The name is Bond, ‘Money’ Minting Bond!

This post was written by admin on November 19, 2006
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇದೇ ನವೆಂಬರ್ 17 ರಂದು ಹೊಸ ಜೇಮ್ಸ್ ಬಾಂಡ್ ಚಲನಚಿತ್ರ ‘ಕೆಸೀನೊ ರಾಯೇಲ್’ ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರ ಜೇಮ್ಸ್ ಬಾಂಡ್ ಚಿತ್ರಪರಂಪರೆಯಲ್ಲಿ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು. 21 ನೆ ಜೇಮ್ಸ್ ಬಾಂಡ್ ಚಿತ್ರ; ಆದರೆ, ಇಯಾನ್ ಫ್ಲೆಮಿಂಗ್ ಬರೆದ ಜೇಮ್ಸ್ ಬಾಂಡ್ ಕಾದಂಬರಿ ಸರಣಿಯಲ್ಲಿಯ ಮೊಟ್ಟಮೊದಲ ಕಾದಂಬರಿಯ ಮೇಲೆ ಆಧಾರಿತವಾದ ಚಿತ್ರ. ಕಳೆದ ನಾಲ್ಕು ಬಾಂಡ್ ಚಿತ್ರಗಳಲ್ಲಿ ಬಾಂಡ್ ಆಗಿದ್ದ ಪಿಯರ್ಸ್ ಬ್ರಾಸ್ನನ್ ಈ ಚಿತ್ರದಲ್ಲಿ ಇಲ್ಲ. ಇದರಲ್ಲಿ ಬಾಂಡ್ ಆಗಿರುವಾತ ಡೇನಿಯಲ್ ಕ್ರೆಗ್. ಹೊಂಬಣ್ಣದ ಕೂದಲಿನ ಚೆಲುವ. ಬಹುಶಃ ಹಿಂದಿನ ಎಲ್ಲಾ ಬಾಂಡ್‌ಗಳಿಗಿಂತ ಒಳ್ಳೆಯ ದೈಹಿಕ ಮೈಕಟ್ಟು ಹೊಂದಿರುವ ಬಾಂಡ್ ಈತ. ಈ ಚಿತ್ರದ ಮೊದಲ ಹತ್ತು ನಿಮಿಷಗಳ ಮಂಗಗಳಂತೆ ಎಗರೆಗರಿ ಓಡುವ ಛೇಸಿಂಗ್‌ನಲ್ಲಂತೂ ಕನ್‍ವಿನ್ಸಿಂಗ್ ಆಗಿ ಮಾಡಿದ್ದಾನೆ.

ಜೇಮ್ಸ್ ಬಾಂಡ್‌ನ ಸಾಹಸಗಳು ಬೆಳ್ಳಿತೆರೆಯ ಮೇಲೆ ಪ್ರಾರಂಭವಾದದ್ದು 1962 ರಲ್ಲಿ. ಅಲ್ಲಿಂದೀಚೆಗೆ 21 ಚಿತ್ರಗಳು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿಯೂ ಜೇಮ್ಸ್ ಬಾಂಡ್ ಬಹಳ ಜನಪ್ರಿಯ. ನಾನು ಇಲ್ಲಿ ಬೇ ಏರಿಯಾದಲ್ಲಿ ಮೊದಲ ದಿನವೆ ಕೆಸೀನೊ ರಾಯೇಲ್ ನೋಡಲು ಹೋಗಿದ್ದಾಗ, ಅದಕ್ಕೆ ಬಂದಿದ್ದಷ್ಟು ಭಾರತೀಯ ಪ್ರೇಕ್ಷಕರನ್ನು ನಾನು ‘ಪೈರೆಟ್ಸ್ ಆಫ್ ದಿ ಕೆರಿಬಿಯನ್’, ‘ಸ್ಪೈಡರ್ ಮ್ಯಾನ್’, ‘ಲಾರ್ಡ್ ಆಫ್ ದಿ ರಿಂಗ್ಸ್’, ‘ಕಿಂಗ್ ಕಾಂಗ್‌’ ನಂತಹ ಹಿಟ್ ಚಿತ್ರಗಳನ್ನು ನೋಡಲು ಹೋಗಿದ್ದಾಗಲೂ ನೋಡಿರಲಿಲ್ಲ. ಭಾರತದಲ್ಲಿ ಇಂಗ್ಲಿಷ್ ಸಿನೆಮಾ ಅಥವ ಸಾಹಸಭರಿತ ಸಿನೆಮಾ ನೋಡುವವರಲ್ಲಿ ಜೇಮ್ಸ್ ಬಾಂಡ್ ಎಷ್ಟು ಜನಪ್ರಿಯ ಎಂದು ಈ ಚಿಕ್ಕ ಸ್ಯಾಂಪಲ್ ತೋರಿಸುತ್ತದೆ.

ಇಲ್ಲಿ ಇನ್ನೂ ವಿಶೇಷವಾದದ್ದು ಜೇಮ್ಸ್ ಬಾಂಡ್ ಚಲನಚಿತ್ರಗಳು ಇಲ್ಲಿಯ ತನಕ ಸಂಪಾದಿಸಿರುವ, ಸಂಪಾದಿಸುತ್ತಿರುವ ದುಡ್ಡು ಎಷ್ಟು, ಕೊಟ್ಟಿರುವ, ಕೊಡುತ್ತಿರುವ ಕೆಲಸಗಳು ಎಷ್ಟು ಎಂದು. ಇಲ್ಲಿಯ ತನಕ ಜೇಮ್ಸ್ ಬಾಂಡ್ ಚಲನಚಿತ್ರ ಮಾಡಲು ತೊಡಗಿಸಿರುವ ಹಣ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿಗಳು. ಅದು ಗಳಿಸಿರುವುದು 18000 ಕೋಟಿ ರೂಪಾಯಿಗಳು. ಈ ಹಿನ್ನೆಲೆಯಲ್ಲಿ, ಜೇಮ್ಸ್ ಬಾಂಡ್ ಎನ್ನುವುದಕ್ಕಿಂತ ಮನಿ ಬಾಂಡ್ ಎನ್ನುವುದೇ ಸೂಕ್ತ.

ಒಂದು ಚಲನಚಿತ್ರ ಇಂತಹ ಮಟ್ಟದಲ್ಲಿ ಹಣದ ವ್ಯವಹಾರ ಮಾಡಲು ಸಾಧ್ಯವಾಗಿದೆ ಅಂದರೆ, ಅದು ಎಷ್ಟೊಂದು ಜನರಿಗೆ ಉದ್ಯೋಗ, ನೆಮ್ಮದಿ, ಖುಷಿ ಕೊಟ್ಟಿದೆ ಎಂದು ಕೇವಲ ಊಹಿಸಿಕೊಳ್ಳಬಹುದು. ಚಲನಚಿತ್ರ ಉದ್ಯಮ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಸ್ತರಗಳಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ಈ ರಂಗಕ್ಕೆ ಬಿಟ್ಟರೆ ಬೇರೆ ಇನ್ಯಾವ ರಂಗಕ್ಕೂ ಈ ಪರಿಯ ತಾಕತ್ತಾಗಲಿ, ಪ್ರಭಾವವಾಗಲಿ, ಆಕರ್ಷಣೆಯಾಗಲಿ ಇಲ್ಲ.

ಇದನ್ನು ನಾವು ನಮ್ಮ ಕನ್ನಡ ಚಿತ್ರರಂಗದ ಹಿನ್ನೆಲೆಯಲ್ಲಿಯೆ ತೆಗೆದುಕೊಳ್ಳಬಹುದು. ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಷಕ್ಕೆ ಕೇವಲ 70-80 ಕೋಟಿಯಷ್ಟು ಹಣವನ್ನು ಮಾತ್ರ ಕನ್ನಡ ಸಿನೆಮಾ ತಯಾರಿಕೆಯಲ್ಲಿ ತೊಡಗಿಸಿದರೂ, ಈ ಕ್ಷೇತ್ರದ ಉದ್ಯೋಗ ನಿರ್ಮಾಣದ ಪ್ರಭಾವ ಅದರಿಂದಲೂ ಬಹಳಷ್ಟು ಪಟ್ಟು ಆಚೆಗಿದೆ. ಒಂದು ಚಲನಚಿತ್ರ ನಿರ್ಮಾಣವಾಗುತ್ತಿರುವಷ್ಟು ಕಾಲವೂ ನೂರಾರು ಜನರಿಗೆ ಅದು ಉದ್ಯೋಗ ಕೊಟ್ಟಿರುತ್ತದೆ. ನಟಕಲಾವಿದರು, ತಂತ್ರಜ್ಞರು, ಲೈಟ್ ಬಾಯ್‌ಗಳು, ಡ್ರೈವರ್‌ಗಳು, ಊಟ ಸಪ್ಲೈ ಮಾಡುವವರು, ಸೆಟ್ ಹಾಕುವವರು, ಸಂಗೀತಗಾರರು, ಸೃಜನಶೀಲ ಬರಹಗಾರರು ಇತ್ಯಾದಿ. ನಿರ್ಮಾಣದ ನಂತರ ಪ್ರಚಾರದ ಹೆಸರಿನಲ್ಲಿ ನೂರಾರು ಜನ ಮುದ್ರಣ ರಂಗದಲ್ಲಿ, ರಾಜ್ಯದಾದ್ಯಂತ ಭಿತ್ತಿಚಿತ್ರ ಅಂಟಿಸುವುದು, ಅನೇಕ ಕಡೆ ಪ್ರಮೋಟ್ ಮಾಡುವುದು, ಪತ್ರಿಕಾ ಬರಹಗಾರರಿಗೆ ಸುದ್ದಿಸಾಮಗ್ರಿ, ಇತ್ಯಾದಿ ಎಡೆಗಳಲ್ಲಿ ಕೆಲಸ ಮಾಡಿರುತ್ತಾರೆ. ಒಳ್ಳೆಯ ಹಾಡುಗಳಿದ್ದರೆ ಆಡಿಯೊ ಕೆಸೆಟ್, ಸೀಡಿ ಕಂಪನಿಗಳ ಹತ್ತಾರು ಜನರಿಗೆ, ಮಾರುವ ಸಾವಿರಾರು ಅಂಗಡಿಯವರಿಗೆ ಬ್ಯುಸಿನೆಸ್ ಹುಟ್ಟಿರುತ್ತದೆ. ಸಿನೆಮ ಬಿಡುಗಡೆಯಾದ ನಂತರ ರಾಜ್ಯದಾದ್ಯಂತ ನೂರಾರು ಥಿಯೇಟರ್ ಕೆಲಸಗಾರರಿಗೆ ಒಂದು ತೋಪು ಚಿತ್ರ ಕನಿಷ್ಠ ಒಂದು ವಾರ ನೌಕರಿ ಕೊಟ್ಟರೆ, ಒಂದು ಹಿಟ್ ಚಿತ್ರ ತಿಂಗಳುಗಟ್ಟಲೆ ಕೆಲಸ ಕೊಟ್ಟಿರುತ್ತದೆ. ನಂತರ ಟಿವಿ ಪ್ರದರ್ಶನದಿಂದ ಮತ್ತಷ್ಟು ಜನರಿಗೆ ಉದ್ಯೋಗ, ವ್ಯವಹಾರ ಸಿಗುತ್ತದೆ. ವಿಸೀಡಿ, ಡೀವಿಡಿಗಳ ಮಾರಾಟದಿಂದ ಮತ್ತಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಹೊಸ ಥಿಯೇಟರ್‌ಗಳಿಂದ ಕಟ್ಟಡ ನಿರ್ಮಾಣದಲ್ಲಿರುವ ದಿನಗೂಲಿಗಳಿಗೆ ಒಂದಷ್ಟು ದಿನ ನೆಮ್ಮದಿಯ ಖಾತರಿ. (ಬೆಂಗಳೂರಿನಲ್ಲಿ ಥಿಯೇಟರ್‌ಗಳೆಲ್ಲ ಕಾಂಪ್ಲೆಕ್ಸ್‌ಗಳಾದವು ಎನ್ನುವ ಭಯ ಕಳೆದ ನಾಲ್ಕೈದು ವರ್ಷಗಳಲ್ಲಿ ಒಂದೇ ಕಾಂಪ್ಲೆಕ್ಸ್‌ನಲ್ಲಿ ಐದಾರು, ಹತ್ತಾರು ಥಿಯೇಟರ್‌ಗಳಿರುವ ಮಲ್ಟಿಪ್ಲೆಕ್ಸ್‌ಗಳಿಂದಾಗಿ ದೂರವಾಗಿರುವುದು ನಿಜವಲ್ಲವೆ?)

ಇಲ್ಲಿ ಈ ವಿಷಯನ್ನು ಪ್ರಸ್ತಾಪಿಸಲು ಕಾರಣ, ಈ ಮಧ್ಯೆ ಕನ್ನಡ ಚಿತ್ರರಂಗ ವಿಪರೀತ ಗೊಂದಲದಲ್ಲಿದೆ. ನಮ್ಮ ಪತ್ರಿಕೆಯಲ್ಲಿಯೆ ಎರಡು ವಾರಗಳ ಹಿಂದೆ ಇದೇ ವಿಷಯವಾಗಿ ಮುಖಪುಟ ಲೇಖನ ಬಂದಿತ್ತು. ಕೆಲವು ನಿರ್ಮಾಪಕರು ಸಿನೆಮಾ ನಿರ್ಮಿಸುವುದಿಲ್ಲ, ಡಬ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾರ್ಮಿಕರ ಒಕ್ಕೂಟ ಬಂದ್ ಆಚರಿಸುವುದಾಗಿ ಹೇಳುತ್ತಿದ್ದಾರೆ. ಉದ್ಯಮದ ವೃತ್ತಿಪರತೆ ಅರಿಯದವರು ನಟರಿಗೆ ಆಸಿಡ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಸಮಯದಲ್ಲಿ, ‘ಉದ್ಯಮದ ಸಮಸ್ಯೆಯನ್ನು ಪರಿಹರಿಸುವುದಾಗಿ ಅಂಬರೀಶ್ ಹೇಳಿದ್ದಾರೆ, ಅವರೆ ಮಾಡಲಿ’ ಎಂದು ಸರ್ಕಾರ ರಾಜಕೀಯ ಮಾಡುತ್ತಿದೆ. ‘ಸರ್ಕಾರಕ್ಕಿಂತ ವ್ಯಕ್ತಿಗಳು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ,’ ಎಂದು ಹೇಳಿದ ನೊಬೆಲ್ ವಿಜೇತ ಅರ್ಥತಜ್ಞ ಮಿಲ್ಟನ್ ಫ್ರೀಡ್‌ಮನ್ ಹೇಳಿಕೆಯನ್ನು ನಮ್ಮ ಸರ್ಕಾರ ಈ ರೀತಿ ಧೃಢಪಡಿಸುತ್ತಿದೆ!

ಈ ವಾರ ತನ್ನ 94 ನೆ ವಯಸ್ಸಿನಲ್ಲಿ ತೀರಿಕೊಂಡ ಐದಡಿ ಎತ್ತರದ ಫ್ರೀಡ್‌ಮನ್ ಹೇಳಿರುವ ಇನ್ನೊಂದು ಮಾತು: ‘ಸರ್ಕಾರಗಳು ಉದ್ಯೋಗಗಳನ್ನು ಸ್ಟೃಸುವುದಿಲ್ಲ. ಅವೇನಿದ್ದರೂ ಉದ್ಯೋಗಗಳನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸುತ್ತವೆ.’ ಕನ್ನಡ ಸಿನೆಮಾ ನಿರ್ಮಾಣದಿಂದ ಸೃಷ್ಟಿಯಾಗಿರುವ ಉದ್ಯೋಗ ತನ್ನ ನಿಷ್ಕ್ರಿಯತೆಯಿಂದಾಗಿ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಚಿತ್ರ ರಂಗಕ್ಕೆ ವರ್ಗಾಂತರವಾಗದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ಅದು ಸಾಧ್ಯವಿದೆ ಕೂಡ. ಜಾಗತೀಕರಣದಲ್ಲಿ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಲಾರವು. ಆದರೆ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಸಮರ್ಥವಾಗಿ ಸೃಷ್ಟಿಸಬಹುದು. ಈಗಿರುವ ಅವಕಾಶಗಳನ್ನು, ಬರಲಿರುವ ಅವಕಾಶಗಳನ್ನು ಹಾಳು ಮಾಡಬಾರದು.

ಇನ್ನು, ಕೆಸೀನೊ ರಾಯೇಲ್ ಬಗ್ಗೆ ಹೇಳಬೇಕೆಂದರೆ, ಇದೇನೂ ಅಂತಹ ಗ್ರೇಟ್ ಬಾಂಡ್ ಚಿತ್ರವಲ್ಲ. ಹೊಸ ಬಾಂಡ್ ಚಿತ್ರವನ್ನು ಬಯಸುವ ತಕ್ಷಣದ ಹಸಿವನ್ನು ಸ್ವಲ್ಪ ಮಟ್ಟಿಗೆ ತಣಿಸುತ್ತದೆ. ಮೈನವಿರೇಳಿಸುವ ಆಕ್ಷನ್ ಮೊದಲಾರ್ಧದಲ್ಲಿಯೇ ಬಂದು ಕೊನೆಕೊನೆಗೆ ಬೋರು ಹೊಡೆಸುತ್ತಾ ಹೋಗುತ್ತದೆ. ಹಿಂದಿನ ಕೆಲವು ಚಿತ್ರಗಳಲ್ಲಿ ಬಾಂಡ್ ಕೊನೆಯ ಕ್ಷಣದಲ್ಲಿ ಪ್ರಪಂಚವನ್ನು ಉಳಿಸುತ್ತಿದ್ದ. ಈ ಬಾಂಡ್ ಅದನ್ನು ಮಾಡುವುದಿಲ್ಲ. ಭಯೋತ್ಪಾದಕರ ಹಣದ ವ್ಯವಹಾರವನ್ನು ಹೊರಗೆಳೆಯುವ ಎಳೆ ಇದ್ದರೂ ಅದನ್ನೂ ಅಮುಖ್ಯ ಎನ್ನುವಂತೆ ಮಾಡಿಬಿಟ್ಟಿದ್ದಾರೆ. ಶ್ಯಾನ್ ಕಾನರಿಯ ಬಾಂಡ್ ಸಿನೆಮಾಗಳು ಮತ್ತು ಬ್ರಾಸ್ನನ್‌ನ ಗೋಲ್ಡನ್ ಐ, ಡೈ ಅನದರ್ ಡೇ ಗುಂಗಿನಲ್ಲಿರುವವರಿಗೆ ಮೊದಲರ್ಧ ಮಾತ್ರ ಇಷ್ಟವಾಗಬಹುದು. ಆದರೂ, ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಅಮೇರಿಕ ಒಂದರಲ್ಲೆ 180 ಕೋಟಿ, ಮಿಕ್ಕ 27 ದೇಶಗಳಲ್ಲಿ 190 ಕೋಟಿ ರೂಪಾಯಿಯಷ್ಟು ಟಿಕೆಟ್ ಮಾರಾಟವಾಗಿವೆ! The name is Bond, ‘Money’ Minting Bond!

Add a Comment

required, use real name
required, will not be published
optional, your blog address