ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ…

This post was written by admin on August 29, 2009
Posted Under: Uncategorized

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 4,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]

ಪ್ರತಿಭಾವಂತರು ಹೇಗಾಗುತ್ತಾರೆ? ನಾವು ಯಾವುದನ್ನು ಪ್ರತಿಭೆ ಎನ್ನುತ್ತೇವೆಯೋ ಅದು ಮನುಷ್ಯನಿಗೆ ಹುಟ್ಟುತ್ತಲೆ ಇರುತ್ತದೆಯೊ ಅಥವ ಮನುಷ್ಯ ಅದನ್ನು ಕಾಲಾನುಕ್ರಮೇಣ ಸಂಪಾದಿಸಿಕೊಳ್ಳುತ್ತಾನೊ? ಮ್ಯಾಲ್ಕಮ್ ಗ್ಲಾಡ್‌ವೆಲ್ ಪ್ರಕಾರ ಕಲಿಯುವ/ಅಭ್ಯಾಸ ಮಾಡುವ ಹಂಬಲಿಕೆಯೆ ಪ್ರತಿಭೆ. ಒಬ್ಬನಿಗೆ ಯಾವುದೊ ಒಂದು ವಿಷಯ/ಆಟ/ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ. ಅದು ಕ್ರಮೇಣ ತೀವ್ರವಾದ ಆಸಕ್ತಿಯಾಗಿ ಬದಲಾಗುತ್ತದೆ. ತನ್ನ ಆಸಕ್ತಿಯ ವಿಷಯದಲ್ಲಿ ಪ್ರಾವೀಣ್ಯತೆ ಪಡೆದುಕೊಳ್ಳಲು ಆತ ಹಲವಾರು ವೈಯಕ್ತಿಕ ಸುಖಗಳನ್ನು–ನಿದ್ದೆ, ಮೋಜು, ತಿರುಗಾಟ, ಸಂಸಾರಸುಖ, ಹಣಸಂಪಾದನೆ, ಮುಂತಾದುವುಗಳನ್ನು ನಿರ್ಲಕ್ಷ್ಯ ಮಾಡಿ ಇಲ್ಲವೆ ತ್ಯಾಗ ಮಾಡಿ ಮುಂದುವರೆಯುತ್ತಾನೆ. ಕೆಲವೊಮ್ಮೆ ತನ್ನ ಮನೆಯವರ ಇಷ್ಟಕ್ಕೆ ವಿರುದ್ಧವಾಗಿಯೂ ನಡೆಯಬೇಕಾಗುತ್ತದೆ. ಕಷ್ಟನಷ್ಟಗಳೂ ಬರಬಹುದು. ಆದರೆ, ತನ್ನ ವಿಷಯದ ಬಗೆಗಿನ ತೀವ್ರಾಸಕ್ತಿಯಿಂದಾಗಿ, ಅದರಲ್ಲಿ ಪ್ರಾವೀಣ್ಯತೆ ಪಡೆಯುವ ಹಂಬಲಿಕೆಯಿಂದಾಗಿ, ತೀವ್ರ ಅಭ್ಯಾಸ ಮಾಡುತ್ತ ಹೋಗುತ್ತಾನೆ. ಇದೆಲ್ಲದರಿಂದಾಗಿ ಕೊನೆಗೆ ಪ್ರಾವೀಣ್ಯತೆಯನ್ನು ಪಡೆಯುತ್ತಾನೆ. ಪ್ರತಿಭಾವಂತ ಎನಿಸಿಕೊಳ್ಳುತ್ತಾನೆ. ಆದರೆ, ಆ ಕಲಿಕೆಯ ದಿನಗಳಲ್ಲಿ ಆತನಲ್ಲಿದ್ದ ಹಂಬಲಿಕೆ ಮತ್ತು ಪಟ್ಟುಬಿಡದೆ ಮಾಡಿದ ಅಭ್ಯಾಸವೆ ಇಲ್ಲಿ ಪ್ರತಿಭೆಯೆ ಹೊರತು, ಪ್ರತಿಭೆ ಎನ್ನುವುದು ಆತನಲ್ಲಿದ್ದ ಯಾವುದೊ ಒಂದು ಹುಟ್ಟುಗುಣ ಅಥವ ಜಾದೂ ಅಂಶವಲ್ಲ.

ಇಲ್ಲಿ ಇನ್ನೊಂದು ಅಂಶವಿದೆ. ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯದಲ್ಲಿ, ತೀವ್ರವಾದ ಆಸಕ್ತಿಯಿಂದ, ಅತೀವ ಹಂಬಲದಿಂದ ಅಭ್ಯಾಸ ಆರಂಭಿಸಿರುತ್ತಾರೆ. ಅನೇಕ ದಿನ-ವಾರ-ವರ್ಷಗಳ ಅಭ್ಯಾಸ ಮಾಡುತ್ತಾರೆ. ಮೊಟ್ಟಮೊದಲ ಸಣ್ಣ ಕಂಪ್ಯೂಟರ್ ಬಂದಾಗ ಬಿಲ್ ಗೇಟ್ಸ್, ಬಿಲ್ ಜಾಯ್ ತರಹವೆ ನೂರಾರು ಹುಡುಗರು ಅದರಲ್ಲಿ ಆಡಲು, ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿರುತ್ತಾರೆ. ಕೆಲವರು ಆರಂಭದಲ್ಲಿ ಒಂದಷ್ಟು ಯಶಸ್ಸನ್ನೂ ಪಡೆದಿರುತ್ತಾರೆ. ಆದರೆ ಅವರೆಲ್ಲರೂ ಬಿಲ್ ಗೇಟ್ಸ್ ಆಗಲಿಲ್ಲವಲ್ಲ, ಏಕೆ? ನಮ್ಮಲ್ಲಿಯೂ ಸಾವಿರಾರು ಹುಡುಗರು ಅನೇಕ ಉದ್ದಾಮ ಗುರುಗಳ ಬಳಿ ಸಂಗೀತವನ್ನೊ, ಕಲೆಯನ್ನೊ, ಆಟವನ್ನೊ ಅಭ್ಯಾಸ ಮಾಡುತ್ತಾರೆ. ಆದರೆ ಅವರೆಲ್ಲರೂ ಭೀಮಸೇನ ಜೋಷಿಯಾಗಲಿ, ಗಂಗೂಬಾಯಿ ಹಾನಗಲ್ ಆಗಲಿ, ಸಚಿನ್ ತೆಂಡೂಲ್ಕರ್ ಆಗಲಿ ಆಗುತ್ತಿಲ್ಲವಲ್ಲ, ಯಾಕೆ? ಇದಕ್ಕೆ ಉತ್ತರ, ಒಬ್ಬ ತನ್ನ ಆಯ್ಕೆಯ ವಿಷಯದಲ್ಲಿ ಪ್ರತಿಭಾವಂತ ಎನ್ನಿಸಿಕೊಳ್ಳಬೇಕಾದರೆ ಆತ ಎಷ್ಟು ಗಂಟೆಗಳ ಕಾಲ ತೀವ್ರಾಸಕ್ತಿಯಿಂದ ಅಭ್ಯಾಸ ಮಾಡಿದ್ದಾನೆ ಎನ್ನುವುದರಲ್ಲಿದೆ. ಆ ಗಂಟೆಗಳ ಪ್ರಮಾಣವಾದರೂ ಎಷ್ಟು?

ಆಂಡರ್ಸ್ ಎರಿಕ್‌ಸನ್ ಎನ್ನುವ ಮನ:ಶಾಸ್ತ್ರಜ್ಞನೊಬ್ಬ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ 1990ರ ಸುಮಾರಿನಲ್ಲಿ ಬರ್ಲಿನ್ನಿನ ಪ್ರಸಿದ್ಧ ಸಂಗೀತ ಅಕಾಡೆಮಿಯಲ್ಲಿ ಒಂದು ಅಧ್ಯಯನ ಕೈಗೊಳ್ಳುತ್ತಾನೆ. ಅಕಾಡೆಮಿಯ ಅಧ್ಯಾಪಕರ ಸಹಾಯದೊಂದಿಗೆ ಅವರು ಅಕಾಡೆಮಿಯಲ್ಲಿನ ಪಿಟೀಲು ವಾದ್ಯಗಾರರನ್ನು ಮೂರು ಗುಂಪುಗಳಾಗಿ ವಿಭಾಗಿಸುತ್ತಾರೆ. ಮೊದಲ ಗುಂಪಿನಲ್ಲಿ ವಿಶ್ವದರ್ಜೆಯ ಪಿಟೀಲುಗಾರರಾಗುವ ಸಾಮರ್ಥ್ಯಗಳಿದ್ದ ವಿದ್ಯಾರ್ಥಿಗಳಿರುತ್ತಾರೆ. ಎರಡನೆಯದರಲ್ಲಿ ‘ಉತ್ತಮ/ಪರವಾಗಿಲ್ಲ’ ಎನ್ನಬಹುದಾದವರು. ಮೂರನೆಯ ಗುಂಪು ಬಹುಶಃ ಸ್ವಂತವಾಗಿ ಎಂದೂ ಕಾರ್ಯಕ್ರಮ ನೀಡಲಾಗದ, ಶಾಲೆಯೊಂದರಲ್ಲಿ ಸಂಗೀತದ ಮೇಷ್ಟ್ರುಗಳಾಗುವುದರಲ್ಲಿ ಮಾತ್ರ ಆಸಕ್ತಿಯಿದ್ದ ವಿದ್ಯಾರ್ಥಿಗಳದು. ಈ ಮೂರೂ ಗುಂಪಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಪ್ರಶ್ನೆಯೊಂದನ್ನು ಕೇಳಲಾಯಿತು: ನಿಮ್ಮ ಇಲ್ಲಿಯವರೆಗಿನ ಜೀವಮಾನದಲ್ಲಿ, ನೀವು ಪಿಟೀಲನ್ನು ಕೈಗೆತ್ತಿಕೊಂಡ ಮೊದಲ ದಿನದಿಂದ ಇಲ್ಲಿಯವರೆಗೆ, ಒಟ್ಟು ಎಷ್ಟು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದೀರಿ?

“ಆ ಮೂರೂ ಗುಂಪುಗಳಲ್ಲಿದ್ದ ಎಲ್ಲರೂ ಬಹುತೇಕ ಸುಮಾರು ಒಂದೇ ವಯಸ್ಸಿನಲ್ಲಿ (ಐದು ವರ್ಷದ ಸುಮಾರಿನಲ್ಲಿ) ಪಿಟೀಲು ಕಲಿಯಲು ಆರಂಭಿಸಿದ್ದರು. ಆರಂಭದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲರೂ ಸಮಾನ ಎನ್ನಬಹುದಾದಷ್ಟು ಕಾಲ (ವಾರಕ್ಕೆ 2-3 ಗಂಟೆಗಳ ಅವಧಿ) ಅಭ್ಯಾಸ ಮಾಡಿದ್ದರು. ಆದರೆ ಆ ಹುಡುಗರಿಗೆ ಎಂಟು ವರ್ಷ ಆಗುತ್ತಿದ್ದ ಸುಮಾರಿನಲ್ಲಿ ನಿಜವಾದ ವ್ಯತ್ಯಾಸಗಳು ಕಾಣಲಾರಂಭಿಸಿದವು. ತಮ್ಮ ತರಗತಿಯಲ್ಲಿ ಶ್ರೇಷ್ಠ ವಿದ್ಯಾರ್ಥಿಗಳಾಗಿ ಹೊರಹೊಮ್ಮಲಿದ್ದ ವಿದ್ಯಾರ್ಥಿಗಳು ಬೇರೆಲ್ಲರಿಗಿಂತ ಹೆಚ್ಚಿನ ಅಭ್ಯಾಸ ಮಾಡಲು ಶುರುವಿಟ್ಟುಕೊಂಡರು. ಒಂಬತ್ತನೆ ವಯಸ್ಸಿಗೆ ವಾರಕ್ಕೆ ಆರು ಗಂಟೆಗಳು, 12ನೆ ವಯಸ್ಸಿಗೆ ವಾರಕ್ಕೆ 8 ಗಂಟೆಗಳು, 14ನೆ ವಯಸ್ಸಿಗೆ ವಾರಕ್ಕೆ 16 ಗಂಟೆಗಳು, ಹೀಗೆ ಮೇಲೆಮೇಲಕ್ಕೆ ಹೋಗುತ್ತ ಹೋಯಿತು ಅವರ ಅಭ್ಯಾಸದ ಸಮಯ. ಅವರ ಇಪ್ಪತ್ತನೆಯ ವಯಸ್ಸಿಗೆಲ್ಲ, ಏಕಚಿತ್ತದಿಂದ, ತಾವು ಕಲಿಯುತ್ತಿದ್ದ ವಾದ್ಯದಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಪಡೆಯುವ ಏಕಮೇವ ಉದ್ದೇಶದಿಂದ, ವಾರವೊಂದಕ್ಕೆ 30 ಗಂಟೆಗಳಿಗೂ ಹೆಚ್ಚಿನ ಕಾಲ ಅಭ್ಯಾಸ ಮಾಡುತ್ತಿದ್ದರು. ಹೇಳಬೇಕೆಂದರೆ, ತಮ್ಮ ಇಪ್ಪತ್ತನೆಯ ವಯಸ್ಸಿಗೆಲ್ಲ ಈ ಶ್ರೇಷ್ಠ ಸಂಗೀತಗಾರರು ತಲಾ ಹತ್ತು ಸಾವಿರ ಗಂಟೆಗಳ ಅಭ್ಯಾಸ ಪೂರೈಸಿದ್ದರು. ಇದಕ್ಕೆ ವಿರುದ್ಧವಾಗಿ, ‘ಉತ್ತಮ/ಪರವಾಗಿಲ್ಲ’ ಎನ್ನುವ ಗುಂಪಿನಲ್ಲಿದ್ದ ವಿದ್ಯಾರ್ಥಿಗಳು ಸುಮಾರು ಎಂಟು ಸಾವಿರ ಗಂಟೆಗಳನ್ನು ಪೂರೈಸಿದ್ದರೆ, ಭಾವಿ ಸಂಗೀತ ಅಧ್ಯಾಪಕರು ಕೇವಲ ನಾಲ್ಕು ಸಾವಿರ ಗಂಟೆಗಳ ಅಭ್ಯಾಸ ಪೂರೈಸಿದ್ದರು.

“ಎರಿಕ್‌ಸನ್ ಮತ್ತು ಆತನ ಸಹೋದ್ಯೋಗಿಗಳು ನಂತರ ಇದೇ ರೀತಿ ಹವ್ಯಾಸಿ ಮತ್ತು ವೃತ್ತಿಪರ ಪಿಯಾನೊವಾದಕರ ಗುಂಪನ್ನು ತುಲನೆ ಮಾಡುತ್ತಾರೆ. ಇಲ್ಲಿಯೂ ಸಹ ಹಿಂದಿನದೆ ರೀತಿಯ ಮಾದರಿಗಳು ಕಂಡುಬಂದವು. ಹವ್ಯಾಸಿ ಪಿಯಾನೊಗಾರರು ತಮ್ಮ ಬಾಲ್ಯಕಾಲದಲ್ಲಿ ವಾರಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚಿನ ಅಭ್ಯಾಸ ಮಾಡುತ್ತಿರಲಿಲ್ಲ ಮತ್ತು ತಮ್ಮ ಇಪ್ಪತ್ತನೆಯ ವಯಸ್ಸಿಗೆ ಅವರೆಲ್ಲ ಸರಾಸರಿ ಎರಡು ಸಾವಿರ ಗಂಟೆಗಳ ಕಾಲ ಅಭ್ಯಾಸ ಮಾಡಿದ್ದರು. ಮತ್ತೊಂದು ಕಡೆ ವೃತ್ತಿಪರರು ತಮ್ಮ ಅಭ್ಯಾಸದ ಅವಧಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತ ಹೋಗಿ, ತಮ್ಮ ಇಪ್ಪತ್ತನೆಯ ವಯಸ್ಸಿಗೆಲ್ಲ, ಪಿಟೀಲುಗಾರರಂತೆಯೆ, ದಶಸಹಸ್ರ ಗಂಟೆಗಳನ್ನು ಮುಟ್ಟಿಕೊಂಡಿದ್ದರು.

“ಎರಿಕ್‌ಸನ್ನನ ಈ ಅಧ್ಯಯನದಲ್ಲಿ ಕಂಡುಬಂದ ಅತಿ ಗಮನಾರ್ಹ ಅಂಶ ಏನೆಂದರೆ, ಅಲ್ಲಿಯ ಶ್ರೇಷ್ಠರ ಗುಂಪಿನಲ್ಲಿ ಒಬ್ಬನೇ ಒಬ್ಬ “ಸಹಜ ಪ್ರತಿಭಾವಂತ”ನನ್ನು ಅವರ ತಂಡ ಕಾಣಲಿಲ್ಲ. ತನ್ನ ವಾರಿಗೆಯವರು ಅಭ್ಯಾಸ ಮಾಡುತ್ತಿದ್ದದ್ದಕಿಂತ ಕಮ್ಮಿ ಅಭ್ಯಾಸ ಮಾಡುತ್ತ ತಾನು ಮಾತ್ರ ಮಿಕ್ಕೆಲ್ಲರಿಗಿಂತ ಸುಲಲಿತವಾಗಿ ಸಾಧನೆಯ ಶಿಖರ ಏರಿದ ಒಬ್ಬನೇ ಒಬ್ಬ ಜನ್ಮಜಾತ ಪ್ರತಿಭಾವಂತ ಅವರಿಗೆ ಸಿಗಲಿಲ್ಲ. ಹಾಗೆಯೆ, ಇತರೆಲ್ಲರಿಗಿಂತ ಹೆಚ್ಚಿನ ಶ್ರಮ ಹಾಕಿಯೂ, ಸಾಧನೆಯ ಶಿಖರ ಏರಲು ಏನೊ ಒಂದು ಕಮ್ಮಿಯಾಗಿಬಿಟ್ಟ “ಗಾಣದೆತ್ತು”ಗಳೂ ಅವರಿಗೆ ಕಾಣಿಸಲಿಲ್ಲ. ಅವರ ಈ ಸಂಶೋಧನೆ ಇಲ್ಲಿ ಏನನ್ನು ಹೇಳುತ್ತದೆ ಎಂದರೆ, ಒಳ್ಳೆಯ ಸಂಗೀತಶಾಲೆಯೊಂದಕ್ಕೆ ಸೇರಿಕೊಂಡ ಅರ್ಹ ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ಮತ್ತೊಬ್ಬನಿಂದ ಬೇರ್ಪಡಿಸುವ ಅಂಶ ಏನೆಂದರೆ ಅವನು ಇತರರಿಗಿಂತ ಎಷ್ಟು ಹೆಚ್ಚಿನ ಪ್ರಮಾಣದ ಅಭ್ಯಾಸ ಮಾಡುತ್ತಾನೆ ಎನ್ನುವುದಷ್ಟೆ. ಇಷ್ಟೆ ಇದರಲ್ಲಿರುವುದು. ಇನ್ನೂ ಹೇಳಬೇಕೆಂದರೆ, ಸಾಧನೆಯ ಅತ್ಯುನ್ನತ ಸ್ಥಾನದಲ್ಲಿರುವವರು ಜಾಸ್ತಿ ದುಡಿಯುತ್ತಾರೆ, ಅಥವ ಎಲ್ಲರಿಗಿಂತಲೂ ಜಾಸ್ತಿ ದುಡಿಯುತ್ತಾರೆ ಎನ್ನುವುದು ಮಾತ್ರವಲ್ಲ. ಅವರು ಹೆಚ್ಚು, ಹೆಚ್ಚೆಚ್ಚು ಕಷ್ಟಪಟ್ಟು ದುಡಿಯುತ್ತಾರೆ.” (“Outliers” – ಪು. 39)

ಈ ದಶಸಹಸ್ರ ಗಂಟೆಯ ನಿಯಮದ ಆಧಾರದ ಮೇಲೆಯೆ ಗ್ಲಾಡ್‌ವೆಲ್ ವಿಶ್ವಪ್ರಸಿದ್ಧ ಸಂಗೀತತಂಡ “ಬೀಟಲ್ಸ್” ಮತ್ತು ಮೈಕ್ರೋಸಾಫ್ಟಿನ ಬಿಲ್ ಗೇಟ್ಸ್‌ನ ಯಶಸ್ಸನ್ನು ಅವಲೋಕಿಸುತ್ತಾನೆ. ಬೀಟಲ್ಸ್ 1960ರಲ್ಲಿ ಇಂಗ್ಲೆಂಡಿನ ಅಷ್ಟೇನೂ ಹೆಸರಿಲ್ಲದ ಹೈಸ್ಕೂಲ್ ಹುಡುಗರ ಒಂದು ರಾಕ್ ಬ್ಯಾಂಡ್. ಆ ಸುಮಾರಿನಲ್ಲಿ ಅವರಿಗೆ ಜರ್ಮನಿಯ ಹ್ಯಾಂಬರ್ಗ್ ಎಂಬ ಊರಿನಲ್ಲಿ ಕಾರ್ಯಕ್ರಮ ನೀಡಲು ಆಕಸ್ಮಿಕವಾಗಿ ಅವಕಾಶ ಸಿಗುತ್ತದೆ. ಅದು ಬೆತ್ತಲೆ ಕ್ಲಬ್ಬುಗಳಲ್ಲಿ ಹಾಡುವ ಅವಕಾಶ. ಬೀಟಲ್ಸ್ ತಂಡದ ಒಂದಿಬ್ಬರು ಆ ಸಮಯದಲ್ಲಿ ವಯಸ್ಕರೂ ಅಗಿರಲಿಲ್ಲ. ಅದರೂ ಅಲ್ಲಿ ಸಿಗುತ್ತಿದ್ದ ಮದ್ಯ ಮತ್ತು ಲೈಂಗಿಕಸುಖದ ಅವಕಾಶಗಳಿಂದಾಗಿ ಅವರು ಜರ್ಮನಿಯ ಆ ಊರಿಗೆ ಮುಂದಿನ ಒಂದೆರಡು ವರ್ಷ ಹೋಗಿಬರುತ್ತಾರೆ. ಇಲ್ಲಿಯೇ ಆವರ ತಂಡ “ಪ್ರತಿಭಾವಂತ”ವಾಗಿದ್ದು.

1960-62ರ ಒಂದೂವರೆ ವರ್ಷದ ಅವಧಿಯಲ್ಲಿ ಬೀಟಲ್ಸ್ ಐದು ಸಲ ಹ್ಯಾಂಬರ್ಗ್‌ಗೆ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ಒಟ್ಟು 270 ದಿನ ಕಳೆಯುತ್ತಾರೆ. ಪ್ರತಿದಿನ ಸುಮಾರು 8 ಗಂಟೆಗಳ ಕಾಲ ಹಾಡುಗಾರಿಕೆ. 1964ರಲ್ಲಿ ಅವರಿಗೆ ಮೊಟ್ಟಮೊದಲ ಯಶಸ್ಸು ಸಿಗುವ ಹೊತ್ತಿಗೆಲ್ಲ ಅವರು ಸ್ಟೇಜಿನ ಮೇಲೆ ಸುಮಾರು 1200 ಕಾರ್ಯಕ್ರಮಗಳನ್ನು ಕೊಟ್ಟಿದ್ದರು. ಬಹುತೇಕ ಸಂಗೀತ ಬ್ಯಾಂಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ ಅಷ್ಟೊಂದು ಕಾರ್ಯಕ್ರಮ ನೀಡಿರುವುದಿಲ್ಲ. ಬೀಟಲ್ಸ್‌ರ ಜೀವನಚರಿತ್ರೆ ಬರೆದಿರುವಾತ ಹೇಳುತ್ತಾನೆ, “ಹ್ಯಾಂಬರ್ಗ್‌ಗೆ ಹೊರಟಾಗ ಸ್ಟೇಜಿನ ಮೇಲೆ ಕಾರ್ಯಕ್ರಮ ಕೊಡುವ ವಿಷಯದಲ್ಲಿ ಅವರದು ಸಾಧಾರಣ ತಂಡ. ಆದರೆ ಅಲ್ಲಿಂದ ಅವರು ಒಂದು ಅತ್ಯುತ್ತಮ ತಂಡವಾಗಿ ಹಿಂದಿರುಗಿದರು. ಬಹಳಹೊತ್ತು ಹಾಡಬಲ್ಲ ದೈಹಿಕ ಶಕ್ತಿಯನ್ನಷ್ಟೆ ಅವರು ಅಲ್ಲಿ ಪಡೆದುಕೊಳ್ಳಲಿಲ್ಲ. ದೀರ್ಘಕಾಲ ಬೇರೆಬೇರೆ ಅಭಿರುಚಿಯ ಶ್ರೋತೃಗಳಿಗಾಗಿ ಹಾಡುವ ಕಾರಣದಿಂದಾಗಿ ಕೇವಲ ರಾಕ್ ಅಂಡ್ ರೋಲ್ ಮಾತ್ರವಲ್ಲದೆ Jazz ಮತ್ತಿತರ ಪ್ರಕಾರಗಳ ಅಸಂಖ್ಯಾತ ಹಾಡುಗಳನ್ನೂ ಅವರು ಕಲಿಯಬೇಕಾಯಿತು. ಅದಕ್ಕೆ ಮೊದಲು ಸ್ಟೇಜ್ ಮೇಲೆ ಅವರಿಗೊಂದು ಶಿಸ್ತಿರಲಿಲ್ಲ. ಆದರೆ ವಾಪಸು ಬಂದಾಗ ಅವರು ಬೇರೆಯವರಂತಿರಲಿಲ್ಲ. ಅದು ಅವರು ರೂಪುಗೊಂಡ ಸಂದರ್ಭ.”

ಈಗ ಬಿಲ್ ಗೇಟ್ಸ್ ವಿಚಾರ ನೋಡೋಣ. ಬಿಲ್‌ನ ಅಪ್ಪ ಒಬ್ಬ ಸ್ಥಿತಿವಂತ ಲಾಯರ್. ಚಿಕ್ಕಂದಿನಿಂದಲೂ ತನ್ನ ಜೊತೆಯವರಿಗಿಂತ ಸ್ವಲ್ಪ ಮುಂದಿದ್ದ ಕಾರಣದಿಂದಾಗಿ ಆತನ ಅಪ್ಪಅಮ್ಮ ಆತನನ್ನು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಅದು ಸಿಯಾಟಲ್ ನಗರದ ಶ್ರೀಮಂತರ ಮಕ್ಕಳು ಹೋಗುವ ಶ್ರೀಮಂತ ಶಾಲೆ. ಬಿಲ್ ಗೇಟ್ಸ್ ಎಂಟನೆಯ ತರಗತಿಯಲ್ಲಿದ್ದಾಗ ಆ ಶಾಲೆಗೆ ಶ್ರೀಮಂತ ಶಾಲಾ ಮಕ್ಕಳ “ತಾಯಂದಿರ ಕ್ಲಬ್” ಕಂಪ್ಯೂಟರ್ ಒಂದನ್ನು ಉಡುಗೊರೆಯಾಗಿ ನೀಡುತ್ತದೆ. ಅದು 1968. ಆಗ ಶಾಲೆಗಳಲ್ಲಿರಲಿ, ಅಮೆರಿಕದ ಎಷ್ಟೊ ಕಾಲೇಜುಗಳಲ್ಲಿಯೆ ಕಂಪ್ಯೂಟರ್ ಇರಲಿಲ್ಲ. ಅಂತಹುದರಲ್ಲಿ ಎಂಟನೆಯ ತರಗತಿಯ ಬಿಲ್ ತನ್ನ ಒಂದಷ್ಟು ಸ್ನೇಹಿತರೊಂದಿಗೆ ಕಂಪ್ಯೂಟರ್ ಕಲಿಯಲು ಆರಂಭಿಸುತ್ತಾನೆ. ಈ ಕಂಪ್ಯೂಟರ್ ಹೊರಗಿನ ಮೇನ್‌ಫ್ರೇಮ್ ಒಂದಕ್ಕೆ ಕನೆಕ್ಟ್ ಆಗಿರುತ್ತದೆ ಮತ್ತು ಅದನ್ನು ಉಪಯೋಗಿಸಲು ಬಾಡಿಗೆ ಕೊಡಬೇಕಿರುತ್ತದೆ. ಇವರು ಉಪಯೋಗಿಸಿದಷ್ಟೂ ಅವರ ಶ್ರೀಮಂತ ತಾಯಂದಿರು ದುಡ್ಡು ಕೂಡಿಸುತ್ತ ಹೋಗುತ್ತಾರೆ. ಇದೇ ಸಮಯದಲ್ಲಿ ಸ್ಥಳೀಯ ಕಂಪನಿಯೊಂದರ ಸಾಫ್ಟ್‌ವೇರ್ ಪ್ರೊಗ್ರಾಮ್‌ಗಳನ್ನು ಟೆಸ್ಟ್ ಮಾಡುವ ಮತ್ತು ಅದಕ್ಕೆ ಪ್ರತಿಯಾಗಿ ಅವರ ಕಂಪ್ಯೂಟರ್‌ಗಳನ್ನು ಉಪಯೋಗಿಸುವ ಅವಕಾಶ ಬಿಲ್ ಗೇಟ್ಸ್‌ಗೆ ದೊರೆಯುತ್ತದೆ. ಅದಾದ ನಂತರ ಒಂದಷ್ಟು ದಿನ ವಿಶ್ವವಿದ್ಯಾಲಯದ ಕಂಪ್ಯೂಟರ್ ಬಳಸುವ ಅವಕಾಶ. ತನ್ನ 16ನೆ ವಯಸ್ಸಿನ ಒಂದು 7-ತಿಂಗಳ ಅವಧಿಯಲ್ಲಿ ಬಿಲ್ ಗೇಟ್ಸ್ ಪ್ರತಿದಿನ ಸರಾಸರಿ 8 ಗಂಟೆಗಳ ಕಾಲ ಕಂಪ್ಯೂಟರ್ ಬಳಸಿರುತ್ತಾನೆ. ಹೀಗೆ ಆತನಿಗೆ ಅವಕಾಶಗಳ ಮೇಲೆ ಅವಕಾಶ ದೊರೆಯುತ್ತ ಹೋಗುತ್ತದೆ. ಬಿಲ್ ತೀವ್ರಾಸಕ್ತಿಯಿಂದ ಕಲಿಯುತ್ತ ಹೋಗುತ್ತಾನೆ.

ತನ್ನ 19ನೆಯ ವಯಸ್ಸಿನಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕೆ ನಮಸ್ಕಾರ ಹಾಕಿ ತನ್ನದೆ ಸಾಫ್ಟ್‌ವೇರ್ ಕಂಪನಿಯಲ್ಲಿ ತೊಡಗಿಸಿಕೊಳ್ಳುವ ಹೊತ್ತಿಗೆಲ್ಲ ಬಿಲ್ ಗೇಟ್ಸ್‌ಗೆ ಸುಮಾರು ಏಳು ವರ್ಷಗಳಿಂದ ನಿರಂತರವಾಗಿ ಸಾಫ್ಟ್ಟ್‌ವೇರ್ ಪ್ರೋಗ್ರಾಮ್ಸ್ ಬರೆಯುತಿದ್ದ ಅನುಭವ ಇತ್ತು. ಗಂಟೆಗಳ ಲೆಕ್ಕಾಚಾರದಲ್ಲಿ ಆತ ಹತ್ತುಸಾವಿರ ಗಂಟೆಗಳಿಗಿಂತ ಮುಂದಿದ್ದ. ಆತನೆ ಹೇಳುವ ಪ್ರಕಾರ ಬಹುಶಃ ಆ ಸಮಯದಲ್ಲಿ ಆತನಿಗಿದ್ದಷ್ಟು ಪ್ರೋಗ್ರಾಮಿಂಗ್ ಅನುಭವ ಇಡೀ ಪ್ರಪಂಚದಲ್ಲಿ ಅವನದೇ ವಯಸ್ಸಿನ ಮತ್ತೊಬ್ಬನಿಗೆ ಇದ್ದಿದ್ದು ಸಂದೇಹ; “ಚಿಕ್ಕ ವಯಸ್ಸಿಗೆಲ್ಲ ನನಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಬಗ್ಗೆ ಒಳ್ಳೆಯ ಜ್ಞಾನ ಮತ್ತು ಅನುಭವ ದಕ್ಕಿತ್ತು. ನನ್ನದೆ ವಯಸ್ಸಿನ ಯಾರೊಬ್ಬರಿಗಿಂತ ಹೆಚ್ಚಿನ ಮತ್ತು ಉತ್ತಮ ಅನುಭವ ನನಗಿತ್ತು. ಅದು ಸಾಧ್ಯವಾಗಿದ್ದು ನಂಬಲಸಾಧ್ಯವಾದ ಅದೃಷ್ಟಕಾರಿ ಘಟನೆಗಳ ಸರಣಿಯಿಂದಾಗಿ.”

(ಮುಂದುವರೆಯುವುದು…)

ಮುಂದಿನ ವಾರ: ಯಾವುದಕ್ಕೂ “ಸಂಸ್ಕಾರ” ಇರಬೇಕ್ರಿ !

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Reader Comments

Add a Comment

required, use real name
required, will not be published
optional, your blog address