ಅಮೇರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ!
Posted Under: Uncategorized
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಮೂರು ವಾರದ ಹಿಂದೆ, ನವೆಂಬರ್ ಹದಿನಾಲ್ಕರಂದು ಮೈಕ್ರೊಸಾಫ್ಟ್ ಕಂಪನಿ Zune ಎಂಬ ಒಂದು ಹೊಸ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ ಮಾಡಿತು. ಆಪಲ್ ಕಂಪನಿಯ ಐಪಾಡ್‌ಗೆ ಉತ್ತರವಾಗಿ ಕಳೆದೆರಡು ವರ್ಷಗಳಿಂದ ಈ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ಸಿದ್ದಪಡಿಸುತ್ತಿತ್ತು. ಕಂಪ್ಯೂಟರ್ ಪ್ರಪಂಚದ ಆಗುಹೋಗುಗಳು ಬಹಳಷ್ಟು ಗೊತ್ತಿಲ್ಲದವರಿಗೆ ಗೊತ್ತಿರದೆ ಇರಬಹುದಾದ ವಿಚಾರ ಏನೆಂದರೆ, ಆಪಲ್ ಕಂಪನಿ ಕೆಲವರ ದ್ಟೃಯಲ್ಲಿ ಮೈಕ್ರೋಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಿಂತ ಉತ್ಕೃಷ್ಟವಾದ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುತ್ತದೆ ಎನ್ನುವುದು. ಆದರೆ ಮೈಕ್ರೊಸಾಫ್ಟ್ ಮಾಡದ ಒಂದನ್ನು ಹೆಚ್ಚುವರಿಯಾಗಿ ಆಪಲ್ ಮಾಡುತ್ತದೆ. ಅದೇನೆಂದರೆ, ತನ್ನ ಆಪರೇಟಿಂಗ್ ಸಿಸ್ಟಮ್ ತಂತ್ರಾಂಶವನ್ನು ಅದು ತಾನು ಸಿದ್ದಪಡಿಸಿದ ಕಂಪ್ಯೂಟರ್ ಹಾರ್ಡ್‌ವೇರ್‌ನೊಂದಿಗೆ ಮಾತ್ರ ಮಾರುತ್ತದೆ. ಮೈಕ್ರೋಸಾಫ್ಟ್‌ನ ವಿಂಡೋಸ್ ಅನ್ನು x86 ಪ್ರೊಸೆಸರ್ ಆಧಾರಿತವಾದ ಯಾವ ಕಂಪ್ಯೂಟರ್ ಮೇಲಾದರೂ ಉಪಯೋಗಿಸಬಹುದು. ನಮ್ಮಲ್ಲಿಯೆ ಎಚ್.ಸಿ.ಎಲ್, ವಿಪ್ರೊ, ಝೆೆನಿತ್, ಮುಂತಾದ ಹಾಗು ವಿದೇಶಗಳಲ್ಲಿ ಡೆಲ್, ಎಚ್.ಪಿ., ಟೊಷಿಬ, ಏಸರ್ ಮುಂತಾದ ಕಂಪನಿಗಳು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಹಾರ್ಡ್‌ವೇರ್ ಸಿದ್ಧಪಡಿಸಿ, ಅದಕ್ಕೆ ಮೈಕ್ರೋಸಾಫ್ಟ್‌ನ ವಿಂಡೋಸ್ ಅನುಸ್ಥಾಪಿಸಿ ಮಾರುತ್ತಾರೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ಸ್ ಡಿಪ್ಲೊಮ ಮಾಡಿರುವವವರೂ ಸಹ ಇದಕ್ಕೆ ಬೇಕಾದ ಮದರ್ ಬೋರ್ಡ್, ಮೆಮೊರಿ, ಮುಂತಾದವುಗಳನ್ನು ಬೆಂಗಳೂರಿನ ಎಸ್.ಪಿ. ರೋಡಿನಲ್ಲಿ ಕೊಂಡುಕೊಂಡು ತಾವೆ ಅಸೆಂಬ್ಲ್ ಮಾಡಿ, ವಿಂಡೋಸ್ ಅನ್ನು ಇನ್ಸ್‌ಟಾಲ್ ಮಾಡಬಹುದು. ಆದರೆ ಆಪಲ್‌ನ ಮ್ಯಾಕ್ ಕಂಪ್ಯೂಟರ್ ಆನು ಮಾಡುವುದು, ಮಾರುವುದು, ಆಪಲ್ ಕಂಪನಿ ಮಾತ್ರ.
ಆದರೂ ಹಲವಾರು ಕಾರಣಗಳಿಗೆ ಟೆಕ್ನಾಲಜಿ ಪ್ರಪಂಚದಲ್ಲಿ ಆಪಲ್‌ನ ಪ್ರಭಾವ ಮೈಕ್ರೋಸಾಫ್ಟ್‌ಗಿಂತ ಕಮ್ಮಿ ಇಲ್ಲ. ಯಾವುದೆ ಹಾಲಿವುಡ್ ಸಿನೆಮಾದಲ್ಲಿ ಕಂಪ್ಯೂಟರ್ ಅನ್ನು ಉಪಯೋಗಿಸುತ್ತಿರುವ ಸೀನ್ ಇದ್ದರೆ ಆ ಸೀನ್‌ನಲ್ಲಿಆಪಲ್ ಕಂಪ್ಯೂಟರ್ ಕಾಣಿಸುವ ಸಾಧ್ಯತೆಗಳೆ ಹೆಚ್ಚು. ಆದರೆ ಪರ್ಸನಲ್ ಕಂಪ್ಯೂಟರ್ ಉಪಯೋಗಿಸುವವರಲ್ಲಿ ಶೇ.90 ಕ್ಕೂ ಹೆಚ್ಚು ಜನ ಮೈಕ್ರೊಸಾಫ್ಟ್ ಬಳಸಿದರೆ, ಪ್ರಪಂಚದ ಕಂಪ್ಯೂಟರ್ ಬಳಕೆದಾರರಲ್ಲಿ ಆಪಲ್ ಬಳಸುವವರು ಶೇ. 2 ರಿಂದ 3 ಮಾತ್ರ. ಆದರೆ ಈ ಆಪಲ್ ಬಳಸುವ ಬಹುಪಾಲು ಜನರ ಆಪಲ್‌ನೆಡೆಗಿನ ನಿಷ್ಠೆ ಮತ್ತು ಮೈಕ್ರೋಸಾಫ್ಟ್‌ನೆಡೆಗಿನ ದ್ವೇಷ ವಿಶ್ವಪ್ರಸಿದ್ಧವಾದದ್ದು! ಇದೊಂದು ಕಲ್ಟ್ ಸಂಸ್ಕೃತಿ! ಐದಾರು ವರ್ಷಗಳ ಹಿಂದೆ ಈ ಆಪಲ್ ಕಂಪನಿ ಹೋಗಿಯೇ ಬಿಟ್ಟಿತು ಎಂದು ಎಲ್ಲರೂ ಬೊಬ್ಬೆಡುತ್ತಿದ್ದಾಗ ಅದರ ಸ್ಥಾಪಕ ಮತ್ತು ಸಿ.ಇ.ಒ. ಸ್ಟೀವ್ ಜಾಬ್ಸ್ ಬಯಲಿಗೆ ಬಿಟ್ಟ ಅಸ್ತ್ರ ಆಪಲ್ ಐಪಾಡ್ ಎಂಬ ಪುಟ್ಟ, ಮುದ್ದಾದ, ಡಿಜಿಟಲ್ ಮ್ಯೂಸಿಕ್ ಪ್ಲೇಯರ್. ಇದು ಆಪಲ್ ಕಂಪನಿಯನ್ನು ಮತ್ತೆ ಲಾಭಕ್ಕೆ ತಂದಿದ್ದೆ ಅಲ್ಲದೆ ಪರೋಕ್ಷವಾಗಿ ಆಪಲ್ ಕಂಪ್ಯೂಟರ್‌ನ ಮಾರಾಟ ಹೆಚ್ಚಾಗುವುದಕ್ಕೂ ಕಾರಣವಾತು. ಇಂದು ಐಪಾಡ್‌ನಷ್ಟು ಪ್ರಸಿದ್ಧವಾದ, ಲಾಭದಾಯಕವಾದ ಇನ್ನೊಂದು ಉತ್ಪನ್ನವಿಲ್ಲವೇನೊ! ಇಂತಹ ಉತ್ಪನ್ನಗಳನ್ನು ಬ್ಯುಸಿನೆಸ್ ಪರಿಭಾಷೆಯಲ್ಲಿ Killer Product ಎನ್ನುತ್ತಾರೆ.
ಮೈಕ್ರೊಸಾಫ್ಟ್‌ನವರು ಹೆಚ್ಚಾಗಿ ಹಾರ್ಡ್‌ವೇರ್ ತಯಾರಿಸುವುದಿಲ್ಲ. ಹಲವಾರು ವರ್ಷಗಳ ಹಿಂದಿನ ತನಕ ಮೌಸು, ಕೀಬೋರ್ಡ್ ನಂತಹ ಸಣ್ಣಪುಟ್ಟವನ್ನು ಮಾತ್ರ ಮಾಡುತ್ತಿದ್ದರು. ಹಾರ್ಡ್‌ವೇರ್ ಉತ್ಪನ್ನಗಳಲ್ಲಿ ಸ್ವಲ್ಪ ಗಂಭೀರವಾಗಿ ತೊಡಗಿಸಿಕೊಂಡಿದ್ದು ವಿಡಿಯೋ ಗೇಮ್ ಕನ್ಸೋಲ್ ಆದ XBox ತಯಾರಿಕೆಯಲ್ಲಿ ಮಾತ್ರ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. ಎಕ್ಸ್-ಬಾಕ್ಸ್‌ನ ಹಾರ್ಡ್‌ವೇರ್ ಮಾರಾಟದಿಂದ ಮೈಕ್ರೊಸಾಫ್ಟ್‌ನವರಿಗೆ ಏನೇನೂ ಲಾಭವಿಲ್ಲ. ಅದಕ್ಕೆ ಬೀಳುವ ಖರ್ಚಿಗಿಂತ ಅರ್ಧಕ್ಕೂ ಕಮ್ಮಿ ಬೆಲೆಗೆ ಅದನ್ನು ಮಾರುತ್ತಾರೆ. ಆದರೆ ದುಡ್ಡಿರುವುದು ಸಾಫ್ಟ್‌ವೇರ್‌ನಲ್ಲಿ. ಅಂದರೆ ಎಕ್ಸ್-ಬಾಕ್ಸ್‌ಗೆಂದು ಮೈಕ್ರೋಸಾಫ್ಟ್ ಸಿದ್ದಪಡಿಸುವ ಗೇಮ್‌ಗಳಲ್ಲಿ. ಈ ಗೇಮ್‌ಗಳನ್ನು ಒಂದು ಸಲ ಡಿಸೈನ್ ಮಾಡಿ, ಡೆವಲಪ್ ಮಾಡಿದರೆ ಸಾಕು; ಆಮೇಲೆ ಒಂದೊಂದು ಕಾಪಿಗೆ ಬೀಳುವ ಖರ್ಚು ಹತ್ತಿಪ್ಪತ್ತು ರೂಪಾಯಿ ಮಾತ್ರ; ಸೀಡಿ ಅಥವ ಡಿವಿಡಿ ಬರ್ನ್ ಮಾಡಲಿಕ್ಕಾಗಿ ಹಾಗೂ ಅದನ್ನು ಪ್ಯಾಕ್ ಮಾಡಲಿಕ್ಕಾಗಿ. ಆದರೆ ಅದರ ಮಾರಾಟ ಬೆಲೆ ಮಾತ್ರ ಸಾವಿರ ರೂಪಾಯಿಂದ ಮೂರು ಸಾವಿರ ರೂಪಾಯಿ ತನಕ ಇರುತ್ತದೆ. ವಿಡಿಯೊ ಗೇಮ್ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ PlayStation ನ ಏಕಸ್ವಾಮ್ಯ ಮುರಿಯಲು ಹಾಗೂ ತನಗಾಗಿ ಮತ್ತೊಂದು ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಮೈಕ್ರೊಸಾಫ್ಟ್ ಆ ರಂಗಕ್ಕೆ ಇಳಿತು. ಹೆಚ್ಚುಕಮ್ಮಿ ಅದೇ ಉದ್ದೇಶದಿಂದ ಆಪಲ್ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ Zune ಮ್ಯೂಸಿಕ್ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದು.
ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದಕ್ಕೆ ಮುಂಚೆ ಬಹಳ ಪ್ರಚಾರ ಮಾಡಲಾಗಿತ್ತು. ಹಾಗಾಗಿ ಜನರಲ್ಲಿಯೂ ಕುತೂಹಲವಿತ್ತು. CNETNews.com ಎನ್ನುವುದು ಟೆಕ್ನಾಲಜಿ ವಿಷಯಗಳಿಗೆ ಬಹಳ ಜನಪ್ರಿಯವಾದ ವೆಬ್‌ಸೈಟ್. ಆ ವೆಬ್‌ಸೈಟಿನಲ್ಲಿ ಇಂತಹ ಉತ್ಪನ್ನಗಳನ್ನು ಪರೀಕ್ಷಿಸಿ, ಒಂದೆರಡು ನಿಮಿಷಗಳ ರಿವ್ಯೂ ವಿಡಿಯೊ ಹಾಕುತ್ತಾರೆ. ಈ ಕಂಪನಿ ಇರುವುದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ. Zune ಮಾರುಕಟ್ಟೆಗೆ ಬರುವ ಎರಡು ವಾರಗಳ ಹಿಂದೆಯೆ ಅದನ್ನು ಪಡೆದುಕೊಂಡು, ಅದರ ಗುಣಾವಗುಣಗಳನ್ನು ವಿಶ್ಲೇಷಿಸಿ ಅದರ ವಿಡಿಯೊ ಅನ್ನು ಇದರ ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಿದ್ದರು. ವಿಶ್ಲೇಷಿಸಿದಾತನ ಹೆಸರು ಜೇಮ್ಸ್ ಕಿಮ್. ಈತ ಇಂತಹ ಅತ್ಯಾಧುನಿಕ ಡಿಜಿಟಲ್ ಉತ್ಪನ್ನಗಳನ್ನು ವಿಶ್ಲೇಷಿಸುವ CNET ನ ಹಿರಿಯ ಸಂಪಾದಕ. Zune ನ ಬಗ್ಗೆ ಸಹಜವಾಗಿಯೆ ಕುತೂಹಲ ಬೆಳೆಸಿಕೊಂಡಿದ್ದ ನಾನು ಆ ವಿಡಿಯೋವನ್ನು ಮೊದಲ ವಾರವೆ ನೋಡಿದ್ದೆ.
ನವೆಂಬರ್‌ನ ನಾಲ್ಕನೆ ಗುರುವಾರವನ್ನು ಅಮೇರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಎಂದು ಆಚರಿಸುತ್ತಾರೆ. ನಾಲ್ಕು ಶತಮಾನಗಳ ಹಿಂದೆ ಯೋರೋಪಿನಿಂದ ವಲಸೆ ಬಂದ ಕೆಲವು ಬಿಳಿಯರು ಇಲ್ಲಿನ ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿ, ರೋಗರುಜಿನಗಳಿಗೆ ತುತ್ತಾಗಿ ಊಟಕ್ಕಿಲ್ಲದೆ ಸಾಯುವಂತಹ ಸ್ಥಿತಿ ಕೆಲವು ಕಡೆ ಉದ್ಭವಿಸಿದಾಗ ರೆಡ್ ಇಂಡಿಯನ್ನರು, ಅಂದರೆ ಕೆಂಪಗಿರುವ ಭಾರತೀಯರು ಎಂದು ಕೊಲಂಬಸ್‌ನಿಂದ ಕರೆಸಿಕೊಂಡ ಇಲ್ಲಿನ ಮೂಲನಿವಾಸಿಗಳು ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಮಾಡಿದರು. ಆ ಕಾರಣಕ್ಕಾಗಿ ಕೃತಜ್ಞತಾಪೂರ್ವಕವಾಗಿ ಆಚರಿಸುವ ಹಬ್ಬ ಥ್ಯಾಂಕ್ಸ್‌ಗಿವಿಂಗ್ ಡೆ. ಮಾರಾಟದ ಅಂಗಡಿಗಳನ್ನು ಬಿಟ್ಟು ಇನ್ನೆಲ್ಲರಿಗೂ ಶುಕ್ರವಾರವೂ ರಜಾ ಇರುತ್ತದೆ. ಹೇಗೂ ಇಲ್ಲಿ ಶನಿವಾರ, ಭಾನುವಾರ ರಜಾ ಇದ್ದೇ ಇರುತ್ತದೆ. ಹಾಗಾಗಿ ಬಹಳ ಜನ ಆ ಲಾಂಗ್ ವೀಕೆಂಡ್‌ನಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ವರ್ಷದಲ್ಲೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುವುದು ಈ ನಾಲ್ಕು ದಿನಗಳಲ್ಲಿಯೆ.
ಈ ಬಾರಿಯ ರಜಾದಲ್ಲಿ ಮೇಲೆ ಹೇಳಿದ CNET News.com ನ ಜೇಮ್ಸ್ ಕಿಮ್ ತನ್ನ ಹೆಂಡತಿ ಕೇಟಿ ಹಾಗು ತಮ್ಮ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊದಿಂದ ನಾಲ್ಕೈದು ನೂರು ಮೈಲಿ ದೂರ, ಉತ್ತರಕ್ಕೆ ಪ್ರವಾಸ ಹೊರಟ. ಒಂದೆರಡು ದಿನ ಒರೆಗಾನ್ ರಾಜ್ಯದಲ್ಲೆಲ್ಲ ಸುತ್ತಾಡಿಕೊಂಡು, ಹಿಮ ತುಂಬಿದ ದಟ್ಟ ಕಾಡುಬೆಟ್ಟಗಳ ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ ಆತನ ಕಾರು ಹಿಮದಲ್ಲಿ ಸಿಕ್ಕಿಹಾಕಿಕೊಂಡು ಹೂತು ಹೋಯಿತು. ಹಿಮ ಬೀಳುವ ಋತುವಿನಲ್ಲಿ ಆ ರಸ್ತೆಯಲ್ಲಿ ಸಂಚಾರ ಇರುವುದಿಲ್ಲ. ಅದು ಜೇಮ್ಸ್‌ಗೆ ಗೊತ್ತಿರಲಿಲ್ಲ. ಸೆಲ್ ಪೋನ್ ಸಿಗ್ನಲ್ ಬೇರೆ ಇರಲಿಲ್ಲ. ಕೇವಲ ಏಳು ತಿಂಗಳಾಗಿದ್ದ ಒಂದು ಪುಟ್ಟ ಮಗು, ನಾಲ್ಕು ವರ್ಷದ ಇನ್ನೊಂದು ಮಗು, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಹಾಗೂ ಜೇಮ್ಸ್ ಯಾರಾದರು ಆ ರಸ್ತೆಯಲ್ಲಿ ಬರುತ್ತಾರೆ ಎಂದು ಕಾಯಲಾರಂಭಿಸಿದರು. ಹೀಗಾಗುತ್ತದೆ ಎಂದು ಮೊದಲೆ ಊಹಿಸಿಲ್ಲದ ಕಾರಣವಾಗಿ ಕಾರಿನಲ್ಲಿ ಹೆಚ್ಚಿನ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಹೊರಗೆ ರಾತ್ರಿ ಹೊತ್ತು ನೀರು ಮಂಜುಗಡ್ಡೆಯಾಗುವಷ್ಟು ಚಳಿ. ಜನಸಂಪರ್ಕ ಸಾಧ್ಯವೆ ಇಲ್ಲದಷ್ಟು ದೂರ ಇವರು ಹೋಗಿಬಿಟ್ಟಿದ್ದಾರೆ.
ಹೀಗಾಗಿದ್ದೆ, ಪೆಟ್ರೋಲ್ ಮುಗಿಯುವ ತನಕವೂ ಕಾರನ್ನು ಆನ್ ಮಾಡಿಟ್ಟುಕೊಂಡು, ಅದರಲ್ಲಿನ ಹೀಟರ್ ಹಾಕಿಕೊಂಡು ಕಾಲ ಹಾಕಿದ್ದಾರೆ. ಪೆಟ್ರೋಲ್ ಒಂದು ದಿನಕ್ಕೆಲ್ಲ ಮುಗಿದಿರಬೇಕು. ಸಾಲದೆಂದು ಆಗಾಗ ಹಿಮ ಮತ್ತು ಮಳೆ ಬೀಳುತ್ತಲೆ ಇದೆ. ಎಲ್ಲಿಯೂ ಸಹಾಯದ ಸುಳಿವಿಲ್ಲ. ಆ ರಸ್ತೆಯಲ್ಲಿ ಯಾವ ವಾಹನವಾಗಲಿ, ನರಪಿಳ್ಳೆಯಾಗಲಿ ಸುಳಿಯಲಿಲ್ಲ. ಕಾರಿನಲ್ಲಿ ಇದ್ದಬದ್ದ ಸ್ನ್ಯಾಕ್ಸ್ ಎಲ್ಲ ಮುಗಿದವು. ಹೆಂಡತಿಗೆ, ಜೇಮ್ಸ್‌ಗೆ ಊಟವಿಲ್ಲ. ಬೇಬಿ ಪುಡ್ ಸಹ ಮುಗಿದ ಮೇಲೆ ತಾಯಿ ಏಳು ತಿಂಗಳ ಕೂಸಿನ ಜೊತೆಗೆ ನಾಲ್ಕು ವರ್ಷದ ಮಗಳಿಗೂ ಹಾಲೂಡಿಸಲು ಪ್ರಾರಂಭಿಸಿದಳು. ಬೆಚ್ಚಗಿರಲು ನಾಲ್ಕೂ ಜನ ತಬ್ಬಿಕೊಂಡು ಕಾರಿನಲ್ಲಿ ಮಲಗುತ್ತಿದ್ದರು. ತೀರಾ ಚಳಿಯಾದಾಗ ಕಾರಿನ ಒಂದೊಂದೆ ಚಕ್ರವನ್ನು ಕಳಚಿ ಅದರ ಟೈರನ್ನು ಸುಟ್ಟರು. ನಾಲ್ಕು ಚಕ್ರಗಳ ಜೊತೆಗೆ ಸ್ಪೇರ್ (ಹೆಚ್ಚುವರಿ) ಟೈರನ್ನೂ ಸುಟ್ಟರು. ಜೇಮ್ಸ್ ಸುತ್ತಮುತ್ತಲಿನ ಕಾಡುಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿದ. ಕೊನೆಕೊನೆಗೆ ಯಾವುದು ವಿಷ ಯಾವುದು ವಿಷವಲ್ಲ ಎಂಬುದು ಗೊತ್ತಾಗದ್ದರಿಂದಾಗಿ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದ. ರಾತ್ರಿ ಹಗಲುಗಳು ಉರುಳಿದವು. ಮೂರಾಯಿತು, ಐದಾಯಿತು, ಕೊನೆಗೆ ಏಳು ದಿನಗಳಾದವು! ಜೇಮ್ಸ್ ಧೈರ್ಯ ಮಾಡಿ, ಇದ್ದಬದ್ದ ಶಕ್ತಿಯೆನ್ನೆಲ್ಲ ಒಟ್ಟುಗೂಡಿಸಿಕೊಂಡು, ಹೆಂಡತಿಮಕ್ಕಳನ್ನು ಕಾರಿನಲ್ಲಿಯೆ ಬಿಟ್ಟು ಸಹಾಯ ತರುತ್ತೇನೆಂದು ಹೊರಟ.
ಜೇಮ್ಸ್ ಹೋಗಿ ಎರಡು ದಿನಗಳಾದರೂ ವಾಪಸು ಬರಲಿಲ್ಲ. ದಟ್ಟವಾದ ಕಾಡು. ಮೈಕೊರೆಯುವ ಚಳಿ. ಕೇಟಿಯ ಎರಡು ಕಾಲ್ಬೆರಳುಗಳು ಶೀತದಿಂದಾಗಿ ಪ್ರಾಸ್ಟ್‌ಬೈಟ್‌ಗೆ ತುತ್ತಾಗಿದ್ದವು. ತನ್ನ ಹೊಟ್ಟೆಗೆ ಏನಿಲ್ಲದಿದ್ದರೂ ಈ ತಾಯಿ ಎರಡೂ ಮಕ್ಕಳಿಗೆ ಎದೆ ಬಸಿದು ಹಾಲೂಡಿಸುತ್ತಿದ್ದಳು. ಒಂಬತ್ತನೆ ದಿನ ತಾವಿದ್ದ ಜಾಗದ ಮೇಲೆ ಹೆಲಿಕಾಪ್ಟರ್ ಒಂದು ಸುತ್ತು ಹಾಕುತ್ತಿರುವುದನ್ನು ಗಮನಿಸಿ ತಮ್ಮಲ್ಲಿದ್ದ ಕೊಡೆಯನ್ನು ಹಿಡಿದುಕೊಂಡು ಹೊರಗೆ ಬಂದು ಅದನ್ನು ಅತ್ತ ಇತ್ತ ಬೀಸಲಾರಂಭಿಸಿದಳು. ಆ ಹೆಲಿಕಾಪ್ಟರ್ ಸ್ಯಾನ್ ಫ್ರಾನ್ಸಿಸ್ಕೊದ ಜೇಮ್ಸ್‌ನ ಮನೆಯವರು ಅವರನ್ನು ಹುಡುಕಲು ಬಾಡಿಗೆಗೆ ಪಡೆದದ್ದಾಗಿತ್ತು. ಪೈಲಟ್ ಕಣ್ಣಿಗೆ ಕೊಡೆ ಬೀಸುತ್ತಿರುವುದು ಕಾಣಿಸಿತು. ಮುಂದಿನ ಒಂದೆರಡು ಗಂಟೆಗಳಲ್ಲಿ ತಾಯಿ ಮತ್ತು ಮಕ್ಕಳಿಬ್ಬರೂ ಸುರಕ್ಷಿತ ಸ್ಥಾನ ಸೇರಿಕೊಂಡರು.
ನಂತರ ಎರಡು ದಿನಗಳ ಕಾಲ ಕುದುರೆಗಳ ಮೇಲೆ, ಸ್ನೋಮೊಬೈಲ್‌ಗಳ ಮೇಲೆ, ಹೆಲಿಕಾಪ್ಟರ್ ಬಳಸಿ, ಕೊನೆಗೆ ಉಪಗ್ರಹಗಳನ್ನು ಸಹ ಬಳಸಿ ಜೇಮ್ಸ್‌ನನ್ನು ಹುಡುಕುವ ಕಾರ್ಯ ಮೊದಲಾಯಿತು. ನಾನಿರುವ ಸಿಲಿಕಾನ್ ಕಣಿವೆಯ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಇಲ್ಲಿನವರು ಓದುವ ವೆಬ್‌ಸೈಟ್‌ಗಳಲ್ಲಿ ಇದೇ ಸುದ್ದಿ. ಕೊನೆಕೊನೆಗೆ ರಾಷ್ಟ್ರೀಯ ಸುದ್ದಿಯೂ ಆಗಿಬಿಟ್ಟಿತು. ಒಂದು ದಿನದ ನಂತರ ಜೇಮ್ಸ್‌ನ ಪ್ಯಾಂಟೊಂದು ಸಿಕ್ಕ ಸುದ್ದಿ ಬಂತು. ಇದು ಆತ ತಮ್ಮನ್ನು ಹುಡುಕುವವರಿಗಾಗಿ ಬಿಟ್ಟಿರುವ ಕ್ಲೂ ಇರಬಹುದು ಎಂದರು ಪೋಲಿಸರು. ಇನ್ನೊಂದು ದಿನ ಅಲ್ಲೆಲ್ಲ ಅಂಗುಲಂಗುಲ ಜಾಲಾಡಿಸಿದ ಮೇಲೆ ಕಡಿದಾದ ಆಳವಾದ, ದುರ್ಗಮವಾದ ಕಮರಿಯೊಂದರಲ್ಲಿ ಜೇಮ್ಸ್‌ನ ಶವ ಸಿಕ್ಕಿತು. ಜೇಮ್ಸ್‌ನ ಶವ ಸಿಕ್ಕಿದ ಜಾಗ ಆತನ ಕಾರು ಇದ್ದ ಸ್ಥಳದಿಂದ ಕೇವಲ ಅರ್ಧ ಮೈಲಿ ಮಾತ್ರ ದೂರವಿತ್ತು. ಆದರೂ, 40 ಕ್ಕಿಂತ ಹೆಚ್ಚು ಪೋಲಿಸರು ಆತನ ಹೆಂಡತಿಮಕ್ಕಳು ಸಿಕ್ಕ ಎರಡು ದಿನಗಳ ನಂತರ ಆತನನ್ನು ಹುಡುಕಲು ಸಾಧ್ಯವಾಯಿತು ಅಂದರೆ ಅ ಬೆಟ್ಟಗುಡ್ಡಗಳ ಕಾಡಿನ ದಟ್ಟತೆ, ಅಲ್ಲಿನ ಕಡಿದಾದ ಕಮರಿಗಳು, ಹಿಮ, ಇವೆಲ್ಲವನ್ನೂ ನಾವು ಊಹಿಸಿಕೊಳ್ಳಬಹುದು! ಆಷ್ಟೇ ದೂರದಲ್ಲಿ ಆತನ ಶವ ಸಿಕ್ಕರೂ, ಅಲ್ಲಿ ಹೆಣವಾಗಿ ಬೀಳುವುದಕ್ಕಿಂತ ಮೊದಲು ಜೇಮ್ಸ್ 17 ಕಿ.ಮಿ. ದೂರ ಹಿಮಾವೃತ ಬೆಟ್ಟಗುಡ್ಡಗಳನ್ನೆಲ್ಲ ಅಲೆದಿದ್ದನಂತೆ!
ಅಮೇರಿಕ ಎಂದ ತಕ್ಷಣ ಅದೊಂದು ಸಮೃದ್ಧವಾದ, ಅವಕಾಶಗಳು ಎಲ್ಲೆಂದರಲ್ಲಿ ಹುಡುಕಿಕೊಂಡು ಬರುವ, ಸುಲಭವಾಗಿ ಜೀವನ ಸಾಗಿಸಬಹುದಾದ ಶ್ರೀಮಂತ ದೇಶ ಎಂಬ ಕಲ್ಪನೆ ಹೊರಗಿನ ಬಹಳ ಜನರಿಗೆ ಇರುವುದು ಸುಳ್ಳಲ್ಲ. ಭಾರತಕ್ಕಿಂತ ಸುಮಾರು ಮೂರ್ನಾಲ್ಕು ಪಟ್ಟು ದೊಡ್ಡದಾದ ಈ ದೇಶದ ಕೆಲವು ಕಡೆಗಳಲ್ಲಿ ಜೀವನ ಬಹಳ ಸವಾಲಿನದ್ದು. ಇದು ಜನರೊಡ್ಡುವ ಅಪಾಯವಾಗಲಿ, ಸವಾಲಾಗಲಿ ಅಲ್ಲ್ಲ; ಪ್ರಕೃತಿ ಒಡ್ಡುವುದು. ನಮ್ಮಲ್ಲೆ ಯಾಕೆ, ಇಲ್ಲೂ ಸಹ ಪ್ರತಿ ವರ್ಷ ಬೇಸಿಗೆಯ ಕಡುಬಿಸಿಲಿಗೆ ಜನ ಸಾಯುತ್ತಿರುತ್ತಾರೆ. ಕೇವಲ 50 ಲಕ್ಷ ಜನಸಂಖ್ಯೆಯ ಅರಿಜೋನಾ ರಾಜ್ಯದಲ್ಲಿ ಕಡುಬಿಸಿಲಿನ ಝಳಕ್ಕೆ ಸಿಕ್ಕಿ ಪ್ರತಿ ವರ್ಷ 30 ರಿಂದ 50 ಜನ ಸಾಯುತ್ತಾರೆ. ಬೇಸಿಗೆ ಕೊನೆಯಾದ ತಕ್ಷಣ ಬರುವ ಟೊರ್ನೆಡೊಗಳು, ಅಂದರೆ ಭಯಂಕರ ಸುಂಟರಗಾಳಿಗಳು, ಊರೂರುಗಳನ್ನೆ ಬುಡಮೇಲು ಮಾಡಿ ಹತ್ತಾರು ಜನರ ಜೀವ ತೆಗೆಯುವುದಲ್ಲದೆ ಸಾವಿರಾರು ಜನರ ಜೀವಮಾನದ ದುಡಿಮೆಯನ್ನೆ ನಾಶ ಮಾಡುತ್ತವೆ. ಟೊರ್ನೆಡೋಗಳನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರ ಟ್ವಿಸ್ಟರ್‌ನಲ್ಲಿ ಬರುವ ದೃಶ್ಯಗಳು ಅವಾಸ್ತವಿಕವೇನಲ್ಲ! ಅದೇ ಸಮಯದಲ್ಲಿ ಪೂರ್ವದಲ್ಲಿ ಮತ್ತು ಆಗ್ನೇಯದ ಕರಾವಳಿಯಲ್ಲಿ ಅಪ್ಪಳಿಸುವ ಚಂಡಮಾರುತಗಳದ್ದು ಇನ್ನೂ ಭೀಕರ ಆಟಾಟೋಪ. ಜನ ಎದ್ದುಬಿದ್ದು ಮನೆಮಠ ತೊರೆದು ನೂರಾರು ಮೈಲಿ ಹೋಗುವ ಸ್ಥಿತಿ ಬಂದು ಬಿಡುತ್ತದೆ ಕೆಲವೊಮ್ಮೆ. ಕಳೆದ ವರ್ಷ ಅಪ್ಪಳಿಸಿದ ಕತ್ರೀನಾ ಅಮೇರಿಕವನ್ನು ಮೊಣಕಾಲ ಮೇಲೆ ನಿಲ್ಲಿಸಿದ್ದೆ ಇದಕ್ಕೆ ತಾಜಾ ಉದಾಹರಣೆ.
ಇನ್ನು ಹಿಮ ಬೀಳುವ ಕತೆ. ಉತ್ತರದ ಕಡೆಗಿರುವ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಒಂದೆರಡು ಗಂಟೆಗಳಲ್ಲಿ ಒಂದೆರಡು ಅಡಿಯಷ್ಟು ಎತ್ತರದ ಹಿಮ ಬಿದ್ದು ಬಿಡುತ್ತದೆ. ಕೆಲವು ಸಲ ಮೂರ್ನಾಲ್ಕು ಅಡಿ ಬಿದ್ದು ಮನೆಯ ಬಾಗಿಲು ತೆರೆದು ಹೊರಬರಲಾಗದ ಹಾಗೆ ಮಾಡಿಬಿಡುತ್ತದೆ. ಕಾರಿನಲ್ಲಿ ಕುಳಿತಿದ್ದರೂ ಶೀತಚಳಿ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಅಂತಹ ಹಿಮದಲ್ಲಿ ಸಂಪೂರ್ಣವಾಗಿ ಅನೇಕ ಪದರುಗಳ ಬಟ್ಟೆಗಳನ್ನು ಧರಿಸಿ ಸಂಪೂರ್ಣವಾಗಿ ಮೈಮುಚ್ಚಿಕೊಳ್ಳದೆ ಹೊರಗೇನಾದರೂ ಬಂದರೆ ಹತ್ತಾರು ನಿಮಿಷಗಳಲ್ಲಿ frostbite ಬರುತ್ತದೆ. ಇದೇನೆಂದರೆ, ಶೀತಕ್ಕೆ ಸಿಕ್ಕಿದ ಭಾಗಕ್ಕೆ ರಕ್ತಚಲನೆ ಸ್ಥಗಿತಗೊಂಡು, ಆಮ್ಲಜನಕವಿಲ್ಲದೆ, ಅಲ್ಲಿನ ಜೀವಕೋಶಗಳೆಲ್ಲ ಸತ್ತು ಹೋಗಿ ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿ, ಸಂಪೂರ್ಣ ಸ್ವಾಧೀನತೆ ಕಳೆದುಕೊಳ್ಳುತ್ತದೆ. ಹಿಮದಲ್ಲಿ ಗಾಡಿ ಸಿಕ್ಕಿ ಹಾಕಿಕೊಂಡರೆ ನಮ್ಮಲ್ಲಿ ಹಳ್ಳಿಗಾಡಿನ ಕೆಸರಿನಲ್ಲಿ ತುಂಬಿದ ಲಾರಿ ಹೂತುಕೊಂಡ ಹಾಗೆ. ಸ್ಟ್ಯಾಂಡ್ ಹಾಕಿದ ಸೈಕಲ್‌ನ ಹಿಂದಿನ ಚಕ್ರ ತಿರುಗುವಷ್ಟು ಸರಾಗವಾಗಿ ಚಕ್ರಗಳು ತಿರುಗುತ್ತವೆ, ಅಷ್ಟೆ. ಮೇಲಕ್ಕೆಳೆಯಲು ಇನ್ನೊಂದು ಗಾಡಿಯೆ ಬರಬೇಕು. ಭೂಕಂಪವಾಗಿ ವಾರದ ಬಳಿಕವೂ ಬದುಕುಳಿದವರ ಕತೆಗಳಂತೆ ಹಿಮದಲ್ಲಿ ಎಲ್ಲೊ ಕಳೆದುಹೋಗಿ ಬದುಕಿದವರ, ಸತ್ತವರ ಕತೆಗಳು ಪ್ರತಿ ವರ್ಷವೂ ಇಲ್ಲಿ ಕೇಳಿಬರುತ್ತಿರುತ್ತವೆ.
ಇಂತಹ ಹಿಮ ಸುರಿಯುವ ವಿಸ್ಕಾನ್ಸಿನ್ ರಾಜ್ಯದಲ್ಲಿ ಒಂದು ಚಳಿಗಾಲವನ್ನು ನಾನು ಕಳೆದಿದ್ದೆ. ಆಗ ಅಲ್ಲಿದ್ದ ಅಮೇರಿಕನ್ ಸಹೋದ್ಯೋಗಿಗಳೆಲ್ಲರು ನನಗೆ ಒಂದು ಹಿತವಚನ ಹೇಳುತ್ತಿದ್ದರು: “ಕಾರಿನಲ್ಲಿ ಯಾವಾಗಲು ಒಂದು ಬ್ಲ್ಯಾಂಕೆಟ್ ಇಟ್ಟಿರು, ಲೈಟರ್ ಇಟ್ಟಿರು, ಒಂದಷ್ಟು ಸ್ನ್ಯಾಕ್ಸ್ ಮತ್ತು ಚಾಕೊಲೆಟ್ ಇಟ್ಟಿರು, ಯಾವಾಗ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೊ ಗೊತ್ತಿಲ್ಲ, ಎಲ್ಲಾದರು ಹೀಗೆ ಕಳೆದುಹೋದರೆ ಸಹಾಯ ಬರುವ ತನಕ ಕಾರಿನಲ್ಲೆ ಇರಬೇಕಾಗುತ್ತದೆ, ಮೊದಲೆ ಸಿದ್ಧವಾಗಿರುವುದು ಒಳ್ಳೆಯದು,” ಇತ್ಯಾದಿ. ನಾನು ಇದ್ದದ್ದು ಕೇವಲ ಹತ್ತು ಸಾವಿರ ಜನಸಂಖ್ಯೆ ಇದ್ದ ಪಟ್ಟಣದಲ್ಲಿ. ಅಂತಹ ಊರುಗಳಿಂದ ಹತ್ತಾರು ಮೈಲಿ ದೂರ ಹೋದರೆ ಸಾಕು ಗಂಟೆಗಟ್ಟಲೆ ಜನ ಸಂಚಾರ ಕಾಣಿಸುವುದಿಲ್ಲ. ಕಾರು ಓಡಿಸುವಾಗ ಸ್ವಲ್ಪ ಯಾಮಾರಿ ಬದಿಯಲ್ಲಿರುವ ಹಿಮದ ಮೇಲೇನಾದರು ಚಕ್ರ ಹತ್ತಿದರೆ ಕಾರು ಕಂಟ್ರೋಲಿಗೆ ಸಿಗುವುದಿಲ್ಲ. ಕಾರಿನ ಚಕ್ರಗಳು ಸ್ನೋಟೈರ್ ಆಗಿಲ್ಲದಿದ್ದಲ್ಲಿ, ಅವುಗಳಿಗೆ ಸ್ಟೀಲ್ ಚೈನ್ಸ್ ಹಾಕಿಲ್ಲದಿದ್ದಲ್ಲಿ, ಅಥವ ಆ ಕಾರು 4-ವ್ಹೀಲರ್ ಆಗಿಲ್ಲದಿದ್ದಲ್ಲಿ, ಮತ್ತೆ ರಸ್ತೆಯ ಮೇಲಕ್ಕೆ ಬರುವುದು ಕನಸೇ ಸರಿ. ಸೆಲ್ ಫೋನ್ ಇದ್ದು, ಅದು ಕೆಲಸ ಮಾಡುತ್ತಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಆಗ ಮಾಡಬಹುದಾದದ್ದೇನೆಂದರೆ ಆ ರಸ್ತೆಯಲ್ಲಿ ಓಡಾಡುವ ಯಾರ ಕಣ್ಣಿಗಾದರೂ ಬೀಳುವ ಆಸೆಯಿಟ್ಟುಕೊಂಡು, ಹಾಕಿಕೊಂಡಿರುವ ಜಾಕೆಟ್ ಸಾಲದೆ ಇದ್ದರೆ ಚಾದರವನ್ನು ಹೊದ್ದಿಕೊಂಡು, ಕಾರಿನಲ್ಲಿರುವುದನ್ನು ತಿಂದುಕೊಂಡು, ಆದಷ್ಟು ಬೆಚ್ಚಗಿರಲು ಎಲ್ಲಾ ಪ್ರಯತ್ನ ಮಾಡುತ್ತ ಕಾಲ ತಳ್ಳುವುದು. ಅಲ್ಲೇನಾದರು ಮತ್ತೆ ಜೋರಾಗಿ ಹಿಮ ಸುರಿಯಲು ಪ್ರಾರಂಭವಾದರೆ ಐದತ್ತು ಅಡಿಗಿಂತ ಮುಂದಕ್ಕೆ ಏನಿದೆ ಎಂದೇ ಕಾಣಿಸುವುದಿಲ್ಲ. ರಸ್ತೆಯಿಂದ 20-30 ಅಡಿ ದೂರಕ್ಕೆ ಇಳಿದುಬಿಟ್ಟಿದ್ದರೆ ಕೆಲವೊಮ್ಮೆ ಆ ರಸ್ತೆಯಲ್ಲಿ ನಿಧಾನಕ್ಕೆ ಚಲ್ಲಿಸುವ ವಾಹನಗಳ ಕಣ್ಣಿಗೂ ಬೀಳುವುದು ಕಷ್ಟ. ಪರಮ ಅದೃಷ್ಟ ಹೀನತೆ ಎಂದರೆ ಅದೆ.
ಜೀವನವನ್ನು ಹಿಮ ಇಷ್ಟು ಕಠೋರವಾಗಿಸುವ ಭಾಗಗಳಿಂದ ಬಂದವರು ಬೇಕಾದಷ್ಟು ಮುಂಜಾಗರೂಕತೆ ತೆಗೆದುಕೊಂಡಿರುತ್ತಾರೆ. ಜೇಮ್ಸ್‌ನ ಅನುಭವ ಮತ್ತು ಆತನ ಹಿಂದಿನ ಪ್ರವಾಸಾನುಭವಗಳನ್ನು ನೋಡಿದರೆ ಇವೆಲ್ಲ ಗೊತ್ತಿರುವ ಸಾಧ್ಯತೆ ಇದ್ದೇ ಇದೆ. ಆದರೆ ಆತ ತಾನು ಹೋಗುತ್ತಿರುವ ರಸ್ತೆಯಲ್ಲಿ ಕಾರು ಸಿಕ್ಕಿಹಾಕಿಕೊಳ್ಳುವುದನ್ನು ಊಹಿಸಿರದೆ ಇರಬಹುದು. ಯಾಕೆಂದರೆ ಹಿಮ ಋತು ಈಗ ತಾನೆ ಪ್ರಾರಂಭವಾಗಿದೆ. ಆತ ಹೋದ ಭಾಗದಲ್ಲಿ ಇಲ್ಲಿಯತನಕ ಒಂದೆರಡು ಸಾರಿ ಮಾತ್ರ ಹಿಮ ಬಿದ್ದಿರಬಹುದು. ಬಿದ್ದದ್ದು ಕರಗಿ ಹೋಗಿರಬಹುದು. ಹಾಗೆಂದು ಧೈರ್ಯ ಮಾಡಿ ಹೋಗಿದ್ದೆ ಜೇಮ್ಸ್‌ನ ಸಾವಿಗೆ ಮತ್ತು ಆತನ ಕುಟುಂಬ ಅನುಭವಿಸಿದ ಆ 9 ದಿನಗಳ ನರಕಾನುಭವಕ್ಕೆ ಕಾರಣವಾಯಿತೇನೊ. ಎಷ್ಟೊ ಸಲ ನಮ್ಮ ಲೆಕ್ಕಾಚಾರಗಳು ಕೈಕೊಡುತ್ತವೆ. ಆದರೆ ಸಣ್ಣಪುಟ್ಟ ಎಂದು ಭಾವಿಸುವ ಇಂತಹವುಗಳೆ ಜೀವ ತೆಗೆಯುವ ದುಬಾರಿ ಲೆಕ್ಕಾಚಾರಗಳಾಗಿಬಿಡುವುದೊಂದು ದೌರ್ಭ್ಯಾಗ್ಯ.
ಅಮೇರಿಕ ಎಲ್ಲಾ ಕಾಲದಲ್ಲಿಯೂ ಸ್ವರ್ಗವೇನಲ್ಲ. ಇಲ್ಲೂ ಅಪಾಯಗಳಿವೆ. ಈ ದೇಶದಲ್ಲಿಯೂ, ಅರ್ಧ ಮೈಲಿ ದೂರದಲ್ಲಿರುವವನನ್ನು 40 ಕ್ಕೂಹೆಚ್ಚು ಜನ ಹಿಮದ ಮೇಲೆ ಓಡುವ ಸ್ನೋಮೊಬೈಲ್ ವಾಹನ ಬಳಸಿ, ಕುದುರೆಗಳನ್ನು ಉಪಯೋಗಿಸಿ, ಹೆಲಿಕಾಪ್ಟರ್ ಏರಿ, ಉಪಗ್ರಹಗಳ ಸಹಾಯ ಪಡೆದು, ಮೈಶಾಖವನ್ನು ಕಂಡುಹಿಡಿಯುವ ಹಾಟ್‌ಸ್ಪಾಟ್‌ನಂತಹ ಓದಿಬರೆದರೂ ಅರ್ಥವಾಗದಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಯೂ ಎರಡು ದಿನಗಳ ನಂತರವಷ್ಟೆ ಕಂಡುಹಿಡಿಯಲು ಸಾಧ್ಯವಾಯಿತು. ಇದೇನೂ ಉತ್ಪ್ರೇಕ್ಷೆಯಲ್ಲ! ಪ್ರಕೃತಿಯ ಮುಂದೆ ಮಾನವ ಕುಬ್ಜಾತಿಕುಬ್ಜ, ಅಲ್ಲವೆ?