ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ “ಹಿಂದುಳಿದವರು”, ಒಳಮೀಸಲಾತಿ, “ಅನಂತ ನಿಷ್ಠ” ಭಟ್…

This post was written by admin on March 10, 2009
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 20, 09 ರ ಸಂಚಿಕೆಯಲ್ಲಿನ ಲೇಖನ.)

ಭಾರತದ ಸಮಾಜದಲ್ಲಿಯ ಜಾತಿವ್ಯವಸ್ಥೆಯಿಂದಾಗಿ “ಸಾಮಾಜಿಕವಾಗಿ ಮುಂದುವರೆದವರು” ಎಂದು ಗುರುತಿಸಲಾಗುವ ಮೇಲ್ಜಾತಿಗಳ ಜನರಿಗೆ ಕೆಲವು ವಿಶೇಷ ಹಕ್ಕು ಮತ್ತು ಸವಲತ್ತುಗಳು ಸುಲಭವಾಗಿ ಬಂದುಬಿಡುತ್ತವೆ. ಒಂದು ಸ್ವಸ್ಥ ಸಮಾಜದಲ್ಲಿ ಆ ಹಕ್ಕು ಮತ್ತು ಸವಲತ್ತುಗಳನ್ನು ಬಳಸಿಕೊಳ್ಳಲು ಜನ ಹೇಸಿಗೆ ಪಟ್ಟುಕೊಳ್ಳಬೇಕು. ಆದರೆ ಹಾಗೆ ಹೇಸಿಗೆ ಪಟ್ಟುಕೊಳ್ಳಲು ಜನಕ್ಕೆ ಅದು ಹೇಸಿಗೆ ಅನ್ನುವುದು ಮೊದಲು ಗೊತ್ತಾಗಬೇಕು. ಅದು ಗೊತ್ತಾಗಬೇಕಾದರೆ ನಾವು ಶತಮಾನಗಳಿಂದ ಪಾಲಿಸಿಕೊಂಡ ಬಂದ ಜಾತಿರಿವಾಜುಗಳನ್ನು, ಅವುಗಳ ನೈತಿಕತೆ/ಅನೈತಿಕತೆಯನ್ನು ಮುಕ್ತವಾಗಿ ವಿಮರ್ಶೆಗೆ ಒಡ್ಡಿಕೊಳ್ಳಬೇಕು. ಆಧುನಿಕ ವಿಚಾರಗಳಿಗೆ ತೆರೆದುಕೊಳ್ಳಬೇಕು. ಆದರೆ ಇವು ಈಗಲೂ ಅಗತ್ಯವಾದಷ್ಟು ಆಗುತ್ತಿಲ್ಲ. ಆದ್ದರಿಂದಲೇ, ಯಾವ ನಡವಳಿಕೆಗಳಿಗೆ ಜನ ಹೇಸಿಗೆ ಪಟ್ಟುಕೊಳ್ಳಬೇಕೊ ಅದಕ್ಕೆ ಪಟ್ಟುಕೊಳ್ಳುತ್ತಿಲ್ಲ. ಎಲ್ಲಾ ಜಾತಿನಾಯಕರುಗಳು ಯಾವೊಂದು ಎಗ್ಗುಸಿಗ್ಗಿಲ್ಲದೆ ತಮ್ಮ ಜಾತಿಸಮಾವೇಶ ಏರ್ಪಡಿಸುತ್ತಾರೆ. ಅಲ್ಲಿ ತಮ್ಮ ಜಾತಿಪರಾಕ್ರಮಗಳನ್ನು ಊದಿಕೊಳ್ಳುತ್ತಾರೆ. ನೆರೆದ ಜಾತಿ-ಜನ ಅಂತಹ ತುತ್ತೂರಿಗೆ ಚಪ್ಪಾಳೆ ತಟ್ಟುತ್ತಾರೆ. ಜಾತಿವಾದ ಮಾಡುವುದು ಹೆಮ್ಮೆಯ ವಿಚಾರ, ಅದರಲ್ಲಿ ಮುಜಗರ ಪಟ್ಟುಕೊಳ್ಳುವುದು ಏನೂ ಇಲ್ಲ, ಎನ್ನುವ ಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೆ.

ಕರ್ನಾಟಕದ ಮಟ್ಟಿಗೆ ಹೇಳಬಹುದಾದರೆ, ಮೇಲ್ಜಾತಿಗಳ ಒಂದು ವಿಶಾಲ ಜನಸಮೂಹ ಕೆಳವರ್ಗದವರು ತಮಗೆ ಡೊಗ್ಗುಸಲಾಮು ಹಾಕಿಕೊಂಡು ಬದುಕಲಿ ಎಂದು ಬಯಸುತ್ತಾರೆ. ಅಂತಹವರನ್ನು ಮಾತ್ರ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಾರೆ ಅಥವ ರಾಜಕೀಯವಾಗಿ ಮೇಲಕ್ಕೆ ಕರೆದುಕೊಳ್ಳುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ “ಮೀಸಲು” ಕ್ಷೇತ್ರಗಳಿಂದ ಆಯ್ಕೆಯಾಗಿರುವ ಶಾಸಕರ ಜಾತಿ ಹಿನ್ನೆಲೆ, ಆ ಜಾತಿಯ ಸಾಮಾಜಿಕ ಸ್ಥಾನಮಾನ. ಮತ್ತು ಆ ಕ್ಷೇತ್ರದಲ್ಲಿ ಆ ಜಾತಿಯ ಜನಸಂಖ್ಯಾ ಪ್ರಮಣವನ್ನು ನಾವು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು, ಹೇಗೆ ಮೇಲ್ಜಾತಿ ಮನಸ್ಥಿತಿ ನಮ್ಮಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಎಲ್ಲೆಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಚಾರಿತ್ರಿಕವಾಗಿ “ಅಸ್ಪೃಶ್ಯ” ರೆಂದು ಪರಿಗಣಿಸಲ್ಪಟ್ಟಿದ್ದವರು ಹೆಚ್ಚಾಗಿರುವರೊ ಅಥವ ಎಲ್ಲಿ ದಲಿತಪ್ರಜ್ಞೆ ಜಾಗೃತವಾಗಿದೆಯೊ ಆ ಕ್ಷೇತ್ರಗಳಲ್ಲೆಲ್ಲ ಮೇಲ್ಜಾತಿಯ ಜನರು “ಸ್ಪೃಶ್ಯ” ಜಾತಿಗಳಿಗೆ ಸೇರಿದ, ಆದರೆ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯೊಳಗೆ ಗುರುತಿಸಲಾದ ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯದ ಜನರನ್ನೆ ಆರಿಸಿದ್ದಾರೆ. ಹಾಗೆ ಸಾಧ್ಯವಾಗಿಲ್ಲವಾದಲ್ಲಿ ದಲಿತರಲ್ಲೆ ಕಡಿಮೆ “Threatening” ನವರನ್ನು ಗೆಲ್ಲಿಸಿಕೊಂಡಿದ್ಡಾರೆ. ದಲಿತ-ಹಿಂದುಳಿದ ಜಾತಿಗಳ ಬಗ್ಗೆ ಪಾರಂಪರಿಕವಾಗಿ ಮೃದುಭಾವನೆ ಇಲ್ಲದ ಪಕ್ಷ ಎಂದೆ ಗುರುತಾದ ಬಿಜೆಪಿ ಅತಿ ಹೆಚ್ಚು ಮೀಸಲು ಸ್ಥಾನಗಳನ್ನು ಪಡೆಯಲು ಮತ್ತು ಆ ಮೀಸಲು ಸ್ಥಾನಗಳಲ್ಲಿ ಗೆದ್ದ ಬಹುಪಾಲು ಶಾಸಕರು “ಸ್ಪೃಶ್ಯ” ಜಾತಿಗಳಿಗೆ ಸೇರಿರುವುದು ಇದನ್ನೆ ಸ್ಪಷ್ಟವಾಗಿ ಹೇಳುತ್ತದೆ. [ಈ "ಸ್ಪೃಶ್ಯ/ಅಸ್ಪೃಶ್ಯ/ಜಾತಿ ಹಿತಾಸಕ್ತಿ" ಆಯ್ಕೆಯ ರಾಜಕೀಯವನ್ನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಾನು ಖುದ್ದು ಕಂಡಿದ್ದೇನೆ. ಕಳೆದ ನಾಲ್ಕೈದು ಸಲದಿಂದಲೂ ನಮ್ಮಲ್ಲಿಯ "ಮೇಲ್ಜಾತಿಗಳ" ಜನರು ಎಲ್ಲಾ ಕೂಡಿ ಮಾತನಾಡಿಕೊಂಡರೊ ಎಂಬಂತೆ ತಮ್ಮ ಹಿತಾಸಕ್ತಿಗಳಿಗೆ ಮತ್ತು ನಿಯಂತ್ರಣಕ್ಕೆ ಅಡ್ಡಿ ಮಾಡದ ಅಲ್ಪಸಂಖ್ಯಾತ ದಲಿತರನ್ನೆ ಆರಿಸುತ್ತಿದ್ದಾರೆ. ಅವರ ಮೊದಲ ಆಯ್ಕೆ ಆನೇಕಲ್ ತಾಲ್ಲೂಕಿನ ದಲಿತರಲ್ಲಿ ಬಹುಸಂಖ್ಯಾತರಾಗಿರುವ ತಮಿಳು ಮನೆಮಾತಿನ ಆದಿ ದ್ರಾವಿಡರಾಗಲಿ (25-30 ಸಾವಿರ) ಅಥವ ಕನ್ನಡ ಮನೆಮಾತಿನ ಆದಿಕರ್ನಾಟಕದವರಾಗಲಿ (15-20 ಸಾವಿರ) ಅಲ್ಲ; ತೆಲುಗು ಮನೆಮಾತಿನ (7-8 ಸಾವಿರ ಮಾತ್ರವಿರುವ) “Threaten” ಮಾಡದ ಮತ್ತೊಂದು ದಲಿತ ಪಂಗಡ.]

ಜಾತಿ ಅಹಂ ಮತ್ತು ಮೇಲ್ಜಾತಿಗಳ “ಹಿಂದುಳಿದವರು”:

ಕರ್ನಾಟಕದಲ್ಲಿ “ಸಾಮಾಜಿಕವಾಗಿ ಮುಂದುವರೆದವರು” ಎಂದು ಗುರುತಿಸಲಾಗುವ ಕೆಲವೆ ಕೆಲವು “ಮೇಲ್ಜಾತಿ”ಗಳನ್ನು ಬಿಟ್ಟರೆ (ಬ್ರಾಹ್ಮಣ/ವೈಶ್ಯ/ಬಂಟ/…) ಮಿಕ್ಕ ಎಲ್ಲಾ ಜಾತಿಗಳು (ಹಲವು ಲಿಂಗಾಯಿತ ಪಂಗಡಗಳು ಮತ್ತು ಒಕ್ಕಲಿಗರಾದಿಯಾಗಿ) ಮೀಸಲಾತಿಯಲ್ಲಿ ಬರುತ್ತಾರೆ. ಈ ಮೀಸಲಾತಿ ವರ್ಗೀಕರಣದಲ್ಲಿ ಬಹುಶಃ ಕರ್ನಾಟಕದ ಶೇ. 80 ಕ್ಕೂ ಜನ ಇರಬಹುದು. ಇವರಿಗೆಲ್ಲ ಸೇರಿ ಇರುವ ಮೀಸಲಾತಿ ಶೇ. 50. ಮಿಕ್ಕ ಶೇ. 10-20 ಜನರಿಗೆ (ಹಿಂದುಳಿದ ವರ್ಗದಲ್ಲಿರುವ ಮಧ್ಯಮವರ್ಗದವರು ಮತು ಸರ್ಕಾರಿ ನೌಕರರು ಸೇರಿ) ಸಾಮಾನ್ಯ ವರ್ಗದ ಶೇ. 50 “ರಿವರ್ಸ್ ಮೀಸಲಾತಿ.” ಮೇಲ್ಜಾತಿಗಳಾಗಿರುವ ಪಂಗಡಗಳಲ್ಲಿ ಇರುವ ಬಡವರಿಗೂ ನೆರವಾಗಲಿ ಎಂದೊ ಅಥವ ಅದಕ್ಕಿಂತ ಹೆಚ್ಚಾಗಿ ಅಪ್ಪಟ ಜಾತಿ-ರಾಜಕೀಯ ಕಾರಣಗಳಿಗಾಗಿ ಮೇಲ್ಜಾತಿಗಳು ಹಿಂದುಳಿದವರಾಗಿದ್ದಾರೆ. ಆದರೆ ಈ “ಹಿಂದುಳಿದ-ಮೇಲ್ಜಾತಿ”ಗಳಲ್ಲಿಯ ಜಾತಿಪ್ರಜ್ಞೆ/ಜಾತಿಅಹಂ ಇರುವವರು ತಾವು “ಬ್ಯಾಕ್‌ವರ್ಡ್ ಕ್ಯಾಸ್ಟ್” ಎಂದು ಹೇಳಿಕೊಳ್ಳುವುದಿಲ್ಲ. ಕರ್ನಾಟಕದ ಜಾತಿಶ್ರೇಣಿಯಲ್ಲಿ ತಾವು ಮೊದಲ ಸಾಲಿನಲ್ಲಿ ಇದ್ದೇವೆ ಎಂದು ಬೀಗುತ್ತಾರೆ.

ಹಾಲಿ ಕರ್ನಾಟಕ ಸರ್ಕಾರದ ಮಂತ್ರಿಮಂಡಲ ರಚನೆಯಾದಾಗ ಈ ಮಂತ್ರಿಮಂಡಲದಲ್ಲಿ ಯಾವಯಾವ ವರ್ಗಗಳಿಗೆ ಪ್ರಾತಿನಿಧ್ಯ ಕೊಡಲಾಗಿದೆ ಎಂದು ತೋರಿಸಲು ಬಹುಶಃ ಸರ್ಕಾರದ/ಪಕ್ಷದ ವತಿಯಿಂದ ಕೊಡಲಾದ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅದರಲ್ಲಿ ನನ್ನ ಹಾಗೆಯೆ ಜಾತಿ ಸೂಚಕ ಹೆಸರುಗಳಿರುವ “ಸಮರಸಿಂಹ ರೆಡ್ಡಿ”ಗಳನ್ನೆಲ್ಲ “ಹಿಂದುಳಿದ ವರ್ಗ”ಗಳಿಗೆ ಸೇರಿಸಲಾಗಿತ್ತು. ಇಷ್ಟು ದಿನವೂ ಒಕ್ಕಲಿಗರ ಗುಂಪಿನಲ್ಲಿ ಕಾಣಿಸುತ್ತಿದ್ದ ಈ ಗುಂಪು ಇದ್ದಕ್ಕಿದ್ದಂತೆ ಯಾವುದೆ ಸರ್ಕಾರಿ/ಸಾಮಾಜಿಕ ಬದಲಾವಣೆ ಇಲ್ಲದೆ “ವರ್ಗಾಂತರ”ವಾಗಿ ಬಿಟ್ಟಿತ್ತು. ಈ ಸಮುದಾಯದ ಜನ ಪ್ರಬಲವಾಗಿರುವ ಕಡೆಯೆಲ್ಲ “ಜನಾಂಗ ಸಮಾವೇಶ” ನಡೆಸುತ್ತ ತೊಡೆ ತಟ್ಟಿ ಮೀಸೆ ತೀಡುವ ಜನ ಅದು ಯಾವಾಗ ಸಾಮಾಜಿಕವಾಗಿ “ಹಿಂದುಳಿದವ”ರಾದರು ಎನ್ನುವ ಸೋಜಿಗ ನನ್ನದು.

ಇಲ್ಲಿ “ಮುಂದುವರೆದ ವರ್ಗಗಳಲ್ಲಿ” ಜಾತಿಅಹಂ ಯಾವ ರೀತಿ ಇರುತ್ತದೆ ಮತ್ತು ಅಷ್ಟಿದ್ದರೂ ಇವರು ಹೇಗೆ “ಹಿಂದುಳಿದವರಾಗುವ” ಮೂಲಕ ನಮ್ಮ ಸಾಮಾಜಿಕ ನ್ಯಾಯದ ಅಣಕ ಮಾಡುತ್ತಾರೆ ಎನ್ನುವುದಕ್ಕೆ ನನ್ನ ಹತ್ತಿರದ ಉದಾಹರಣೆ ಕೊಡುತ್ತೇನೆ. ಇದು ನನ್ನೊಬ್ಬನ ಸ್ವಂತ ಅನುಭವವಾದರೂ ಅದನ್ನು ಕರ್ನಾಟಕಕ್ಕೆ ಒಂದಷ್ಟು ಮಟ್ಟಿಗೆ ಸಾರ್ವತ್ರಿಕಗೊಳಿಸಬಹುದು ಎಂಬ ಖಚಿತ ಅಭಿಪ್ರಾಯ ನನ್ನದು. ಕಳೆದ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಣದ ಪ್ರಭಾವವನ್ನು, ಪ್ರಜಾಪ್ರಭುತ್ವದ ಅಣಕವನ್ನೂ, ದುಡ್ಡಿದ್ದವರ ಕಾನೂನು ಉಲ್ಲಂಘನೆಯನ್ನೂ ವಿರೋಧಿಸಿ, ವೈಯಕ್ತಿಕವಾಗಿ ನನ್ನ ನೈತಿಕ ಪ್ರತಿಭಟನೆ ತೋರಿಸಲು ನಾನು ಚುನಾವಣೆಗೆ ನಿಂತಿದ್ದೆ. ಗೋಪಾಲಗೌಡರು ಮಾಡಿದ್ದಂತೆ ಜನರಿಂದಲೆ ದುಡ್ಡುಸಂಗ್ರಹಿಸಬೇಕು, ಮಾಡುವ ಖರ್ಚು ಚುನಾವಣಾ ಆಯೋಗ ವಿಧಿಸಿದ ಮಿತಿಯೊಳಗೆ ಇರಬೇಕು, ಎಲ್ಲಾ ಖರ್ಚಿಗೂ ಸರಿಯಾಗಿ ಲೆಕ್ಕ ಕೊಡಬೇಕು, ಮತ್ತು ಸಾಧ್ಯವಾದರೆ ಚುನಾವಣೆಯ ಅಕ್ರಮಗಳ ಬಗ್ಗೆ ಚರ್ಚೆಯಾಗುವಂತೆ ಆಗಬೇಕು ಎನ್ನುವುದು ಆಗ ಹಾಕಿಕೊಂಡ ಗುರಿ. ಅದೊಂದು ಸಂಪೂರ್ಣವಾಗಿ ಸಾಂಕೇತಿಕ ಸ್ಪರ್ಧೆ. ಆ ಸಮಯದಲ್ಲಿ ಒಮ್ಮೆ ಊರಿಗೆ ಹೋಗಿದ್ದೆ. ಅಲ್ಲಿ ಸ್ಥಳೀಯ ರಾಜಕೀಯ ಕಾರಣಗಳಿಗಾಗಿ ಊರಿನ ಸುತ್ತಮುತ್ತಲ ಒಂದಷ್ಟು ಯುವಕರು ನಮ್ಮ ಮನೆಗೆ ಬಂದಿದ್ದರು. ಅವರಲ್ಲಿ ಒಬ್ಬ ಕೇಳಿದ, “ಏನ್ ಗುರು, ಬೆಂಗಳೂರಲ್ಲಿ ಎಲೆಕ್ಷನ್‌ಗೆ ನಿಂತಿದ್ದೀಯಂತೆ? ಪೇಪರ್‌ನಲ್ಲಿ ಬಂದಿತ್ತು. ಏನು, ಗೆಲ್ತೀಯ?” ನಾನು ಯಾಕೆ ನಿಂತಿದ್ದೇನೆ ಮತ್ತು ಅದರ ಉದ್ದೇಶ ಏನು ಎಂದು ಗೊತ್ತಿಲ್ಲದ ಆತನಿಗೆ, “ಇದು ನೀವು ಮಾಡುತ್ತಿರುವಂತಹ ಸೋಲು ಗೆಲುವಿನ, ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ, ಜನರಿಗೆ ದುಡ್ಡು ಹಂಚುವ ಚುನಾವಣೆ ಅಲ್ಲ. ಜನರಿಂದ ದುಡ್ಡು ಸಂಗ್ರಹಿಸಿ, ಅಷ್ಟನ್ನೆ ಖರ್ಚು ಮಾಡುವ ಚುನಾವಣೆ ನನ್ನದು. ಅಲ್ಲಲ್ಲಿ ಒಂದಷ್ಟು ಬಡವರು ಸಹ ಹತ್ತಿಪ್ಪತ್ತು ರೂಪಾಯಿ ಕೊಟ್ಟಿದ್ದಾರೆ. ಎಲ್ಲಾದಕ್ಕೂ ಲೆಕ್ಕ ಇರುತ್ತೆ. ನೀನೂ ಕೊಟ್ಟರೆ ಅದನ್ನೂ ತೆಗೆದುಕೊಳ್ಳುತ್ತೇನೆ. ನಿನ್ನ ಹೆಸರನ್ನು ನನ್ನ ವೆಬ್‌ಸೈಟಿನಲ್ಲಿ ಹಾಕುತ್ತೇನೆ,” ಎಂದೆ. ತಕ್ಷಣವೆ ಆತನ ಮೇಲ್ಜಾತಿ ಅಹಂ ಕೆರಳಿ ಎದ್ದಿತು: “ಏನ್ ಗುರು? ರೆಡ್ಡಿಯಾಗಿದ್ದುಕೊಂಡು ಜನರ ಹತ್ತಿರ ಎಲೆಕ್ಷನ್‌ಗೆ ದುಡ್ಡು ಕೇಳ್ತೀಯ? ಛೇ ಛೇ. ಇದು ಸರಿ ಇಲ್ಲ. ನಮ್ಮ ಜಾತಿಗೇ ಅವಮಾನ,” ಎಂದುಬಿಟ್ಟ. ನಾನು ನಗುತ್ತ ಸುಮ್ಮನಾದೆ. ಹೀಗೆ, “ನಾವು ಮೇಲ್ಜಾತಿಯ ಜನರಾಗಿದ್ದುಕೊಂಡು ಹೀಗೆ ಮಾಡುವುದಾ?” ಎಂದು ಲಿಂಗಾಯತ/ಒಕ್ಕಲಿಗರಾದಿಯಾಗಿ ಇತರ ಎಲ್ಲಾ ಮೇಲ್ಜಾತಿಗಳು ಬಹಿರಂಗವಾಗಿ ನಮ್ಮಲ್ಲಿ ಪ್ರತಾಪ ಕೊಚ್ಚುತ್ತಾರೆ. ತಾವು ಯಾವಯಾವ ರೀತಿ “ಶ್ರೇಷ್ಠರು” ಎನ್ನುತ್ತಾರೆ. ಆದರೆ, ನಿಜವಾದ “ಸಾಮಾಜಿಕವಾಗಿ ಹಿಂದುಳಿದವರ” ಜೊತೆ ಅವರ ಅವಕಾಶಗಳನ್ನು ಕಿತ್ತುಕೊಳ್ಳಲು ಪೈಪೋಟಿ ಮಾಡುತ್ತಾರೆ!

ಪ್ರಗತಿಪರರ ಸವಾಲು:

ಇಲ್ಲಿಯ ಕಠೋರ-ವಾಸ್ತವ ಯಾವುದೆಂದರೆ, ಮೇಲ್ಜಾತಿಗಳ “ಅಹಂಕಾರಿ/ಜಾತಿವಾದಿ” ಜನರಿಗೆ ಅವರ ಜಾತಿಅಹಂ/ಜಾತಿವಾದ ಅನೈತಿಕವಾದದ್ದು ಎಂದು ಹೇಳುವ ಸಾಮಾಜಿಕ/ಸಾಂಸ್ಕೃತಿಕ ನಾಯಕತ್ವವೆ ಅವರಲ್ಲಿ ಇಲ್ಲವಾಗಿರುವುದು ಇಲ್ಲವೆ ನಗಣ್ಯವಾಗಿರುವುದು. ಕರ್ನಾಟಕದಲ್ಲಿಯ ಎಲ್ಲಾ ಮೇಲ್ಜಾತಿಗಳ ಜನ ನಿಜವಾದ ಅರ್ಥದಲ್ಲಿ “ಹಿಂದುಳಿದವ”ರಾಗಿರುವುದು, ಬಡವರಾಗಿರುವುದು ಈ ವಿಚಾರದಲ್ಲಿ. ಇದ್ದ/ಇರುವ ಸಾಂಸ್ಕೃತಿಕ ನಾಯಕರನ್ನು ಸಹ ನಮ್ಮಲ್ಲಿಯ ಜಾತಿವಾದ ಬುದ್ಧನನ್ನು ಅರಗಿಸಿಕೊಂಡ “ಭಾರತೀಯ ಸಂಪ್ರದಾಯ”ಕ್ಕನುಗುಣವಾಗಿ ತನ್ನೊಳಗೆ ಎಳೆದುಕೊಂಡುಬಿಡುತ್ತದೆ ಇಲ್ಲವೆ ಅವರನ್ನು ಬಹಿಷ್ಕರಿಸಿಬಿಡುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಕುವೆಂಪು, ಲಂಕೇಶ್, ಚಂಪಾಗಳಾದಿಯಾಗಿ ಕೆಲವು ಉದಾಹರಣೆಗಳನ್ನು ಕೊಡಬಹುದು. ಜಾತಿವಾದಿಯಾಗದೆ ಅಥವ ಜಾತಿಗಳೊಂದಿಗೆ ಗುರುತಿಸಿಕೊಳ್ಳದೆ ಮೇಲ್ಜಾತಿಯ ಜನರನ್ನು ಈ ಜಾತಿಅಹಮ್‌ನಿಂದ ಮತ್ತು ಜಾತಿವಾದದಿಂದ ಹೊರತರುವುದೆ ಪ್ರಗತಿಪರರಿಗಿರುವ ದೊಡ್ಡ ಸವಾಲು.


ಒಳ ಮೀಸಲಾತಿ – ಸಾಮಾಜಿಕ ನ್ಯಾಯದ ಮುಂದುವರೆದ ಭಾಗ:

ಕಳೆದ ಚುನಾವಣೆಯಲ್ಲಿ ಮೀಸಲು ಸ್ಥಾನಗಳಲ್ಲಿ ಗೆದ್ದ ಬಹುಪಾಲು ಶಾಸಕರು ಚಾರಿತ್ರಿಕವಾಗಿ “ಅಸ್ಪೃಶ್ಯ”ರಾದ ಬಹುಸಂಖ್ಯಾತ ಜನಾಂಗಗಳಿಗೆ ಸೇರಿರದೆ ಅಲ್ಪಸಂಖ್ಯಾತರಾದ “ಸ್ಪೃಶ್ಯ” ಜಾತಿಗಳಿಗೆ ಸೇರಿರುವುದರ ಮೂಲವನ್ನು ಅರ್ಥ ಮಾಡಿಕೊಳ್ಳಲಾಗದ, ಅರ್ಥವಾದರೂ ಏನೊಂದೂ ಮಾಡಲಾಗದ ದೈನೇಸಿ ಸ್ಥಿತಿಯಲ್ಲಿ ಕರ್ನಾಟಕದ ಇವತ್ತಿನ ದಲಿತ ನಾಯಕತ್ವ ಇದ್ದರೆ, ’ಇದು ದಲಿತರ ಸಮಸ್ಯೆ, ನಮಗೆ ಸಂಬಂಧಿಸಿದ್ದಲ್ಲ’ ಎನ್ನುವ ಮನೋಭಾವದಲ್ಲಿ ಒಟ್ಟು ಸಮಾಜದ ಬಗ್ಗೆ ಯೋಚಿಸಬೇಕಾದ ಜಾತ್ಯತೀತ ನಾಯಕತ್ವ ಇದೆ. ಇವೊತ್ತು ನಮ್ಮಲ್ಲಿರುವವರೆಲ್ಲ ಜಾತಿ ನಾಯಕರುಗಳೆ ಹೊರತು ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸಬಲ್ಲ ರಾಜ್ಯಮಟ್ಟದ ನಾಯಕರುಗಳಲ್ಲ. ಇಂತಹ ಸಂದರ್ಭದಲ್ಲಿ, “ಒಳ ಮೀಸಲಾತಿ” ಜಾರಿಯಾದರೆ ದಲಿತರ ಒಗ್ಗಟ್ಟು ಒಡೆದುಹೋಗಿಬಿಡುತ್ತದೆ ಎಂಬ ಅನವಶ್ಯಕ ಭಯದಲ್ಲಿ ದಲಿತ ಸಮುದಾಯದ ನಾಯಕರು ಮೀಸಲಾತಿಯ ನೈಜ ಉದ್ದೇಶವನ್ನೆ ಮರೆಯುತ್ತಿದ್ದಾರೆ. ಮೀಸಲಾತಿ ಎನ್ನುವುದೆ “ಒಳ ಮೀಸಲಾತಿ” ಅಲ್ಲವೆ? ಹಾಗಿದ್ದಾಗ, ಸಂದರ್ಭ ಬೇಡಿದಾಗ ಮತ್ತು ನ್ಯಾಯವೂ ಯುಕ್ತವೂ ಆಗಿರುವಾಗ ಮೀಸಲಾತಿಯಲ್ಲಿ “ಒಳ ಮೀಸಲಾತಿ” ಕೊಡುವುದರಲ್ಲಿ ತಪ್ಪೇನಿದೆ? ನಿಜವಾದ ದಲಿತರಿಗೆ ಸಿಗಬೇಕಾದ ಸ್ಥಾನಗಳು “ಹಿಂದುಳಿದ” ವರ್ಗಗಳಿಗೆ ಸಿಗುತ್ತಿರುವುದೂ, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸ್ಥಾನಗಳು “ಮೇಲ್ಜಾತಿ”ಯ ಜನರಿಗೆ ಸಿಗುತ್ತಿರುವುದೂ ಸಾಮಾಜಿಕ ನ್ಯಾಯದ ಅಪಹಾಸ್ಯ ಮಾಡಿದಂತೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಯಲ್ಲಿರುವ ಆದರೆ ಆ ಮಟ್ಟದ ಸವಲತ್ತುಗಳಿಗೆ ಅರ್ಹರಲ್ಲದ ಗುಂಪುಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದೂ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ, ಆದರೆ ಸಾಮಾಜಿಕವಾಗಿ ಮುಂದುವರೆದ ಮತ್ತು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲು ಅರ್ಹರಾದ ಗುಂಪುಗಳನ್ನು ಹಿಂದುಳಿದ ವರ್ಗಗಳಿಂದ ಹೊರಹಾಕುವುದು ಇವತ್ತು ಕರ್ನಾಟಕ ಸಾಮಾಜಿಕ ನ್ಯಾಯದ ಸಂದರ್ಭದಲ್ಲಿ ತಕ್ಷಣಕ್ಕೆ ಆಗಬೇಕಾದ ಕೆಲಸ.

ಆದರೆ, ಇವತ್ತಿನ ನಮ್ಮ ಸಂದರ್ಭ ಹೇಗಿದೆ ಅಂದರೆ, ಇಂತಹುವುದನ್ನು ಚರ್ಚಿಸುವ ಆರೋಗ್ಯಕರ ವಾತಾವರಣವೆ ನಮ್ಮಲ್ಲಿ ಇಲ್ಲ. ಮೇಲ್ಜಾತಿಗಳ ಜನ ಹೇಗೆ ತಮ್ಮ ಪರಂಪರಾಗತ ಹೆಚ್ಚುಗಾರಿಗೆ ಬಿಟ್ಟುಕೊಡಲು ಸಿದ್ಧರಿಲ್ಲವೊ ಅದೇ ರೀತಿ ಹಿಂದುಳಿದ-ದಲಿತರಲ್ಲಿಯ ಮುಂದುವರೆದವರು ತಮ್ಮ ಸವಲತ್ತುಗಳನ್ನು ತಮಗಿಂತ ಹಿಂದುಳಿದವರಿಗೆ ಬಿಟ್ಟುಕೊಡಲು ಸಿದ್ಧರಿಲ್ಲ. ಎಲ್ಲಾ ಹಂತಗಳಲ್ಲೂ ಫ್ಯೂಡಲಿಸಂ ಆವರಿಸಿಕೊಂಡುಬಿಟ್ಟಿದೆ. ಹಾಗೆಯೆ, ಎಲ್ಲರಿಗೂ ಹಿಂದುಳಿದವರಾಗುವ/ದಲಿತರಾಗುವ ಪೈಪೋಟಿ. ತಮ್ಮ ಜಾತಿ ಸಮಾವೇಶಗಳಲ್ಲಿ ತೊಡೆತಟ್ಟುವ, ತಮ್ಮನ್ನು ತಾವು ಮೇಲ್ಜಾತಿ ಎಂದು ಹೇಳಿಕೊಳ್ಳುವ ಜನರೂ ಅನುಕೂಲಕ್ಕೆ ತಕ್ಕಂತೆ ತಮ್ಮನ್ನು “ಹಿಂದುಳಿದ ಜಾತಿ” ಎಂದು ವರ್ಗೀಕರಿಸಿಕೊಳ್ಳುತ್ತಿದ್ದಾರೆ. ಎಲ್ಲರನ್ನೂ ಒಂದು ಸಮಹಂತಕ್ಕೆ ಏರಿಸುವ ಮೂಲಕ ಜಾತಿವ್ಯವಸ್ಥೆ ಮತ್ತು ಜಾತಿಗಳ ಹೆಚ್ಚುಗಾರಿಕೆ ಕೊನೆಗಾಣಿಸಬೇಕು ಎಂದು ಆಶಿಸಿದ ನಮ್ಮ ರಾಷ್ಟ್ರಸ್ಥಾಪಿಸಿದ ಹಿರಿಯರ (Founding Fathers of India) ಆಶಯಕ್ಕೆ ನಾವು ಮೋಸ ಮಾಡುತ್ತಿದ್ದೇವೆ.


ದಿನಪತ್ರಿಕೆಗಳೂ, ಅನಂತನಿಷ್ಠೆಯೂ…

ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬರಲು (1983) “ಲಂಕೇಶ್ ಪತ್ರಿಕೆ” ಯ ಕೊಡುಗೆಯೂ ಒಂದಷ್ಟು ಇತ್ತು ಎಂದು ಆಗಾಗ ಸ್ಮರಿಸಲಾಗುತ್ತದೆ. ಅದೇ ರೀತಿ, ಬಿಜೆಪಿ ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತಾಗುವಲ್ಲಿ ಕನ್ನಡದ ಎರಡು-ಮೂರು ದಿನಪತ್ರಿಕೆಗಳ ಕೊಡುಗೆಯನ್ನು ನಾವು ಗುರುತಿಸಬಹುದು. ಅವುಗಳಲ್ಲಿ ಮೊದಲಿಗೆ ಗುರುತಿಸಬೇಕಾದದ್ದು “ವಿಜಯ ಕರ್ನಾಟಕ”ವನ್ನು. ನಾನು ಈ ಜಾತಿವಾದ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಬರೆಯುತ್ತ ಆ ಪತ್ರಿಕೆಯ ಇತ್ತೀಚಿನ ಲೇಖನಗಳನ್ನು ಗಮನಿಸುತ್ತಿದ್ದೆ. ಇದ್ದಕ್ಕಿದ್ದಂತೆ ಬಿಜೆಪಿಯ ವಿರುದ್ಧ, ಅಲ್ಲಿಯ “ವಂಶಪಾರಂಪರ್ಯ” ರಾಜಕೀಯದ ವಿರುದ್ಧ, ಲಿಂಗಾಯತರಲ್ಲಿ “ಪಂಚಮಸಾಲಿ”ಗಳಿಗೆ ಮತ್ತು ಇತರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ, ಪುಂಖಾನುಪುಂಖವಾಗಿ ಲೇಖನಗಳು ಪ್ರಕಟವಾಗುತ್ತಿವೆ! ಈ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ತಾವು ಮಾಜಿ ಕೇಂದ್ರಸಚಿವ ಅನಂತಕುಮಾರ್‌ರ ಕೈಕೆಳಗೆ ಕೆಲಸ ಮಾಡಿದ್ದ ಹಳೆಯ ಋಣವನ್ನು ತೀರಿಸಲೆಂಬಂತೆ, ಅನಂತಕುಮಾರರ ಮೇಲೆ ಮುನಿಸಿಕೊಂಡಿರುವ ಡಾ. ಯಡ್ಡ್‌ಯೂರಪ್ಪನವರ ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಅಟ್ಯಾಕ್ ಮಾಡುತ್ತಿದ್ದಾರೆ. ಬಹುಶಃ ಇಲ್ಲಿಯ ತನಕ ಕರ್ನಾಟಕದ ಯಾವೊಬ್ಬ ದಿನಪತ್ರಿಕೆಯ ಸಂಪಾದಕರೂ ತಲುಪದ ಭಟ್ಟಂಗಿ ಮತ್ತು ಪತ್ರಿಕೆಯ ದುರುಪಯೋಗದ ಹಂತಕ್ಕೆ “ಅನಂತ ನಿಷ್ಠ” ಭಟ್ ಇಳಿದುಬಿಟ್ಟಿದ್ದಾರೆ. ಇಲ್ಲಿಯ ವ್ಯಂಗ್ಯ ಏನೆಂದರೆ, ಆ ಪತ್ರಿಕೆಯಲ್ಲಿ ಬರುತ್ತಿರುವ ಒಂದಷ್ಟು ಯಡಿಯೂರಪ್ಪ ವಿರೋಧಿ ಲೇಖನಗಳೂ ಸಕಾರಣವಾಗಿರುವುದು.

“ವಿಜಯ ಕರ್ನಾಟಕ”ದ ಇಂದಿನ (ಮಾರ್ಚ್ 8, 09) ದಿನಪತ್ರಿಕೆಯಲ್ಲಿ “ಸಾಮಾಜಿಕ ನ್ಯಾಯ”ಕ್ಕೆ ಸಂಬಂಧಿಸಿದಂತೆಯೆ ಒಂದು ಮುಖಪುಟ ಸುದ್ಧಿ ಮಾಡಲಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 80 ಲಕ್ಷ ಇರುವ ಪಂಚಮಸಾಲಿಗಳಿಗೆ 44 ಲಕ್ಷ ಜನಸಂಖ್ಯೆಯ ಬಣಜಿಗ ನಾಯಕ ಡಾ. ಯಡ್ಡ್‌ಯೂರಪ್ಪ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದೆ ಸುದ್ಧಿ. (ಆ ಪತ್ರಿಕೆಯ ಪ್ರಕಾರ ಕರ್ನಾಟಕದ ಲಿಂಗಾಯತರಲ್ಲಿಯ ಪ್ರಮುಖ ಮೂರು ಪಂಗಡಗಳ ಜನಸಂಖ್ಯೆ ಒಟ್ಟು 1.85 ಕೋಟಿ!. ಇನ್ನು ಮಿಕ್ಕ ಪಂಗಡಗಳೂ ಸೇರಿದರೆ ಅವರ ಜನಸಂಖ್ಯೆ 2 ಕೋಟಿ ದಾಟದೆ? ಅಬ್ಬಬ್ಬಾ. ಇಷ್ಟು ದಿನ ಕರ್ನಾಟಕದ 5.3 ಕೋಟಿ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಸುಮಾರು ಶೇ. 15 ರಷ್ಟಿದೆ, ಅಂದರೆ ಸುಮಾರು 80-90 ಲಕ್ಷ, ಎಂದು ಬರೆದವರೆಲ್ಲ ಇನ್ನೆಂತಹ “ನೂರೆಂಟು ಸುಳ್ಳು”ಗಳ ಸರದಾರರಾಗಿರಬಾರದು?) ಇದು ನಮ್ಮ ಪತ್ರಿಕೆಗಳ ಮುಖಪುಟದ Authenticity.

ಇಷ್ಟಿದ್ದರೂ, ಭಟ್ “ಅನಂತ ನಿಷ್ಠೆ”ಯಿಂದ ಮಾಡುತ್ತಿರುವ “ಯಡಿಯೂರಪ್ಪ ವಿರೋಧಿ ಅಭಿಯಾನ” ಈ ಸಲ ಕನ್ನಡದ ಪತ್ರಿಕಾಜಗತ್ತಿಗೆ ಪಾಠವೊಂದನ್ನು ಕಲಿಸುವ ಸಾಧ್ಯತೆ ಇದೆ. ಎಸ್.ಎಂ. ಕೃಷ್ಣ ಬೆಂಗಳೂರು ದಕ್ಷಿಣದಲ್ಲಿ ನಿಂತು, ಆ ಮೂಲಕ ಅಲ್ಲಿ ಅನಂತ್ ಕುಮಾರ್ ಸೋತು, ಕೇಂದ್ರದಲ್ಲಿ ಎನ್.ಡಿ.ಎ.ಯೂ ಕಣ್ತೆರೆಯದೆ ಹೋದರೆ, ರೋಷತಪ್ತ ಡಾ. ಯಡ್ಡ್‌ಯೂರಪ್ಪ ಒಂದಿಬ್ಬರು “ಭಟ್ಟಂಗಿ”ಗಳ ಅಂಗಿ-ಚಡ್ಡಿಯನ್ನು ಕಳಚಬಹುದು. ಹಾಗೆಯೆ, ಹಾಲಿ ಸರ್ಕಾರದ ಹಗರಣಗಳೂ “ವಿಜಯ ಕರ್ನಾಟಕ”ದ ಮೂಲಕವೆ ಬಯಲಿಗೆ ಬೀಳುವುದನ್ನು ಊಹಿಸಬಹುದು.

Reader Comments

ಶ್ರೀ ರವಿಕೃಷ್ಣ-ರವರೇ,

ನೀವು ಚುನಾವಣೆಗೆ ನಿಂತು ಬಹಳ ಸಮಯದ ನಂತರ ಈ ಕುರಿತು ಪ್ರತಿಕ್ರಿಯಿಸುತ್ತಿದ್ದೇನೆ. ಏಕೆಂದರೆ, ನಿಮ್ಮದೇ ಆದ ಒಂದು ಬ್ಲಾಗ್ ಇದೆ ಎಂದು ನನಗೆ ತಿಳಿದಿರಲಿಲ್ಲ.

ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರ ಹಿಂದಿನ ಉದ್ದೇಶಗಳನ್ನು ತುಂಬಾ ಸರಳವಾಗಿ ತಿಳಿಸಿದ್ದೀರಿ. ಏಕೆಂದರೆ ಕರ್ನಾಟಕದಲ್ಲಿ ಇತ್ತೀಚಿನವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದರ ಉದ್ದೇಶ ಕೇವಲ ಹಣ ಮಾಡುವುದೊಂದೇ ಆಗಿತ್ತು. ಇತ್ತೀಚೆಗೆ ಬಳ್ಳಾರಿ ಕ್ಷೇತ್ರ ಮಹಾತ್ಮೆಯಿಂದಾಗಿ ಸ್ವಹಿತಾಸಕ್ತಿಯ ರಕ್ಷಣೆಯೂ ಕೂಡ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡಿರುವ ಸಾರ್ವಜನಿಕ ಭ್ರಷ್ಟಾಚಾರಕ್ಕೆ ಇರುವ ಅತ್ಯಂತ ದೊಡ್ಡ ಕಾರಣವೆಂದರೆ ಈ ಚುನಾವಣೆ. ಇಲ್ಲಿಂದಲೇ ಎಲ್ಲಾ ಅನಿಷ್ಟಗಳ ಪ್ರಾರಂಭ.. ನೀವು ಚುನಾವಣೆಯಲ್ಲಿ ಸೋಲುವುದು ಹೆಚ್ಚುಕಮ್ಮಿ ಖಚಿತವೇ ಆಗಿತ್ತು. ಆದರೂ ನಿಮ್ಮದು ಪ್ರೊಟೆಸ್ಟ್ ವಿತ್ ಎ ಡಿಫರೆನ್ಸ್.. ಅಭಿನಂದನೆಗಳು..

ಇನ್ನು ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರ ಕುರಿತು ನಮ್ಮ ನಾಡಿನ ನಂ1 ಪತ್ರಿಕೆಯ ಸಂಪಾದಕರು ಸಂಪಾದಕೀಯದಲ್ಲಿ ಲೇವಡಿ ಮಾಡುವ ರೀತಿಯಲ್ಲಿ ಹಾಗೂ ತೀರಾ ಕೆಳ ಮಟ್ಟದ ಅಭಿರುಚಿಯಲ್ಲಿ ಬರೆದು ತಮ್ಮನ್ನು ತಾವೇ ಅಪಮೌಲ್ಯಗೊಳಿಸಿಕೊಂಡಿದ್ದಾರೆ. ಅಲ್ಲಿಯವರೆಗೂ ನಾನೂ ಸಹ ಆ ಪತ್ರಿಕೆಯ ಹಾಗೂ ಆ ಸಂಪಾದಕರ ಕುರಿತು ಉತ್ತಮ ಅಭಿಪ್ರಾಯಗಳನ್ನೇ ಹೊಂದಿದ್ದೆ. ಆನಂತರ ಇದನ್ನು ತಿದ್ದಿಕೊಳ್ಳಬೇಕಾಯ್ತು. ಟೈಂಸಾಫ್ ಇಂಡಿಯಾಕ್ಕೂ ಇವರಿಗೂ ನಂಟು ಬೆಳೆದಿದ್ದು ಹೇಗೆ ಎಂಬುದು ಇದರಿಂದ ಮನದಟ್ಟಾಯ್ತು..

ನಿಮ್ಮ ಬರಹದ ಓಟ ಇದೇ ರೀತಿಯಲ್ಲಿ ಮುಂದುವರೆಯಲಿ.. ಹಾಗೂ ಕರ್ನಾಟಕದಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲಿ ಎಂದು ಬಯಸುವ

ಅಪ್ಪಟ ಕನ್ನಡಿಗ..
ಪ್ರಸನ್ನ

#1 
Written By ಪ್ರಸನ್ನ ಮಂಗಳೂರು on October 14th, 2009 @ 7:19 pm

Add a Comment

required, use real name
required, will not be published
optional, your blog address