ಲೋಕ್‌ ಸತ್ತಾದ ಜೇಪಿ, ಚಿತ್ರದುರ್ಗದ ಜನಾರ್ಧನ ಸ್ವಾಮಿ…

This post was written by admin on May 18, 2009
Posted Under: Uncategorized

ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲಿ Undermine ಮಾಡುವ ರೀತಿಯಲ್ಲೂ ಇತ್ತು. ಆ ಪ್ರಶ್ನೆ ಚುಡಾಯಿಸುವ, ಹಂಗಿಸುವ ರೀತಿಯಲ್ಲಿ ಇರಬಾರದು ಎಂದುಕೊಂಡೆ ಸಾಕಷ್ಟು ಹುಷಾರಿನಲ್ಲಿ ಕೇಳಿದೆ. ಅದು ಅವರಿಗೆ ಮುಜಗರ ಉಂಟು ಮಾಡಿದ್ದನ್ನು ಅವರ ಉತ್ತರ ಹೇಳುತ್ತಿತ್ತು. ನನ್ನನ್ನು ಸ್ವಲ್ಪ ಜಾಡಿಸುವ ರೀತಿಯಲ್ಲಿ, ಒಳ್ಳೆಯದನ್ನು ಕಾಣದ ಅವಿವೇಕಿಯನ್ನು ಬೈಯ್ಯುವ, insult ಮಾಡುವ ರೀತಿಯಲ್ಲಿ ಉತ್ತರಿಸಿದರು. ನನಗೆ ಏನೇನೂ ಬೇಜಾರಾಗಲಿಲ್ಲ. ಅವರ ಆದರ್ಶ ಮತ್ತು ಆಶಾವಾದವನ್ನೆ ನಾನೂ ಹಂಚಿಕೊಳ್ಳುತ್ತಿದ್ದಿದ್ದರಿಂದ, ಅವರ ಒತ್ತಡಗಳು ಮತ್ತು ಕಾಳಜಿಗಳು ನನಗೂ ಅರ್ಥವಾಗಿದ್ದರಿಂದ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸುಮ್ಮನಾದೆ. ಆ ಮನುಷ್ಯನ ಎಡೆಗಿನ ನನ್ನ ಗೌರವ ಕುಗ್ಗಲಿಲ್ಲ.

ಆತ ಆಂಧ್ರದ ಮಾಜಿ ಐಎಎಸ್ ಅಧಿಕಾರಿ ಮತ್ತು ಹಾಲಿ ಶಾಸಕ, ಲೋಕಸತ್ತಾ ಪಕ್ಷದ ಡಾ. ಜಯಪ್ರಕಾಶ್ ನಾರಾಯಣ್. “2009 ರಲ್ಲಿ ಆಂಧ್ರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಲೋಕಸತ್ತಾ ಪಕ್ಷ ಹಣ-ಹೆಂಡ ಹಂಚದೆ, ಜಾತಿ ರಾಜಕೀಯ ಮಾಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಮೊತ್ತವನ್ನಷ್ಟೆ ಖರ್ಚು ಮಾಡಿ, ಬಹುಮತ ಪಡೆದುಕೊಂಡು ಆಂಧ್ರದಲ್ಲಿ ಅಧಿಕಾರಕ್ಕೆ ಬರುತ್ತದೆ.” ಎಂದು ಅವತ್ತು ಅವರು ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಮಾತನಾಡಿದ್ದರು. ಅಲ್ಲಿದ್ದ ಬಹುಪಾಲು ಜನ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಅವರು ಮಾಡುತ್ತಿರುವ “ನಿಶ್ಯಬ್ದ ಕ್ರಾಂತಿ”ಯ ಬಗ್ಗೆ, ಆ ಪ್ರಾಮಾಣಿಕತೆ ಮತ್ತು ಆದರ್ಶದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನ್ನೊಬ್ಬನದೆ ಸ್ವಲ್ಪ ಉಲ್ಟಾ ಎನಿಸುವ ಪ್ರಶ್ನೆ. ನಾನು ಕೇಳಿದ್ದೂ ಸಹ, “ಆಂಧ್ರದ ಜನತೆ ವ್ಯಕ್ತಿ ಆರಾಧನೆಯನ್ನು ಇಷ್ಟಪಡುವ ಮನಸ್ಥಿತಿಯವರು. ಸಿನಿಮಾ ರಂಗದ ಜನರನ್ನು ವಿಪರೀತ ಆರಾಧಿಸುವವರು. ಅವರನ್ನೆ ಆದರ್ಶ ಮಾಡಿಕೊಂಡಂತವರು. ಇಂತಹುದರಲ್ಲಿ ಯಾವುದೆ ಸಾಂಸ್ಕೃತಿಕ ಹಿನ್ನೆಲೆಯಿಲ್ಲದವರು ಅಲ್ಲಿ ಜಯಿಸಲು ಸಾಧ್ಯವೆ? ಆದರ್ಶ ಮತ್ತು ಪ್ರಜಾಪ್ರಭುತ್ವದ ಮಾತುಗಳು ಅಲ್ಲಿ ನಿಜಕ್ಕೂ ಎಲ್ಲರನ್ನೂ ಮುಟ್ಟುತ್ತದೆಯೆ?” ಎಂಬ ರೀತಿಯಲ್ಲಿ ಇತ್ತು ಎನಿಸುತ್ತದೆ. ಅದಕ್ಕೇ ಅವರು ಸ್ವಲ್ಪ ಸಿಟ್ಟಾಗಿದ್ದು. ಸಿಡುಕಿದ್ದು.

ಆಂಧ್ರದ ಜನತೆ ಮತ್ತೆ ಕಾಂಗ್ರೆಸ್ ಅನ್ನು ಆರಿಸಿದ್ದಾರೆ. ಚಂದ್ರಬಾಬು ನಾಯ್ಡುವಿನ ಮಹಾಕೂಟ ಸೋಲೊಪ್ಪಿದೆ. “ಕಿಂಗ್-ಮೇಕರ್ ಅಲ್ಲ, 160 ಸ್ಥಾನಗಳು ನಮ್ಮವು. ನಾನೆ ಮುಂದಿನ CM,” ಎಂದಿದ್ದ ಮುಠಾಮೇಸ್ತ್ರಿ ಚಿರಂಜೀವಿ ತಾವು ಹೇಳಿಕೊಂಡ ಸ್ಥಾನಗಳಲ್ಲಿ ಸುಮಾರು ಶೇ. 10 ಮಾತ್ರ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಮುಂದಿನ ಸಲ ಆಂಧ್ರದಲ್ಲಿ ಕ್ರಾಂತಿಯಾಗುತ್ತದೆ, ಪ್ರಜಾಪ್ರಭುತ್ವದ ಪಟ್ಟಾಭಿಷೇಕವಾಗುತ್ತದೆ, ಆಗ ನಮ್ಮದೇ ಸರ್ಕಾರ, ಎಂದಿದ್ದ ಲೋಕ ಸತ್ತಾದ ಜಯಪ್ರಕಾಶ್ ನಾರಾಯಣ್ ಒಂದೇ ಒಂದು ಸ್ಥಾನ ಗೆದ್ದಿದ್ದಾರೆ.

ದೇಶದಾದ್ಯಂತ ನಡೆದ ಈ ಸಲದ ಚುನಾವಣೆಯಲ್ಲಿ ನನ್ನ ಮನಸ್ಸು ತುಂಬಿಬಂದಿರುವುದು ಆ ಒಂದೇ ಒಂದು ಸ್ಥಾನ ಪಡೆದ ಡಾ. ಜಯಪ್ರಕಾಶ್ ನಾರಾಯಣರ ವಿಜಯಕ್ಕೆ. ಬಹುಮತ ಪಡೆಯುತ್ತೇವೆ ಎಂದು ಘೋಷಿಸಿಕೊಂಡು ಓಡಾಡಿ ಒಂದೇ ಒಂದು ಸ್ಥಾನ ಪಡೆದ ಅವರ ಬಗ್ಗೆ ಕೀಟಲೆ ಮಾಡುವುದು, ಚುಡಾಯಿಸುವುದು, ಕೆಲವರಿಗೆ ಸಹಜವಾಗಬಹುದು. ಆದರೆ ನನ್ನಂತಹವರಿಗೆ ಅವರ ಕೆಲಸ ಮತ್ತು ಹೋರಾಟ ’ನಮ್ಮ ಹೋರಾಟ ಮತ್ತು ಸಾವು ಯಾವುದಕ್ಕಾಗಿರಬೇಕು?’ ಎನ್ನುವುದನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸುತ್ತದೆ. ಇಡೀ ದೇಶದಾದ್ಯಂತ ಅತ್ಯಂತ ಸ್ವಚ್ಚ ಚುನಾವಣೆ ನಡೆಸಿ ಗೆದ್ದುಬಂದ ಡಾ. ಜಯಪ್ರಕಾಶ ನಾರಾಯಣರಿಗೆ ಅಭಿನಂದನೆಗಳು. ಅದಕ್ಕಿಂತ ಹೆಚ್ಚಾಗಿ, ಇಂತಹುದೊಂದನ್ನು ಸಾಧಿಸಿದ್ದಕ್ಕೆ ಭಾರತದ ಪ್ರಜೆಯಾಗಿ ಅವರಿಗೆ ಕೃತಜ್ಞತೆಗಳು.

[ಎರಡು ವರ್ಷಗಳ ಹಿಂದೆ ಬರೆದಿದ್ದ "ಆಂಧ್ರದ ಜಯಪ್ರಕಾಶ್ ನಾರಾಯಣ್" ಎಂಬ ಲೇಖನ ಇಲ್ಲಿದೆ. ಹಾಗೆಯೆ, ತಮ್ಮ ಗೆಲುವಿನ ನಂತರ ಡಾ. ಜೇಪಿ ಹೇಳಿರುವ ಮಾತುಗಳು ಇಲ್ಲಿವೆ. ಭಾರತದಲ್ಲಿ ಒಳ್ಳೆಯ ಪ್ರಬುದ್ಧ ಪ್ರಜಾಪ್ರಭುತ್ವ ಬಯಸುವವರಿಗೆ ಬೇಕಾದ ಮಾತುಗಳು.]


ಚಿತ್ರದುರ್ಗದ ಜನಾರ್ಧನ ಸ್ವಾಮಿ

ಈ ಸಲ ಕರ್ನಾಟಕದಿಂದ ಲೋಕಸಭೆಗೆ ನಿಂತಿದ್ದವರಲ್ಲಿ ಯಾರುಯಾರು ಎಷ್ಟು ಶ್ರೀಮಂತರು ಎಂಬ ಮಾಹಿತಿ ಕೊಡಲು ನಾವೆಲ್ಲರೂ ಅಶಕ್ತರು. ಎಲ್ಲಾ ಸ್ಪರ್ಧಿಗಳು ತಮ್ಮಲ್ಲಿರುವ ಬಿಳಿಹಣದ ಬಗ್ಗೆ, ಆಸ್ತಿಯ ಬಗ್ಗೆ , ನಾಮಪತ್ರ ಸಲ್ಲಿಸುವಾಗ Affidavit ಕೊಡಬೇಕು. ಅದರಲ್ಲಿ ಎಷ್ಟು ನಿಜವೊ, ಎಷ್ಟು ಸುಳ್ಳೊ ಹೇಳಲು ಬರುವುದಿಲ್ಲ. ಹಾಗಾಗಿ ನಾವು ಅದನ್ನು ನಂಬಲೂ ಬಾರದು. ಯಾರ ಬಗ್ಗೆ ಅಲ್ಲದಿದ್ದರೂ ಒಬ್ಬರ ಬಗ್ಗೆಯಂತೂ ಅವರು ಕೊಟ್ಟಿರುವ ಆಸ್ತಿಯೆ ಅವರ ಹತ್ತಿರ ಇರುವುದು ಎನ್ನುವುದನ್ನು ನಾನು ನಂಬಬಲ್ಲೆ. ಅದು ಚಿತ್ರದುರ್ಗದಿಂದ ಲೋಕಸಭೆಗೆ ಚುನಾಯಿತರಾಗಿರುವ ಜನಾರ್ಧನ ಸ್ವಾಮಿ.

ಕರ್ನಾಟಕದಿಂದ ಆರಿಸಿರುವ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕವಾಗಿ ದುಡಿದ ಹಣವಿರುವ, ಹಾಗೆಯೆ ಕಮ್ಮಿ ದುಡ್ಡು ಖರ್ಚು ಮಾಡಿದ ಅಭ್ಯರ್ಥಿಗಳು ಬಹುಶಃ ಒಂದಿಬ್ಬರು ಇರಬಹುದು. ಅವರಲ್ಲಿ ಜನಾರ್ಧನ ಸ್ವಾಮಿಯೂ ಒಬ್ಬರಾಗಿರುತ್ತಾರೆ. ಚುನಾವಣೆಯಾಗುವುದಕ್ಕೆ ಮುನ್ನ ಕೇವಲ 2 ಅಥವ 3 ಸೈಟು ಇದ್ದ, ಕೇವಲ ಹತ್ತಿಪ್ಪತ್ತು ಲಕ್ಷ ದುಡ್ಡಿದ್ದ, ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳಲು ಪುರುಸೊತ್ತಿಲ್ಲದೆ ಬಾಡಿಗೆ ಮನೆಯಲ್ಲಿದ್ದ ಜನಾರ್ಧನ ಸ್ವಾಮಿ ಕರ್ನಾಟಕದ ಕ್ಷುದ್ರ ಚುನಾವಣೆ ವ್ಯವಸ್ಥೆಯಲ್ಲಿ ಗೆದ್ದಿರುವುದು ಸಾಮಾನ್ಯವೇನಲ್ಲ. ಕೆಲವು ಪತ್ರಕರ್ತ ಮಿತ್ರರು ಹೇಳಿದ ಹಾಗೆ ಈ ಚುನಾವಣೆಯಲ್ಲಿ ಇಡೀ ಕರ್ನಾಟಕದಲ್ಲಿ ಕಡಿಮೆ ಹಣದ ಸರಬರಾಜು ಕಂಡ ಕ್ಷೇತ್ರ ಚಿತ್ರದುರ್ಗವಂತೆ. ಹಾಗೆಂದು ಅಲ್ಲಿಯ ಚುನಾವಣೆ ಲಕ್ಷಗಳಲ್ಲಿ ಆಗಿಲ್ಲ. ಅಲ್ಲಿಯೂ ಕೋಟಿಗಳಲ್ಲಿ ನಡೆದಿದೆಯಂತೆ. ಚುನಾವಣಾ ಆಯೋಗ ನಿಗದಿಪಡಿಸಿರುವ ದುಡ್ಡಿಗಿಂತ ಹೆಚ್ಚಿಗೆ ವೆಚ್ಚ ಮಾಡುವ ಯಾವೊಂದು ಚುನಾವಣೆಯೂ ಅಕ್ರಮ ಮತ್ತು ಅನೈತಿಕ ಎಂದು ಭಾವಿಸುವವನು ನಾನು. ಹಾಗಿರುವಾಗ, ಮೇಲಿನ ಯಾವುದನ್ನು ಸರಿ, ಯಾವುದನ್ನು ತಪ್ಪು ಎನ್ನಬೇಕು? ನನ್ನಲ್ಲಿ ಗೊಂದಲಗಳಿಲ್ಲ.

ಜನಾರ್ಧನ ಸ್ವಾಮಿಯವರ ಜೊತೆಗಿನ ನನ್ನ ಸ್ನೇಹ ಸುಮಾರು ನಾಲ್ಕೈದು ವರ್ಷದ್ದು. ನಾನು ಎಂದೆಂದೂ ಒಪ್ಪಿಕೊಳ್ಳಲಾಗದ ಸಿದ್ಧಾಂತವನ್ನು ಹೊಂದಿರುವ ಪಕ್ಷದಿಂದ ಅವರು ಈಗ ಸಂಸದ. ಹಾಗಾಗಿ ನಮ್ಮ ಸ್ನೇಹ ಮತ್ತು ಮಾತುಕತೆಗಳು ಮುಂದುವರೆಯುತ್ತವೆ ಎಂದಾಗಲಿ ಅಥವ ಅವು ಮುಕ್ತವಾಗಿರುತ್ತವೆ ಎಂದಾಗಲಿ ನಾನು ಭಾವಿಸುತ್ತಿಲ್ಲ. ಕರ್ನಾಟಕದ ರಾಜಕೀಯ ಮತ್ತು ವ್ಯಕ್ತಿಗಳ ಬಗ್ಗೆ ಆಗಾಗ ಚರ್ಚಿಸುವ ಮತ್ತು ಬರೆಯುವ ನನಗೆ ಈಗ ಅವರೂ ಒಬ್ಬ ಜನಪ್ರತಿನಿಧಿ ಮತ್ತು ಅದೇ ಚರ್ಚೆಗೆ ಮತ್ತು ವಿಮರ್ಶೆಗೆ ಅರ್ಹರು. ಈಗಿನ ಕ್ಷುದ್ರ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸ್ನೇಹಿತರು ಮತ್ತು ಆದರ್ಶ-ಪ್ರಾಮಾಣಿಕತೆ-ಬದ್ಧತೆಯ ಹೆಸರಿನಲ್ಲಿ ಬೆಂಬಲಿಸಬಹುದಾದ ರಾಜಕೀಯ ನಾಯಕರು ಇಲ್ಲದಿರುವಾಗ ಸ್ವಾಮಿ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ನನ್ನ ಜೀವನದ ಅನೇಕ ತಿರುವುಗಳಲ್ಲಿ ನಾನು ತಪ್ಪುಮಾಡಲು ಅವಕಾಶವಿಲ್ಲದಂತೆ ಪರಿಸ್ಥಿತಿ ಅಥವ ಆ ದೇವರು ನನ್ನ ಕೈಹಿಡಿದಿದ್ದಿದೆ. ಕೆಲವೊಮ್ಮೆ ಸ್ನೇಹಿತರೂ. ಅದೇ ಉದ್ದೇಶದಿಂದ ನಾನು ಸ್ವಾಮಿಯವರ ಬಗ್ಗೆ ಈ ಟಿಪ್ಪಣಿ ಬರೆದಿದ್ದೇನೆ. ಜೀವನ ಅನೇಕ ತಿರುವುಗಳಿಂದ ಕೂಡಿದೆ. ಮತ್ತೆ ನಮ್ಮಿಬ್ಬರದೂ ಇನ್ನೊಮ್ಮೆ ಎಲ್ಲಿಯೋ ಸಂಧಿಸಬಹುದು. ಇಲ್ಲದಿರಬಹುದು. ಹೀಗೆ ಆಗುತ್ತದೆ ಅನ್ನುವುದಕ್ಕೆ ಇಲ್ಲಿ ಯಾರೂ ಕಾಲಜ್ಞಾನಿಗಳಿಲ್ಲ. ಜನಾರ್ಧನ ಸ್ವಾಮಿ, ನಿಮಗೆ ಅಭಿನಂದನೆಗಳು.

ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಮೂಲಕ ಈ ಟಿಪ್ಪಣಿ ಮುಗಿಸುತ್ತೇನೆ. ಜನಾರ್ಧನ ಸ್ವಾಮಿಯವರಿಗೆ ಚಿತ್ರದುರ್ಗದಿಂದ ಬಿಜೆಪಿ ಪಕ್ಷ ಸೀಟು ಕೊಟ್ಟಿರುವ ಸಂಗತಿ ನಾನು ಕಳೆದ ಮಾರ್ಚಿನಲ್ಲಿ ಬೆಂಗಳೂರಿನಲ್ಲಿದ್ದ ಸಮಯದಲ್ಲಿಯೆ ಘೋಷಣೆ ಆಯಿತು. ಆಗ ನಮ್ಮಿಬ್ಬರಿಗೂ ಪರಿಚಯ ಮತ್ತು ಸ್ನೇಹ ಇದ್ದುದ್ದನ್ನು ಬಲ್ಲ ಕೆಲ ಪ್ರಗತಿಪರ-ಜಾತ್ಯತೀತ ಮನೋಭಾವದ ಸ್ನೇಹಿತರು ನಾಲ್ಕೈದು ಕಡೆ ನನಗೆ ಈ ಪ್ರಶ್ನೆ ಕೇಳಿದರು. ನಾನು ಬಿಜೆಪಿ ಸಿದ್ಧಾಂತವನ್ನು ಒಪ್ಪದ್ದರಿಂದ ನನ್ನ ಸ್ನೇಹಿತರೂ ಹಾಗೆ ಇರುತ್ತಾರೆ ಎನ್ನುವ ನಂಬಿಕೆ ಅವರದಿತ್ತೇನೊ? “ಅವರು ಯಾಕೆ ಬಿಜೆಪಿಯಿಂದ ನಿಂತರು? ಕಾಂಗ್ರೆಸ್‌ನಿಂದ ನಿಲ್ಲಬಹುದಾಗಿತ್ತಲ್ಲ?” ಆಗೆಲ್ಲ ನಾನು ಅವರಿಗೆ ಹೇಳುತ್ತಿದ್ದ ಉತ್ತರ, “ಈ ತರಹ ಯಾರಾದರೂ ಬಂದು ಸೀಟು ಕೇಳಿದರೆ ನಮ್ಮ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಅಂತಹವರಿಗೆ ಸೀಟು ಕೊಡುವ ಪರಿಸ್ಥಿತಿ ಇದೆಯೆ? ಅಂತಹವರ ಮಾತನ್ನು ಸಂಯಮದಿಂದ ಕೇಳುವ ಅಥವ ಅಂತಹವರನ್ನು ಬಳಸಿಕೊಳ್ಳುವ ಪರಿಸ್ಥಿತಿ ಅಥವ ಮನಸ್ಥಿತಿ ನಿಜಕ್ಕೂ ಅಲ್ಲಿದೆಯೆ?” ಜನಾರ್ಧನ ಸ್ವಾಮಿ ಎರಡು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿದಾಗ ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ: “ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು.” ಅದರಲ್ಲಿ ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದರ ಬಗ್ಗೆ ಬರೆಯುತ್ತ, ಪ್ರಜಾವಾಣಿ ಬಿಟ್ಟರೆ ಬೇರೆ ಯಾವ ದಿನಪತ್ರಿಕೆಯಲ್ಲಿಯೂ ಮಹಮ್ಮದರ ಧೋರಣೆ, ಆಲೋಚನೆ ಮತ್ತು ಮುಕ್ತತೆಗೆ ಸರಿಹೊಂದುವ ಪರಿಸ್ಥಿತಿ ಇಲ್ಲ ಎಂದಿದ್ದೆ. ಅದನ್ನು ಮಹಮ್ಮದರನ್ನು ಮೆಚ್ಚಿಕೊಳ್ಳುವ ಹಾಗು ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಸ್ವಾಮಿಯವರ ವಿಷಯಕ್ಕೂ ಹೇಳಬಹುದು. ನಾವೆಲ್ಲ ಕೋಮುವಾದಿ ಮತ್ತು ಪ್ರತಿಗಾಮಿ ಎಂದು ಸಕಾರಣವಾಗಿಯೆ ವಿರೋಧಿಸುವ ಬಿಜೆಪಿ ಬಿಟ್ಟರೆ ಬೇರೆ ಇನ್ಯಾವ ಪಕ್ಷದಲ್ಲೂ ಅವರಿಗೆ ಸ್ಥಾನ ಸಿಗುತ್ತಿರಲಿಲ್ಲ.

ಇನ್ನೊಂದು ಪ್ರಶ್ನೆಯ ಮೂಲಕ ಇದನ್ನು ಮುಗಿಸುತ್ತೇನೆ. “ಅಕಸ್ಮಾತ್ ಅಂತಹವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಅವರನ್ನು ಇಷ್ಟು ಸುಲಭವಾಗಿ ಗೆಲ್ಲಿಸುವ ಪರಿಸ್ಥಿತಿ ಇದೆಯೆ? ” ಇದನ್ನು ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ಕೃಷ್ಣ ಭೈರೇಗೌಡರು ಮತ್ತು ಅವರಿಗೆ ಲೀಡ್ ಕೊಡಿಸಲಾಗದ ಹಾಲಿ ಕಾಂಗ್ರೆಸ್ ಶಾಸಕರು, ಅಲ್ಲಿ ಟಿಕೆಟ್ ಪಡೆಯಲು ಬೇಕಾದ ಅರ್ಹತೆಗಳು, ಅಲ್ಲಿಯ “ರಾಜಕುಮಾರ”ರ “ಪ್ರಜಾ”ಪ್ರಭುತ್ವ, ಅಗಣಿತ ನಾಯಕರುಗಳು ಮತ್ತು ಸೈದ್ಧಾಂತಿಕ ಬದ್ಧತೆಯಿಲ್ಲದ ನಾಯಕ-ಕಾರ್ಯಕರ್ತ ಗಣ, ಎಲ್ಲವೂ ನನ್ನ ಮನಸ್ಸಿನಲ್ಲಿದೆ. ಕರ್ನಾಟಕದ ಜಾತ್ಯತೀತ ಪಕ್ಷಗಳ ಹಾಲಿ ಯೋಗ್ಯತೆಯನ್ನೂ ಇದು ತೋರಿಸುತ್ತದೆ. ಅಲ್ಲವೆ?

Add a Comment

required, use real name
required, will not be published
optional, your blog address