ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-2

This post was written by admin on April 13, 2009
Posted Under: Uncategorized

ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. “ವಿಕ್ರಾಂತ ಕರ್ನಾಟಕ”ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು.

“ವಿ.ಕ. ಭಟ್ಟರ ವಿಚಿತ್ರ ವ್ಯಾಕುಲ..”

ಸ್ನೇಹಿತರೊಂದಿಗೆ ಕಾಫಿಶಾಪ್‌ನಲ್ಲಿ ಕುಳಿತಿರುವಾಗಲೆ ಅಂದು ಸಂಜೆ ಮೊಬೈಲ್ ಫೋನ್ ರಿಂಗಣಿಸಿತು. ಅಷ್ಟಾಗಿ ಪರಿಚಿತವಲ್ಲದ, ಅಪರೂಪಕ್ಕೊಮ್ಮೆ ಬಳಸಿರಬಹುದಾದ ನಂಬರ್ ಅದಾದ್ದರಿಂದ ಕುತೂಹಲದಿಂದಲೇ ಕೇಳಿಸಿಕೊಂಡದ್ದಾಯಿತು.

“ನಾನು ವಿಶ್ವೇಶ್ವರ ಭಟ್ ಮಾತಾಡ್ತಿರೋದು.”

“ಹೇಳಿ ಭಟ್ಟರೇ, ಚೆನ್ನಾಗಿದ್ದೀರಾ? ಏನಾದ್ರೂ ತುರ್ತಾಗಿ ಮಾತಾಡೋದಿತ್ತಾ?”

“ಹೌದೌದು, ಇವತ್ತು ನನ್ನ ಕೈಗೆ ನಿಮ್ಮ ವಿಕ್ರಾಂತ ಕರ್ನಾಟಕವನ್ನು ಯಾರೋ ತಂದುಕೊಟ್ರು. ಅದ್ರಲ್ಲಿರೋ ಒಂದು ಬಾಕ್ಸ್ ಐಟೆಮ್‌ನಲ್ಲಿ ನಾನು ಅನಂತಕುಮಾರರು ಕೇಂದ್ರ ಸಚಿವರಾಗಿದ್ದಾಗ ಅವರ ಪಿ.ಎ. ಆಗಿದ್ದೆ ಅಂತ ತಪ್ಪಾಗಿ ಬರೆದಿದ್ದು ನೋಡಿ ಬೇಜಾರೆನಿಸಿ ಫೋನ್ ಮಾಡ್ದೆ…”

“ಅಯ್ಯೋ ನಮ್ಮಂತಹ ಪುಟ್ಟ ಪತ್ರಿಕೆಯಲ್ಲಿ ಆಕಸ್ಮಿಕವಾಗಿ ನುಸುಳಿರಬಹುದಾದ ಒಂದು ಸಣ್ಣ ಲೋಪ ಕುರಿತು ಇಷ್ಟ್ಯಾಕೆ ತಲೆ ಕೆಡಿಸಿಕೊಳ್ತೀರಾ ಭಟ್ರೆ? ನೀವು ಕನ್ನಡದ ಅತ್ಯಧಿಕ ಪ್ರಸಾರದ ದಿನಪತ್ರಿಕೆಯ ಬಾಸ್ ಅಲ್ಲವ…”

“ಇಲ್ಲಿ ಸಣ್ಣ ಪತ್ರಿಕೆ, ದೊಡ್ಡ ಪತ್ರಿಕೆ ಅಂತಲ್ಲ ರೇಷ್ಮೆಯವರೇ, ನಿಮ್ಮಲ್ಲಿ ಆಗಾಗ್ಗೆ ನನ್ನ ವಿಚಾರದಲ್ಲಿ ಇದೇ ತರ ತಪ್ಪು ತಪ್ಪಾಗಿ ನನ್ನನ್ನು ಪರಿಚಯಿಸ್ತಾನೇ ಇರ್‍ತೀರಿ. ಅನಂತಕುಮಾರರು ಕೇಂದ್ರದಲ್ಲಿ ಪ್ರವಾಸೋದ್ಯಮ ಮಂತ್ರಿ ಆಗಿದ್ದಾಗ ನಾನವರ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದೆನೆ ಹೊರತು ಪಿ.ಎ. ಅಲ್ಲ, ಅದೂ ನನಗೆ ಡೆಪ್ಯುಟಿ ಕಮಿಶ್‌ನರ್ ದರ್ಜೆಯ ಸ್ಥಾನಮಾನ ನೀಡಿದ್ರು ನಿಮಗೆ ಗೊತ್ತಾ?”

“ಹೌದೌದು ನನಗಿದು ಗೊತ್ತಿತ್ತು. ಹಿಂದೆ 2001 ರ ‘ಲಂಕೇಶ್ ಪತ್ರಿಕೆ’ಯಲ್ಲಿ ಬೆಂಗಳೂರಿನ ಅಶೋಕಾ ಹೋಟೆಲ್ಲನ್ನು ಖಾಸಗಿಯವರಿಗೆ ಪರಭಾರೆ ಮಾಡಲಾದ ಹಗರಣ ಕುರಿತು ನಾನು ವರದಿ ಮಾಡಿದಾಗ ನಿಮ್ಮನ್ನು ಓಎಸ್‌ಡಿ ಅಂತಲೆ ಸೂಚಿಸಿದ್ದೆ ಅಂತ ನನಗೆ ಚೆನ್ನಾಗಿ ನೆನಪಿದೆ…”

“ಇರಬಹುದು. ಆಗಲೂ ಅಷ್ಟೆ, ನಾನು ಅನಂತಕುಮಾರರ ವ್ಯಾಪ್ತಿಗೆ ಬರ್‍ತಾ ಇದ್ದ ಆರು ಸಾಂಸ್ಕೃತಿಕ ಪ್ರತಿಷ್ಠಾನಗಳ ಉಸ್ತುವಾರಿಯನ್ನು ಮಾತ್ರ ನೋಡ್ಕೋತಾ ಇದ್ದೆ. ಮುಂದೆ ಅವರೇ ಖಾತೆ ಬದಲಾವಣೆಯಿಂದಾಗಿ ಅರ್ಬನ್ ಡೆವಲಪ್‌ಮೆಂಟ್ ಸಚಿವರಾದಾಗ ಒಂದೇ ವಾರದಲ್ಲಿ ನಾನಲ್ಲಿಂದ ಹೊರಗೆ ಬಂದುಬಿಟ್ಟೆ. ಯಾಕಂದ್ರೆ ನನಗೆ ಈ ರಿಯಲ್ ಎಸ್ಟೇಟು, ಲ್ಯಾಂಡ್ ಡೀಲುಗಳ ಬಗ್ಗೆ ಆಸಕ್ತೀನೆ ಇರ್‍ಲಿಲ್ಲ.”

“ಅದಾಯಿತಲ್ಲ ಭಟ್ರೆ, ಇನ್ನೇನಾದ್ರೂ ಸ್ಪಷ್ಟೀಕರಣ ಇದೆಯಾ?”

“ನೀವೇನೂ ಸ್ಪಷ್ಟೀಕರಣ ಹಾಕಬೇಕಿಲ್ಲ, ಆದರೆ ನನ್ನ ಬಗ್ಗೆ ಅಪಾರ್ಥವಾಗದ ಹಾಗೆ ನೋಡಿಕೊಳ್ಳಿ. ನಾನು ಬೆಂಗಳೂರಿನ ಜರ್ನಲಿಸ್ಟ್‌ಗಳ ಪೈಕಿ ಅತಿ ಹೆಚ್ಚಿನ ಯುನಿವರ್ಸಿಟಿ ಡಿಗ್ರಿಗಳನ್ನು ಹೊಂದಿರೋನು ಅನ್ನೋದು ತಮಗೆ ಗೊತ್ತಿರಲಿ… ನಾನು 1986 ರ ಕರ್ನಾಟಕ ಯುನಿವರ್ಸಿಟಿ ಎಂಎಸ್‌ಸಿ ಜಿಯಾಲಜಿನಲ್ಲಿ ಫಸ್ಟ್ ರ್‍ಯಾಂಕ್ ಕೂಡ ತಗೊಂಡಿದ್ದೆ…”

“ಆ ಡಿಗ್ರಿ, ರ್‍ಯಾಂಕುಗಳಿಂದ ನಮ್ಮ ಪತ್ರಿಕೋದ್ಯಮಕ್ಕೆ ಏನು ವ್ಯತ್ಯಾಸ ಆದೀತು ಹೇಳಿ ಭಟ್ರೆ? ನಾನು ಕೂಡ ಅದೇ ಯೂನಿವರ್ಸಿಟಿಯಿಂದಲೆ 1974 ರ ಎಂಎಸ್‌ಸಿ ಬಾಟನಿಯಲ್ಲಿ ಫಸ್ಟ್ ರ್‍ಯಾಂಕ್ ಪಡೆದಿದ್ದೆ… ಸೋ ವಾಟ್?”

“ಹಾಗೇನೆ ನಾನು ವಿ.ಕ.ದ ಸಂಪಾದಕನಾದಾಗಿಂದಲೂ ಅನಂತಕುಮಾರರ ಫೋಟೋ ಬಳಸಿಕೊಂಡು ಮುಖಪುಟದ ವರದಿ ಹಾಕಿದ್ದು ಬರೀ 10-12 ಸಾರಿ ಇದ್ದೀತು ಅಷ್ಟೇ. ಅದರಲ್ಲೂ ಮೊದಲ ಐದು ವರ್ಷ ಅನಂತಕುಮಾರರ ಬಗ್ಗೆ ಫ್ರಂಟ್‌ಪೇಜ್‌ನಲ್ಲಿ ಏನೂ ಬರೀಕೂಡ್ದೂಂತ ನಮ್ಮ ಅಂದಿನ ಪ್ರಕಾಶಕ ವಿಜಯ್ ಸಂಕೇಶ್ವರ್‌ರೇ ನಿರ್ಬಂಧ ವಿಧಿಸಿದ್ರು ಕೂಡ…”

ಒಂದು ಬಾಕ್ಸ್ ಐಟಂನಿಂದಾಗಿ ತಮಗೆ ಅಪಮಾನವಾಯಿತೆಂದು ಹಲುಬುವ ಭಟ್ಟರು, ‘ಅನಂತ ನಿಷ್ಠ’ ಎಂಬ ಆ ಐಟಂನ ಲೇಖಕ- ‘ವಿಕ್ರಾಂತ’ದ ಸಂಸ್ಥಾಪಕ- ಕ್ಯಾಲಿಫೋರ್ನಿಯಾ ನಿವಾಸಿ- ಯುವ ಕನಸುಗಾರ ರವಿ ಕೃಷ್ಣಾ ರೆಡ್ಡಿಯವರ ಚುನಾವಣಾ ರಾಜಕೀಯದ ಶುದ್ಧೀಕರಣದ ಪ್ರಯೋಗವನ್ನು ಮೊನ್ನೆ ಭಾನುವಾರದ ಸಂಪಾದಕೀಯದಲ್ಲಿ ಗೇಲಿಮಾಡಿ ಸಮಾಧಾನ ಮಾಡಿಕೊಂಡಿದ್ದಾರೆ.

ಮೌಲ್ಯಾಧಾರಿತ ಬದಲಾವಣೆಗಾಗಿ ಹಂಬಲಿಸುವ ಪ್ರಾಮಾಣಿಕ ಹೋರಾಟಗಾರರನ್ನು ಹಂಗಿಸುವ ಈ ಹೈ-ಫೈ ಸಂಪಾದಕರು ರೆಡ್ಡಿಯವರಂತೆಯೆ ಅಮೆರಿಕಾದಿಂದ ಸ್ವದೇಶಕ್ಕೆ ಮರಳಿ ಅಧಿಕಾರರೂಢ ಭಾಜಪದ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಕಣಕ್ಕಿಳಿದಿರುವ ಜನಾರ್ಧನ ಸ್ವಾಮಿಯನ್ನು ಮಾತ್ರ ತಾಯ್ನಾಡಿನ ಋಣ ತೀರಿಸಬಂದ ದೇಶಭಕ್ತನ ಪಟ್ಟಕ್ಕೇರಿಸಿದ್ದಾರೆ!

ರವೀಂದ್ರ ರೇಷ್ಮೆ

ಇಲ್ಲಿಯ ಇನ್ನೊಂದು ಸತ್ಯ ಏನೆಂದರೆ, ನಾನು ಬರೆದಿದ್ದ “ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್…” ಲೇಖನದಲ್ಲಿ ಎಲ್ಲಿಯೂ ಯಾರನ್ನೂ ಪಿ.ಎ. ಎಂದು ಬರೆದಿರಲಿಲ್ಲ.

ಇದೇ ವಿಷಯದ ಬಗ್ಗೆ ಮತ್ತೊಬ್ಬರು ಬರೆದಿರುವ ಮೂರನೆ ಭಾಗ ಸೋಮವಾರ ಹಾಕುತ್ತೇನೆ.

ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-1

Reader Comments

Add a Comment

required, use real name
required, will not be published
optional, your blog address