ಹುಟ್ಟಿದ ಘಳಿಗೆ ಸರಿ ಇರಬೇಕು…
Posted Under: Uncategorized
[ವಿಕ್ರಾಂತ ಕರ್ನಾಟಕದ ಆಗಸ್ಟ್ 28,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.]
ಭಾಗ – 1: “ಹೊರಗಣವರು” – ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
’ಮೆಡಿಸಿನ್ ಹ್ಯಾಟ್ ಟೈಗರ್ಸ್’ ಎನ್ನುವುದು ಕೆನಡಾದಲ್ಲಿಯ ಒಂದು ಬಾಲಕರ ಐಸ್ ಹಾಕಿ ತಂಡ. ಅದು ಹಲವಾರು ಚಾಂಪಿಯನ್‌ಷಿಗಳನ್ನು ಗೆದ್ದಿದೆ. ಮ್ಯಾಲ್ಕಮ್ ಗ್ಲಾಡ್‌ವೆಲ್ ತನ್ನ ಹೊರಗಣವರು ಪುಸ್ತಕದಲ್ಲಿ ಈ ತಂಡದ ಬಾಲಕರ ಜನ್ಮದಿನವನ್ನು ವಿಶ್ಲೆಷಿಸುತ್ತಾನೆ. (2007 ರ) ಟೈಗರ್ಸ್ ತಂಡದ 25 ಆಟಗಾರರಲ್ಲಿ 17 ಹುಡುಗರು ನಾಲ್ಕು ತಿಂಗಳ ಅವಧಿಯಲ್ಲಿ, ಅದೂ ಜನವರಿ-ಏಪ್ರಿಲ್ ತಿಂಗಳುಗಳಲ್ಲಿ ಹುಟ್ಟಿದವರು! ಆಗಸ್ಟ್-ಡಿಸೆಂಬರ್ ಅವಧಿಯಲ್ಲಿ ಹುಟ್ಟಿರುವ ಹುಡುಗರು ಕೇವಲ ಐವರು ಮಾತ್ರ. ಇದೇ ರೀತಿ ಜೆಕೊಸ್ಲಾವಾಕಿಯಾದ ೨೦೦೭ರ ರಾಷ್ಟ್ರೀಯ ಜೂನಿಯರ್ ತಂಡದಲ್ಲಿ ಜುಲೈ, ಅಕ್ಟೋಬರ್, ನವೆಂಬರ್, ಅಥವ ಡಿಸೆಂಬರ್‌ನಲ್ಲಿ ಹುಟ್ಟಿದ ಒಬ್ಬನೇ ಒಬ್ಬ ಆಟಗಾರ ಇಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್‌ಗೆ ಸೇರಿದವರು ತಲಾ ಒಬ್ಬರಿದ್ದಾರೆ. ಅಂದರೆ, ಈ ಮೇಲಿನ ಎರಡೂ ಉದಾಹರಣೆಗಳಲ್ಲಿ ವರ್ಷದ ಉತ್ತರಾರ್ಧದಲ್ಲಿ ಹುಟ್ಟಿದವರಿಗೆ ಹೆಚ್ಚು ’ಅವಕಾಶ’ ಇದ್ದಂತಿಲ್ಲ್ಲ. ಪೂರ್ವಾರ್ಧದಲ್ಲಿ ಹುಟ್ಟಿದವರಿಗೇ ಹೆಚ್ಚಿನ ಅವಕಾಶಗಳು ಇದ್ದಂತಿವೆ. ಯಾಕೆ ಹೀಗೆ?
ಕೆನಡಾದಲ್ಲಿ ಐಸ್ ಹಾಕಿ ಆಟ ನಮ್ಮ ದೇಶದಲ್ಲಿ ಕ್ರಿಕೆಟ್ ಇದ್ದಂತೆ. ಉತ್ತರ ಧ್ರುವದವರೆಗೂ ಚಾಚಿಕೊಂಡಿರುವ ಈ ಹಿಮಾವೃತ ದೇಶದಲ್ಲಿ ಆ ಆಟಕ್ಕಿರುವಷ್ಟು ಪ್ರಸಿದ್ಧಿ ಮತ್ತು ಜನಪ್ರಿಯತೆ ಬೇರೆ ಆಟಕ್ಕಿಲ್ಲ. ಅಲ್ಲಿ ಚಿಕ್ಕಂದಿನಿಂದಲೆ ಸುಧೃಢ ಮಕ್ಕಳನ್ನು ಆರಿಸಿಕೊಂಡು ಅವರಿಗೆ ಅತ್ಯುತ್ತಮವಾದ ಟ್ರೈನಿಂಗ್ ಕೊಡಲಾಗುತ್ತದೆ. ಹಾಗೆ ಆಯ್ಕೆಯಾಗುವ ಮಕ್ಕಳ ಗುಂಪನ್ನು “ಕೆಂಪು ದಳ” ಎನ್ನುತ್ತಾರೆ. ಆಯಾಯ ವರ್ಷದ ಕೆಂಪು ದಳಕ್ಕೆ ಆಯ್ಕೆಯಾಗಲು ಒಬ್ಬ ಹುಡುಗನಿಗೆ ಜನವರಿ ಒಂದಕ್ಕೆ ಒಂಬತ್ತು ತುಂಬಿರಬೇಕು. ಅಂದರೆ, ಈ ವರ್ಷದ ಕೆಂಪು ದಳದಲ್ಲಿರುವ ಹುಡುಗರೆಲ್ಲ 2000 ನೇ ಇಸವಿಯಲ್ಲಿ ಹುಟ್ಟಿದವರಾಗಿರುತ್ತಾರೆ. ಆ ವರ್ಷದ ಜನವರಿ ಎರಡರಂದು ಹುಟ್ಟಿದ ಹುಡುಗ ಅದೇ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಹುಟ್ಟಿದವನಿಗಿಂತ ಹನ್ನೆರಡು ತಿಂಗಳು ಹೆಚ್ಚಿನ ವಯಸ್ಸಿನವನಾಗಿರುತ್ತಾನೆ. ಹಾಗಾಗಿ ಸಹಜವಾಗಿ ದೈಹಿಕವಾಗಿಯೂ ಅವನಿಗಿಂತ ಬಲಿಷ್ಠನಾಗಿರುತ್ತಾನೆ. ಆ ವಯಸ್ಸಿನಲ್ಲಿ ಈ ತಿಂಗಳುಗಳ ವ್ಯತ್ಯಾಸ ಬಹಳ ಗಣನೀಯವಾದದ್ದೆ. ಗಣಿತದ ಲೆಕ್ಕಾಚಾರದಲ್ಲಿ ಹೇಳಬಹುದಾದರೆ, ಜನವರಿಯಲ್ಲಿ ಹುಟ್ಟಿದವನು ಡಿಸೆಂಬರ್‌ನಲ್ಲಿ ಹುಟ್ಟಿದವನಿಗಿಂತ ಶೇ. 10 ಹಿರಿಯ ವಯಸ್ಸಿನವನು ಆಗಿರುತ್ತಾನೆ. ಹಾಗಾಗಿ, ವರ್ಷದ ಪೂರ್ವಾರ್ಧದಲ್ಲಿ ಹುಟ್ಟಿದವರೆ ಹೆಚ್ಚಿನ ಸಂಖ್ಯೆಯಲ್ಲಿ ಕೆಂಪು ದಳಕ್ಕೆ ಆಯ್ಕೆಯಾಗುವುದು ಇಲ್ಲಿ ಸಹಜವಾದದ್ದು.
ಇನ್ನು ಈ “ಕೆಂಪು ದಳ”ಕ್ಕೆ ಆಯ್ಕೆಯಾದ ಆಟಗಾರನಿಗೆ ಸಿಗುವ ವಿಶೇಷ ಅನುಕೂಲಗಳನ್ನು ನೋಡಿ. ತನ್ನ ವಾರಿಗೆಯ ಮಾಮೂಲಿ ಶಾಲಾತಂಡಗಳಲ್ಲಿ ಆಡುವ ಹುಡುಗರಿಗಿಂತ ಒಳ್ಳೆಯ ಕೋಚಿಂಗ್ ಕೆಂಪು ದಳದವನಿಗೆ ಸಿಗಲಾರಂಭವಾಗುತ್ತದೆ. ಆತನ ಸಹಆಟಗಾರರೂ ಉತ್ತಮ ಮತ್ತು ಬಲಿಷ್ಠ ಆಟಗಾರರಾಗಿರುತ್ತಾರೆ. ಪ್ರತಿ ಸೀಸನ್ನಿನಲ್ಲೂ ಸಾದಾ ತಂಡಗಳಿಗಿಂತ ಹೆಚ್ಚಿನ ಪಂದ್ಯಗಳನ್ನು ಇವನು ಆಡುತ್ತಾನೆ. ಅವರಿಗಿಂತ ಎರಡು-ಮೂರು ಪಟ್ಟು ಹೆಚ್ಚು ಅಭ್ಯಾಸ ಮಾಡುತ್ತಾನೆ. ಈ ಎಲ್ಲಾ ಅನುಕೂಲಗಳಿಂದಾಗಿ ಮೂರ್ನಾಲ್ಕು ವರ್ಷಕ್ಕೆ ಮೇಜರ್ ಜೂನಿಯರ್ ಲೀಗ್‌ಗೆ ಆಯ್ಕೆಯಾಗುವ ಸಮಯದಲ್ಲಿ ತನ್ನ ವಾರಿಗೆಯ ಶಾಲಾತಂಡದ ಬಾಲಕರಿಗಿಂತ ಹೆಚ್ಚಿನ ಅವಕಾಶ ಇವನಿಗೇ ಇರುತ್ತದೆ. ಹಾಗಾಗಿ, ಆಯ್ಕೆಗೆ Cut-off ದಿನಾಂಕ ಇರುವ ಕಡೆ “ಜಾತಕ” ಕೂಡಿ ಬಂದರೆ ಒಳ್ಳೆಯದು.
ಇದು ಏನನ್ನು ಹೇಳುತ್ತದೆ? “ಶ್ರೇಷ್ಠರು ಮತ್ತು ಪ್ರತಿಭೆಯುಳ್ಳವರು ಸಾಧನೆಯ ಶಿಖರವನ್ನು ಬಹಳ ಸುಲಭವಾಗಿ ಹತ್ತುತ್ತಾರೆ ಎನ್ನುವುದು ಬಹಳ ಸರಳೀಕೃತಗೊಂಡ ಅಭಿಪ್ರಾಯ ಎನ್ನುವುದನ್ನು ಇದು ತಿಳಿಸುತ್ತದೆ. ಹೌದು, ವೃತ್ತಿಪರ ತಂಡಕ್ಕೆ ಆಯ್ಕೆಯಾಗುವ ಆಟಗಾರರು ನನಗಿಂತ ಅಥವ ನಿಮಗಿಂತ ಉತ್ತಮ ಆಟಗಾರರು ಎನ್ನುವುದೇನೊ ನಿಜ. ಅದರೆ ಅವರಿಗೆ ಅತ್ಯುತ್ತಮ ಆರಂಭವೆ ಸಿಕ್ಕಿತು. ಆ ಆರಂಭದ ಅವಕಾಶಕ್ಕೆ ಅವರು ಅರ್ಹರಾಗಿರಲಿಲ್ಲ. ಹಾಗೆಯೆ ಅದನ್ನು ಅವರು ಗಳಿಸಲೂ ಇಲ್ಲ. ಆದರೆ ಆ ಅವಕಾಶವೆ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈಗಾಗಲೆ ಯಾರು ಯಶಸ್ವಿಗಳೊ ಅಂತಹವರಿಗೆ ಮತ್ತಷ್ಟು ಯಶಸ್ವಿಯಾಗಲು ಇನ್ನಷ್ಟು ಅವಕಾಶಗಳು ದೊರಕುವ ಸಾಧ್ಯತೆ ಬೇರೆಲ್ಲರಿಗಿಂತ ಹೆಚ್ಚಿರುತ್ತದೆ. ಎಲ್ಲರಿಗಿಂತ ಹೆಚ್ಚಿನ ತೆರಿಗೆ ವಿನಾಯಿತಿಗಳು ಶ್ರೀಮಂತರಿಗೆ ದೊರಕುತ್ತವೆ. ಉತ್ತಮ ವಿದ್ಯಾರ್ಥಿಗಳತ್ತ ಅಧ್ಯಾಪಕರ ವಿಶೇಷ ಗಮನ ಹರಿಯುತ್ತದೆ ಹಾಗೂ ಅಂತಹವರಿಗೆ ಒಳ್ಳೆಯ ಪಾಠ ದೊರಕುತ್ತದೆ. ’ಯಶಸ್ಸು’ ಎನ್ನುವುದು ’ಅನುಕೂಲಗಳ ಒಟ್ಟುಮೊತ್ತ’ (Accumulative Advantage). ಒಬ್ಬ ವೃತ್ತಿಪರ ಹಾಕಿ ಆಟಗಾರ ತನ್ನ ವಾರಿಗೆಯವರಿಗಿಂತ ಸ್ವಲ್ಪ ಉತ್ತಮವಾಗಿ ಆರಂಭಿಸುತ್ತಾನೆ. ಆ ಸಣ್ಣ ವ್ಯತ್ಯಾಸವೆ ಅವಕಾಶವೊಂದಕ್ಕೆ ದಾರಿ ಮಾಡಿಕೊಡುತ್ತದೆ. ಆ ಅವಕಾಶ ಆರಂಭದ ವ್ಯತ್ಯಾಸವನ್ನು ಮತ್ತಷ್ಟು ಹಿಗ್ಗಿಸುತ್ತದೆ ಮತ್ತು ಆ ಹಿಗ್ಗಿದ ವ್ಯತ್ಯಾಸ ಮತ್ತಿನ್ನೊಂದು ಅವಕಾಶವನ್ನು ಒದಗಿಸುತ್ತದೆ. ಕಾಲಕ್ರಮೇಣ ಪ್ರಾರಂಭದ ಆ ಸಣ್ಣ ವ್ಯತ್ಯಾಸ ಬಹಳ ಮುಖ್ಯವಾದದ್ದೂ ಮತ್ತು ಹಿರಿದೂ ಆದ ವ್ಯತ್ಯಾಸವಾಗಿ ಪರಿಣಮಿಸಿ ಆ ಆಟಗಾರನನ್ನು ಅಪ್ಪಟ “ಹೊರಗಣವ”ನನ್ನಾಗಿ ಮಾಡುವ ತನಕ ಒಯ್ಯುತ್ತದೆ. ಆದರೆ ಆತ ಮೊದಲಿಗೇ ಹೊರಗಣವನಾಗಿ ಆರಂಭಿಸಲಿಲ್ಲ. ಬೇರೆಯವರಿಗಿಂತ ಸ್ವಲ್ಪವೆ ಸ್ವಲ್ಪ ಹೆಚ್ಚು ಉತ್ತಮವಾಗಿ ಆರಂಭಿಸಿದ.” (“Outliers” – ಪು. 30)
ಈಗ ದೇಶ-ಕಾಲದತ್ತ ಮತ್ತು ವರ್ಷಗಳತ್ತ ನೋಡೋಣ, ಇವತ್ತಿನ ಡಾಲರ್ ಮೌಲ್ಯದ ಪ್ರಕಾರ ಇಲ್ಲಿಯವರೆಗಿನ ನಮ್ಮ ಚರಿತ್ರೆಯಲ್ಲಿನ ಅತಿ ಶ್ರೀಮಂತರ ಪಟ್ಟಿಯೊಂದನ್ನು ಮಾಡಿದರೆ, ಅದರಲ್ಲಿ ಜಾನ್ ರಾಕ್‌ಫೆಲ್ಲರ್ ಸುಮಾರು 320 ಶತಕೋಟಿ ಡಾಲರ್‌ಗಳಷ್ಟು ಶ್ರೀಮಂತ; ಮೊದಲನೆಯವನು. ಹೈದರಾಬಾದಿನ ಕೊನೆಯ ನಿಜಾಮ ಉಸ್ಮಾನ್ ಅಲಿ ಖಾನ್ ಆ ಪಟ್ಟಿಯಲ್ಲಿ ಐದನೆಯವನು (ಸುಮಾರು 210 ಬಿಲಿಯನ್ ಡಾಲರ್). ರಾಣಿ ಕ್ಲಿಯೊಪಾಟ್ರ 21ನೆಯವಳು. ಮುಖೇಶ್ ಅಂಬಾನಿಗೆ 40ನೆ ರ್‍ಯಾಂಕ್. ಮೊದಲ 75 ಜನರ ಪಟ್ಟಿಯಲ್ಲಿ 45 ಜನ ಅಮೆರಿಕನ್ನರೆ ಇದ್ದಾರೆ. ಆದರೆ ಆ ಪಟ್ಟಿಯಲ್ಲಿನ ಕುತೂಹಲಕಾರಿ ವಿಷಯವೊಂದರತ್ತ ಗ್ಲಾಡ್‌ವೆಲ್ ನಮ್ಮ ಗಮನ ಸೆಳೆಯುತ್ತಾನೆ. ಆ 75 ಜನರ ಪಟ್ಟಿಯಲ್ಲಿರುವ ಅಮೆರಿಕನ್ನರಲ್ಲಿ 14 ಜನ ಕೇವಲ 9 ವರ್ಷಗಳ ಅಂತರದಲ್ಲಿ ಹುಟ್ಟಿದವರು. ನಂಬರ್ 1 ಶ್ರೀಮಂತ ರಾಕ್‌ಫೆಲ್ಲರ್‌ನನ್ನೂ ಒಳಗೊಂಡು ಈ ಹದಿನಾಲ್ಕು ಜನ ಹುಟ್ಟಿರುವುದು 1831 ರಿಂದ 1840 ಅವಧಿಯಲ್ಲಿ. ಈ ಅವಧಿಯಲ್ಲಿಯೆ ಅಷ್ಟೊಂದು ’ಭಾವಿ’ ಶ್ರೀಮಂತರು ಹುಟ್ಟಿದ್ದು ಹೇಗೆ?
“ತನ್ನ ಇತಿಹಾಸದಲ್ಲಿಯೆ ಅತಿ ದೊಡ್ಡ ಬದಲಾವಣೆಗಳನ್ನು ಮತ್ತು ಮಾರ್ಪಾಡುಗಳನ್ನು ಅಮೆರಿಕದ ಆರ್ಥಿಕತೆ ಕಂಡಿದ್ದು 1860 ಮತ್ತು 1870 ರ ಅವಧಿಯಲ್ಲಿ. ದೇಶದಾದ್ಯಂತ ರೈಲು ರೋಡುಗಳು ಹಾಕಲ್ಪಟ್ಟ ಮತ್ತು ವಾಲ್ ಸ್ಟ್ರೀಟ್ ಹುಟ್ಟಿದ ಸಂದರ್ಭ ಅದು. ಕೈಗಾರಿಕಾ ಉತ್ಪಾದನೆ ತೀವ್ರಗತಿಯಲ್ಲಿ ಆರಂಭವಾದ ಸಮಯವೂ ಅದೇ. ಹಾಗೆಯೆ, ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯ ಸಂಪ್ರದಾಯಗಳನ್ನು ಮತ್ತು ನೀತಿಗಳನ್ನು ಮುರಿಯಲ್ಪಟ್ಟ ಮತ್ತು ಹೊಸದಾಗಿ ಸೃಷ್ಟಿಸಲ್ಪಟ್ಟ ಸಂದರ್ಭವೂ ಅದೇನೆ. ಈ ಹಿನ್ನೆಲೆಯಲ್ಲಿ ಆ ಹದಿನಾಲ್ಕು ಜನರ ಪಟ್ಟಿ ಏನನ್ನು ಹೇಳುತ್ತದೆ ಅಂದರೆ, ಆ ಆರ್ಥಿಕ ಮಾರ್ಪಾಡುಗಳು ಆಗುತ್ತಿದ್ದಾಗ ನಿಮ್ಮ ವಯಸ್ಸು ಎಷ್ಟು ಎನ್ನುವುದು ಪರಿಗಣನೆಗೆ ಅರ್ಹವಾದದ್ದು ಮತ್ತು ಮುಖ್ಯವಾದದ್ದು, ಎಂದು. ನೀವು 1840 ರಲ್ಲಿ ಹುಟ್ಟಿದವರಾಗಿದ್ದರೆ ನೀವು ಅದನ್ನು ತಪ್ಪಿಸಿಕೊಂಡಿರಿ. ಆ ಕ್ಷಣದ ಅವಕಾಶಗಳನ್ನು ಬಳಸಿಕೊಳ್ಳಲು ನೀವಿನ್ನೂ ಚಿಕ್ಕವರು. ನೀವು 1820 ರ ಸುಮಾರಿನಲ್ಲಿ ಹುಟ್ಟಿದ್ದರೆ ನಿಮಗಾಗ ವಯಸ್ಸಾಗಿ ಹೋಗಿದೆ. ನಿಮ್ಮ ಚಿಂತನೆ ಹಳೆಯದಾಗಿದೆ. ಆದರೆ, ಭವಿಷ್ಯದಲ್ಲಿ ಏನಿದೆ ಎನ್ನುವುದನ್ನು ನೋಡಬಲ್ಲ ಒಂಬತ್ತು ವರ್ಷಗಳ ಒಂದು ಸಣ್ಣ ಅವಧಿ ಈ ಎರಡರ ಮಧ್ಯೆ ಇದೆ. ಆ 14 ಜನರ ಪಟ್ಟಿಯಲ್ಲಿರುವ ಎಲ್ಲರೂ ಪ್ರತಿಭಾವಂತರು ಮತ್ತು ದೂರದೃಷ್ಟಿ ಇದ್ದವರು. ಆದರೆ, ಹೇಗೆ ಜನವರಿ-ಮಾರ್ಚ್ ಅವಧಿಯಲ್ಲಿ ಹುಟ್ಟಿದ ಹಾಕಿ ಮತ್ತು ಫುಟ್‌ಬಾಲ್ ಆಟಗಾರರಿಗೆ ಅಸಾಮಾನ್ಯಾವಾದ ಅವಕಾಶ ದೊರಕುತ್ತದೊ ಅಂತಹುದೆ ಒಂದು ಅಸಾಮಾನ್ಯ ಅವಕಾಶ ಆ ಪಟ್ಟಿಯಲ್ಲಿರುವವರಿಗೂ ದೊರಕಿತ್ತು. (“Outliers”- ಪು. 63)
ಇದೇ ತರಹದ ಅವಕಾಶ ದೊರಕಲ್ಪಟ್ಟ ಮತ್ತೊಂದು ತಲೆಮಾರು 1953-56 ಅವಧಿಯಲ್ಲಿ ಹುಟ್ಟಿದವರದು. ಕಂಪ್ಯೂಟರ್ ಉದ್ದಿಮೆಯ ಹಿರಿತಲೆಗಳ ಪ್ರಕಾರ ಪರ್ಸನಲ್ ಕಂಪ್ಯೂಟರ್‌ನ ಇತಿಹಾಸದಲ್ಲಿ ಅತಿ ಪ್ರಮುಖವಾದ ಘಟನೆ ನಡೆದದ್ದು 1975 ರ ಜನವರಿಯಲ್ಲಿ. ಅದು ಮನೆಯಲ್ಲಿಯೆ ಜೋಡಿಸಿ-ಓಡಿಸಬಹುದಾದ “Altairs 8800” ಎಂಬ ಸಣ್ಣ ಕಂಪ್ಯೂಟರ್ 397 ಡಾಲರ್‌ಗಳಿಗೆ ಮಾರುಕಟ್ಟೆಗೆ ಬಂದ ಸಂದರ್ಭ. ಅಲ್ಲಿಯವರೆಗೂ ಕಂಪ್ಯೂಟರ್‌ಗಳೆಂದರೆ ಭಾರೀ ಗಾತ್ರದ, ಕೆಲವೆ ಕೆಲವು ಕಡೆ ಮಾತ್ರ ಇರುತ್ತಿದ್ದ ದೈತ್ಯ ಮೈನ್‌ಫ್ರೇಮ್ ಮೆಷಿನ್‌ಗಳು. ಕಂಪ್ಯೂಟರ್‌ನಲ್ಲಿ ಕೆಲಸ ಮಾಡಬೇಕು, ತಮ್ಮ ಹೊಸಹೊಸ ಪ್ರೋಗ್ರಾಮ್‌ಗಳನ್ನು ಪರೀಕ್ಷಿಸಬೇಕು ಎಂದು ತುಡಿಯುತ್ತಿದ ’Geek’ ಯುವಜನಾಂಗವೊಂದರ ಕನಸು ಸಾಕಾರಗೊಂಡದ್ದು 1975 ರಲ್ಲಿ; Altairs ಮೂಲಕ.
1975 ಪರ್ಸನಲ್ ಕಂಪ್ಯೂಟರ್‌ಗಳ ಅರುಣೋದಯದ ಸಮಯ ಎಂದಾದರೆ, ಆಗ ಅದರ ಉಪಯೋಗ ಪಡೆದುಕೊಳ್ಳಲು ಸಮರ್ಥರಾಗಿದ್ದವರು ಯಾರು? ಮೇಲಿನ ರಾಕ್‌ಫೆಲ್ಲರ್ ಕಾಲಮಾನಕ್ಕೆ ಅನ್ವಯಿಸಲ್ಪಟ್ಟ ನಿಯಮವೆ ಇಲ್ಲಿಯೂ ಅನ್ವಯವಾಗುತ್ತದೆ.
“ಮೈಕ್ರೋಸಾಫ್ಟ್ಟ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದ ನೇಥನ್ ಮೈರ್ವಾಲ್ಡ್ ಹೇಳುತ್ತಾರೆ, “1975 ರ ಸುಮಾರಿನಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿದ್ದು, ಅಷ್ಟೊತ್ತಿಗೆ ಸ್ವಲ್ಪ ವಯಸ್ಸು ಆಗಿಬಿಟ್ಟಿದ್ದರೆ ಬಹುಶಃ ಅವರು IBM ನಲ್ಲಿ ನೌಕರಿ ಮಾಡುತ್ತಿದ್ದರು. ಒಂದು ಸಲ ಅಲ್ಲಿ ಸೇರಿಕೊಂಡರೆ ಮುಗಿಯಿತು, ಹೊರಗಿನ ಹೊಸ ಪ್ರಪಂಚಕ್ಕೆ ತೆರೆದುಕೊಳ್ಳುವುದು ಕಷ್ಟವಿತ್ತು. ಅದು ಮೇನ್‌ಫ್ರೇಮ್‌ಗಳನ್ನು ಮಾಡುತ್ತಿದ್ದ ಬಿಲಿಯನ್‌ಗಟ್ಟಳೆ ಡಾಲರ್‌ಗಳ ಹೆಸರುವಾಸಿ ಕಂಪನಿ. ಕಂಪ್ಯೂಟರ್ ಎಂದರೆ ಮೇನ್‌ಪ್ರೇಮ್‌ಗಳು ಎನ್ನುವಂತಿದ್ದ ಸಮಯ ಅದು. ಹಾಗಿರುವಾಗ, ಕೆಲಸಕ್ಕೆ ಬಾರದ ಈ ಸಣ್ಣ ಕಂಪ್ಯೂಟರ್‌ಗಳಲ್ಲಿ ಏನು ಮಾಡುವುದು ಎನ್ನುವ ಮನಸ್ಥಿತಿ ಅವರದು. ಅವರ ದೂರದೃಷ್ಟಿ ಅಷ್ಟಕ್ಕೇ ಸೀಮಿತವಾಗಿಬಿಟ್ಟಿತ್ತು. ಅವರಿಗೆ ಆರಾಮವಾಗಿ ಜೀವನ ನಡೆಯುತ್ತಿತ್ತು. ಅವರ ಪ್ರಕಾರ ಆಗ ಬಿಲಿಯನ್‌ಗಟ್ಟಲೆ ದುಡ್ಡು ಮಾಡುವ ಹೊಸ ಅವಕಾಶಗಳು ಇರಲಿಲ್ಲ.”
“1975 ರ ಸುಮಾರಿಗೆ ನಿಮ್ಮದು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷ ಆಗಿಬಿಟ್ಟಿದ್ದರೆ ನೀವು ಆ ಹಳೆಯ ತಲೆಮಾರಿಗೆ ಸೇರಿದವರು. ಈಗ ತಾನೆ ಹೊಸ ಮನೆ ಕೊಂಡಿದ್ದೀರಿ. ಹೊಸದಾಗಿ ಮದುವೆ ಆಗಿದೆ. ಇಷ್ಟರಲ್ಲಿಯೆ ಮಗು ಆಗಬಹುದು. ಒಳ್ಳೆ ಕೆಲಸ ಬಿಟ್ಟು ಸುಮ್ಮನೆ ಯಾವುದೊ 397 ಡಾಲರ್‌ಗಳ ಸಣ್ಣ ಕಂಪ್ಯೂಟರ್ ಕಿಟ್‌ನ ನೆಲೆಯಿಲ್ಲದ ಕ್ಷೇತ್ರದಲ್ಲಿ ಮನಸ್ಸು ತೊಡಗಿಸುವ ಸ್ಥಿತಿಯಲ್ಲಿ ನೀವಿಲ್ಲ. ಹಾಗಾಗಿ 1952 ಕ್ಕಿಂತ ಮೊದಲು ಹುಟ್ಟಿದವರನ್ನು ನಾವಿಲ್ಲಿ ಪರಿಗಣಿಸುವ ಅವಶ್ಯಕತೆ ಇಲ್ಲ.
“ಅದೇ ಸಮಯದಲ್ಲಿ, ನೀವು ತೀರಾ ಚಿಕ್ಕವರಾಗಿರುವುದೂ ಉಪಯೋಗಕ್ಕಿಲ್ಲ. ಅಂದರೆ ಹೈಸ್ಕೂಲ್‌ಗೆ ಹೋಗುವ ವಯಸ್ಸು ಸಾಕಾಗುವುದಿಲ್ಲ. ಹಾಗಾಗಿ 1958 ರಿಂದ ಈಚೆಗೆ ಹುಟ್ಟಿದವರನ್ನೂ ಪರಿಗಣಿಸುವುದು ಬೇಡ. ಬರಲಿರುವ ಕಂಪ್ಯೂಟರ್ ಕ್ರಾಂತಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ 1975 ರಲ್ಲಿ ಅತ್ತ ಹೆಚ್ಚೂ ಅಲ್ಲದ ಇತ್ತ ಕಮ್ಮಿಯೂ ಅಲ್ಲದ ವಯಸ್ಸೆಂದರೆ 20 ಇಲ್ಲವೆ 21 ವರ್ಷ ವಯಸ್ಸಾಗಿರುವುದು. ಅಂದರೆ, ನೀವು 1954 ಅಥವ 1955 ರಲ್ಲಿ ಹುಟ್ಟಿದವರಾಗಿರುವುದು.
“ಇದನ್ನು ಪರೀಕ್ಷಿಸಲು ಒಂದು ಸುಲಭ ಮಾರ್ಗ ಇದೆ. ಬಿಲ್ ಗೇಟ್ಸ್ ಹುಟ್ಟಿದು ಯಾವಾಗ?
“1955ರ ಅಕ್ಟೋಬರ್‌ನಲ್ಲಿ.
“ಆಪಲ್‌ನ ಸ್ಟೀವ್ ಜಾಬ್ಸ್, ಗೂಗಲ್‌ನ ಎರಿಕ್ ಸ್ಮಿಡ್ಟ್, ಸನ್ ಮೈಕ್ರೊಸಿಸ್ಟಮ್ಸ್‌ನ ವಿನೋದ್ ಖೋಸ್ಲ? 1955. UNIX ಆಪರೇಟಿಂಗ್ ಸಿಸ್ಟಮ್ ಬರೆದವರಲ್ಲಿ ಮುಖ್ಯನಾದ ಮತ್ತು ಸನ್ ಮೈಕ್ರೊಸಿಸ್ಟಮ್ಸ್‌ನ ಸ್ಥಾಪಕರಲ್ಲಿ ಒಬ್ಬನಾದ ಬಿಲ್ ಜಾಯ್, ಮತ್ತು ಸನ್ ಮೈಕ್ರೊಸಿಸ್ಟಮ್ಸ್‌ನ ಮತ್ತೊಬ್ಬ ಸ್ಥಾಪಕ ಸ್ಕಾಟ್ ಮೆಕ್ನೀಲಿ: 1954. ಬಿಲ್ ಗೇಟ್ಸ್ ಜೊತೆಯಲ್ಲಿ ಮೈಕ್ರೊಸಾಫ್ಟ್ ಸ್ಥಾಪಿಸಿದ ಅತನ ಸ್ನೇಹಿತ ಪಾಲ್ ಅಲ್ಲೆನ್: 1953. ಮೈಕ್ರೋಸಾಫ್ಟ್‌ನ ಈಗಿನ CEO ಆಗಿರುವ ಸ್ಟೀವ್ ಬಾಲ್ಮರ್: 1956.” (“Outliers” – ಪು. 68)
ಸರಿ, ಯಶಸ್ಸಿಗೆ ದೇಶ-ಕಾಲವೂ ಕೂಡಿಬರಬೇಕು. ಆದರೆ ಪ್ರತಿಭೆ-ಪರಿಶ್ರಮ ಎಷ್ಟಿರಬೇಕು?
ಮುಂದಿನ ವಾರ: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ.
(ಮುಂದುವರೆಯುವುದು…)
ಭಾಗ – 1: “ಹೊರಗಣವರು” – ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
Reader Comments