Slumdog Millionaire ಮತ್ತದರ Positive Effect

This post was written by admin on February 21, 2009
Posted Under: Uncategorized

ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌‍ಡಾಗ್ ಮಿಲ್ಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರ್ಷ ಒಳ್ಳೊಳ್ಳೆಯ ಚಿತ್ರಗಳೇ ರೇಸ್‌ನಲ್ಲಿ ಇದ್ದಂತಿವೆ. ಅಷ್ಟಿದ್ದರೂ ಸ್ಲಮ್‌‍ಡಾಗ್ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯುವ ಸುದ್ದಿಯೂ ಇದೆ.

ಇಲ್ಲಿ, ನನ್ನ ಒಂದು ಸಂಶಯ ಏನೆಂದರೆ, ಅಕಾಡೆಮಿಯವರು ಬೇಕೆಂತಲೆ “ಮಿಲ್ಕ್”ಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಕೊಡಬಹುದು ಎಂದು. ನಾನು ಆ ಸಿನೆಮಾವನ್ನೆ ಅಲ್ಲ, ಆ ಪಟ್ಟಿಯಲ್ಲಿರುವ ಯಾವ ಚಿತ್ರವನ್ನೂ ನೋಡಿಲ್ಲ. ಹಾಗಾಗಿ ಅವುಗಳಲ್ಲಿ ನನಗೆ ಮೆಚ್ಚಿನದ್ದು ಯಾವುದು ಎಂಬ ಅಭಿಪ್ರಾಯ ಇಲ್ಲ. ಅದರೆ ಲಿಬರಲ್ ಮತ್ತು ಪ್ರಗತಿಪರ ಕಾಳಜಿಗಳನ್ನು ಪ್ರೋತ್ಸಾಹಿಸುವ ಅಕಾಡೆಮಿ ಈ ಸಲ ಅದೇ ಕಾರಣಕ್ಕೆ “ಮಿಲ್ಕ್”ನ ಕತೆ ಮತ್ತು ಅದರಲ್ಲಿರುವ ವಿಷಯದಿಂದಾಗಿ ಅದನ್ನೆ ಆಯ್ದುಕೊಳ್ಳಬಹುದು ಎನ್ನಿಸುತ್ತದೆ. ಅದರಲ್ಲಿನ ವಿಷಯ ಇವತ್ತಿನ ಅಮೆರಿಕನ್ ಲಿಬರಲ್‌ಗಳಿಗೆ ಬಹಳ ಮುಖ್ಯವಾದದ್ದು. ಕಳೆದ ನವೆಂಬರ್ ಚುನಾವಣೆಯಲ್ಲಿ ಕ್ಯಾಲಿಫೋರ್ನಿಯ ಮತ್ತಿತರ ರಾಜ್ಯಗಳಲ್ಲಿ ಸಲಿಂಗಿಗಳ ಕಾನೂನಬದ್ಧ ಮದುವೆಯ ಕಾನೂನುಗಳನ್ನು ಜನ ತಿರಸ್ಕರಿಸಿದ್ದಾರೆ. ಸಲಿಂಗಪ್ರೇಮದ ವಿಷಯಕ್ಕೆ ಕಳೆದ ನಾಲ್ಕೈದು ದಶಕಗಳಲ್ಲಿ ಅಮೆರಿಕನ್ ಸಮಾಜ ಉದಾರವಾಗುತ್ತ ಬಂದಿದೆ. ಈಗ ಅವರ ಹೋರಾಟದ ಅಂತಿಮ ಹಂತ ಎನ್ನಬಹುದಾದ ಕಾನೂನುಬದ್ಧ ಮದುವೆಗೆ ಕಳೆದ ಚುನಾವಣೆಯಿಂದ ದೊಡ್ಡ ಹಿನ್ನಡೆಯೇ ಆಗಿದೆ. ಬರಾಕ್ ಒಬಾಮ ಚುನಾವಣೆ ಗೆದ್ದ ಎರಡನೆಯ ದಿನಕ್ಕೆ ಕ್ಯಾಲಿಫೋರ್ನಿಯ ರಾಜ್ಯದ ಸಲಿಂಗಿಗಳ ಮದುವೆಯ ಪ್ರಸ್ತಾಪ ( Proposition 8 ) ಚುನಾವಣೆಯಲ್ಲಿ ಸೋತ ಸುದ್ದಿ ಬಂದಿತು. ಅಂದು ಇದ್ದಕ್ಕಿದ್ದಂತೆ ಹಾಲಿವುಡ್‍ ಮತ್ತು ಬೆವರ್ಲಿ ಹಿಲ್ಸ್‌ನಲ್ಲಿ ಹತ್ತಾರು ಸಾವಿರ ಉದಾರವಾದಿಗಳಿಂದ ಪ್ರತಿಭಟನೆ ಮತ್ತು ರಸ್ತೆತಡೆ ಜೋರಾಗಿಯೆ ನಡೆಯಿತು. ಆ ಪ್ರತಿಭಟನೆಯ ಫೋಟೋಗಳು ಮತ್ತು ವಿವರಗಳು, ಇಲ್ಲಿವೆ. (ಆ ಸಮಯದಲ್ಲಿ ನಾನು ಕೆಲಸದ ಮೇಲೆ ಹಾಲಿವುಡ್‌ ಇರುವ ಲಾಸ್ ಏಂಜಲೀಸ್‌ನಲ್ಲಿ ಇದ್ದೆ. ಅವರ ಪ್ರತಿಭಟನೆಯ ಕಾರಣಕ್ಕೆ ನಾನಿದ್ದ ಬಸ್ಸೂ ಟ್ರಾಫಿಕ್ ಜ್ಯಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಹಾಗಾಗಿಯೆ ನನಗೂ ಅದು ಗೊತ್ತಾಗಿದ್ದು.)

ಕರಿಯ ನಟನಟಿಯರನ್ನು ಪ್ರಮುಖ ಪ್ರಶಸ್ತಿಗಳಿಂದ ಆದಷ್ಟು ದೂರ ಇಟ್ಟು ಅನ್ಯಾಯ ಮಾಡುತ್ತಲೆ ಬಂದಿದ್ದ ಅಕಾಡೆಮಿಯ ಪೂರ್ವ ಹಿನ್ನೆಲೆ ಮತ್ತು ಇತ್ತೀಚಿನ ವರ್ಷಗಳಲ್ಲಿನ ಅದರ ವರ್ತನೆ ಗಮನಿಸಿದಾಗ ಅಕಾಡೆಮಿಯ ಪ್ರಶಸ್ತಿ ನೀಡುವ ಲೆಕ್ಕಾಚಾರ ಹೊರಗಿನವರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟವೆ. (ಈ ವಿಚಾರಕ್ಕೆ In the Heat of the Night ನಲ್ಲಿನ ನಟನೆಗಾಗಿ ಆ ಚಿತ್ರದ ಕರಿಯ ನಾಯಕ ಸಿಡ್ನಿ ಪಾಯಿಟರ್‌ಗೆ ಕೊಡದೆ ಅದರಲ್ಲಿನ ಪೋಷಕ ಪಾತ್ರಕ್ಕೆ ಕೊಟ್ಟ ಶ್ರೇಷ್ಠನಟ ಪ್ರಶಸ್ತಿ ಮತ್ತು ತನ್ನ ಅನೇಕ ಒಳ್ಳೆಯ ಚಿತ್ರಗಳ ನಟನೆಗೆ ಯಾವೊಂದು ಪ್ರಶಸ್ತಿ ದೊರಕದೆ Training Day ನಂತಹ ಆ ವರ್ಷದ Ordinary ಸಿನೆಮಾಕ್ಕೆ ಪ್ರಶಸ್ತಿ ಪಡೆದ ಡೆನ್ಜೆಲ್ ವಾಷಿಂಗ್ಟನ್‍ನ ಉದಾಹರಣೆಯನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ.) ಈ ಹಿನ್ನೆಲೆಯನ್ನಿಟ್ಟುಕೊಂಡು ಯೋಚಿಸಿದಾಗ, “ಮಿಲ್ಕ್” ಗೆ ಈ ಸಲ ಶ್ರೇಷ್ಠಚಿತ್ರ ಪ್ರಶಸ್ತಿ ಬರುವ ಸಾಧ್ಯತೆ ನನಗೆ ಹೆಚ್ಚಿಗೆ ಕಾಣಿಸುತ್ತದೆ.

ಈಗ ಸ್ಲಂಮ್‌ಡಾಗ್ ವಿಷಯಕ್ಕೆ ಹಿಂದಿರುಗಿದರೆ, ವಾಸ್ತವ ವಿಚಾರಗಳನ್ನು ಎದುರಿಸಲಾಗದ ಭಾರತದಲ್ಲಿನ ಕೆಲವರು ಸ್ಲಮ್‌ಡಾಗ್ ಭಾರತದ ಮಾನ ಕಳೆಯುತ್ತಿದೆ ಎಂದು ಹೇಳುವ ಮೂಲಕ ತಾವು ಹೇಡಿಗಳು (Cowards) ಎಂದು ನಿರೂಪಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ವಿಚಾರ ಏನೆಂದರೆ, ಅನೇಕ ಅಮೆರಿಕನ್ ಸಿನೆಮಾಗಳಲ್ಲಿ ಅಮೆರಿಕವನ್ನು ವಿಮರ್ಶೆಗೆ ಒಡ್ಡಿರುವಷ್ಟು, ಬೇರೆ ಯಾವ ದೇಶದವರೂ ಒಡ್ಡಿಲ್ಲ ಎನ್ನುವುದು. ಕಲೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಹಾಗೂ ಅದು ಸಮುದಾಯವನ್ನು ಕಟ್ಟುವ ರೀತಿ ಗೊತ್ತಿಲ್ಲದ ಅವಿವೇಕಿಗಳು ಮಾತ್ರ ಸಿನೆಮಾ ಅಥವ ಕಲೆ ದೇಶದ-ಸಂಸ್ಕೃತಿಯ ಮಾನ ಕಳೆಯುತ್ತಿದೆ ಎಂದು ಮಾತನಾಡಬಲ್ಲರು. ತಮ್ಮ ತಪ್ಪು ಮತ್ತು ಪಾಪಗಳನ್ನು ಒಪ್ಪಿಕೊಳ್ಳದ ಹಾಗು ವಿಮರ್ಶೆಗ ಒಡ್ಡಿಕೊಳ್ಳದ ಜನ ಉತ್ತಮ ಸಮಾಜವನ್ನು ಎಂದೂ ನಿರ್ಮಿಸಲಾರರು, ಅದಕ್ಕಾಗಿ ಪ್ರಯತ್ನಿಸಲಾರರು.

ಸ್ಲಮ್‌ಡಾಗ್ ಮಿಲ್ಲಿಯನೇರ್ ಅನ್ನು ನಾನು ನೋಡಿಲ್ಲವಾದರೂ, ಅದು ಅಮೆರಿಕದಲ್ಲಿ ಭಾರತದ ಬಗ್ಗೆ ಸೃಷ್ಟಿಸಿರುವ Good-will ಅನ್ನು ಮಾತ್ರ ಸ್ಪಷ್ಟವಾಗಿ ಗುರುತಿಸಬಲ್ಲೆ. ಪ್ರತಿರೋಧಗಳ ಮಧ್ಯೆಯೂ ಮನುಷ್ಯ ಏನಾದರೂ ಸಾಧಿಸಬಲ್ಲ ಎನ್ನುವ ಕತೆಗೆ ಪೂರಕವಾಗಿ ಅಮೆರಿಕನ್ನರು ಸ್ಲಮ್‌ಡಾಗ್ ಅನ್ನು ಉದಾಹರಿಸುತ್ತಿದ್ದಾರೆ. (ABC News ನಲ್ಲಿ ಡಯಾನ ಸಾಯರ್ಸ್ ಭಾರತದ ಕುಗ್ರಾಮಗಳಿಂದ ಬಂದಿರುವ ಇಬ್ಬರು “ಬಸ್‍ಬಾಲ್” ಪಿಚ್ಚರ್‌ಗಳ ಬಗ್ಗೆ ತನ್ನ ಹೊಳಪುಕಣ್ಣಿನಿಂದ ಮಾತನಾಡುತ್ತ ಸ್ಲಮ್‍ಡಾಗ್ ಸಿನೆಮಾವನ್ನು ಉದಾಹರಿಸಿದ್ದು ನೆನಪಾಗುತ್ತಿದೆ.) ಅವರಿಗೆ ಅದರಲ್ಲಿ ತೋರಿಸಿರುವ ಇತರ ವಾಸ್ತವಗಳು ನಗಣ್ಯ. ಅದಕ್ಕಿಂತ ಭೀಕರ ವಾಸ್ತವಗಳನ್ನು ಇಲ್ಲಿಯ ಜನ ತಮ್ಮ ಸಿನೆಮಾಗಳಲ್ಲಿ ನೋಡಿದ್ದಾರೆ. ನಮ್ಮ ಕೋಮುವಾದಿ ರಾಷ್ಟ್ರಪ್ರೇಮಿಗಳಿಗೆ ಮಾತ್ರ ಈ ಸಿನೆಮಾ ಧ್ವನಿಸುವ ಪಾಠಕ್ಕಿಂತ ಅದರಲ್ಲಿ ಚಿತ್ರಿತವಾಗಿರುವ ಭಾರತದ ಸ್ಲಮ್‌ಗಳ ಚಿತ್ರಣ ತಡೆದುಕೊಳ್ಳಲು ಆಗುತ್ತಿಲ್ಲ. ವಾಸ್ತವವನ್ನು ಎದುರಿಸಲಾಗದ, ಆದರೆ ಜನಾಭಿಪ್ರಾಯವನ್ನು ವಿರುದ್ಧ ದಿಕ್ಕಿನಲ್ಲಿ ರೂಪಿಸಿ ದಾರಿತಪ್ಪಿಸಬಲ್ಲ ಈ ಹೇಡಿಗಳನ್ನು ಎದುರಿಸುವ ಬಗೆಯನ್ನು ಭಾರತ ತಕ್ಷಣ ಕಂಡುಕೊಳ್ಳಬೇಕಿದೆ.

ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿನೆಮಾಗಳನ್ನು ನಿರ್ಮಿಸುವ ದೇಶವಾದರೂ ಜಗತ್ತಿಗೆಲ್ಲ ಕನಸು ಹಂಚಬಲ್ಲ ಸಾಮರ್ಥ್ಯವಿರುವ ಹಾಲಿವುಡ್‍ನ Imagination ಅನ್ನು ತನ್ನತ್ತ ಸೆಳೆಯಲು ಇಲ್ಲಿಯ ತನಕ ಅದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅದು ಸ್ಲಮ್‌ಡಾಗ್ ಮಿಲ್ಲಿಯನೇರ್‌ನಿಂದ ಸಾಧ್ಯವಾಗಿದೆ. “Crouching Tiger, Hidden Dragon” ಯಾವ ರೀತಿ ಚೀನಾದ ರಮ್ಯ ಕಾಲ್ಪನಿಕ ಕತೆಗಳನ್ನು, ಅದರ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊರಜಗತ್ತಿಗೆ ಪರಿಚಯಿಸಲು ಮತ್ತು ಅಂತಹ ಸಿನೆಮಾಗಳು ಹೆಚ್ಚೆಚ್ಚು ಬರಲು ಕಾರಣವಾಯಿತೊ, ಭಾರತದ ವಿಷಯಕ್ಕೆ ಅದನ್ನು “ಸ್ಲಮ್‌ಡಾಗ್ ಮಿಲ್ಲಿಯನೇರ್” ಮಾಡಲಿದೆ. India’s time has arrived in Hollywood. ಇನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ಮತ್ತು ಭಾರತೀಯರ ಸುತ್ತ ಸುತ್ತುವ ಅನೇಕ ಹಾಲಿವುಡ್ ಚಿತ್ರಗಳನ್ನು ನಾವು ನಿರೀಕ್ಷಿಸಬಹುದು. ಈ ಪ್ರಕ್ರಿಯೆ, ಹಾಡು-ನೃತ್ಯ-ಫೈಟಿಂಗ್‌ಗೆ ಹೊರತಾದ, ಬದಲಿಗೆ ನೈಜ ಸಮಾಜವನ್ನು ಬಿಂಬಿಸುವ ಅಥವ ಉತ್ತಮ ಸಮಾಜವನ್ನು ಆಶಿಸುವ ರೀತಿಯ ಭಾರತೀಯ ಚಿತ್ರಗಳ ತಯಾರಿಕೆಗೂ ಪೂರಕವಾದರೆ, ಅದು ನಮ್ಮ ಸಿನೆಮಾ ಲೋಕಕ್ಕಾದ ನಿಜವಾದ ಪರಿಣಾಮ.

ನಾಳೆ ಸ್ಲಮ್‌ಡಾಗ್ ಶ್ರೇಷ್ಠಚಿತ್ರ ಪ್ರಶಸ್ತಿ ಪಡೆಯುತ್ತದೊ ಇಲ್ಲವೊ, ಒಂದಷ್ಟು ಪ್ರಶಸ್ತಿಗಳನ್ನು ಪಡೆಯುವುದಂತೂ ಖಚಿತ. ಹೊರದೇಶಗಳಲ್ಲಿ ಭಾರತದ ಬಗ್ಗೆ ಮತ್ತು ಜೀವನಪ್ರೀತಿಯ ಬಗ್ಗೆ ಈ ಚಿತ್ರ ಸೃಷ್ಟಿಸಿದ ಒಂದು Positive Feeling ಗಾದರೂ ಆಗಲಿ ನಾನು ಆ ಸಿನೆಮಾ ತಂಡಕ್ಕೆ ಕೃತಜ್ಞತೆ ಹೇಳುತ್ತೇನೆ.

Add a Comment

required, use real name
required, will not be published
optional, your blog address