ಅನಾಮಿಕತೆ ಮತ್ತು ಅಮಲಿನಲ್ಲಿ ಕೆಂಡಸಂಪಿಗೆ…

This post was written by admin on May 22, 2009
Posted Under: Uncategorized

ಹಿಂದೊಮ್ಮೆ ಕೆಂಡಸಂಪಿಗೆಯ ಬಗ್ಗೆ ಬರೆದಿದ್ದೆ. ಕನ್ನಡದ ಅಂತರ್ಜಾಲದಿಂದ ಹೊರಗಿದ್ದ ಅನೇಕ ಅರ್ಹರನ್ನು ಅದು ಪ್ರೀತಿಯಿಂದ ಎಳೆದೆಳೆದುಕೊಂಡು ಬಂದು ಕನ್ನಡ ಅಂತರ್ಜಾಲದಲ್ಲಿ ಕೂರಿಸಿದೆ. ಕೂರಿಸುತ್ತಿದೆ. ಆ ಮೂಲಕ, ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಇಲ್ಲದೆ ಹೋಗಿದ್ದ ಒಂದು ಕರ್ನಾಟಕದ ಪ್ರತಿಬಿಂಬವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಅದನ್ನು ದುಡ್ಡು ಹಾಕಿ ನಡೆಸುತ್ತಿರುವವರು ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಅವರು ಹೂಡುತ್ತಿರುವ ದುಡ್ಡಿಗೆ ಅಲ್ಲಿಂದ ಯಾವ ರೀತಿಯ ಹಣಕಾಸಿನ Returns ಇಲ್ಲ ಎಂದು ಮಾತ್ರ ಖಂಡಿತವಾಗಿ ಹೇಳಬಹುದು. ಕನ್ನಡ ಸೈಟುಗಳಿಗೆ ಜಾಹಿರಾತುಗಳು ಸಿಗುತ್ತವೊ ಇಲ್ಲವೊ. ಸಿಕ್ಕರೂ ಅವುಗಳ ಆದಾಯ ಯಾವ ಖರ್ಚಿಗೂ ಸಾಲುವುದಿಲ್ಲ. ಕೆಂಡಸಂಪಿಗೆಯಲ್ಲಂತೂ ಜಾಹಿರಾತುಗಳೇ ಇಲ್ಲ. ಹೀಗಿರುವಾಗ, ಅದನ್ನು ನಡೆಸುತ್ತಿರುವವರು ಯಾವೊಂದು ಆದಾಯದ ನಿರೀಕ್ಷೆಯಿಲ್ಲದೆ ತಮ್ಮ ಸ್ವಂತ ದುಡ್ಡನ್ನು ಕಳೆದುಕೊಳ್ಳುತ್ತಲೆ ಅದನ್ನು ನಡೆಸುತ್ತಿದ್ದಾರೆ ಎಂತಲೇ ಹೇಳಬೇಕು. ಬಹುಶಃ ಅದು ಅವರ ಜೀವನಪರ/ಕನ್ನಡಪರ ಕಾಳಜಿಗಳಿಂದ ಬಂದದ್ದಾಗಿರಬೇಕು. ಅವರು ಯಾರು ಮತ್ತು ಅವರ ಒಲವುನಿಲುವುಗಳೇನು ಎಂದು ಗೊತ್ತಾಗುವ ತನಕ ಯಾವುದನ್ನೂ ನಿಖರವಾಗಿ ಹೇಳಲಾಗುವುದಿಲ್ಲ. ಬಹುಶ: ಆಮೇಲೆಯೂ ಸಹ. ಆದರೆ ಆ ನಂತರದ ಅಭಿಪ್ರಾಯಕ್ಕೆ ತೀರಾ ವೈಯಕ್ತಿಕವಾದ ಅಭಿಪ್ರಾಯಗಳೂ ಸೇರಿಕೊಳ್ಳುತ್ತವೆ.

ಅಬ್ದುಲ್ ರಶೀದ್ ಸಂಪಾದಕತ್ವದಲ್ಲಿ ಬರುತ್ತಿರುವ ಕೆಂಡಸಂಪಿಗೆಗೆ ನಾಗರಾಜ್ ವಸ್ತಾರೆ ಎಂಬ ಕತೆಗಾರ-ಕವಿ-ಲೇಖಕ ಈ ತಿಂಗಳು ಅತಿಥಿ ಸಂಪಾದಕರಾಗಿದ್ದಾರೆ. ಅವರ ಯಾವ ಕತೆಗಳನ್ನು ಓದಿದ್ದೇನೆ ಎಂದು ನೆನಪಿಲ್ಲ. ಓದಿರಬಹುದು. ಇಲ್ಲದೆಯೂ ಇರಬಹುದು. ಒಂದಷ್ಟು ಸಾಹಿತ್ಯವನ್ನು ಓದುವ, ಬಹಳಷ್ಟನ್ನು (ಸಿನೆಮಾ) ನೋಡುವ, ಇನ್ನೂ ಬಹಳಷ್ಟು ಅದೂಇದನ್ನು ಅಂತರ್ಜಾಲದಲ್ಲಿ ಓದುವ ನನಗೆ ಓದಿದ ಸಣ್ಣಕತೆಗಳು ಬಹಳ ದಿನ ಜ್ಞಾಪಕ ಇರುವುದಿಲ್ಲ. ಆದರೆ ಲೇಖಕರ ಹೆಸರು, ಅವರದನ್ನು ಓದಿಲ್ಲದಿದ್ದರೂ, ಸುಮಾರಾಗಿ ಗೊತ್ತಿರುತ್ತದೆ. ಎರಡು-ಮೂರು ಕನ್ನಡ ಪೇಪರ್‌ಗಳನ್ನು ಮತ್ತು ಹಲವು ಕನ್ನಡ ಬ್ಲಾಗ್‌ಗಗಳನ್ನು ಜಾಲಾಡುವ ಅಭ್ಯಾಸವಿರುವ ನನಗೆ ವಸ್ತಾರೆ ಎಂಬ ಹೆಸರು ಇತ್ತೀಚಿನ ವರ್ಷಗಳಲ್ಲಿ ಹಲವು ಸಲ ಕಾಣಿಸಿದೆ. ಜೊತೆಗೆ ಈಗ ಅವರು ಕೆಂಡಸಂಪಿಗೆಗೆ ಅತಿಥಿ ಸಂಪಾದಕರಾಗಿರುವುದು ಇತ್ತೀಚಿನ ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಪ್ರಾಮುಖ್ಯವನ್ನೂ ತೋರಿಸುತ್ತಿದೆ.

ಬೆಂಗಳೂರಿನಲ್ಲಿರುವ ಕನ್ನಡ ಲೇಖಕರು; ಅವರಲ್ಲಿಯ Socialites ಮತ್ತು Socialists; ಅವರಿಗೆ ಸಿಗುವ ಪ್ರಚಾರಗಳು; ಪರಸ್ಪರ ಮಾಡಿಕೊಳ್ಳುವ ಪ್ರಸ್ತಾಪಗಳು; ಬೆಂಗಳೂರಿನಿಂದ ಹೊರಗಿರುವ ಪ್ರತಿಭಾವಂತ ಅನಾಮಿಕರು; ಪುಸ್ತಕ ಪ್ರಕಟಿಸುವುದಿರಲಿ, ಜೀವನೋಪಾಯಕ್ಕೂ ತೊಳಲಾಡುವವರು; ಅವರಿಗೆ ದಕ್ಕದ ಅವಕಾಶಗಳು, ಪ್ರಚಾರಗಳು; ಹೀಗೆ ಇಲ್ಲಿ ಇನ್ನೂ ಒಂದಷ್ಟು ಬರೆಯುವ ಮನಸ್ಸಾಗುತ್ತದೆ. ಆದರೆ, ಹೀಗೆ ಬಿಡಿಬಿಡಿಯಾಗಿ ಹೇಳಿ ಹಾಗೆಯೆ ಬಿಡುತ್ತೇನೆ! ಅದು ನಮ್ಮ ಸಮಾಜದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ, ಇವತ್ತಿನ ವಾಸ್ತವ ಮತ್ತು ಮೌಲ್ಯಗಳಿಗೆ ಸಂಬಂಧಪಟ್ಟದ್ದು.

ಈಗ ಮತ್ತೆ ವಸ್ತಾರೆಯಯವರ ವಿಷಯಕ್ಕೆ ಬರುತ್ತೇನೆ. ಸಾಧ್ಯವಾದರೆ ನಾನು ಪ್ರತಿದಿನವೂ ಒಂದು ಸಲ ನೋಡುವ ಕನ್ನಡ ಸೈಟುಗಳಲ್ಲಿ ಕೆಂಡಸಂಪಿಗೆಯೂ ಒಂದು. ಒಂದಷ್ಟು ಓದುತ್ತೇನೆ. ಒಂದಷ್ಟು ಇಲ್ಲ. ನಾಗರಾಜ್ ವಸ್ತಾರೆಯವರು ಅತಿಥಿ-ಸಂಪಾದಕರಾಗಿರುವುದರಿಂದ ಅವರ ಮೊದಲ ಎರಡು ಸಂಪಾದಕೀಯಗಳನ್ನೂ ಓದಿದೆ. ಅದು ಹೆಚ್ಚಾಗಿ ಅನಾಮಿಕ ಪ್ರತಿಕ್ರಿಯೆಕಾರರ ಬಗ್ಗೆ ಇತ್ತು. ಬಯಲಿನಲ್ಲಿ ನಿಂತವರು, ಅಂದರೆ ಸಾರ್ವಜನಿಕ ಜೀವನದಲ್ಲಿ ಇರುವವರು, ತಮ್ಮ ಕೃತಿ-ಅಭಿಪ್ರಾಯವನ್ನು ಬಯಲಿನಲ್ಲಿ ಅನಾವರಣಗೊಳಿಸುವ ಸಾಹಿತಿ-ಕಲಾವಿದರು, ಎಲ್ಲಾ ತರಹದ ಪ್ರತಿಕ್ರಿಯೆಗಳಿಗೆ ಸಿದ್ಧವಾಗಿರಬೇಕಾಗುತ್ತದೆ. ಅಪಪ್ರಚಾರಗಳಿಗೂ ಸಹ. ಅನಾಮಿಕವಾಗಿ ಬರುವುದಕ್ಕೂ ಸಹ. ಇನ್ನು ಅಂತರ್ಜಾಲವಂತೂ ಅನಾಮಿಕವಾಗಿ ಪ್ರತಿಕ್ರಿಯಿಸ ಬಯಸುವವರಿಗೆ ಸ್ವಚ್ಛಂದ-ಸ್ವೇಚ್ಚಾಚಾರದ ಸ್ವರ್ಗ. ಇಂತಹ ಅನಾಮಿಕತೆಯ ಸುತ್ತಲೆ ವಸ್ತಾರೆ ಎರಡು ಬಾರಿ ಸಂಪಾದಕೀಯ ಬರೆದರು. ನನಗೆ ಅದರ ಬಗ್ಗೆ ತಕರಾರಿಲ್ಲ. ಆದರೆ ಅವರ ಎರಡನೆಯ ಲೇಖನದಲ್ಲಿ ಕೆಲವೊಂದು ಅಂಶಗಳು ನನಗೆ ಸರಿ ಕಾಣಲಿಲ್ಲ.

ಬೆಂಗಳೂರಿನಿಂದ ಹೊರಗಿರುವ ನನಗೆ ನನ್ನ ಹಲವು ವಾರಿಗೆಯ ಲೇಖಕರನ್ನು ಮಾತು-ಸ್ನೇಹ-ಪರಿಚಯದಲ್ಲಿ ತೊಡಗಿಸಿಕೊಳ್ಳಬೇಕು, ಆ ಮೂಲಕ ಇವತ್ತಿನ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು, ಮತ್ತು ಸಮಾನಮನಸ್ಕರನ್ನು ಗುರುತಿಸಿಕೊಳ್ಳಬೇಕು ಎಂದು ಅನ್ನಿಸುತ್ತದೆ. ಆದರೆ, ಪದೆಪದೆ ಸಣ್ಣಪುಟ್ಟದ್ದಕ್ಕೆಲ್ಲ ಇಮೇಲ್ ಮಾಡುವ ಅಭ್ಯಾಸವಾಗಲಿ, ಹಪಹಪಿಯಾಗಲಿ ಇಲ್ಲದವನು ನಾನು. ತಮಾಷೆ ಮತ್ತು ಮಾತಿನ ಹರಟೆಯಲ್ಲಿ ಎಷ್ಟು ಕಾಲ ಬೇಕಾದರೂ ತಳ್ಳಬಲ್ಲೆ. ಆದರೆ ಬೌದ್ಧಿಕವಾಗಿಲ್ಲದ ಯಾವೊಂದು ಬರವಣಿಗೆಯೂ, ಅದು ಒಂದೆರಡು ಸಾಲುಗಳೇ ಆಗಿರಲಿ, ಬಹಳ ಕಷ್ಟ. ಹೀಗಾಗಿಯೆ ಅನೇಕ ಸಲ ಸೌಜನ್ಯದ ಪತ್ರಗಳಿಗೂ ಉತ್ತರಿಸುವುದನ್ನು ಮುಂದಕ್ಕೆ ಹಾಕಿರುತ್ತೇನೆ ಅಥವ ಮರೆತುಬಿಟ್ಟಿರುತ್ತೇನೆ. ಹಾಗಾಗಿಯೆ ಅನೇಕ ವಾರಿಗೆಯವರೊಂದಿಗೆ ನನ್ನ ಪತ್ರವ್ಯವಹಾರ ಇಲ್ಲ.

ಆದರೂ, ಅಂತಹವರ ಲೇಖನ-ಕತೆಗಳು ಅವುಗಳಿಗೆ ಸ್ಪಂದಿಸುವಂತಹ ವಿಚಾರಗಳನ್ನು ಹೊಂದಿದ್ದರೆ ಅಂತಹ ಸಂವಾದದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಗುತ್ತದೆ. ಆ ಮೂಲಕವಾದರೂ ಅವರೊಡನೆ ವಿಚಾರ-ವಿನಿಮಯ ಸಾಧ್ಯವಾದರೆ ಆಗಲಿ ಎಂದುಕೊಳ್ಳುತ್ತೇನೆ. ಅಂತಹ ಯೋಚನೆಯ ಭಾಗವಾಗಿಯೆ, ಜೊತೆಗೆ ವಸ್ತಾರೆಯವರ ಕೆಲವು ಪ್ರಸ್ತಾಪಗಳು ಕಿರಿಕಿರಿ ಮಾಡಿದ್ದರಿಂದ ಅವರಿಗೆ ಮತ್ತು ಕೆಂಡಸಂಪಿಗೆಗೆ ಈ ಪತ್ರ ಬರೆದೆ. ಆದರೆ ಸಂವಾದದ ರೂಪದಲ್ಲಿ ಪ್ರಕಟಿಸಿ ಎಂದೂ ಕೋರಿದ್ದೆ. ಅದಕ್ಕೆ ವಸ್ತಾರೆ, “ಇದೊಂದು ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಕೆಂಡಸಂಪಿಗೆಯಲ್ಲಿ ಹಾಕಲಾಗುವುದಿಲ್ಲ,” ಎಂದರು. ಆದರೆ, ಒಮ್ಮೆ ಯೋಚಿಸಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅದು ಯಾವುದೇ ತಿರುವು ತೆಗೆದುಕೊಳ್ಳಲಿ ಬಹಿರಂಗಗೊಳಿಸದೆ ಬಿಡದ, ಆ ಮೂಲಕ ನನ್ನನ್ನೆ ಪರೀಕ್ಷೆಗೆ ಮತ್ತು ವಿಮರ್ಶೆಗೆ ಒಡ್ಡಿಕೊಳ್ಳುವ ನಾನು ಈಗ ಆ ಪತ್ರವನ್ನು ಇಲ್ಲಿ ಹಾಕುತ್ತಿದ್ದೇನೆ. (ಇದನ್ನು ಮೂರು ದಿನದ ಹಿಂದೆಯೆ ಹಾಕಬೇಕಿತ್ತು. ಆದರೆ ವಸ್ತಾರೆಯವರ ಮಾರುತ್ತರ ಬಂದ ದಿನವೆ ಇನ್ನೊಂದು ಬ್ಲಾಗ್‌ಪೋಸ್ಟ್ ಬರೆದಿದ್ದೆನಾದ್ದರಿಂದ ಒಂದೆರಡು ದಿನ ಅಂತರವಿರಲಿ ಎಂದು ಇಂದು ಹಾಕುತ್ತಿದ್ದೇನೆ.) ಇದನ್ನು ಚರ್ಚೆಗೆ ಎತ್ತಿಕೊಳ್ಳಬಯಸುವವರು ಎತ್ತಿಕೊಳ್ಳಬಹುದು ಅಥವ ಮೇಯ್ಲ್ ಮಾಡಬಹುದು. ನನ್ನ ಅಭಿಪ್ರಾಯಗಳೂ ಅವುಗಳ ಆಧಾರದ ಮೇಲೆ ಬದಲಾದರೂ ಆಗಬಹುದು. ಬೇರೆಯವರದೂ ಸಹ. ಆ ಬದಲಾವಣೆಗಳ ಬಗ್ಗೆ ಕಾಲ ಮಾತ್ರ ಏನಾದರೂ ಹೇಳಬಹುದು.

ಪ್ರೀತಿಯ ನಾಗರಾಜ್,

ನಿಮ್ಮ “ಐನೂರು ಚದರಗಳ ಅನಾಮಿಕತೆಯ ಬಿಕ್ಕಟ್ಟು” ಲೇಖನ ಓದಿ, ಒಂದೆರಡು ವಿಷಯಗಳಿಗೆ ಪ್ರತಿಕ್ರಿಯಿಸಬೇಕು ಎನ್ನಿಸಿತು. ಬ್ಲಾಗ್ ಅಥವ ವೆಬ್‌ಸೈಟುಗಳಲ್ಲಿ ಪ್ರತಿಕ್ರಿಯಿಸುವ ಅಭ್ಯಾಸ ನನಗಿಲ್ಲದಿರುವುದರಿಂದ, ಹಾಗೂ ಈ ಲೇಖನ-ಪತ್ರ ಸ್ವಲ್ಪ ವಿಸ್ತೃತವಾಗಿರುವುದರಿಂದ ಬೇರೆಯಾಗಿಯೆ ಬರೆಯುತ್ತಿದ್ದೇನೆ.

ನಿಮ್ಮ ಲೇಖನದಲ್ಲಿನ ಎರಡು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆ. ಮೊದಲನೆಯದು, ನೆರೆರಾಜ್ಯದ ಮುಖ್ಯಮಂತ್ರಿಯೊಬ್ಬರ ಬಗ್ಗೆ ಬರೆದಿದ್ದೀರಿ. ಅಲ್ಲಿ ಪ್ರಸ್ತಾಪಿಸಿರುವ ಕೆಲವೊಂದು ವಿಷಯಗಳು ನಮ್ಮಲ್ಲಿನ ರಾಜಕೀಯ ಮತ್ತು ಪ್ರಜಾಪ್ರಭುತ್ವದ ಗತಿಯನ್ನು ಗಮನಿಸುವ ನನ್ನಂತಹವನಿಗೆ ಬಹಳ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಆ ಮುಖ್ಯಮಂತ್ರಿ ಯಾರು ಎಂದು ಹೇಳಿದ್ದರೆ, ಅಥವ ಆತನ ಹೆಸರು ಹೇಳದೆ ಇರುವ ಬಯಕೆ ನಿಮ್ಮದಾಗಿದ್ದಲ್ಲಿ ಕನಿಷ್ಠ ಒಂದಷ್ಟು ಖಚಿತ ಸುಳಿವುಗಳನ್ನಾದರೂ ನೀಡಿದ್ದಲ್ಲಿ ಒಳ್ಳೆಯದಾಗುತ್ತಿತ್ತು. ಆತನ “ಅರಮನೆ” ಮತ್ತು ಅದಕ್ಕೆ ತಗುಲಿರುವ ನೂರೈವತ್ತು ಕೋಟಿ ಮೊತ್ತದ ಬಗ್ಗೆ ನಾನು ಸಂಶಯ ಪಡುತ್ತಿಲ್ಲ. ಆದರೆ, ಆತ ಯಾರು ಎನ್ನುವುದರ ಬಗ್ಗೆ, ಮತ್ತು ಆತ ಅಷ್ಟು ದುಡ್ಡನ್ನು ಹೇಗೆ ಮಾಡಿರಬಹುದು ಎನ್ನುವುದರ ಬಗ್ಗೆ ಒಬ್ಬ ಪ್ರಜೆಯಾಗಿ ನನ್ನ ಸಂಶಯ ಮತ್ತು ಕುತೂಹಲವಿದೆ. ಖಚಿತ ಮಾಹಿತಿಗಳಿರುವ ನಿಮ್ಮಂತಹವರು ಹೀಗೆ ಜನಪ್ರತಿನಿಧಿಗಳ ಬಗ್ಗೆ ಹೆಸರು ಹೇಳದೆ ಅವರನ್ನು ಅನಾಮಿಕವಾಗಿಡುವುದು ಒಳ್ಳೆಯದಲ್ಲ. ಅಂತಹ ಲಕ್ಷುರಿಯನ್ನು ಸಾಹಿತ್ಯ ಅಥವ ಪ್ರಬಂಧ ಎನ್ನುವ “ಸಾಹಿತ್ಯದ ಸವಲತ್ತಿ”ನ ಆಧಾರದ ಮೇಲೆ ಪರಿಗಣಿಸುವುದು ನನ್ನಂತಹವರಿಗೆ ಕಷ್ಟ.

ಈ ವಿಷಯ ಯಾಕೆ ಮುಖ್ಯ ಎನ್ನಲು ಇನ್ನೂ ಸ್ವಲ್ಪ ವಿವರಣೆ ಕೊಡುತ್ತೇನೆ. ಆ ಮುಖ್ಯಮಂತ್ರಿ ನಾಸ್ತಿಕ ಕರುಣಾನಿಧಿಯೆ? ಅವರಿಗೆ ಅಷ್ಟೆಲ್ಲ ಆರೋಗ್ಯವಿರುವ ಹಾಗೆ ಕಾಣಿಸುತ್ತಿಲ್ಲ. ಕೇರಳದ ಎಡರಂಗದ ಮುಖ್ಯಮಂತ್ರಿಗಳಂತೂ ಅಷ್ಟು ಶ್ರೀಮಂತಿಕೆ ಗಳಿಸಿಕೊಳ್ಳುವುದು ಅಸಾಧ್ಯ. ಇನ್ನು ಉಳಿದವರು ಅಶೋಕ್ ಚವಾಣ್ ಅಥವ ರಾಜಶೇಖರ ರೆಡ್ಡಿ. ನಿಮ್ಮ ಲೇಖನದಲ್ಲಿರುವ ಕೆಲವೊಂದು ವಿವರಗಳ ಆಧಾರದ ಮೇಲೆ, ಆ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಇರಬಹುದು; ಈ ವಿವರಗಳು ಅವರಿಗೇ ಹೆಚ್ಚು ಹೋಲುತ್ತಿದೆ, ಎನ್ನುವ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ. ಅದು ಅಲ್ಲವಾದಲ್ಲಿ ನಿಮ್ಮ ಲೇಖನ ಹುಟ್ಟಿಸುವ ಸಂಶಯಗಳು ಸಾರ್ವಜನಿಕ ಜೀವನದಲ್ಲಿ ಯಾವ ರೀತಿ ಅನಾರೋಗ್ಯಕರ ಎನ್ನುವುದನ್ನು ನಿರೂಪಿಸುತ್ತದೆ. ಈಗ ಅದು ರಾಜಶೇಖರ್ ರೆಡ್ಡಿಯೇ ಆಗಿದ್ದಲ್ಲಿ, ಮಲಗುವ ಕೋಣೆಯಿಂದ ಗೋಪುರ ಕಾಣಿಸಬಾರದು ಎನ್ನುವ ಹಠಕ್ಕೆ ಕಾರಣ ಏನಿರಬಹುದು ಎಂದು ನಾನು ಯೋಚಿಸುತ್ತೇನೆ. ಅದಕ್ಕೆ ಮತೀಯ ಕಾರಣವಿದೆಯೆ ಅಥವ ಇನ್ಯಾವ ತರಹದ ಅಸಹನೆಯಿಂದ ಅದು ಹುಟ್ಟಿದೆ? ಅದಕ್ಕೆ ಮತೀಯ ಕಾರಣವೆ ಇದ್ದಲ್ಲಿ ಅದು ಒಬ್ಬ ಜನಪ್ರತಿನಿಧಿಯ ಮತಸಹಿಷ್ಣುತೆಯ ಬಗ್ಗೆ ಹಲವಾರು ಒಳನೋಟ ನೀಡುತ್ತದೆ. ಇನ್ನು ನಾವು ಆಂಧ್ರದ ವಿರೋಧ ಪಕ್ಷಗಳಿಂದ ಕೇಳುವ ಭ್ರಷ್ಟಾಚಾರದ ಆಕ್ಷೇಪಗಳಿಗೂ ಅದು ತಾರ್ಕಿಕ-ಪುಷ್ಟಿ ಕೊಡುತ್ತದೆ. ಹಾಗಾಗಿ, ಇಂತಹ ವಿಷಯಗಳ ಬಗ್ಗೆ ಗಂಭೀರವಾಗಿ ಬರೆಯುವಾಗ ಹಾಗೂ ಸಾಮಾಜಿಕ ಕಾಮೆಂಟರಿ ಮಾಡುವಾಗ ಯಾರನ್ನೇ ಆಗಲಿ ಅನಾಮಿಕರನ್ನಾಗಿಡುವುದು, ಹಾಗೆ ಇಡಲೇಬೇಕಾಗಿ ಬಂದಾಗ ಕನಿಷ್ಟ ಕೆಲವಾದರೂ ಸುಳಿವುಗಳನ್ನು ನೀಡದಿರುವುದು ನಮ್ಮ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಸಾಹಿತ್ಯ ಮತ್ತು ಅದರ ಪ್ರಭಾವವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಯನ್ನು ಬರೆದು ಮುಂದಿನ ವಿಷಯ ಪ್ರಸ್ತಾಪಿಸುತ್ತೇನೆ. ಕೆಲವರಿಗೆ ಸಾಹಿತ್ಯ ಬಹಳ ವೈಯಕ್ತಿಕವಾದದ್ದು. ರಸಾಸ್ವಾದನೆ ಮಾಡಲಷ್ಟೆ ಅರ್ಹವಾದದ್ದು. ಅದೊಂದು ಮನರಂಜನೆಯ ವಸ್ತು. ಆದರೆ ನನ್ನ ಪ್ರಕಾರ ಸಾಹಿತ್ಯ ವೈಚಾರಿಕತೆ-ಜ್ಞಾನ-ಸಂತಸಗಳನ್ನಷ್ಟೆ ಅಲ್ಲದೆ, ಹಲವಾರು ಸಂದರ್ಭಗಳಲ್ಲಿ ಉತ್ತಮವಾದ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ ಬದಲಾವಣೆಗಳನ್ನು ತರಬಲ್ಲದು. ಬದಲಾವಣೆಯ ತುರ್ತನ್ನೂ, ಅಂತಹ ಸಂದರ್ಭವನ್ನು ಸೃಷ್ಟಿಸುವ ಕೆಲಸವನ್ನೂ ಸಾಹಿತ್ಯ ಪರೋಕ್ಷವಾಗಿ ಮಾಡುತ್ತಿರುತ್ತದೆ. ಹಾಗಾಗಿಯೆ ಸಾಹಿತ್ಯ ಮತ್ತು ಸಾಮಾಜಿಕ ಸಾಹಿತಿಗಳಲ್ಲಿ ಎಲ್ಲರಿಗಿಂತ ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆಯನ್ನು ನಾನು ಬಯಸುತ್ತೇನೆ.

ಎರಡನೆಯ ವಿಷಯ, ನೀವು ಚಿರಂಜೀವಿಯ ಬಗ್ಗೆ ಹೇಳಿರುವ “ಚಿರಂಜೀವಿ ಎಂಬ ಚಿತ್ರರಂಗದ ಧೀಮಂತ ರಾಜಕೀಯಕ್ಕೆ ಇಳಿದಿರುವುದೂ ಇದೇ ಅಮಲಿನಿಂದ ತಾನೆ? ಇಷ್ಟು ವರ್ಷಗಳ ಪರಿಶ್ರಮದಿಂದ ಅವನು ಕೂಡಿಟ್ಟ ಹಣದ ಮುಪ್ಪಟ್ಟು ಮೊತ್ತವನ್ನು ಆತ ಬರೇ ಪಕ್ಷ ಕಟ್ಟಿ ಮಾಡಿಕೊಂಡನಂತೆ!” ಎಂಬ ಆ ಎರಡು ವಾಕ್ಯಗಳ ಬಗ್ಗೆ. “ಚಿರಂಜೀವಿಯ ಅಮಲಿ”ನಿಂದಾಚೆಗೆ ನಿಮಗೆ ಏನೂ ಕಾಣಿಸದೆ ಹೋಗಿರುವುದರ ಬಗ್ಗೆ ನನ್ನ ತಕರಾರು. ಆಂಧ್ರದಂತಹ ಒಂದು ದೊಡ್ಡ ರಾಜ್ಯದಲ್ಲಿ ಕೇವಲ ಮೇಲ್ವರ್ಗದ ಜನರೆ ತಮ್ಮ ಜನ್ಮಜಾತ ಹಕ್ಕಾಗಿ ರಾಜಕೀಯ ನಾಯಕತ್ವ ಅನುಭವಿಸುತ್ತಿರುವುದು ತಮಗೆ ಗೊತ್ತಿಲ್ಲದೆ ಇರಬಹುದು. ಚಿರಂಜೀವಿ ಈ ಸಲ ಚುನಾವಣೆಗೆ ನಿಂತ ಒಂದೇ ಕಾರಣದಿಂದಾಗಿ ಅಲ್ಲಿ ಈ ಸಲ ಅಲ್ಲಿಯ ಬಲಿಷ್ಠ ಜಾತಿಗಳು ಅಲ್ಲಿಯ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಜೊತೆಗೆ ನ್ಯಾಯವಾಗಿಯೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಾಗಿದ್ದಾರೆ. ಈಗ ಚಿರಂಜೀವಿ ಅಧಿಕಾರಕ್ಕೆ ಬಂದಿಲ್ಲದಿರಬಹುದು. ಆದರೆ ಆತ ಸಕಾರಣವಾಗಿಯೆ ಎತ್ತಿದ ಸಾಮಾಜಿಕ ನ್ಯಾಯದ ಪ್ರಶ್ನೆಯಿಂದಾಗಿ, ಈ ಸಲ ಸರಳ ಬಹುಮತ ಪಡೆದುಕೊಂಡರೂ ಅಲ್ಲಿಯ ಹಾಲಿ ಮುಖ್ಯಮಂತ್ರಿ ಆ ರಾಜ್ಯದ ಸಾಮಾಜಿಕ ಅಸಮಾನತೆಯನ್ನು ಗಣನೆಗೆ ತೆಗೆದುಕೊಂಡು ಈ ಸಲದ ಮಂತ್ರಿಮಂಡಲದಲ್ಲಿ ಹಿಂದುಳಿದವರಿಗೆ ಶೇ. ೫೦ ರಷ್ಟು ಸ್ಥಾನಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಚಿರಂಜೀವಿಯ ಸಾಧನೆ ಎಂದು ಪರಿಗಣಿಸುತ್ತೇನೆ. ಚಿರಂಜೀವಿಯೆಂಬ ನಟನೂ, ಆತನ ಪ್ರಭಾವವೂ, ಆತ ರಾಜಕೀಯಕ್ಕೆ ಇಳಿದು ದುಡ್ಡು ಮಾಡಿಕೊಂಡಿರುವುದು(?), ಇವೆಲ್ಲ ತಮಗೆ ತಿಳಿದಿದೆ. ಆದರೆ ಆತನ ರಾಜಕೀಯ ಪ್ರವೇಶದಿಂದಾಗಿ ಅಲ್ಲಿ ನಡೆಯುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳು, ಆಗಬೇಕಿರುವ ಸುಧಾರಣೆಗಳು ತಮಗೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು “ಅಮಲು” ಎಂದು ಹೇಳಿ ತಾವು ನಗಣ್ಯ ಮಾಡುತ್ತಿರುವುದು ಮತ್ತು ಆ ಮೂಲಕ ಅವೆಲ್ಲವನ್ನೂ ನಿರಾಕರಿಸುತ್ತಿರುವುದನ್ನು ಅಪಾಯಕಾರಿ ಎಂದು ಭಾವಿಸುತ್ತೇನೆ. ಸಾಹಿತ್ಯದ ಅಥವ ಲಘು-ಬರವಣಿಗೆಯ ಹೆಸರಿನಲ್ಲಿ ತೋರಿಸುವ ಸಾಮಾಜಿಕ ಬೇಜವಾಬ್ದಾರಿ ಎಂತಲೂ ಭಾವಿಸುತ್ತೇನೆ.

ನಮಸ್ಕಾರ,
ರವಿ…

Add a Comment

required, use real name
required, will not be published
optional, your blog address