ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ – 3

This post was written by admin on April 13, 2009
Posted Under: Uncategorized

ಇದೇ ವಿಷಯದ ಮೇಲಿನ ಭಾಗ – 1 ಮತ್ತು ಭಾಗ – 2 ನ್ನು ನೋಡಿರುವ ಕೆಲವು ಭಕ್ತರು ಅಪಾರ ಕಿರಿಕಿರಿಗೆ ಒಳಗಾಗಿದ್ದಾರೆ. ಕೇವಲ ದ್ವೇಷ, ರೋಷ ಮತ್ತು ಅಸಹನೆಯಿಂದ ಕುದಿಯುವ ಕೆಲವರಿಗೆ ತಾವು ಎಷ್ಟು ಮಾತ್ರದ ಅಜ್ಞಾನಿಗಳು ಎನ್ನುವ ತಿಳಿವಳಿಕೆಯೂ ಇದ್ದಂತಿಲ್ಲ. ಒಂದು ಸಂಚಿಕೆಯ ದಿನಾಂಕ ಕೊಟ್ಟರೂ ಅದು ಹೊರಬರುವ ದಿನ ಯಾವುದಿರಬಹುದು ಎನ್ನುವ ಜ್ಞಾನವೂ ಇಲ್ಲ. ತಿಳಿದುಕೊಳ್ಳಬೇಕು ಎನ್ನುವ ಯಾವೊಂದು ಕುತೂಹಲವಾಗಲಿ, ಸತ್ಯದ ಬಗ್ಗೆ ಗೌರವವಾಗಲಿ ಇಲ್ಲದ ಅಹಂಕಾರಿಗಳಿಗೆ ಏನು ಹೇಳಿದರೂ ವಿವೇಚನೆ ಬರುವುದಿಲ್ಲ. ತಮ್ಮ ಸ್ವಯಂಕೃತಾಪರಾಧದಿಂದ, ಸ್ವ-ಇಚ್ಚೆಯಿಂದ, ಅಜ್ಞಾನದಲ್ಲಿಯೆ ಕಳೆಯುವಂತಹವರ ಬಗ್ಗೆ ಯಾಕೊ ನನ್ನಲ್ಲಿ ಕನಿಕರ ಹುಟ್ಟುತ್ತಿಲ್ಲ.

ಈ ಹೊಗಳಿಕೆಯ ಬಗ್ಗೆ ಒಂದೆರಡು ಬ್ಲಾಗ್‍ಗಳಲ್ಲಿ (ಅಂತರಂಗ ಮತ್ತು Land of Lime) ಪ್ರಸ್ತಾಪವಾಗಿದೆ. ನನಗೂ ಒಂದಿಬ್ಬರು ಹೇಳಿದ್ದೇನೆಂದರೆ, “ನಿಮ್ಮ ಆಭಿಪ್ರಾಯ, ಪ್ರಬುದ್ಧತೆ, ವಿಚಾರ, ಮುಂತಾದವುಗಳ ಬಗ್ಗೆ ಚರ್ಚೆಯಾಗಲಿ. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಯಾಕೆ ಮಾಡುವುದು; ಹಾಗೆ ಆಗಲು ನೀವು ಬಿಡಬಾರದು.” ನಮ್ಮ ಸಮಾಜದಲ್ಲಿ, ವಿಶೇಷವಾಗಿ ಇವತ್ತಿನ ಮಾಧ್ಯಮಗಳಲ್ಲಿ ಅಷ್ಟು ಪ್ರಬುದ್ಧತೆ ಇಲ್ಲ ಎನ್ನುವುದು ಗೊತ್ತಿರುವುದೆ. ಕೆಲವೊಮ್ಮೆ ನಾನೆ ಕೆಲವೊಂದು ವಿಷಯದ ಬಗ್ಗೆ ಚರ್ಚೆ ಎತ್ತಿದಾಗ, ಆ ಚರ್ಚೆಯ ವಿಷಯದ ಬಗ್ಗೆ, ನಾನು ಎತ್ತಿರುವ ಅಂಶಗಳ ಬಗ್ಗೆ ಮಾತನಾಡದೆ, ’ಆತನಿಗೆ ಸರಿಯಾಗಿ ಹೇಳಿದ್ದೀಯ’ ಎನ್ನುವ ಸ್ನೇಹಿತರು ನಮ್ಮ ಕಡೆಯೂ ಇದ್ದಾರೆ. ಈ ವಿಷವರ್ತುಲದಿಂದ ನಾವೂ ಸಹ ಹೊರಗೆ ಬರಬೇಕು. ಇಲ್ಲಿ ನಾವು ಧ್ವನಿ ಎತ್ತಬೇಕಿರುವುದು ವ್ಯಕ್ತಿಯ ವಿರುದ್ಧ ಅಲ್ಲ. ಬದಲಿಗೆ ಅಂತಹ ಮನಸ್ಥಿತಿಯ ವಿರುದ್ಧ. (ಆದರೂ, ಮನಸ್ಥಿತಿಯ ಬಗ್ಗೆ ಮಾತನಾಡುವಾಗ ಕೆಲವೊಮ್ಮೆ ವ್ಯಕ್ತಿಯ ಬಗ್ಗೆಯೂ ಮಾತನಾಡುವ ಅಗತ್ಯವನ್ನು ನಾವು ನಿರಾಕರಿಸುವುದು ಕಷ್ಟ.)

ಈ ಕೆಳಗಿನ ಲೇಖನ ಏಪ್ರಿಲ್ 4 ರಂದು ಮಾರುಕಟ್ಟೆಗೆ ಬಂದ “ಗೌರಿ ಲಂಕೇಶ್” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬರೆದಿರುವವರು ಉಡುಪಿಯ ಜಿ. ರಾಜಶೇಖರ್. “ಚುನಾವಣೆಯ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು?” ಎನ್ನುವ ಬಹುಮುಖ್ಯ ಪ್ರಶ್ನೆಯನ್ನು ಲೇಖಕ ರಾಜಶೇಖರರು ಎತ್ತಿರುವುದರಿಂದ ಅದನ್ನು ಇಲ್ಲಿ ಕೊಡುವುದು ಮುಖ್ಯ ಎಂದು ನನಗನ್ನಿಸಿತು. ಆ ಪತ್ರಿಕೆಯವರ ಅನುಮತಿಯೊಂದಿಗೆ ಆ ಲೇಖನವನ್ನು ಇಲ್ಲಿ ಕೊಡುತ್ತಿದ್ದೇನೆ. ಗೂಗಲ್ ಸರ್ಚ್ ಮಾಡಿದಾಗಲೂ ಸಿಗಲಿ ಎನ್ನುವ ಉದ್ದೇಶದಿಂದ ಒಂದಷ್ಟು ಲೇಖನವನ್ನು ಯೂನಿಕೋಡ್‌ಗೆ ಬದಲಾಯಿಸಿ ಕೊಡುತ್ತಿದ್ದೇನೆ. ಪೂರ್ಣ ಲೇಖನದ .pdf ಇಲ್ಲಿದೆ.

ವಿ.ಕ. ಸಂಪಾದಕರ ‘ಇಮೋಷನಲ್ ಅತ್ಯಾಚಾರಗಳು’

ಲೇಖಕ: ಜಿ. ರಾಜಶೇಖರ

ಅತಿಹೆಚ್ಚು ಸುಳ್ಳು ಹೇಳುವ ಕನ್ನಡ ದಿನಪತ್ರಿಕೆ ಯಾವುದು? ಸ್ಪರ್ಧೆಯ ಮುಂಚೂಣಿಯಲ್ಲಿ ಉದಯವಾಣಿ (ಮಣಿಪಾಲ ಆವೃತ್ತಿ) ಮತ್ತು ವಿ.ಕ. ಇರುವುದರಿಂದ ನಿಖರವಾಗಿ ಹೇಳುವುದು ಕಷ್ಟ. ಎರಡು ಪತ್ರಿಕೆಗಳ ಸಂಪಾದಕರಲ್ಲಿ ಯಾರು ಹೆಚ್ಚು ಸೋಗಲಾಡಿ? ತನ್ನ ಶಂಖ ತಾನೇ ಹೆಚ್ಚು ಊದಿಕೊಳ್ಳುವ ದಾಸಯ್ಯ ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೇನಲ್ಲ. ಸ್ಪರ್ಧೆಯ ಕಣದಲ್ಲಿ ವಿ.ಕ. ಸಂಪಾದಕ ಒಬ್ಬರೇ ಇದ್ದಾರೆ. ಇನ್ನೊಂದು ಪತ್ರಿಕೆಗೆ ಸಂಪಾದಕ ಇರುವುದು ಹೆಸರಿಗೆ ಮಾತ್ರ. ವಿ.ಕ. ಸಂಪಾದಕರಿಗೆ ಅವರ ಪತ್ರಿಕೆಯ ಹೆಸರಿನಲ್ಲೇ ‘ವಿಜಯ’ ಎಂದು ಇರುವುದಕ್ಕೋ ಏನೋ, ಸೋತವರನ್ನು ಕಂಡರೆ ಎಲ್ಲಿಲ್ಲದ ತಿರಸ್ಕಾರ.

ತಮ್ಮ ದೇವರನ್ನು ಪೂಜಿಸದ, ತಮ್ಮ ಹಾಗೆ ಯೋಚಿಸದ “ಅನ್ಯಮತೀಯ”ರ ಕುರಿತ ದ್ವೇಷ ಪ್ರತಿಪಾದನೆಗೆ ಇವರ ಪತ್ರಿಕೆಯೇ ದಿನನಿತ್ಯದ ಕರಪತ್ರ. ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯನ್ನು ಫ್ಯಾಸಿಸಂನ ಪ್ರಚಾರಕ್ಕೆ ತೆರವು ಮಾಡಿಕೊಡುವುದರ ಜೊತೆ, ಈ ಸಂಪಾದಕರು ಮೊದಲೇ ಸೋತು ನೆಲಕಚ್ಚಿದವರನ್ನು ಮೆಟ್ಟಿ ತುಳಿದು ಗಹಗಹಿಸಿ ನಗುವ ಫ್ಯಾಸಿಸಂನ ಅಮಾನುಷತೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ನಡೆದ ಚರ್ಚ್ ದಾಳಿಗಳ ನಂತರ, ಈ ಸಂಪಾದಕ, ಸತತವಾಗಿ ಒಂದು ತಿಂಗಳ ಕಾಲ, ತನ್ನ ಪತ್ರಿಕೆಯಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ನಡೆಸಿದ ದೈವನಿಂದನೆ, ಜನಾಂಗ ನಿಂದನೆ ಮತ್ತು ಅಪಪ್ರಚಾರಗಳ ಅಭಿಯಾನವನ್ನು ನೆನಪಿಸಿಕೊಳ್ಳಿ. ಅನಂತಮೂರ್ತಿ ವಿರುದ್ಧ ವಿಜಯ ಕರ್ನಾಟಕದಲ್ಲಿ ನಡೆದ ಎಸ್‌ಎಂಎಸ್ ವಾಗ್ದಾಳಿಯನ್ನು ನೆನಪಿಸಿಕೊಳ್ಳಿ.

ಪತ್ರಿಕೆಯೊಂದು ತಾನೇ ನಡೆಸುವ ಇಂತಹ ವಾಗ್ವಾದಗಳಲ್ಲಿ ಎದುರಾಳಿ ಅಸಹಾಯಕ ಎಂದು ಗೊತ್ತಿದ್ದೇ ವಿ.ಕ. ಸಂಪಾದಕರು ಅಂತಹವರನ್ನು
ನೆಲಕ್ಕೆ ಕೆಡವಿ ಅಟ್ಟಹಾಸದಲ್ಲಿ ನಗುತ್ತಾರೆ. ಈಗ ಈ ಅಲ್ಪನಿಂದ ಇಕ್ಕಿಸಿಕೊಳ್ಳುವ ಸರದಿ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿಕೃಷ್ಣಾ ರೆಡ್ಡಿಯವರದ್ದು. ಇದೇ ತಾ. 29.3.09 ರ ಭಾನುವಾರದ ವಿ.ಕ. ಸಂಚಿಕೆಯಲ್ಲಿ ಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಜಗದೀಶ್ ರಾವ್ ಕಲ್ಮನೆ ಎಂಬ ಅನಿವಾಸಿ ಕನ್ನಡಿಗನ ಹುಂಬತನದ ಬಗ್ಗೆ ಬರೆದಿದ್ದಾರೆ. ಜೊತೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಜಯನಗರ ಕ್ಷೇತ್ರದಲಿ ಸ್ಪರ್ಧಿಸಿದ್ದ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿ ಕೃಷ್ಣಾ ರೆಡ್ಡಿಯವರನ್ನೂ ತನ್ನ ಮಾತಿನಲ್ಲಿ ಎಳೆದು ತಂದಿದ್ದಾರೆ. ವಿ.ಕ. ಸಂಪಾದಕರ ಬಾಯಿಯ ತಾಂಬೂಲವಾಗಲು ರವಿ ಕೃಷ್ಣಾ ರೆಡ್ಡಿ ಮಾಡಿದ್ದಾದರೂ ಏನು?

  1. ವಿ.ಕ. ಸಂಪಾದಕರ ಅನುಮತಿ ಇಲ್ಲದೆ ರವಿ ಕೃಷ್ಣಾ ರೆಡ್ಡಿ ಅಮೆರಿಕದಿಂದ ಬೆಂಗಳೂರು ಜಯನಗರದವರೆಗೆ ಬಂದು ಅಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದು.
  2. ಚುನಾವಣೆಯ ವೆಚ್ಚಕ್ಕೆಂದು ರವಿಕೃಷ್ಣಾ ರೆಡ್ಡಿ ತನ್ನ ಸ್ನೇಹಿತರಿಂದ ಸಂಗ್ರಹಿಸಿದ 4.20 ಲಕ್ಷ ರೂಪಾಯಿಯ ಲೆಕ್ಕವನ್ನು ವಿ.ಕ. ಸಂಪಾದಕರಿಗೆ ಕೊಡದೆ ಇದ್ದದು.
  3. ಆ ಚುನಾವಣೆಯಲ್ಲಿ ರವಿ ಕೃಷ್ಣಾ ರೆಡ್ಡಿ ‘ಎರಡೂ ನೂರು ಚಿಲ್ಲರೆ’ ಮತಗಳನ್ನು ಪಡೆದುಕೊಂಡದ್ದು.

ಈ ‘ಅಪರಾಧ’ಗಳ ಪೈಕಿ, ಮೊದಲ ಎರಡಕ್ಕೆ ರವಿ ಕೃಷ್ಣಾ ರೆಡ್ಡಿ ಚುನಾವಣೆ ಆಯೋಗಕ್ಕೆ ಮಾತ್ರ ಉತ್ತರದಾಯಿ. ಉಳಿದವರಿಗೆ ಅವರು ವಿವರಣೆ ನೀಡಬೇಕಾದ ಆಗತ್ಯವಿಲ್ಲ. ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಜಯನಗರ ಕ್ಷೇತ್ರದಲ್ಲಿ 200 ಚಿಲ್ಲರೆ ಮತ ಪಡೆದುಕೊಂಡು ತನ್ನ ಡಿಪಾಜಿಟ್ಟಿನ ಜೊತೆಗೆ ಮಾನವನ್ನೂ ಕಳೆದುಕೊಂಡಿದ್ದಾರೆ. ಆದರೆ ಚುನಾವಣೆಯ ಈ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು? ರವಿ ಕೃಷ್ಣಾ ರೆಡ್ಡಿಯೋ, ಜಯನಗರದ ಸುಶಿಕ್ಷಿತ ಮತದಾರ-ಅಥವಾ ವಿ.ಕ. ಸಂಪಾದಕರೋ? ಆ ಕ್ಷೇತ್ರದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಪ್ರತಿದ್ವಂದ್ವಿಗಳಾಗಿದ್ದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಅವರಲ್ಲಿ ಒಬ್ಬ ಗೆದ್ದಿದ್ದಾನೆ. ಅವನು ಮಾನಬಿಟ್ಟವನು ಅಥವಾ ಹಾಸ್ಯಾಸ್ಪದ ಮನುಷ್ಯ ಎಂದು ವಿ.ಕ. ಸಂಪಾದಕರಿಗೆ ಖಂಡಿತ ಅನ್ನಿಸಿರಲಿಕ್ಕಿಲ್ಲ. ಯಾಕೆಂದರೆ ಗೆದ್ದವರನ್ನು ಆರಾಧಿಸುವುದು ಹಾಗೂ ಸೋತವರನ್ನು ತಿರಸ್ಕಾರದಲ್ಲಿ ತುಳಿಯುವುದು ವಿ.ಕ. ಪತ್ರಿಕೆಯ ವೃತ್ತಿಮೌಲ್ಯ.

ಆ ಚುನಾವಣೆಗಳಲ್ಲಿ ತಾನು ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂದು ತನಗೆ ಗೊತ್ತಿರುವ ಎಲ್ಲರಿಗೂ ರವಿ ಕೃಷ್ಣಾ ರೆಡ್ಡಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಅವರ ಈ ಪ್ರಯತ್ನದಲ್ಲಿ ಪ್ರಾಮಾಣಿಕತೆಯೂ ಇತ್ತು; ಆರ್ತತೆಯೂ ಇತ್ತು. ತನ್ನ ಚುನಾವಣಾ ಪ್ರಚಾರಕ್ಕೆ ಅವರು ಲಭ್ಯವಿರುವ ಎಲ್ಲ ನ್ಯಾಯಯುತ ಹಾಗೂ ಗೌರವಯುತ ಮಾರ್ಗಗಳನ್ನೂ ಅನುಸರಿಸಿದರು. ವಿ.ಕ. ಸಂಪಾದಕರನ್ನು ಭೇಟಿ ಮಾಡಿದ್ದೂ ಚುನಾವಣಾ ಪ್ರಚಾರದ ಅಂತಹ ಒಂದು ಗೌರವಯುತ ವಿಧಾನವಾಗಿತ್ತು. ವಿ.ಕ. ಸಂಪಾದಕ ಈಗ ಅದನ್ನೇ ಆಡಿಕೊಂಡು ನಗುತ್ತಿದ್ದಾರೆ! ನಗಬೇಕಾದ್ದೆ. ದಿ. ಲಂಕೇಶ್ ಹೇಳುತ್ತಿದ್ದ ಹಾಗೆ “ದಗಾಕೋರರ ಜಗತ್ತಿನಲ್ಲಿ ಪ್ರಾಮಾಣಿಕನಾಗಿರುವುದು ಮೂರ್ಖತನ.” (ಆದರೆ ತನ್ನ ಈ ಮಾತಿಗೆ ಮೊದಲು ಅವರು “ಪ್ರಾಮಾಣಿಕರ ಜಗತ್ತಿನಲ್ಲಿ ದಗಾಕೋರನಾಗಿರುವುದು ಅನೈತಿಕ” ಎಂದೂ ಹೇಳಿದ್ದರು).

ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ಹುಂಬರೇ ಇರಬಹುದು. ಆದರೆ ಚುನಾವಣೆಗೆ ನಿಂತು ಸೋಲುವುದು ಅಪರಾಧವಲ್ಲ; ಅತ್ಯಂತ ಕಡಿಮೆ ಮತಗಳನ್ನು ಪಡೆಯುವುದೂ ಅಪರಾಧವಲ್ಲ. ಚುನಾವಣೆಯಲ್ಲಿ ಗಳಿಸಿದ ಮತಗಳಿಂದ ಅಭ್ಯರ್ಥಿಗಳ ಯೋಗ್ಯತೆ ಅಳೆಯುವುದಂತೂ ಮೂರ್ಖತನವೇ ಸರಿ. ಹಿಂದೆ ಬೆಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕವಿ ಗೋಪಾಲ ಕೃಷ್ಣ ಅಡಿಗ ಮತ್ತು ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವರಾಮ ಕಾರಂತ, ಇಬ್ಬರೂ ಭಾರೀ ಅಂತರದಲ್ಲಿ ಸೋತಿದ್ದರು. ಶಿವರಾಮ ಕಾರಂತರಂತೂ ಅವರ ನಂತರದ ಪ್ರತಿಸ್ಪರ್ಧಿ ಚಲನಚಿತ್ರ ನಟ ಅನಂತನಾಗ್ ಅವರಿಗಿಂತಲೂ ಕಡಿಮೆ ಮತ ಪೆಡದುಕೊಂಡು ಮೂರನೆಯ ಸ್ಥಾನದಲ್ಲಿದ್ದರು. ಹಾಗೆಂದು ವಿ.ಕ.ಸಂಪಾದಕರು ಕನ್ನಡದ ಆ ಇಬ್ಬರು ಧೀಮಂತರ ಮುಖಕ್ಕೂ ಮಂಗಳಾರತಿ ಮಾಡುವವರೋ?

ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ‘ಲೂಸು’ಗಳು ಹಾಗೂ ಅವರಿಬ್ಬರಿಂದ ವಿ.ಕ. ಪತ್ರಿಕಾ ಸಿಬ್ಬಂದಿ ಸಖತ್ತು ಮನರಂಜನೆ ಪಡೆದುಕೊಂಡಿದೆ. ಚುನಾವಣೆಗಳನ್ನು ಗೆಲ್ಲುವು ದಕ್ಕಾಗಿ ಜನರನ್ನು ಕೊಲ್ಲಲು ಹಿಂದೆಮುಂದೆ ಯೋಚಿಸದ ಮೋದಿ, ಅಧ್ವಾಣಿ ವಗೈರೆಗಳು ಆ ಪತ್ರಿಕೆಯ ಹೀರೋಗಳಾಗಿರುವುದರಿಂದ ವಿ.ಕ.ದ ಸಂಪಾದಕ ಮತ್ತು ಅವರ ಸಿಬ್ಬಂದಿಗೆ ಮನರಂಜನೆ ಒದಗಿಸುವ ಚಟುವಟಿಕೆಗಳ ಕುರಿತು ಯೋಚಿಸಲೂ ಭಯವಾಗುತ್ತದೆ. ವಿ.ಕ. ಸಂಪಾದಕರು ಲೂಸೂ ಅಲ್ಲ, ಮೆಂಟಲ್ ಕೇಸು ಕೂಡ ಅಲ್ಲ ಎಂದೇ ಇಟ್ಟುಕೊಂಡರೂ ಅವರ ಪತ್ರಿಕೆಯಿಂದ ನಮ್ಮಂತಹವರು ಪಡೆಯುವ ಮನರಂಜನೆಯ ಬಗ್ಗೆ ಪ್ರಾಯಶಃ ಅವರಿಗೆ ಗೊತ್ತಿಲ್ಲ. ವಿ.ಕ. ಪ್ರತಿನಿತ್ಯ ಕೋಮುದ್ವೇಷದ ವಿಷವನ್ನು ಎಂತಹ ಹಾಸ್ಯಾಸ್ಪದ ಸುಳ್ಳುಗಳ ಜೊತೆ ಬೆರೆಸಿ, ತನ್ನ ಓದುಗರಿಗೆ ಉಣಬಡಿಸು ತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ, ವಿ.ಕ. ಸಂಪಾದಕರ ಮೇಲೆ ಹೇಳಿದ ಹೀನ ಅಭಿರುಚಿಯ ಬರಹ ಪ್ರಕಟವಾದ ದಿನ, ಅದೇ ಸಂಚಿಕೆಯ ಇನ್ನೊಂದು ಪುಟದಲ್ಲಿ (ಮಂಗಳೂರು ಆವೃತ್ತಿಯ ಪುಟ 2) ಪ್ರಕಟವಾಗಿರುವ ಈ ವರದಿಯಲ್ಲಿದೆ. ವಿ.ಕ.ದ ಹಸಿಸುಳ್ಳು (ಈ ಘಟನೆಯನ್ನು ವರದಿ ಮಾಡಿದ ಉದಯವಾಣಿಯೂ ಈ ಸುಳ್ಳನ್ನು ರಿಪೀಟ್ ಮಾಡಿದೆ) ಸುದ್ದಿ ಶೀರ್ಷಿಕೆಯಿಂದಲೇ ಪ್ರಾರಂಭವಾಗುತ್ತದೆ….

ಹೀಗೆ ಮುಂದುವರೆಯುವ ಲೇಖನ, ಕೊನೆಗೆ “ವಿ.ಕ. ಸಂಪಾದಕರಂತೂ ಹಿಂದೂ ವೀರರ ಈ ಬಗೆಯ ಹಿಂಸಾಚಾರವನ್ನು ಸಮರ್ಥಿಸುವ ಲೆಕ್ಕಣಿಕೆ ವೀರ. ಅವರಷ್ಟು ಹಾಸ್ಯಾಸ್ಪದ ವ್ಯಕ್ತಿ ಬೇರೆ ಯಾರಿದ್ದಾರು?” ಎನ್ನುವ ಪ್ರಶ್ನೆಯೊಂದಿಗೆ ಮುಗಿಯುತ್ತದೆ.

* ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ – 1

ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ – 2

Add a Comment

required, use real name
required, will not be published
optional, your blog address