ್ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿತ್ತೊ ಅವರ ಹೆಸರುಗಳನ್ನು ತಿಳಿಸಿ.
- ಈ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ರೇಷನ್ ಕಾರ್ಡ್ ಕೊಡದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೆ? ಹಾಗಿದ್ದಲ್ಲಿ ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗುವುದು? ಯಾವ ದಿನಾಂಕದೊಳಗೆ ತೆಗೆದುಕೊಳ್ಳಲಾಗುವುದು?
- ನನಗೆ ನನ್ನ ರೇಷನ್ ಕಾರ್ಡು ಎಂದು ಸಿಗುತ್ತದೆ?
ಇಷ್ಟೊಂದು ಬಲಶಾಲಿಯಾದದ್ದು ಈ ಮಾಹಿತಿ ಹಕ್ಕು ಕಾಯ್ದೆ! ಕಳೆದ ವರ್ಷ ಭಾರತದ ಸಂಸತ್ತು ಅಂಗೀಕರಿಸಿದ ಕಾಯ್ದೆಯಡಿಯಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾರ್ವಜನಿಕ ಇಲಾಖೆಗಳೂ, ಉದ್ದಿಮೆಗಳೂ ಬರುತ್ತವೆ. ಇಂತಹುದೊಂದು ಕಾಯ್ದೆ ದೇಶದಲ್ಲಿ ಮೊದಲ ಬಾರಿಗೆ ಸಾಧ್ಯವಾದದ್ದು ಅರುಣಾ ರಾಯ್ ಎಂಬ ಮಾಜಿ ಅಧಿಕಾರಿಂದಾಗಿ. ಅರುಣಾರವರೂ ಸಹ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಸಮಾಜ ಸೇವೆ ಮತ್ತು ಜನಜಾಗೃತಿ ಮೂಡಿಸುವ ಕೆಲಸಗಳಲ್ಲಿ ಬಹಳ ಹಿಂದಿನಿಂದಲೂ ತೊಡಗಿದ್ದಾರೆ. ಅವರ ಕಾರ್ಯವ್ಯಾಪ್ತಿಯಲ್ಲಿನ ಗ್ರಾಮಸ್ಥರು ತಮ್ಮ ಕನಿಷ್ಠ ವೇತನವಾದ 22 ರೂಪಾಯಿಯನ್ನು ತಮಗೆ ಪೂರ್ತಿಯಾಗಿ ಕೊಡಬೇಕು ಎಂದು 1990 ರಲ್ಲಿ ಅಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು, ನೀವು ಸರಿಯಾಗಿ ಕೆಲಸ ಮಾಡಿಲ್ಲ, ಆದ್ದರಿಂದ ನಿಮಗೆ ಕೊಡುವುದು ಕೇವಲ 11 ರೂಪಾಯಿ ಎಂದು ಹೇಳುತ್ತಾರೆ. ಆಗ ಅರುಣಾ ರಾಯ್‌ರ ಮುಂದಾಳತ್ವದಲ್ಲಿ ಆ ಜನ, ನಮಗೆ ನೀವು 11 ರೂಪಾಯಿ ಮಾತ್ರ ನೀಡುತ್ತಿರುವ ದಾಖಲೆಗಳನ್ನು ತೋರಿಸಿ, ಎನ್ನುತ್ತಾರೆ! ಆದರೆ ಆ ಭ್ರಷ್ಟರು, ಆ ದಾಖಲೆಗಳೆಲ್ಲ ರಹಸ್ಯವಾದವು, ಅವನ್ನೆಲ್ಲ ತೋರಿಸಲಾಗದು ಎಂದು ಕೆಂಪು ಪಟ್ಟಿಯನ್ನು ಎಳೆಯುತ್ತಾರೆ. ನಮ್ಮ ಹೆಸರು, ನಮ್ಮ ಸಹಿ, ನಮ್ಮ ಕೂಲಿಯ ವಿವರ ಎಲ್ಲವೂ ಇರುವ ಆ ದಾಖಲೆಗಳು ಅದು ಹೇಗೆ ರಹಸ್ಯ ದಾಖಲೆಗಳಾಗುತ್ತವೆ ಎಂದು ಆ ಜನ ಕೇಳಲಾರಂಭಿಸಿದ ಮೇಲೆ ಅದೇ ತರಹ ದೇಶದಾದ್ಯಂತ ಮಾಹಿತಿ ಹಕ್ಕಿಗಾಗಿ ಒತ್ತಾಯ ಪ್ರಾರಂಭವಾಗುತ್ತದೆ. ನಮ್ಮ ದೇಶದ ಸುಪ್ರೀಂ ಕೋರ್ಟು 1976 ರಲ್ಲಿಯೇ ಮಾಹಿತಿ ಹಕ್ಕು ಮೂಲಭೂತ ಹಕ್ಕಿನ ಒಂದು ಭಾಗ ಎನ್ನುವ ತೀರ್ಪನ್ನು ನೀಡಿರುತ್ತದೆ. ಆ ಆಧಾರದ ಮೇಲೆ ಅನೇಕ ರಾಜ್ಯ ಸರ್ಕಾರಗಳು ಆ ಕಾಯ್ದೆಯನ್ನು ಜಾರಿಗೆ ತರುತ್ತವೆ. ಕರ್ನಾಟಕದಲ್ಲಿಯೂ ಇದು ಮೂರ್ನಾಲ್ಕು ವರ್ಷಗಳ ಹಿಂದಿನಿಂದಲೆ ಇದೆಯಂತೆ. 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಅರುಣಾ ರಾಯ್ ಸೋನಿಯಾ ಗಾಂಧಿಗೆ ಇಂತಹುದೊಂದು ಕಾಯ್ದೆಯ ದೇಶವ್ಯಾಪ್ತಿ ಅಗತ್ಯತೆಯ ಬಗ್ಗೆ ತಿಳಿಸಿದ ಮೇಲೆ ಸೋನಿಯಾರ ವಿಶೇಷ ಮುತುವರ್ಜಿಯಿಂದಾಗಿ ಕಳೆದ ವರ್ಷ ಪಾರ್ಲಿಮೆಂಟ್ ಅದನ್ನು ಅಂಗೀಕರಿಸುತ್ತದೆ.
ಇದನ್ನು ಬಳಸಲು ನೀವು ಮಾಡಬೇಕಾದದ್ದು ಇಷ್ಟೆ: ಸಂಬಂಧಿಸಿದ ಇಲಾಖೆಯ ಮಾಹಿತಿ ಅಧಿಕಾರಿಯ ಬಳಿ ನಿಮಗೆ ಬೇಕಾದ ಮಾಹಿತಿಯನ್ನು ಕೇಳಿ ಅರ್ಜಿ ಕೊಡಿ. ಅರ್ಜಿಯ ಜೊತೆಗೆ ಕೇವಲ ಹತ್ತು ರೂಪಾಯಿಯ ಫೀಜು ಕಟ್ಟಬೇಕು. ಸಂಬಂಧಿಸಿದ ಅಧಿಕಾರಿ ನಿಮಗೆ 30 ದಿನದಲ್ಲಿ ಮಾಹಿತಿ ಕೊಡಬೇಕು. ಇಲ್ಲದಿದ್ದಲ್ಲಿ ಆತನ ವೇತನದಲ್ಲಿ ಪ್ರತಿದಿನ 250 ರೂಪಾಯಿ ಕಡಿತವಾಗುತ್ತ ಹೋಗುತ್ತದೆ. ತಪ್ಪು ಮಾಹಿತಿ ಕೊಟ್ಟರೆ 25000 ರೂಪಾಯಿ ದಂಡ ಬೀಳುತ್ತದೆ. ನಿಮ್ಮ ಊರಿನ ರಸ್ತೆ, ಶಾಲೆಯ ಕಾಮಗಾರಿ ಲೆಕ್ಕದಿಂದ ಹಿಡಿದು, ನಿಮಗೆ ವಿದ್ಯುತ್ ಇಲಾಖೆ ಇನ್ನೂ ಕೊಡದಿರುವ ಕನೆಕ್ಷನ್, ತಾಲ್ಲೂಕಾಫೀಸಿನವರು ಸತಾಸುತ್ತಿರುವ ಪ್ರಮಾಣಪತ್ರಗಳು, ನಿಮ್ಮ ಶಾಸಕ ಖರ್ಚು ಮಾಡುತ್ತಿರುವ ಶಾಸಕ ನಿಧಿಯ ಬಾಬತ್ತು, ಇತ್ಯಾದಿಗಳನ್ನು ಕೇವಲ ಹತ್ತು ರೂಪಾಯಿಯಲ್ಲಿ ತೆಗೆದುಕೊಳ್ಳಬಹುದು. ಮಾಹಿತಿ ಸಿಕ್ಕ ಮೇಲೆ ಅದನ್ನು ಏನು ಮಾಡಬೇಕು ಎಂದು ನಿಮಗೇ ಗೊತ್ತಾಗುತ್ತದೆ. 50 ರೂಪಾಯಿಯ ಕೆಲಸಕ್ಕೆ 500 ತೋರಿಸಿದ್ದರೆ ತಕ್ಷಣ ಆ ಮಾಹಿತಿಯ ಪ್ರಕಾರ ಲೋಕಾಯುಕ್ತರಿಗೆ ದೂರು ನೀಡಿದರೆ, ಯಾಕೆ ನಮ್ಮಲ್ಲಿ ಭ್ರಷ್ಟಾಚಾರ ಕಮ್ಮಿಯಾಗದು, ಅಲ್ಲವೆ? ನಾವು ಸಿನಿಕರಾಗಬೇಕಾದದ್ದಿಲ್ಲ! ಸಿನಿಕರಲ್ಲದ ವೆಂಕಟಾಚಲರಂತಹವರು ನಮ್ಮ ನಡುವೆ ಇಲ್ಲವೆ? ಕಸ ಗುಡಿಸಲು ನಾವೂ ಪಾಲ್ಗೊಳ್ಳಬೇಕಷ್ಟೆ.