ಬುಷ್ ಹಲ್ಲು ಕಿತ್ತ ಅಮೇರಿಕನ್ನರು
Posted Under: Uncategorized
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 24, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಕಳೆದ ಹದಿನೈದು ವರ್ಷಗಳಿಂದ ನಾನು ನನ್ನೂರಿನ ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಲೋಕಸಭಾ ಚುನಾವಣೆಗಳ ತನಕ ಅತೀವ ಆಸಕ್ತಿಯಿಂದ, ಭಯದಿಂದ, ಆಶಾವಾದದಿಂದ ನೋಡುತ್ತ ಬಂದಿದ್ದೇನೆ. ಈ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದ ರೌಡಿಗಳಂತಿದ್ದ ಕೆಲವು ಅಭ್ಯರ್ಥಿಗಳನ್ನು, ಅವರ ಪಕ್ಷಗಳನ್ನು, ಅದರ ಮುಖಂಡರುಗಳನ್ನು ನೋಡುತ್ತಿದ್ದಾಗ ಮೊದಮೊದಲು ‘ಇದೇನು ಶಿವನೆ, ಇವರ ಅಧಿಕಾರಾವಧಿಯಲ್ಲಿ ಜನ ಬದುಕಲು ಸಾಧ್ಯವೆ, ಸಹನೀಯ ಜೀವನ ಸಾಧ್ಯವೆ, ಭವಿಷ್ಯವುಂಟೆ’ ಎಂದೆಲ್ಲ ಭಯವಾಗುತ್ತಿತ್ತು. ಆಗೆಲ್ಲ ತಕ್ಷಣದ ಕಾಲವೆ ಶಾಶ್ವತ ಎನ್ನುವ ನಂಬಿಕೆಯಿತ್ತೇನೊ? ಆದರೆ ಹೀಗೆ ಭಯ, ರೇಜಿಗೆ ಹುಟ್ಟಿಸುತ್ತಿದ್ದ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಸೋತು ಈ ಜನತಂತ್ರ ವ್ಯವಸ್ಥೆಯನ್ನು ಮತ್ತೊಂದು ಮಗ್ಗುಲಿನಿಂದ ನೋಡುವಂತೆ ಮಾಡುತ್ತಿತ್ತು. ಆಗ ಗೊತ್ತಾಗುತ್ತಿದ್ದದ್ದು ಜೀವನದ ಕ್ಷಣಿಕತೆ, ಈ ಪ್ರಜಾಪ್ರಭುತ್ವದ ಮಹತ್ವ ಮತ್ತು ಇದರ ಬ್ಯೂಟಿ.
ನಮ್ಮ ಕರ್ನಾಟಕದ ದೊಡ್ಡ ಉದಾಹರಣೆಗಳನ್ನೆ ತೆಗೆದುಕೊಳ್ಳೋಣ:
- ಗುಂಡೂರಾಯರು ತಮ್ಮ ಅಧಿಕಾರವಧಿಯ ಕೊನೆಯಲ್ಲಿ ಬಂದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೆ ಸೋತರು.
- ಜೆ.ಎಚ್. ಪಟೇಲರದು ಸಹ ಹಾಗೆಯೇ ಆಗಿತ್ತು.
- ಎಸ್ಸೆಮ್ ಕೃಷ್ಣರು ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸೋತರು; ನಂತರ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರ ಬದಲಾಯಿಸಿದರು.
- ಆರೇಳು ವರ್ಷಗಳ ಹಿಂದೆ ಇನ್ನೇನು ನಾನು ಮುಖ್ಯಮಂತ್ರಿ ಆಗಿಬಿಟ್ಟೆ ಎಂದು ಯಡಿಯೂರಪ್ಪನವರು ಸೂಟುಬೂಟಿನೊಂದಿಗೆ ಸಿದ್ದವಾಗುತ್ತಿದ್ದಾಗ ಶಿಕಾರಿಪುರದ ಜನ ಅವರನ್ನು ಶಾಸಕರನ್ನಾಗಿಯೆ ಮಾಡಲಿಲ್ಲ. (ಹತ್ತು ವರ್ಷಗಳ ಹಿಂದೆ ಈಗಿನ ಕೇರಳದ ಮುಖ್ಯಮಂತ್ರಿಯ ಸ್ಥಿತಿಯೂ ಅದೇ ಆಗಿತ್ತು.)
- ಹೆಗಡೆಯವರು ಐದಾರು ವರ್ಷ ಮುಖ್ಯಮಂತ್ರಿಗಳಾಗಿ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ವರ್ಚಸ್ಸು ಹೊಂದಿದ್ದರೂ ಬಾಗಲಕೋಟೆಯಲ್ಲಿ ಸೋತರು.
- ಇಂತಹ ಉದಾಹರಣೆಗಳಿಗೆ ಶಿಖರಪ್ರಾಯವಾದದ್ದು ತಾವು ಪ್ರಧಾನ ಮಂತ್ರಿಯಾದ ಮೇಲೆ ಬಂದ ಮೊದಲ ಲೋಕಸಭಾ ಚುನಾವಣೆಯಲ್ಲಿಯೆ ದೇವೇಗೌಡರು ಹಾಸನದಲ್ಲಿ ಸೋತಿದ್ದು.
ಮೊದಲೆಲ್ಲ ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಪ್ರತಿನಿಧಿಗಳ ಮೌಲ್ಯಮಾಪನ ಈಗ ಅಧಿಕಾರ ವಿಕೇಂದ್ರೀಕರಣದ ಪ್ರಯುಕ್ತ ಪರೋಕ್ಷವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸಭೆ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ, ಲೋಕ ಸಭೆ, ಹೀಗೆ ಪ್ರತಿಯೊಂದು ಚುನಾವಣೆಯಲ್ಲಿಯೂ ನಡೆಯುತ್ತಿದೆ. ಸ್ವಲ್ಪ ಹದ್ದು ಮೀರುತ್ತಿದ್ದಾರೆ ಎನ್ನಿಸಿದರೆ ಸಾಕು, ಜನ ಸದ್ದಿಲ್ಲದೆ ಬುದ್ದಿ ಕಲಿಸುತ್ತಾರೆ. ಅಲ್ಲಲ್ಲಿ ಕೆಲವು ಅಪವಾದಗಳಿರಬಹುದು. ಆದರೆ ಜನತಂತ್ರ ವ್ಯವಸ್ಥೆ ಎಂತಹವರಿಗೂ ಚೆಕ್ಸ್ ಅಂಡ್ ಬ್ಯಾಲೆನ್ಸ್ ಇಟ್ಟಿದೆ, ಇಡುತ್ತಿದೆ. ಇದನ್ನೆಲ್ಲ ನೋಡಿದ ಮೇಲೆ, ಈ ವ್ಯವಸ್ಥೆಗೆ ಅಪಾಯ ಎನ್ನಿಸಿದವರು ಎಷ್ಟೇ ಕೂಗಾಡಲಿ, ಎಗರಾಡಲಿ, ಅದೆಲ್ಲ ಮುಂದಿನ ಚುನಾವಣೆಯ ತನಕವಷ್ಟೆ; ಆಗ ಕಾದಿದೆ ಅವರಿಗೆ ಮುದುಕಿ ಹಬ್ಬ. ನಾವು ಅವರನ್ನು ಔಟ್‌ಲಿವ್ ಮಾಡಬೇಕಷ್ಟೆ, ಎನ್ನಿಸದಿರದು.
ಜಾರ್ಜ್ ಬುಷ್ ಕ್ಲಿಂಟನ್‌ರಿಂದ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಹಿಂದೆಯಷ್ಟೆ ನಾನು ಈ ದೇಶಕ್ಕೆ ಮೊದಲ ಸಲ ಬಂದಿದ್ದು. ಅಂದಿನಿಂದ ಜಾರ್ಜ್ ಬುಷ್ ಮತ್ತು ಇಲ್ಲಿನ ರಾಜಕೀಯವನ್ನು ಗಮನಿಸುತ್ತ ಬಂದಿದ್ದೇನೆ. ನಮ್ಮಲ್ಲಿ ಆರೆಸ್ಸೆಸ್ ಮತ್ತು ವಿಎಚ್‌ಪಿಗಳು ಹೊಂದಿರುವಂತಹುದೆ ಸಂಘಟನೆ ಮತ್ತು ಚುನಾವಣೆಯ ಹಿಂದಿನ ದಿನದ ಸಕ್ರಿಯತೆಯನ್ನು ಇಲ್ಲಿನ ಕ್ರೈಸ್ತ ಬಲಪಂಥೀಯರು ಬುಷ್‌ರ ರಿಪಬ್ಲಿಕನ್ ಪಕ್ಷದೆಡೆಗೆ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಇನ್ನೇನು ಸೋಲುವುದು ಖಚಿತ ಎನ್ನುವಂತಹ ಸ್ಥಿತಿಯಲ್ಲಿ ಆರ್ಥಿಕ ಮತ್ತು ಕರ್ಮಠ ಸಂಪ್ರದಾಯವಾದಿಗಳ ಹಾಗು ಕ್ರಿಶ್ಚಿಯನ್ ಬಲಪಂಥೀಯರ ಆ ಕೊನೆಕ್ಷಣದ ಚುರುಕುತನದಿಂದಾಗಿ ಜಾರ್ಜ್ ಬುಷ್ ಡೆಮೊಕ್ರಾಟಿಕ್ ಪಕ್ಷದ ಜಾನ್ ಕೆರ್ರಿಯ ಮೇಲೆ ಗೆದ್ದರು. ಎರಡನೆ ಅವಧಿಯಲ್ಲಿ ಬುಷ್‌ರು ಇನ್ನೇನು ಮಾಡುತ್ತಾರೊ ಎಂದು ಇಲ್ಲಿನ ಉದಾರವಾದಿಗಳಿಗೆ ಆಗ ಭಯವಾಗಿದ್ದು ನಿಜ. ಆದರೆ, ತಮ್ಮ ಅಪ್ಪ ಗೆಲ್ಲಲಾಗದ ಎರಡನೆ ಅವಧಿಯನ್ನು ನಾನು ಗೆದ್ದು ಸಾಧಿಸಿದೆ ಎನ್ನುವ ತೃಪ್ತಿಯಲ್ಲಿ ಬುಷ್‌ರು ಅಂತಹ ದೊಡ್ಡ ತಪ್ಪುಗಳನ್ನು ಮಾಡಲಾರರು; ಯಾಕೆಂದರೆ, ಅವರು ತಮಾಷೆಯ, ಜೀವನವನ್ನು ಸ್ವಲ್ಪ ಮಜವಾಗಿಯೆ ತೆಗೆದುಕೊಳ್ಳುವ ಮನುಷ್ಯ; ಕಠಿಣ ಪರಿಶ್ರಮಿಯಾಗಲಿ, ದೊಡ್ಡ ಮಹತ್ವಾಕಾಂಕ್ಷಿಯಾಗಲಿ ಅಲ್ಲ, ಎಂದು ನನಗನ್ನಿಸಿತ್ತು.
ಆದರೆ ತಿಂಗಳ ಹಿಂದೆ ನ್ಯೂಸ್‍ವೀಕ್ ವಾರಪತ್ರಿಕೆಯಲ್ಲಿ ಪತ್ರಕರ್ತ ಬಾಬ್ ವುಡ್‌ವರ್ಡ್ ಬರೆದಿರುವ ಇತ್ತೀಚಿನ ಬೆಸ್ಟ್ ಸೆಲ್ಲರ್ “State of Denial” ಪುಸ್ತಕದ ಹತ್ತಿಪ್ಪತ್ತು ಪುಟಗಳನ್ನು ಓದುತ್ತಿದ್ದಾಗ, ‘ಓ ಗಾಡ್, ಈ ಮನುಷ್ಯ ತಮ್ಮ ಅಧಿಕಾರವಧಿಯ ಇನ್ನೆರಡು ವರ್ಷಗಳಲ್ಲಿ ಅಮೇರಿಕಾವನ್ನು ಯಾವ ಯಾವ ದೇಶಗಳಿಗೆ ನುಗ್ಗಿಸುತ್ತಾರೊ, ಏನೇನು ಕಾದಿದೆಯೊ,’ ಅನ್ನಿಸಿತು. ಯಾಕೆಂದರೆ ಆ ಪುಸ್ತಕದಲ್ಲಿ ಬುಷ್ ಮತ್ತು ಅವರ ಅಂತರಂಗದ ಮಿತ್ರರು ಎಷ್ಟು ಬೇಜವಬ್ದಾರಿಯಿಂದ, ನಿರ್ಲಕ್ಷ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಬುಷ್ ಎಷ್ಟೊಂದು ಹುಡುಗಾಟಿಕೆಯ ಮನುಷ್ಯ, ಎಂಬುದರ ಬಗ್ಗೆ ವಿವರವಾದ ಚಿತ್ರಣವಿದೆ. ಅದನ್ನು ಓದಿದ ನಂತರ, ಇಂತಹವರ ಕೈಯಲ್ಲಿ ಎಷ್ಟೊಂದು ಕೋಟ್ಯಾಂತರ ಜನರ ಭವಿಷ್ಯ ಇದೆ ಎಂದು ಭಯವಾಗದೆ ಇರದು. ಆಗ ನನಗೆ ಅನ್ನಿಸಲಾರಂಭಿಸಿದ್ದು, ಈ ಬುಷ್‌ಗೆ ಕಡಿವಾಣ ಇಲ್ಲವೆ ಎಂದು.
ಹಾಗನ್ನಿಸಿದ ಒಂದೆರಡು ವಾರದಲ್ಲಿಯೆ ಅಮೇರಿಕದ ಜನಪ್ರತಿನಿಧಿ ಸಭೆ ಮತ್ತು ಸೆನೆಟ್‌ನ ಕೆಲವು ಸ್ಥಾನಗಳಿಗೆ ನವೆಂಬರ್ ಏಳರಂದು ನಡೆವ ಚುನಾವಣೆಯಲ್ಲಿ ಬುಷ್‌ರ ಪಕ್ಷಕ್ಕೆ ಸೋಲು ಕಾದಿದೆ, ಎರಡೂ ಮನೆಗಳಲ್ಲಿ ಅವರ ಬಹುಮತ ನಷ್ಟವಾಗಲಿದೆ ಎಂದು ಸರ್ವೇಗಳು ಹೇಳಲಾರಂಭಿಸಿದವು. ಆದರೆ 2004 ರ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ನರು ಹಗಲು ರಾತ್ರಿ ಮಾಡಿದ ಕೆಲಸ, ತಮ್ಮ ಪರ ಇರುವ ಮತದಾರರು ಮತ ಚಲಾಯಿಸಿಯೇ ತೀರುವಂತೆ ಮಾಡಿದ ರೀತಿಯನ್ನು ಗಮನಿಸಿದ್ದವರಿಗೆ ಪಲಿತಾಂಶದ ಬಗ್ಗೆ ಗ್ಯಾರಂಟಿ ಇರಲಿಲ್ಲ. ನವೆಂಬರ್ ಏಳರಂದು ಅಮೇರಿಕ ಜನತೆ ಮಾತನಾಡಿತು. ಈಗ ಕೇಂದ್ರದ ಎರಡೂ ಮನೆಗಳ ಹಿಡಿತ ಡೆಮೊಕ್ರಾಟರ ಕೈಯಲ್ಲಿದೆ. ಬುಷ್‌ರು ತೆಗೆದುಕೊಳ್ಳುವ ದೊಡ್ಡ ಮಟ್ಟದ ನಿರ್ಧಾರಗಳೆಲ್ಲ ಇಲ್ಲಿ ಅಂಗೀಕಾರವಾಗಲೇಬೇಕು. ಅವರು ವೀಟೊ ಚಲಾಯಿಸಬಹುದಾದರೂ ಯಾವುದೇ ಮಸೂದೆಯನ್ನು ಅಥವ ಮಂತ್ರಿಗಳ ನೇಮಕಾತಿಯನ್ನು ಅನೇಕ ದಿನಗಳ filibuster ಚರ್ಚೆಯಲ್ಲಿ ತೊಡಗಿಸಿ ಬುಷ್‌ರ ಕೈಕಟ್ಟಿ ಹಾಕುವ ಅವಕಾಶಗಳು ಡೆಮೊಕ್ರ್ರಾಟರಿಗಿದೆ. ಇಲ್ಲಿಯ ತನಕ ಇರಾಕ್ ವೈಫಲ್ಯದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ “my way or the highway” ಎನ್ನುತ್ತಿದ್ದ ಬುಷ್ ಇನ್ನು ಮೇಲೆ ಬೇರೆಯವರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾಗಿದೆ. ಇನ್ನೂ ಎರಡು ವರ್ಷಗಳ ತನಕ ಬುಷ್‌ರಿಗೆ ಕೊಟ್ಟಿದ್ದ ಅಪರಿಮಿತ ಅಧಿಕಾರವನ್ನು ಹೀಗೆ ಪರೋಕ್ಷವಾಗಿ ಅಮೇರಿಕನ್ನರು ಕಿತ್ತು ಹಾಕಿ, ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ ಮಾಡಿದ್ದಾರೆ. ಇದೇ ಅಲ್ಲವೆ ಪ್ರಜಾಪ್ರಭುತ್ವದ ಸೌಂದರ್ಯ! ಇಲ್ಲಿ ಯಾರೂ ಶಾಶ್ವತವಲ್ಲ, ಅಂತಿಮವೂ ಅಲ್ಲ.
ಇನ್ನೊಂದು ಕಡೆ, “ಕೆಟ್ಟ ವಿದ್ಯಾರ್ಥಿಗಳು ಇರಾಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ,” ಎಂದು ಬುಷ್‌ರನ್ನು ಉದ್ದೇಶಿಸಿ ಜಾನ್ ಕೆರಿ ಹೇಳಿದ್ದರೂ ನಂತರ ಅದು ತೆಗೆದುಕೊಂಡ ತಿರುವು ಕೆರ್ರಿಯ ಶ್ವೇತಭವನದ ಕನಸನ್ನು ಅಂತ್ಯಗೊಳಿಸಿದಂತಿದೆ. ರಿಪಬ್ಲಿಕನ್ ಪಕ್ಷದಿಂದ ಸಂಭವನೀಯ ಅಧ್ಯಕ್ಷ ಅಭ್ಯರ್ಥಿ ಎನ್ನಿಸಿದ್ದ ಜಾರ್ಜ್ ಅಲ್ಲೆನ್ ಭಾರತೀಯ ಮೂಲದ ವಿದ್ಯಾರ್ಥಿಯನ್ನು ‘ಮೆಕಾಕ’ (ಪೂರ್ವದ ಕಡೆಯ ಮಂಗ) ಎಂದು ಹಂಗಿಸಿದ್ದರಿಂದ ಸುಲಭವಾಗಿ ಗೆಲ್ಲಬಹುದಾದ ತಮ್ಮ ಸೆನೆಟ್ ಸ್ಥಾನವನ್ನು ಕಷ್ಟ ಪಟ್ಟು ಸೋತಿದ್ದಾರೆ. ಇವುಗಳ ನಡುವೆ, ಈಗ ಸ್ಪೀಕರ್ ಆಗಲಿರುವ ಮೊದಲ ಮಹಿಳೆ ನ್ಯಾನ್ಸಿ ಪೆಲೋಸಿ ಚುನಾವಣೆಗೆ ಮುಂಚೆ ಬುಷ್‌ರನ್ನು ಅಸಮರ್ಥ, ಅಯೋಗ್ಯ ಎಂದು ತೀಕ್ಷ್ಣವಾಗಿ ಟೀಕಿಸಿದ್ದರೂ ಚುನಾವಣೆ ಮುಗಿದ ನಂತರ ಬುಷ್ ಮತ್ತು ಗೆದ್ದ ಡೆಮೊಕ್ರಾಟರು ನಡೆದುಕೊಂಡ ಗೌರವಯುತ ರೀತಿ ಮತ್ತು ತೋರಿಸಿದ ಘನತೆ ನಿಜಕ್ಕೂ ಪ್ರಶಂಸನೀಯ. ಈ ಪ್ರಬುದ್ಧ ನಡವಳಿಕೆಯನ್ನು ನಾವು ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ, ಸುಶಿಕ್ಷಿತ ವಾತಾವರಣದಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ಯಾವುದೇ ವ್ಯಕ್ತಿಕೇಂದ್ರಿತ, ವಂಶಕೇಂದ್ರಿತ, ಮತಕೇಂದ್ರಿತ ಪಾಳೆಯಗಾರಿಕೆ ಆಡಳಿತ ವ್ಯವಸ್ಥೆಯಲ್ಲಲ್ಲ.