ಗುಪ್ತರು, ನಾಮರಹಿತರು, ಹಂದಿ, ಮತ್ತು ಸಸ್ಯಾಹಾರ
Posted Under: Uncategorized
ಈಗೊಂದು ತಿಂಗಳಿನಿಂದ ತುರಿಸಿಕೊಳ್ಳಲೂ ಬಿಡುವಿಲ್ಲ. ಬರೆಯುವುದಿರಲಿ, ಅದರ ಬಗ್ಗೆ ಯೋಚಿಸುವುದೂ ಸಾಧ್ಯವಾಗಿರಲಿಲ್ಲ. ಈ ಒಂದೇ ತಿಂಗಳಿನಲ್ಲಿ Windows 2000, Xp, Vista, 7, Windows CE, Appleನವರ OS X, Linux, QNX, ಹೀಗೆ ಇದ್ದಬದ್ದದ್ದರೆಲ್ಲ ಕೆಲವು ಪಿಸಿಐ ಮತ್ತು ಯುಎಸ್‌ಬಿ drivers ಬರೆಯುವ ಕೆಲಸ. ಇಷ್ಟಿದ್ದರೂ ನಾಲ್ಕು ವಾರದ ಹಿಂದೆ ಒಂದು ವಿಷಯದ ಬಗ್ಗೆ ಪ್ರತಿಕ್ರಿಯಿಸಲೇ ಬೇಕು ಎನ್ನಿಸಿತು. ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್‌ಮಟ್ಟು ಮತ್ತು ಜಿ.ಕೆ.ಗೋವಿಂದ್‌ರಾವ್‌ರವರ ಲೇಖನಕ್ಕೆ ಪ್ರತಿಯಾಗಿ ಶಿವಸುಂದರ್ ಮತ್ತು ಅರವಿಂದ ಚೊಕ್ಕಾಡಿ ಪ್ರತಿಕ್ರಿಯಿಸಿದ್ದರು. ಶಿವಸುಂದರ್ ಬರೆದಾಗಲೆ ಅದಕ್ಕೆ ಪೂರಕವಾಗಿ ಬರೆಯಬೇಕೆನ್ನಿಸಿತ್ತು. ಆಗಿರಲಿಲ್ಲ. ಚೊಕ್ಕಾಡಿಯವರು ಪತ್ರ ಕಂಡ ತಕ್ಷಣ ಸ್ವಲ್ಪ ಬಿಡುವು ಮಾಡಿಕೊಂಡು ಬರೆದೆ. ಅದು “ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ” ಎಂದು ಪ್ರಕಟವಾಯಿತು.
ಇದೆಲ್ಲ ಇಲ್ಲಿ ಹೇಳಲು ಇನ್ನೊಂದು ಕಾರಣವಿದೆ. ಅದು ನನ್ನ ವ್ಯಸ್ತ ಸಮಯದ ಮತ್ತು ಬರವಣಿಗೆಯಿಂದ ದೂರವಿದ್ದ ವಿಷಯದ ಬಗ್ಗೆ. ಇದೇ ಸಮಯದಲ್ಲಿ ಈ ಬ್ಲಾಗಿನಲ್ಲಿ ಮೂರ್ನಾಲ್ಕು ಕಾಮೆಂಟುಗಳು “ಅವರು ನೀವೇನಾ? ಅವರು ನೀವೆ.” ಎಂದು ಬಂದಿವೆ. ಈ ಬ್ಲಾಗು ನೋಡುವ ಓದುಗರಿಗೆ ಗೊತ್ತಿರುವಂತೆ ಇಂಟರ್ನೆಟ್‌ನ ಚರ್ಚೆ/ಪ್ರತಿಕ್ರಿಯೆಗಳಲ್ಲಿ ನಾನು ಪಾಲ್ಗೊಂಡಿರುವುದು ಅಪರೂಪ. ಯಾರು ಯಾರದೊ ಹೆಸರಿನಲ್ಲಿ, ಗುಪ್ತನಾಮದಲ್ಲಿ, ಅನಾಮಿಕವಾಗಿ ಎಲ್ಲ ಪ್ರತಿಕ್ರಿಯಿಸುವ ಸಾಧ್ಯತೆ ಇರುವ ಇಂಟರ್ನೆಟ್‌ನಲ್ಲಿ ಬೇರೆ ಕಡೆ ಪ್ರತಿಕ್ರಿಯಿಸುವಾಗಲೂ ಲಾಗಿನ್ ಆಗಿ ಮಾಡಬಹುದಾದ ಕಡೆ ಮಾತ್ರ ಇಲ್ಲಿಯವರೆಗೆ ನಾನು ಪ್ರತಿಕ್ರಿಯಿಸಿದ್ದೇನೆ. ಈ ಮುಖೇಡಿಗಳ ಸಹವಾಸ ನನ್ನಲ್ಲಿ ತೀವ್ರ ತಿರಸ್ಕಾರ ಮೂಡಿಸುತ್ತದೆ.
ತಿಂಗಳ ಹಿಂದೆ ಕೆಂಡಸಂಪಿಗೆಯ ಬಗ್ಗೆ ಒಂದು ಟಿಪ್ಪಣಿ ಇಲ್ಲಿ ಬರೆದಿದ್ದೆ. ಅದು ಅನಾಮಿಕತೆಯ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಇತ್ತು. ಅದೇ ತಾಣದಲ್ಲಿ ಯಾರೋ ಓದುಗರು “ವರಾಹ” ಎನ್ನುವ ಹೆಸರಿನಲ್ಲಿ ಕಾಮೆಂಟ್ ಮಾಡುತ್ತಾರೆ. ಅದು ನಾನೇ ಇರಬೇಕು ಎಂದು ಕೆಲಸವಿಲ್ಲದ ಮತ್ತೊಬ್ಬ ಅವಿವೇಕಿ ಬಡಗಿಯೊಬ್ಬನಿಗೆ ಹೊಳೆದು ಬಿಟ್ಟಿದೆ. ಇಲ್ಲಿ ಸ್ವಲ್ಪ ಖಾರವಾಗಿ ಬರೆಯುತ್ತೇನೆ. ಯಾಕೆಂದರೆ ಅದು ಅನಾಮಿಕವಾಗಿ ಬರೆಯುವವರ ಬಗ್ಗೆ ನನಗಿರುವ ತಿರಸ್ಕಾರ ಮತ್ತು ವಿರೋಧವನ್ನು ಸ್ಪಷ್ಟವಾಗಿಯೆ ತೋರಿಸಲಿ ಎಂದು.
ಸುಮಾರು ಎರಡೂವರೆ ವರ್ಷದ ಹಿಂದೆ ಬರೆದ “ಇಂಟರ್ನೆಟ್‌ನಲ್ಲಿ ನವಗ್ರಹ ಕಾಟ” ಲೇಖನದಲ್ಲಿ ಇಂತಹ ಗುಪ್ತ ಹೆಸರುಗಳನ್ನು ಇಟ್ಟುಕೊಂಡು ಏನೆಂದರದು ಬರೆಯುವ ಮತ್ತು ಚರ್ಚಿಸುವ ಜನರ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದೆ. ಕನ್ನಡದ ಬ್ಲಾಗು ಲೋಕದಲ್ಲಂತೂ ಗುಪ್ತನಾಮಗಳಿಂದ ಮತ್ತು ಅನಾಮಿಕ ಸೌಲಭ್ಯಗಳಿಂದ ಬರೆಯುವ ಮತ್ತು ಪ್ರತಿಕ್ರಿಯಿಸುವ ದೊಡ್ಡ ಪಡೆಯೇ ಇದೆ. ಕೆಲವು ಲೇಖಕರಿಗಂತೂ ಲಿಂಗಪರಿವರ್ತನೆ ತಲೆಮರೆಸಿಕೊಳ್ಳುವ ಸುಲಭೋಪಾಯ. ಇದರಲ್ಲಿ ಪತ್ರಕರ್ತರದೇ ದೊಡ್ಡ ಗುಂಪಿರಬೇಕು. ಅವರಿಗೆ ತಮ್ಮ ಕೆಲಸದ ಸ್ಥಳದ ಒತ್ತಡದಿಂದ ಮತ್ತು ನೌಕರಿಯ ಭದ್ರತೆಯ ದೃಷ್ಟಿಯಿಂದ ಅದು ಅವಶ್ಯಕವೂ ಆಗಿರಬಹುದು. ಆದರೆ ಅದು ಸರಿ ಆಗಿರಲೇಬೇಕು ಅಂತಿಲ್ಲ. “ಸರಿ” ಅಲ್ಲದ ಎಲ್ಲವನ್ನೂ ನಾನು ನಿರಾಕರಿಸ ಬಯಸುತ್ತೇನೆ.
ಎಲ್ಲಾ ವಿಷಯಗಳಿಗಿಂತ ಮುಖ್ಯವಾಗಿ ಸಾಮಾಜಿಕ ವಿಷಯಗಳ ಬಗ್ಗೆ ಗುಪ್ತವಾಗಿ ಬರೆಯುವ ಜನ ತಮ್ಮ ಬದ್ಧತೆಯ ಬಗ್ಗೆ ಪ್ರಾಮಾಣಿಕವಾಗಿಲ್ಲ ಎಂದು ನನ್ನ ಭಾವನೆ. ಅದು ಅವರ ಅಪ್ರಾಮಾಣಿಕತೆಯನ್ನು, ಹೇಡಿತನವನ್ನು, ಬೇಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಅವರು ಪ್ರಸ್ತಾಪಿಸುವ ವಿಷಯ ಎಷ್ಟೇ ಗಂಭೀರದ್ದಾಗಿರಲಿ ಅವರ ಗುಪ್ತತೆ ಮತ್ತು ಅನಾಮಿಕತೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಕೊನೆಗೆ ದ್ರೋಹವನ್ನೆ ಬಗೆಯುತ್ತದೆ. ಜನ ಪ್ರಬುದ್ಧರಾಗುತ್ತ ಹೋದ ಹಾಗೆ ಮುಕ್ತರಾಗುತ್ತ ಹೋಗಬೇಕೆ ಹೊರತು ಗುಪ್ತರಾಗುತ್ತ ಹೋಗಬಾರದು. ಗಾಂಧಿ ಆದರ್ಶವಾಗಿರುವ ಯಾರಿಗೂ ಮುಕ್ತವಾಗಿಲ್ಲದೆ ಗುಪ್ತವಾಗಿರಲು ಸಾಧ್ಯವಿಲ್ಲ.
ನನ್ನ ಬರವಣಿಗೆಯನ್ನು ಸೂಕ್ಷವಾಗಿ ಗಮನಿಸಿರುವ ಯಾರಿಗಾದರೂ ನನ್ನ ಅಭಿಪ್ರಾಯ ಹೀಗೆಯೆ ಇರಬಹುದು ಎಂದು ಗೊತ್ತಿರುತ್ತದೆ. ಆದರೆ ಅನಾಮಿಕವಾಗಿ “ಅವರು ನೀವೇನಾ?” ಎನ್ನುವ ಓದುಗರಿಗೆ ಆ ಸೂಕ್ಷ್ಮತೆ ಗೊತ್ತಾಗುವುದಿಲ್ಲ ಎನ್ನಿಸಿ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡೋಣ ಎಂದು ಇಷ್ಟೆಲ್ಲ ಬರೆದಿದ್ದೇನೆ.
ಕಳೆದ ವರ್ಷಾಂತ್ಯದಲ್ಲಿ ಮಾಂಸದ mass production, ಅದಕ್ಕೆ ಬಳಕೆಯಾಗುವ ಸಂಪನ್ಮೂಲಗಳು, ನಿಸರ್ಗದ ಮೇಲಿನ ಅದರ ಒತ್ತಡ ಮತ್ತು ದುಷ್ಪರಿಣಾಮಗಳು, ಮುಂತಾದುವನ್ನು ಪ್ರಸ್ತಾಪಿಸುತ್ತ, ಅವನ್ನು ತಡೆಗಟ್ಟಲು ನಮ್ಮನಮ್ಮ ನೆಲೆಯಲ್ಲಿ ನಾವು ಸಸ್ಯಾಹಾರಿಗಳೂ, Locovoreಗಳೂ ಆಗಬೇಕಾದ ಅವಶ್ಯಕತೆಯ ಬಗ್ಗೆ ಬರೆದಿದ್ದೆ. ಆದರೆ ನಾನು ಸ್ವತಃ ಇಲ್ಲಿಯವರೆಗೆ ಪೂರ್ಣವಾಗಿ ಸಸ್ಯಾಹಾರಿಯಾಗಿರಲಿಲ್ಲ. ಅದಕ್ಕೆ ಕೆಲವೊಂದು ಕಾರಣಗಳನ್ನೂ ಆ ಲೇಖನದಲ್ಲಿ ಬರೆದಿದ್ದೆ. ಆದರೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತಲೆ ಇತ್ತು. ಹಾಗೆಯೆ ಮೈಯ್ಯಲ್ಲಿ ಕೊಬ್ಬೂ. ವಾರಕ್ಕೊಂದು ಅಥವ ಎರಡು ದಿನ ತಿಂದರೂ ಮಿಕ್ಕೆಲ್ಲ ದಿನಗಳ ಸಂಯಮವನ್ನು ಅದು ಮೀರುತ್ತಿತ್ತು. ಈಗೊಂದು ತಿಂಗಳ ಹಿಂದೆ ಒಂದು ರೀತಿಯ ನಿರ್ವಿಕಾರದ ಹೊತ್ತಿನಲ್ಲಿ ತೀರ್ಮಾನಿಸಿದೆ. ಕೇಕಿನಲ್ಲಿ ಇರಬಹುದಾದ ಮೊಟ್ಟೆಯೊಂದನ್ನು ಬಿಟ್ಟು ಮಿಕ್ಕೆಲ್ಲ ರೀತಿಯ ಮಾಂಸವನ್ನೂ ಈ ದೇಶದಲ್ಲಿ ವರ್ಜಿಸಿದ್ದೇನೆ.
ಹೌದು. ಈ ದೇಶದಲ್ಲಿ ಮಾತ್ರ. ನನ್ನ ದೇಶದಲ್ಲೂ ಬಹುಪಾಲು ಮುಂದುವರೆಯುತ್ತದೆ. ಯಾವುದಾದರೂ ಹಳ್ಳಿಗೆ ಹೋದಾಗ, ಅದೇ ಹಳ್ಳಿಯ ಪರಿಸರದಲ್ಲಿ ಸಿಗುವ ಕೋಳಿ-ಮೀನು ಸಿಕ್ಕರೆ ಅದನ್ನು ತಿನ್ನುವ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇನೆ. ಇಲ್ಲಿ “ವರಾಹ” ಎನ್ನುವುದು ಪ್ರಸ್ತಾಪವಾಗಿರುವುದರಿಂದ ಹಂದಿ ಮಾಂಸದ ಬಗ್ಗೆಯೂ ಬರೆಯೋಣ ಎಂದು ಬರೆಯುತ್ತಿದ್ದೇನೆ. ಇತ್ತಿಚೆಗೆ ತಾನೆ “ಕಾನೂರು ಹೆಗ್ಗಡಿತಿ” ಇನ್ನೊಮ್ಮೆ ಓದಿದೆ. ಮಲೆನಾಡಿನಲ್ಲಿ ಎಂತೆಂತಹ ಹಂದಿಗಳನ್ನೆಲ್ಲ ತಿನ್ನುತ್ತಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಕಾನೂರಿನ ಪುಟ್ಟಣ್ಣ ಮುಳ್ಳುಹಂದಿಯನ್ನು ಕೊಚ್ಚಿಕೊಚ್ಚಿ ಕೊಲ್ಲುವ ದೃಶ್ಯವನ್ನು ಕುವೆಂಪು ರಕ್ತಸಿಕ್ತವಾಗಿ ವರ್ಣಿಸಿದ್ದಾರೆ. ನಮ್ಮಲ್ಲಿ, ಕೊಡಗಿನಲ್ಲಿ, ಮಲೆನಾಡಿನಲ್ಲಿ (ಮೊನ್ನೆಮೊನ್ನೆ ತೀರ್ಥಹಳ್ಳಿಯ ಮಲೆನಾಡು ಕ್ಲಬ್ಬಿನಲ್ಲಿ), ಅಮೆರಿಕದಲ್ಲಿ ಸಿಗುವ ನಾನಾತರಹದ ಪೆಪ್ಪರೋನಿ/ಸಾಸೇಜ್, ಬಾಯಲ್ಲಿ ಇಟ್ಟುಕೊಂಡರೆ ಬೆಣ್ಣೆಯಂತೆ ಕರಗುವ ಸ್ಪೇನಿನ Aged Ham, smoked ham, ಮುಂತಾದುವನ್ನೆಲ್ಲ ತಿಂದಿರುವ ನಾನು ಬಹುಶಃ ಇನ್ನೆಂದೂ ಹಂದಿ ತಿನ್ನುವುದು ಅಸಾಧ್ಯ. ಯಾಕೆಂದರೆ ಅದರಷ್ಟು ಮಾಸ್-ಪ್ರೊಡ್ಯೂಸ್ಡ್ ಮಾಂಸ ಮತ್ತೊಂದಿಲ್ಲ ಮತ್ತು ಕಾಡುಹಂದಿ ನನಗೆ ಸಿಗುವುದಿಲ್ಲ.
ಹಾಗೆಯೆ, ಮಾಂಸಾಹಾರ ಮಾಡದವರು ಶ್ರೇಷ್ಠರು ಮತ್ತು ಸಾತ್ವಿಕರು, ಮಾಂಸಾಹಾರಿಗಳು ತಾಮಸಿಗಳು ಮತ್ತು ಎರಡನೆಯ ದರ್ಜೆಯವರು ಎನ್ನುವ ಯಾವೊಂದು ಜನಾಂಗೀಯ ವಾದವನ್ನು ನಾನು ನಿರಾಕರಿಸುತ್ತೇನೆ. ಅದಕ್ಕೆ ಪೂರಕವಾಗಿಯೆ ಮೇಲೆ ಹಂದಿಯ ಬಗ್ಗೆ ಬರೆದದ್ದು. ಸಸ್ಯಾಹಾರದ ಪರ ನನ್ನ ನಿಲುವು ಸಂಪೂರ್ಣವಾಗಿ Mass production ಗೆ, ಇತ್ತೀಚಿನ ಶತಮಾನಗಳ ಯಾಂತ್ರೀಕರಣಕ್ಕೆ, ಆಹಾರದ ವಿಚಾರದಲ್ಲಿ ಮನುಷ್ಯ ಕಳೆದುಕೊಳ್ಳುತ್ತ ಬಂದಿರುವ ಸ್ವಾವಲಂಬನೆಗೆ, ಪರಿಸರದ ಅಸಮತೋಲನಕ್ಕೆ, ನಿಸರ್ಗದ ಸಂಪನ್ಮೂಲಗಳ exploitationಗೆ ಸಂಬಂಧಪಟ್ಟದ್ದು. ಸಸ್ಯಾಹಾರದ ವಿಚಾರದಲ್ಲೂ ಈ ವಾದವನ್ನು ಮುಂದುವರೆಸಿದರೆ, ಸ್ಥಳೀಯವಾಗಿ ಬೆಳೆದದ್ದನ್ನಷ್ಟೆ ದೈನಂದಿನ ಊಟಕ್ಕೆ ಬಳಸಬೇಕು. ಸದ್ಯಕ್ಕೆ ಭಾರತಕ್ಕೆ ಹಿಂದಿರುಗುವ ತನಕ ಈ ವಿಚಾರದಲ್ಲಿ ನಾನು ಕಠಿಣವಾಗಲು ಸಾಧ್ಯವಿಲ್ಲ. ಮನೆಯಲ್ಲಿ ಸಮಸ್ಯೆ ಗಂಭೀರವಾಗಿಬಿಡಬಹುದು!
ವಾರದಿಂದೀಚೆಗಂತೂ ಇಡೀ ವಿಶ್ವ ಇರಾನಿನತ್ತ ನೋಡುತ್ತಿದೆ. ಜಾತ್ಯತೀತ ಪ್ರಜಾಪ್ರಭುತ್ವದತ್ತ ಇರಾನ್ ಮುಖಮಾಡಿದೆ ಎನ್ನಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಿಜೆಪಿ-ಸಂಘ-ಹಿಂದುತ್ವ-ಹಿಂದುಯಿಸಮ್-ರಾಷ್ಟ್ರೀಯತೆ ಮುಂತಾದ ಚರ್ಚೆಗಳೂ ಕುತೂಹಲಕಾರಿಯಾಗಿವೆ. Outlook ಮತ್ತು Tehelka ಗಳಲ್ಲಂತೂ ಉತ್ತಮ ಲೇಖನಗಳು ಬರುತ್ತಿವೆ. ಆದರೂ ಇತ್ತೀಚಿನ ಚುನಾವಣೆಯನ್ನು ಹಿಂದುತ್ವದ ನಿರಾಕರಣೆ, ಜಾತ್ಯತೀತತೆಯ ಎತ್ತಿಹಿಡಿಯುವಿಕೆ, ಎಂದೆಲ್ಲ ಕೆಲವು ಪ್ರಗತಿಪರರು overrated ಆಗಿ ಸಾರುತ್ತಿದ್ದಾರೆ ಎನ್ನಿಸುತ್ತದೆ. ಆದರೆ ಕೊನೆಗೆ ಇದೇ ಒಂದು ಜನಾಭಿಪ್ರಾಯ ರೂಪಿಸಬಲ್ಲದಾದರೆ ಮತ್ತು ಅದು ನೈತಿಕವಾಗಿ ಸರಿಯಾದುದೂ ಹೌದು ಎಂದು ಜನರಿಗೆ ಮನವರಿಕೆ ಮಾಡಿಕೊಡಬಹುದಾದರೆ ಅದು ಆಗಲೇಬೇಕು.
ಈ ನಡುವೆ ಏನನ್ನೂ ಬರೆಯುತ್ತಿಲ್ಲವಾದ್ದರಿಂದ ನಾನು ಓದಿದ ಕೆಲವು ಮುಖ್ಯ ಲೇಖನಗಳನ್ನು ಇಲ್ಲಿ ಪ್ರತಿವಾರ ಹಂಚಿಕೊಳ್ಳಲಿದ್ದೇನೆ. ಇಂದು ದೇಶದ ಪ್ರಸಿದ್ಧ ಚಿಂತಕ ಆಶಿಶ್ ನಂದಿಯವರ ಲೇಖನ ಓದಿದೆ, ತೆಹೆಲ್ಕಾದಲ್ಲಿ. ಕಳೆದ ಚುನಾವಣೆಯ ಫಲಿತಾಂಶ, ಗಾಂಧಿ, ಸಾವರ್ಕರ್, ಅನೇಕತೆ, ರಾಷ್ಟ್ರೀಯತೆ, ದೇಶ, ಅದರ ಬಗ್ಗೆ ಪಾಶ್ಚಾತ್ಯ ಕಲ್ಪನೆ, ಯೂರೋಪಿಯನ್ ಯೂನಿಯನ್ ಪರಿಕಲ್ಪನೆ, ರಸಹಿಂಡಿದ ಕಬ್ಬನ್ನು ಜಗಿಯುತ್ತಿರುವ ಚೀನಾ ಮತ್ತು ಭಾರತ ಮುಂತಾದ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ಅವರು ಚುನಾವಣೆಯ ಫಲಿತಾಂಶದ ಬಗ್ಗೆ ಹೇಳಿರುವುದನ್ನು ನನಗೆ ಒಪ್ಪಿಕೊಳ್ಳಲಾಗದಿದ್ದರೂ ಮಿಕ್ಕವನ್ನು ಒಪ್ಪಿಕೊಳ್ಳದೆ ಇರಲಾಗುತ್ತಿಲ್ಲ.
ಸುಗತ ಕರ್ನಾಟಕದ ರಾಜಕೀಯದ ಇತ್ತಿಚಿನ ಘಟನಾವಳಿಗಳ, ಒಳಸುಳಿಗಳ ಬಗ್ಗೆ ಬರೆದಿದ್ದಾರೆ. ಅಂತರ್ರಾಜ್ಯ ಆಯಾಮ ತೆಗೆದುಕೊಳ್ಳುತ್ತಿರುವ ರಾಜ್ಯ ರಾಜಕಾರಣ ನೈತಿಕ ರಾಜಕಾರಣದಿಂದ ದೂರ ಸಾಗುತ್ತಿದೆ. ಹಸಿದ ನರಿಗಳು ಅಧಿಕಾರಕ್ಕೆ ಕಾಯುತ್ತಿದ್ದಾರೆ. ಸ್ವಚ್ಚ ರಾಜಕಾರಣಕ್ಕಲ್ಲ. ಸಿದ್ಧಾಂತರಹಿತ ಪಕ್ಷಾಂತರವನ್ನು ಪ್ರೋತ್ಸಾಹಿಸದ ಮತ್ತು ಭ್ರಷ್ಟರನ್ನು ಪುರಸ್ಕರಿಸದ ರಾಜಕಾರಣದತ್ತ ರಾಜ್ಯದ ಕಾಂಗ್ರೆಸ್ ಗಮನ ನೀಡಬೇಕಿದೆ. ಅದೇ ಅವರ ಮತ್ತು ನಾಡಿನ ಭವಿಷ್ಯವನ್ನು ಚೆನ್ನಾಗಿಡುತ್ತದೆ.