ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ…

This post was written by admin on July 1, 2009
Posted Under: Uncategorized

ಇವತ್ತಿನ ಸುದ್ದಿ: ದ.ಕ, ಉಡುಪಿ: ವ್ಯಾಪಕ ಮಳೆ (ಪ್ರಜಾವಾಣಿ, ಜುಲೈ 2, 09)

ಎರಡುಮೂರು ವಾರದ ಹಿಂದೆ Outlook ಪತ್ರಿಕೆಯ ತಮ್ಮ “Bangalore Byte”ನಲ್ಲಿ ಸುಗತ ರಾಜು “A Poetic Implosion” ಎನ್ನುವ ಲೇಖನ ಬರೆದಿದ್ದರು. ಮಂಗಳೂರಿನಿನಲ್ಲಿ ಶ್ರೀರಾಮ ಸೇನೆ ಹೆಂಗಸರ ಮೇಲೆ ದಾಳಿ ಮಾಡಿದ್ದು ಚುನಾವಣೆಯಲ್ಲಿ ಯಾವುದೇ ತರಹದ ಕೋಪೋದ್ರಿಕ್ತ ಪ್ರತಿಕ್ರಿಯೆಯನ್ನು ತೋರಿಸದಿದ್ದರೂ ಕನಿಷ್ಟ ಎರಡು ಉತ್ತಮ ಕವನಗಳಿಗೆ ಜನ್ಮ ನೀಡಿತು ಎಂದು ಅದರಲ್ಲಿ ಅವರು ಬರೆದಿದ್ದರು. ಅದು ಎರಡು ಕನ್ನಡ ಕವನಗಳ ಬಗ್ಗೆ. ಅವರು ಉದಾಹರಿಸಿದ್ದ ಮೊದಲ ಕವನ ಕನ್ನಡದ ಪ್ರಸಿದ್ಧ ಕವಯತ್ರಿ ಪ್ರತಿಭಾ ನಂದಕುಮಾರ್‌‍ರದು. ಎರಡನೆಯ ಕವನ ಉದಯೋನ್ಮುಖ ಕವಯತ್ರಿ ಭಾರತಿ ದೇವಿಯವರದು.

ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂವಹನ ಕಾರ್ಯಕ್ರಮದಲ್ಲಿ ಭಾರತಿಯವರನ್ನು ಭೇಟಿಯಾಗಿದ್ದೆ. ಅವರು ಕವಯತ್ರಿ ಎಂದು ಗೊತ್ತಿರಲಿಲ್ಲ. ಹಾಗಾಗಿ ಸುಗತ ಪ್ರಸ್ತಾಪಿಸಿದ್ದ ಭಾರತಿ ದೇವಿ ಯಾರು ಎಂದು ನನಗೆ ಖಚಿತವಾಗಿ ಹೊಳೆಯಲಿಲ್ಲ. ಅನುವಾದದ ವಿಷಯವೊಂದಕ್ಕೆ ನಾವಿಬ್ಬರೂ ಒಂದೆರಡು ಬಾರಿ ಇಮೇಲ್ ಸಂಪರ್ಕದಲ್ಲಿದ್ದರೂ ಅವರೆ ಈ ಕವಯತ್ರಿ ಎಂದು ಖಾತ್ರಿ ಇರಲಿಲ್ಲ. ಅವರ ಇಮೇಲ್ ಹೆಸರಿನಲ್ಲಿ “ದೇವಿ” ಇರಲಿಲ್ಲ!. ಖಾತ್ರಿಯಾದ ನಂತರ ಅವರ ಕವನ ಮತ್ತು ಅದರ ವಾಚನವನ್ನು ಕಳುಹಿಸಲು ಕೋರಿದ್ದೆ.

ಕವಯತ್ರಿ ಸವಿತಾ ನಾಗಭೂಷಣರ ಕವನ ವಾಚನದ ವಿಡಿಯೊ ಬಗ್ಗೆ ಬರೆಯುತ್ತ ಹಿಂದೊಮ್ಮೆ ನನ್ನ ಕವನಗ್ರಾಹ್ಯದ ಬಗ್ಗೆ ಬರೆದಿದ್ದೆ. ಮನಸ್ಸಿನಲ್ಲಿ ಕವನ ಓದಿಕೊಳ್ಳುವುದಕ್ಕಿಂತ ಅದರ ಗಟ್ಟಿ ಓದು ಅಥವ ಕವಿಗಳಿಂದಲೆ ಕೇಳುವ ಅದರ ವಾಚನ ನಿಜಕ್ಕೂ ಅದ್ಭುತ. ಇಲ್ಲಿ ಭಾರತಿ ದೇವಿಯವರ ಕವನ ಮತ್ತು ಅದರ ಆಡಿಯೊ ರೂಪ ಇದೆ. ಮಂಗಳೂರಿನ ಕನ್ನಡಿಗರ ವಿಭಿನ್ನ ಕನ್ನಡದ ಗತ್ತಿನಲ್ಲಿ ಸ್ವತಃ ಕವಿ ವಾಚಿಸಿದ್ದಾರೆ. ಓದಿ. ಕೇಳಿ.

ಅವಳಿಗೆ ನಗಲು ಅನುಮತಿ ಇಲ್ಲ, ಅಳಲು ಕಣ್ಣೀರಿಲ್ಲ…
ಕವಿ: ಭಾರತಿ ದೇವಿ

ನೇತ್ರಾವತಿಯ ನಗು ಬಂಡೆಗಳಿಗೆ ಬಡಿದೂ ಬಡಿದೂ
ಕೊನೆಗೊಮ್ಮೆ ಚಿಂದಿಯಾಗಿ ಇಲ್ಲವಾಯಿತು
ಅವಳು ಕಣ್ಣೀರು ಹರಿಸಿ ಹರಿಸಿ
ಬತ್ತಿಹೋಗಿದ್ದಾಳೆ…
ಅವಳ ಬೋಳು ಬಂಡೆಗಳ ಸಹಜ ಬೆತ್ತಲೆಗೆ
ಕೇಸರಿ ಬಟ್ಟೆ ಹೊದೆಸಲಾಗಿದೆ…
ನೇತ್ರಾವತಿಯ ತುಂಬಾ ಬಂಡೆಗಳು
ಅಲ್ಲಿ ಯಾವುದೂ ಸುರಳೀತ ಹರಿದುಹೋಗುವುದಿಲ್ಲ!

ಅವಳ ಮಕ್ಕಳು ಜೊತೆಗೆ ಕಿಲಿಕಿಲಿ ನಗುವಾಗ
ಕತ್ತಿ, ದೊಣ್ಣೆ, ಚೂರಿ ಹಿಡಿದ ’ಅವರು’ ಬರುತ್ತಾರೆ
ನೇತ್ರಾವತಿ ಬೆಚ್ಚಿ ’ಮಗಳನ್ನು’ ಚಿಂದಿಸೀರೆಯಡಿ
ಅಡಗಿಸಿ ಅತ್ತಿತ್ತ ನೋಡುತ್ತಾಳೆ
ಸ್ವಾತಂತ್ರ್ಯ ದೇವತೆಗೆ ಚರಮ ಗೀತೆ ಹಾಡುತ್ತಾಳೆ

ಅವಳೂರ ಯಾವ ಬಸ್ಸುಗಳೂ ಈಗ
ನಗು, ಮಾತುಗಳಿಂದ ಗಿಜಿಗುಡುವುದಿಲ್ಲ
ಅವಳೂರ ಅಂಗಡಿ ಕಟ್ಟೆಗಳಲ್ಲಿ ಈಗ
ಉಲ್ಲಾಸದ ಕಲರವವಿಲ್ಲ
ಜತೆಗೆ ಕುಳಿತವನ ಕಣ್ಣಲ್ಲೇ ಇರಿದು ಮಹಜರು ಮಾಡಿ
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ
ಎಲ್ಲೆಲ್ಲೂ ಹಸಿ ಹಸಿ ವಾಸನೆ
ಈಗೀಗ ಮಳೆಗಾಲ ಕಳೆದರೂ ನೇತ್ರಾವತಿಯ ಕೆಂಪು ನೀರು
ತಿಳಿಯಾಗುತ್ತಿಲ್ಲ…

ಎಲ್ಲರಿಗೂ ಜನ್ಮ ನೀಡಿ ಮಡಿಲಲ್ಲಿ ಸಾಕಿ ಸಲಹಿ ಪೊರೆದ
ತಾಯಿಯ ಒಡಲೆಲ್ಲ ಹುಣ್ಣಾಗಿ ಕೀವು ತುಂಬಿ
ಒಂದೇ ಮಗ್ಗುಲು ಸಾಕಾಗಿ ಹೊರಳಲು ಯತ್ನಿಸುತ್ತಾಳೆ
ನೆಲಕ್ಕಂಟಿದ ಆಕೆಗೆ ಹೊರಳುವುದೂ ಸುಲಭವಲ್ಲ
ತನ್ನ ಮೈಗಂಟಿದ ಈ ಕಲೆಯನ್ನೆಲ್ಲ ಕಳೆಯುವುದು ಹೇಗೆ?
ದುರ್ಗಂಧ ತೊಳೆಯುವುದು ಹೇಗೆ?
ತುಂಬಿ ಭೋರ್ಗರೆದು ಎಲ್ಲವನ್ನೂ ಕೊಚ್ಚಿಹಾಕಬಾರದೇಕೆ?
ಬತ್ತಿ ಬೇಯುತ್ತಿರುವ ತಾಯಿ ನೇತ್ರಾವತಿಗೀಗ
ಮುಂಗಾರಿನದೇ ಧ್ಯಾನ…

ಭಾರತಿ ದೇವಿಯವರಿಂದ ಇದರ ವಾಚನ:

ಇಲ್ಲಿಂದ .mp3 File ಅನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಮತ್ತೆ ಇವತ್ತಿನ ಸುದ್ದಿಗೆ: ಈ ಒಂದೇ ಮುಂಗಾರು ನೇತ್ರಾವತಿಯ ಆಶಯವನ್ನು ಈಡೇರಿಸುತ್ತದೆಯೆ?

Add a Comment

required, use real name
required, will not be published
optional, your blog address