“ಹೊರಗಣವರು” – ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!

This post was written by admin on August 13, 2009
Posted Under: Uncategorized

["ವಿಕ್ರಾಂತ ಕರ್ನಾಟಕ"ದ ಆಗಸ್ಟ್ 21, 2009ರ ಸಂಚಿಕೆಯಲ್ಲಿನ ಲೇಖನ]

ಸಾಧಕರ ಅಥವ ಯಶಸ್ವಿಗಳ ಬಗೆಗಿನ ಮನುಷ್ಯನ ಕುತೂಹಲ ಇಂದುನೆನ್ನೆಯದಲ್ಲ. ಇತಿಹಾಸವಂತೂ ಕೆಲವೊಮ್ಮೆ ಅವರದೇ ಚರಿತ್ರೆಯಿಂದ ತುಂಬಿಹೋಗಿದೆ. ಆರ್ಥಿಕವಾಗಿ ಬಹುಯಶಸ್ವಿಯಾದವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಈಗಿನವರ ದಾಹವೂ ಕಳೆದೆರಡು ಶತಮಾನಗಳ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಅರ್ಥಮಾಡಿಕೊಳ್ಳುವಂತಹುದೆ. ತಮ್ಮ ಜೀವನದಲ್ಲಿ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲು ಜನ ಇಂತಹವರ ಯಶಸ್ಸಿನ ಕತೆಗಳನ್ನು ಓದುತ್ತಾರೆ. ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಾದರಿಯಾಗಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುತ್ತ ಕೆಲವರು ಒಂದು ಹಂತದ ತನಕ ಯಶಸ್ಸನ್ನೂ ಪಡೆಯಬಹುದು. ಹಾಗೆಯೆ, ಬಹುಪಾಲು ಜನ ತಮ್ಮ ಮತ್ತದೇ ಜೀವನದ ಸುಳಿಯಲ್ಲಿ ಸುತ್ತುತ್ತಿರಬಹುದು.

ಜೀವನದಲ್ಲಿ ಅಪಾರ ಸಾಧನೆ ಮಾಡಿದ ಮತ್ತು ಅಸಾಮಾನ್ಯ ಯಶಸ್ಸು ಪಡೆದ ಜನರು (ಅಥವ ಸಮುದಾಯಗಳು) ಮಾಮೂಲಿ ಬಹುಸಂಖ್ಯಾತ ಜನರಿಗಿಂತ ಭಿನ್ನವಾದವರು. ಅವರು ಸಾಮಾನ್ಯರ ಗುಂಪಿಗಿಂತ “ಹೊರಗಣವರು.” ಎಲ್ಲರೂ ಯಾವಾಗೆಂದರೆ ಆಗ ಈ “ಯಶಸ್ವಿ” ಹೊರಗಣವರಲ್ಲ್ಲಿ ಒಬ್ಬರಾಗಲು ಸಾಧ್ಯವಿಲ್ಲ. ಹಲವಾರು ಸಾಧಕರ ಜೀವನವನ್ನು ನಾವು ಗಮನಿಸಿದಾಗ ನಮಗೆ ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ, ಸಾಧಕರಾಗಲು ಮೊದಲಿಗೆ ಪ್ರತಿಭೆ ಬೇಕು. ಬಹುಶಃ ಅದು ಜನ್ಮಜಾತವಾಗಿ ಬರಬೇಕು. ಹಾಗೆಯೆ ಕಠಿಣ ಪರಿಶ್ರಮ ಬೇಕು. ಜೊತೆಗೆ ವಿಪರೀತವೆನಿಸುವಷ್ಟು ಸಾಧಿಸುವ ಮನೋಬಲ ಅಥವ ಆಕಾಂಕ್ಷೆ ಇರಬೇಕು. ಅಂತಹವರು ಮಾತ್ರ “ಹೊರಗಣವ”ರಾಗಲು ಸಾಧ್ಯ.

ಹೌದೆ? ಪ್ರತಿಭೆ ಜನ್ಮಜಾತವೆ? ಆ ಪ್ರತಿಭೆಯಿಂದ, ಬುದ್ಧಿಯಿಂದ, ಮಹತ್ವಾಕಾಂಕ್ಷೆಯಿಂದ, ಪರಿಶ್ರಮದಿಂದ, ಯಾರು ಏನು ಬೇಕಾದರೂ ಸಾಧಿಸಲು ಸಾಧ್ಯವೆ? ಯಶಸ್ಸಿಗೆ ಅಥವ ಸಾಧನೆಗೆ ಇಷ್ಟೇ ಸಾಕೆ ಅಥವ ಇನ್ನೂ ಏನಾದರೂ ಬೇಕೆ?

ಒಬ್ಬ ವ್ಯಕ್ತಿಯ ಅಥವ ಸಮುದಾಯದ ಯಶಸ್ಸಿನಲ್ಲಿ ಆತನ ಕುಟುಂಬದ, ಸಮುದಾಯದ, ಸಂದರ್ಭದ ಪಾಲಿಲ್ಲವೆ? ಇದರಲ್ಲಿ ಒಬ್ಬನ ಸಾಂಸ್ಕೃತಿಕ ಹಿನ್ನೆಲೆ, ಕೌಟುಂಬಿಕ ಹಿನ್ನೆಲೆ ಯಾವ ಪಾತ್ರ ವಹಿಸುತ್ತದೆ? ಸಮುದಾಯವೊಂದರ ಯಶಸ್ಸಿನಲ್ಲಿ ಅದರ ಸಂಸ್ಕೃತಿ ಯಾ ಪರಂಪರೆಯ ಪಾತ್ರವೇನು?

ಹಾಗೆಯೆ, ಪ್ರತಿಭೆ, ಪರಿಶ್ರಮ, ಮಹಾತ್ವಾಕಾಂಕ್ಷೆ ಇರುವವರೆಂದು ಕಾಣಿಸುವ ಕೆಲವರು ಎಷ್ಟೆಲ್ಲಾ ಏಗಿದರೂ ಸಾಧನೆಯ ಶಿಖರ ಏರಲು ಸಾಧ್ಯವಾಗುವುದಿಲ್ಲವೇಕೆ?

ಈಗ ಕೆಲವೊಂದು ವ್ಯಕ್ತಿಗಳ ಉದಾಹರಣೆ ತೆಗೆದುಕೊಂಡು ಇದರ ಬಗ್ಗೆ ಆಲೋಚಿಸೋಣ. ಇಂದು ಜಗತ್ತಿನಲ್ಲಿಯೆ ಅತಿಶ್ರೀಮಂತನಾದ ಬಿಲ್ ಗೇಟ್ಸ್‌ಗೆ ಈ ಪರಿಯ ಯಶಸ್ಸು ಪಡೆಯಲು ಇದ್ದ ಅನುಕೂಲಗಳಾದರೂ ಯಾವುವು? ಅವುಗಳಲ್ಲಿ ಪ್ರತಿಭೆಯೇ ಮುಖ್ಯವಾಗಿದ್ದರೆ, ಅವನಿಗಿಂತ ಪ್ರತಿಭಾವಂತರು ಯಾರೂ ಇಲ್ಲವೆ? ಅಥವ ಇರಲಿಲ್ಲವೆ? ಅಂದ ಹಾಗೆ, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಸ್ಕಾಟ್ ಮೆಕ್ನೀಲಿ, ಎರಿಕ್ ಸ್ಮಿಡ್ಟ್, ವಿನೋದ್ ಖೋಸ್ಲ, ನಮ್ಮದೇ ದೇಶದ ನಂದನ್ ನಿಲೇಕಣಿ, ಮುಂತಾದ ಪ್ರಸಿದ್ಧರನ್ನು ಬೆಸೆಯುವ ಸಮಾನ ಎಳೆ ಒಂದಿದೆ. ಇಲ್ಲ, ನಾನು ಅವರೆಲ್ಲರೂ ತೊಡಗಿಸಿಕೊಂಡಿರುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಐಟಿ/ಹೈಟೆಕ್ ಉದ್ಯಮದ ಬಗ್ಗೆ ಮಾತನಾಡುತ್ತಿಲ್ಲ. ನಾನು ಪ್ರಸ್ತಾಪಿಸುತ್ತಿರುವುದು ಅವರ ಯಶಸ್ಸಿಗೆ ಕಾರಣವಾದ ಅವರ “ಜಾತಕ”ದ ಬಗ್ಗೆ. ಮೇಲೆ ಪ್ರಸ್ತಾಪಿಸಿರುವ ಎಲ್ಲರೂ ಹೆಚ್ಚುಕಮ್ಮಿ ಒಂದೇ ವರ್ಷದ ಅವಧಿಯಲ್ಲಿ, ಅಂದರೆ 1954-55 ರಲ್ಲಿ ಹುಟ್ಟಿದವರು. ಇವರು ಮಾತ್ರವಲ್ಲ, ಇವತ್ತು ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕರು ಹುಟ್ಟಿದ್ದು 1954-56 ರ ಅವಧಿಯಲ್ಲಿ! ಈ ಅವಧಿ “ಸುಮಹೂರ್ತ” ಆಗಿದ್ದಾದರೂ ಹೇಗೆ?

ಇದೇ ಸಂದರ್ಭದಲ್ಲಿ, “ಅಮೆರಿಕದ ಅತಿ ಬುದ್ಧಿವಂತ ಮನುಷ್ಯ” ಎನಿಸಿಕೊಂಡಿರುವ, ಸುಮಾರು 195-210 ರ ಸುಮಾರಿನಲ್ಲಿ ಬುದ್ಧಿ ಪ್ರಮಾಣ (IQ) ಹೊಂದಿರುವ ಕ್ರಿಸ್ ಲ್ಯಾಂಗನ್ ಯಾಕೆ ಅಂತಹ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಾಗಲಿಲ್ಲ, ಆಗುತ್ತಿಲ್ಲ? ಅವನ ಕತೆಯಾದರೂ ಏನು?

ಹಾಗೆಯೆ, ವಿಶ್ವಪ್ರಸಿದ್ಧ ಸಂಗೀತತಂಡ ಬೀಟಲ್ಸ್‌ಗೂ, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ಸ್ ಅನ್ನು ಬರೆದ ಬಿಲ್ ಗೇಟ್ಸ್, ಬಿಲ್ ಜಾಯ್‌ನಂತಹವರಿಗೂ, ಅಪಾರ ಪ್ರತಿಭಾವಂತರೆಂದು ಕಾಣಿಸುವ ಅನೇಕ ಆಟಗಾರರಿಗೂ ಇರುವ ಸಮಾನಾಂಶ ಏನಿರಬಹುದು? ಇಲ್ಲಿ ಅವರ “ಜನ್ಮಜಾತ ಪ್ರತಿಭೆ”ಯನ್ನು ಗಣನೆಗೆ ತೆಗೆದುಕೊಳ್ಳದೆ, ಅವರು ಹಾಕಿದ ಪರಿಶ್ರಮದ ಬಗ್ಗೆ ಗಮನ ಹರಿಸೋಣ. ಇವರು ತಮ್ಮತಮ್ಮ ಕ್ಷೇತ್ರದಲ್ಲಿ ಆ ಸಾಧನೆ ಮಾಡಲು ಎಷ್ಟೊಂದು ಸಮಯ “ಅಭ್ಯಾಸ” ಮಾಡಿರಬಹುದು? ಇಷ್ಟಕ್ಕೂ ಒಬ್ಬರು “ಪ್ರತಿಭಾವಂತ”ರಾಗಲು ಏನು ಬೇಕು? ಇತ್ತೀಚೆಗೆ ತಾನೆ ನಿಧನರಾದ ನಮ್ಮವರೇ ಆದ ಪ್ರಸಿದ್ಧ ಹಾಡುಗಾರ್ತಿ ಗಂಗೂಬಾಯಿ ಹಾನಗಲ್‌ರವರ ಜೀವನವನ್ನು ಗಮನಿಸಿದಾಗ, ಅವರು ಕಲಿಕೆಯ ಸಮಯದಲ್ಲಿ ಹಾಕಿದ ಅಪಾರ ಪರಿಶ್ರಮ ಮತ್ತು ಸಮಯ ನಮ್ಮ ಗಮನ ಸೆಳೆಯುತ್ತದೆ. ಅವರ ಅದೆಷ್ಟು ಗಂಟೆಗಳ ಅಭ್ಯಾಸ ಅವರನ್ನು ಶ್ರೇಷ್ಟ ಸಂಗೀತಗಾರ್ತಿಯನ್ನಾಗಿ ರೂಪಿಸಿರಬಹುದು? ವರ್ಷವೆ, ಹತ್ತು ವರ್ಷವೆ? ಅಥವ, ಸಾವಿರ ಗಂಟೆಗಳೆ? ಐದು ಸಾವಿರ ಗಂಟೆಗಳೆ?

ಈಗ ಸಮುದಾಯಗಳ ವಿಷಯಕ್ಕೆ ಬರೋಣ. ಯಾಕೆ ಕೆಲವೊಂದು ದೇಶ-ಸಮುದಾಯಗಳ ಜನ ಕೆಲವು ವಿಷಯಗಳಲ್ಲಿ ಬೇರೆಲ್ಲರಿಗಿಂತ ಉತ್ತಮ ಸಾಧನೆ ತೋರುತ್ತಾರೆ? ಪೂರ್ವ ಏಷಿಯನ್ನರಿಗೆ ಗಣಿತ ಬಹಳ ಸುಲಭ. ನಮ್ಮದೇ ದೇಶವನ್ನು ಗಮನಿಸಿದಾಗ ಗಣಿತ ಮತ್ತು ವಿಜ್ಞಾನದಲ್ಲಿ ಪಕ್ಕದ ತಮಿಳುನಾಡಿನವರು ಎಲ್ಲರಿಗಿಂತ ಮುಂದಿರುತ್ತಾರೆ. ಪೂರ್ವ ಏಷಿಯನ್ನರಿಗೂ ಮತ್ತು ನೆರೆಯ ತಮಿಳುನಾಡಿನವರಿಗೂ ಒಂದು ಸಮಾನಾಂಶವಿದೆ. ಅದು ಅವರ ಮುಖ್ಯ ಬೆಳೆ ಮತ್ತು ಆಹಾರವಾದ ಭತ್ತ ಮತ್ತು ಅನ್ನ. ಅದೇ ಅವರು ಗಣಿತದಲ್ಲೂ ಮುಂದಿರಲು ಕಾರಣವೆ? ಹೇಗೆ? ಅಂದ ಹಾಗೆ, ಗಣಿತವೆಂದರೆ ಭಯಭೀತರಾಗುವ (ಅಥವ ಆಗುತ್ತಿದ್ದ) ನಮ್ಮ ಬಯಲುಸೀಮೆಯ ಹಳ್ಳಿಗಾಡಿನ ಮಕ್ಕಳಿಗೆ ಅವರ ಪರಿಸರ ಮತ್ತು ಅಲ್ಲಿನ ಜೀವನೋಪಾಯಗಳೂ ಅವರಿಗೆ ಗಣಿತ ದೂರವಾಗಲು (?) ಒಂದು ಕಾರಣ ಆಗಿರಬಹುದೆ?

ಇನ್ನು ಕೆಲವು ಸಮುದಾಯಗಳು ಕೆಲವೊಂದು ಕೆಲಸಗಳಲ್ಲಿ ಕಳಪೆ ಸಾಧನೆ ತೋರುತ್ತಾರೆ. ಕಳೆದ ದಶಕದ ತನಕ ಕೊರಿಯನ್ನರ ವಿಮಾನ ಸಂಸ್ಥೆ ಬಹಳ ಕುಪ್ರಸಿದ್ಧಿ ಪಡೆದಿತ್ತು. ಬೇರೆ ಎಲ್ಲ ಏರ್‌ಲೈನ್ಸ್‌ನವರಿಗಿಂತ ಕೊರಿಯನ್ ಏರ್‌ಲೈನ್ಸ್‌ನ ಅಪಘಾತದ ಪ್ರಮಾಣ ಜಾಸ್ತಿ ಇತ್ತು. ಕೆಲವು ದೇಶಗಳಂತೂ ತಮ್ಮ ದೇಶದ ಮೇಲೆ ಕೊರಿಯನ್ ಏರ್‌ಲೈನ್ಸ್‌ನ ವಿಮಾನಗಳು ಹಾರದಂತೆ ನಿಷೇಧಿಸಿಯೂ ಬಿಟ್ಟಿದ್ದವು. ಅದಕ್ಕೆ ಕಾರಣ ಏನಿರಬಹುದು? ಕೊರಿಯನ್ನರದೂ ನಮ್ಮ ದೇಶದಂತೆಯೆ ಹಿರಿಯರನ್ನು, ತಮಗಿಂತ ಹೆಚ್ಚಿನ ಅಧಿಕಾರ ಉಳ್ಳವರನ್ನು ಗೌರವಿಸುವ, ತಗ್ಗಿಬಗ್ಗಿ ನಡೆಯುವ ಸಂಪ್ರದಾಯ. ಅವರ ಭಾಷೆಯೂ ಅಂತಹ “ಪಾಳೆಯಗಾರಿಕೆ/Feudal” ಗುಣಗಳನ್ನು ಹೊಂದಿದೆ. ನಮ್ಮ ಭಾಷೆಯನ್ನೆ ಗಮನಿಸಿ. ಇಲ್ಲಿ ಏಕವಚನ/ಬಹುವಚನಗಳು ಸ್ಪಷ್ಟವಾಗಿ ವಿಭಾಗವಾಗಿವೆ. ಹಿರಿಯರನ್ನು, ತಮಗಿಂತ ಮೇಲಿನವರನ್ನು ಬಹುವಚನದಲ್ಲಿ ಸಂಬೋಧಿಸಲು ಭಾಷೆ ಅವಕಾಶ ಮಾಡಿಕೊಟ್ಟಿದೆ. ಒಂದೇ ಅರ್ಥ ಕೊಡುವ ಪದದ ಬೇರೆಬೇರೆ ರೂಪವೆ (ನೀನು/ನೀವು, ಅವಳು/ಅವರು) ಯಾರು ಯಾರನ್ನು ಸಂಬೋಧಿಸುತ್ತಿದ್ದಾರೆ ಎನ್ನುವುದನ್ನೂ, ಸಮಾಜದಲ್ಲಿನ ಶ್ರೇಣಿಯನ್ನೂ ತಿಳಿಸಿಬಿಡುತ್ತದೆ. ಇಂತಹುದೆ ಸಂಪ್ರದಾಯ ಮತ್ತು ಭಾಷೆಯ ಕೊರಿಯನ್ನರಿಗೆ ಅವರ ಆ ಸಂಪ್ರದಾಯ ಮತ್ತು ಭಾಷೆಯೆ ಅವರು ಉತ್ತಮ ವಿಮಾನ ಪೈಲಟ್/ಸಹಪೈಲಟ್/ಫ್ಲೈಟ್ ಇಂಜಿನಿಯರ್‌ಗಳಾಗದಂತೆ ತಡೆದಿತ್ತೆ?

ಕಾನ್ವೆಂಟ್‌ಗಳಿಗೆ ಹೋಗುವ ನಮ್ಮ ಬಹುಪಾಲು ಮಧ್ಯಮ/ಮೇಲ್ಮಧ್ಯಮವರ್ಗದ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವ ನಮ್ಮ ಬಡಮಕ್ಕಳು ಓದಿನಲ್ಲಿ ಸಹಜವಾಗಿಯೆ ಹಿಂದುಳಿದಿರುತ್ತಾರೆ. ಅದಕ್ಕಿರಬಹುದಾದ ಮುಖ್ಯ ಕಾರಣಗಳಲ್ಲಿ ಆ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡಲಾಗದ ಅವಿದ್ಯಾವಂತ, ಬಡ ಪೋಷಕರೂ ಒಂದು. ಈ ಬಡ-ಅವಿದ್ಯಾವಂತ ಪೋಷಕರ ಮಕ್ಕಳು ಕಲಿಯುವುದಕ್ಕೂ ಮಧ್ಯಮವರ್ಗದ ವಿದ್ಯಾವಂತ ಪೋಷಕರ ಮಕ್ಕಳು ಕಲಿಯುತ್ತಿರುವುದಕ್ಕೂ ಇರುವ ಅಂತರವನ್ನು ನಮ್ಮ ಸಮಾಜ ತೊಡೆಯಲು ಸಾಧ್ಯವೆ? ನಮ್ಮ ಸರ್ಕಾರಿ ಶಾಲೆಗಳ ಬೇಸಿಗೆ ರಜೆಯನ್ನು ಕಡಿಮೆ ಮಾಡಿದರೆ, ಅಥವ ದೀರ್ಘ ರಜೆಗಳೆ ಇಲ್ಲದಂತೆ ಮಾಡಿದರೆ, ಸರ್ಕಾರಿ ಶಾಲೆಗಳ ಬಡಮಕ್ಕಳೂ ಓದಿನಲ್ಲಿ ಮುಂದಿರಬಲ್ಲರೆ? ಇಷ್ಟಕ್ಕೂ ಬೇಸಿಗೆ ರಜೆಗೂ ಬಡಮಕ್ಕಳ ಓದಿಗೂ ಹೇಗೆ ಎಲ್ಲಿಂದೆಲ್ಲಿಯ ಸಂಬಂಧ?

ಹೀಗೆ, ಒಬ್ಬ ವ್ಯಕ್ತಿ ಅಥವ ಸಮುದಾಯ ಯಶಸ್ಸು ಪಡೆಯಬೇಕಾದರೆ ಅದರಲ್ಲಿ ಅವಕಾಶ ಮತ್ತು ಸಂಪ್ರದಾಯ/ಪರಂಪರೆ ಯ ಪಾತ್ರ ಎಷ್ಟು ಎನ್ನುವುದನ್ನು ಮೂಲವಾಗಿಟ್ಟುಕೊಂಡು ಮ್ಯಾಲ್ಕಮ್ ಗ್ಲಾಡ್‌ವೆಲ್ ಎನ್ನುವ ಇಂಗ್ಲಿಷ್ ಲೇಖಕ “Outliers – The Story of Success” ಎನ್ನುವ ಪುಸ್ತಕ ಬರೆದಿದ್ದಾನೆ. ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಆತ ಬರೆದಿರುವ ಮೂರನೆ ಪುಸ್ತಕ ಇದು. ಆತನ ಹಿಂದಿನ ಎರಡು ಪುಸ್ತಕಗಳೂ ಪ್ರಸಿದ್ಧಿ ಪಡೆದಿವೆ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್‌ಸೆಲ್ಲರ್ಸ್ ಆಗಿವೆ. “ಹೊರಗಣವರು” ನಿಮಗೆ ಜೀವನದಲ್ಲಿ ಹೇಗೆ ಯಶಸ್ವಿಯಾಗಬಹುದು ಎನ್ನುವುದನ್ನು ಕಲಿಸುವುದಿಲ್ಲ. ಅದು ‘ಯಶಸ್ಸಿಗೆ ಏಳೆಂಟು ಸೂತ್ರಗಳು, ಮೆಟ್ಟಿಲುಗಳಂತಹ’ ಪುಸ್ತಕ ಅಲ್ಲ. ವೈಯಕ್ತಿಕ ಯಶಸ್ಸಿಗೆ ಹಾತೊರೆಯುವವರಿಗೆ ಈ ಪುಸ್ತಕ ಯಾವುದೆ ಸಿದ್ಧಸೂತ್ರಗಳನ್ನು ಒದಗಿಸುವುದಿಲ್ಲ. ಅದರೆ, ಒಂದು ಸಮುದಾಯವನ್ನು ಉತ್ತಮಗೊಳಿಸಬೇಕು ಎಂದುಕೊಳ್ಳುವ ನೀತಿನಿರೂಪಕರಿಗೆ (Policy Makers), ರಾಜನೀತಿಜ್ಞರಿಗೆ, ಚಿಂತಕರಿಗೆ, ಅಧಿಕಾರಸ್ಥರಿಗೆ, ಶಿಕ್ಷಣತಜ್ಞರಿಗೆ, ಮತ್ತು ತಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ತಾವೇನು ಮಾಡಬಹುದು ಎಂದು ಆಲೋಚಿಸುವ ಪೋಷಕರಿಗೆ ಅಪಾರವಾದ ಜ್ಞಾನವನ್ನೂ, ಒಳನೋಟಗಳನ್ನೂ ನೀಡುತ್ತದೆ.

ಈಗ, “ಹೊರಗಣವರು” ನಲ್ಲಿ ಮೇಲಿನ ಆಯಾಮಗಳಿಗೆ ಪೂರಕವಾಗಿ ಗ್ಲಾಡ್‌ವೆಲ್ ಒದಗಿಸಿರುವ ಒಂದಷ್ಟು ಉದಾಹರಣೆಗಳನ್ನು, ಪುರಾವೆಗಳನ್ನು ಗಮನಿಸೋಣ.

(ಮುಂದುವರೆಯುವುದು…)

Reader Comments

Add a Comment

required, use real name
required, will not be published
optional, your blog address