ಶಿರವಿಲ್ಲದವರು ಮಾತ್ರ ಶಿರಸ್ತ್ರಾಣ ಬೇಡವೆನ್ನುತ್ತಾರೆ!
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಆ ಮುದುಕನ ಹೆಸರು ಜಾರ್ಜ್ ವೆಲ್ಲರ್ ಎಂದು. 2003 ನೆ ಇಸವಿಯಲ್ಲಿ ಆತನ ವಯಸ್ಸು 86 ವರ್ಷ. ಆ ಮುಪ್ಪಾತಿಮುಪ್ಪಿನಲ್ಲೂ ತನ್ನ ಕಾರನ್ನು ತಾನೆ ಓಡಿಸುತ್ತಿದ್ದ! ಕ್ಯಾಲಿಫೋರ್ನಿಯ ರಾಜ್ಯದ ಸಾಂಟಾ ಮೋನಿಕ ಅವನ ಊರು. 2003 ರ ಜುಲೈ ತಿಂಗಳ 16 ರಂದು ಆ ಊರಿನಲ್ಲಿ ವಾರಕ್ಕೊಂದು ದಿನ ನಡೆಯುವ ರೈತರ ಸಂತೆ ನಡೆಯುತ್ತಿತ್ತು. ಹೆಚ್ಚು ಕಮ್ಮಿ ನಮ್ಮ ಊರಿನ ಸಂತೆಗಳಂತೆಯೆ ಇರುತ್ತವೆ ಅವು. ಯಾವುದಾದರು ಮುಖ್ಯ ರಸ್ತೆಯಲ್ಲಿ ಇಲ್ಲವೆ ವಿಶಾಲವಾದ ಪಾರ್ಕಿಂಗ್ ಸ್ಥಳಗಳಲ್ಲಿ ಏರ್ಪಡಿಸಿರುತ್ತಾರೆ. ಈ ಸಂತೆಗಳಲ್ಲಿ ತರಕಾರಿಗಳು ಇನ್ನೂ ತಾಜಾ ಆಗಿಯೆ ಸಿಗುವುದರಿಂದ ಬಹಳ ಜನಪ್ರಿಯ. ತಾವು ಬೆಳೆದದ್ದನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಮಾರಾಟ ಮಾಡುವ ಅವಕಾಶವಿರುತ್ತದೆ.
ಆ ಪಟ್ಟಣದ ಅರಿಝೋನ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ರಸ್ತೆಯಾದ್ದರಿಂದ ಸಂತೆ ಪ್ರಾರಂಭವಾಗುವ ಸ್ಥಳದಲ್ಲಿ ಎರಡೂ ಕಡೆ ತಾತ್ಕಾಲಿಕವಾಗಿ ಮರದ ಅಡ್ಡಗಟ್ಟೆಗಳನ್ನು ಇಟ್ಟು ವಾಹನಗಳು ಬರದಂತೆ ‘ಸ್ಟಾಪ್’ ಸೂಚನಾಫಲಕಗಳನ್ನು ನಿಲ್ಲಿಸಿದ್ದರು. ವೆಲ್ಲರ್ ಅಂದು ತನ್ನ ದೊಡ್ಡ ಕೆಂಪು ಬ್ಯೂಕ್ ಕಾರಿನಲ್ಲಿ ಆ ರಸ್ತೆಗೆ ಬಂದವನೆ, ಬೇರೊಂದು ಕಾರಿನ ಹಿಂಬದಿಗೆ ಗುದ್ದಿ, ಅಡ್ಡವಾಗಿ ನಿಲ್ಲಿಸಿದ್ದ ಮರದ ಅಡ್ಡಗಟ್ಟೆಗಳನ್ನು ದಾಟಿಕೊಂಡು ನೇರವಾಗಿ ಸಂತೆಗೇ ನುಗ್ಗಿಬಿಟ್ಟ. ಮೊದಲೇ ಗಿಜಗುಡುತ್ತಿರುವ ಸ್ಥಳ. ಅಲ್ಲಿ ಗಂಟೆಗೆ 65 ರಿಂದ 95 ಕಿ.ಮಿ. ವೇಗದಲ್ಲಿ ಸುಮಾರು 1000 ಅಡಿ ದೂರ ನಿಲ್ಲದೆ ಓಡಿಸಿದ. ಇಷ್ಟು ದೂರವನ್ನು ಕೇವಲ 10 ಸೆಕೆಂಡುಗಳಲ್ಲಿ ಕ್ರಮಿಸಿದ. ಕೊನೆಗೂ ಕಾರು ನಿಂತದ್ದು ಯಾಕೆಂದರೆ ಅದಕ್ಕೆ ಒಂದು ದೇಹ ಸಿಕ್ಕಿಹಾಕಿಕೊಂಡು ಮುಂದಕ್ಕೆ ಹೋಗಲು ಆಗದ ಪ್ರಯುಕ್ತ!
ನಿರ್ಲಕ್ಷ್ಯವಾಗಿ ಓಡಿಸಿದ ಆ ಹತ್ತು ಸೆಕೆಂಡುಗಳಲ್ಲಿ ಗಾಯಗೊಂಡವರು 63 ಜನ. ಸತ್ತವರು? ಸರಿಯಾಗಿ ಹತ್ತು ಜನ. ಕಾರು ನಿಂತ ಮೇಲೆ ಅದರಿಂದ ಕೋಲು ಊರಿಕೊಂಡು ಇಳಿದ ವೆಲ್ಲರ್ ಯಾವುದೆ ಗಲಿಬಿಲಿಲ್ಲದೆ ಪಕ್ಕ ಇದ್ದವರನ್ನು, “ನಾನು ಎಷ್ಟು ಜನರಿಗೆ ಗತಿ ಕಾಣಿಸಿದೆ?” ಎಂದು ಶಾಂತವಾಗಿ ಕೇಳಿದ!
ನಂತರದ ದಿನಗಳಲ್ಲಿ ವೆಲ್ಲರ್‌ನ ವಕೀಲ ಇದು ಆಕಸ್ಮಿಕವಾಗಿ ಘಟಿಸಿದ ಅಪಘಾತ ಎಂದ. ತಾನು ಆಗ ಕ್ಷೋಭೆಗೊಳಗಾಗಿದ್ದೆ, ಮಾನಸಿಕವಾಗಿ ಜರ್ಝರಿತನಾಗಿದ್ದೆ, ಎಂದು ವೆಲ್ಲರ್ ಹೇಳಿಕೆ ನೀಡಿದ. ಆದರೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೆ ಬೇರೆ. ಅವರ ಪ್ರಕಾರ, ವೆಲ್ಲರ್ ಬ್ರೇಕನ್ನು ಬಳಸಲೆ ಇಲ್ಲ; ಅವನ ಕಾರಿನ ಮುಂಭಾಗದ ಮೇಲೆ ಅಪಘಾತಕ್ಕೊಳಗಾದ ಜನ ಎಗರಿಬಿದ್ದು ಜಾರಿ ಹೋಗುತ್ತಿದ್ದರೂ ಅವನು ಕಾರನ್ನು ನಿಲ್ಲಿಸದೆ ನುಗ್ಗುತ್ತಿದ್ದ; ಜೊತೆಗೆ, ಪಕ್ಕದಲ್ಲಿದ್ದ ಕಾರುಗಳನ್ನು ಅವಾಯ್ಡ್ ಮಾಡುತ್ತ ನಡುರಸ್ತೆಯಲ್ಲಿಯೇ ಹೋಗುತ್ತಿದ್ದ.
ಇದಾದ ಎರಡು ವಾರಗಳ ನಂತರ ಮೋಟಾರುವಾಹನಗಳ ಇಲಾಖೆ ವೆಲ್ಲರ್‌ನ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿತು. ‘ಸಂಪೂರ್ಣ ನಿರ್ಲಕ್ಷ್ಯದಿಂದ ಹತ್ತು ಜನರ ಕೊಲೆಗೆ ಕಾರಣನಾಗಿದ್ದಾನೆ,’ ಎಂದು ಅವನ ಮೇಲೆ ಕೇಸು ಹಾಕಲಾತು. ತಾನು ನಿರ್ದೋಷಿ ಎಂದು ವೆಲ್ಲರ್ ನ್ಯಾಯಾಲಯದಲ್ಲಿ ವಾದಿಸಿದ!
ಇಲ್ಲಿನ ನ್ಯಾಯಾಲಯಗಳಲ್ಲಿ ಆರೋಪಿ ದೋಷಿಯೆ ಅಥವ ನಿರ್ದೋಷಿಯೆ ಎಂದು 12 ಜನ ನಾಗರಿಕರಿಂದ ಕೂಡಿದ ನ್ಯಾಯಮಂಡಳಿ ಅಥವ ಜ್ಯೂರಿ ನಿರ್ಧರಿಸುತ್ತದೆ. ಅವರ ತೀರ್ಪಿನ ಆಧಾರದ ಮೇಲೆ, ದೋಯಾಗಿದ್ದ ಪಕ್ಷದಲ್ಲಿ, ಎಷ್ಟು ಶಿಕ್ಷೆ ಕೊಡಬೇಕೆಂದು ನ್ಯಾಯಾಧೀಶ ನಿರ್ಧರಿಸುತ್ತಾನೆ. ವಿಚಾರಣೆಯ ಬಳಿಕ, ವೆಲ್ಲರ್ ದೋಷಿ ಎಂದು ಸರ್ವಾನುಮತದಿಂದ ನ್ಯಾಯಮಂಡಲಿ ಕಳೆದ ತಿಂಗಳಷ್ಟೆ ಘೋಷಿಸಿತು. ಆ ಅಪರಾಧಕ್ಕೆ ನ್ಯಾಯಾಲಯ ಅವನಿಗೆ ಗರಿಷ್ಠ 18 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಿತ್ತು.
ಕಳೆದ ವಾರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿತು. ಇನ್ನೆರಡು ವಾರದಲ್ಲಿ 90 ವರ್ಷ ದಾಟಲಿರುವ ವೆಲ್ಲರ್‌ನ ವಯಸ್ಸು ಮತ್ತು ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು, ಆತ ಜೈಲಿನಲ್ಲಿ ಇರಲು ಲಾಯಕ್ಕಾಗದಷ್ಟು ಆರೋಗ್ಯಹೀನನಾಗಿದ್ದಾನೆ; ಜೈಲಿಗೆ ಕಳುಹಿಸಿದರೆ ಸುಮ್ಮನೆ ಜನರ ತೆರಿಗೆ ಹಣ ಪೋಲು ಮತ್ತು ಜೈಲಿನ ಅಧಿಕಾರಿಗಳಿಗೆ ತಲೆನೋವು ಎಂದು ನಿರ್ಧರಿಸಿ ಮನೆಯಲ್ಲಿಯೆ ಪರಿವೀಕ್ಷಣೆಯಲ್ಲಿಡುವ ಶಿಕ್ಷೆ ವಿಧಿಸಿತು. ಜೊತೆಗೆ ಒಂದು ಲಕ್ಷ ಡಾಲರ್ ದಂಡ ವಿಧಿಸಿತು.
ಈ ಅಪಘಾತ ಆದ ನಂತರ ಮತ್ತು ಈಗ ಹೊಸದಾಗಿ ಮತ್ತೊಮ್ಮೆ ಆ ಸುದ್ಧಿ ನವೀಕರಣಗೊಂಡ ಕಾರಣ, ವಯಸ್ಸಾದ ಚಾಲಕರಿಂದ ಆಗುವ ರಸ್ತೆ ಅಪಘಾತಗಳ ಬಗ್ಗೆ ಮತ್ತು ಅವರಿಗೆ ಯಾವ ವಯಸ್ಸಿಗೆ ಪರವಾನಗಿ ನಿರಾಕರಿಸಬೇಕು ಎನ್ನುವುದರ ಬಗ್ಗೆ ಅಮೇರಿಕದಲ್ಲಿ ಗಂಭೀರವಾದ ಚರ್ಚೆ ಮೊದಲಾಗಿದೆ.
ಟೈಮ್ ವಾರಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ “ನಾವು ಅರ್ಹವಲ್ಲದ ವಿಷಯಗಳ ಬಗ್ಗೆ ಯಾಕೆ ಚಿಂತೆ ಮಾಡುತ್ತೇವೆ?” ಎಂಬ ಅದ್ಭುತವಾದ ಮುಖಪುಟ ಲೇಖನ ಪ್ರಕಟವಾಗಿದೆ. ಅಲ್ಲಿ ಕೊಟ್ಟಿರುವ ಅಂಕಿಅಂಶ ಮತ್ತು ಅದಕ್ಕಾಗಿ ಮಾಡಿರುವ ಅಧ್ಯಯನ ತಾನು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರೀತಿಸುವ ಒಬ್ಬ ದಕ್ಷ, ವೃತ್ತಿಪರ ಪತ್ರಕರ್ತನಷ್ಟೆ ಮಾಡಲು ಸಾಧ್ಯ. ಈ ಲೇಖನದಲ್ಲಿ “ನಾವು ಯಾಕೆ ಭಯಪಡಲರ್ಹವಲ್ಲದ ವಿಷಯಗಳ ಬಗ್ಗೆ ಭಯಪಡುತ್ತೇವೆ… ಹಾಗೂ ಭಯಪಡಬೇಕಾದ ವಿಷಯಗಳನ್ನೇಕೆ ನಿರ್ಲಕ್ಷಿಸುತ್ತೇವೆ” ಎಂದು ಎಂತೆಂತಹ ಸಣ್ಣಪುಟ್ಟ ಎನ್ನಿಸುವಂತಹ ಕಾರಣಗಳಿಗೆ ಎಷ್ಟೊಂದು ಜನ ಸಾಯುತ್ತಾರೆ ಎಂಬಂತಹ ವಿವರಗಳಿವೆ.
- ಸುಮಾರು 30 ಕೋಟಿ ಜನಸಂಖ್ಯೆಯ ಅಮೇರಿಕದಲ್ಲಿ ನೆಗಡಿ-ಜ್ವರ ಒಂದರಿಂದಲೆ ವರ್ಷಕ್ಕೆ 36000 ಜನ ಸಾಯುತ್ತಾರೆ.
- ಮೈಯಲ್ಲಿನ ಕೊಬ್ಬಿನಿಂದಾಗಿ ಬರುವ ಹೃದಯ ಸಂಬಂಧಿ ಕಾಲೆಗಳಿಂದ ವರ್ಷಕ್ಕೆ 7 ಲಕ್ಷ ಜನ ಸಾಯುತ್ತಾರೆ.
- ನಾನಾ ತರಹದ ಅಪಘಾತಗಳಿಂದ ವರ್ಷಕ್ಕೆ ಸುಮಾರು 1 ಲಕ್ಷ ಜನ ಸತ್ತರೆ ನಾನಾ ತರಹದ ಕಾಲೆಗಳಿಂದ 23 ಲಕ್ಷ ಜನ ಸಾಯುತ್ತಾರಂತೆ.
ಅಮೇರಿಕದಲ್ಲಿ ಪ್ರತಿಯೊಬ್ಬ ಕಾರು ಚಾಲಕನೂ ಸೀಟು ಬೆಲ್ಟು ಧರಿಸಬೇಕು. ಬಹುಪಾಲು ರಾಜ್ಯಗಳಲ್ಲಿ ಕಾರಿನಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕನೂ ಬೆಲ್ಟು ಹಾಕಿಕೊಳ್ಳಬೇಕು. ಈಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 8 ವರ್ಷದ ಕೆಳಗಿನ ಪ್ರತಿ ಮಗುವನ್ನು ಚೈಲ್ಡ್‌ಸೀಟ್‌ನಲ್ಲಿಯೆ ಕೂರಿಸಬೇಕು. ಆ ಸೀಟು ಹಿಂದಿನ ಸೀಟಿನಲ್ಲಿಯೇ ಇರಬೇಕು. 12 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಪ್ರತಿಯೊಬ್ಬರೂ ಹಿಂದಿನ ಸೀಟಿನಲ್ಲಿಯೆ ಪ್ರಯಾಣಿಸಬೇಕು. ಪ್ರತಿ ರಸ್ತೆಯಲ್ಲಿಯೂ ಗರಿಷ್ಠ ವೇಗದ ಮಿತಿ ಇರುತ್ತದೆ. ಬೈಕ್ ಸವಾರನಿರಲಿ, ಪೆಡಲ್ ತುಳಿಯುವ ಸೈಕಲ್ ಸವಾರನೂ ತಲೆಗೆ ಹೆಲ್ಮೆಟ್ ಹಾಕಿಕೊಳ್ಳಬೇಕು. ಬಹುಪಾಲು ಜನ ದಂಡಕ್ಕೆ ಹೆದರಿಯೊ, ಪೌರಪ್ರಜ್ಞೆಂದಲೊ ರಸ್ತೆನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇಷ್ಟೆಲ್ಲ ಇದ್ದರೂ ಇಲ್ಲಿ ವರ್ಷಕ್ಕೆ 44000 ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ!
ಇಂತಹ ಯಾವ ನಿಯಮಗಳೂ ಇಲ್ಲದ, ಇದ್ದರೂ ಸರಿಯಾಗಿ ಪಾಲಿಸದ ನಮ್ಮಲ್ಲಿ ಅಪಘಾತಗಳು ಹೇಗಿರಬೇಡ? ತಲೆಗೆ ಹೆಲ್ಮೆಟ್ ಬೇಡ ಎಂದು ಎಂತೆಂತಹ ಹಾಸ್ಯಾಸ್ಪದ, ಅಸಂಬದ್ದ ಹೇಳಿಕೆಗಳು! ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ವಿಷಯ ರೋಲ್‌ಕಾಲ್ ಮಾಡಲು ಲಾಯಕ್ಕಾದ ವಿಷಯವಾಗಿದೆಯೆ ಹೊರತು ಜನರ ಪ್ರಾಣ ಉಳಿಸುವ ವಿಷಯವಾಗಿಲ್ಲ. ಸರ್ಕಾರ ಸುರಕ್ಷಾ ವಿಧಾನಗಳನ್ನು ಕಡ್ಡಾಯ ಮಾಡದೆ ಇರುವುದರಿಂದ, ಅನ್ನ ದುಡಿಯುವ ಜನ ಮತ್ತು ಅವರ ಸ್ಫೂರ್ತಿಯಾದ ಅಪ್ಪ, ಅಮ್ಮ, ಹೆಂಡತಿ, ಮಗು, ಗಂಡ, ತಮ್ಮ, ತಂಗಿ, ಅಣ್ಣ, ಅಕ್ಕ, ಹೀಗೆ ಯಾರೆಂದರವರು ರಸ್ತೆ ಆಪಘಾತಗಳಿಗೊಳಗಾಗಿ ಸಾಯುತ್ತಿರುತ್ತಾರೆ ಎಂದು ಗಮನಿಸದೆ, ಯಾರ ಜೀವಕ್ಕೂ ಬೆಲೆಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾವುಗಳೆ ಸರ್ಕಾರವಾದ್ದರಿಂದ ನಾವೆ ಜೀವಕ್ಕೆ ಬೆಲೆ ಕೊಡುತ್ತಿಲ್ಲ ಎನ್ನುವುದು ಇಲ್ಲಿ ಹೆಚ್ಚು ಸೂಕ್ತ, ಅಲ್ಲವೆ?