ಪ್ರೇಮಕ್ಕೆ ಜಿಂದಾಬಾದ್ – ಮತ್ತು, ಒಂದು (ಹಳೆಯ) ಪ್ರೇಮ ಕವನ
Posted Under: Uncategorized
ಎಲ್ಲಾ ಹಾಲಿ-ಮಾಜಿ ಪ್ರೇಮಿಗಳಿಗೂ, ವಿರಹಿಗಳಿಗೂ, 2009 ರ “ಪ್ರೇಮಿಗಳ ದಿನ”ದ ಶುಭಾಶಯಗಳು.
ರಾಷ್ಟ್ರೀಯ ದಿನಾಚರಣೆಗಳನ್ನು ಬಿಟ್ಟರೆ ಈ ವೈಯಕ್ತಿಕ ದಿನಾಚರಣೆಗಳ ಬಗ್ಗೆ ನನಗೆ ಉತ್ಸಾಹವಾಗಲಿ, ಹೇಳಿಕೊಳ್ಳುವಂತಹ ಗೌರವವಾಗಲಿ ಇಲ್ಲ. ಇನ್ನು ಆಚರಿಸುವುದಂತೂ ದೂರದ ಮಾತು. ಹತ್ತಿರದವರಿಗೆ ಶುಭಾಶಯ ಹೇಳುವುದೂ ಇಲ್ಲವೇ ಇಲ್ಲವೇನೊ. ಆದರೂ, ಕರ್ನಾಟಕದ ಇವತ್ತಿನ ಸಂದರ್ಭದಲ್ಲಿ , ಎಲ್ಲರಿಗೂ, ವಿಶೇಷವಾಗಿ ನನ್ನ ಯುವ ಮಿತ್ರರಿಗೆ, ಈ ಸಲದ ಪ್ರೇಮಿಗಳ ದಿನದ ಶುಭಾಶಯ ಹೇಳುವುದು ಮುಖ್ಯ ಅನ್ನಿಸುತ್ತಿದೆ.
ಭಾರತೀಯ ಪರಂಪರೆಯಲ್ಲಿ ಪ್ರೇಮದ ಮತ್ತು ಪ್ರೇಮಿಗಳ ಉಜ್ವಲ ಪರಂಪರೆಯೇ ಇದೆ. ಶಿವ-ಗಿರಿಜೆ, ರಾಧೆ-ಕೃಷ್ಣ, ರುಕ್ಮಿಣಿ-ಕೃಷ್ಣ, ಸುಭದ್ರೆ-ಅರ್ಜುನ, ಶಶಿಕಲ-ಅಭಿಮನ್ಯು; ನಮ್ಮ ಪುರಾಣಗಳಲ್ಲಿ ಬರುವ ನಿರ್ಭಯ ಪ್ರೇಮಿಗಳು. ಪೃಥ್ವಿರಾಜ್ ಚೌಹಾಣ್ ಮತ್ತು ಸಂಯುಕ್ತ, ಶಹಜಹಾನ್-ಮಮ್ತಾಜ್, ನಮ್ಮ ಸುಪ್ರಸಿದ್ಧ ಐತಿಹಾಸಿಕ ಪ್ರೇಮಿಗಳು. ದೇವದಾಸ್ ಮತ್ತು ಪಾರ್ವತಿಯರಂತೂ ಒಂದು ತಲೆಮಾರನ್ನೇ ಪ್ರಭಾವಿಸಿದ ಕಾಲ್ಪನಿಕ ಪ್ರೇಮಿಗಳು. ಕುವೆಂಪುರವರು ಚಿತ್ರಿಸಿದ ಐತ-ಪೀಂಚಲು ಮತ್ತು ಮುಕುಂದ-ಚಿನ್ನಮ್ಮ ಕನ್ನಡ ಸಾರಸ್ವತ ಲೋಕದ ಅಮರ ಪ್ರೇಮಿಗಳು. ಇನ್ನು ನಮ್ಮ ಹಲವಾರು ಶ್ರೇಷ್ಠ ಸಿನೆಮಾಗಳು ಪ್ರೇಮದ ದೃಶ್ಯ ಕಾವ್ಯಗಳು. ಪ್ರೇಮದ ಈ ಎಲ್ಲಾ ಹಿರಿಮೆಯನ್ನು ಮತ್ತು ಈ ಪ್ರೇಮಿಗಳನ್ನು ನೆನಪಿಸಿಕೊಳ್ಳುತ್ತ ನಮ್ಮ ಯುವ ಜನತೆ ಪ್ರೇಮದ ಹೊಳೆಯಲ್ಲಿ ಈಜಾಡಲು ಯಾವುದೇ ಭಯ-ಸಂಕೋಚ ಪಡದೇ ಇರಲಿ ಎನ್ನುವ ಹಾರೈಕೆ ನನ್ನದು. ಭಾರತದ ಹಲವಾರು ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ನಮ್ಮ ಯುವಕ-ಯುವತಿಯರು ಯಾವುದೆ ಕುಲ-ಮತ ನೋಡದೆ ಪ್ರೇಮದಲ್ಲಿ ಮುಳುಗಿ ಮದುವೆ ಆಗುವುದರಲ್ಲಿದೆ ಎನ್ನುವ ನಂಬಿಕೆಯೂ ನನ್ನ ಈ ಹಾರೈಕೆಯ ಹಿಂದಿರುವ ಒಂದು ಕಾರಣ. ನಮ್ಮ ಇಂದಿನ ಮತ್ತು ಮುಂದಿನ ತಲೆಮಾರಿನ ದಾರಿ ಇದೇ ಆಗಬೇಕು.
ಪ್ರೇಮಿಗಳ ದಿನಾಚರಣೆಯ ಸಂಭ್ರಮವನ್ನು ಕೋರುತ್ತ ನನ್ನ ಹಳೆಯ ಪ್ರೇಮ ಕವನವನ್ನು ಇಲ್ಲಿ ನೀಡುತ್ತಿದ್ದೇನೆ. ಇದನ್ನು ನಾನು ಬರೆದದ್ದು 2003 ರಲ್ಲಿ. ಆಸಕ್ತಿ-ನಿರಾಸಕ್ತಿ-ರಾಗ-ವೈರಾಗ್ಯಗಳ ನಡುವೆ ನಾನು ತುಯ್ದಾಡುತ್ತಿದ್ದ ಸಮಯ ಅದು. ಆದರೂ, ಒಂದು ಪ್ರೇಮ ಕವನ ಬರೆಯಬೇಕೆಂದುಕೊಂಡು, ಕನ್ನಡದ ಪ್ರಸಿದ್ಧ ಭಾವಗೀತೆಯೊಂದರ ನಾದದ ಹಿನ್ನೆಲೆಯಲ್ಲಿ ಈ ಕವನ ಬರೆದೆ. ಅದು ಹೀಗಿದೆ:
ಮಧುಬಿಂದಿಗೆಯ ನೀರೆ
ನೀರಸದ ಜೀವನಕೆ ರಸ ಬೆರೆಸ ಬಾರೆ,ನೀರೆ
ಮಧುಬಿಂದಿಗೆಯ ತೆಳುನಡುವಲಿಡಿದು।।
ಅದ ಕಂಡೆ ಇದ ಕಂಡೆ, ತೃಪ್ತಿಯೆಂಬುದು ಇಲ್ಲ.
ಖಂಡ ಖಂಡಗಳ ಜಿಗಿದೆ; ಭಾವ ತಣಿದಿಲ್ಲ.
ಬೇಸರವೊ ದುಃಖವೊ ಈ ಪರಿಯ ತಿಳಿಯೆ
ಎದೆಕೊರತೆಯಾ ತಿಳಿವು ದಿನ ಮನದಲೆಲ್ಲಾ
ರಾಗವೈರಾಗ್ಯಗಳ ಆಚೀಚೆ ನಾ ಪಯಣಿ.
ರಾಗಿಣಿ ರೂಪಿಣಿ ನೀ ಸುಧೆಯಧರ ರಾಣಿ.
ಜನ್ಮಜನ್ಮಾಂತರದ ಅಂಧ ಬಂಧಗಳೇಕೆ?
ಮೃತ್ಯುಂಜಯವು ಜೀವ ನಿನ್ನೊಲವ ಸವಿಯೆ
ಈ ಕವನದ ವಾಚನ ಅಥವ ಗಾಯನ ಮಾಡಿ ನನ್ನ ಯೂಟ್ಯೂಬ್ ಚಾನಲ್‌ನಲ್ಲಿ ಹಾಕಿದ್ದೇನೆ. ಅದನ್ನು ಕೇಳಿ ನಿಮ್ಮ ಕಿವಿಗಾಗುವ ಹಾನಿಗೆ ಅಥವ ಮಾನಸಿಕ ಕ್ಷೋಭೆಗೆ ನಾನು ಯಾವುದೇ ರೀತಿಯಲ್ಲೂ ಜವಾಬ್ದಾರನಲ್ಲ ಎಂದು ಈಗಲೇ ಹೇಳುತ್ತಿದ್ದೇನೆ! ಸ್ವಲ್ಪ ನಕ್ಕು, ತಮಾಷೆ ಮಾಡಿಕೊಂಡು, ಮತ್ತೆ ಪ್ರೇಮವನ್ನು ನೆನಪಿಸಿಕೊಂಡು ಪ್ರೇಮ ಸಾಗರದಲ್ಲಿ ಈಜು ಬೀಳಿ.
ಹಾಲಿ ಪ್ರೇಮಿಗಳೆಲ್ಲರಿಗೂ ಅಭಿನಂದನೆ. ಭಾವಿ ಪ್ರೇಮಿಗಳಿಗೆ ಪ್ರೇಮಲೋಕಕ್ಕೆ ಸ್ವಾಗತ.
ಪ್ರೇಮಕ್ಕೆ ಜಿಂದಾಬಾದ್…
ರವಿ…