ಯಾವುದಕ್ಕೂ “ಸಂಸ್ಕಾರ” ಇರಬೇಕ್ರಿ !

This post was written by admin on September 3, 2009
Posted Under: Uncategorized

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 11,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ… ]

ಒಬ್ಬ ಮನುಷ್ಯ ಎಷ್ಟೆಲ್ಲಾ ಗಂಟೆಗಳ ಅಭ್ಯಾಸದಿಂದ ಪ್ರತಿಭಾವಂತನಾಗಿ ಬದಲಾದರೂ ಆತನಿಗೆ “ಅವಕಾಶ” ಕೂಡಿಬರದಿದ್ದರೆ ಯಶಸ್ಸಿನ ಶಿಖರ ಏರುವುದು ಕಷ್ಟ ಎಂದು ಮ್ಯಾಲ್ಕಮ್ ಗ್ಲಾಡ್‌ವೆಲ್ “ಹೊರಗಣವರು”ನಲ್ಲಿ ಪ್ರತಿಪಾದಿಸುತ್ತಾನೆ. ಅಸಾಮಾನ್ಯ ಸಾಧನೆಯಲ್ಲಿ ಪ್ರತಿಭೆಯ ಪಾಲಿಗಿಂತ “ಅವಕಾಶ”ದ ಪಾಲೆ ಹೆಚ್ಚು. ಬಿಲ್ ಗೇಟ್ಸ್, ಬೀಟಲ್ಸ್‌ರಂತೆ ಅಸಾಮಾನ್ಯ ಯಶಸ್ಸು ಕಾಣಲು ಅವರ ಪ್ರತಿಭೆ ಒಂದು ಪ್ರಮುಖ ಅಂಶ. ಆದರೆ ಅದರಷ್ಟರಿಂದಲೆ ಅವರು ಯಶಸ್ವಿಗಳಾಗಲಿಲ್ಲ. ಹೇಳಬೇಕೆಂದರೆ, ಅವರು ಪ್ರತಿಭಾಶಾಲಿಗಳಾಗಿದ್ದು ಕೂಡ ಅವರಿಗೆ ಒದಗಿ ಬಂದ ‘ಅವಕಾಶ’ಗಳಿಂದಾಗಿ, ಅಥವ ಅವರು ತಾವಾಗೇ ಒದಗಿಸಿಕೊಂಡ, ಹುಡುಕಿಕೊಂಡ ಅವಕಾಶಗಳಿಂದಾಗಿ.

ಇಷ್ಟಕ್ಕೂ ಈ ಅವಕಾಶಗಳು ಹೇಗೆ ಬರುತ್ತವೆ? ಅದು ಒಬ್ಬರ “ಅದೃಷ್ಟ”ವೆ? ಅವರ “ವಿಧಿ”ಯೇ? ನಾನು ಹಿಂದಿನ ಲೇಖನದ ಶೀರ್ಷಿಕೆಯೊಂದರಲ್ಲಿ ಬಳಸಿದ ಹಾಗೆ, ಅವರ “ಹುಟ್ಟಿದ ಗಳಿಗೆ/ಜಾತಕ”ವೆ? (ಇಲ್ಲಿ ಈ ಅದೃಷ್ಟ/ವಿಧಿ/ಜಾತಕ ಮುಂತಾದ ಪದಗಳನ್ನು ನಾನು ಬಳಸಿರುವುದನ್ನು ನೋಡಿ ಕೆಲವು ಓದುಗರು ಗ್ಲಾಡ್‌ವೆಲ್‌ನ ಪುಸ್ತಕದ ಬಗ್ಗೆ ಬೇರೆ ರೀತಿಯ ಅಭಿಪ್ರಾಯಕ್ಕೆ ಬರಬಾರದೆಂದು ಈ ಮೂಲಕ ಕೋರುತ್ತೇನೆ. ಯಾಕೆಂದರೆ “ಹೊರಗಣವರು” ಒಂದು ಪ್ರಖರ ವೈಚಾರಿಕತೆಯ, ವೈಜ್ಞಾನಿಕ ಮನೋಭಾವದ ಪುಸ್ತಕ. ಯಶಸ್ಸು-ಅವಕಾಶ-ದೇಶ-ಕಾಲ ಮುಂತಾದುವುಗಳ ಬಗ್ಗೆಯೇ ಚರ್ಚಿಸುವ ಸುಮಾರು 285 ಪುಟಗಳ ಆ ಪುಸ್ತಕದಲ್ಲಿ ಒಮ್ಮೆಯೂ ‘ಅದೃಷ್ಟ’ ಯಾ ‘ವಿಧಿ’ ಪದಗಳು ನುಸುಳಿಲ್ಲ ಎಂದರೆ ನಿಮಗೆ ಆ ಪುಸ್ತಕದ ವೈಚಾರಿಕತೆಯ ಪರಿಚಯವಾದೀತು ಎಂದು ಭಾವಿಸುತ್ತೇನೆ. ಈ ಲೇಖನ ಸರಣಿಯಲ್ಲಿ ನಾನು ಅಲ್ಲಲ್ಲಿ ಬಳಸಿರುವ ಈ “ಅಗ್ಗದ ಪದಗಳು” ಓದುಗರ ಮನಸ್ಸಿನಲ್ಲಿ ಒಂದಷ್ಟು ವಿರೋಧಾಭಾಸ ಮತ್ತು ಚಿಂತನೆ ಮೂಡಿಸಲಿ ಎನ್ನುವ ಕಾರಣಕ್ಕಾಗಿಯೆ ಹೊರತು ಬೇರೇನೂ ಅಲ್ಲ. ಅದು ಈ ಲೇಖನಗಳ ಸಂದರ್ಭದಲ್ಲಿ ಸಾಧ್ಯವಾಗಿಲ್ಲ ಎಂತಾದರೆ ಅದು ನನ್ನ ಬರಹದ ಅಸಾಮಾರ್ಥ್ಯವೆ ಹೊರತು “ಹೊರಗಣವರು” ಪ್ರತಿಪಾದಿಸುವ ವಿಚಾರವಲ್ಲ. – ರವಿ)

ಒಬ್ಬ ಮನುಷ್ಯನ ವಿಶ್ಲೇಷಣಾಜಾಣ್ಮೆ/ಬುದ್ಧಿವಂತಿಕೆ ಒಂದು ಹಂತದ ವರೆಗೆ ಆತನ ಅನುವಂಶಿಕತೆಯ ಮೇಲೆ ಅವಲಂಬಿತ ಎನ್ನುತ್ತಾರೆ ಸಂಶೋಧಕರು. ಹಾಗಾಗಿಯೆ ಕೆಲವು ಮನುಷ್ಯರು ಹುಟ್ಟಾ ಬುದ್ಧಿವಂತರಾಗಿ, ಮೇಧಾವಿಗಳಾಗಿ ಹುಟ್ಟುತ್ತಾರೆ. ಅವರ IQ (Intelligence Quotient/ಜಾಣ್ಮೆಯ ಪ್ರಮಾಣ) ಸಾಮಾನ್ಯವಾಗಿ ಇತರರಿಗಿಂತ ಹೆಚ್ಚಾಗಿರುತ್ತದೆ. ಆದರೆ ಒಬ್ಬ ಮನುಷ್ಯನ ಯಶಸ್ಸನ್ನು ಕೇವಲ ಆತನ IQ ಮಾತ್ರವೆ ನಿರ್ಧರಿಸುವುದಿಲ್ಲ. ಹಾಗೆಯೆ ಅತಿ ಹೆಚ್ಚು IQ ಇಲ್ಲ ಅಂದ ಮಾತ್ರಕ್ಕೆ ಅವರು ಜೀವನದಲ್ಲಿ ಯಶಸ್ವಿಗಳಾಗುವುದಿಲ್ಲ ಎನ್ನಲೂ ಆಗುವುದಿಲ್ಲ. ಇದನ್ನು ನಾವು ಟರ್ಮನ್ ಎನ್ನುವ ಮನಃಶಾಸ್ತ್ರಜ್ಞ ಮಾಡಿದ ಒಂದು IQ ಆಧಾರಿತ ಅಧ್ಯಯನವೊಂದರಿಂದ ಕಾಣಬಹುದು.

ಶತಮೂರ್ಖರು, ಮಾನಸಿಕ ಅಸ್ವಸ್ಥರು ಎನ್ನಬಹುದಾದವರ ವಿಶ್ಲೇಷಣಾ ಸಾಮರ್ಥ್ಯ ಅಥವ IQ 70 ಕ್ಕಿಂತ ಕಮ್ಮಿ ಇದ್ದರೆ, ಸಾಮಾನ್ಯ ಜನರ ಸರಾಸರಿ IQ 100. ಒಳ್ಳೆಯ ಕಾಲೇಜು ಪದವಿ ಪಡೆಯಲು ನಿಮಗೆ ಕನಿಷ್ಠ 115 IQ ಆದರೂ ಇರಬೇಕು. ಅತಿ ಬುದ್ಧಿವಂತ ಎನ್ನುವವರ IQ 140 ಕ್ಕಿಂತ ಮೇಲಿರುತ್ತದೆ. ವಿಶ್ವಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನನ IQ, 150.

ಸುಮಾರು 1920 ರ ಸುಮಾರಿನಲ್ಲಿ ಟರ್ಮನ್ ಕ್ಯಾಲಿಫೋರ್ನಿಯಾ ರಾಜ್ಯದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ IQ ಪರೀಕ್ಷೆ ಮಾಡುತ್ತಾನೆ. ಅದರಲ್ಲಿ 140 ರಿಂದ 200 ರವರೆಗಿನ IQ ಇದ್ದ ಹುಟ್ಟಾ-ಜಾಣ ಹುಡುಗರ ಪಟ್ಟಿ ಮಾಡುತ್ತಾನೆ. ಅಮೆರಿಕದ ಭವಿಷ್ಯದ ನೇತಾರರ, ಚಿಂತಕರ, ಕವಿಗಳ, ಸಾಧಕರ ಪಟ್ಟಿಯಲ್ಲಿ ತನ್ನ ಪಟ್ಟಿಯಲ್ಲಿಯ ಹುಡುಗರು ಕಾಣಿಸುತ್ತಾರೆ ಎಂದು ಭಾವಿಸುತ್ತಾನೆ. ಮುಂದಿನ ಐವತ್ತು ವರ್ಷಗಳ ಕಾಲ ಆ ಹುಡುಗರ ಜೀವನವನ್ನು, ಯಶಸ್ಸನ್ನು ದಾಖಲಿಸುತ್ತ ಹೋಗುತ್ತಾನೆ.

ಆರಂಭದಲ್ಲಿ ತನ್ನ ಪಟ್ಟಿಯಲ್ಲಿನ ಹುಡುಗರ ಕೆಲವು ಕೃತಿ/ಕಾರ್ಯಗಳನ್ನು ಹಿಂದಿನ ಪ್ರಸಿದ್ಧ ಜೀನಿಯಸ್‌ಗಳ ಆರಂಭದ ಕೃತಿ-ಕಾರ್ಯಗಳೊಂದಿಗೆ ಹೋಲಿಸುತ್ತಾನೆ. ಅದರ ಬಗ್ಗೆ ಕೆಲವು ವಿಮರ್ಶಕರ ಅಭಿಪ್ರಾಯವನ್ನು ಕೇಳುತ್ತಾನೆ. ಅವರೆಲ್ಲ ಈ ಹುಡುಗರ ಕೃತಿಗಳಿಗೂ, ಸಾಧಕರ ಆರಂಭಿಕ ಕೃತಿಗಳಿಗೂ ಇರುವ ಸಾಮ್ಯತೆಯನ್ನೂ, ಪ್ರಬುದ್ಧತೆಯನ್ನೂ ಗುರುತಿಸುತ್ತಾರೆ. ಆದರೆ ಆ ಹುಡುಗರು ವಯಸ್ಕರಾಗಿ, ಜೀವನದಲ್ಲಿ ನೆಲೆನಿಲ್ಲುವ ವಯಸ್ಸಿಗೆ ಬಂದಂತೆಲ್ಲ ಅವರ ಸಾಧನೆ/ಯಶಸ್ಸು ಹೇಳಿಕೊಳ್ಳುವ ಮಟ್ಟಕ್ಕೇನೂ ಮುಟ್ಟುವುದಿಲ್ಲ. ಆತನ ಪಟ್ಟಿಯಲ್ಲಿನ ಕನಿಷ್ಠ ಸಂಖ್ಯೆಯ ಜನ ಮಾತ್ರ ಇದ್ದುದರಲ್ಲಿ ಉತ್ತಮ ಎನ್ನುವ ಸ್ಥಾನಗಳಿಗೆ ಏರುತ್ತಾರೆ. ಬಹುಪಾಲು ಜನ ಸಾಮಾನ್ಯ ಎನ್ನಬಹುದಾದ ಹಂತದಲ್ಲಿಯೆ ನಿಂತುಬಿಡುತ್ತಾರೆ. ಕೆಳದರ್ಜೆಯ, ವಿಫಲ ಎನ್ನಬಹುದಾದ ಗುಂಪಿನಲ್ಲೂ ಒಂದಷ್ಟು ಜನ ಕಾಣಿಸುತ್ತಾರೆ. ಆದರೆ ಟರ್ಮನ್ ಕೊಟ್ಟಿದ್ದ IQ ಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ ಉತ್ತಮ ಎನ್ನಬಹುದಾದ ಸಂಖ್ಯೆ ಪಡೆಯದೆ ಆತನ ಪಟ್ಟಿಯಲ್ಲಿ ಸ್ಥಾನ ಗಳಿಸದೆ ಹೋದ ಇಬ್ಬರು ಹುಡುಗರು ಮುಂದಕ್ಕೆ ನೊಬೆಲ್ ಪುರಸ್ಕೃತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ!

ಅಂದರೆ, ಮನುಷ್ಯನ ಬುದ್ಧಿಮತ್ತೆಗೂ, ಆತ ಜೀವನದಲ್ಲಿ ಕಾಣುವ ಯಶಸ್ಸಿಗೂ ಗಂಟು ಹಾಕುವುದು ಅಸಂಬದ್ಧವಾಗುತ್ತದೆ. ಜೀವನದ ಅನೇಕ ಸಂದರ್ಭಗಳಲ್ಲಿ ಯಶಸ್ಯಿಯಾಗಲು ಬುದ್ಧಿಮತ್ತೆಯಷ್ಟೆ ಸಾಲದು, ಅದರ ಜೊತೆಗೆ ಫಲವತ್ತಾದ ಮನಸ್ಸೂ ಬೇಕಾಗುತ್ತದೆ. ಅದು ಸೃಜನಶೀಲವೂ, ನಾನಾ ಕೋನಗಳಲ್ಲಿ ವಿಶ್ಲೇಷಿಸುವಷ್ಟು ಕ್ರಿಯಾಶೀಲವೂ, ವಾಸ್ತವವನ್ನು ಅದು ಇದ್ದಂತೆ ಗ್ರಹಿಸುವ ಶಕ್ತಿಯುಳ್ಳದ್ದೂ ಆಗಿರಬೇಕಾಗುತ್ತದೆ. ಆದರೆ, ಬುದ್ಧಿಮತ್ತೆಯ ಹುಡುಗರನ್ನು, ಹಾಗೆಯೆ ಸಾಮಾನ್ಯ ಎನ್ನಬಹುದಾದ ಹುಡುಗರನ್ನು ಯಶಸ್ಸಿನ ದಾರಿಯತ್ತ ಕೊಂಡೊಯ್ಯುವ ಮಾರ್ಗವಾದರೂ ಯಾವುದು? ವಾಸ್ತವದ ಜೀವನವನ್ನು ಎದುರಿಸುವ ಉಪಾಯಗಳು ಮತ್ತು ನಡವಳಿಕೆಗಳು ಬರುವುದಾದರೂ ಎಲ್ಲಿಂದ ಮತ್ತು ತರಬೇತಿ ಕೊಡುವವರಾದರೂ ಯಾರು? ಇವೆಲ್ಲ ಒಬ್ಬರ “ಕೌಟುಂಬಿಕ ಹಿನ್ನೆಲೆಯಿಂದ” ಬರುತ್ತದೆ ಎನ್ನುತ್ತಾನೆ ಗ್ಲಾಡ್‌ವೆಲ್. ನಮ್ಮದೇ ದೇಸಿ ಭಾಷೆಯಲ್ಲಿ ಹೇಳಬೇಕೆಂದರೆ, ಮನೆಯಲ್ಲಿ ‘ಸಂಸ್ಕಾರ’ ಇದ್ದವರಿಗೆ ಜೀವನವನ್ನು ಎದುರಿಸುವುದು, ಅವಕಾಶಗಳನ್ನು ಹುಡುಕಿಕೊಳ್ಳುವುದು, ಸವಾಲುಗಳನ್ನು ತನ್ನ ಅನುಕೂಲಕ್ಕೆ ಮಾರ್ಪಡಿಸಿಕೊಳ್ಳುವುದು, ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರುವುದು, ಇವೆಲ್ಲ ಸಾಧ್ಯವಾಗುತ್ತದೆ. ಸಾಕ್ಷಿ?

IQ ಮಾಪನದ ಪ್ರಕಾರ ಇವತ್ತಿನ ಅಮೆರಿಕದಲ್ಲಿ ಅತೀ-ಬುದ್ಧಿವಂತ ಎಂದರೆ ಕ್ರಿಸ್ ಲ್ಯಾಂಗನ್ ಎನ್ನುವವ. ಅತನ IQ ಸುಮಾರು 195 ಕ್ಕಿಂತ ಹೆಚ್ಚಿದೆ. ಆಲ್ಬರ್ಟ್ ಐನ್‌ಸ್ಟೀನನ IQ 150ರ ಸುಮಾರಿನಲ್ಲಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು. ಹಾಗೆಂದ ಮಾತ್ರಕ್ಕೆ ಕ್ರಿಸ್ ಲ್ಯಾಂಗನ್ ಮಹಾನ್ ಸಾಧಕ, ಹೆಸರುವಾಸಿ ಎಂದು ನಾವು ಭಾವಿಸಬಾರದು. ಆತ ತನ್ನ ಕಾಲೇಜು ವಿದ್ಯಾಭ್ಯಾಸವನ್ನೂ ಮುಗಿಸಲಾಗಲಿಲ್ಲ. ತನ್ನ ಜೀವನದ ಬಹುಪಾಲನ್ನು ಬಾರೊಂದರಲ್ಲಿ ಬೌನ್ಸರ್ (ದೈತ್ಯಗಾತ್ರದ ಭದ್ರತಾ ಸಿಬ್ಬಂದಿ) ಆಗಿ ಕಳೆದ ಲ್ಯಾಂಗನ್ ಈಗ ತನ್ನ 57ನೆಯ ವಯಸ್ಸಿನಲ್ಲಿ ಅಮೆರಿಕದ ಗ್ರಾಮಾಂತರ ಪ್ರದೇಶವೊಂದರಲ್ಲಿ ಪಶುಸಾಕಾಣಿಕೆ ಮಾಡುತ್ತ ಜೀವನವನ್ನು ನಡೆಸುತ್ತಿದ್ದಾನೆ. ಆದರೆ ಅಷ್ಟೆಲ್ಲ IQ ಇರುವ ಕ್ರಿಸ್ ಲ್ಯಾಂಗನ್ ತನ್ನ ಜೀವನದಲ್ಲಿ ಈ ಮಟ್ಟದ ವೈಫಲ್ಯ ಕಂಡದ್ದಾದರೂ ಹೇಗೆ?

ಅದಕ್ಕೆ ಉತ್ತರವನ್ನು ನಾವು ಕ್ರಿಸ್ ಲ್ಯಾಂಗನ್‌ನ ಜೀವನದಲ್ಲಿ ನಡೆದ ಘಟನೆಗಳಲ್ಲೂ ಮತ್ತು ಆತನ ಕೌಟುಂಬಿಕ ಹಿನ್ನೆಲೆಯಲ್ಲೂ ಹುಡುಕಬೇಕು. ಆತನ ಅಮ್ಮನ ಮೊದಲ ಗಂಡನಿಗೆ ಹುಟ್ಟಿದ ಮಗ ಈತ. ಇವನು ಹುಟ್ಟುವ ಮೊದಲೆ ಅವರಪ್ಪ ಅವರಮ್ಮನನ್ನು ತೊರೆದು ಓಡಿಹೋಗಿಬಿಡುತ್ತಾನೆ. ಇವನು ಹುಟ್ಟಿದ ನಂತರ ಕ್ರಿಸ್‌ನ ತಾಯಿ ಇನ್ನೊಂದು ಮದುವೆ ಆಗುತ್ತಾಳೆ. ಆತನಿಂದ ಇನ್ನೊಂದು ಮಗು. ಆ ಗಂಡ ಕೊಲೆಯಾಗುತ್ತಾನೆ. ಆಕೆ ಮತ್ತೊಂದು ಮದುವೆ ಆಗುತ್ತಾಳೆ. ಅವನಿಂದ ಮತ್ತೊಂದು ಮಗು. ಆ ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮತ್ತೆ ನಾಲ್ಕನೆ ಮದುವೆ ಮಾಡಿಕೊಳ್ಳುತ್ತಾಳೆ. ಆತನಿಂದ ನಾಲ್ಕನೆ ಮಗು. ಆ ನಾಲ್ಕನೆ ಗಂಡನೊ ಸರಿಯಾಗಿ ಆದಾಯವಿಲ್ಲದ, ಕುಡುಕ ಮತ್ತು ಬೇಜವಾಬ್ದಾರಿಯ ಪತ್ರಕರ್ತ. ಮಕ್ಕಳನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ. ಅಪಾರ ಬಡತನದಲ್ಲಿ, ಅನೇಕ ಊರುಗಳಲ್ಲಿ, ಸ್ಲಮ್ಮುಗಳಂತಹ ಜಾಗಗಳಲ್ಲೆಲ್ಲ ಬಾಲ್ಯ ನೂಕಿದ ಕ್ರಿಸ್ ಲ್ಯಾಂಗನ್ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ತಮ್ಮಂದಿರನ್ನು ಹಿಂಸಿಸುತ್ತಿದ್ದ ಚಿಕ್ಕಪ್ಪನನ್ನು ಹೊಡೆದು ಉರುಳಿಸುತ್ತಾನೆ. ಬಿದ್ದು ಎದ್ದ ಮಲತಂದೆ ಹೊರಹೊರಟವ ಮತ್ತೆಂದೂ ಹಿಂದಿರುಗುವುದಿಲ್ಲ. ಮೇಧಾವಿಯಾಗಿರುವುದೆ ತಪ್ಪು ಎನ್ನುವಂತಹ ಒರಟು ಪ್ರಪಂಚದಲ್ಲಿ ತನ್ನ ತಮ್ಮಂದಿರನ್ನೂ ರಕ್ಷಿಸಿಕೊಳ್ಳುತ್ತ, ಕೆಲಸ ಮಾಡುತ್ತ, ಓದುತ್ತ, ತನ್ನ ದೇಹದ ಮಾಂಸಖಂಡಗಳನ್ನು ಉರಿಗೊಳಿಸಿಕೊಳ್ಳುತ್ತ ಕ್ರಿಸ್ ಬೆಳೆಯುತ್ತಾನೆ.

ಇದೆಲ್ಲದರ ಮಧ್ಯೆ ಆತನ ಓದು ಮತ್ತು ಜ್ಞಾನದ ಹಸಿವೆಯೂ ತೀವ್ರವಾಗಿರುತ್ತದೆ. ಒಂದು ಸಲ ಓದಿದರೆ ಸಾಕು ಅದು ಆತನ ಮಸ್ತಕದಲ್ಲಿ ಸ್ಥಿರವಾಗಿ ನಿಂತುಬಿಡುತ್ತಿತ್ತು. ತರಗತಿಗಳ ಪರೀಕ್ಷೆಗಳನ್ನು ಸುಲಭವಾಗಿ, ಮೇಷ್ಟ್ರುಗಳನ್ನೆ ಲೇವಡಿ ಮಾಡುವ ರೀತಿಯಲ್ಲಿ ಪಾಸು ಮಾಡುತ್ತಿರುತ್ತಾನೆ. ಆದರೆ ಈತನ ಬುದ್ಧಿಮತ್ತೆಯನ್ನು ಗುರುತಿಸುವ ಮತ್ತು ಅದನ್ನು ಪೋಷಿಸುವ ಒಂದೇ ಒಂದು ಅವಕಾಶ ಈತನಿಗೆ ಒದಗಿಬರುವುದಿಲ್ಲ. ಒಮ್ಮೆ ತನ್ನ ತರಗತಿಯ ಗಣಿತದ ಮೇಷ್ಟ್ರು ವಿಷಯವೊಂದನ್ನು ಬಹಳ ನೀರಸವಾಗಿ ಬೋಧಿಸುವುದನ್ನು ಕಂಡು ಆ ಮೇಷ್ಟ್ರಿಗೆ ಹೋಗಿ ಇದನ್ನು ಏಕೆ ಹೀಗೆ ನೀರಸವಾಗಿ ಬೋಧಿಸುತ್ತೀರಿ ಎಂದು ಪ್ರಶ್ನಿಸುತ್ತಾನೆ. ಆದರೆ ಈತನ ಬುದ್ಧಿಮತ್ತೆಯನ್ನು ಗುರುತಿಸಲಾಗದ ಆ ಶಿಕ್ಷಕ ಈತನನ್ನೆ ಹಂಗಿಸಿ ಅವಮಾನಿಸಿ ಕಳುಹಿಸುತ್ತಾನೆ!

ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾಲೇಜು ವಿದ್ಯಾಭ್ಯಾಸಕ್ಕೆ ಅಮೆರಿಕದ ಎರಡು ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಆತನಿಗೆ ಪೂರ್ಣಪ್ರಮಾಣದ ಸ್ಕಾಲರ್‌ಶಿಪ್‌ಗಳ ಸಹಿತ ಪ್ರವೇಶ ದೊರೆಯುತ್ತದೆ. ಮನೆಯವರಿಗೆ ಹತ್ತಿರವಿರುವ ಕಾರಣಕ್ಕೆ ಹತ್ತಿರದ ವಿಶ್ವವಿದ್ಯಾಲಯಕ್ಕೆ ದಾಖಲಾಗುತ್ತಾನೆ. ಸ್ಥಿತಿವಂತರ ಮಕ್ಕಳೆ ಹೆಚ್ಚಿಗೆ ಬರುವ ಕಾಲೇಜು ಅದು. ಆ ಶ್ರೀಮಂತ ನಗರವಾಸಿ ವಿದ್ಯಾರ್ಥಿಗಳ ಹೈಫೈ ನಡವಳಿಕೆ ಆತನಿಗೆ ಹೊಸದು. ಹೊರಗಿನದು. ಅವನಿಗೆ ಅದೊಂದು ಕಲ್ಚರಲ್ ಶಾಕ್. ಅಷ್ಟಿದ್ದರೂ ಮೊದಲ ವರ್ಷದ ಪರೀಕ್ಷೆಗಳಲ್ಲಿ ಎಲ್ಲದರಲ್ಲೂ ಉತ್ತಮವಾಗಿ ತೇರ್ಗಡೆಯಾಗುತ್ತಾನೆ. ಆದರೆ ಎರಡನೆಯ ವರ್ಷದಲ್ಲಿ ಆತನಿಗೆ ಸ್ಕಾಲರ್‌ಶಿಪ್ ತಪ್ಪಿಹೋಗುತ್ತದೆ. ಕಾರಣ? ಆತನ ತಾಯಿ ಅರ್ಜಿಯೊಂದಕ್ಕೆ ಸಹಿ ಮಾಡಿ ಕಳುಹಿಸದೆ ಉದಾಸೀನ ಮಾಡಿಬಿಟ್ಟಿರುತ್ತಾಳೆ! ಕಾಲೇಜಿನವರು ಸ್ಕಾಲರ್‌ಶಿಪ್ ಹಣವನ್ನೆಲ್ಲ ಬೇರೆಯವರಿಗೆ ಹಂಚಿಬಿಟ್ಟಿರುತ್ತಾರೆ. ಈತ ಹೋಗಿ ಕೇಳಿಕೊಂಡರೂ ಅವರು ಸಹಾಯ ಮಾಡುವುದಿಲ್ಲ. ಬೇರೆ ವಿಧಿಯಿಲ್ಲದೆ ಕ್ರಿಸ್ ಲ್ಯಾಂಗನ್ ಆ ವರ್ಷ ಕಾಲೇಜು ತೊರೆಯುತ್ತಾನೆ.

ಮತ್ತೆ ಅಲ್ಲಿಇಲ್ಲಿ ಕೆಲಸ ಮಾಡುತ್ತ ಒಂದಷ್ಟು ದುಡ್ಡು ಹೊಂದಿಸಿಕೊಂಡು ಮುಂದಿನ ಒಂದೆರಡು ವರ್ಷಗಳಲ್ಲಿ ಮತ್ತೊಂದು ಕಾಲೇಜು ಸೇರುತ್ತಾನೆ. ಅದು ಆತನಿರುವ ಊರಿಗಿಂತ ಇಪ್ಪತ್ತು ಕಿ.ಮಿ ದೂರವಿದ್ದ ಊರು. ಈತ ಕಾರಿನಲ್ಲಿಯೆ ಬರಬೇಕಿತ್ತು. ಒಮ್ಮೆ ಆ ಸಮಯದಲ್ಲಿ ಆತನ ಕಾರು ಕೆಟ್ಟುಹೋಗಿಬಿಡುತ್ತದೆ. ಅದರ ರಿಪೇರಿಗೆ ಆತನಲ್ಲಿ ಕಾಸಿರುವುದಿಲ್ಲ. ಆತನ ನೆರೆಯವನೊಬ್ಬ ದಿನ ಮಧ್ಯಾಹ್ನದ ಸಮಯಕ್ಕೆ ಆತನ ಕಾಲೇಜು ಬಳಿಗೆ ಡ್ರಾಪ್ ಕೊಡಲು ಮುಂದೆ ಬರುತ್ತಾನೆ. ಆದರೆ ಈತನ ಕ್ಲಾಸುಗಳಿರುವುದು ಬೆಳಿಗ್ಗೆಯ ಸಮಯದಲ್ಲಿ. ಅದನ್ನು ಮಧ್ಯಾಹ್ನದ ಸೆಷನ್‌ಗೆ ಬದಲಾಯಿಸಿಕೊಡುವಂತೆ ತನ್ನ ಪ್ರೊಫೆಸರ್‌ನನ್ನು ಹೋಗಿ ವಿನಂತಿಸುತ್ತಾನೆ. ಒರಟು ಸ್ವಭಾವದ ಆ ಮನುಷ್ಯ ಅದನ್ನು ವ್ಯಂಗ್ಯ ಮಾಡಿ ನಿರಾಕರಿಸುತ್ತಾನೆ. ಕ್ರಿಸ್ ಕೊನೆಗೆ ತನ್ನ ವಿಭಾಗದ ಡೀನ್ ಬಳಿಗೆ ಹೊಗುತ್ತಾನೆ. ಅವನೂ ಈತನ ವಿನಂತಿಯನ್ನು ಪುರಸ್ಕರಿಸುವುದಿಲ್ಲ. ಬೇಸತ್ತ ಕ್ರಿಸ್ ಕಾಲೇಜು ತೊರೆಯುತ್ತಾನೆ. ಅವನು ಮತ್ತೆಂದೂ ಅದರತ್ತ ಸುಳಿಯುವುದಿಲ್ಲ.

ಮ್ಯಾಲ್ಕಮ್ ಗ್ಲಾಡ್‌ವೆಲ್ ಕೊಡುವ ಮತ್ತೊಂದು ಉದಾಹರಣೆ ರಾಬರ್ಟ್ ಒಪ್ಪೆನ್‌ಹೀಮರ್ ಎಂಬ ಮೇಧಾವಿಯದು. ಆತ ಅಮೆರಿಕದ ಅಣುಬಾಂಬ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಭೌತಶಾಸ್ತ್ರಜ್ಞ. ಆತನೂ ಹುಟ್ಟಾ ಮೇಧಾವಿ. ಮೂರನೆ ತರಗತಿಗೆಲ್ಲ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದ. ಚಿಕ್ಕವಯಸ್ಸಿಗೆ ಹಲವಾರು ಭಾಷೆಗಳನ್ನು ಕಲಿತಿದ್ದ. ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಒಮ್ಮೆ ತನ್ನ ನೆಂಟನೊಬ್ಬನಿಗೆ, ‘ನೀನು ಲ್ಯಾಟಿನ್‌ನಲ್ಲಿ ಪ್ರಶ್ನೆ ಕೇಳು, ನಾನದಕ್ಕೆ ಗ್ರೀಕ್ ಭಾಷೆಯಲ್ಲಿ ಉತ್ತರಿಸುತ್ತೇನೆ,’ ಎಂದಿದ್ದನಂತೆ! (ಇದನ್ನೆ ನಮ್ಮ ಸಂದರ್ಭದಲ್ಲಿ ಹೇಳಬೇಕಾದರೆ, ಕನ್ನಡ ಮಾತೃಭಾಷೆಯ ಹುಡುಗನೊಬ್ಬ ತನ್ನ ಸ್ನೇಹಿತನನ್ನು ‘ನೀನು ಸಂಸ್ಕೃತದಲ್ಲಿ ಪ್ರಶ್ನೆ ಕೇಳು, ನಾನದಕ್ಕೆ ಪ್ರಾಕೃತದಲ್ಲಿ ಉತ್ತರಿಸುತ್ತೇನೆ,’ ಎಂದದ್ದಕ್ಕೆ ಸಮ.)

ಅಪಾರ ಬುದ್ಧಿಮತ್ತೆಯ ಒಪ್ಪೆನ್‌ಹೀಮರ್ ಹಾರ್ವರ್ಡ್, ಕೇಂಬ್ರಿಡ್ಜ್‌ಗಳಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆಯುತ್ತಾನೆ. ಅದು ಆತ ಡಾಕ್ಟರೇಟ್ ಪದವಿಗೆ ಅಧ್ಯಯನ ಮಾಡುತ್ತಿದ್ದ ಸಮಯ. ತನ್ನ ಗೈಡ್ ತನಗೆ ಸೂಚಿಸಿದ್ದ ವಿಷಯದ ಬಗ್ಗೆ ನಿರಾಸಕ್ತಿ ಹೊಂದಿದ್ದ ಒಪ್ಪೆನ್‌ಹೀಮರ್ ನಿಧಾನಕ್ಕೆ ತನ್ನ ಗೈಡ್ ಬಗ್ಗೆ ಕೋಪಗೊಳ್ಳುತ್ತ ಹೋಗುತ್ತಾನೆ. ಆತನನ್ನು ಖಿನ್ನತೆ ಆವರಿಸುತ್ತದೆ. ಒಮ್ಮೆ ಆ ರೋಸಿಹೋದ ಮನಸ್ಥಿತಿಯಲ್ಲಿ ಪ್ರಯೋಗಶಾಲೆಯಿಂದ ಒಂದಷ್ಟು ರಾಸಾಯನಿಕಗಳನ್ನು ತೆಗೆದುಕೊಂಡು ಹೋಗಿ ತನ್ನ ಗೈಡ್‌ಗೆ ವಿಷಪ್ರಾಶನ ಮಾಡಿ ಕೊಲ್ಲಲು ಯತ್ನಿಸುತ್ತಾನೆ. ಆದರೆ ಏನೋ ಹೆಚ್ಚುಕಮ್ಮಿಯಾಗಿರುವ ವಾಸನೆ ಹಿಡಿಯುವ ಆ ಗೈಡ್ (ಪ್ಯಾಟ್ರಿಕ್ ಬ್ಲ್ಯಾಕೆಟ್ಟ್ 1948ರ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ) ಆ ವಿಷಪ್ರಾಶನದಿಂದ ಬಚಾವಾಗುತ್ತಾನೆ. ವಿಶ್ವವಿದ್ಯಾಲಯ ಒಪ್ಪೆನ್‌ಹೀಮರ್‌ನನ್ನು ವಿಚಾರಣೆಗೆ ಕರೆಯುತ್ತದೆ. ಶಿಕ್ಷೆ? ಮನೋವೈದ್ಯನನ್ನು ಕಾಣುವ ಅಪ್ಪಣೆ ಮತ್ತು ಆತನ ನಡವಳಿಕೆಯನ್ನು ಒಂದಷ್ಟು ದಿನಗಳ ಕಾಲ ಗಮನಿಸುವ ಪ್ರೊಬೇಶನ್!

ಅಮೆರಿಕದಲ್ಲಿ ಮೊಟ್ಟಮೊದಲ ಅಣುಬಾಂಬ್ ಉತ್ಪಾದಿಸುವ ಯೋಜನೆ 1942ರ ಸುಮಾರಿಗೆ ಮುಖ್ಯ ಹಂತ ತಲುಪುತ್ತದೆ. ಅದಕ್ಕೆ “ಮ್ಯಾನ್‌ಹ್ಯಾಟ್ಟನ್ ಪ್ರಾಜೆಕ್ಟ್” ಎಂದು ಹೆಸರು. ಆ ಯೋಜನೆಯ ಪ್ರಮುಖ ಹುದ್ದೆಯಾದ ವೈಜ್ಞಾನಿಕ ನಿರ್ದೇಶಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಾಗಿ ಅಮೆರಿಕದಾದ್ಯಂತ ವಿಜ್ಞಾನಿಗಳ ತಲಾಷೆ ನಡೆಯುತ್ತದೆ. ಅದಕ್ಕೆ ಆಯ್ಕೆಯಾಗುವವನು ಮಾತ್ರ 38 ವರ್ಷ ವಯಸ್ಸಿನ ರಾಬರ್ಟ್ ಒಪ್ಪೆನ್‌ಹೀಮರ್! ಆತ ನಿಭಾಯಿಸಬೇಕಾದ ಜನರಲ್ಲಿ ಬಹುಪಾಲು ಜನ ಈತನಿಗಿಂತ ಹಿರಿಯರು; ಹಲವಾರು ಲೆಕ್ಕದಲ್ಲಿ. ಅಲ್ಲಿಯವರೆಗೂ ಈತನಿಗೆ ಆಡಳಿತಾತ್ಮಕ ಅನುಭವವೂ ಇರುವುದಿಲ್ಲ. ಆದರೂ ಆತನಿಗೆ ಈ ಹುದ್ದೆ ದೊರೆಯುತ್ತದೆ. ಹೇಗೆ? ತನ್ನ ಜಾಣ್ಮೆಯಿಂದಾಗಿ. ಬೇರೆಯವರನ್ನು ಅವಲೋಕಿಸುವ, ಅವರನ್ನು ತನ್ನತ್ತ ಸೆಳೆದುಕೊಳ್ಳಬಲ್ಲ, ಅವರನ್ನು ಪ್ರಭಾವಿಸಬಲ್ಲ ಗುಣದಿಂದಾಗಿ. ಇತರರು ತನ್ನ ಅಭಿಪ್ರಾಯವನ್ನು ಮತ್ತು ಮೇಧಾವಿತನವನ್ನು ಗುರುತಿಸುವಂತೆ ಮಾಡುವುದು ಆತನಿಗೆ ಸಾಧ್ಯವಾಗುತ್ತಿತ್ತು. ತನ್ನ ಗೈಡನ್ನು ಸಾಯಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಗಲೂ ಅದರಿಂದ ಹೊರಬರಲು ಆತನಿಗೆ ಸಾಧ್ಯವಾಗುವುದು ಈ ಹೆಚ್ಚುಗಾರಿಕೆಯಿಂದಾಗಿಯೆ!

ಕ್ರಿಸ್ ಲ್ಯಾಂಗನ್‌ಗೆ ಇಲ್ಲದ ಈ ಹೆಚ್ಚುಗಾರಿಕೆ ರಾಬರ್ಟ್ ಒಪ್ಪೆನ್‌ಹೀಮರ್‌ಗೆ ಸಾಧ್ಯವಾದದ್ದಾದರೂ ಹೇಗೆ? ಬಂದಿದ್ದಾದರೂ ಎಲ್ಲಿಂದ?

ಅದು ಅವರವರ ಕೌಟುಂಬಿಕ ಹಿನ್ನೆಲೆಯಿಂದಾಗಿ ಎನ್ನುತ್ತಾನೆ ಗ್ಲಾಡ್‌ವೆಲ್. ಈ ಮೊದಲೆ ಗಮನಿಸಿದಂತೆ ಕ್ರಿಸ್ ಲ್ಯಾಂಗನ್‌ಗೆ ಸರಿಯಾದ ಕೌಟುಂಬಿಕ ತಳಹದಿ ಇರಲಿಲ್ಲ. ತನಗಿಂತ ಮೇಲಿನವರ ಜೊತೆ, ಹಿರಿಯರ ಜೊತೆ, ಅಧಿಕಾರಸ್ಥರ ಜೊತೆ ಹೇಗೆ ಸಂವಾದಿಸಬೇಕು ಎನ್ನುವುದನ್ನು ಲ್ಯಾಂಗನ್‌ಗೆ ಯಾರೂ ಕಲಿಸಿರುವುದಿಲ್ಲ. ತಮ್ಮ ಬಡತನದಿಂದಾಗಿ, ಕೌಟುಂಬಿಕ ಸಮಸ್ಯೆಗಳಿಂದಾಗಿ, ಸುತ್ತಮುತ್ತಲ ವಾತಾವರಣದಿಂದಾಗಿ, ಅಧಿಕಾರಸ್ಥರನ್ನು ಉಪೇಕ್ಷೆಯಿಂದ ಕಾಣುವ, ಅವರನ್ನು ತಿರಸ್ಕರಿಸಲು ಪ್ರಯತ್ನಿಸುವ ಮನೋಭಾವ ಬಡವರಲ್ಲಿ ಸಾಮಾನ್ಯ. ಆದರೆ ಇದೇ ಮಾತನ್ನೆ ಒಪ್ಪೆನ್‌ಹೀಮರ್‌ನ ವಿಷಯದಲ್ಲಿ ಹೇಳಲಾಗುವುದಿಲ್ಲ. ಆತನ ಅಪ್ಪ ಹೆಸರುವಾಸಿ ಕಲಾವಿದ ಮತ್ತು ಗಾರ್ಮೆಂಟ್ ಉದ್ಯಮಿ. ಶ್ರೀಮಂತ. ಬೇರೆಬೇರೆ ಜನವರ್ಗದ ಜೊತೆ ಸಂವಾದಿಸುವ ಕಲೆಯನ್ನು, ಅವಕಾಶವನ್ನು ರಾಬರ್ಟ್‌ಗೆ ಚಿಕ್ಕಂದಿನಿಂದಲೆ ಒದಗಿಸಲಾಗಿರುತ್ತದೆ. ಆತ ಕಲಿತ ಶಾಲೆಗಳೆಲ್ಲ ಅತ್ಯುತ್ತಮ ಶಾಲೆಗಳೆ. ಆತನ ಪ್ರತಿಭೆಯನ್ನು ಗುರುತಿಸುವ, ಅದನ್ನು ಪ್ರೋತ್ಸಾಹಿಸುವ, ಇನ್ನೂ ಮುಂದಕ್ಕೆ ಒಯ್ಯಲು ಪ್ರೇರೇಪಿಸುವ ವಾತಾವರಣ ಆತನಿಗೆ ಮೊದಲಿನಿಂದಲೆ ಇತ್ತು. ಆತ ಕಲಿತ ಶಾಲೆಗಳಲ್ಲಿ ಅಲ್ಲಿಯ ಹುಡುಗರು ಭವಿಷ್ಯದ ರಾಷ್ಟ್ರನಿರ್ಮಾಪಕರು ಎನ್ನುವಂತಹ ವಿಚಾರವನ್ನು ಅವರ ತಲೆಯಲ್ಲಿ ತುಂಬುತ್ತಿದ್ದರು. ಆತ್ಮವಿಶ್ವಾಸವನ್ನು ಅವರಲ್ಲಿ ಪೂರ್ವಯೋಜಿತವಾಗಿ ಎಂಬಂತೆ ಬೆಳೆಸಲಾಗುತ್ತಿತ್ತು. ಆದರೆ ಇಂತಹ ಯಾವೊಂದು ಅವಕಾಶವಾಗಲಿ, ಸಹಾಯವಾಗಲಿ, ಕ್ರಿಸ್ ಲ್ಯಾಂಗನ್ನನಿಗೆ ಒದಗಲಿಲ್ಲ. ಕೈಹಿಡಿಯಬೇಕಾದ ಅಧ್ಯಾಪಕರೆ ಕೈಹಿಡಿಯಲಿಲ್ಲ. ಆತನದು ಈಗಲೂ ತಪ್ತ ಮನಸ್ಸು. ಅವನೊಬ್ಬ ಕಳೆದುಹೋದ ಪ್ರತಿಭೆ.

ಈ ಉದಾಹರಣೆಗಳಿಗೆ ಪೂರಕವಾಗಿಯೆ ಅಧ್ಯಯನವೊಂದರ ಸಾರಾಂಶವನ್ನು ಗ್ಲಾಡ್‌ವೆಲ್ “ಹೊರಗಣವರು”ನಲ್ಲಿ ಒದಗಿಸುತ್ತಾನೆ. ಅದು ಹಲವು ಕುಟುಂಬಗಳ ಅಧ್ಯಯನ. ಅದರಲ್ಲಿ ಮಧ್ಯಮವರ್ಗದ ಸ್ಥಿತಿವಂತರು ತಮ್ಮ ಮಕ್ಕಳಿಗೆ ಆತ್ಮವಿಶ್ವಾಸವನ್ನು ಕಲಿಸುವುದನ್ನು ನೋಡಬಹುದು. ಅವರನ್ನು ವಿವಿಧ ಅನುಭವ-ಪರಿಸರಗಳಿಗೆ ಪರಿಚಯಿಸುವುದನ್ನೂ ಕಾಣಬಹುದು. ಜೀವನದಲ್ಲಿ ಯಶಸ್ವಿಯಾಗಲು IQ ಯಂತಹ ವಿಶ್ಲೇಷಣಾತ್ಮಕ ಬುದ್ಧಿಮತ್ತೆ ಮಾತ್ರವೇ ಸಾಕಾಗುವುದಿಲ್ಲ್ಲ. ಅದರ ಜೊತೆಗೆ ಸಮಾಜವನ್ನು ಅರಿತುಕೊಳ್ಳಲು ಬೇಕಾದ “ಪ್ರಾಯೋಗಿಕ ಜಾಣತನ”ವೂ ಬೇಕಾಗುತ್ತದೆ. ಅದು ಬರುವುದು ಕ್ರಮಬದ್ಧವಾದ ಕಲಿಕೆಯಿಂದ. ಅಭ್ಯಾಸದಿಂದ. ರೂಢಿಸಿಕೊಳ್ಳುವುದರಿಂದ. ಈ ಅನುಭವಗಳನ್ನು, ಈ ಜ್ಞಾನವನ್ನು, ಮತ್ತು ಈ ವಿಚಾರದಲ್ಲಿ ತರಬೇತಿಯನ್ನು ಬಡವರಲ್ಲಿ, ಸಮಸ್ಯಾತ್ಮಕ ಕುಟುಂಬಗಳಲ್ಲಿ ಕಾಣವುದು ಕಷ್ಟ. ಅಲ್ಲಿ ಹುಟ್ಟುವ ಮೇಧಾವಿಗಳು ಸಹಜವಾಗಿಯೆ ನಂತರದ ದಿನಗಳಲ್ಲಿ ಜೀವನದಲ್ಲಿ ಸೋಲನ್ನು ಕಾಣುತ್ತ, ಅಲ್ಪತೃಪ್ತರಾಗುತ್ತ ಹೋಗುತ್ತಾರೆ. ಹಾಗಾಗಿ ಕೌಟುಂಬಿಕ ಹಿನ್ನೆಲೆ ಮತ್ತು ಅಲ್ಲಿ ಕೊಡಲ್ಪಡುವ Practical Intelligenceನ ತರಬೇತಿ (ಸಂಸ್ಕಾರ), ಆ ಮೂಲಕ ಸಿಗುವ ಈ ಹೊರಗಿನ ಸಹಾಯ ಮನುಷ್ಯನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಚಾರವಾಗಿ ಲೇಖಕ ಗ್ಲಾಡ್‌ವೆಲ್ ಹೇಳುವ ಈ ಮಾತು ಬಹಳ ಸುಂದರವಾದುದು, ಗಮನಾರ್ಹವಾದುದು:

“ಕ್ರಿಸ್ ಲ್ಯಾಂಗನ್ನನ ಮನಸ್ಸಿನ ಹೊರಗೆ ಆದ ಪ್ರತಿಯೊಂದು ವಾಸ್ತವ ಅನುಭವವೂ ನಿರಾಶೆಯಲ್ಲಿ, ಸೋಲಿನಲ್ಲಿ ಅಂತ್ಯವಾಗುತ್ತಿತ್ತು. ಈ ಪ್ರಪಂಚದಲ್ಲಿ ತೇಲಲು ತಾನು ಇನ್ನೂ ಉತ್ತಮ ರೀತಿಯಲ್ಲಿ ಹುಟ್ಟು ಹಾಕಬೇಕು ಎಂದು ಅತನಿಗೆ ಗೊತ್ತಿತ್ತು. ಆದರೆ ಅದು ಹೇಗೆ ಎಂದು ಗೊತ್ತಿರಲಿಲ್ಲ. ತನ್ನ ಶಾಲೆಯ ಅಧ್ಯಾಪಕನ ಜೊತೆ ಹೇಗೆ ಮಾತನಾಡಬೇಕು ಎನ್ನುವುದೇ ಆತನಿಗೆ ಗೊತ್ತಿರಲಿಲ್ಲ ಎನ್ನುವುದೆ ಇಲ್ಲಿ ಕನಿಕರನೀಯ. ಇಂತ ಸಣ್ಣ ವಿಷಯಗಳನ್ನೆಲ್ಲ ಅಷ್ಟೇನೂ ಬುದ್ಧಿವಂತರಲ್ಲದವರೂ ಕೂಡ ಚೆನ್ನಾಗಿ ಕಲಿತುಬಿಟ್ಟಿರುತ್ತಾರೆ. ಆದರೆ ಅದನ್ನು ಕಲಿಯಲು ಅವರಿಗೆ ಇತರರ ಸಹಾಯ ದೊರಕಿರುತ್ತದೆ. ಆದರೆ ಅದು ಕ್ರಿಸ್ ಲ್ಯಾಂಗನ್‌ಗೆ ಸಿಗಲಿಲ್ಲ. ಆತನಿಗೆ ಸಿಗಲಿಲ್ಲ ಎನ್ನುವುದು ಇಲ್ಲಿ ಸಬೂಬಿನ ಮಾತಲ್ಲ. ಅದು ಸತ್ಯಸಂಗತಿ. ಆತ ಏಕಾಂಗಿಯಾಗಿ ತನ್ನ ದಾರಿಯನ್ನು ಮಾಡಿಕೊಳ್ಳಬೇಕಿತ್ತು. ಮತ್ತು ಯಾರೊಬ್ಬರೂ–ಅವರು ರಾಕ್ ಸ್ಟಾರ್‌ಗಳಿರಬಹುದು, ದೊಡ್ಡ ಆಟಗಾರರಿರಬಹುದು, ಸಾಫ್ಟ್‌ವೇರ್ ಬಿಲಿಯನೇರ್‌ಗಳಿರಬಹುದು, ಅಥವ ಹುಟ್ಟಾ ಮೇಧಾವಿಗಳೆ ಇರಬಹುದು–ಯಾರೊಬ್ಬರೂ, ಒಬ್ಬರೆ ಏಕಾಂಗಿಯಾಗಿ ಜೀವನದಲ್ಲಿ ಮೇಲೇರಲಾರರು.” (“Outliers” – ಪು. 115)

(ಮುಂದುವರೆಯುವುದು…)

ಮುಂದಿನ ವಾರ: ಪರಂಪರೆಯ ಪಾತ್ರ

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Add a Comment

required, use real name
required, will not be published
optional, your blog address